ಉಮ್ಮಾ

ಅನಿವಾರ್ಯತೆ ಹಾಗೂ ಅಸಹಾಯಕತೆ ಎಲ್ಲವನ್ನೂ ಒಪ್ಪಿಕೊಳ್ಳುವ ಹಾಗೆ ಮಾಡುತ್ತೆ ನೋಡು. ಹಾಗಾದಾಗ ನನ್ನ ಕೈಯಲ್ಲಿ ಏನಿದೆ ಎಲ್ಲವೂ ಅವನಿಚ್ಚೆ ಅಂದುಕೊಂಡಾಗ ಅದನ್ನು ಸ್ವೀಕರಿಸಲು ಮನಸ್ಸು ಸಜ್ಜಾಗುತ್ತೆ, ಭಾರ ಕಡಿಮೆ ಆಗುತ್ತೆ ಅನ್ನೋಳು ಅಜ್ಜಿ. ಆಗಿನ್ನೂ ಹದಿ ಹರೆಯ. ರಕ್ತ ಕುದಿಯುವ ವಯಸ್ಸು. ಹೌದೌದು ಒಪ್ಪಿಕೊಂಡರೆ ಎಲ್ಲವನ್ನೂ ಒಪ್ಪಿಕೊಳ್ತಾ ಹೋಗ್ಬೇಕು, ತಪ್ಪನ್ನೂ ತಪ್ಪು ಎನ್ನದ, ವಿರೋಧಿಸದ ಬದುಕು ಹೇಡಿತನದ ಬದುಕಲ್ವಾ ಎಂದು ತಿರುಗಿ ಸ್ವಲ್ಪ ಒರಟಾಗಿ ಹೇಳಿದ್ದರೂ ಅವಳು ನಸುನಕ್ಕು ಒಳಗೆ ಹೋಗಿದ್ದಳು.

ಉಮ್ಮಾ ಓದುತ್ತಿರುವಷ್ಟು ಹೊತ್ತೂ ಇದು ನೆನಪಾಗುತ್ತಲೇ ಇತ್ತು. ಪ್ರವಾದಿಯರ ಪತ್ನಿಯರ ಬಗ್ಗೆ ಬರೆದ ಕಾದಂಬರಿಯಾದರೂ  ಮುಖ್ಯ ವಾಗಿ ಆಯಿಷಾಳ ಬಗ್ಗೆ ಇದ್ದರೂ ಇಡೀ ಕಾದಂಬರಿಯಲ್ಲಿ ಬರುವ ಪಾತ್ರಗಳಲ್ಲಿ ಗಟ್ಟಿ ಪಾತ್ರ ಅನ್ನಿಸೋದು, ಮನಸ್ಸಿನಲ್ಲಿ ಉಳಿದಿದ್ದು ಮಾತ್ರ ಆಫೀರಾ. ಹೇಳಬೇಕಾಗಿದ್ದನ್ನು ಸ್ಪಷ್ಟವಾಗಿ, ನೇರವಾಗಿ ಹೇಳುವ ಅವಳ ಧೈರ್ಯ, ಸಮಸ್ಯೆಗಳನ್ನು ಎದುರಿಸುವ ರೀತಿ, ಗಟ್ಟಿತನ ಎಲ್ಲವೂ ಅದ್ಭುತ. ಆಫೀರಾ ಅರ್ಥವಾಗುತ್ತಾ ಹೋದಂತೆ ಅನಿವಾರ್ಯತೆ ಎಂದೂ ಅಂತಿಮ ಸತ್ಯವಲ್ಲ, ಕಾನೆದುರು ಕುಣಿಯುತ್ತಿರುವ ಅನಿವಾರ್ಯತೆಯನ್ನು ಸೋಲಿಸುವ ಶಕ್ತಿ ತನ್ನೊಳಗೇ ಇದೆಯೆಂಬ ಸತ್ಯ ಹೆಣ್ಣಿಗೆ ಅರಿವಾದ ದಿನ ಅವಳು ಪ್ರಶ್ನಿಸಲಾರಂಭಿಸುತ್ತಾಳೆ. ಬಹಿರ್ನಗವಾಗಿ ಪ್ರಶ್ನಿಸಲು ಅಂಜಿಕೆಯಾದರೆ ಕನಿಷ್ಠ ಸ್ವಗತದಲ್ಲಾದರೂ ಪ್ರಶ್ನಿಸಿಕೊಳ್ಳುತ್ತಿರುತ್ತಾಳೆ ಅನ್ನೋ ಸಾಲು ಎದೆಗಿಳಿಯುತ್ತದೆ.

