ನಂಬಿಕೆಯೂ ಗರಿಕೆಯ ಮಾಲೆಯೂ

ಪ್ರತಿದಿನ ಗರಿಕೆಯನ್ನು ಕೂಯ್ದು ಮಾಲೆ ಕಟ್ಟಿ ಗಣಪತಿಗೆ ಹಾಕುವುದು ಜಯತ್ತೆಯ ದೈನಂದಿನ ಕಾಯಕಗಳಲ್ಲಿ ಒಂದು. ಸಮಯ ಬದಲಾದರೂ ಕೆಲಸ ಮಾತ್ರ ಬದಲಾಗುತ್ತಿರಲಿಲ್ಲ. ಅದನ್ನೊಂದು ವ್ರತದಂತೆ ಶ್ರದ್ಧೆಯಿಂದ ಪಾಲಿಸುತ್ತಿದ್ದರು. ಎಲ್ಲೆಲ್ಲೋ ಹುಡುಕಿ ಕೊನೆಗೆ ಒಂದು ಮುಷ್ಟಿಯಷ್ಟಾದರೂ  ಗರಿಕೆ ಕುಯಿದು ಸಂತೃಪ್ತಿಯಿಂದ ಮನೆಯ ಕಡೆ ನಡೆಯುತ್ತಿದ್ದರು. ಕೆಲವೊಮ್ಮೆ ಅವರ ಜೊತೆ ನಾವೂ ಸೇರುವುದು ಉಂಟು. ತೀರಾ ಬೇಸಿಗೆಯಲ್ಲಿ ನೀರಿಲ್ಲದೆ ಗರಿಕೆಯೂ ಒರಟಾಗುತ್ತಿತ್ತು. ಒಂದು ದಿನ ಹೀಗೆ ಗರಿಕೆಯನ್ನು ಕಟ್ಟುತ್ತಿರುವಾಗ ಪಾಪ ಎಷ್ಟೊಂದು ಬಿರುಸಾಗಿದೆ ಚುಚ್ಚುತ್ತೋ ಏನೋ ಗಣಪತಿಗೆ ಒಂದು ಮಳೆಯಾದರೂ ಬರಬಾರದ ಅನ್ನುತ್ತಾ ಅವರು ಕಟ್ಟುವುದರಲ್ಲಿ ಮಗ್ನರಾಗಿದ್ದರೆ ನಾವು ಮುಸಿ ಮುಸಿ ನಗುತ್ತಾ ಹೌದೌದು ಎನ್ನುತ್ತಿದ್ದೆವು.
ಅಹಂ ಬ್ರಹ್ಮಾಸ್ಮಿ ಅನ್ನುವ ಎರಡು ಪದಗಳ ಸಾಲು ಹೇಳೋದು ತುಂಬಾ ಸುಲಭ. ಅರ್ಥವೂ ಸರಳ. ಬದುಕಿನ ರೀತಿಯೇ ವಿಚಿತ್ರ, ಇಲ್ಲಿ ಅರ್ಥವಾಗಿರುವುದೆಲ್ಲಾ ಅನುಭವಕ್ಕೆ ದಕ್ಕಿರುವುದಿಲ್ಲ. ಅನುಭವಕ್ಕೆ ದಕ್ಕಿದಷ್ಟೇ ಸತ್ಯ. ಹಾಗಂತ ಉಳಿದೆದ್ದೆಲ್ಲಾ ಮಿಥ್ಯವಲ್ಲ.  ಇಲ್ಲಿ ಪ್ರತಿಯೊಂದು ಜೀವಿಯ ಅನುಭವವೂ ವಿಭಿನ್ನ. ಒಬ್ಬರ ಅನುಭವ ಇನ್ನೊಬ್ಬರದು ಆಗಿರಲೇ ಬೇಕೆಂದಿಲ್ಲ ಆಗಿರುವುದೂ ಇಲ್ಲ. ಸೂಕ್ಷ್ಮವಾದ ವ್ಯತ್ಯಾಸವನ್ನು ಅರಿಯುವ ಶಕ್ತಿ ನಮಗಿದ್ದಾಗ ಮಾತ್ರ ಇದು ಅರಿವಾಗಲು ಸಾದ್ಯ.
