ದೇವರಾಯನ ದುರ್ಗ

ಬೆಳಿಗ್ಗೆ ಎದ್ದ ಕೂಡಲೇ ದೇವರಿಗೆ ನಮಸ್ಕಾರ ಮಾಡಿದ್ಯಾ ಅನ್ನೋದರಿಂದಲೇ ಪ್ರಾರಂಭವಾಗುತ್ತಿದ್ದ ದಿನಗಳು ಅವು. ಹೊಮ್ಮುತ್ತಿದ್ದ ಕಾಫಿಯ ಪರಿಮಳ ದೇವರ ಕೋಣೆಯಲ್ಲಿ ಆಸೀನರಾಗಿರುತ್ತಿದ್ದ ಎಲ್ಲರಿಗೂ ಒಂದು ಕಾಟಾಚಾರದ ನಮಸ್ಕಾರ ಮಾಡಿ ಬರುವುದಕ್ಕೆ ಅವಸರಿಸುತ್ತಿತ್ತು. ಮೂರ್ತಿ ಹಲವಾದರೂ ನಮ್ಮ ಪಾಲಿಗೆ ದೇವರೊಬ್ಬನೇ ಅನ್ನೋ ಅದ್ವೈತವನ್ನು ಕಾಫಿ ಕಲಿಸಿತ್ತು. ಸ್ವಲ್ಪ ಬುದ್ಧಿ ಬಂದಿದೆ ಅಂತ ನನಗೆ ನಾನೇ ಘೋಷಿಸಿಕೊಳ್ಳುವ ಸಮಯದಲ್ಲಿ ಮನೆಯ ಹತ್ತಿರದಲ್ಲಿ ಗಣಪತಿ ಬಂದು ದೇವಸ್ಥಾನ ಕಟ್ಟಿಸಿಕೊಂಡು ಕೂತು ಬಿಟ್ಟಿದ್ದ. ಹಾಗಾಗಿ ಹೋಂವರ್ಕ್ ಮಾಡದೆ ಬೆಳಿಗ್ಗೆ ಸ್ಕೂಲ್ ಗೆ ಹೋಗುವ ಸಮಯದಲ್ಲಿ ಇವತ್ತು ಮೇಷ್ಟ್ರಿಗೆ ನೆನಪಾಗದಿರಲಿ ದೇವರೇ ಅನ್ನುವಲ್ಲಿಂದ ಹಿಡಿದು ಎಲ್ಲಾ ಬೇಡಿಕೆಗಳನ್ನೂ ಗಡಿಬಿಡಿಯಲ್ಲಿ ಅವನಿಗೆ ಆಜ್ಞಾಪಿಸಿ ಹೋಗುವ ಅಭ್ಯಾಸವಾಗಿತ್ತು. ಅದ್ವೈತ ಹೀಗೆ ಬಾಲ್ಯದಿಂದಲೇ ಪಾಲಿಸುತ್ತಿದ್ದ ನಮಗೆ ಮನೆದೇವರು, ಇಷ್ಟ ದೇವರು ಅನ್ನೋ ದ್ವೈತದ ಅರಿವೇ ಇರಲಿಲ್ಲ.

