ಹೊಸದಿಗಂತ 12.07.19

ಜೊಮೊಟೋ ದ ಹುಡುಗನೊಬ್ಬ ಡೆಲಿವರಿ ಕೊಡುವ ಮುನ್ನ ಪ್ಯಾಕ್ ಓಪನ್ ಮಾಡಿ ಸ್ವಲ್ಪ ತಿಂದ ವೀಡಿಯೊ ಒಂದು ವೈರಲ್ ಆಗಿತ್ತು. ಸಹಜವಾಗಿಯೇ ಅದರ ಬಗ್ಗೆ ಆಕ್ರೋಶಗಳು ಹೊಮ್ಮಿದಷ್ಟೇ ಟ್ರೋಲ್ ಗಳು ಹಬ್ಬಿದ್ದವು. ಜನ ಅದು ತಪ್ಪು ಎಂದು ಖಂಡಿಸಿ ಬರೆಯಲು ಶುರುಮಾಡಿದ್ದರು. ಮೊದಲ ದಿನ ಎಲ್ಲಾ ಪ್ರತಿಕ್ರಿಯೆಗಳು ಹೀಗೆ ಇದ್ದವು. ಮರುದಿನ ಇದ್ದಕ್ಕಿದ್ದ ಹಾಗೆ ಯಾರಿಗೋ ಅದು ಹಸಿವಿನ ಪರಾಕಾಷ್ಟೆ ಅನ್ನಿಸಿತು ನೋಡಿ ಅಲ್ಲಿಂದ ಅವನ ಬಗ್ಗೆ ಅನುಕಂಪದ ಮಾತುಗಳು, ಹಸಿದವನ ಬಗ್ಗೆ ಕರುಣೆ, ಬಡತನದ ಬಗ್ಗೆ ಭಾಷಣಗಳು ಶುರುವಾಗಿ ಹೋಯಿತು. ನಂತರ ಯಾರು ಅದರ ವಿರೋಧವಾಗಿದ್ದಾರೆ ಎನ್ನುವುದು ನೋಡುವುದರ ಮೂಲಕ ಪರವಾಗಿ ವಾದವೂ, ಯಾರು ಪರವಾಗಿದ್ದಾರೆ ಎಂದು ನೋಡಿ ವಿರೋಧವೂ ಶುರುವಾಗಿ ಅಲ್ಲಿಗೆ ಅದು ಎರಡು ಬಣಗಳ ಜಗಳಕ್ಕೆ ತಿರುಗಿ ನಿಜವಾದ ಘಟನೆ ಅರ್ಥಕಳೆದುಕೊಂಡಿತು.

ತಿಂದಿದ್ದು ತಪ್ಪು ಎನ್ನುವುದು ಗೊತ್ತಿದ್ದರೂ ಅದನ್ನು ಬಲವಾಗಿ ಸಮರ್ಥಿಸುವ ಅದರ ಮೂಲಕ ನೈತಿಕತೆಯ ಅಧಃಪತನವನ್ನು ಎತ್ತಿ ಹಿಡಿಯುವ ಕೆಲಸ ಆರಂಭವಾಯಿತು. ಎಲ್ಲರೂ ಸೇರಿ ತಪ್ಪನ್ನು ತಪ್ಪು ಎಂದು ಖಂಡಿಸಿ ಅವನ ಹಸಿವೋ ಚಪಲವೋ ಅಥವಾ  ಮತ್ಯಾವ ಕಾರಣವೋ ಎಂದು ವಿಶ್ಲೇಷಿಸಿ ಅದಕ್ಕೆ ಪರಿಹಾರ ಹುಡುಕುವ ಕೆಲಸ ಮರೆಯಾಗಿ, ಘಟನೆ ಅಪ್ರಸ್ತುತ ಅನ್ನಿಸುವ ಹಾಗಾಯಿತು. ಇವನ್ನೆಲ್ಲಾ ನೋಡಿ ಹಾಗೆ ತಿಂದವನಿಗೆ ಅದು ತಪ್ಪು ಅನ್ನಿಸಿದ್ದೂ ಮರೆತು ಹೋಗಿ ತಾನು ಮಾಡಿದ್ದೆ ಸರಿಯೇನೋ ಅನ್ನಿಸಿತ್ತೇನೋ .. ಒಂದು ಸಮಾಜದ ಏಳ್ಗೆಗೆ ಯಾವುದು ಮುಖ್ಯವೋ ಅದನ್ನು ಬೆಂಬಲಿಸ ಬೇಕಾದವರು ಹೀಗೆ ವಾದ ವಿವಾದಕ್ಕೆ ಬೀಳುವುದರ ಮೂಲಕ, ಯಾವುದೂ ತಪ್ಪಲ್ಲ ಎನ್ನುವ ಮನಸ್ಥಿತಿ ಶುರುವಾಗಿ ಬಿಡುತ್ತೇನೋ ಎನ್ನುವ ಸಣ್ಣ ಆತಂಕ ಅಂದು ಕಾಡಿತ್ತು.

