ಲಕ್ಷ್ಮಣ ರೇಖೆ

ಮಾಯಾಮೃಗದ ಮೋಹಕ್ಕೆ ಬೀಳುವ ಸೀತೆ , ಅದಕ್ಕಾಗಿ ಹೊರಡುವ ರಾಮನ ಕತೆ ಎಲ್ಲರಿಗೂ ಗೊತ್ತಿರುವುದೇ. ಯಾವತ್ತೂ ಯಾವುದಕ್ಕೂ ಆಸೆ ಪಡದ ಸೀತೆ ಅಂದು ಯಾಕೆ ಹಠ ಹಿಡಿದಳು, ರಾಕ್ಷಸರ ಕುತಂತ್ರ ಆವೇಳೆಗಾಗಲೇ ಅರಿತಿದ್ದ ರಾಮ ಯಾಕೆ ಒಂದು ಕ್ಷಣ ಅದನ್ನು ದಿಟ್ಟಿಸಿ ನೋಡಲಿಲ್ಲ,   ಮಾರೀಚನ ಕುತಂತ್ರವನ್ನು ಅರಿಯುವಲ್ಲಿ ಮತ್ತೆ ಸೋಲುವ ಸೀತೆ ಲಕ್ಷ್ಮಣನನ್ನು ರಾಮನ ರಕ್ಷಣೆಗೆ ಹೋಗಲು ಹೇಳುತ್ತಾಳೆ. ಮೋಹ ವಿವೇಚನಾ ಶಕ್ತಿಯನ್ನು ಕಡಿಮೆಗೊಳಿಸುತ್ತದೆ. ಅದರ ಜೊತೆಗೆ ದುಃಖ, ಆವೇಶ ಸೇರಿದರಂತೂ ಮುಗಿದೇಹೋಯಿತು. ಮದವೇರಿದ ಕಪಿಗೆ ಚೇಳು ಕಚ್ಚಿದಂತೆ ಆಗುತ್ತದೆ. ನಿಮ್ಮನ್ನು ಬಿಟ್ಟು ಹೋಗಲಾರೆ, ರಾಮನ ಶಕ್ತಿ ಅನುಮಾನಿಸಬೇಡಿ  ಅನ್ನುವ ಲಕ್ಷ್ಮಣನನ್ನೇ ಹೀನಾಯವಾಗಿ ನಿಂದಿಸುತ್ತಾಳೆ. ತಲೆ ಎತ್ತಿಯೂ ನೋಡದ ಮಗನಂತಹ ಮೈದುನನನ್ನು ಮಾತಿನಿಂದ ಘಾಸಿಗೊಳಿಸುತ್ತಾಳೆ.   ಬೇರೆ ದಾರಿ ಕಾಣದೆ ಆಶ್ರಮದ ಸುತ್ತಲೂ ಒಂದು ಗೆರೆಯನ್ನಳೆದು ಯಾವುದೇ ಕಾರಣಕ್ಕೂ ಅದನ್ನು ದಾಟಿ ಬರದಂತೆ ವಿನಂತಿಸಿ ಲಕ್ಷ್ಮಣ ರಾಮನನ್ನು ಅರಸುತ್ತಾ ಹೊರಡುತ್ತಾನೆ.

