ಗಣಪತಿ ಹಬ್ಬ.

ಗೌರಿವ್ರತ ಮುಗಿದು ಊಟ ಮಾಡಿ ಸ್ವಲ್ಪ ಸುಧಾರಿಸಿಕೊಂಡು ಕಾಫಿ ಕುಡಿಯುವ ಹೊತ್ತಿಗೆ ಜಯತ್ತೆಯ ಅವಸರ ಶುರುವಾಗುತ್ತಿತ್ತು. ಯಾವ ಗದ್ದೆಯ ಅಂಚಿನಲ್ಲಿ ಹೆಚ್ಚು ಗರಿಕೆ ಸಿಗಬಹುದು ಅನ್ನುವ ಲೆಕ್ಕಾಚಾರ. ಮರುದಿನ ಗಣಪತಿಗೆ ಯಾರು ಜಾಸ್ತಿ ದೂರ್ವೆ ಕೊಯ್ದು ತರ್ತಾರೆ ಅನ್ನೋ ಅಘೋಷಿತ ಸ್ಪರ್ಧೆಯಂತೂ ಇದ್ದೇ ಇರುತ್ತಿತ್ತು. ತುಂಬಿದ ಹೊಟ್ಟೆಯಲ್ಲಿ, ಸಣ್ಣನೆಯ ಮಳೆಯಲ್ಲಿ,  ಜಾರುವ ಗದ್ದೆಯ ಅಂಚಿನಲ್ಲಿ ಜಿಟಿ ಪಿಟಿ ಮಳೆಯಲ್ಲಿ ದೂರ್ವೆ ಹುಡುಕುವುದು ಸುಲಭವೇನಲ್ಲ. ಹಾಗಾಗಿ ಮೊದಲೇ ಗುರುತಿಸಿಟ್ಟು ಕೊಂಡು ಅವತ್ತು ಅಲ್ಲಿಗೆ ಧಾಳಿಮಾಡುವ ಆಲೋಚನೆ ಹದಿನೈದು ದಿನಗಳ ಮುಂಚೆಯೇ ತಯಾರಾಗಿರುತಿತ್ತು. ಆಗ ತಾನೇ ಬೇರು ಕೊಟ್ಟು ಹಸಿರು ಒಡೆದು ತಲೆತೂಗುವ ಭತ್ತದ ಪೈರು, ಪಾದ ಮುಳುಗುವ ನೀರಿನಲ್ಲಿ ಹರಿದಾಡುವ ಏಡಿಗಳು ಕೊಯ್ಯುವ ತನ್ಮಯತೆಯಲ್ಲಿರುವ  ನಮ್ಮ ಕೈ ಕಾಲಿನ ಮೇಲೆ ಹರಿದು ಅಲ್ಲೇ ಡಾನ್ಸ್ ಮಾಡುವ ಹಾಗೆ ಮಾಡಿ ಕೈಯಲ್ಲಿರುವ ಗರಿಕೆ ಚೆಲ್ಲಪಿಲ್ಲಿಯಾಗುವುದು ತೀರಾ ಸಹಜವಾಗಿತ್ತು.

ದಿನಾ ಕೊಯ್ಯುವ ಗರಿಕೆಯದು ಒಂದು ಹದವಾದರೆ ಹಬ್ಬಕ್ಕೆ ಕೊಯ್ಯುವುದೇ ಬೇರೆ ಹದ. ಮೃದುವಾದ ಚಿಗುರು ಗರಿಕೆ ಅದೂ ಐದು ಎಸಳು ಇರಬೇಕು, ಮಾಲೆ ಕಟ್ಟಲು ಬರಬೇಕು. ಅರ್ಚನೆ ಮಾಡಿದರೆ ನೋಡಲು ಕಣ್ಮನ ತುಂಬುವಂತಿರಬೇಕು. ಹಾಗಾಗಿ ಗದ್ದೆಯ ಅಂಚಿನಲ್ಲಿ ನಡೆಯುತ್ತಾ, ಅರಸುತ್ತಾ ಕೆಲವೊಮ್ಮೆ ಎಷ್ಟು ದೂರ ಹೋಗಿದ್ದೇವೆ ಅನ್ನೋದು ಮುಗಿದ ಮೇಲೆಯೇ ಅರಿವಿಗೆ ಬರುತ್ತಿದ್ದದ್ದು. ಶ್ರೇಷ್ಠವಾದದ್ದು ಸುಲಭಕ್ಕೆ ಸಿಕ್ಕುವುದಿಲ್ಲ, ಅದಕ್ಕಾಗಿ ಅರಸಬೇಕು. ಹುಡುಕುವ ತಾಳ್ಮೆ ಸಮಯ ಎರಡೂ ಇರಬೇಕು, ಅದಕ್ಕಾಗಿ ಎಷ್ಟು ದೂರವಾದರೂ ಸಾಗುವ ಕಸು, ಮನಸ್ಸು ಎರಡೂ ಬೇಕು  ಅನ್ನೋದು ಆಗ ಅರ್ಥವಾಗುತಿತ್ತೋ ಇಲ್ಲವೋ ಗದ್ದೆ ಅಂಚಿಲ್ಲದ ಕಾಂಕ್ರಿಟ್ ಕಾಡಿನಲ್ಲಿ ಕುಳಿತು ಊರು ನೆನಪಾಗುವಾಗ ಇನ್ನಷ್ಟು ಮನಸ್ಸಿಗೆ ಇಳಿಯುತ್ತದೆ. ಥೇಟ್ ಅವತ್ತು ಸುರಿಯುವ ಮಳೆಯಂತೆ.