ಇಂದು ಪ್ರಿಯಾಂಕ ರೆಡ್ಡಿ ಅತ್ಯಾಚಾರ ಮಾಡಿದ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಡೆದ ಎನ್ಕೌಂಟರ್ ಕೂಡಾ ಜೋರಾಗಿ ಸದ್ದು ಸುದ್ದಿ ಎರಡೂ ಮಾಡುತ್ತಿದೆ. ಮೊನ್ನೆಯವರೆಗೆ ಎಲ್ಲಿ ಶಿಕ್ಷೆ ಎಂದು ಬೊಬ್ಬಿರಿದವರು, ಗಲ್ಲಿಗೇರಿಸಿ ಎಂದವರು ಇಂದು ರಕ್ಷಣೆ ಎಲ್ಲಿದೆ ಎಂದು ಕೇಳುತ್ತಿದ್ದಾರೆ. ಆರೋಪಿಗಳು ತಮ್ಮ ಅಪರಾಧ ಒಪ್ಪಿಕೊಂಡ ನಂತರವೂ ಸಿ ಸಿ ಟಿವಿ ಫೂಟೇಜ್ ಇದ್ದ ಮೇಲೂ ಅವರೇ ಮಾಡಿದ್ದರು ಎನ್ನುವುದಕ್ಕೆ ಪುರಾವೆ ಎಲ್ಲಿದೆ ಎಂದು ಕೇಳುತ್ತಿದ್ದಾರೆ. ಇದು ಅವರೇ ಮಾಡಿದ್ದು ಎನ್ನುವುದಕ್ಕೆ ಸಾಕ್ಷ್ಯ ಕೇಳುತ್ತಿದ್ದಾರೆ. ನಿರ್ಭಯಾ ಕೇಸಿಗೆ ನ್ಯಾಯ ಸಿಕ್ಕಿದೆಯಾ ಎಂದರೆ ಉತ್ತರಿಸಲು ತಡಬಡಾಯಿಸುವವರು. ಕಾನೂನಿನ ಹೋರಾಟ ಮಾಡುವ ಹೊತ್ತಿಗೆ ಸಂತ್ರಸ್ತೆಯನ್ನು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದವರ ಸುದ್ದಿ ಕೇಳಿದವರು,  ಬಹುಶಃ ಅವರು ಪ್ರಿಯಾಂಕ ರೆಡ್ಡಿ ಯೇ ಎದ್ದು ಬಂದು ಹೇಳಿದರೂ ನಂಬುವ ಸ್ಥಿತಿಯಲ್ಲಿ ಖಂಡಿತ ಇಲ್ಲ. ಹಾಗೆ ಸಮರ್ಥಿಸಲು ಒಂದೋ ಆರೋಪಿಗಳು ಹತ್ತಿರದವರಾಗಿರಬೇಕು, ಎಲ್ಲಾ ನಾವು ವಿಭಿನ್ನ ಎಂದು ಗುರುತಿಸಿಕೊಳ್ಳುವ ಹಪಾಹಪಿ ಇರಬೇಕು. ಇವೆರಡು ಇಲ್ಲವೆಂದರೆ ಅಲ್ಲಿ ಸಿದ್ಧಾಂತ ಪ್ರಭಾವಿಸಿರಬೇಕು.                     