 ಒಂದು ಕ್ಷಣ ಮೈ ಮರೆತರೆ, ವಿವೇಚನೆ ಕಳೆದುಕೊಂಡರೆ ಎಂಥಹಾ ಅನಾಹುತ ಆಗಬಹುದು, ಒಂದು ತಪ್ಪಿಗೆ ಹೇಗೆ ಇನ್ನೊಂದು ಮತ್ತೊಂದು ಜೊತೆಯಾಗುತ್ತಾ ಹೋಗುತ್ತದೆ ಎನ್ನುವುದನ್ನ, ಯಾಕೆ ಸದಾ ಎಚ್ಚರವಾಗಿರಬೇಕು ಎಂಬುದನ್ನು  ಹೇಗೆ ಪ್ರತಿಯೊಬ್ಬರ ಬದುಕಿನಲ್ಲೂ ಒಂದು ಲಕ್ಷ್ಮಣ ರೇಖೆ ಅದೃಶ್ಯವಾಗಿ ಇರುತ್ತದೆ ಅನ್ನುವುದನ್ನ  ನ. ಕೃಷ್ಣಪ್ಪ ತಾತ ವಿವರಿಸುತ್ತಾ ಈ ಉದಾಹರಣೆ ಹೇಳುತ್ತಿದ್ದರು. ಎಂದೂ ಯಾವುದನ್ನೂ ಬಯಸದ ಸೀತೆ ಮಾಯಾ ಮೃಗದ ಮೋಹಕ್ಕೆ ಬೀಳುತ್ತಾಳೆ. ಸಾಮಾನ್ಯವಾಗಿ ಜಿಂಕೆ ಹಾಗಿರುವುದಿಲ್ಲ ಎನ್ನುವ ಲಕ್ಷ್ಮಣನ ಮಾತನ್ನೂ ಕೇಳುವ ತಾಳ್ಮೆಯನ್ನು ಕಳೆದುಕೊಳ್ಳುತ್ತಾಳೆ. ಮೊದಲ ಬಾರಿಗೆ ಹಠ ಹಿಡಿಯುತ್ತಾಳೆ. ಹಿಂದೆ ಮುಂದೆ ಯೋಚಿಸದೆ (?) ರಾಮನೂ ಹೊರಡುತ್ತಾನೆ.  ಬದುಕಲ್ಲೂ ಹೀಗೆ ಕೆಲವೊಮ್ಮೆ ಯಾವುದೋ ಕ್ಷಣ  ನಮ್ಮ ವಿವೇಚನೆಯನ್ನು ಕಳೆದುಕೊಳ್ಳುವ ಹಾಗೆ ಮಾಡುತ್ತದೆ. ಆಗ ಯಾವುದೇ ಬುದ್ಧಿ ಮಾತುಗಳೂ ಕೂಡಾ ಕಿವಿಗೆ ಕೇಳುವುದಿಲ್ಲ. ಹೇಳುವವರ ಮೇಲೆ ಅಸಹನೆ ಮೂಡುತ್ತದೆ. ವರ್ತನೆ ಕಟುವಾಗುತ್ತದೆ. ಪರಿಣಾಮ ಭೀಕರ. ಇದು ಬರೀ ಸೀತೆಯ ಕತೆಯಾ.. ಲಕ್ಷಣ ರೇಖೆ ಅವಳು ಒಬ್ಬಳಿಗೆ ಮಾತ್ರವಾ ಎಂದರೆ.. 

ಯಾವುದೇ ಸಂಬಂಧಗಳಿರಲಿ, ಪ್ರೀತಿ, ಸ್ನೇಹ, ಆತ್ಮೀಯತೆ, ಕಾಳಜಿ ಯಾವುದೇ ಭಾವವಿರಲಿ. ಇಬ್ಬರು ವ್ಯಕ್ತಿಗಳ ನಡುವೆ ಒಂದು  ಅಂತರವಿದ್ದೇ ಇರುತ್ತದೆ. ಎರಡು ದೇಹ ಒಂದು ಜೀವ ಅನ್ನುವುದು ಕೇಳುವುದಕ್ಕೆ ಚೆಂದ ಅನ್ನಿಸಿದರೂ ಅಲ್ಲೂ ಒಂದು ಸಣ್ಣ ಅಂತರ ಇದ್ದೇ ಇರುತ್ತದೆ. ತನ್ನದೇ ರಕ್ತ, ಮಾಂಸ ಹಂಚಿಕೊಂಡು ಕರುಳಬಳ್ಳಿಯ ಜೊತೆ ಹುಟ್ಟಿದ ಮಗುವಿಗೂ ಕೂಡ ತನ್ನದೇ ಆದ ಸ್ವಂತ ವ್ಯಕ್ತಿತ್ವ ಇದೆ. ಅಂಥಾ ಮಗುವೇ  ತಾಯಿ ಅಪ್ಪುಗೆಗಾಗಿ ಕಾತರಿಸಿ ಓಡಿ ಬಂದರೂ ಕ್ಷಣ ಹೊತ್ತು ಅಷ್ಟೇ ಆಮೇಲೆ ಬಿಡಿಸಿಕೊಳ್ಳುತ್ತದೆ. ಅದೇ ಅಪ್ಪುಗೆ ಉಸಿರುಗಟ್ಟುವ ಹಾಗಾಗಿ ಗಾಳಿ ಬೇಕು ಅನ್ನಿಸುತ್ತದೆ. ಬಿಡುಗಡೆಗಾಗಿ ಮನಸ್ಸು ದೇಹ ತಹತಹಿಸುತ್ತದೆ. ಬದುಕ ಬೇಕೆಂದರೆ ಉಸಿರಾಡಬೇಕು. ಹಾಗಾಗಿ ಯಾವುದೇ ಸಂಬಂಧವಾಗಲಿ ಅದು ಉಸಿರುತಾಕುವಷ್ಟು ಹತ್ತಿರದಲ್ಲಿ, ಉಸಿರು ಗಟ್ಟದಷ್ಟು ದೂರದಲ್ಲಿ ಇರಬೇಕು. ಇವೆರೆಡರ ನಡುವಿನ ಗೆರೆ ತುಂಬಾ ತೆಳು.