ಹಿಂದಿನ ಕಾಲದಲ್ಲಿ ಮದುವೆ ಅನ್ನೋದು ಎರಡು ಜೀವಗಳ ನಡುವಿನ ಬಂಧ ಅನ್ನೋದಕ್ಕಿಂತ ಅದೊಂದು ರಾಜಕೀಯ ಬಂಧ, ಲೆಕ್ಕಾಚಾರದ, ಲಾಭ ನಷ್ಟದ ಸಂಬಂಧ. ಕೇವಲ ಒಪ್ಪಿಕೊಳ್ಳುವ ಅನಿವಾರ್ಯತೆ ಬಿಟ್ಟರೆ ಪ್ರಶ್ನಿಸುವ ಅಧಿಕಾರ ಹೆಣ್ಣಿಗೆ  ಇರಲಿಲ್ಲ. ಹಾಗಾಗಿಯೇ ಗಂಡ ಹೊಡೆಯುವುದನ್ನೂ ಕರುಣಾಳುವಾದ ಅಲ್ಲಾಹು ಗಂಡಿಗೆ ಕೊಟ್ಟಿರುವ ಹಕ್ಕುಗಳಲ್ಲಿ ಹೆಂಡತಿಗೆ ಹೊಡೆಯುವುದೂ ಒಂದು ಎಂದು ಸಮಾಧಾನ ಪಟ್ಟುಕೊಳ್ಳುವ ಮನಸ್ಥಿತಿ. ಹಾಗೆ ಒಪ್ಪಿಕೊಂಡಾಗ ಮನಸ್ಸಿನ ಭಾರ ಕಡಿಮೆಯಾಗಿ ಅದನ್ನು ಸಮಾಧಾನವಾಗಿ ಸ್ವೀಕರಿಸುವ ಮನೋಭಾವ.

ಧರ್ಮ ತನ್ನ ಬೇಲಿಯನ್ನು ವಿಸ್ತರಿಸಿಕೊಳ್ಳುವುದು ಕಲಿತಾಗ ಮಾನವೀಯತೆ ತಂತಾನೇ ಅದರೊಳಗೆ ಅಡಿಯಿಡುತ್ತದೆ. ಇಲ್ಲವಾದಲ್ಲಿ ಮತ್ತದೇ ಅನಿವಾರ್ಯತೆ ರಾಜ್ಯಭಾರ ಮಾಡುತ್ತದೆ. ಇಂತಹದೊಂದು ಸಂಕಷ್ಟ ಸಮಯದಲ್ಲಿ ಧರ್ಮ ಸಂಕುಚಿತವಾದಾಗ ಮತ್ತು ಎಲ್ಲರೂ ಉಸಿರೆತ್ತದೆ ಅದನ್ನು ಒಪ್ಪಿಕೊಂಡಾಗ  ಅಲ್ಲಾಹು ಅಷ್ಟೊಂದು ಹೃದಯ ಹೀನನೋ ಎಂದು ದ್ವನಿ ಎತ್ತುವುದು ಕೇವಲ ಆಫೀರಾ ಮಾತ್ರ. ಒಳ್ಳೆಯವರಿಗೆ ಕಷ್ಟ ಜಾಸ್ತಿ ಅನ್ನೋದು ಅಂದಿನಿಂದ ಇಂದಿನವರೆಗೂ ಚಾಲ್ತಿಯಲ್ಲಿರುವ ಮಾತು.