ಪ್ರತಿ ನಂಬಿಕೆಗೂ ಒಂದು ಕಾರಣವಿರುತ್ತದೆ. ಅಸಲಿಗೆ ಕಾರಣವಿಲ್ಲದೆ ಇಲ್ಲಿ ಯಾವುದೂ ಘಟಿಸುವುದಿಲ್ಲ. ಆ ಕಾರಣಗಳಿಗೆ ಒಂದು ಹಿನ್ನಲೆ ಇರಬೇಕು ಎಂದು ಬಯಸುವುದು ಅದು ಅರ್ಥವಾಗಬೇಕು ಎಂದುಕೊಳ್ಳುವುದು ಮೂರ್ಖತನವೆನಿಸುತ್ತದೆ. ಬರಿಗಣ್ಣಿಗೆ ಕಾಣದ ಎಷ್ಟೋ ಜೀವಿಗಳು ಸೂಕ್ಷ್ಮ ದರ್ಶಕ ಯಂತ್ರದ ಮೂಲಕ ಕಾಣಿಸುತ್ತವೆ. ಸೂಕ್ಷ್ಮದರ್ಶಕವಿಲ್ಲವೆಂದರೆ ಜೀವಿಗಳೂ ಇಲ್ಲವೆನ್ನಲು ಸಾದ್ಯವೇ. ಜಗತ್ತು ಕಣಗಳಿಂದ ನಿರ್ಮಾಣವಾಗಿದೆ ಅನ್ನೋದು ವೈಜ್ಞಾನಿಕವಾಗಿ ಸಾಬೀತಾಗಿರೋ ಸತ್ಯ.  ಅ ಕಣಗಳ ನಡುವೆ ಒಂದು ಹೊಂದಾಣಿಕೆಯಿದೆ ಅನ್ನೋದೂ ಅಷ್ಟೇ ಸತ್ಯ. ಹೊಂದಾಣಿಕೆಯಿರಬೇಕಾದರೆ ನಂಬಿಕೆಯಿರಬೇಕು. ಹಾಗಾಗಿ ನಂಬಿಕೆಯೆನ್ನುವುದು ಅಡಿಪಾಯ. ಅದೆಷ್ಟು ಭದ್ರವಾಗಿದೆ ಎನ್ನುವುದರ ಮೇಲೆ ಬದುಕಿನ ಗಟ್ಟಿತನ ನಿಂತಿರುತ್ತದೆ.
ಹಾಗಾಗಿಯೇ ಬದುಕಿನ ಪ್ರತಿ ಹಂತದಲ್ಲೂ ನಂಬಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಆ ನಂಬಿಕೆಗಳು ಸಾಮಾಜಿಕವಾಗಿ ರೂಪುಗೊಂಡೂ ಇಲ್ಲವೇ ತಲೆಮಾರುಗಳಿಂದ ಹರಿದುಬಂದಿದ್ದೋ ಅಥವಾ ವೈಯುಕ್ತಿಕ ಅನುಭವಗಳಿಂದಲೋ ಬಂದಿದ್ದಾಗಿರುತ್ತದೆ. ಹಲವಾರು ಹಳ್ಳಗಳು, ತೊರೆಗಳು, ಝರಿಗಳು ಸೇರಿ ಆದ ನದಿಯಂತೆ ನಂಬಿಕೆಗಳು ರೂಪ ತಾಳಿರುತ್ತದೆ. ಬದುಕನ್ನ ಜೀವಂತವಾಗಿರಿಸಲು ಅಪಾರವಾದ ಕೊಡುಗೆಯನ್ನು ನೀಡುತ್ತದೆ.
ಸಂಕಷ್ಟಗಳ ಪ್ರವಾಹ ಎದುರಾದಾಗ ಬದುಕು ಕೊಚ್ಚಿಕೊಂಡು ಹೋಗುವ ಸಂದರ್ಭ ಬಂದಾಗ ಈ ನಂಬಿಕೆಗಳು ಹುಲ್ಲುಕಡ್ಡಿಯಂತೆ ಆಸರೆಯಾಗುತ್ತದೆ. ಮತ್ತೆ ದಡಸೇರುವ ಆಸೆಯ ಕಿಡಿಯನ್ನು ಹೊತ್ತಿಸುತ್ತದೆ. ಎಲ್ಲವನ್ನು ಎದುರಿಸುವ ಸ್ಥೈರ್ಯ ಕೊಡುವುದರ ಜೊತೆಗೆ ಅನುಭವಿಸುವ ಧೃಡತೆಯನ್ನು ಕೊಡುತ್ತದೆ. ಮನಸ್ಸನ್ನು  ಹದಗೊಳಿಸುತ್ತದೆ.   ಬದುಕು ಪರಿಪಕ್ವವಾಗುವಂತೆ ಮಾಡುತ್ತದೆ.