ದೇಶ ದೇಶಗಳ ನಡುವೆ, ರಾಜ್ಯ ರಾಜ್ಯಗಳ ನಡುವೆ, ಮನೆ ಮನೆಗಳ ನಡುವೆ ಮನಸ್ಸು ಮನಸ್ಸು ಗಳ ನಡುವೆ  ಹೀಗೆ ಪ್ರತಿಯೊಂದರ ನಡುವೆಯೂ ಒಂದು ಗೆರೆ ಇರುತ್ತದೆ. ಕೆಲವೊಮ್ಮೆ ಗೆರೆ ಸಾಲದು ಅನ್ನಿಸಿದಾಗ ಅಲ್ಲೊಂದು ಬೇಲಿ ಎದ್ದಿರುತ್ತದೆ. ದೂರದಿಂದಲೇ ಅದು ಕಾಣಿಸಿ ಮನಸ್ಸು ಎಚ್ಚರವಹಿಸುತ್ತದೆ. ದಾಟದಂತೆ ಬುದ್ಧಿ ಸೂಚಿಸುತ್ತದೆ. ಅದು ಅದರ ಗಡಿ. ಅದರ ಕಾರ್ಯಕ್ಷೇತ್ರ, ಅದರ ಅಸ್ತಿತ್ವ. ಹೀಗೆ ಮನುಷ್ಯನೂ ತನ್ನ ಸುತ್ತ ಒಂದು ಅಗೋಚರ ಗೆರೆ ಎಳೆದುಕೊಂಡಿರುತ್ತಾನೆ. ಅದರೊಳಗೆ ಸುರಕ್ಷಿತ ಭಾವ ಅನುಭವಿಸುತ್ತಾನೆ.  ಪ್ರತಿ ಪ್ರಾಣಿ ಪಕ್ಷಿ ಹೀಗೆ ಪ್ರಕೃತಿಯ ಪ್ರತಿ ಜೀವ ಸಂಕುಲ ಕೂಡ ತನ್ನದೊಂದು ಗಡಿಯನ್ನು ಗುರುತಿಸಿಕೊಂಡಿರುತ್ತದೆ. ಅದನ್ನು ಅತಿಕ್ರಮಿಸಿ ಯಾರೇ ಬಂದರೂ ಸಹಿಸಲಾಗದ ಅಕ್ರೋಶ, ತಳಮಳ ಉಂಟಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಆ ಗೆರೆ ಬದಲಾಗಬಹುದು, ಆದರೆ ಇದ್ದೇ ಇರುತ್ತದೆ ಎನ್ನುವ ಎಚ್ಚರ ನಮಗಿರಬೇಕು. ನಾವೂ ಹಾಗೆ ಒಂದು ಗೆರೆ ಎಳೆದಿರುತ್ತೇವೆ. ಯಾರೇ ಅದನ್ನು ದಾಟಿ ಬಂದರೂ ಕಿರಿಕಿರಿ ಅನುಭವಿಸುತ್ತೇವೆ.