ಕಾಲ ಕಳೆದಂತೆ ನಮಗೂ ಒಬ್ಬ ಮನೆದೇವರು ಇದ್ದಾನೆ ಅನ್ನೋದು ಗೊತ್ತಾಗಿ ಒಮ್ಮೆ ಹೋಗಿಬರುವ ಅಂತ ಯೋಚಿಸಿ ಅದೂ ಸರ್ಕಾರದ ಬಹುತೇಕ ಯೋಜನೆಗಳಂತೆ ಹಾಗೆಯೇ ಇತ್ತು. ಮೊನ್ನೆ ಬಂದ ಅಣ್ಣ ಈ ಸಲ ಹೊಗಿಬರೋದೆ ಅಂತ ಸುಗ್ರೀವಾಜ್ಞೆ ಹೊರಡಿಸಿದ ಮೇಲೆ ಅಂತೂ ಇಂತೂ ಹೊರಟು ದೇವರಾಯನ ದುರ್ಗ ತಲುಪಿದೆವು. ಮಳೆಗಾಲ ಆರಂಭವಾಗಿದ್ದರಿಂದ ಹಸಿರು ಎಲ್ಲೆಡೆ ಆವರಿಸಿ ನಗುತ್ತಿತ್ತು. ಪ್ರಕೃತಿಯು ಮನಸ್ಸಿನ ಮೇಲೆ ಬೀರುವ ಪ್ರಭಾವ ಬಹಳವೇ ಮುಖ್ಯ. ಅಂಕುಡೊಂಕಾದ ದಾರಿಯ ಪಯಣ, ಹಸಿರು ಸೀರೆಯುಟ್ಟು ನಲಿಯುತ್ತಿದ್ದ ಭೂರಮೆ, ಮೋಡದ ಮರೆಯಿಂದ ಕದ್ದು ಇಣುಕಿನೋಡುತ್ತಿದ್ದ ಸೂರ್ಯ, ತಂಪಾಗಿ ಬೀಸುತ್ತಿದ್ದ ಗಾಳಿ, ಎಳೆ ಬಿಸಿಲು, ಜೊತೆಗೆ ಕುಟುಂಬ ಪಯಣಕ್ಕೊಂದು ಹೊಸ ಆಯಾಮವನ್ನೇ ನೀಡಿತ್ತು. ಒಟ್ಟಾಗಿ ಹೋಗುವುದು, ವಾತಾವರಣ ಎರಡೂ ಒಂದಕ್ಕೊಂದು ಪೂರಕವಾ....?

ಯಾವ ದಾರಿಯೂ ವ್ಯರ್ಥವಲ್ಲ. ಪ್ರತಿ ದಾರಿಗೂ ಒಂದು ಗಮ್ಯವಿದೆ. ನಮ್ಮ ಬದುಕಿನ ಗತಿಗೆ ಅದು ಹೊಂದಿಕೆಯಾಗುವುದಿಲ್ಲವೆಂದ ಮಾತ್ರಕ್ಕೆ ಅದು ಸರಿಯಿಲ್ಲ ಅನ್ನುವ ತೀರ್ಮಾನ ಸರಿಯಲ್ಲ. ಯಾವ ದಾರಿಯೂ ಸರಾಗವಲ್ಲ. ಏರುತ್ತಾ, ಇಳಿಯುತ್ತಾ, ಅಲ್ಲಲ್ಲಿ ತಿರುಗುತ್ತಾ, ಮತ್ತೆಲ್ಲೋ ದಡಕ್ಕನೆ ನಿಲ್ಲುತ್ತಾ, ಜಾಗ ಬಿಡುತ್ತಾ, ಓವರ್ಟೇಕ್ ಮಾಡುತ್ತಾ , ಮತ್ತೆಲ್ಲೋ ಹಿಂದುಳಿಯುತ್ತಾ, ಅನಿರೀಕ್ಷಿತ ತಿರುವುಗಳಲ್ಲಿ ಕಕ್ಕಾಬಿಕ್ಕಿಯಾಗಿಸುತ್ತಾ, ಯಾವ ದಾರಿಯಲ್ಲಿ ಹೋಗೋದು ಎಂದು ಗೊಂದಲ ಹುಟ್ಟಿಸುತ್ತಾ ಗಮ್ಯ ತಲುಪುವತನಕ ಪ್ರಯಾಣ ಸಾಗುತ್ತಲೇ ಇರುತ್ತದೆ. ಒಮ್ಮೆ ಗಮ್ಯ ತಲುಪಿದ ಮೇಲೆ ಆಗುವ ನಿರಾಳ ಭಾವ, ದಕ್ಕಿದ ಸಂಭ್ರಮ ಅವರ್ಣನೀಯ ಆದರೂ ಸಾಗುವ ದಾರಿಯೇ ಚೆಂದ ವೈವಿಧ್ಯ ಅಂತ ನಂಗೆ ಯಾವಾಗಲೂ ಅನ್ನಿಸುತ್ತೆ. ಸಾಗುತ್ತಿರುವಷ್ಟು ಹೊತ್ತೂ ತಲುಪುವ ತಪನೆ, ಕುತೂಹಲ ಕಾತುರ ಎಲ್ಲಾ... ತಲುಪಿದ ಮೇಲೆ.....

