ಅಹಿಯ ಅಡುಗೆಯೂ, ಬೆಚ್ಚಿಬಿದ್ದ ಅಮ್ಮಳೂ

ಒಂದೊಂದು ಸಲ ಜಗತ್ತಿನ ಆಲಸ್ಯತನವೆಲ್ಲಾ ನನ್ನನ್ನೇ ಆವರಿಸಿಕೊಳ್ಳುವ ಹಾಗಾಗುತ್ತೆ. ಹಾಗಾದಗೆಲ್ಲ ಏನನ್ನೂ ಮಾಡಲು ಮನಸ್ಸಾಗದೇ ಸೋಮಾರಿತನವನ್ನೇ ಹೊದ್ದು ಮಲಗುತ್ತೇನೆ. ಅಂತಹದೊಂದು ಸೋಮಾರಿತನವನ್ನು ಹೊದ್ದು ಮಲಗುವ ಮುನ್ನ ಗಂಡನಿಗೆ ಫೋನ್ ಮಾಡಿ ಇವತ್ತು ಏನೂ ಮಾಡೋಲ್ಲ ಅಡುಗೆಯನ್ನೂ ಸಹ ಎಂದು ಘೋಷಿಸಿ ಕುಳಿತಿದ್ದೆ.
ಇನ್ನೂ ಮೂರು ವರ್ಷದ ಮಗು ಅಹಿ. ತನ್ನ ಪಾಡಿಗೆ ಏನನ್ನೋ ಅಲ್ಲೇ ಕುಳಿತು ಆಡುತ್ತಿದ್ದ ಮಗು ನನ್ನ ಮಾತು ಮುಗಿಯುತ್ತಿದ್ದಂತೆ ಅಲ್ಲಿಂದ ಎದ್ದು ಅಮ್ಮಾ ನಾನು ಅಗ್ಗೆ ಮಾತೀನಿ ಅಂತು. ಅವಳ ಕಿಚನ್ ಸೆಟ್ ಹಿಡಿದು ಗಂಟೆಗಟ್ಟಲೆ ಆಟ ಆಡುವುದಲ್ಲದೆ ನನಗೂ ಪುಟ್ಟ ಪ್ಲೇಟ್ ಒಂದು ಚಮಚ ಹಿಡಿದು ಬಂದು ಅಮ್ಮಾ ತಿನ್ನು ಅಂತ ಕೊಡೋದು ನಾನು ತಿನ್ನೋದು ಅಭ್ಯಾಸವಾಗಿದ್ದ ನಾನು ಅವಳ ಪಾಡಿಗೆ ಆಡಲಿ ಅಂತ ಹೂ ಅಂದೇ. ಹಾಗಂದು ಎಂಥ ತಪ್ಪು ಮಾಡಿದೆ ಅಂತ ಅರ್ಥವಾಗಿದ್ದು ಯಂಡಮೂರಿ ಅವರ ಪ್ರಕಾರ ಹೇಳುವುದಾದರೆ 30 ನಿಮಿಷ 20 ಸೆಕೆಂಡ್ ಕಳೆದ ಮೇಲೆಯೇ....
ಮಲಗಲು ಬೇಜಾರೆನಿಸಿ ಯಾವುದೋ ಬುಕ್ ಹಿಡಿದು ಕುಳಿತು ಹತ್ತೇ ನಿಮಿಷಕ್ಕೆ ಚೇರ್ ಎಳೆಯುವ ಸೌಂಡ್ ಕೇಳಿಸಿ ಕಂದಾ ಏನದು ಅಂದೇ ಅಲ್ಲೇ ಕೂತು. ಏನಿಲ್ಲ ಅಮ್ಮಾ ಅಂತು ಮುಗ್ಧವಾಗಿ. ಸರಿ ಮತ್ತೆ ಪುಸ್ತಕದಲ್ಲಿ ಮುಳುಗಿದೆ. ಸ್ವಲ್ಪ ಹೊತ್ತಿಗೆಲ್ಲಾ ಬಂದ ಕೂಸು ಅಮ್ಮಾ ಅಗ್ಗೆ ಮಾದಿದಿನಿ, ನೀನು ಆರಾಮಾಗಿರು ಅಂತು. ನಕ್ಕು ಅವಳ ಕೆನ್ನೆಗೆ ಮುತ್ತಿಟ್ಟವಳಿಗೆ ಕಾಫಿ ಕುಡಿದರೆ ಸ್ವಲ್ಪ ಸರಿಹೋಗಬಹುದು ಅಂತ ಒಲ್ಲದ ಮನಸ್ಸಿನಿಂದಲೇ ಎದ್ದು ಅಡುಗೆ ಮನೆಗೆ ಹೊರಟೆ.