ವಿಪರ್ಯಾಸವೆಂದರೆ ನಮ್ಮ ಗಡಿಯನ್ನು ಕಾಯುವ ನಾವು ಸರಾಗವಾಗಿ ತೀರಾ ಸಹಜವೆಂಬಂತೆ ಇನ್ನೊಬ್ಬರ ರೇಖೆಯನ್ನು ದಾಟಲು ಪ್ರಯತ್ನಿಸುತ್ತೇವೆ. ಗೊತ್ತಿದ್ದೋ ಕೆಲವೊಮ್ಮೆ ಗೊತ್ತಿಲ್ಲದೆಯೋ. ಯಾಕೆ ಹೀಗೆ? ಎಂದು ಯೋಚಿಸುವಾಗಲೆಲ್ಲ ಅನೇಕ ಉತ್ತರಗಳು ದೊರಕಿದರೂ ಅವೆಲ್ಲವೂ ಕೊಂಡೊಯ್ಯುವುದು ಒಂದು ಗುರುತಿಸಿಕೊಳ್ಳುವಿಕೆ ಹಾಗೂ ಇನ್ನೊಂದು ಅಸ್ತಿತ್ವ ಸ್ಥಾಪಿಸುವಿಕೆ ಎನ್ನುವುದರ ಕಡೆಗೆಯೇ. ಎದುರಿನ ವ್ಯಕ್ತಿಯೊಂದಿಗಿನ ನಮ್ಮ ಸಂಬಂಧ, ಸಲಿಗೆ ಇಬ್ಬರ ನಡುವೆಯೇ ಇದ್ದಾಗ ಅದು ಖಾಸಗಿಯಾಗಿದ್ದಾಗ ಎಲ್ಲವೂ ಒಂದು ಹಂತಕ್ಕೆ ಚೆಂದವಾಗಿಯೇ ಇರುತ್ತದೆ. ಸರಾಗವಾಗಿ ಸಾಗುತ್ತದೆ. ಅಲ್ಲಿ ಇನ್ಯಾರಿಗೋ ತೋರಿಸಿಕೊಳ್ಳುವ ಅದರ ಮೂಲಕ ತನ್ನ ಹೆಚ್ಚುಗಾರಿಕೆ ಪ್ರದರ್ಶಿಸುವ ಅಥವಾ ಗುರುತಿಸಿಕೊಳ್ಳುವ ಆಸೆ ಮೊಳಕೆಒಡೆಯುತ್ತದೆ ಆಗ ನೋಡಿ  ರೇಖೆಯನ್ನು ದಾಟುವ ಕೆಲಸ ಸದ್ದಿಲ್ಲದೇ ನಡೆದು ಹೋಗುತ್ತದೆ.

ಪ್ರತಿಯೊಬ್ಬರೂ ತಮ್ಮ ಸುತ್ತ ಒಂದು ಗೆರೆಯನ್ನು ಎಳೆದು ಕೊಂಡಿರುತ್ತಾರೆನಿಜ. ಹಾಗೆಂದು ಅದು ಎಲ್ಲರಿಗೂ ಒಂದೇ ಆಗಿರಬೇಕು ಎಂದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಆ ಗೆರೆ ಬೇರೆ ಬೇರೆಯಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿ ಹೇಗೆ ಭಿನ್ನವೋ ಅವರು ಹೊಂದಿರುವ ಸಂಬಂಧಗಳೂ ಭಿನ್ನವೇ. ಹಾಗಾಗಿ ಒಬ್ಬರ ಗೆರೆ ಇನ್ನೊಬ್ಬರದ್ದಲ್ಲ. ಅವರು ಮುಂದಿರಬಹುದು, ನಮ್ಮ ರೇಖೆ ಸ್ವಲ್ಪ ಹಿಂದಿರಬಹುದು. ಅದರ ಅರಿವಿಲ್ಲದೆ ಹೋದಾಗ ಅಭಾಸವಾಗುತ್ತದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಾಸ ಎದ್ದು ಕಾಣುತ್ತದೆ. ಯಾರೋ ಹೇಳಿದಂತೆ, ಮಾತಾಡಿದಂತೆ  ಮಾಡಲು ಹೋಗಿ ನಗೆಪಾಟಲಿಗೆ ಗುರಿಯಾಗುವುದನ್ನೂ ಗಮನಿಸಬಹುದು. ಒಂದು ಸಂಬಂಧ ಖಾಸಗಿಯಾಗಿ ಹೇಗೆ ಇದ್ದರೂ ಸಾರ್ವಜನಿಕವಾಗಿ ಗುರುತಿಸಿಕೊಳ್ಳುವಾಗ ಘನತೆಯನ್ನು ನಿರೀಕ್ಷಿಸುತ್ತದೆ.