ಅವನಿಗೋ ಬೆಟ್ಟವೆಂದರೆ ಪ್ರೀತಿ. ಸಾಧ್ಯವಾದಷ್ಟೂ ಎತ್ತರದಲ್ಲಿ ಏಕಾಂತವಾಗಿ ಕುಳಿತಿರುವ ಬಯಕೆ. ಸುಲಭಕ್ಕೆ ಸಿಗದ ದೇವರವನು. ಬಯಲಿನಲ್ಲಿ ಕುಳಿತಿರುವ ನರಸಿಂಹ ತುಂಬಾ ಅಪರೂಪ. ಬೆಟ್ಟದ ತುದಿಯಲ್ಲಿ ದಟ್ಟ ಕಾಡಿನಲ್ಲೇ ಅವನ ವಾಸ. ಸುಲಭಕ್ಕೆ ಸಿಗಬಾರದು ಅಂತಲೋ, ದೃಢತೆಯಿದ್ದವರಿಗೆ ಮಾತ್ರ ಸಿಗುತ್ತೇನೆ ಅಂತಲೋ ನಿಮ್ಮ ಗೋಜು ಗದ್ದಲಗಳು ಇಲ್ಲದೆ ನೆಮ್ಮದಿಯಾಗಿರುತ್ತೇನೆ ಅಂತಲೋ ಯಾರಿಗೆ ಗೊತ್ತು? ಎಲ್ಲೇ ಇದ್ದರೂ ನಮ್ಮ ಕೆಲಸ ಆಗಬೇಕಾದರೆ ನಾವು ಹೋಗೇ ಹೋಗುತ್ತೇವೆ. ಕಾರ್ಯವಾಸಿ ಕತ್ತೆ ಕಾಲು ಹಿಡಿಯಲು ಹೇಸದ ಮನುಷ್ಯ ಬೆಟ್ಟ ಹತ್ತುವುದು ಬಿಡುತ್ತಾನಾ? ಹಾಗಾಗಿ ಎಲ್ಲೇ ಕುಳಿತರೂ ಜನ ಹುಡುಕಿಕೊಂಡು ಹೋಗುವುದು ಬಿಡುವುದಿಲ್ಲ.

ಅವನನ್ನು ತಲುಪಬೇಕಾದರೆ ಮೆಟ್ಟಲು ಹತ್ತಲೇ ಬೇಕು. ಹತ್ತುವುದೂ ಅಷ್ಟು ಸುಲಭವಲ್ಲ. ಏದುಸಿರು ಬರುತ್ತದೆ, ಕಾಲು ಮುಷ್ಕರ ಹೂಡುತ್ತದೆ. ಸುಖಕ್ಕೆ ಅಭ್ಯಾಸವಾದ, ಬಯಸುವ ಮನಸ್ಸು ಮೊಂಡು ಹಿಡಿಯುತ್ತದೆ. ಇಷ್ಟೆಲ್ಲದರ ನಡುವೆ ಹತ್ತುವಾಗಲೂ ಗಮನ ಬೇರೆಡೆ ಸೆಳೆಯಲು ನೂರಾರು ಆಕರ್ಷಣೆ. ಬರಿಕೈಯಲ್ಲಿ ಯಾರ ಮನೆಗಾದರೂ ಹೋಗುವುದು ನಮ್ಮ ಪದ್ದತಿಯಲ್ಲಿ ಸಲ್ಲ. ಹಾಗಾಗಿ ಒತ್ತಾಯಿಸಿ, ಅಡ್ಡಹಾಕಿ ಕರೆಯುತ್ತಿದ್ದ ಅಂಗಡಿಗಳನ್ನು ಧಿಕ್ಕರಿಸಿ ಹೋಗಲು ಧೈರ್ಯವಾಗದೇ ಹೂವು ಹಣ್ಣು ಖರೀದಿಸಿ ಹತ್ತುವಾಗಲೇ ನೂರಾರು ಸಂಖ್ಯೆಯಲ್ಲಿದ್ದ ವಾನರರು ಸ್ವಾಗತಿಸಿದರು. ಪೂರ್ವಜರ ಗೌರವಿಸದೆ ದೇವರನ್ನು ಪೂಜಿಸಬಲ್ಲರೆ ಅನ್ನುತ್ತಾ ಹತ್ತುವವರನ್ನು ಗದರಿಸಿ ಅವರ ಕೈಯಲ್ಲಿ ಇರುವ ಹಣ್ಣನ್ನು ತೆಗೆದುಕೊಂಡು ಆಶೀರ್ವದಿಸುವ ಕಾಯಕದಲ್ಲಿ ನಿರತರಾಗಿದ್ದ ಅವುಗಳಿಗೆ ಕೇವಲ ಹೂ ಕೊಂಡೊಯ್ಯುವವರ ಕಂಡರೆ ದಿವ್ಯ ನಿರ್ಲಕ್ಷ್ಯ. ಈ ಗುಟ್ಟು ಅರಿತ ನಾನು ಧೈರ್ಯವಾಗಿ ಬೆಟ್ಟ ಹತ್ತುತ್ತಿದ್ದೆ.