ಕೈಯಲ್ಲಿ ಒಂದು ಛತ್ರಿ ಹಿಡಿದು ಕುಕ್ಕುರುಗಾಲಿನಲ್ಲಿ ಗದ್ದೆಯ ಅಂಚಿನಲ್ಲಿ ಕೆಸರಾಗದಂತೆ ಕುಳಿತು ಆರಿಸಿ ಕೊಯ್ಯುವ ಗರಿಕೆ ಅದೆಷ್ಟು ಬ್ಯಾಲೆನ್ಸ್ ಕಲಿಸುತಿತ್ತು ಅನ್ನುವುದು ಇವತ್ತು ಅರ್ಥವಾಗುತ್ತಿದೆ. ಹಾಗೆ ಕೊಯ್ದ ಗರಿಕೆಯನ್ನು ನೂರಾ ಎಂಟರ ಕಟ್ಟು ಮಾಡಿ  ಆಗಾಗ ಕದ್ದು ಇನ್ನೊಬ್ಬರ ಬುಟ್ಟಿಯನ್ನು ನೋಡಿ ಎಷ್ಟು ಕೊಯ್ದಿದ್ದಾರೆ ಎಂದು ಲೆಕ್ಕಹಾಕುತ್ತಾ, ಕೈ ಚುರುಕುಗೊಳಿಸುತ್ತಾ  ಬುಟ್ಟಿಯನ್ನು ತುಂಬಿಸಿ ಬೆನ್ನು ನೆಟ್ಟಗೆ ಮಾಡುವ ವೇಳೆಗೆ ಸೂರ್ಯ ಮನೆಗೆ ಹೊರಟಿರುತ್ತಿದ್ದ. ಇಳಿಸಂಜೆ ಎಳೆದಿದ್ದ ಬಣ್ಣದ ರಂಗೋಲಿಯ ಮೇಲೆ ಕತ್ತಲಿನ ಸೆರಗು ನಿಧಾನಕ್ಕೆ ಅವರಿಸುತಿತ್ತು. ಹಾಗೆ ತಂದ ದೂರ್ವೆಯನ್ನು ಜಯತ್ತೆಯ ಎದುರು ಇಟ್ಟರೆ ಅವರ ಮುಖ ಅರಳುತಿತ್ತು. ಹೋಗಿ ನೀರಲ್ಲಿ ನೆನಸಿಟ್ಟ ಬಾಳೆಯ ನಾರುತಂದು  ದಾರವನ್ನು ಸಣ್ಣಗೆ ಬಿಡಿಸಿ ಅದರಲ್ಲಿ ಮಾಲೆ ಕಟ್ಟುತ್ತಿದ್ದರು. ಜೋಡಿಸಿ ಕೊಡುವುದು ಮಾತ್ರ ನಮ್ಮ ಕೆಲಸ.

ಕಟ್ಟುವುದೂ ಒಂದು ಕಲೆ. ಚೆನ್ನಾಗಿ ನೆನೆಯದ ಹೊರತು ಬಾಳೆಯ ದಾರ ಸಣ್ಣಗೆ ಎಳೆಯಲು ಬರುತ್ತಿರಲಿಲ್ಲ. ಎಷ್ಟು ತೆಳುವಾದ ದಾರ ಬರುತ್ತೋ ಅಷ್ಟು ಚೆಂದದ ಹಾರ ರೆಡಿಯಾಗುತ್ತಿತ್ತು. ನೆನೆದಷ್ಟೂ ಹಗುರ... ತೆಳುವಾದಷ್ಟೂ ಸರಾಗ...

