ಹುಲಿಕಲ್ ಜಾತ್ರೆ

ತೊಂಬತ್ತರ ದಶಕದಲ್ಲಿ ಹಳ್ಳಿಗಳಲ್ಲಿ ಅದೂ ವರಾಹಿಯ ಮಡಿಲಿನಲ್ಲಿ ಇದ್ದಂತ ಅಪ್ಪಟ ಹಳ್ಳಿಗಳಿಗೆ ಸಂಭ್ರಮ ಹಬ್ಬವೆಂದರೆ ಅದು ಜಾತ್ರೆ. ಎಲ್ಲರನ್ನೂ ಭೇಟಿಯಾಗುವ, ಸುತ್ತೆಲ್ಲಾ ಹಳ್ಳಿಗಳು ಒಂದು ಕಡೆ ಸೇರುವ, ಈಗಿನ ಮಾತಿನಲ್ಲಿ ಹೇಳುವುದೇ ಆದರೆ ಶಾಪಿಂಗ್ ಮಾಡುವ ತಾಣ. ಹಾಗಾಗಿ ಸಂಪಗೋಡಿನ ಈಚೆ ಬದಿಯ ಹುರಳಿಯಲ್ಲಿ ಜಾತ್ರೆ ನಡೆದರೂ ಅದು ನಡೆದು ಹೋಗುವಷ್ಟು ಹತ್ತಿರ ಹಾಗೂ ಬಸ್ ಇಲ್ಲದ ಕಾರಣ ಹುಲಿಕಲ್ ಜಾತ್ರೆಯೆಂದರೆ ಸ್ವಲ್ಪ ಹೆಚ್ಚೇ ಪ್ರೀತಿ. ಯಡೂರಿನ ತನಕ ನಡೆದು ಅಲ್ಲಿ ಕಾದು ಧೂಳು ಎಬ್ಬಿಸಿಕೊಂಡು ಬರುವ ಕೆಂಪು ಬಣ್ಣದ ಬಸ್ಸು ಹತ್ತಿ ತುಂಬಿರುವ ಜನಜಂಗುಳಿಯಲ್ಲಿ ಜಾಗ ಮಾಡಿ ನಿಂತು ಕೊಂಡರೆ ಯುದ್ಧ ಗೆದ್ದ ಭಾವ. ಕೂರಲು ಸೀಟ್ ಏನಾದರೂ ಅದರಲ್ಲೂ ಕಿಟಕಿಯ ಪಕ್ಕ ಸಿಕ್ಕಿದರಂತೂ ಸ್ವರ್ಗಕ್ಕೆ ಮೂರೇ ಗೇಣು. ಅದರಲ್ಲೂ ಗುಂಡಯ್ಯನ ಮಗಳನ್ನು ಅಲ್ಲಿಯ ಅರ್ಚಕರ ಕುಟುಂಬಕ್ಕೆ ಮದುವೆ ಮಾಡಿ ಕೊಟ್ಟ ಮೇಲಂತೂ ಅದು ಮನೆಯ ಮಗಳ ಮನೆಯ ಜಾತ್ರೆ. ಹೋಗದೆ ಇರುವುದಾದರೂ ಹೇಗೆ?