ನನ್ನ ಈ ನಡೆ ಕಂಡು ಅದೇನು ಕೋಪ ಬಂತೋ ಬಂದ ವಾನರನೊಬ್ಬ ಕೈಯಲ್ಲಿದ್ದ ಚೀಲವನ್ನು ಕಿತ್ತುಕೊಂಡ. ನಿನಗೆ ಬೇಕಾಗಿದ್ದು ಇಲ್ಲ ಬಿಡು ಅನ್ನುವ ನಿರ್ಲಕ್ಷ್ಯದಲ್ಲಿ ನೋಡುತಲಿದ್ದೆ. ಎದುರಿನವರಿಗೆ ಬೇಕಾಗಿದ್ದು ನಮ್ಮ ಬಳಿ ಇಲ್ಲ ಅನ್ನೋ ಸತ್ಯ ಎಷ್ಟು ಧೈರ್ಯ ಕೊಡುತ್ತಲ್ಲ ಅಂತ ಆಶ್ಚರ್ಯ ಪಡುತ್ತಲೇ ಅವುಗಳನ್ನು ದಿಟ್ಟಿಸುತಿದ್ದೆ. ಪಕ್ಕದಲ್ಲಿದ್ದವರು ಅದರಲ್ಲಿ ಹಣ್ಣಿಲ್ಲವೆಂದರೆ ವಾಪಾಸ್ ಕೊಡುತ್ತೆ ಬಿಡಿ ಅಂತ ಧೈರ್ಯ ಹೇಳಿ ಅವರ ಪ್ರಯಾಣ ಮುಂದುವರಿಸಿದರು.ಯಾರೂ ಯಾರ ಜೊತೆಗೂ ನಿಲ್ಲುವುದಿಲ್ಲ. ಅವರವರ ಪಯಣ ಮುಂದುವರಿಯಲೇ ಬೇಕು. ಹಾಗೆ ನಿಲ್ಲಲಿ ಎಂದು ಬಯಸಲೂಬಾರದು. ಯಾರಿರಲಿ ಇಲ್ಲದಿರಲಿ ಅವರವರ ಪಯಣ ಅವರೇ ಮುಂದುವರಿಸಬೇಕು. ಚೀಲವನ್ನು ಹುಡುಕಿದ ವಾನರಪುಂಗವ ಅದರಲ್ಲಿ ಕೇವಲ ಹೂ ಮಾತ್ರ ಇರುವುದನ್ನು ನೋಡಿ ಒಂದುಕ್ಷಣ ಆಲೋಚಿಸಿ ಆ ಹೂ ಮಾಲೆಯನ್ನು ತೆಗೆದುಕೊಂಡು ತುಳುಸಿಹಾರವನ್ನು ಅಲ್ಲೇ ಬಿಟ್ಟು ಬೆಟ್ಟ ಹತ್ತಿದ.