ಇಷ್ಟು ಮುಗಿಸಿ ಮನೆ ಸೇರಿದರೆ ಬೆಳಗ್ಗೆ ಆಗುವುದನ್ನೇ ಕಾಯುವ ತವಕ. ಬೆಳಗಾಗುತ್ತಿದ್ದಂತೆ ಸ್ನಾನ ಮಾಡಿ ರೆಡಿ ಆಗಿ ಪುಟ್ಟ ಗಣಪತಿಯ ಗುಡಿಯ ಎದುರು ಬರುವ ವೇಳೆಗೆ ಎಲ್ಲವನ್ನೂ ಜೋಡಿಸಿಕೊಂಡು ಬಂದ ಕೇಶುವಣ್ಣನ ಕಂಚಿನ ದ್ವನಿಯಲ್ಲಿ ಅಥರ್ವಶೀರ್ಷ ಹರಿದು ಬರುತಿತ್ತು. ಬೇರೆದಿನ ಗಡಿಬಿಡಿಯಲ್ಲಿ ನಮಸ್ಕಾರ ಮುಗಿಸಿದರೂ ಅವತ್ತು ಮಾತ್ರ 21ಸುತ್ತು ಪ್ರದಕ್ಷಿಣೆ ಮಾಡಲೇಬೇಕು ಅನ್ನೋದು ಜಯತ್ತೆಯ ಆಜ್ಞೆ. ಹಾಗಾಗಿ ನಮಸ್ಕಾರ ಮುಗಿಸಿ ಶಾಲೆಗೇ ಓಡುವ ಧಾವಂತ. ಅಲ್ಲಿ ಊರಿನವರು ಇಡುವ ಗಣಪತಿ ನೋಡುವ ಅವಸರ. ಊರಿನವರೆಲ್ಲಾ ಒಟ್ಟಾಗಿ ಜಾತಿ ಮತ ಭೇಧಗಳಿಲ್ಲದೆ ಆಚರಿಸುವ ಹಬ್ಬ. ಎಲ್ಲರನ್ನೂ ಒಂದುಗೂಡಿಸಿ ಸಂಭ್ರಮಿಸುವ ಹಾಗೆ ಮಾಡುವ ಹಬ್ಬ. ಸಾಂಸ್ಕೃತಿಕವಾಗಿ ಬೆಸೆಯುವ ಹಬ್ಬ. ಅದರಲ್ಲೂ ಗಣಪತಿಯನ್ನು  ಶಾಲೆಯ ಒಳಗಿನ ಉದ್ದ ಹಾಲಿನಲ್ಲಿ ಇಡುವುದರಿಂದ ದಿನಾ ಪೂಜೆ ನಡೆಯುವುದರಿಂದ ಕ್ಲಾಸ್ ಬಂಕ್ ಮಾಡುವ ಸಂಭ್ರಮವೇ ಜಾಸ್ತಿ.  ಏಳು ದಿನಗಳ ಸಡಗರ ಅದು. ನೋಡಿ ಕೈ ಮುಗಿದು ಪ್ರಸಾದ ತೆಗೆದುಕೊಂಡು ಮಾತಾಡುತ್ತಾ ಮನೆಗೆ ಬರುವ ವೇಳೆಗೆ ಇತ್ತ ದೇವಸ್ಥಾನದಲ್ಲಿ ಮಂಗಳಾರತಿಯ ಸಮಯ.