ಇಂಥಾ ಮಾಸದಲ್ಲಿ ಇಂಥಾ ಜಾತ್ರೆ ಅಂತ ದೊಡ್ಡವರಿಗೆ ನೆನಪಿದ್ದರೂ ಇರುತಿದ್ದ ಒಂದೇ ಒಂದು ಕ್ಯಾಲೆಂಡರ್ ನೋಡಿ ಅದ್ರಲ್ಲಿ ಮಾರ್ಕ್ ಮಾಡಿ ದಿನಾಲೂ ಇನ್ನು ಎಷ್ಟು ದಿನ ಎಂದು ಎಣಿಸುವುದೂ ಕೂಡಾ ದಿನನಿತ್ಯದ ಕೆಲಸಗಳಲ್ಲಿ ಒಂದಾಗಿ ಹೋಗಿತ್ತು. ನಾಳೆ ಜಾತ್ರೆ ಎಂದರೆ ರಾತ್ರಿಯಿಂದಲೇ ಕಾತರ. ಬೆಳಗಾಗುವುದನ್ನೇ ಕಾಯುವುದರ ಭರದಲ್ಲಿ ನಿದ್ದೆ ಎಂಬುದು ಅದಾಗಲೇ ಜಾತ್ರೆಗೆ ಹೋಗಿರುತಿತ್ತು. ಎಂದೂ ಹತ್ತು ಸಲ ಕರೆಯದೆ ಏಳದ ನಾವು ಅವತ್ತು ಮಾತ್ರ ಎಲ್ಲರಿಗಿಂತ ಮುಂಚೆ ಎದ್ದು ಇನ್ನೂ ಬೆಳಗು ಆಗಿಲ್ವಾ ಎಂದು ಕೇಳಿ ಬೆಳಿಗ್ಗೆಯೇ ಸುಪ್ರಭಾತ ಸೇವೆ ಮಾಡಿಸಿಕೊಳ್ಳುತ್ತಿದ್ದೇವೆ. ನಮ್ಮ ಗಡಿಬಿಡಿ ಗೊತ್ತಿದ್ದ ಅಜ್ಜಿ ಹಿಂದಿನ ದಿನ ರಾತ್ರಿಯೇ ಬಚ್ಚಲು ಒಲೆಗೆ ಬೆಂಕಿ ಹಾಕಿರುತ್ತಿದ್ದರಿಂದ ನಾಲ್ಕು ತಂಬಿಗೆ ನೀರು ಸುರಿದುಕೊಂಡು ಸ್ನಾನದ ಶಾಸ್ತ್ರವನ್ನೂ ಹೇಳಿಕೊಳ್ಳದೆ ಮುಗಿಸಿ, ಇದ್ದಿದ್ದರಲ್ಲೇ ಒಳ್ಳೆಯ ಬಟ್ಟೆ ಹಾಕಿಕೊಂಡರೆ ಇನ್ನು ಹೊರಡುವುದು ಒಂದೇ ಬಾಕಿ.

ಎಲ್ಲಾ ಕಡೆಗೂ ನಡೆದೇ ಹೋಗುತ್ತಿದ್ದರಿಂದ ದೂರ ನಡೆಯುವುದು ಚಿಕ್ಕನಿಂದಲೇ ಅಭ್ಯಾಸವಾಗಿತ್ತು. ಮತ್ತದು ಅನಿವಾರ್ಯವೂ ಆಗಿತ್ತು. ಉರಿ ಬಿಸಿಲು, ಕಲ್ಲು ಮಣ್ಣಿನ ಏರು ಹಾದಿ, ಕಾಡು ಉಹೂ ಯಾವುದೂ ಉತ್ಸಾಹವನ್ನು ಕುಗ್ಗಿಸುತ್ತಿರಲಿಲ್ಲ. ಇನ್ನಷ್ಟು ಹುಮ್ಮಸ್ಸಿಂದಲೇ ಹೋಗುತ್ತಿದ್ದೆವು. ಅದರಲ್ಲೂ ಜಾತ್ರೆಯೆಂಬ ಮಾಯಾವಿ ಅಷ್ಟು ಸೆಳೆಯುತ್ತಿದ್ದ. ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳ ಜನರ ನಡುವೆ ಆ ನೂಕು ನುಗ್ಗಾಟದಲ್ಲಿ, ಕಾಯುವ ಬಿಸಿಲಿನಲ್ಲಿ ದೇವರ ದರ್ಶನ ಮಾಡಿ ತೇರು ಎಳೆಯುವುದನ್ನ ನೋಡಲು ಜನ ಜಂಗುಳಿಯಲ್ಲಿ ತಳ್ಳಾಡುತ್ತಾ ಒಮ್ಮೆ ರಥದಲ್ಲಿ ಕುಳಿತ ದೇವರು ಕಂಡರೆ ಕೈ ಮುಗಿದವೆಂದರೆ ಅಲ್ಲಿಗೆ ಜೀವನ ಸಾರ್ಥಕ, ಸುಸ್ತೂ ಮಾಯಾ.

