ಉದಯವಾಣಿ.. 25.12.19

ಅಮ್ಮಾ ಎನ್ನುವ ಸ್ವರ ತೂರಿ ಬರುತ್ತಿದ್ದ ಹಾಗೆಯೇ ಬೆಚ್ಚಿಬಿದ್ದು ಮರುದಿನ ಬೆಳಿಗ್ಗೆ ಇಡ್ಲಿಗೆಂದು ನೆನಸಿಟ್ಟ ಉದ್ದನ್ನೇ ದಿಟ್ಟಿಸಿದೆ. ಮುಂದಿನ ಪ್ರಶ್ನೆ ಯಾವುದು ಎಂದು ಗೊತ್ತಿದ್ದರಿಂದ, ಉತ್ತರ ಸಿಕ್ಕ ಕೂಡಲೇ ಇನ್ನೊಂದು ಯುದ್ಧ ಶುರುವಾಗುವುದರಿಂದ ಅಪ್ರಯತ್ನವಾಗಿ ಮನಸ್ಸನ್ನು ಸಿದ್ಧಗೊಳಿಸುತ್ತಲೇ ಹೇಳು ಅಂದೇ.. ಬೇರೆ ಸಮಯದಲ್ಲಿ, ದಿನಗಳಲ್ಲಿ  ಮುದ್ದು ಉಕ್ಕುವ ಈ ಅಮ್ಮಾ ಎನ್ನುವ ಶಬ್ದ ಶಾಲೆಯಿದ್ದಾಗ ಮನೆಗೆ ಬಂದ ಕೂಡಲೇ ಕೇಳಿದರೆ ಇದೆ ಅವಸ್ಥೆ. ನಂತರದ ಪ್ರಶ್ನೆಯೇ ನಾಳೆ ಎಂತ ತಿಂಡಿ.. ಹೇಳಿದ ಕೂಡಲೇ ಯಾವಾಗಲೂ ಅದೇನಾ ಕದನಕ್ಕೆ ಕರೆ ಕೊಡುವ ಸ್ವರ... ನಂಗೆ ಬೇಡಾ ಕ್ಯಾಂಟೀನ್ ಅಲ್ಲಿ ತಿಂತೀನಿ ಧಮಕಿ.. ನನ್ನ ಪ್ರತ್ಯುತ್ತರ, ಕಾಳಗ, ಸಂಧಾನ ನಡೆಯುವ ಹೊತ್ತಿಗೆ ಮೈ ಮನವೆಲ್ಲಾ ಸುಸ್ತು.  ಆ ಭಯದಲ್ಲಿ ಅವಳತ್ತ ದಿಟ್ಟಿಸಿದರೆ ನಾಡಿದ್ದು ಕ್ರಿಸ್ಮಸ್ ಪಾರ್ಟಿ, ನಂಗೆ ಚಿಪ್ಸ್ ಹಾಗೂ ಕೇಕ್ ತಂದುಕೊಡು, ತಗೊಂಡು ಹೋಗ್ತೀನಿ ಎಂದಿನ ಕಿರಿಕಿರಿಯಿಲ್ಲದ, ಮುನಿಸಿಲ್ಲದ ಸಂಭ್ರಮದ ದನಿಯ ರಾಜಕುಮಾರಿ ಮುಖದಲ್ಲಿ ಮಂದಹಾಸ.. ನಡಿಗೆಯಲ್ಲಿ ಚಿಮ್ಮುವ ಉತ್ಸಾಹ. ಅಬ್ಬಾ ಬದುಕಿದೆಯಾ ಬಡ ಜೀವವೇ ಎಂದು ನಿಟ್ಟುಸಿರು ಬಿಡುತ್ತಾ ನಿರಾಳತೆಯಿಂದ ಉದ್ದಿನ ಬೇಳೆಯನ್ನು ಮಿಕ್ಷಿಗೆ ಹಾಕಿದೆ. ಇನ್ನೆರೆಡು ದಿನ ಕಳೆದರೆ ಮುಗಿಯಿತು ಆಮೇಲೆ ರಜಾ.. ಕವಿದಿದ್ದ ಕಾರ್ಮೋಡ ಕರಗಿ ಬಿಸಿಲಿನ ಕಿರಣವೊಂದು ಇಳಿದುಬಂದಂತೆ ಮನಸ್ಸು ಗರಿಗೆದರಿದ ನವಿಲು..

