ಚಕ್ರೇಶ್ವರಿ

ಸಂಜೆ ಅಹಿಯನ್ನು ಯೋಗ ಕ್ಲಾಸ್ ಗೆ ಬಿಟ್ಟ ಮೇಲೆ ಅವಳು ಬರುವ ತನಕ ಏನ್ಮಾಡೋದು ಅಂತ ಯೋಚಿಸುತ್ತಾ ಮೆಟ್ಟಿಲ ಮೇಲೆ ಕುಳಿತವಳನ್ನು ನೋಡಿದ ಸೆಕ್ಯೂರಿಟಿ ಮೇಡಂ ಇಲ್ಲಿ ತುಂಬಾ ಸೊಳ್ಳೆ ಇದೆ ಒಳಗೆ ಚೇರ್ ಹಾಕಿ ಫ್ಯಾನ್ ಹಾಕಿದಿನಿ ಅಲ್ಲೇ ಕುಳಿತುಕೊಳ್ಳಿ ಅಂದ್ರು. ಅವರಿಗೊಂದು ಕೃತಜ್ಞತೆಯ ಮುಗುಳ್ನಗೆ ಹರಿಸಿ ಒಳಗೆ ಹೋಗಿ ಕುಳಿತವಳು ಚಕ್ರೇಶ್ವರಿಯನ್ನು ಕೈಗೆತ್ತಿಕೊಂಡೆ. ಕೊನೆಯ ಪುಟ ಮಗಚಿ ತಲೆಯೆತ್ತುವ ವೇಳೆಗೆ ಅಹಿ ಬಂದು ಕೊರಳು ತಬ್ಬಿದ್ದಳು.
ಶ್ರೀಚಕ್ರ ಆರಾಧನೆಯ ಮಹತ್ವವನ್ನು ಸಾರುವ ಈ ಕಾದಂಬರಿ ಒಂದೇ ಉಸಿರಿಗೆ ಓದಿಸಿಕೊಂಡು ಹೋಗುತ್ತದೆ. ಚಕ್ರದ ಆವರಣದೊಳಗೆ ನಮ್ಮನ್ನೂ ಸೆಳೆದುಕೊಳ್ಳುತ್ತಾ, ಅಲ್ಲಲ್ಲಿ ಮೈ ನವಿರೇಳುವಂತೆ ಮಾಡುತ್ತಾ, ಉಸಿರು ಬಿಗಿಹಿಡಿಯುವಂತೆ , ಕಣ್ಣಿರು ಅಭಿಷೇಕ ಮಾಡುವಂತೆ ಒಂದು ಭಾವಸಾಗರದಲ್ಲಿ ತೇಲಿಸುತ್ತಾ ದಡ ತಲುಪಿಸುತ್ತದೆ. ಒಂದು ಸುಧೀರ್ಘ ಪಯಣ ಮುಗಿಸಿಬಂದ ಆಯಾಸ, ಹೊಸ ಹುಮ್ಮಸ್ಸು, ಏನೋ ಅರಿಯದ ಭಾವತೀವ್ರತೆ ಕಾಡುತ್ತದೆ.
ಶ್ರೀಚಕ್ರ ತಾನೇ ತಾನಾಗಿ ಬರಬೇಕೆ ಹೊರತು ಕೇಳಿಪಡೆಯುವಂತಿಲ್ಲ ಅನ್ನೋದನ್ನು ಚಿಕ್ಕಂದಿನಿಂದ ಕೇಳಿದ್ದೇ. ತಾಯಿ ಒಲಿದರೆ ಕರುಣಾಸಾಗರಿ, ಇಲ್ಲವಾದರೆ ಪ್ರಳಯ ಭಯನ್ಕರಿ ಅಂತ ಲಲಿತಾ ಸಹಸ್ರನಾಮ ಪುಸ್ತಕ ಕೈ ಗೆತ್ತಿಕೊಂಡಾಗ ಹಿರಿಯರೊಬ್ಬರು ಎಚ್ಚರಿಸಿದ್ದರು. ಅವತ್ತು ಕುತೂಹಲ, ಆಶ್ಚರ್ಯ ಎರಡೂ ಆಗಿತ್ತು. ಪ್ರಶ್ನಿಸಲು ಭಯವೂ. ನಂತರ ಬದುಕಿನೊಂದಿಗೆ ಸಮೀಕರಿಸಿಕೊಂಡಾಗ ಅರ್ಥವಾಗಿತ್ತು. ಯಾವುದೇ ಆಗಲಿ ಕೇಳಿ ಪಡೆಯಬಾರದು. ಬಲವಂತವಾಗಿ ಪಡೆದದ್ದು ನೆಮ್ಮದಿ ಕೊಡುವುದಿಲ್ಲ, ಅವಮಾನ ತಡೆಯಲಾಗುವುದಿಲ್ಲ. ಹಾಗಾಗಿ ತಾನಾಗಿ ಬಂದಿದ್ದಷ್ಟೇ ಪಾಲಿಗೆ ದಕ್ಕೋದು ಅಂತ.