ಜಾತ್ರೆಯೆಂದರೆ ಇಡೀ ಊರಿಗೆ ಹಬ್ಬ. ಪ್ರತಿ ಮನೆಯ ಬಾಗಿಲೂ  ತೋರಣಗಳಿಂದ ಅಲಂಕರಿಸಿಕೊಂಡು ಸಿಂಗಾರವಾದರೆ ಸೆಗಣಿ ಸಾರಿಸಿದ ಅಂಗಳದಲ್ಲಿ ರಂಗೋಲಿ ಬಣ್ಣಗಳನ್ನು ತುಂಬಿಕೊಂಡು ಮಿಂಚುತಿತ್ತು. ಒಂದೊಂದು ಮನೆಯಲ್ಲೂ ಒಂದೊಂದು ತರಹದ ರಂಗೋಲಿ. ಅದೆಷ್ಟು ವರ್ಣ ವೈವಿಧ್ಯ, ಚಿತ್ರ ಚಿತ್ತಾರ, ಅಲಂಕಾರ. ಊರಿಗೇ ಊರೇ ಸಿಂಗರಿಸಿಕೊಂಡ ವಧುವಿನಂತೆ ಕಾಣಿಸುತ್ತಿತ್ತು.  ಯಾರ ಮನೆಗೆ ಯಾರೂ ಬಂದರೂ ಸಂಭ್ರಮವೇ, ಆತಿಥ್ಯವೇ.. ಅಪರಿಚಿತತೆ ಮಾಯವಾಗಿ ಪರಿಚಯವೊಂದು ಹುಟ್ಟಿಕೊಂಡು ಎಲ್ಲರನ್ನೂ ಬೆಸೆಯುತ್ತಾ ಸಂಬಂಧವೊಂದು ಜಾತ್ರೆಯ ಸದ್ದಿನಲ್ಲಿ ನಿಶಬ್ಧವಾಗಿ ಅರಳುತಿತ್ತು. ಕೂಡಿ ಬಾಳುವುದನ್ನು ಅದೆಷ್ಟು ಚೆಂದವಾಗಿ ಕಲಿಸುತಿತ್ತು ಈ ಜಾತ್ರೆ.

ಅಲಂಕಾರಗೊಂಡ ದೇವರ  ಮೂರ್ತಿ ಬಂದವರನ್ನೆಲ್ಲಾ ಹಸನ್ಮುಖವಾಗಿ ಸ್ವಾಗತಿಸುತಿತ್ತು ಅನ್ನೋದನ್ನ ಹೊರಗೆ ಬರುವ ನಗು ಮುಖಗಳು ಹೇಳುತ್ತಿದ್ದವು. ಅವನು ಅಲ್ಲೇ ಕುಳಿತು ಬಂದವರನ್ನು ಮಾತಾಡಿಸಿದರೆ ಉತ್ಸವ ಮೂರ್ತಿ ಮಾತ್ರ ರಥವನ್ನು ಏರಿ ಬೀದಿಬೀದಿಯಲ್ಲಿ ಮೆರವಣಿಗೆ ಹೊರಡುತಿತ್ತು. ಅತ್ತ ಆರೋಹಣ ಆಗುತ್ತಿದ್ದಂತೆ ಇತ್ತ ಜನರ ಉತ್ಸಾಹವೂ ಮುಗಿಲು ಮುಟ್ಟುತಿತ್ತು. ಪ್ರತಿಯೊಬ್ಬರಿಗೂ ರಥವನ್ನು ಎಳೆಯುವ ಆಸೆ, ದೇವರನ್ನು ಹೆಗಲ ಮೇಲೆ ಹೊತ್ತು ಕರೆದೊಯ್ಯುವ ಪ್ರೀತಿ. ನಿಧಾನವಾಗಿ ತೇರು ರಾಜಗಾಂಭೀರ್ಯದಿಂದ ಹೋಗುತ್ತಿದ್ದರೆ ಅಕ್ಕ ಪಕ್ಕದ ಊರಿನಿಂದ ಬಂದ ಜನಗಳು ನೋಡಿ ಕಣ್ತುಂಬಿ ಮನ ತುಂಬಿಕೊಳ್ಳುತ್ತಿದರು. ಗೊತ್ತಿಲ್ಲದವರೂ ಹೆಗಲು ಕೊಟ್ಟು ಒಬ್ಬರಿಗೊಬ್ಬರು ಜೊತೆಯಾಗಿ ಒಂದು ಕಾರ್ಯಕ್ರಮವನ್ನು ಎಷ್ಟು ಚೆಂದವಾಗಿ ನಡೆಸಿಕೊಡುತ್ತಿದ್ದರು. ಸಾವಿರಾರು ಜನರನ್ನು ಬಂಧಿಸುವ ಶಕ್ತಿ ಆ  ಒಂದು ತೆಳುವಾದ ಹಗ್ಗಕ್ಕಿತ್ತೇ...

ತೇರಿನದು ಈ ವೈಭೋಗವಾದರೆ ಜಾತ್ರೆಯ ಬೀದಿಯದು ಇನ್ನೊಂದು ವೈಭೋಗ. ದೇವಸ್ಥಾನದ ಎದುರಿನ ರಸ್ತೆಯ ಇಕ್ಕೆಲಗಳಲ್ಲಿ ತರಾವರಿ ಅಂಗಡಿಗಳು ಜಾತ್ರೆಯ ಹಿಂದಿನ ದಿನವೇ ಉದ್ಭವವಾಗುತಿತ್ತು. ಅಪ್ಪನನ್ನೋ ಗಂಡನನ್ನೋ ಕೇಳಿ ಪಡೆದುಕೊಂಡ ಬಂದ ದುಡ್ಡು ಪುಟ್ಟ ಪರ್ಸಿನಲ್ಲಿ ಅಲ್ಲಿಯವರೆಗೂ ಭದ್ರವಾಗಿ ಕುಳಿತಿದ್ದದ್ದು ಅಂಗಡಿ ಹತ್ತಿರವಾಗುತ್ತಿದ್ದಂತೆ ಬಿಡುಗಡೆಗಾಗಿ ಹಂಬಲಿಸುತ್ತಿದ್ದವು. ಇಡೀ ಜಾತ್ರೆಯ ಅಂಗಡಿಗಳನ್ನು ಸುತ್ತಿ ಕಣ್ಣಿಗೆ ಕಂಡು ಇಷ್ಟವಾದರೂ ಪರ್ಸಿನ ಭಾರಕ್ಕೆ ಹೊಂದಿಕೆ ಆಗುವಂತೆ ಚೌಕಾಸಿ ಮಾಡಿ ಅವರು ಕೊಟ್ಟ ಹಾಗೆ ನಾವು ಬಿಟ್ಟ ಹಾಗೆ ನಾಟಕ ಮಾಡುತ್ತಾ  ಬಳೆ, ಟೇಪು, ಕಿವಿಯೋಲೆ, ಮನೆಗೆ ಬೇಕಾದ ಸಣ್ಣಪುಟ್ಟ ವಸ್ತುಗಳನ್ನು ಖರೀದಿ ಮಾಡಿದರೆ ರಾಜ್ಯವನ್ನೇ ಗೆದ್ದ ಹೆಮ್ಮೆ. ಸಂತೃಪ್ತ ಭಾವ. ಕೊಟ್ಟು ಕೊಳ್ಳುವ ಭಾವಗಳ ಜಾತ್ರೆ.