ಅಮ್ಮ ತಾನು ತೆಗೆದುಕೊಂಡ ತುಳಸಿಹಾರ ಉಳಿದಿದ್ದಕ್ಕೆ ಸಂತೋಷ ಪಟ್ಟು ಮುಂದೆ ಹೆಜ್ಜೆಹಾಕಿದಳು. ನಂಗೋ ನಿರೀಕ್ಷೆ ವಿಫಲವಾದದಕ್ಕೆ ಬೇಜಾರು ಆಗುವುದಕ್ಕಿಂತ ಅಮ್ಮನದು ಉಳಿಸಿದನಲ್ಲ ಅಂತ ಸಿಟ್ಟು ಬಂತು. ದೇವರು ಯಾವ ರೂಪದಲ್ಲಿ ಬರ್ತಾನೆ ಹೇಳೋಕೆ ಆಗೋಲ್ಲ ಕಣೆ ಅನ್ನೋ ಅಜ್ಜಿಯ ಮಾತು ನೆನಪಾಗಿ ನಾನೂ ಆಂಜನೇಯನೆ ಸ್ವತಃ ಬಂದು ಸ್ವೀಕರಿಸಿದ ಅಂತ ಸುಳ್ಸುಳ್ ಸಮಾಧಾನ ಮಾಡಿಕೊಂಡು ಮುನ್ನೆಡೆದೆ. ಹೆಂಡತಿಗೆ ತಗೊಂಡು ಹೋಗಿ ಕೊಡುತ್ತೆ ಅದು. ಎಲ್ಲಾ ಕೋತಿಗಳು ಆಂಜನೇಯ ಅಲ್ಲಾ ಅಂತ ಕಿಸುಕ್ಕನೆ ನಕ್ಕ ಕಸಿನ್. ಅವನನ್ನು, ಕೋತಿಯನ್ನು ಒಮ್ಮೆ ದುರುಗುಟ್ಟಿ ನೋಡುವುದರ ವಿನಃ ಇನ್ಯಾವ ಉಪಾಯವೂ ಹೊಳೆಯದೆ ಹತ್ತುವುದು ಮುಂದುವರಿಸಿದೆ.

ಬರುವ ಪ್ರತಿಯೊಬ್ಬರನ್ನೂ ಗಮನಿಸುವ ಆ ವಾನರರು, ಅಲ್ಲಲ್ಲಿ ನಿಂತು ಹಲ್ಲು ಕಿರಿದು, ಅಡ್ಡ ಮಲಗಿ, ಉದ್ದ ನಿಂತು, ಮೂತಿ ಓರೆಮಾಡಿ, ಮುಖ ಸೊಟ್ಟ ಮಾಡಿ ಮೊಬೈಲ್ ಹಿಡಿದು ಕ್ಲಿಕ್ಕಿಸುತ್ತಿದ್ದ ತಮ್ಮ ಅಪ್ಡೇಟೆಡ್ ವರ್ಷನ್ ಮಾನವರನ್ನು ಕಂಡು ದಂಗಾಗಿ ಹೋಗಿದ್ದವು. ನಾವೇ ನಿಮಗಿಂತ ಉತ್ತಮರು ಅಲ್ವಾ ಅಂತ ಕೇಳುವ ಹಾಗೆ ಮುಖ ಮಾಡಿದ್ದವು. ನಾವು ನಿಮ್ಮ ಹತ್ರ ಕಿತ್ತುಕೋತೀವಿ ಹೊರತು ನಮ್ಮನಮ್ಮಲ್ಲೇ ಕಿತ್ತಾಡಲ್ಲ ನೋಡಿ ಎಂದು ಮುಸಿನಗುತ್ತಿದ್ದವು. ಹಂಚಿಕೊಂಡು ತಿನ್ನುತ್ತಿದ್ದವು. ನೋಡಿ ನೋಡಿ ಬೇಜಾರಾದ ಕೆಲವು ಅಲ್ಲೇ ಮಲಗಿ ಚಳಿಕಾಯಿಸಿಕೊಳ್ಳುತ್ತಿದ್ದವು. ಇನ್ನು ಕೆಲವು ಪಾರ್ಕ್ನಲ್ಲಿ ಮೈಮರೆತ ಪ್ರೇಮಿಗಳಂತೆ ತಮ್ಮ ಜಗತ್ತಿನಲ್ಲೇ ಮುಳುಗಿಹೋಗಿದ್ದವು. ಮತ್ತೆ ಕೆಲವು ನುರಿತ ರಾಜಕಾರಣಿಗಳಂತೆ ಫೋಟೋ ತೆಗೆಯುವವರಿಗೆ ಪೋಸ್ ನೀಡುತ್ತಿದ್ದವು. ಇನ್ನೊಂದು ಅಪ್ಪಟ ಅಮ್ಮ ಮಿಸುಕಾಡುತ್ತಿದ್ದ, ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಮರಿಯನ್ನು ಹೊಡೆದು ಹಿಡಿದು ಕೂರಿಸಿಕೊಂಡು ಹೇನು ತೆಗೆಯುತಿತ್ತು. ಪಕ್ಕದಲ್ಲೇ ಕೂತು ಗಮನಿಸುವ ಅಪ್ಪನಂತೆ ಹಿಂದೆ ಇನ್ನೊಂದು ಮಂಗ ಕುಳಿತಿತ್ತು. ಜಾಯಿಂಟ್ ಫ್ಯಾಮಿಲಿ ನೀವು ಮರೆತರೂ ನಾವೂ ಮರೆಯೋಲ್ಲ ಅಂತ ಇನ್ನೊಂದು ಗೋಡೆಯ ಮೇಲೆ ಕುಳಿತ ಹತ್ತಾರು ಮಂಗಗಳು ಗುರುಗುಡುತ್ತಿದ್ದವು. ಏನೇ ಮಾಡಿದರೂ ತಮ್ಮ ಮೂಲ ಕೆಲಸವಾದ ಕಿತ್ತುಕೊಳ್ಳುವುದನ್ನು ಮಾತ್ರ ಮರೆಯುತ್ತಿರಲಿಲ್ಲ.

ದೇವಸ್ಥಾನ ತಲುಪವವರಿಗೂ ಚಳಿ ಅನ್ನಿಸುವ ಫೀಲ್ ಕೊಡುತ್ತಿದ್ದ ವಾತಾವರಣ ಆವರಣದೊಳಗೆ ಪ್ರವೇಶಿಸುತ್ತಿದ್ದಂತೆ ಬಿಸಿಯಾಗಿತ್ತು. ಕಿಕ್ಕಿರಿದು ತುಂಬಿದ್ದ ಜನರಿಗೆ ಹಾಗೆ ದರ್ಶನ ಕೊಡುವುದಾದರೂ ಹೇಗೆ ಎಂದು ಅಲಂಕಾರ ಮಾಡಿಕೊಳ್ಳುತ್ತಿದ್ದ ಯೋಗಾನರಸಿಂಹ. ಅಲಂಕಾರವಿಲ್ಲದ ಯಾವುದು ತಾನೇ ಮನುಷ್ಯನಿಗೆ ಇಷ್ಟವಾಗುತ್ತದೆ ಹೇಳಿ? ಸರಳತೆ ಕೇಳುವುದಕ್ಕೆ ಮಾತ್ರ ಚೆಂದ. ಅನುಸರಿಸಲು ಅಲ್ಲ. ಜನ ಮೆಚ್ಚಬೇಕಾದರೆ ಸುಂದರವಾಗಿರಬೇಕು. ಮೆಚ್ಚದೆ, ಬರದೇ ದೇವಾಲಯ ಉದ್ಧಾರ ಆಗೋದು ಹೇಗೆ? ಹಾಗಾಗಿ ಜನರ ಮರ್ಜಿಗಾಗಿ ದೇವರಿಗಾಗಿ ಅಲಂಕಾರ ನಡೆಯುತ್ತಿತ್ತು. ನೋಡಬಾರದೆಂದು ಪರದೆಯನ್ನು ಎಳೆದಿದ್ದರು.

