ಸೇಡು ತೀರಿಸಿಕೊಂಡ ಎಕ್ಷಾಮ್

ಏನೇ ಮಾಡಿದರೂ ಈ ಲೇಟ್ ಆಗೋದು ಮಾತ್ರ ತಪ್ಪೊಲ್ಲ ಅಂತ ಗೊಣಗಾಡುತ್ತಲೇ ರೆಡಿ ಆಗಿ ಒಂದೇ ಉಸಿರಿಗೆ ಎಕ್ಷಾಮ್ ಹಾಲಿಗೆ ಓಡಿಹೋಗಿ ಗಡಿಬಿಡಿಯಲ್ಲಿ ಸೀಟ್ ಹುಡುಕಿ ಕೂತಾಗ ಏನೋ ಸಾಧಿಸಿದ ನೆಮ್ಮದಿಯೆನಿಸಿತ್ತು. ಉಫ್ ಎಂದು ಉಸಿರು ಬಿಟ್ಟು ನಿರಾಳವಾಗುವಾಗಲೇ ಕ್ವೆಶ್ಚನ್ ಪೇಪರ್ ಹಂಚಲು ಶುರುವಾಗಿತ್ತು. ಒಂದು ರೀತಿಯ ನಿರ್ಲಕ್ಷದಲ್ಲೇ ಪೇಪರ್ ತೆಗೆದುಕೊಂಡು ನೋಡಿದವಳಿಗೆ ಜೋರು ನಗು....
ಹಂಚುತ್ತಿದ್ದ ಸರ್ ಅನ್ನು ಕರೆದು ಇದೆನ್ಸಾರ್ ಕನ್ಫ್ಯೂಷನ್ ಮಾಡ್ಕೊಂಡ್ರಾ, ಸೈನ್ಸ್ ಎಕ್ಷಾಮ್ ನಾಳೆ ನೀವು ಇವತ್ತೇ ಕೊಡ್ತಾ ಇದಿರಲ್ಲ ಅಂದೇ. ಒಮ್ಮೆ ಮೇಲಿನಿಂದ ಕೆಳಗಿನವರೆಗೆ ಗುರುಗುಡುತ್ತಾ ನೋಡಿದ ಅವರು ಒಂದ್ಸಲ ಟೈಮ್ ಟೇಬಲ್ ಚೆಕ್ ಮಾಡ್ಕೋ ಕನ್ಫ್ಯೂಷನ್ ಆಗಿದ್ದು ಯಾರು ಅಂತ ಗೊತ್ತಾಗುತ್ತೆ ಅಂತ ಮತ್ತೊಮ್ಮೆ ಕೆಂಗಣ್ಣು ಬಿಟ್ಟು ಮುಂದೆ ಹೋದರು. ಮಾಥ್ಸ್ ಅಂತ ಅಂದ್ಕೊಂಡ್ ಬಂದಿದ್ದ ನನ್ನ ಪರಿಸ್ಥಿತಿ ಇಂಗುತಿಂದ ಮಂಗನಂತಾಗಿತ್ತು.
ಮತ್ತದೇ ಕೇರ್ಲೆಸ್ ಭಾವದಲ್ಲಿ ಏನೋ ಒಂದು ಬರೆದರಾಯ್ತು ಅಂತ ನೋಡಿದ್ರೆ ಯಾವತ್ತೂ ಕೇಳದ, ಕಾಣದ ಪ್ರಶ್ನೆಗಳು ಮುದ್ದಾಗಿ ಸಾಲಾಗಿ ಕೂತಿದ್ದವು. ಓ ದೇವ್ರೇ ಇದೆಂತ ಸಂಕಷ್ಟ ಪರಿಸ್ಥಿತಿ ತಂದಿಟ್ಟೆ ಕೊನೆಪಕ್ಷ ಒಂದು ಪ್ರಶ್ನೆಗಾದರೂ ಉತ್ತರ ಗೊತ್ತಿರುವುದು ಬೇಡವಾ.. ಜೀವನದಲ್ಲಿ ಇಂದಿನವರೆಗೆ ಕೈಯಲ್ಲೂ ಮುಟ್ಟದ ಕೋಳಿಮೊಟ್ಟೆ ಪಡೆದುಕೊಳ್ಳುವ ಹಾಗೆ ಮಾಡಿದೆಯಲ್ಲ ಎಂದು ಅವನನ್ನು ಬೈದುಕೊಳ್ಳುತ್ತಾ ಗಾಬರಿ, ಆತಂಕದಲ್ಲಿ ದಡಕ್ಕನೆ ಮೇಲಕ್ಕೆದ್ದೆ.