ಗಾಢ ನಿದ್ದೆಯಲ್ಲೂ ಬೆಳಗಾಯಿತೇನೋ ಲೇಟ್ ಆದರೆ ಅನ್ನುವ ಆತಂಕ. ಅಲಾರಂ ಅರಚಿಕೊಳ್ಳುತ್ತಿದ್ದ ಹಾಗೆ ಧಿಗ್ಗನೆದ್ದು ಅದರ ತಲೆಗೊಂದು ಮೊಟಕಿ ಪಕ್ಕಕ್ಕೆ ತಿರುಗಿ ಮಲಗಿರುವ ಕಂದನಿಗೆ ಎಚ್ಚರವಾಗಲಿಲ್ಲ ಎಂದಾದರೆ ಬೆಳಗು ಸಂಪನ್ನವಾಯಿತೆಂದು ಅರ್ಥ. ಅಲ್ಲಿಂದ ಶುರುವಾಗುವ ಗಡಿಯಾರ ದಿಟ್ಟಿಸುವ ಕೆಲಸ ಮತ್ತೆ ಮಲಗುವವರೆಗೂ ಮುಗಿಯುವುದೇ ಇಲ್ಲ. ಅದರ ಜೊತೆ ಜೊತೆಗೆ ಓಟ, ಧಾವಂತ. ಮುಖ ತೊಳೆದು ಅಡುಗೆಮನೆಗೆ ಬಂದರೆ ಗ್ಯಾಸ್ ಒಲೆಯ ನಾಲ್ಕು ಬರ್ನಾಲ್ ಗಳಿಗೂ ಬಿಡುವಿಲ್ಲದ ದುಡಿತ. ಅಲ್ಲಿ ಬೇಯಿಸುತ್ತಾ, ಹುರಿಯುತ್ತಾ ಕೈಗಳು ಗಡಿಬಿಡಿಯಲ್ಲಿರುವ ಹೊತ್ತಿಗೆ ಕಣ್ಣು ಗಡಿಯಾರದ ಮುಳ್ಳಿನ ವೇಗವನ್ನೂ ನೋಡುತ್ತಾ ಅದಕ್ಕೆ ಹೊಂದಿಕೊಳ್ಳುತ್ತಾ ಅಯ್ಯೋ ಟೈಮ್ ಆಗಿಯೇ ಹೋಯಿತಲ್ಲ ಎಂದು ರೂಮಿನ ಒಳಗೆ ಬಂದರೆ ಇಡೀ ರಜಾಯಿಯನ್ನು ಸುತ್ತಿಕೊಂಡು ಮುದುರಿ ಗುಬ್ಬಚ್ಚಿಯಂತೆ ಬೆಚ್ಚಗೆ ದೀರ್ಘ ನಿದ್ದೆಯಲ್ಲಿ ಮಲಗಿದ ಮಗಳ ಕಂಡಾಗ ಗಡಿಯಾರ, ಎಬ್ಬಿಸಲು ಬಂದ ನಾನು, ಸಮಯಕ್ಕೆ ಸರಿಯಾಗಿ ಬರುವ ಬಸ್, ಶಾಲೆ ಎಲ್ಲದರ ಮೇಲೂ ಕೋಪವುಕ್ಕಿ ಇಂತ ಚಳಿಯಲ್ಲೂ ಬೇಗನೆ ಎಬ್ಬಿಸುವ ಪರಿಸ್ಥಿತಿಯ ಬಗ್ಗೆ ಕ್ರೋಧ ಹುಟ್ಟುತ್ತದೆ. ಮನಸ್ಸು ವಿಲವಿಲ.

ಎಬ್ಬಿಸುವುದು ಇನ್ನೊಂದು ಹರಸಾಹಸದ ಕೆಲಸ. ಕಲಿತ ಬುದ್ಧಿಯೆಲ್ಲಾ ಖರ್ಚಾಗಿ, ಇರುವ ಸಹನೆಯೆಲ್ಲಾ ಮುಗಿದು ರೇಗಬೇಕು ಎನ್ನುವ ವೇಳೆಗೆ ಅಮ್ಮಾ ಇನ್ನೊಂದು ನಿಮಿಷ ಮುದ್ದು ಪ್ಲೀಸ್ ಎನ್ನುವ ದನಿ ಕೋಪಕ್ಕೆ ಬ್ರೇಕ್ ಹಾಕಿ ಆ ಜಾಗದಲ್ಲಿ ಕರುಣೆ ಹುಟ್ಟಿಸಿಬಿಡುತ್ತದೆ. ನೋಡು ಇನ್ನೆರೆಡು ದಿನ ಆಮೇಲೆ ಶನಿವಾರ ಪುಸಲಾಯಿಸುತ್ತಾ, ರಜೆಯ ಆಸೆ ಹುಟ್ಟಿಸುತ್ತಾ  ಒಂದು ನಿಮಿಷ ತಡವಾದರೂ ಅದನ್ನು ಸರಿಪಡಿಸಿಕೊಳ್ಳಲು ಬೇಕಾಗುವ ದುಪ್ಪಟ್ಟು ವೇಗ ಗೊತ್ತಿದ್ದರೂ ಒಂದೇ ನಿಮಿಷ ಅಷ್ಟೇ ಎನ್ನುತ್ತಾ ಮನಸ್ಸಿಲ್ಲದ ಮನಸ್ಸಿನಿಂದ ಎತ್ತಿ ಸ್ನಾನಕ್ಕೆ ಕಳುಹಿಸಿ ಬಂದರೆ ಮತ್ತೆ ಇನ್ನೆರೆಡು ಕೈ ಯಿದ್ದರೂ ಸಾಲದು ಅನ್ನಿಸುವಷ್ಟು ಕೆಲಸ. ಆ ಧಾವಂತದಲ್ಲಿ ಮುಳುಗಿರುವಾಗಲೇ ನನ್ನ ಯುನಿಫಾರ್ಮ್ ಎಲ್ಲಿ? ಕಾಣಿಸ್ತಾ ಇಲ್ಲಾ... ಕಾಣಿಸದಿರುವುದು ಯುನಿಫಾರ್ಮ್ ಅಥವಾ ಅಮ್ಮನೋ ಕೇಳುವ ಹಾಗಿಲ್ಲ. ತೆಗೆದು ಕೊಟ್ಟು ಅಡುಗೆ ಮನೆಯ ಬಾಗಿಲು ತಲುಪುವ ಮುನ್ನವೇ ಸಾಕ್ಸ್ ಎಲ್ಲಿ?  ಅದರ ಹಿಂದಿನ ಅರ್ಥ ಅಮ್ಮಾ ಬೇಕಿಲ್ಲಿ...

  ಏನು ತಿಂಡಿ ಅನ್ನುವ ವಿರೋಧದ ಸ್ವರ, ಲಂಚ್ ಏನು? ಪ್ರತಿಭಟನೆ ಮುಂದುವರಿಯುವ ಸೂಚನೆ, ಮುಖ ಸಿಂಡರಿಸುತ್ತಲೇ ಒಂದು ಹಾಕು ಸಾಕು ತಟ್ಟೆ ಬಡಿಯುವ ಸದ್ದು, ಅಲ್ಲಿಗೆ ಯುದ್ಧ ಘೋಷಣೆಯಾದಂತೆ. ಬೆಳಿಗ್ಗೆ ಎದ್ದು ಕಷ್ಟಪಟ್ಟು ಎರಡು ಮೂರೂ ತರಹ ಮಾಡಿದ್ರೂ ಗೋಳು ತಪ್ಪೊಲ್ಲ ಅಂತ ಸಿಡುಕತ್ತಲೇ ಡಬ್ಬಿ ರೆಡಿ ಮಾಡಿ, ಒಂದೇ ಉಸಿರಿನಲ್ಲಿ ತಲೆಬಾಚಲು ಬಂದರೆ ನಿಧಾನ ನೋಯುತ್ತೆ ಅಳುವಿನ ಸ್ವರ, ಅದು ಹೊರಡುವ ಸಂಕಟ ಎಂದು ಗೊತ್ತಿದ್ದರೂ ರೇಗಬೇಕು ಅನಿವಾರ್ಯ.   ಗಡಿಬಿಡಿಯಲ್ಲಿ ಶೂ ಹಾಕಿಸಿ ಗಡಿಯಾರ ನೋಡುತ್ತಲೇ ಅದರ ಮುಳ್ಳಿಗಿಂತ  ವೇಗವಾಗಿ ಓಡಿ ಸ್ಟಾಪ್ ನಲ್ಲಿ ನಿಂತು ಸದ್ಯ ಬಸ್ ಇನ್ನೂ ಬಂದಿಲ್ಲ ಎಂದು  ಉಸಿರುಬಿಟ್ಟರೂ ಅವಳು ಮುಖ ದುಮ್ಮಿಸಿರುವುದು ಮಾತ್ರ ಇಳಿದಿರುವುದಿಲ್ಲ. ಅದು ಬಿಟ್ಟು ಹೊರಡುವ ಸಂಕಷ್ಟ ಸಮಯ.