ಹಾಗಾದರೆ ಒಳ್ಳೆಯತನಕ್ಕೆ ಬೆಲೆಯೇ ಇಲ್ಲವಾ ಇದೂ ಅವತ್ತಿನಿಂದ ಇವತ್ತಿನವರೆಗೂ ಕಾಡುವ ಪ್ರಶ್ನೆ. "ಇಂಥ ಪ್ರಶ್ನೆಗಳಿಗೆಲ್ಲಾ ಬೇರೆಯವರಿಂದ ಉತ್ತರ ನಿರೀಕ್ಷಿಸಬಾರದು, ಪ್ರತಿಯೊಬ್ಬರೂ ತಮಗಿಷ್ಟವಾದ ಉತ್ತರಗಳನ್ನು ತಮ್ಮೊಳಗೇ ಕಾಣಲು ಯತ್ನಿಸುತ್ತಿರಬೇಕು. ಉತ್ತರ ಸಿಗದಿದ್ದಾಗ ಎಲ್ಲವೂ ಪೂರ್ವನಿರ್ಧಾರಿತವೆಂದು ನಂಬುತ್ತಾ ಸಮಾಧಾನ ಪಟ್ಟುಕೊಳ್ಳುತ್ತಿರಬೇಕು ಅಷ್ಟೇ " ಎನ್ನುವ ಅರ್ಷದ್ ಮಾತು ಪ್ರಕೃತಿ ಎಂದೂ ತನ್ನ ಗುಟ್ಟು ಬಿಟ್ಟುಕೊಡುವುದಿಲ್ಲ ಎನ್ನುವ ಹಿಂದೂಗಳ ನಂಬಿಕೆಗೆ ಎಷ್ಟೊಂದು ಹತ್ತಿರ, ಅದೆಷ್ಟು ಸಾಮ್ಯ.

ಇನ್ನೊಬ್ಬರು ಸವತಿ ಬರುವ ಸಮಯದಲ್ಲಿ ನೋಯುವ ಆಯಿಷಾರಿಗೆ ನೋಡಿ ಒಡತಿ ಎತ್ತರದ ಜಾಗದಲ್ಲಿರುವವರು ಕೆಳಗೆ ಜಾರಿಬೀಳದಂತೆ ಪ್ರತಿಯೊಂದು ಕ್ಷಣದಲ್ಲೂ ಎಚ್ಚರದಿಂದಿರಲೇ ಬೇಕು ಎನ್ನುವ ಆಫೀರಾ ಬದುಕಿನ ನಗ್ನ ಸತ್ಯವೊಂದನ್ನು ಸರಳವಾಗಿ ಸಹಜವಾಗಿ ಹೇಳಿಬಿಡುತ್ತಾಳೆ. ಎತ್ತರಕ್ಕೆ ಏರಿದಷ್ಟೂ ಜವಾಬ್ದಾರಿ ಜಾಸ್ತಿ. ಅಲ್ಲಿ ಅನ್ನಿಸಿದ್ದು ಮಾಡುವ ಸ್ವಾತಂತ್ರ್ಯ ಇರುವುದಿಲ್ಲ. ಎತ್ತರಕ್ಕೆ ಏರಿದಷ್ಟು ನೋಡುವ ಕಣ್ಣುಗಳು ಜಾಸ್ತಿ. ಆ ಗೌರವವನ್ನು ಉಳಿಸಿಕೊಳ್ಳುವ ಎಚ್ಚರಿಕೆ ಸದಾ ಇರಬೇಕು. ಸಣ್ಣ ತಪ್ಪು ಅಗಾಧವಾಗಿ ಕಾಣುವ, ಹಲವರ ಬಾಯಿಗೆ ಆಹಾರವಾಗುವ ಸಾಧ್ಯತೆ ಹೆಚ್ಚು. ಹಾಗೆ ಹೇಳುತ್ತಲೇ ತಮಗೆ ತಾವೇ ಸಮಾಧಾನ ಮಾಡಿಕೊಳ್ಳುವ ಬಗೆಯನ್ನು ಆಫೀರಾ ಹೇಳಿಕೊಡುತ್ತಾಳೆ. ಜಗತ್ತಿನಲ್ಲಿ ಎಲ್ಲಾ ಸಮಾಧಾನಕ್ಕಿಂತ ತನಗೆ ತಾನೇ ಮಾಡಿಕೊಳ್ಳುವ ಸಮಾಧಾನ ಇದೆಯಲ್ಲ ಅದು ತುಂಬಾ ಉತ್ತಮವಾದದ್ದು, ಹಾಗೂ ಅಪ್ತವಾದದ್ದು ನೈಜವಾದದ್ದು.