ದೇವನೊಬ್ಬನೇ ಆದರೆ ಬಂದ ಜನ ಹಲವರು ತಾನೇ.. ಹಾಗಾಗಿ ಅಲ್ಲಿ ಹಲವು ಭಾವಗಳ ಸಂಗಮ. ಸಹಸ್ರನಾಮ ಪಠಿಸುವವರು, ಇನ್ನೂ ಎಷ್ಟು ಹೊತ್ತೋ ಎಂದು ಕಸಿವಿಸಿಗೊಳ್ಳುವವರು, ಲೋಕಾಭಿರಾಮ ಹರಟುವವರು, ಈ ಗಜಿಬಿಜಿಗೆ ಗೊಂದಲಗೊಂಡು ಅಳುವ ಮಕ್ಕಳು, ಅವನಷ್ಟು ಸಿಂಗಾರವಾಗುವಾಗ ನಾವೇನು ಕಮ್ಮಿ ಎಂದು ತಲೆ , ಮುಖ ಡ್ರೆಸ್ ಸರಿಮಾಡಿಕೊಳ್ಳುವವರು, ರಾಜ ಯಾವ ರಾಜ್ಯ ಗೆದ್ದರೂ ನಮಗೆ ರಾಗಿ ಬೀಸೋದು ತಪ್ಪುತ್ತಾ ಅನ್ನೋ ಅಜ್ಜಿಯಂತೆ ಯಾರು ಬಂದ್ರೇನು, ಬಿಟ್ರೇನು ತೀರ್ಥ ಕೊಡೊ ಕೆಲಸ ತಪ್ಪುತ್ತಾ ಅಂತ ಆಕಳಿಸುತ್ತಾ ಇದ್ದ ಸಹಾಯಕ ಅರ್ಚಕ, ದಿನಾ ನೋಡುವವರಿಗೆ ಕಾಯೋರು ಯಾರು ಅಂತ ಶೇಂಗಾವನ್ನು ಬಾಯಿಗೆ ಹಾಕಿಕೊಂಡು ಅಲ್ಲೇ ಚೇರ್ ಎಳೆದು ಕೂತ ದೇವಸ್ಥಾನದ ಸಿಬ್ಬಂದಿ. ತಲೆಯೆತ್ತದೆ ಚೀಟಿ ಹರಿದು ಕೊಡುವ ಸೇವಾ ಕೌಂಟರ್ನವರು , ಹಣ್ಣು ಹುಷಾರಾಗಿ ಹಿಡ್ಕೊಂಡ್ ಬನ್ನಿ ಅಂತ ಹೆಂಡತಿಯರಿಗೆ ಗದರಿಸುವ ಗಂಡಂದಿರು ಅದೊಂದು ವೈವಿಧ್ಯಮಯ ಲೋಕ.

ಇಷ್ಟೇ ಅನ್ನೋದು ಅರ್ಥವಾದ ದಿನ ಅದರ ಬಗ್ಗೆ ಅರಿವಿಲ್ಲದೆ ಒಂದು ಸಸಾರ ಮನೋಭಾವ, ಅನಾಸಕ್ತಿ ಬೆಳೆದು ಬಿಡುತ್ತೆ. ಇನ್ನೇನು ಮಂಗಳಾರತಿ ಸಮಯವಾಯ್ತು ಅಂತ ಸಿಂಗಾರ ಮುಗಿಸಿಕೊಂಡ ಅವನು ರೆಡಿಯಾಗುತ್ತಿದ್ದಂತೆ ಪರದೆ ಸರಿದು ಅಲ್ಲಿಯವರೆಗೂ ತಮ್ಮದೇ ಲೋಕದಲ್ಲಿ ಮುಳುಗಿದ್ದ ಎಲ್ಲರೂ ಎದ್ದು ನುಗ್ಗಲು ಆರಂಭಿಸುತ್ತಿದ್ದಂತೆ ನಿಧಾನಕ್ಕೆ ಹೊರಗೆ ಬಂದು ನಿಂತೇ. ಅಲ್ಲಿಯವರೆಗೂ ನೆಮ್ಮದಿಯಾಗಿದ್ದ ಜನ ಇನ್ನೊಂದು ಕ್ಷಣವಾದರೆ ಜಗತ್ತೇ ಪ್ರಳಯವಾಗುವುದೇನೋ ಎಂಬಂತೆ ನುಗ್ಗುಲು ಶುರುಮಾಡಲು ಆರಂಭಿಸಿದರು. ತಾನೇ ಮೊದಲು ಅವನ್ನು ನೋಡಬೇಕು ಅನ್ನೋ ಆತುರವೋ, ಹಿಂದೆ ಉಳಿದರೆ ತನ್ನ ಬೇಡಿಕೆ ಎಲ್ಲಿ ಈಡೇರಿಸಲಾರನೋ ಅನ್ನೋ ಆತಂಕವೋ, ಒಟ್ನಲ್ಲಿ ದರ್ಶನ ಮುಗಿದರೆ ಸಾಕು ಅನ್ನುವ ಗಡಿಬಿಡಿಯೋ ಏನೋ ಜನ ತಳ್ಳಿಕೊಂಡು ಮುಂದಕ್ಕೆ ನುಗ್ಗುತ್ತಿದ್ದರು.