ಇಡೀ ದೇಶಕ್ಕೆ ದೇಶವೇ ದಿನನಿತ್ಯದ ಘಟನೆಯಂತೆ ಆಗುತ್ತಿರುವ ಈ ಅತ್ಯಾಚಾರ, ದೌರ್ಜನ್ಯ ನೋಡುತ್ತಾ, ಹೆಣ್ಣು ಮಕ್ಕಳ ರಕ್ಷಣೆಯ ಬಗ್ಗೆ ಭಯಪಡುತ್ತಾ ಆರೋಪಿಗಳಿಗೆ ಯಾವ ಶಿಕ್ಷೆಯೂ ಆಗದೆ ಆರಾಮಾಗಿ ಓಡಾಡಿಕೊಂಡು ಇರುವುದನ್ನು ನೋಡುತ್ತಾ ನ್ಯಾಯದ ಬಗ್ಗೆ ನಂಬಿಕೆ ಕಳೆದುಕೊಂಡಿರುವ ಹೊತ್ತಿಗೆ ಇಂತಹದೊಂದು ಕಾರ್ಯ ಅವರು ನಿಟ್ಟುಸಿರು ಬಿಡುವ ಹಾಗೆ ಮಾಡಿದೆ. ಸದ್ಯ ಒಬ್ಬರಿಗಾದರೂ ನ್ಯಾಯ ದೊರಕಿತಲ್ಲ ಎಂದು ನೆಮ್ಮದಿ ಪಡುವ ಹಾಗಿದೆ. ಇದು ಸಂಭ್ರಮ ಅನ್ನೋದಕ್ಕಿಂತ  ನೆಮ್ಮದಿಯ ನಿಟ್ಟುಸಿರು ಎನ್ನಬಹುದು. ಕೊನೆಗೂ ನಂಬಿಕೆ ಸುಳ್ಳಾಗಲಿಲ್ಲ ಅನ್ನುವ ನಿರಾಳತೆ ಇರಬಹುದು. ಹಾಗಾದರೆ ಪೊಲೀಸರು ಕಾನೂನು ಕೈ ತೆಗೆದುಕೊಂಡಿದ್ದು ಸರಿಯಾ ಎಂದರೆ ಈ ಕ್ಷಣಕ್ಕೆ ಅದು ಅನಿವಾರ್ಯವಾಗಿತ್ತೇನೋ.  ಪ್ರತಿ ಕಾಲದಲ್ಲೂ ಸಾಮಾನ್ಯರು ಬಯಸಿದ್ದು  ಈಗ ಬೇಕಾಗಿರುವುದು ಅನ್ಯಾಯಕ್ಕೆ ಶಿಕ್ಷೆಯಾಗಬೇಕು ಅದು ಉಳಿದವರು ಅಧರ್ಮದ ಹಾದಿ ಹಿಡಿಯದ ಹಾಗೆ ಭಯ ಹುಟ್ಟಿಸಿರುವ ಹಾಗಿರಬೇಕು.