ಮೊದಲೇ ನೈವೇದ್ಯ ಪ್ರಿಯ ಗಣಪ. ಅವನಿಗಾಗಿ ಬಗೆ ಬಗೆಯ ತಿನಿಸುಗಳು ತಯಾರಾಗಿರುತ್ತಿದ್ದವು. ಅಡುಗೆಯ ಘಮ ಅಷ್ಟು ದೂರದಲ್ಲೇ ಮೂಗಿಗೆ ತಾಕಿ ಅದು ಜತರಾಗ್ನಿಯನ್ನು ಹೆಚ್ಚಿಸುತಿತ್ತು. ಅವತ್ತು ಕನಿಷ್ಠ ಪಕ್ಷ ಐದು ಗಣಪತಿಯನ್ನಾದರೂ ನೋಡಬೇಕು ಅನ್ನೋ ಸಂಪ್ರದಾಯ ಹೇಗೆ ಬಂತೋ ಗೊತ್ತಿಲ್ಲ ನಾವಂತೂ ಅದನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದೆವು. ಹಳ್ಳಿಯೆಂದರೆ ಒಂದು ಮನೆಗೂ ಇನ್ನೊಂದು ಮನೆಗೂ ಕಮ್ಮಿಯೆಂದರೂ ಅರ್ಧ ಕಿ.ಮಿ. ಸಂಭ್ರಮಕ್ಕೆ ದೂರ ತಿಳಿಯುವುದಿಲ್ಲ. ಹಾಗಾಗಿ ಹೋಗಿ ಗಣಪತಿಯನ್ನು ನೋಡಿ ಕೊಟ್ಟ ಪ್ರಸಾದವನ್ನು ತಿನ್ನಲಾಗದೆ ಬೊಗಸೆಯಲ್ಲಿ ಹಿಡಿದುಕೊಂಡು ಮತ್ತದೇ ಗದ್ದೆಯ ಅಂಚಿನಲ್ಲಿ ಓಲಾಡುತ್ತಾ ಆಗಾಗ ಮುಗ್ಗರಿಸಿ ಬೀಳುವ ಹಾಗಾದಾಗ ಸಾವರಿಸಿಕೊಂಡು ಬರುವ ನಮ್ಮನ್ನು ನೋಡಿ ಚಂದ್ರ ನಗುತ್ತಿದ್ದನಾ ನೋಡುವ ಧೈರ್ಯ ನಮಗೆಲ್ಲಿ... ಶಾಪದ ಭಯ ನಮ್ಮನ್ನು ತಲೆತಗ್ಗಿಸಿ ನಡೆಯುವಂತೆ ಮಾಡುತಿತ್ತು.

ಅಲ್ಲಿಯತನಕ ಸಂತಸ, ಸಡಗರದಲ್ಲಿ ಕಳೆಯುತ್ತಿದ್ದ ಸಮಯ ಸಂಜೆಯಾಗುತ್ತಿದ್ದಂತೆ ಆತಂಕ ಶುರುವಾಗುತ್ತಿತ್ತು. ಮುಸ್ಸಂಜೆ ಕಳೆಯುತ್ತಿದ್ದಂತೆ ಗೌರಿ ಗಣೇಶರಿಗೆ ಆರತಿ ಮಾಡಿ ಬುತ್ತಿಯನ್ನು ಕಟ್ಟಿಕೊಟ್ಟು ಅವರನ್ನು ಮನೆಗೆ ಕಳಿಸುವ ಬೇಸರ. ಕಲಶವನ್ನು ತೆಗೆದುಕೊಂಡು ತೋಟದಲ್ಲಿದ್ದ ಬಾವಿಯ ಬಳಿಗೆ ಹೋಗಿ ಅಲ್ಲಿ ಗಂಗೆ ಪೂಜೆ ಮಾಡಿ ಅಲ್ಲಿಂದಲೇ ಬಂದ ಗೌರಿಯನ್ನು ಮತ್ತಲ್ಲೇ ಬಿಟ್ಟು ಬರಬೇಕು.ಅಲ್ಲಿಯವರೆಗೂ ಭಕ್ಷ ಭೋಜ್ಯಗಳನ್ನ ತಿಂದು ಸಂಭ್ರಮಿಸಿದರೆ ಬಿಟ್ಟಾದ ಮೇಲೆ ಉಪ್ಪೂ ಹಾಕದ ಸಪ್ಪೆ ಮೊಸರವಲಕ್ಕಿ. ಮಗಳನ್ನು ಜೊತೆಗೆ ಅವಳ ಮಗನನ್ನು ಕಳುಹಿಸಿದ ಬೇಸರ. ಹಾಗಾಗಿ ಸಪ್ಪೆ ಅವಲಕ್ಕಿ. ಮೊದಲೇ ಹಬ್ಬ ಮುಗಿಯಿತಲ್ಲ ಅನ್ನೋ ಬೇಜಾರಿನ ಜೊತೆಗೆ ಈ ಸಪ್ಪೆ ಅವಲಕ್ಕಿ ಇನ್ನಷ್ಟು ಬೇಜಾರು ಆಗುವ ಹಾಗೆ ಮಾಡುತಿತ್ತು.

