ಚಂದ್ರವಳ್ಳಿಯ ಗುಹೆ
ಬೆಳಕಿಗೆ ಬೆನ್ನಾಗದೆ ಈ ಚಂದ್ರವಳ್ಳಿಯ ಗುಹೆ ತೆರೆದುಕೊಳ್ಳುವುದಿಲ್ಲ. ಅದರ ಬಗ್ಗೆ ಸಮಾಧಾನಕರವಾದ ಮಾಹಿತಿ ಸಿಕ್ಕದಿದ್ದರೂ ಮನಸ್ಸಿಗೆ ಸಂತೋಷ, ಬೆರಗು ತುಂಬಿದ್ದು ಮಾತ್ರ ನಿಜ. ತಲೆಬಾಗದ ಹೊರತು ಒಳಗೆ ಪ್ರವೇಶವಿಲ್ಲ. ಗುರುವಿಲ್ಲದೆ ಗುರಿದೊರಕದು ಅನ್ನುವಂತೆ ಗೈಡ್ ಇಲ್ಲದೆ ಇದರೊಳಗೆ ಸಾಗಲಾರೆವು. ಬೆಳಕಿಗೆ ಅಭ್ಯಾಸವಾದ ಕಣ್ಣು ದೇಹ ಕತ್ತಲಿಗೆ ತೆರೆದುಕೊಳ್ಳುತ್ತಿದ್ದಂತೆ ಮುಗ್ಗರಿಸುತ್ತದೆ. ಒಮ್ಮೆ ಅಭ್ಯಾಸವಾಯಿತೆಂದು ಕೊಳ್ಳಿ ಕತ್ತಲಿನಷ್ಟು ಹಿತ ಬೇರೊಂದಿಲ್ಲ. ಅಲ್ಲಿ ಬೆಳಕಿನ ಮೋಸ, ತಟವಟ, ಕ್ರೌರ್ಯ, ಪ್ರೀತಿ ಉಹೂ ಯಾವುದೂ ಕಾಣುವುದಿಲ್ಲ.ಬೆಳಕಿನಲ್ಲಿ ಮೋಸ ಹೋಗುವಷ್ಟು ಸುಲಭವಾಗಿ ಇಲ್ಲಿ ಏಮಾರಲ ಾಗುವುದಿಲ್ಲ . ಹಾಗಾಗಿ ಭಯವಿಲ್ಲ. ನಾವು ನಾವಾಗೇ ಇರಲು ಕತ್ತಲಿಗಿಂತ ಪ್ರಶಸ್ತ ಜಾಗ ಇನ್ಯಾವುದಿದೆ. ಆದರೆ ಇವೆಲ್ಲಾ ಸಾಧ್ಯವಾಗಬೇಕಾದರೆ ಕಣ್ಣಿಗೆ ಕತ್ತಲು ಅಭ್ಯಾಸವಾಗಬೇಕು. ತಡುವುತ್ತಾ, ಎಡುವುತ್ತಾ ಅಲ್ಲಲ್ಲಿ ಉಸಿರುಗಟ್ಟಿಸಿಕೊಳ್ಳುತ್ತಾ ಮುಂದೆ ಸಾಗಿದಷ್ಟೂ ಗುಹೆ ವಿಸ್ತಾರವಾಗಿ ತೆರೆದುಕೊಳ್ಳುತ್ತಲೇ ಹೋಗುತ್ತದೆ. ಕತ್ತಲಿಗೆ ಅಷ್ಟು ಸುಲಭವಾಗಿ ಹೊಂದದ ಬದುಕು ಮೊಬೈಲ್ ಬೆಳಕು ಬೇಡುತ್ತದೆ. ದಾರಿ ನಿಚ್ಚಳವಾದರೂ ಸುಲಭವಲ್ಲ. ಅಂಕು, ಡೊಂಕು ತಿರುವುಗಳು ಕಳೆದುಹೋಗುವ ಹಾಗೆ ಮಾಡುತ್ತದೆ.ಪ್ರತಿ ಹೆಜ್ಜೆಗೂ ಒಂದೊಂದು ರಹಸ್ಯವಿದೆಯೇನೋ ನಾವದನ್ನು ತುಳಿದು ಸಾಗುತ್ತಿದ್ದೆವೇನೋ ಅನ್ನೋ ಭಾವ. ಜಗತ್ತಿನ ಎಲ್ಲಾ ರಹಸ್ಯಗಳು ಹಾಗಿದ್ದಾಗಲೇ ಬದುಕು...