ಮಳೆಗಾಲದ ತಯಾರಿ. (ಹನಿ ಕಡಿಯದ ಮಳೆ)
ಮೇ ತಿಂಗಳ ಕೊನೆಯ ಹೊತ್ತಿಗೆಲ್ಲಾ ಮಳೆಯ ದಿಬ್ಬಣ ಅಡಿಯಿಡುತಿತ್ತು. ದಿಬ್ಬಣವೆಂದರೆ ಗೌಜಿ ಗದ್ದಲ ಇಲ್ಲದೆ ಇದ್ದರೆ ಆಗುತ್ತದೆಯೇ? ಹಾಗಾಗಿ ಗುಡುಗು ಸಿಡಿಲುಗಳ ಆರ್ಭಟ, ಕೋರೈಸುವ ಮಿಂಚು, ಭೋರೆಂದು ಬೀಸುವ ಗಾಳಿ, ತನ್ನ ಆವೇಶವನ್ನೆಲ್ಲಾ ಒಮ್ಮೆಗೆ ಹೊರ ಹಾಕುವಂತೆ ಧೋ ಎಂದು ಸುರಿಯುವ ಮಳೆ. ಒಂದಕ್ಕೊಂದು ಜೊತೆಯಾಗುತ್ತಾ, ಹಾಗೆ ಜೊತೆಯಾಗುತ್ತಲೇ ಜೊತೆಯಾಗಿಸುತ್ತಾ ಬರುತಿದ್ದ ಮಳೆರಾಯ ಥೇಟ್ ದಿಬ್ಬಣದ ಬೀಗರಂತೆ ಖುಷಿಯ ಜೊತೆ ಜೊತೆಗೆ ಆತಂಕ, ಏನಾಗಬಹುದು ಅನ್ನೋ ಅವ್ಯಕ್ತ ಭಯ, ಸುಸೂತ್ರವಾಗಿ ಜರುಗಿದರೆ ಸಾಕಪ್ಪ ಅನ್ನುವ ಆಸೆ ಎಲ್ಲವೂ ಮೂಡುವ ಹಾಗೆ ಮಾಡುತಿದ್ದ. ದಿಬ್ಬಣ ಬರುವ ಮುನ್ನ ಎಷ್ಟೆಲ್ಲಾ ತಯಾರಿಗಳು ಆಗಬೇಕು, ಎಷ್ಟೊಂದು ಕೆಲಸ. ಬೀಗರನ್ನು ಎದುರುಗೊಳ್ಳುವುದೆಂದರೆ ಅದೇನು ಅಷ್ಟು ಸುಲಭವೇ. ಅದೆಷ್ಟು ಜಾಗ್ರತೆ, ಅದೆಷ್ಟು ತಯಾರಿ ಮಾಡಲೇ ಬೇಕು. ಒಮ್ಮೆ ಬೀಗರು ಅಡಿಯಿಟ್ಟ ಮೇಲೆ ಮುಗಿಯಿತು. ಅವರನ್ನು ಉಪಚರಿಸಲು ಎಷ್ಟೊಂದು ಕೆಲಸ ಆಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಬಿಸಿಲು ಇರುವಾಗಲೇ ಹಪ್ಪಳ ಸಂಡಿಗೆ ಮಾಡಿ ಅದನ್ನು ಡಬ್ಬದಲ್ಲಿ ತುಂಬಿಟ್ಟುಕೊಳ್ಳಬೇಕು. ಅದೂ ತರಾವರಿ ಹಪ್ಪಳಗಳು ಇದ್ದರೂ ಹಲಸಿನ ಹಪ್ಪಳಕ್ಕೆ ಅಗ್ರಸ್ಥಾನ. ರಾಜ ಅದು. ಉಳಿದ ಮಂತ್ರಿ ಮಂಡಲದಂತೆ ಅಕ್ಕಿ ಹಪ್ಪಳ, ಸಂಡಿಗೆ, ಮಜ್ಜಿಗೆ ಮೆಣಸು ಹೀಗೆ ಉಳಿದವರು ಇರುತಿದ್ದರು. ಆಮೇಲೆ ಉಪ್ಪಿನಕಾಯಿ ಅದೂ ಮಿಡಿ ಮಾವಿನ ಉಪ್ಪಿನಕಾಯಿ, ಸ್ವಲ್ಪ ನಿಂಬೆಕಾಯಿ ಉಪ್ಪಿನಕ...