ಆಗಷ್ಟೇ ಯುದ್ಧ ಮುಗಿದ ರಣಾಂಗಣವಾಗಿದ್ದ ಅಡುಗೆ ಮನೆಯನ್ನು ಕಂಡು ತಲೆಸುತ್ತಿ ಬೀಳುವುದರಲ್ಲಿ ಸುಧಾರಿಸಿಕೊಂಡು ಏನಾಯ್ತು ಅಂತ ಒಳಗೆ ಬಂದು ನೋಡಿದರೆ ಡಬ್ಬಗಳೆಲ್ಲಾ ಖಾಲಿಯಾಗಿ ಕುಳಿತಿದ್ದವು. ಫ್ರಿಡ್ಜ್ ನಲ್ಲಿದ್ದ ಹಾಲು ಹೊರಗೆ ಬಂದು ಅಮಾಯಕವಾಗಿ ಕುಳಿತಿತ್ತು. ಒಂದು ಕ್ಷಣ ಏನೂ ತೋಚದೆ ಕಂದಾ ಎಲ್ಲಿ ಅಗ್ಗೆ ಮಾಡಿದ್ದು ನೀನು ಅಂದೇ..
ಅಮ್ಮಾ ನಿಂಗೆ ಬೇಜಾರು ಅಂದ್ಯಲ್ಲ ಅದ್ಕೆ ನಾನೇ ಸಾರು ಮಾಡಿದೆ ಅಂತು. ಹೇಗೆ ಮಾಡಿದೆ ಕಂದಾ ಅಂದೇ.. ಅಮ್ಮಾ ಆ ಪಾತ್ರೆ ತಗೊಂಡು ನೀನು ಹಾಕ್ತಾ ಇದ್ದೆಯಲ್ಲ ಆ ಪುಡಿ ಹಾಕಿದೆ ಅಂತು ನೋಡಿದೆ ಅರ್ಧ ಕೆ.ಜಿ ಯಷ್ಟಿದ್ದ ಸಾಂಬಾರ್ ಪುಡಿ, ಕಾಫಿ ಪುಡಿ, ಸಕ್ಕರೆ, ಜೀರಿಗೆ, ಮೆಂತ್ಯೆ ಎಲ್ಲವನ್ನೂ ಪಾತ್ರೆಗೆ ಹಾಕಿ ಒಂದಷ್ಟು ನೀರು ಸುರಿದು ಅದನ್ನು ಕಲಕಿ ಹಾಳಾಗಬಾರದು ಅಂತ ಫ್ರಿಡ್ಜ್ ಅಲ್ಲಿಡಲು ಹೋಗಿ ಜಾಗ ಸಾಲದೇ ಅಲ್ಲಿದ್ದ ಹಾಲಿನ ಪಾತ್ರೆಯನ್ನು ಹೊರಗಿಟ್ಟು ಅದನ್ನು ಒಳಗಿಟ್ಟು ಒಂದು ಪ್ಲೇಟ್ ಕೂಡಾ ಮುಚ್ಚಿತ್ತು.
ಇಷ್ಟೆಲ್ಲಾ ಹೆಲ್ಪ್ ಮಾಡಿದರೂ ಅಮ್ಮನ ಮುಖ ಯಾಕೆ ಹೀಗೆ ಗರಬಡಿದವರ ತರಹ ಇದೆ ಅಂತ ಅದಕ್ಕೆ ಕೊನೆಗೂ ಅರ್ಥವಾಗಲೇ ಇಲ್ಲಾ..

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...