ನಾಗರ ಪಂಚಮಿ.
ನಾಗರಪಂಚಮಿಯೆಂದರೆ ಹಬ್ಬಗಳ ಸಾಲಿನ ಹೆಬ್ಬಾಗಿಲು. ಆಚರಣೆ, ಪದ್ದತಿಯಲ್ಲಿ ಏನೇ ವೈವಿಧ್ಯತೆ ಇದ್ದರೂ ನಾಗರ ಪಂಚಮಿ ನಾಡಿಗೆ ಹಬ್ಬ. ಕೃಷಿಪ್ರಧಾನವಾಗಿದ್ದ ದೇಶದಲ್ಲೇ ಅದೇ ಭೂಮಿಯಲ್ಲಿ ವಾಸಿಸುವ ನಾಗರಾಜನಿಗೆ ನಮಿಸುವ, ಅರಿಯದೆ ನಡೆದ ಅಪಚಾರಕ್ಕಾಗಿ ಕ್ಷಮೆ ಕೇಳುವ ಅವಕಾಶ. ಮದುವೆ ಮಾಡಿ ಕಳಿಸಿಕೊಟ್ಟ ಕರುಳಬಳ್ಳಿಯನ್ನು ಕರೆದು ತಂದು ಆರೈಕೆ ಮಾಡಿ ಬಂಧವನ್ನು ಚಿಗುರಿಸುವ, ಒಣಗದಂತೆ ಕಾಪಾಡಿಕೊಳ್ಳುವ ಸಮಯ. ಈ ನೆಲದ ವೈಶಿಷ್ಟ್ಯವೇ ಅದು. ಪ್ರತಿಯೊಂದು ಹಬ್ಬವೂ ಬದುಕನ್ನು ಮತ್ತಷ್ಟು ಶ್ರೀಮಂತಗೊಳಿಸುವ, ಹಸಿರಿನಿಂದ ನಳನಳಿಸೋ ಹಾಗೆ ಮಾಡುವ ಪ್ರಕ್ರಿಯೆ. ಜನಮೇಜಯ ತನ್ನ ತಂದೆಯ ಸಾವಿನಿಂದ ಕ್ರುದ್ಧನಾಗಿ ಸರ್ಪಯಾಗ ಮಾಡಿ ಅವುಗಳನ್ನು ನಾಶಮಾಡುವ ಸಂಕಲ್ಪ ಮಾಡುವಾಗ ಆಸ್ತಿಕ ಅವನನ್ನು ಪ್ರಾರ್ಥಿಸಿ ಯಾಗವನ್ನು ನಿಲ್ಲಿಸಲು ಕೇಳಿದ್ದು ಇದೇ ದಿನವೆಂದು, ಯಮುನೆಯ ಮಡುವಿನಲ್ಲಿ ಕುಳಿತು ಅದನ್ನು ವಿಷಯುಕ್ತವಾಗಿಸಿ ತೊಂದರೆ ಕೊಡುತಿದ್ದ ಕಾಳಿಯನನ್ನು ಶ್ರೀ ಕೃಷ್ಣ ಮರ್ದಿಸಿದ್ದು ಇದೇ ದಿನವೆಂದು ಪುರಾಣಗಳ ಹಿನ್ನಲೆ. ಭೂಮಿಯನ್ನು ಆದಿ ಶೇಷ ತನ್ನ ತಲೆಯ ಮೇಲೆ ಹೊತ್ತಿದ್ದಾನೆ ಹಾಗಾಗಿ ಅವನಿಗೆ ಕೃತಜ್ಞತೆ ಸಲ್ಲಿಸುವ ದಿನ ಇದು ಅನ್ನೋದು ಇನ್ನೊಂದು ನಂಬಿಕೆ. ಶಿವ ಕೊರಳಲ್ಲಿ, ವಿಷ್ಣು ಹಾಸಿಗೆಯಾಗಿ, ಗಣಪತಿ ಹೊಟ್ಟೆಗೆ ಕಟ್ಟಿಕೊಂಡು ಹೀಗೆ ದೇವರಿಗೂ ಶೇಷ ಅತಿ ಪ್ರಿಯ. ಇನ್ನು ತಂಗಿಯ ಮೇಲೆ ಅಸೂಯೆಗೊಂಡು ಅವಳನ್ನು ಕೊಲ್ಲಲು ಯತ್ನಿಸಿದ ಅಣ್ಣಂದಿರನ್ನು ನಾಗನನ್ನು...