ಟೆಂಟ್ ಸಿನೆಮಾ, ನಾಟಕ, ನೃತ್ಯ ಮುಂತಾದ ಮನೋರಂಜನಾ ಕಾರ್ಯಕ್ರಮಗಳು ಜರುಗುತ್ತಿದ್ದದ್ದು ಈ ಜಾತ್ರೆಯ ಸಂದರ್ಭದಲ್ಲಿ ಮಾತ್ರ. ಹಾಗಾಗಿ ಜಾತ್ರೆ ಹಬ್ಬದ ವಾತಾವರಣ ಸಂಭ್ರಮವನ್ನು ಕೇವಲ ಆ ಊರಿಗೆ ಮಾತ್ರ ಹಂಚದೆ ಬಂದ ಭಾಗವಹಿಸಿದ ಪ್ರತಿಯೊಬ್ಬರಿಗೂ ಹಂಚುತಿತ್ತು.ದಿನನಿತ್ಯದ ಜಂಜಾಟಗಳನ್ನೂ ಮರೆತು ಬಂಧು ಮಿತ್ರರೊಂದಿಗೆ, ಊರ ಜನರೊಂದಿಗೆ ಸೇರಿ ಖುಷಿಯಾಗಿರುವಂತೆ ಮಾಡುತಿತ್ತು. ವಾಪಾಸ್ ಆಗುವಾಗ ನಿರಾಳತೆಯನ್ನು, ಜೀವನ ಪ್ರೀತಿಯನ್ನೂ  ಉತ್ಸಾಹವನ್ನೂ ತುಂಬಿ ಕಳಿಸುತಿತ್ತು. ಎಷ್ಟು ದೂರವಾದರೂ ನಡೆದು ಹೋಗಲು ಅದೇ ಕಾರಣವಾಗುತ್ತಿತ್ತೇನೋ.

ಇಷ್ಟೆಲ್ಲಾ ಆಗುವಾಗ ನಮ್ಮಂತೆಯೇ ಸೂರ್ಯನೂ ಬಸವಳಿದು ಹೋಗಿರುತಿದ್ದ. ಅವನಿಗೂ ಮನೆಯ ಸೇರುವ ಗಡಿಬಿಡಿ. ಹೀಗೆ ಒಮ್ಮೆ ಯಾರೂ ಇಲ್ಲದೆ ಜಾತ್ರೆಗೆ ಹೋಗಲು ಗುಂಡಯ್ಯನ ಹೆಂಡತಿಗೆ ಜೊತೆಸಿಕ್ಕಿದ್ದು ನಾನು. ತೇರು ನೋಡಿ, ಸುತ್ತಾಟ ಮುಗಿಸಿ ಅವರ ಮಗಳ ಮನೆಯಲ್ಲಿ ಕಾಫಿ ಕುಡಿದು ಲೋಟ ಕೆಳಗೆ ಇಡುವ ಹೊತ್ತಿಗೆ ಸೂರ್ಯನೂ ಹೊರಟಾಗಿತ್ತು. ಗಡಿಬಿಡಿಯಲ್ಲೇ ಇಬ್ಬರೂ ಬಂದು ಬಸ್ ಹತ್ತಿದರೆ ತುಂಬು ಗರ್ಭಿಣಿಯಂತಿದ್ದ ಅದು ನಿಧಾನಕ್ಕೆ ಅಲ್ಲಲ್ಲಿ ನಿಂತು ಯಡೂರು ತಲುಪುವ ವೇಳೆಗೆ ಸೂರ್ಯನಾಗಲೇ ಮನೆಯ ಅಂಗಳಕ್ಕೆ ಕಾಲಿಟ್ಟು ಉಷೆ ನಾಚಿ ಕೆಂಪಾಗಿದ್ದಳು. ಅದನ್ನು ನೋಡಿ ಆಸ್ವಾದಿಸುವ ಬದಲು ನಮ್ಮಿಬ್ಬರಿಗೂ ಆತಂಕವಾಗಿತ್ತು. ಮನೆ ತಲುಪಲು ಐದು ಮೈಲಿ ನಡೆಯಬೇಕಿತ್ತು.