ಹೆಣ್ಣಿಗೆ ಕಟ್ಟುಪಾಡುಗಳು ಜಾಸ್ತಿ ಇರುವ ಹಾಗೆಯೇ ಹೆಂಡತಿ ಏನು ಮಾಡಿದರೆ ಸರಿ, ಏನು ಮಾಡಿದರೆ ತಪ್ಪು ಎಂದು ನಿರ್ದರಿಸುವ ಹಕ್ಕು ಇರುವುದು ಅವರವರ ಗಂಡನಿಗೆ ಮಾತ್ರ ಆದರೆ ಗಂಡ ತಪ್ಪು ಮಾಡಿದರೆ ಪ್ರಶ್ನಿಸುವ ಹಕ್ಕು ಮಾತ್ರ ಹೆಂಡತಿಯರಿಗೆ ಇಲ್ಲ ಎನ್ನುವ ಆಫೀರಾ ಕಂಡದ್ದೇ ನಿಜವಲ್ಲ ಅನ್ನುವ ಸಂದರ್ಭದಲ್ಲಿ ಕಾಣದ್ದು ಸುಳ್ಳು ಎಂದು ಹೇಳುವುದಾದರೂ ಹೇಗೆ ಎನ್ನುವ ಮೂಲಭೂತ ಪ್ರಶ್ನೆ ಎತ್ತುತ್ತಲೇ ನಮ್ಮೊಳಗನ್ನು ಒಮ್ಮೆ ನೋಡಿಕೊಳ್ಳುವ ಹಾಗೆ ಮಾಡಿಬಿಡುತ್ತಾಳೆ. ನಮಗೆ ಗೊತ್ತಿಲ್ಲ ಅಂದ ಮಾತ್ರಕ್ಕೆ ಇಲ್ಲ ಎನ್ನುವುದಾಗಲಿ, ಸುಳ್ಳು ಅನ್ನುವುದಾಗಲೀ ಮೂರ್ಖತನವೇ ಹೊರತು ಬೇರೇನಲ್ಲ. ಹಾಗೆಯೇ ಎಂದೂ ಭೇಟಿಕೊಡದ, ನೋಡದ, ಕೆಲವೊಮ್ಮೆ ಪರಿಚಯವೂ ಇಲ್ಲದ ವ್ಯಕ್ತಿಗಳ ಬಗ್ಗೆ, ಸ್ಥಳಗಳ ಬಗ್ಗೆ ನಮ್ಮ ನಿರ್ಧಾರಗಳೂ ಸರಿಯಾಗಿರುತ್ತವೆ ಅನ್ನೋದೂ ತಪ್ಪು. ಪ್ರಶ್ನೆಯೊಂದಕ್ಕೆ ಸರಿಯಾದ ಉತ್ತರ ಹೊಳೆಯದಿದ್ದಾಗ ಅದಕ್ಕೆ ಸಂವಾದಿಯಾಗಿರುವ ಮತ್ತೊಂದು ಪ್ರಶ್ನೆ ಎಸೆದುಬಿಡುವುದು, ನಿಮ್ಮಂತವರು ತರ್ಕಗಳಲ್ಲಿ ಗೆಲ್ಲುವುದು ಹೀಗೆಯೇ ಅನ್ನೋ ಅರ್ಷದ್ ಮಾತು ಅದೆಷ್ಟು ಪ್ರಸ್ತುತ... ಎಷ್ಟೊಂದು ಸತ್ಯ ಸತ್ಯ...