ಇದಕ್ಕೂ ಮೀರಿ ಅಸಹ್ಯವಾಗಿದ್ದು ಮೊದಲ ಆರೋಪಿಯ ತಂದೆಯ ನಿತ್ರಾಣ ಸ್ಥಿತಿ, ಮನೆಯ ಬಡತನವನ್ನು ವಿವರಿಸುವ ಅದರ ಮೂಲಕ ಪರೋಕ್ಷವಾಗಿ ಆರೋಪಿಯನ್ನು ಬೆಂಬಲಿಸುವ ಮನಸ್ಥಿತಿ ಕಂಡು. ಒಂದು ಕೋಮಿನವರು ಇದ್ದಾರೆ ಎನ್ನುವುದಕ್ಕೆ ಶಿಕ್ಷೆಗೆ ಒತ್ತಾಯಿಸುತ್ತಿದ್ದಾರೆ ಅನ್ನುವ ವಿತಂಡವಾದ ನೋಡಿ.  ಯಾವುದೇ ಅಹಿತಕರ ಘಟನೆ ನಡೆದಾಗ ಅಲ್ಲಿ ಮುಖ್ಯವಾಗಬೇಕಿದ್ದು ಯಾರು ಕಾರಣ ಎನ್ನುವುದೋ?  ಅಥವಾ ಆ ಘಟನೆಯಲ್ಲಿದ್ದವರ ಜಾತಿ, ಧರ್ಮ, ಕೌಟುಂಬಿಕ ಸ್ಥಿತಿಯೋ..? ದೌರ್ಜನ್ಯ ಮಾಡಲು ಅಡ್ಡಿಯಾಗದ ವಯಸ್ಸು ಶಿಕ್ಷೆ ಅಡ್ಡ ಬರುವುದು ಹೇಗೆ?  ತಪ್ಪನ್ನು ತಪ್ಪೂ ಎನ್ನಲಾಗದ ಮಾನಸಿಕತೆಗೆ ಬಂದು ತಲುಪಿದ್ದೇವಾ.. ನಮ್ಮ ಮಾತು ಆಲೋಚನೆಗಳು ಇನ್ಯಾವುದೋ ಸಿದ್ಧಾಂತ, ಜಾತಿ, ಧರ್ಮಗಳಿಂದ ನಿಯಂತ್ರಿಸಲ್ಪಡುತ್ತಿದೆಯಾ.. ಅತಿಯಾದ ವೈಚಾರಿಕತೆ ಹೆಸರಿನಲ್ಲಿ ನಾವು ಯೋಚಿಸುವುದನ್ನೇ ಮರೆಯುತ್ತಿದ್ದೆವಾ....  ಶುಷ್ಕರಾಗುತ್ತಿದ್ದೇವಾ.. ಒಂದು ತಪ್ಪು ಇನ್ನೊಂದು ತಪ್ಪಿಗೆ ಸಮರ್ಥನೆಯಾಗಿ ಬಳಸುವಷ್ಟು ನೈತಿಕವಾಗಿ ಕುಸಿದುಹೊಗಿದ್ದೆವಾ.

ಕಾಲ ಬದಲಾಗುತ್ತಿದೆ ಎಂದು ಯಾರಾದರೂ ಗೊಣಗುವಾಗ ಬದಲಾಗಿದ್ದು ಕಾಲವಾ ಇಲ್ಲಾ ಮನಸ್ಥಿತಿಯಾ ಎನ್ನುವ ಪ್ರಶ್ನೆ ತಟ್ಟನೆ ಮನಸ್ಸಿನಲ್ಲಿ ಹಾದು ಸಣ್ಣ ನಗು ಅರಳುತಿತ್ತು. ಪ್ರತಿಬಾರಿ ಶೋಷಣೆ ನಡೆಯುವುದು ಸಬಲರಿಂದ ದುರ್ಬಲರ ಮೇಲೆ ಅಷ್ಟೇ. ಅದು ಆರ್ಥಿಕ ಸಬಲತೆಯೋ, ದೈಹಿಕವೋ, ಅಧಿಕಾರವೋ, ಮತ್ಯಾವುದೋ ಇರಬಹುದು. ಈ ಸಬಲರು ದುರ್ಬಲರ ಮೇಲೆ ಮಾಡುವ ಶೋಷಣೆ, ದಬ್ಬಾಳಿಕೆ, ಅತ್ಯಾಚಾರ, ಅನಾಚಾರ ಇದಾವುದೂ ಹೊಸತಲ್ಲ, ಈಗ ಶುರುವಾಗಿದ್ದೂ ಅಲ್ಲ ನಿಜ. ಆದರೆ ಹಾಗೊಂದು ಘಟನೆ ನಡೆದಾಗ ಅದನ್ನು ನೋಡುತ್ತಿದ್ದ  ಪ್ರತಿಕ್ರಿಯಿಸುತ್ತಿದ್ದ ರೀತಿ ಮಾತ್ರ ಖಂಡಿತ ಬದಲಾಗಿದೆ. ಎಷ್ಟೋ ಸಲ ನಡೆದ ಅತ್ಯಾಚಾರಗಳು ಬೆಳಕಿಗೆ ಬರದೆ ಹೋಗುತ್ತಿದ್ದವು. ಹಾಗೆ ಬರದ ಹಾಗೆ ಹತ್ತಿಕ್ಕುವ ಕಲೆ ಕರಗತವಾಗಿತ್ತು. ಸಮಾಜ ಅಭಿವೃದ್ಧಿ ಹೊಂದಿದಂತೆ ಪ್ರತಿಭಟಿಸುವ ದನಿ ನಿಧಾನಕ್ಕೆ ಗಟ್ಟಿಯಾಗುತ್ತಾ ಹೋದಂತೆ ಅದನ್ನು ದಮನಿಸುವ ಹೊಸ ಹೊಸ ಉಪಾಯಗಳೂ, ಕ್ರೌರ್ಯಗಳೂ ಅಭಿವೃದ್ಧಿಯಾಗಿವೆ. ಅದರಲ್ಲೂ ಅಭಿವ್ಯಕ್ತಿ ಸ್ವಾತಂತ್ರದ ಹೆಸರಲ್ಲಿ ಸಿಗುವ ಸ್ವೇಚ್ಚೆ ಯುವಜನತೆಯ ಹಾದಿ ತಪ್ಪಿಸಿರುವುದಂತೂ ಸದ್ಯಕ್ಕೆ ಎದ್ದು ಕಾಣುವ ಸಂಗತಿ.

ಅತಿಯಾದ ಮಾಹಿತಿಯೂ ಅಪಾಯಕಾರಿ. ಯಾವ ಮಾಹಿತಿ ಯಾವಾಗ ಹೇಗೆ ಸಿಗಬೇಕು ಹಾಗೆ ಸಿಕ್ಕರೆ ಮಾತ್ರ ಅದು ಉಪಯೋಗಕ್ಕೆ ಬರುತ್ತದೆ. ಯಾವಾಗ ಜ್ಞಾನ ಎನ್ನುವುದು ಅಂಗೈ ಮಧ್ಯದಲಿ ಬಂದು ಕುಳಿತು ಬೆರಳ ತುದಿಗೆ ಸಿಕ್ಕಲು ಆರಂಭವಾಯಿತು ಆಗ ಯಾವುದು ಆವಶ್ಯಕ ಯಾವುದು ಅಲ್ಲ ಎನ್ನುವ ಸಾಮಾನ್ಯ ಜ್ಞಾನ ಮರೆಯಾಯಿತೇನೋ. ಇನ್ನೂ ಕಾನೂನಿನ ಪ್ರಕಾರ ಅಧಿಕೃತವಾಗಿ ಮೇಜರ್ ಎಂದು ಗುರುತಿಸಲ್ಪಡದ, ಬಾಲಾಪರಾಧಿಗಳು ಎಂದು ವರ್ಗಿಕರಿಸುವ ಹುಡುಗರ ಮನಸ್ಸಿನಲ್ಲಿ ಈ ಮಟ್ಟದ ಕ್ರೌರ್ಯ ಬಂದ್ದಿದ್ದು ಹೇಗೆ? ಸಣ್ಣ ಅಳುಕು, ಭಯ ಪಾಪಪ್ರಜ್ಞೆ ಕಾಡದೆ ಹೋಗಿದ್ದು ಯಾಕೆ? ಜೀವಂತವಾಗಿ ದಹಿಸುವ ಮಟ್ಟಿಗಿನ ಕಟುಕತನ ಬಂದಿದ್ದು ಹೇಗೆ? ಇದು ಕೇವಲ ಅವರಿಗೆ ಕೇಳಬೇಕಾದ ಪ್ರಶ್ನೆ ಖಂಡಿತ ಅಲ್ಲ ಇದು ಸಮಾಜಕ್ಕೆ, ನಮಗೆ ನಾವು ಕೇಳಿಕೊಳ್ಳಬೇಕಾಗಿರುವ ಪ್ರಶ್ನೆ.