ಕೈಯಲ್ಲಿ ಒಂದು ಬ್ಯಾಟರಿಯೂ ಇಲ್ಲದೆ ಐವತ್ತು ವರ್ಷದ ಹೆಂಗಸಿನ ಜೊತೆ ಐದು ವರ್ಷದ ಹುಡುಗಿಯೊಬ್ಬಳು ಬಸ್ ಸ್ಟಾಪ್ ಹಿಂದಿನ ಬಯಲು ದಾಟಿ ಅಲ್ಲಿದ್ದ ಒಂದು ಬೇಲಿ ದಾಟಿದರೆ ಅಲ್ಲಿಂದ ಕಾಡು ಶುರುವಾಗುತ್ತಿತ್ತು. ಅದಾಗಲೇ ಇರುಳು ತನ್ನ ಸೆರಗು ಹಾಸಿ ಮೆಲ್ಲ ಮೆಲ್ಲನೆ ಅಡಿಯಿಟ್ಟು ಬರುತ್ತಿದ್ದಳು. ಅಜ್ಜಿಯೊಬ್ಬಳು ತನ್ನ ಮಂಜುಕಣ್ಣಿನಿಂದ ತೆಗೆದ ಬೈತಲೆಯಂತೆ ಅಂಕುಡೊಂಕಾದ ಹಾದಿಯದು. ಆ ಹೊತ್ತಿನಲ್ಲಿ ಅಷ್ಟು ದೂರ ಹೋಗುವವರು ಯಾರೂ ಇಲ್ಲದ ನಿರ್ಜನ ಹಾದಿ. ಢವಗುಡುವ ಎದೆಯೊಂದಿಗೆ ಹೆಜ್ಜೆ ಇಟ್ಟರೆ ಹೆಜ್ಜೆ ಸಪ್ಪಳಕ್ಕಿಂತಲೂ ಎದೆಯ ಬಡಿತದ ಸದ್ದೇ ಜೋರಾಗಿ ಇನ್ನಷ್ಟು ಹೆದರುತ್ತಲೇ ಕಾಲಿನ ವೇಗ ಹೆಚ್ಚಿಸಿ ಹೊರಟೆವು.

ಅಂದಿಗೂ ಇಂದಿಗೂ ಕಾಲ ಬದಲಾಗಿಲ್ಲ. ಅಂದೂ ಕಾಡಿನ ಮೃಗಗಳಿಗಿಂತ ಅವರಿಗೆ ನಾಡಿನ ಮೃಗಗಳದ್ದೆ ಭಯ ಜಾಸ್ತಿ ಇತ್ತು ಅನ್ನೋದು ಈಗ ನೆನಪಿನ ಗಡಿಯಾರ ತಿರುಗಿಸಿದಾಗ ಅರ್ಥವಾಗುತ್ತದೆ. ಅದಾಗಲೇ ಜುಯ್ಯೇನ್ನುವ ಜೀರುಂಡೆ, ಗಾಳಿಗೆ ಎಲೆ ಅಲುಗುವ ಸದ್ದು, ಅಲ್ಲೆಲ್ಲೋ ಮರಕುಟಿಗನ ಆರ್ಭಟ, ಗೂಡು ಸೇರಿದ ಹಕ್ಕಿಗಳ ಮಾತುಕತೆ ಇವುಗಳನ್ನು ಕೇಳುತ್ತಾ ಹೋಗುವಾಗಲೇ ಭಟ್ಟರೇ ಸ್ವಲ್ಪ ನಿಧಾನಕ್ಕೆ ಹೆಜ್ಜೆ ಹಾಕಿ ಅಂತ ಇದ್ದಕ್ಕಿಂದಂತೆ ಅವೆಲ್ಲ ಶಬ್ಧವನ್ನೂ ಮೀರಿಸುವ ದನಿಯಲ್ಲಿ ಪಾರ್ವತಮ್ಮ ಕೂಗಿದ್ದರು. ಅಯ್ಯೋ ಅಜ್ಜ ಎಲ್ಲಿದಾರೆ ಅಲ್ಲಿ ಅಂತ ಇನ್ನಷ್ಟು ಗಟ್ಟಿಯಾಗಿ ಕೇಳಲು ಹೊರಟ ನನ್ನ ಬಾಯನ್ನು ಅದುಮಿ ನಾವಿಬ್ಬರೇ ಅಲ್ಲಾ ಇನ್ನೂ ಯಾರೋ ಇದಾರೆ ಅಂತ ಗೊತ್ತಾಗಲಿ ಎಂದು ಬಿಟ್ಟಿದ್ದರು. ಯಾರಿಗೆ ಗೊತ್ತಾಗಬೇಕು ಎನ್ನುವ ಗೊಂದಲದಲ್ಲಿ ನಾನೂ ಮಾತು ನುಂಗಿ ಮೌನವಾಗಿದ್ದೆ.