ಒಳಗೆ ಹೋಗುವವರೆಗೂ ನಾಗಾಲೋಟದಲ್ಲಿ ಓಡುವ ಈ ಜನಗಳ ಗಡಿಯಾರ ಅವನೆದರು ನಿಂತಕೂಡಲೇ ಯಾಕೆ ಸ್ತಬ್ಧವಾಗುತ್ತೆ ಅಂತ ಹೊರಗೆ ನಿಂತು ತಲೆಕೆಡಿಸಿಕೊಳ್ಳುತ್ತಿದ್ದೆ. ಕ್ಯೂ ಬೆಳೆದಂತೆ ಜನರ ಅಸಹನೆಯೂ ಬೆಳೆಯುವುದ್ಯಾಕೆ, ಬೇಗ ಹೊರಗೆ ಬರಬಾರದ ಅಂತ ಬೈಯುವುದು ಯಾಕೆ? ಇದೆ ಜನ ಒಳಗೆ ಹೋದಡೊನೆ ಸಮಯ ಮರೆಯುವುದೇಕೆ? ಹಿಂದೆ ನಿಂತಿರುವ ಜನ ಕಾಣಿಸದೆ ಇರೋದು ಯಾಕೆ? ಅವನ ಆಕರ್ಷಣೆಯೇ ಅಂತಹುದಾ... ಅಥವಾ ನಮ್ಮ ಸಂಕಷ್ಟ ಕೇಳುವವರು ದೊರೆತಾಗ ಸಮಯ ಸ್ತಬ್ಧವಾಗಿ ಹೋಗುವುದಾ ಅನ್ನೋದಕ್ಕೆ ಇಂದಿಗೂ ಉತ್ತರ ಸಿಕ್ಕಿಲ್ಲ ನನಗೆ.....

ಅಂತೂ ಆ ಜಂಗುಳಿಯ ನಡುವೆ ನೋಡಲು ತುದಿಗಾಲಮೇಲೆ ನಿಂತು ಕತ್ತು ಉದ್ದ ಮಾಡಿ, ಹಾಗೆ ಹಣುಕಿ, ಹೀಗೆ ಬಗ್ಗಿ, ನೋಡಲು ಯತ್ನಿಸಿದಷ್ಟೂ ಉಹೂ ಅವನು ಕಣ್ಣುಮುಚ್ಚಾಲೆಯಾಡುತ್ತಿದ್ದ. ಹಿಂದೆ ನಿಂತವರ ಬೈಗುಳಕ್ಕೆ ಕಿವಿಯಾಗುತ್ತಾ, ಮುಂದೆ ನಿಂತವರ ಅಹವಾಲು ಸ್ವೀಕರಿಸುತ್ತಾ, ಮಧ್ಯೆ ಮಧ್ಯೆ ಅರ್ಚಕರ ಮಂತ್ರಕ್ಕೆ ಓಗೊಡುತ್ತಾ , ಆಗಾಗ ಆರತಿಗೆ ಮುಖವೊಡ್ಡುತ್ತಾ , ಹೂ ಸ್ವೀಕರಿಸುತ್ತಾ ಮತ್ತದೇ ಹೂವನ್ನು ತೆಗೆದುಕೊಂಡರು ಸುಮ್ಮನಿರುತ್ತಾ ಅವನು ನಗುತ್ತಾ ನಿಂತಿದ್ದ. ಎಲ್ಲವನ್ನೂ ಹೀಗೆ ನಿರ್ಲಿಪ್ತವಾಗಿ ತೆಗೆದುಕೊಳ್ಳುವುದು ಕಲಿಸು ಮಾರಾಯ ಎಂದು ಆದೇಶಿಸುತ್ತಾ ಹೊರಗೆ ಬಂದೆ. ನೈವೇದ್ಯಕ್ಕೆ ಹಾಕಿದ್ದ ಅನ್ನವನ್ನು ಒಂದೂ ಅಗುಳು ಬಿಡದಂತೆ ತಿಂದ ವಾನರನೊಬ್ಬ ನೋಡಿ ಹಲ್ಲುಕಿಸಿದ.



Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...