ಇನ್ನೊಂದು ನಮ್ಮ ಅಸ್ತಿತ್ವ ಸ್ಥಾಪಿಸುವ ಆಸೆ. ಅಧಿಕಾರದ ಚಲಾವಣೆ ಮನುಷ್ಯನ ಮೂಲಭೂತ ಹಕ್ಕೆನೋ ಅನ್ನಿಸುವಷ್ಟರ ಮಟ್ಟಿಗೆ ಇದು ನಮ್ಮನ್ನು ಆವರಿಸಿಕೊಂಡಿದೆ. ನಾನು ಹೇಳಿದ ಹಾಗೆ ಕೇಳಬೇಕು ಅನ್ನೋ ಮನೋಭಾವ, ನನಗೆಲ್ಲಾ ಗೊತ್ತು ಅನ್ನುವ ಅಹಂಕಾರ, ನಾನೇ ಸರಿ ಅನ್ನುವ ಹಮ್ಮು,  ಪ್ರತಿಷ್ಠೆ ಇವೆಲ್ಲವೂ ಇನ್ನೊಬ್ಬರ ಗಡಿಯನ್ನು ಅತಿಕ್ರಮಿಸುವ ಹಾಗೆ ಮಾಡುತ್ತದೆ.  ಹಾಗೆ ಅತಿಕ್ರಮಿಸುವಾಗ  ಘರ್ಷಣೆ ಜರುಗುತ್ತದೆ. ಇಲ್ಲಿಯೂ ಬಲಶಾಲಿ ಗೆಲ್ಲಬಹುದು, ಸೋತವ ಶರಣಾಗಬಹುದು ಆದರೆ ಅಲ್ಲಿ ಸಂಬಂಧ ಸತ್ತಿರುತ್ತದೆ. ಸೋತವ ಗೆಲುವಿಗಾಗಿ ಸಮಯ ಕಾಯಬಹುದು. ಒಮ್ಮೆ ಯುದ್ಧ ಶುರುವಾದ ಮೇಲೆ ಅಲ್ಲಿ ವಿರಾಮ ಕೇವಲ ತಾತ್ಕಾಲಿಕ ಅಷ್ಟೇ..ಅಘೋಷಿತ ಯುದ್ಧ ನಿರಂತರವಾಗಿ ಜರುಗುತ್ತಲೇ ಇರುತ್ತದೆ.

ಲಕ್ಷ್ಮಣ ರೇಖೆಯನ್ನೆಳೆದು ಯಾವುದೇ ಕಾರಣಕ್ಕೂ ದಾಟಬಾರದು ಎಂದು ಹೊರಟ ಮೇಲೆ ಅವನು ದೂರವಾದ ಎಂಬ ನಂಬಿಕೆ ಬಂದ ಮೇಲೆ ರಾವಣ ಕುಟೀರದ ಬಳಿ ಬರುತ್ತಾನೆ. ಭಿಕ್ಷೆ ಕೇಳುತ್ತಾನೆ. ದೇಹಿ ಅಂದವರಿಗೆ ಇಲ್ಲ ಎನ್ನಬಾರದು ಸೀತೆ ಭಿಕ್ಷೆ ತರುತ್ತಾಳೆ. ಶಾಪದ ಬೆದರಿಕೆ ಒಡ್ಡಿ ರಾವಣ ಅವಳನ್ನು ಗೆರೆ ದಾಟುವ ಹಾಗೆ ಮಾಡುವಲ್ಲಿ ಸಫಲನಾಗುತ್ತಾನೆ. ಹೀಗೆ ಓದುವಾಗ ಎಲ್ಲೋ ಒಂದು ಸಾಲು ಕಣ್ಣಿಗೆ ಬಿತ್ತು. ಸೀತೆ ಲಕ್ಷ್ಮಣ ರೇಖೆ ದಾಟದಿದ್ದರೆ ರಾವಣ ಹತನಾಗುತ್ತಿರಲಿಲ್ಲವೆಂದು. ನಿಜ  ಬದುಕಲ್ಲೂ ಹೀಗೆ ಕೆಲವೊಮ್ಮೆ ಅನಿವಾರ್ಯಕ್ಕೋ, ಬೆದರಿಕೆಗೋ ನಾವು ಗೆರೆ ದಾಟಿಬಿಡುತ್ತೇವೆ. ಹಾಗೆ ಆ ಗೆರೆ ದಾಟಿದಾಗ ನಮ್ಮವರು ಜೊತೆಯಾಗುತ್ತಾರೆ. ರಕ್ಷಿಸುತ್ತಾರೆ. ರಾವಣನನ್ನು ಕೊಂದ ರಾಮನಂತೆ. ಆದರೆ ಗೆರೆ ದಾಟಿದ ಮೇಲೆ ಸಂಕಷ್ಟವೂ ಹಿಂಬಾಲಿಸುತ್ತದೆ. ನೋವು ಜೊತೆಯಾಗುತ್ತದೆ.