ಅದೇನೂ ಸುಲಭದ ದಾರಿಯಲ್ಲ. ಅದರಲ್ಲೂ ಕತ್ತಲಲ್ಲಿ ಸರ್ರೆಂದು ಸರಿಯುವ ಹಾವೋ, ಹಪ್ಪಟೆಯೋ. ದುತ್ತೆಂದು ಎದುರಾಗುವ ಕಾಡು ಹಂದಿಯೋ, ಕಾಟಿಯೋ.. ತಣ್ಣಗೆ ಹೊಂಚು ಹಾಕುವ ಸೀಳು ನಾಯಿಯೋ, ಯಾವುದು ಬೇಕಾದರೂ ಸಿಗಬಹುದಿತ್ತು. ಮಾಸ್ತಿ ಬೈಲಿನ ಪಕ್ಕದಲ್ಲೇ ಇದ್ದ ಸ್ಮಶಾನವೂ ಭಯ ಹುಟ್ಟಿಸುವುದರಲ್ಲಿ ಹಿಂದೆ ಬಿದ್ದಿರಲಿಲ್ಲ. ಬಣ್ಣ ಬಣ್ಣದ ರೋಚಕ ಕತೆಗಳು, ಮೋಹಿನಿ, ಕೊಳ್ಳಿದೆವ್ವಗಳು ಅಲ್ಲಲ್ಲಿ ಓಡಾಡುತ್ತಾ ಸಿಕ್ಕಿದವರ ಜೊತೆ ಮಾತಾಡಲು ಹವಣಿಸುತ್ತವೆ ಎಂಬ ಸಂಗತಿ ನಡುಕು ಹುಟ್ಟಿಸಿ ದಾರಿಯಲ್ಲಿದ್ದ   ಕಲ್ಲೋ, ಮರದ ತುಂಡೂ ಎಡವಿ ಬೀಳುವ ಹಾಗೆ ಮಾಡಲು ಕಾಯುವ ಜಾಗವದು. ಅವರ ಆತಂಕದ ಕಾರಣ ಗೊತ್ತಿಲ್ಲದ ವಯಸ್ಸು ಅದಾದರೂ ನಾನೂ ಬೇಗನೆ ಹೆಜ್ಜೆ ಹಾಕುತ್ತಾ ಇನ್ನೇನು ಕತ್ತಲು ಒಳಗೆ ಅಡಿಯಿಟ್ಟಿತು ಅನ್ನುವಾಗ ಹಳ್ಳದ ದಂಡೆಯಲ್ಲಿ ನಿಂತಿದ್ದೆವು. ಅಲ್ಲಿಂದ ನೋಡಿದರೆ ಅದಾಗಲೇ ಚಿಮಣಿ ದೀಪಗಳು ಮಿಣುಕು ಬೆಳಗು ಹಿಡಿದು ಕಾಯುತ್ತಿದ್ದವು.

ನೆಮ್ಮದಿಯಿಂದ ಹಳ್ಳದಲ್ಲಿ ಕಾಲಿಟ್ಟರೆ ಅಲ್ಲಿಯವರೆಗಿನ ಸುಸ್ತು, ಆತಂಕ ಎಲ್ಲವೂ ಮಾಯವಾಗಿ ಸಮಾಧಾನ ಆವರಿಸಿತ್ತು. ತನ್ನ ಜಾಗ ಅನ್ನೋದು ಎಷ್ಟೊಂದು ನಿರಾಳತೆ ಕೊಡುತ್ತದೆ ಮನಸ್ಸಿಗೆ. ಅಲ್ಲಿಂದ ನಿಧಾನಕ್ಕೆ ಗದ್ದೆಯ ಅಂಚಿನಲ್ಲೇ ನಡೆದು ಊರಿಗೆ ಕಾಲಿಡುವಾಗ ಇಂಥ ಕತ್ತಲೆಯಲ್ಲಿ ಇಬ್ಬರೇ ಬಂದಿದ್ದರಲ್ಲ ಜಾತ್ರೆ ಜೋರಾ ಅನ್ನುವ ಅಪ್ಪಿನಾಯ್ಕನ ದನಿ ಇನ್ನಷ್ಟು ನಿರಾಳತೆ ತುಂಬುವಾಗಲೇ ಮನೆಯ ಬಾಗಿಲಿಗೆ ಬಂದಿದ್ದೆವು. ಇದ್ದು ಬರೋದಲ್ವಾ ಪಾರ್ವತಮ್ಮ ಅಂತ ಅಜ್ಜಿ ಕಾಫಿ ಕೊಡುವಾಗ ನಾನು ಮತ್ತೆ ಜಾತ್ರೆ ಬರಲು ಎಷ್ಟು ದಿನವಿದೆ ಎಂದು ಲೆಕ್ಕ ಹಾಕಲು ಒಳಗೆ ಹೋದೆ.

ಜಾತ್ರೆಯೆಂದರೆ ಕೇವಲ ತೇರಲ್ಲ. ಅದು ಭಾವಗಳ ಜಾತ್ರೆ, ಬಣ್ಣಗಳ ಜಾತ್ರೆ, ಬಂಧಗಳ ಜಾತ್ರೆ. ಖುಷಿಯ ತೇರು ಬದುಕಿನಲ್ಲೂ ಚಲಿಸುತ್ತಿತ್ತು. ಮನವನ್ನು ಸಂಭ್ರಮಕ್ಕೆ ಸಜ್ಜುಗೊಳಿಸುವ, ಒಬ್ಬರಿಗೊಬ್ಬರು ಹೊಂದಿಕೊಂಡು ಬಾಳುವ  ಮತ್ತಷ್ಟು ಮಾಗುವ ಪ್ರಕ್ರಿಯೆ. ದಟ್ಟ ಕಾಡಿನ ಕೆಳಗೆ, ಘಾಟಿಯ ಹೆಬ್ಬಾಗಿಲಲ್ಲಿ ಇರುವ ಆ ಪುಟ್ಟ ಹುಲಿಕಲ್ ಎಂಬ ಊರು ನಂತರ ಅರ್ಧ ಮುಳುಗಿ ನಾರಸಿಂಹ ಜಾಗ ಬದಲಾಯಿಸುವ ವೇಳೆಗೆ ನಾವೂ ಊರು ಬಿಟ್ಟು ಬಂದಾಗಿತ್ತು. ಊರಿನಂತೆ ಜಾತ್ರೆಯ ನೆನಪೂ ಮುಳುಗಿ ಹೋಯಿತು. ಹಾಗಾದರೆ ಮುಳುಗಿದ್ದು ಬರೀ ಊರು ಮಾತ್ರವಾ....

ಮುಳುಗುವುದು ಊರು ಮಾತ್ರವಲ್ಲ.. ಸಂಸ್ಕೃತಿ, ಸಂಬಂಧ, ಬದುಕು.....ಕೂಡಾ 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...