ಅಧ್ಯಾತ್ಮ ಅನ್ನೋದು ಕೇವಲ ಗುರುವಷ್ಟೇ ತೋರಿಸಬಲ್ಲ ಹಾದಿ. ಅವರಿಲ್ಲದೆ ಹೋದರೆ ಗುರಿ ತಪ್ಪುವುದಷ್ಟೇ ಅಲ್ಲ ಬದುಕಿನ ಹಳಿಯೂ ತಪ್ಪುತ್ತದೆ. ಹಣ್ಣು ತಾನಾಗಿ ಮಾಗಿದರಷ್ಟೇ ರುಚಿ, ಆರೋಗ್ಯಕ್ಕೂ ಹಿತಕರ. ಕಾಲಕ್ಕೆ ಮೊದಲೇ ಹಣ್ಣು ಮಾಡಲು ಹೊರಟರೆ ಹಣ್ಣು ರುಚಿಸುವುದಿಲ್ಲ ಮಾತ್ರವಲ್ಲ ಬದುಕಿಗೂ ಹಾನಿಕರ.ಓದುತ್ತಾ ಅರ್ಥಮಾಡಿಕೊಳ್ಳುತ್ತಾ ಹೋದಂತೆ ಅಧ್ಯಾತ್ಮ ಬೇರೆ ಬದುಕು ಬೇರೆ ಅನ್ನಿಸುವುದೇ ಇಲ್ಲಾ..
ಪ್ರಶ್ನೆ ಕೇಳಬೇಕು ಎನಿಸಿದಾಗ ಕೇಳಿ, ಅದರ ತಂಟೆ ಬಗೆಹರಿಸಿಕೊಂಡು ಬಿಡಬೇಕು. ಇಲ್ಲದೆ ಹೋದರೆ ಮನಸ್ಸಿನಲ್ಲಿಯೇ ಉಳಿದ ಪ್ರಶ್ನೆ ಹೊಟ್ಟೆಯೊಳಗೆ ಉಳಿದ ಜ್ವರ ಹಾಗೆ ಬೇರಾವುದೋ ಕಾಲದಲ್ಲಿ ವಿಷಮಿಸಿಬಿಡಬಹುದು . ಆದ್ದರಿಂದ ಅದಕ್ಕೆ ಅವಕಾಶವನ್ನೇ ಕೊಡಬಾರದು ಅನ್ನುವ ವಿದ್ಯಾಶಾಸ್ತ್ರಿಗಳ ಮಾತು ಮತ್ತೆ ಮತ್ತೆ ಧ್ಯಾನಿಸುತ್ತಿದ್ದೇನೆ. ಒಮ್ಮೆ ಮಾತಿನ ಸಂದರ್ಭದಲ್ಲಿ ಅಣ್ಣ ಇದನ್ನೇ ಹೇಳುತ್ತಿದ್ದ. ಸಂಬಂಧಗಳು ಹಾದಿ ತಪ್ಪುತ್ತಿದೆ ಎಂದು ತಿಳಿದಾಗ ಅನೇಕ ಪ್ರಶ್ನೆ ಮನಸ್ಸಿನಲ್ಲಿ ಬರುತ್ತೆ ಆದ್ರೆ ತಮಾಷೆ ಏನು ಗೊತ್ತಾ ನಾವು ಅದನ್ನ ಕೇಳುವ ಗೋಜಿಗೆ ಹೋಗುವುದೇ ಇಲ್ಲಾ. ಅಹಂ ಅಡ್ಡ ಬರುತ್ತೆ. ಆ ಅಹಂ ವಿಷವಾಗಿ ಸಂಬಂಧವನ್ನು ಸಾಯಿಸುತ್ತೆ.
ಬಗೆಹರಿಸಿ ಕೊಳ್ಳುವುದು ಅಷ್ಟು ಸುಲಭವೇ ಆಲೋಚಿಸುತ್ತಲೇ ಇದ್ದೇನೆ......

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...