ಆದರೆ ನಮ್ಮ ದುರಹಂಕಾರದಿಂದ ಗೆರೆಯನ್ನು ದಾಟಿ ಇನ್ನೊಬ್ಬರ ಬದುಕಿನಲ್ಲಿ ಅತಿಕ್ರಮಣ ಪ್ರವೇಶ ಮಾಡುತ್ತೇವಲ್ಲ ಆಗ ಮಾತ್ರ ನಾವು ಸೀತೆಯ ಬದಲು ರಾವಣನ ಸ್ಥಾನದಲಿ ನಿಂತು ಬಿಡುತ್ತೇವೆ. ಆಗ ಯಾರೂ ಸಹಾಯಕ್ಕೆ ಬರಲಾರರು. ನಾಶದ ವಿನಃ ಬೇರೆ ದಾರಿಯೂ ಇರಲಾರದು. ಹಾಗೊಂದು ವೇಳೆ ಅನಿವಾರ್ಯಕ್ಕೆ ಜೊತೆಯಾದವರೂ ನಾಶದ ಹಾದಿಯಲ್ಲೇ ಸಾಗುತ್ತಾರೆ. ಸಾಮಾಜಿಕ, ನೈತಿಕ, ಆರ್ಥಿಕ, ವೈಯುಕ್ತಿಕ ಹೀಗೆ ಬದುಕಿನ ಪ್ರತಿ ಭಾಗದಲ್ಲೂ, ಹಂತದಲ್ಲೂ ಲಕ್ಷ್ಮಣ ರೇಖೆಯಿದೆ. ನಮ್ಮ ಗೆರೆಯನ್ನು ನಾವೇ ಕಂಡುಕೊಳ್ಳಬೇಕಿದೆ, ಹಾಗೆ ಇತರರಿಗೂ ನಮ್ಮ ನಡುವೆಯೂ ಇರುವ ಅಗೋಚರ ಗೆರೆಯನ್ನು ಗುರುತಿಸಿಕೊಳ್ಳಬೇಕಿದೆ.

ಹಾಗೆ ಗುರುತಿಸಿಕೊಂಡ ಗೆರೆಯನ್ನು ನೋಡಿ ಭಯಪಡಬೇಕಿಲ್ಲ.  ಸಂಬಂಧವೆನ್ನುವುದು ಒಂದು ಗಿಡದಂತೆ, ಮಗುವಂತೆ. ಅದು ತನ್ನಷ್ಟಕ್ಕೆ ತಾನೇ ಸಹಜವಾಗಿ ಬೆಳೆಯಬೇಕು. ವಿಪರೀತ ಕಾಳಜಿ ಕೂಡ ಅದರ ಬೆಳವಣಿಗೆ ಕುಂಟಿತಗೊಳಿಸಬಹುದು. ಹಾಗಾಗಿ ಸಹಜವಾಗಿ ಇದ್ದು ಸಹಜವಾಗಿಯೇ ಬೆಳೆಯಲು ಬಿಡಬೇಕು. ಉಳಿಸಿಕೊಳ್ಳಬೇಕು ಅನ್ನೋ ತಪನೆ ಶುರುವಾದಾಗ ಅದಕ್ಕಾಗಿ ಕಾಳಜಿ, ಇನ್ನೇನೋ ಕಸರತ್ತು ಶುರುವಾಗುತ್ತದೆ. ಅದು ಮತ್ತೇನೋ ಆಗಿ ಬಿಡುವ ಸಾಧ್ಯತೆಯೂ ಇಲ್ಲದಿಲ್ಲ. ಸೀತೆ ರಾಮನ ಶಕ್ತಿಯ ಬಗ್ಗೆ ಅಪನಂಬಿಕೆ ತಾಳದೆ ಇದ್ದರೆ  ಅವನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿ ಲಕ್ಷ್ಮಣನನ್ನು ಅವಮಾನಿಸುತ್ತಿರಲಿಲ್ಲ. ಹಾಗೆ ಗೆರೆ ಎಳೆಸಿಕೊಳ್ಳುವ ಸನ್ನಿವೇಶವೂ ನಿರ್ಮಾಣವಾಗುತ್ತಿರಲಿಲ್ಲ.