ಬಸ್ ಹತ್ತಿಸಿ ಕೂರುವ ಮುನ್ನ ಒಮ್ಮೆ ತಿರುಗಿ ನೋಡುವ ನೋಟ ಮಾತ್ರ ಇರಿದುಬಿಡುತ್ತದೆ. ಕರುಳ ಚೂರು ದೂರ ಹೋದ ಭಾವ. ಛೆ ಸುಮ್ಮನೆ ಬೈದುಬಿಟ್ಟೆ ಪಾಪ ಇಷ್ಟು ಬೆಳಿಗ್ಗೆ ಹೊರಡುವುದು ಅಷ್ಟು ಸುಲಭವಾ, ನಾವೋ ಆರಾಮಾಗಿ ಎದ್ದು ನಿಧಾನಕ್ಕೆ ತಿಂದು ಬಿಸಿಲು ಕಾಯಿಸುತ್ತಾ ಶಾಲೆಗೇ ಹೋಗುತ್ತಿದ್ದವರು ಹೇಗೆ ಗೊತ್ತಾಬೇಕು ಈ ಕಷ್ಟ ಅನ್ನುವ ಸಂಕಟ ಕಾಡಿ, ಕುಡಿಯುವ ಕಾಫಿಯೂ ಒಮ್ಮೊಮ್ಮೆ ಕಹಿ ಅನ್ನಿಸಿ ಯಾರಿಗೆ ಬೇಕು? ಯಾರು ಮಾಡಿದ್ರೋ ಈ ಶಾಲೆ ಅನ್ನೋದು ಅನ್ನುವ ಯೋಚನೆಯೂ ಕಾಡಿ ಹಿಂದೆಯೇ ಭಾವಾವೇಶಕ್ಕೆ  ನಗುವೂ.. ಯಾಕಿಷ್ಟು ಧಾವಂತ ವಿದ್ಯೆ ಕಲಿಯಲೇ ಬೇಕಲ್ಲ ಎಂದು ಸಮಾಧಾನಿಸಿಕೊಳ್ಳುವ ಹೊತ್ತಿಗೆ ಮರೆತುಹೋದ ನೀರಿನ ಬಾಟಲಿಯೋ, ಹಣ್ಣಿನ ಡಬ್ಬಿಯೋ ಕಂಡರೆ ಮುಗಿದೇ ಹೋಯಿತು ಮತ್ತೆ ಓಟ.. ಅವ್ಯಾವವೂ ಇಲ್ಲದ ಒಂದೊಂದು ದಿನ ಮನೆಯೊಳಗೇ ಬರುತ್ತಿದ್ದ ಹಾಗೇ ಫೋನ್ ಮೊರೆತ ಡ್ರೈವರ್ ಅಂಕಲ್ ಫೋನ್ ತೆಗೆದುಕೊಂಡು ಅಮ್ಮಾ ಪ್ರಾಜೆಕ್ಟ್ ಬಿಟ್ಟು ಬಂದೆ ಇವತ್ತು ಲಾಸ್ಟ ಡೇಟ್ ಪ್ಲೀಸ್...  ಅಯ್ಯೋ ಹತ್ತು ಸಲ ಹೇಳ್ದೆ ಎತ್ತಿಟ್ಟುಕೋ ಅಂತ ಗೊಣಗಿದರೆ ಕೇಳಿಸಿಕೊಳ್ಳಲು ಅವಳೆಲ್ಲಿ.. ಹೋಗಿ ಕೊಡುವುದಷ್ಟೇ ಉಳಿದಿರುವ ದಾರಿ... ಶಾಲೆಯಿರುವಷ್ಟು ದಿನ ಓಟ ತಪ್ಪಿದ್ದಲ್ಲ.