ಅದಕ್ಕಿಂತಲೂ ಹೆಚ್ಚು ಆತಂಕವೆಂದರೆ ಗೌರಿಯನ್ನು ಬಿಡಲು ಹೋಗುವಾಗ ಅದೆಷ್ಟೇ ತಲೆ ತಗ್ಗಿಸಿ ಜಾಗ್ರತೆಯಾಗಿ ನಡೆದರೂ  ಚಂದ್ರ ಇಣುಕಿ ಅಣಕಿಸಿ ನಗುತ್ತಿದ್ದ.  ಅರ್ಧ ಕಣ್ಣು ಮುಚ್ಚಿ ಆ ಕತ್ತಲೆಯ ದಾರಿಯಲ್ಲಿ ನಡೆಯುವಾಗ ಕಾಣದ ಚಂದ್ರ ಹಳ್ಳಕ್ಕೆ ಹಾಕಿದ್ದ ಸಾರವನ್ನು ದಾಟುವಾಗ ಆಗಷ್ಟೇ ತಿಳಿಯಾಗಿ ಜುಳು ಜುಳನೆ ಮಂದಗಾಮಿನಿಯಾಗಿ ಹರಿಯುತ್ತಿದ್ದ ನೀರಿನಲ್ಲಿ ಕಂಡು ಬಿಡುತಿದ್ದ. ಕಣ್ಣು ಮುಚ್ಚಿದರೆ ಬೀಳುವ ಭಯ, ಬಿಟ್ಟರೆ ಚಂದ್ರನ ಭಯ. ಈ ಅರೆತೆರೆದ ಕಣ್ಣು ಯಾವುದನ್ನೂ ಸರಿಯಾಗಿ ತೋರಲಾರದು. ಹೀಗಾಗಿ  ಗೌರಿಯನ್ನು ಬಿಡುವ ವಿಷಾದಕ್ಕಿಂತ ಚಂದ್ರನ ಭಯವೇ ಮುಖ್ಯವಾಗಿ ಕಾಡುತಿತ್ತು. ಬದುಕಿನಲ್ಲಿ ಅತಿ ದೊಡ್ಡ ಶತ್ರುವೆಂದರೆ ಅದು ಭಯ ಮಾತ್ರ.

ಹೋಗುವಾಗ ಅಲ್ಲಿ ತಪ್ಪಿಸಿಕೊಂಡರೂ ಗೌರಿಯನ್ನು ಬಿಟ್ಟು ನಮಸ್ಕರಿಸುವಾಗ ಬಾವಿಯ ಒಳಗೆ ಈಜಾಡುತ್ತಿರುವವನು ಕಣ್ಣು ಮಿಟುಕಿಸಿ ಸಣ್ಣಗೆ ನಗುತ್ತಿದ್ದರೆ ಅಂತ ಮಳೆಗಾಲದ ಚಳಿಯಲ್ಲೂ ಒಮ್ಮೆ ಬೆವರುವ ಹಾಗಾಗುತಿತ್ತು. ಏನೇ ಆತಂಕ ಭಯವಾದರೂ ಒಂದು ಕ್ಷಣ ಮಾತ್ರ. ಎಲ್ಲಾ ಪಾಪಕ್ಕೂ ನಮ್ಮ ದೇವರು ಒಂದು ಪರಿಹಾರ ಕೊಟ್ಟಿದ್ದಾನೆ. ಪ್ರಾಯಶ್ಚಿತ್ತ ಅನ್ನೋದು ಪಾಪದ ಹಿಂದೆಯೇ ಹೆಜ್ಜೆಯಿಟ್ಟು ಬಂದಿರುತ್ತದೆ. ಅದನ್ನು ಶುದ್ಧ ಮನಸಿನಿಂದ ಸ್ವಾಗತಿಸಬೇಕಷ್ಟೇ. ಹಾಗಾಗಿ ವಾಪಾಸ್ ಬಂದ ಕೂಡಲೇ ಅಜ್ಜ ಸಮಂತೋಪಖ್ಯಾನವನ್ನು ಓದಿ ಹೇಳುತ್ತಿದ್ದರು. ಕೊನೆಯಲ್ಲಿ ನಮ್ಮ ಬುದ್ಧಿ ಗೊತ್ತಿರುತಿದ್ದ ಅವರು ಸುತ್ತಲೂ ಕುಳ್ಳಿರಿಸಿಕೊಂಡು ಆ ಶ್ಲೋಕವನ್ನು ಮೂರುಸಾರಿ ಹೇಳಿಕೊಟ್ಟು ಹೇಳುವ ಹಾಗೆ ಮಾಡುತ್ತಿದ್ದರು. ಅಲ್ಲಿಯವರೆಗೂ ಪಾಪ ಪ್ರಜ್ಞೆಯಿಂದ ಭಾರವಾಗಿದ್ದ ಮನಸ್ಸು ನಿರಾಳ ಹಗುರ..