ಮನುಷ್ಯ ಸಮಾಜಕ್ಕೆ ಬದ್ಧನಾಗಿರಲು ಹಾಗೂ ಸರಿ ದಾರಿಯಲ್ಲಿ ನಡೆಯಲು ಒಂದೋ ತಿಳುವಳಿಕೆ ಇರಬೇಕು ಇಲ್ಲವೇ ಭಯ ಇರಬೇಕು. ಸದ್ಯಕ್ಕೆ ತಿಳುವಳಿಕೆ ಕಡಿಮೆಯೇ. ಅದು ಬದುಕಿನ ದಾರಿಯಲ್ಲಿ ನಡೆಯುತ್ತಾ ನಡೆಯುತ್ತಾ ಗಳಿಸುವಂತದ್ದು. ಹಾಗೆ ಗಳಿಸುತ್ತಾ ಹೋಗುವ ದೀರ್ಘ ಪ್ರಕ್ರಿಯೆಯಲ್ಲಿ ದಾರಿತಪ್ಪದ ಹಾಗೆ ನೋಡಿಕೊಳ್ಳುವುದು ಭಯ. ಹಿರಿಯರ ಭಯ, ಕಾನೂನಿನ ಭಯ. ಸಮಾಜದ ಭಯ. ಹಿರಿಯರ ಭಯ ಎನ್ನುವುದು ವ್ಯಕ್ತಿ ಸ್ವಾತಂತ್ರದ ಹೆಸರಲ್ಲಿ ನಿಧಾನಕ್ಕೆ ಕಡಿಮೆಯಾಗುತ್ತಿರುವಾಗ, ಅರಿವಿನ ದಾರಿಯಲ್ಲಿ ಇನ್ನೂ ಹೆಜ್ಜೆ ಮುಂದಡಿಯಿಡುತ್ತಿರುವಾಗ ಬೇಕಾಗಿದ್ದು ಕಾನೂನಿನ ಭಯ. ಬಹುಶಃ ನಮ್ಮ ದೇಶದಲ್ಲಿ ಅದರ ಭಯವೂ ಕಡಿಮೆಯಾಗಿರುವುದೇ ಸದ್ಯದ ಎಲ್ಲಾ ಅನಾಹುತಗಳಿಗೂ ಕಾರಣವೇನೋ. ಯಾವುದನ್ನೂ ಬೇಕಾದರೂ ಕೊಳ್ಳಬಹುದು, ದಕ್ಕಿಸಕೊಳ್ಳಬಹುದು ಎನ್ನುವ ಮನಸ್ಥಿತಿ, ಅದಕ್ಕೆ ಸರಿಯಾಗಿ ಶಿಕ್ಷಿಸಿಕೊಳ್ಳುವುದಕ್ಕಿಂತ ತಪ್ಪಿಸಿಕೊಳ್ಳುವುದರ ಕಡೆಗೆ ಇರುವ ಅಸಂಖ್ಯ ದಾರಿಗಳು ಇವೆಲ್ಲಕ್ಕಿಂತ ಹೆಚ್ಚಾಗಿ ಇಂಥ ಕ್ರೌರ್ಯವನ್ನೂ ಜಾತಿಯ, ಧರ್ಮದ, ಸಿದ್ಧಾಂತದ ಅಥವಾ ರಾಜಕೀಯದ ಹೆಸರಿನಲ್ಲಿ ಸಮರ್ಥಿಸುವ ಜನಗಳು ಇರುವಾಗ ದಾರಿ ತಪ್ಪದಿರುವುದನ್ನು ನಿರೀಕ್ಷೆ ಮಾಡುವುದಾದರೂ ಹೇಗೆ?