ಊಟದ ತುತ್ತು ಎತ್ತುವಾಗ ತಿಂದಿದ್ದಾಳೋ ಇಲ್ಲವೋ ಎನ್ನುವ ಯೋಚನೆ ಬಂದರೆ ಮುಗಿಯಿತು. ಗಂಟಲು ಮುಷ್ಕರ.. ಎಲ್ಲಿಗೂ ಹೋಗುವ ಹಾಗಿಲ್ಲ ಕಂದ ಬರುವ ಸಮಯ ಮನೆಯಲ್ಲಿ ಇರಬೇಕು ಬರುವಾಗ ಬಿಸಿಯಾಗಿ ಏನಾದರೂ ರೆಡಿ ಇರಬೇಕು. ನೀರು ಕುಡಿದಿದ್ದಾಳ, ಸಣ್ಣಗೆ ಸೀನುತ್ತಿದ್ದಳು ಸರಿ ಹೋಗಿರಬಹುದಾ, ಚಳಿ ತುಂಬಾ ಇದೆ ಜರ್ಕಿನ್ ಹಾಕಿರಬಹುದಾ,  ನಿನ್ನೆ ಜಗಳವಾಡಿದ ಸ್ನೇಹಿತರು ಇವತ್ತು ಮುನಿಸು ಮರೆತಿರಬಹುದಾ, ಗಡಿಯಾರದ ಟಿಕ್ ಟಿಕ್ ಸದ್ದಿನ ಹಾಗೆ ಚಲಿಸುವ ಪ್ರಶ್ನೆಗಳು ಅವಳು ಬರುವವರೆಗೂ ಮುಂದುವರೆಯುತ್ತಲೇ ಹೋಗುತ್ತದೆ. ಇಷ್ಟರ ನಡುವೆ ನಾಳೆ ಏನು ಮಾಡೋದು? ಬೆಳಿಗ್ಗೆ ಮಾಡಿದ್ದು ಮಧ್ಯಾನದ ಹೊತ್ತಿಗೆ ತಣ್ಣಗಾಗಿರುತ್ತೆ,  ಪಾಪ ಇಷ್ಟವಾಗದೆ ಹೋದರೆ ತಿನ್ನೋದು ಕಷ್ಟವಲ್ವಾ ಮನಸ್ಸು ತಕ್ಕಡಿ. ಅವಳಿಗೋ ಇಂದು ಇಷ್ಟವಾದದ್ದು ನಾಳೆ ಕಷ್ಟವಾಗುವ ರೋಲ್ ಕೋಸ್ಟರ್.

ಸಂಜೆ ಅವಳಿಗಿಂತ ಮೊದಲೇ ಹೊಸ್ತಿಲ ಒಳಗೆ ತೂರಿ ಬರುವ ತಿನ್ನೋಕೆ ಏನು  ಎನ್ನುವ ಪ್ರಶ್ನೆ. ಕಲಿಸಿ ಕೊಟ್ಟರೆ ತಿನ್ನುವ ಅವಳಿಗೆ ಆಡಲು ಹೋಗುವ ಯೋಚನೆಯಾದರೆ ನನಗೋ ಕೊಟ್ಟ ಹೋಂ ವರ್ಕ್ ಬಗ್ಗೆ ಚಿಂತೆ. ಅಷ್ಟರವರೆಗೆ ಶಾಲೆಯಲ್ಲಿ ಇದ್ದು ಬಂದವಳಿಗೆ ಹೋಂ ವರ್ಕ್ ಎಂದರೆ ಮೂಗಿನ ತುದಿಯಲ್ಲಿ ಅಗ್ನಿಪರ್ವತ. ನನಗೋ ಬಿಟ್ಟರೆ ಸಿಕ್ಕದು ಇದು ಎನ್ನುವ ಆತಂಕ. ಹಾಯಾಗಿ ಆಡಬೇಕಾದ ವಯಸ್ಸಿನಲ್ಲಿ ಉರು ಹೊಡೆಯುವ, ಬರೆಸುವ ಕೆಲಸ ಮಾಡಿಸಬೇಕಲ್ಲಾ ಎನ್ನುವ ಬೇಸರವಿದ್ದರೂ ತೋರಿಸಿಕೊಳ್ಳುವ ಹಾಗಿಲ್ಲ. ಒಂಚೂರು ಆಟ ಆಡಿ ಬರ್ತೀನಿ ಅದೇ ಓದು, ಅದೇ ಬರೀ ಎಷ್ಟು ಮಾಡೋದು ಅವಳು ದೂರ್ವಾಸ ಮುನಿ, ನಾನೋ ಕೈ ಮುಗಿದು ಬೇಡುವ ಶಾಪಗ್ರಸ್ತ ರಾಜಮಾತೆ. ಈ ಕಷ್ಟದಲ್ಲಿ ಓದಿ ಉದ್ಧಾರ ಆಗಬೇಕಾ ನನ್ನ ಮೇಲೆಯೇ ನನಗೆ ಸಿಟ್ಟು. ಆಡುವ ಕೂಸಿಗೆ ಸಮಯದ ಲಕ್ಷ್ಮಣ ರೇಖೆ ಎಳೆಯುವ ಬಗ್ಗೆ ಅಸಹನೆ. ಹಾಳಾದ ಈ ಶಾಲೆ ಮತ್ತದೇ ಹಳೆಯ ಗೊಣಗಾಟ. ಯಾವಾಗ ರಜೆ ಬರುತ್ತೋ ಕಣ್ಣು ಕ್ಯಾಲೆಂಡರ್ ಅತ್ತ. ಬೆರಳು ಲೆಕ್ಕ ಹಾಕುವುದರಲ್ಲಿ ಮಗ್ನ.

ಕೇಕೆ ಹಾಕಿ ಸ್ನೇಹಿತರ ಜೊತೆ ಆಡುವಾಗಲಾದರೂ ಈ ಗಡಿಯಾರ ನಿಧಾನಕ್ಕೆ ಹೋಗಬಾರದೆ ಅನ್ನಿಸುವಾಗಲೇ ಕರೆಯುವ ಅನಿವಾರ್ಯ. ಆಡೋಕೂ ಬಿಡಲ್ವಲ್ಲೇ ಎಂದರೂ ಬರುವ ವಿಧೇಯತೆ, ತನ್ನ ಕೆಲಸ ತಾನು ಮಾಡಿಕೊಳ್ಳುವ ಕ್ರಿಯಾಶೀಲತೆ, ಜಗಳವಾಡುತ್ತಲೇ ಬಂದು ಅಪ್ಪಿಕೊಳ್ಳುವ ಮುಗ್ಧತೆ ಕಂಡಾಗ ಶಾಲೆಯ ಬಗ್ಗೆ ಕೋಪ ಹುಟ್ಟುತ್ತದೆ. ಹೊತ್ತಿಗೆ ಮುಂಚೆ ಎದ್ದು ಹೊರಡಬೇಕಾದ ಅನಿವಾರ್ಯತೆ ಬಗ್ಗೆ ಸಿಡಿಮಿಡಿಯಾಗುತ್ತದೆ. ಇವೆಲ್ಲದರ ನಡುವೆ ನಾಳೆ ಏನು ಮಾಡೋದು ಎನ್ನುವ ಬೃಹತ್ ಸಮಸ್ಯೆ ಎದುರಾಗುತ್ತದೆ. ಓದಿನ ಅಗತ್ಯತೆ ಗೊತ್ತಿದ್ದರೂ ಅತಿಯಾದ ಸ್ಪರ್ದಾತ್ಮಕ ಮನೋಭಾವ, ಹೆಬ್ಬಾವಿನಂತೆ ಮಕ್ಕಳ ಸಮಯ ನುಂಗುವ,  ಅವರ ಆಟ, ಚಟುವಟಿಕೆ ನಿರ್ಬಂಧಿಸುವ ಬಗ್ಗೆ ಅಸಹನೆ ಹೆಚ್ಚುತ್ತದೆ. ಇವೆಲ್ಲದರ ನಡುವೆಯೂ ಚಾಚೂ ತಪ್ಪದೆ ಸಮಯದ ಪರಿಪಾಲನೆ ಮಾಡುತ್ತಾ ಶ್ರದ್ಧೆಯಿಂದ  ಅದನ್ನು ಪಾಲಿಸುವ ಮಕ್ಕಳ ಬಗ್ಗೆ ಹೆಮ್ಮೆಯೂ..

ಇವೆಲ್ಲಾ ಗೋಜಲುಗಳ ನಡುವೆಯೇ ಕ್ರಿಸ್ಮಸ್ ರಜೆ ಎನ್ನುವುದು ಮಳೆ ನಿಂತು ಹೋದಮೇಲೆ ಮೂಡಿದ ನೇಸರನ ಕಿರಣದ ಹಾಗೆ ಬೆಚ್ಚಗಿನ ಭಾವ ಕೊಡುತ್ತಿದೆ. ಇನ್ನೊಂದು ವಾರ ಗಡಿಯಾರದ ಮುಳ್ಳು ಹಿಂಬಾಲಿಸುವ ಕರ್ಮವಿಲ್ಲ, ಆಡುವ ಸಮಯಕ್ಕೆ ಲಕ್ಷ್ಮಣ ರೇಖೆ ಎಳೆಯುವ ಕೆಲಸವಿಲ್ಲ, ಬೆಚ್ಚಗೆ ಹೊದ್ದು ಮಲಗಿದವಳ ಬಲವಂತವಾಗಿ ಎಬ್ಬಿಸುವ ಅನಿವಾರ್ಯತೆಯಿಲ್ಲ,  ಇವೆಲ್ಲಕ್ಕಿಂತ ಹೆಚ್ಚಾಗಿ ನಾಳೆ ಏನು ಮಾಡುವುದು ಎಂಬ ಸಮಸ್ಯೆಯೇ ಇಲ್ಲ. ಡಬ್ಬಿ ಸಿದ್ಧ ಮಾಡುವ ತಲೆನೋವು ಸದ್ಯಕ್ಕಿಲ್ಲ, ಸ್ಕೂಲ್ ಬ್ಯಾಗ್ ಮುಟ್ಟುವ ಅವಶ್ಯಕತೆಯಿಲ್ಲ, ಹೋಂ ವರ್ಕ್ ಏನು ಚೆಕ್ ಮಾಡುವ ಸಂದರ್ಭವೇ ಇಲ್ಲ. ಉಸಿರು ಬಿಗಿ ಹಿಡಿದು ಓದುವ ಧಾವಂತ ಇಲ್ಲ. ನಿಧಾನಕ್ಕೆ, ನೆಮ್ಮದಿಯಾಗಿ ಬದುಕನ್ನ ಆಸ್ವಾದಿಸಬಹುದು. ಪುಟ್ಟ ದೇವತೆ ಖುಷಿ ಖುಷಿಯಾಗಿ ಇರಬಹುದು, ಸಹಜವಾಗಿ ಅರಳಬಹುದು, ಬೇಕಾದ್ದು ಕಲಿಯಬಹುದು, ಬೇಡವೆನಿಸಿದ್ದು ಬಿಡಬಹುದು. ತಬ್ಬಿ ಮಲಗಿದವಳನ್ನ ಇನ್ನಷ್ಟು ಮುದ್ದಿಸಬಹುದು, ಚಳಿಗೆ ಸೆಡ್ಡು ಹೊಡೆಯಬಹುದು,  ಎಷ್ಟೊಂದು ನಿರಾಳತೆ. ಎಂಥಾ ನೆಮ್ಮದಿ.. .

ಆ ಸಂಭ್ರಮದಲ್ಲಿ ಗಡಿಯಾರದತ್ತ ದೃಷ್ಟಿ ಹರಿಸಿದರೆ ಅದು ನಡೆಯುತ್ತಲೇ ಇತ್ತು. ಮನಸ್ಸು ಕನಸು ಕಾಣುತಿತ್ತು.. ರಾಜಕುಮಾರಿ ಖುಷಿಯಲ್ಲಿ ಕಳೆದುಹೊಗಿದ್ದಳು..  ಈ ವಿರಾಮ ಎಂಥಾ ಆರಾಮಾ....





Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...