ನಾನೆದ್ದ ರಭಸಕ್ಕೆ ಹಾಯಾಗಿ ಹೊಟ್ಟೆಯ ಮೇಲೆ ಮಲಗಿ ನಿದ್ದೆ ಹೋಗುತ್ತಿದ್ದ ಅಹಿ ಉರಳಿ ದಡಕ್ಕನೆ ಹಾಸಿಗೆಯ ಮೇಲೆ ಬಿದ್ದಳು. ಬಿದ್ದ ಏಟಿಗೆ ಎಚ್ಚರವಾದ ಅವಳು ಅರ್ಥ್ಕ್ವೇಕ್ ಆಯ್ತಾ ಅಂತ ಕಣ್ಣುಜ್ಜಿಕೊಂಡು ಗಾಬರಿಯಿಂದ ಕುಳಿತಿದ್ದ ನನ್ನ ನೋಡಿ ಏನಾಯ್ತಮ್ಮ ಅಂತು. ಅಷ್ಟೊತ್ತಿಗೆ ಇಹಲೋಕಕ್ಕೆ ಬಂದು ಸುಧಾರಿಸಿಕೊಂಡ ನಾನು ಏನೂ ಇಲ್ಲ ಕಣೆ ಕಂದ ಕನಸುಬಿದ್ದಿತ್ತು, ಎಕ್ಷಾಮ್ ಗೆ ಓದದೆ ಹೋದಹಾಗೆ ಅಂತ ಹೇಳಿ ನಗಲು ಶುರುಮಾಡಿದೆ. ಇದಕ್ಕೂ ಎರಡು ದಿನ ಮುಂಚೆ ನಡು ರಾತ್ರಿಯಲ್ಲಿ ಎಚ್ಚರವಾದಾಗ ಇದ್ದಕ್ಕಿದ್ದಂತೆ ಭಾರ್ಥಕ್ಕ ನ ಮೆಟ್ಟಿಲುಗಳ ಸ್ಟೇಟಸ್ ನೆನಪಾಗಿ ತಡೆಯಲಾಗದೆ ಜೋರಾಗಿ ನಕ್ಕು ಪಕ್ಕದಲ್ಲಿ ನಿದ್ರಿಸುತ್ತಿದ್ದ ಅವಳಿಗೆ ಎಚ್ಚರವಾಗಿ ಬೈಸಿಕೊಂಡಿದ್ದೆ.
ನಿದ್ದೆ ಹಾಳಾದ ಸಿಟ್ಟಿನಲ್ಲಿದ್ದ ಅವಳಿಗೆ ನನ್ನ ನಗುವಿನಿಂದ ಇನ್ನಷ್ಟು ಕಿರಿಕಿರಿಯಾಗಿ ಅಮ್ಮಾ ಈ ಫೇಸ್ಬುಕ್ಗೆ ಸೇರ್ಕೊಂಡ್ ಪೂರಾ ಹಾಳಾಗಿ ಹೋಗಿದ್ದಿ, ಹೊತ್ತಿಲ್ಲ ಗೊತ್ತಿಲ್ಲ ಒಳ್ಳೆ ಮೆಂಟಲ್ ತರಹ ಆಡ್ತಿಯಾ, ಈಗ ಸುಮ್ನೆ ಬಿದ್ಕೋ ನನ್ನ ನಿದ್ದೆ ಕೆಡಿಸಬೇಡ, ಬೆಳಿಗ್ಗೆ ಎದ್ದವಳೇ ಅಪ್ಪಂಗೆ ಮೊದ್ಲು ವೈಫೈ ಕಟ್ ಮಾಡ್ಸು ಅಂತೀನಿ. ನಿನಗೇನು ಹೇಳು ನಾನು ಸ್ಕೂಲ್ಗೆ ಹೋಗ್ಬೇಕು ಅಂತ ಬೈದು ಯಥಾಪ್ರಕಾರ ಹೊಟ್ಟೆಯಮೇಲೆ ಹತ್ತಿ ತನ್ನ ಕೈಯಿಂದ ನನ್ನ ಬಾಯಿ ಮುಚ್ಚಿ ಮಲಗಿದ್ಲು.
ಆಗ ನಿರ್ಲಕ್ಷ್ಯ ಮಾಡಿದ್ದನ್ನೇ ಇಷ್ಟು ಸೀರಿಯಸ್ ಆಗಿ ತಗೊಂಡ್ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಇಷ್ಟುದಿನ ಕಾದು ಈಗ ಯಶಸ್ವಿಯಾದ ಆ ಎಕ್ಷಾಮ್ ಅನ್ನು ಬೈಯುತ್ತಾ ನಾನೂ ಮಲಗಿದೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...