ಹೆಣ್ಣು ತನ್ನ ವ್ಯಕ್ತಿತ್ವವನ್ನು ಹೇಗೆ ಉಳಿಸಿಕೊಳ್ಳಬೇಕು, ಹಕ್ಕನ್ನು ಎಲ್ಲಿ ಹೇಗೆ ಚಲಾಯಿಸಲು ಕಲಿಯಬೇಕು, ತನ್ನತನ ಹೇಗೆ ಉಳಿಸಿಕೊಳ್ಳಬೇಕು ಎನ್ನುವುದಕ್ಕೆ ಆಫೀರಾ ನಿದರ್ಶನವಾಗುತ್ತ ಹೋಗುತ್ತಾಳೆ. ಅವಳು ಹೇಳಿದ ಕತೆಯ ಗುಂಗಿನಲ್ಲಿ ಇರುವಾಗ ಕತೆಗಳೆಲ್ಲವೂ ಚೆನ್ನಾಗಿಯೇ ಅನ್ನಿಸುತ್ತದೆ ಗೆಳೆಯಾ ಯಾಕೆದಂರೆ ಅವೆಲ್ಲಾ ಬೇರೆಯವರ ಕತೆಗಳು ಆದರೆ ಅವು ನಮ್ಮ ಬದುಕಿನಲ್ಲೇ ಘಟಿಸಿದಾಗ ಮಾತ್ರ ನಾವು ಇದ್ದಕ್ಕಿನ್ದತೆ ಗಂಡಸರಾಗಿಬಿಡುತ್ತೇವೆ ಎನ್ನುವ ಅರ್ಷದ್ ಮನುಷ್ಯನ ಸ್ವಭಾವನ್ನು ಬೆತ್ತಲಾಗಿಸಿ ಬಿಡುತ್ತಾನೆ.

ಹಲವು ಮದುವೆಗಳು, ಸವತಿ ಮತ್ಸರ, ಅನುಭವಿಸುವ ತಲ್ಲಣ, ಸ್ಥಾನ ಕಳೆದುಕೊಳ್ಳುವ ಭಯ, ಅಂತಿಮವಾಗಿ ಏನೇ ಆದರೂ ಮನುಷ್ಯರು ಸಾಧಾರಣ ಮನುಷ್ಯರೇ ಅನ್ನುವ ಸತ್ಯ ಹೀಗೆ ಪ್ರತಿಯೊಂದು ಇಲ್ಲಿ ದಾಖಲಾಗುತ್ತಾ ಹೋಗಿದೆ. ಕಾಲ ಬದಲಾದರೂ ಮನುಷ್ಯನ ಮೂಲ ಸ್ವಭಾವ ಅಪ್ಡೇಟ್ ಆಗುತ್ತದೆಯೇ ವಿನಃ ಬದಲಾಗುವುದಿಲ್ಲ ಅನ್ನುವುದು ಅರ್ಥವಾಗುತ್ತಾ ಹೋಗುತ್ತದೆ. ನಮಗಿಷ್ಟವಾದ ವಸ್ತುವೊಂದು ನಮ್ಮೊಡನೆ ಇರುವಷ್ಟು ಕಾಲ ಅದರೊಂದಿಗೆ ಸಂತೋಷವನ್ನು ಅನುಭವಿಸುತ್ತಿರಬೇಕೆ ಹೊರತು ಅದರ ಮೇಲೆ ಯಜಮಾನಿಕೆಯನ್ನು ಸಾಧಿಸಹೊರಟರೆ ಅದು ನಮ್ಮಿಂದ ತಪ್ಪಿಸಿಕೊಂಡು ಬಲುದೂರಕ್ಕೆ ಓಡಿಹೋಗುವ ಸಂಭವಗಳೇ ಹೆಚ್ಚು ಎನ್ನುವ ಆಫೀರಾಳ ಮಾತು ಹೇಗೆ ಬದುಕಬೇಕು ಅನ್ನೋದನ್ನ ಕಲಿಸುತ್ತದೆ.

ಸರಾಗವಾಗಿ ಓದಿಸಿಕೊಂಡು ಹೋಗುವ ಉಮ್ಮಾ ಚಿಂತನೆಗೂ ಹಚ್ಚುತ್ತದೆ. ಅಂತಿಮವಾಗಿ ಏನೇ ವೈಜ್ಞಾನಿಕ, ತರ್ಕ ಮಣ್ಣು ಮಸಿ ಅಂದರೂ  ಮನುಷ್ಯನಿಗೆ ಸಮಾಧಾನ ಕೊಡುವುದು, ಕಷ್ಟಗಳನ್ನು ಎದುರಿಸುವ ಶಕ್ತಿ ಕೊಡುವುದು ನಂಬಿಕೆ. ಆ ನಂಬಿಕೆಯ ಮೂಲ  ದೇವರು. ಇದೆ ಅಂತಿಮ ಸತ್ಯ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...