ಎಷ್ಟೋ ಸಲ ಹೀಗೆ ಉಳಿಸಿಕೊಳ್ಳುವ ಹಪಾಹಪಿಗೆ ಬಿದ್ದು ನಾವೂ ಗೆರೆ ಎಳೆಸಿಕೊಳ್ಳುತ್ತೇವೆ, ಅದನ್ನು ಇನ್ಯಾವುದೋ ಅವಿವಾರ್ಯ ಕ್ಷಣದಲ್ಲಿ ಮೀರಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತೇವೆ. ಅಥವಾ ಗೆರೆ ಎಳೆದು ಆಚೆ ನಿಲ್ಲಿಸುವ ಕೆಲಸ ಮಾಡಿ ಅವರು ಅದು ಮೀರುವ ಹಾಗೆ ಮಾಡುತ್ತೇವೆ.. ತನಗೆ ತಾನು ಚೌಕಟ್ಟು ಹಾಕಿಕೊಳ್ಳುವ ಮನುಷ್ಯ ಇನ್ನೊಬ್ಬರ ಚೌಕಟ್ಟನ್ನು ಮೀರಿ ಹೋಗಲು ಸದಾ ಯತ್ನಿಸುತ್ತಾನೆ. ಅದು ಬಂಧನವೆಂದು ಕೊಂಡು ಬಯಲಿಗೆ ಬರುವ ಪ್ರಯತ್ನ ಮಾಡುತ್ತಾನೆ. ಯಾವುದನ್ನು ಮೀರಬೇಕು, ಎಲ್ಲಿ ಮಿತಿಯಲ್ಲಿರಬೇಕು ಅನ್ನುವುದು ಅರ್ಥವಾದ ದಿನ ಬಂಧನ ಬಯಲಾಗುತ್ತದೆ. ಅನಂತ ಆಕಾಶ ಕಣ್ಣೆದೆರು ತೆರೆದುಕೊಳ್ಳುತ್ತದೆ.

ಎಷ್ಟೇ ಬಯಲನ್ನು ಕನವರಿಸಿದರೂ ಆ ಬಯಲಿನಿಂದ ರಕ್ಷಿಸಿಕೊಳ್ಳಲು ಗೋಡೆಯನ್ನು ಕಟ್ಟಿಕೊಳ್ಳುವುದು ಸಹಜವಾದ ಗುಣ.  ಚೌಕಟ್ಟಿನೊಳಗೆ ಸುರಕ್ಷಿತ ಭಾವವಿದೆ. ಹಾಗಿದ್ದಾಗ ಬದುಕಿಗೆ ನೆಮ್ಮದಿಯಿದೆ. ನಮ್ಮ ಹಾಗೆ ಉಳಿದವರಿಗೂ ಒಂದು ಚೌಕಟ್ಟಿದೆ, ಅವರೂ ಅದರೊಳಗೆ ಸುರಕ್ಷಿತದಿಂದ ಇದ್ದಾರೆ, ಯಾರೇ ಒಳ ಬರುವ ಪ್ರಯತ್ನ ಮಾಡಿದರೂ ಅಸಹನೆಗೆ ಗುರಿಯಾಗುತ್ತಾರೆ ನಮ್ಮಂತೆ ಎಂದು ಅರ್ಥವಾದ ದಿನ ನಾವು ಗೆರೆಯನ್ನು ಮೀರುವ ಆಲೋಚನೆಯನ್ನೂ ಮಾಡುವುದಿಲ್ಲ. ಹಾಗಾಗಿ ಬದುಕಿಗೆ ಗೆರೆಗಳು ಬೇಕು.  ಆ ಲಕ್ಷ್ಮಣ ರೇಖೆ ಮೀರದ ಎಚ್ಚರವಿರಬೇಕು.

 ಲಕ್ಷ್ಮಣ ರೇಖೆಯನ್ನು ನಾವು ಮೀರಿದ ದಿನ ಕೇವಲ ರಾವಣನನ್ನು ಮಾತ್ರ  ದೂರವ ಅರ್ಹತೆಯನ್ನು ಕಳೆದುಕೊಳ್ಳುತ್ತೇವೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...