ಮೊಳಕೆಯಲ್ಲಿಯೇ ಚಿವುಟದಿದ್ದರೆ ಇದನ್ನು ಹತ್ತಿಕ್ಕುವುದು ಸುಲಭವಲ್ಲ. ಭಯ ಹುಟ್ಟದೆ ತಕ್ಷಣಕ್ಕೆ ಯಾವುದೂ ನಿಯಂತ್ರಣಕ್ಕೆ ಸಿಗುವುದಿಲ್ಲ.  ಹಾಗಾಗಿ ಈಗ ಸದ್ಯಕ್ಕೆ ಬೇಕಾಗಿರುವುದು ಒಕ್ಕೊರಲಿನ ದನಿ. ಪ್ರತಿಭಟನೆಯ ಸ್ವರ. ಶಿಕ್ಷಿಸುವ ಒತ್ತಾಯ. ಅದಕ್ಕೊಂದು ಉಗ್ರ ಕಾನೂನು ಜಾರಿಗೆ ತರುವ ಹಾಗೆ ಮಾಡಬೇಕಾದ ಒಗ್ಗಟ್ಟು.  ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯತ್ವ. ದುರಂತವೆಂದರೆ ಜಗತ್ತಿನ ಅತಿ ದೊಡ್ಡ ಜಾತ್ಯಾತೀತ ದೇಶದಲ್ಲಿ ಪ್ರತಿಯೊಂದು ಜಾತಿಯ ಲೆಕ್ಕಾಚಾರದ ಮೇಲೆಯೇ ನಡೆಯುತ್ತದೆ. ಸತ್ತಿದ್ದು ಕೇವಲ ದೌರ್ಜನ್ಯಕ್ಕೆ ಸಿಲುಕಿದ ಜೀವ ಮಾತ್ರವಾ ಎಂದರೆ ಖಂಡಿತ ಅಲ್ಲ. ಸತ್ತಿದ್ದು ನೈತಿಕತೆ. ಸಾಯುತ್ತಿರುವುದು ನಮ್ಮೊಳಗಿನ ಮಾನವೀಯತೆ. ಗುಮ್ಮ ಊರ ಹೊರಗೆ ಬಂದಿದೆ. ಹೀಗೆ ಬಿಟ್ಟರೆ ಮನೆಯೊಳಗೇ ಬರಲು ಎಷ್ಟು ಹೊತ್ತು? ಇನ್ನಾದರೂ ದನಿ ಏಕವಾಗಬಹುದಾ... ಪ್ರಿಯಾಂಕಳಂತಹ ಅಮಾಯಕ ಜೀವಗಳ ಆತ್ಮಕ್ಕೆ ನೆಮ್ಮದಿ ಸಿಗಬಹುದಾ...
ಅಲ್ಲಿಯವರೆಗೆ  ಸದ್ಯಕ್ಕೆ ಇಂತ ಎನ್ಕೌಂಟರ್ ಗಳು ಭಯ ಹುಟ್ಟಿಸುವುದಾದರೆ ಹುಟ್ಟಿಸಲಿ, ಈ ಮೂಲಕವಾದರೂ ಬಲಿಷ್ಠ ಕಾನೂನು ಜಾರಿಗೆ ಬರಲಿ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...