ಯಾವುದೇ ಆಗಲಿ ಮನಸ್ಸಾಕ್ಷಿಗೆ ವಿರುದ್ಧವಾಗಿ ನಡೆದರೆ ಅದೆಷ್ಟು ಭಾರ.. ಒಪ್ಪಿಕೊಳ್ಳುವುದು ಒಂದು ಕ್ಷಣ ಆದರೆ ನಂತರ ಮನಸ್ಸು ಹಕ್ಕಿಯಂತೆ ಹಗುರ... ಭಾರ ಇಳಿಸಿಕೊಂಡ ನಿರಾಳತೆ ಜನ್ಮದುದ್ದಕ್ಕೂ.. ಯಾವುದೇ ಅಹಂ ಇಲ್ಲದೆ ಒಪ್ಪಿಕೊಳ್ಳುವ ಮನಸ್ಥಿತಿ ದೊಡ್ಡವರಾಗುತ್ತಾ ಕಡಿಮೆಯಾಗುವುದು ಅದೇಕೋ... ಅಹಿ ಇವತ್ತು ಚಂದ್ರನ್ನ ನೋಡಬಾರದು ಕಣೆ ಹುಷಾರು ಅಂದೇ.. ಎಲ್ಲ ಕಾಲದಲ್ಲೂ ತಲೆಯೆತ್ತಿ ನಡೆಯುವುದು ಒಳ್ಳೆಯದಲ್ಲ ಅನ್ನೋದು ನೆನಪಿರಲಿ ಅನ್ನೋದು ಚಂದ್ರ ವರುಷಕ್ಕೊಮ್ಮೆ ಯಾದರೂ ನೆನಪಿಸಲು ಬಂದೇ ಬರುತ್ತಾನೆ. ನೋಡಬಾರದು ಅನ್ನುವ ಮನಸ್ಸಿನ ಧೃಡತೆಯನ್ನು ಪರೀಕ್ಷಿಸುತ್ತಾನೆ. ಎಲ್ಲಾ ಮಕ್ಕಳು ಸೇರಿ ಗಣಪತಿಯನ್ನ ಕೂರಿಸಿ ಪೂಜಿಸಿ ಸಂಜೆ ಒಳಗೆ ಬಂದವಳನ್ನು ಚಂದ್ರನ್ನ ನೋಡಿಲ್ಲ ತಾನೇ ಅಂತ ಕೊಂಚ ಗಾಬರಿಯಲ್ಲೇ ಕೇಳಿದೆ. ಇಲ್ಲಮ್ಮಾ ನೋಡಿಲ್ಲ ನೋಡಿದರೂ ಹೇಗೂ ಶ್ಲೋಕ ಹೇಳಿದ್ರೆ ಮುಗಿತಲ್ಲ ಅಂದ್ಲು...

ನಮ್ಮಷ್ಟು ಪುಕ್ಕಲುಗಳಲ್ಲ ಈಗಿನ ಮಕ್ಕಳು ಅಂತ ಎಲ್ಲಾದರೂ ಕಣ್ಣಾಮುಚ್ಚಾಲೆ ಆಡುವ ಬಾ ಅಂತ ಚಂದ್ರ ಕರೆದಾನು ಅಂತ ಕಿಟಕಿ ಮುಚ್ಚುವಾಗ ಪಕ್ಕದ ಬೀದಿಯಲ್ಲಿ ಹಾಕಿದ ಭಾದ್ರಪದ ಶುಕ್ಲದ ಚೌತಿಯಂದು ಎನ್ನುವ ಸಮಂತೋಪಖ್ಯಾನದ ಹಾಡು ತೇಲಿಬಂತು. ಕತೆ ಓದಿ ಹೇಳುವ ಅಜ್ಜನಿಲ್ಲದ ಕಾರಣ ನಾನೂ  ಕಣ್ಣು ಮುಚ್ಚಿ ಕುಳಿತು ಹಾಡು ಕೇಳುತ್ತಿದ್ದೇನೆ. ಎಷ್ಟು ಗಣಪತಿ ನೋಡಿದ್ದು ಅಂತ ಲೆಕ್ಕ ಹಾಕುವ ಬೆರಳುಗಳು ಟೈಪಿಸಿವುದರಲ್ಲಿ ಬ್ಯುಸಿಯಾಗಿವೆ...

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...