ಪೆಟ್ಲು ಕಾಯಿ
ಶ್ರಾವಣ ಅಂದ್ರೆ ಸಂಭ್ರಮ. ಒಂದೇ ಸಮನೆ ಶ್ರುತಿ ಹಿಡಿದು ಸುರಿಯುತ್ತಿದ್ದ ಮಳೆಯೂ ಸ್ವಲ್ಪ ವಿರಾಮ ತೆಗೆದುಕೊಂಡ ಹಾಗೆ ಅನ್ನಿಸೋ ಕಾಲ. ಅದಕ್ಕಿಂತ ಹೆಚ್ಚು ಸಾಲು ಸಾಲು ವ್ರತಗಳು, ಹಬ್ಬಗಳು. ವ್ಯವಸಾಯದ ಬಹಳಷ್ಟು ಕೆಲಸಗಳು ಮುಗಿದು ದೇಹಕ್ಕೆ ವಿರಾಮದ ಸಮಯ. ಮನಸ್ಸಿಗೆ ಸಂಭ್ರಮ ಸಡಗರ ತುಂಬುವ ಸಮಯ. ರಜೆಗಳ ಸಾಲು ಖುಷಿ ಕೊಟ್ಟರೂ ಆಗ ನಮಗೆ ಹೆಚ್ಚು ಸಂಭ್ರಮ ಕೊಡುತ್ತಿದ್ದ ಸಂಗತಿಯೆಂದರೆ ದಾರಿಯ ಇಕ್ಕೆಲಗಳಲ್ಲಿ, ಕಾಡಿನ ಒಡಲಲ್ಲಿ ಬಿಟ್ಟಿರುತ್ತಿದ್ದ ಪೆಟ್ಲುಕಾಯಿ ಹಾಗೂ ಅದರ ಘಮ. ಆ ಘಮ ಗಾಳಿಗೂ ಹುಚ್ಚು. ಹಾಗಾಗಿ ಅದನ್ನು ನೇವರಿಸಿ ಅದರ ಘಮವನ್ನು ತನ್ನ ಮೈಗೆ ಪೂಸಿಕೊಳ್ಳುತಿತ್ತು. ಅದು ಸುಳಿದ ಕಡೆ ಮೂಗು ಅರಳುತಿತ್ತು. ಚಿಕ್ಕ ಚಿಕ್ಕ ಕಾಯಿಗಳನ್ನು ಒಡಲ ತುಂಬಾ ತುಂಬಿಕೊಂಡು ತುಂಬು ಗರ್ಭಿಣಿಯಂತೆ ಕಾಣುತಿದ್ದ ಅರಳುಮರಳು ಅನ್ನೋ ಹೆಸರಿನ ಗಿಡ ನಮಗೆ ಮರುಳು ಹಿಡಿಸುತ್ತಿದ್ದದಂತೂ ನಿಜ. ಹೀಗೆ ಬಿಟ್ಟ ಕಾಯಿಗಳನ್ನು ತಂದು ಪೆಟ್ಲು ಹೊಡೆಯುವ ಆಸೆ ನಮ್ಮದಾದರೆ ಎಳೆಯ ಕಾಯಿಗಳನ್ನು ಕೊಯ್ದು ತಂದು ಹೇರಳವಾಗಿ ಬಿಟ್ಟಿರುತ್ತಿದ್ದ ನಿಂಬೆಯ ಜೊತೆ ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿ ಹಿತ್ತಿಲಲ್ಲಿ ಬೆಳೆದ ಮಾವಿನ ಶುಂಟಿ ಕಿತ್ತು ತಂದು ಸಣ್ಣಗೆ ಹೆಚ್ಚಿ ಎಲ್ಲವನ್ನೂ ಸೇರಿಸಿ ಉಪ್ಪಿನಕಾಯಿ ತಯಾರಿಸುವ ಸಡಗರ. ಬಾಳೆಎಲೆಯ ಮೇಲೆ ಬಿಸಿ ಅನ್ನ ಹಾಕಿಕೊಂಡು ಕಡೆದ ಮಜ್ಜಿಗೆಯನ್ನೋ, ಗಟ್ಟಿ ಮೊಸರನ್ನೋ ಕಲೆಸಿಕೊಂಡು ಎಲೆಯ ತುದಿಗ...