ಹಾಗಾಗಿಯೇ ಯಾವತ್ತೂ ಇನ್ನೊಬ್ಬರ ನಂಬಿಕೆಯನ್ನು ಖಂಡಿಸಬಾರದು, ಅಪಹಾಸ್ಯ ಮಾಡಬಾರದು. ಯಾವುದೋ ಆಚರಣೆಯಿಂದ, ಮತ್ಯಾವುದೋ ನಂಬಿಕೆಯಿಂದ ಅವರಿಗೆ ನೆಮ್ಮದಿ ದೊರಕುತ್ತದೆ ಎಂದಾದರೆ, ಅದರಿಂದ ಬೇರೆಯವರಿಗೆ ತೊಂದರೆಯಿಲ್ಲ ಎಂದಾದರೆ ಅದನ್ನು ನಿರಾಕರಿಸುವ ಯಾವ ಹಕ್ಕೂ ಇಲ್ಲ. ಪ್ರತಿಯೊಬ್ಬರ ಬದುಕು ಬೇರೆ ಬೇರೆ ಹಾಗೆ ಅವರ ಅನುಭವಗಳೂ ಬೇರೆ ಬೇರೆ. ಅವರ ನಂಬಿಕೆಯನ್ನು ಖಂಡಿಸಿ ಬದುಕಿನ ಅಡಿಪಾಯವನ್ನು ಅಲುಗಿಸಿ ಜೀವನವನ್ನು ಅಭದ್ರಗೊಳಿಸುವುದು ಕ್ರೌರ್ಯವಾಗುತ್ತದೆ. ಹಾಗೊಂದುವೇಳೆ ನಿರಾಕರಿಸಲೇ ಬೇಕಾದ ಪ್ರಸಂಗ ಬಂದರೆ ಅವರಿಗೆ ಅಷ್ಟೇ ಸಮರ್ಥವಾದ ಇನ್ನೊಂದು ನಂಬಿಕೆಯನ್ನೋ, ಬಲವಾದ ಆಧಾರವನ್ನೋ ಕಟ್ಟಿಕೊಡುವ ಸಾಮರ್ಥ್ಯ ನಮ್ಮಲಿರಬೇಕು.ಹಾಗೂ ಆ ಅಧಾರ ಅವರ ಬದುಕಿನ ಭಾರವನ್ನು ಹೊರುವಷ್ಟು ಸಮರ್ಥವಾಗಿರಬೇಕು. ಇಲ್ಲವಾದಲ್ಲಿ ಬದುಕಿನ ಸೌಧ ಕಣ್ಣೆದೆರು ಕುಸಿದು ಬೀಳುತ್ತದೆ. ತೂರಾಡುವವನು ಭಾರ ಹೊರಬಾರದು.

ಅವತ್ತು ರಾತ್ರಿಯೆಲ್ಲಾ ಸುರಿದ ಮಳೆಗೆ ಬೆಳಿಗ್ಗೆ ಇನ್ನಷ್ಟು ಹಸಿರಾಗಿ ಮತ್ತಷ್ಟು ಮೃದುವಾಗಿ ಗರಿಕೆ ಮುಗುಳ್ನಗುತ್ತಿತ್ತು. ಕೊಯ್ಯುತ್ತಿದ್ದ ಜಯತ್ತೆಯ ಕಣ್ಣಲ್ಲಿ  ಮಿಂಚಿತ್ತು.. ನಿನ್ನೆ ಗಣಪತಿಗೆದೂರ್ವೆ ಏರಿಸುವಾಗ ಬೇಜಾರಾಗಿತ್ತು ಎಲ್ಲಿ ಚುಚ್ಚಿ ನೋವಾಗುತ್ತೋ ಅಂತ ಸಂಕಟವಾಗಿತ್ತು. ಒಂದು ಮಳೆ ಬರಿಸು ಮಾರಾಯ ಅಂತ  ಹೇಳಿದ್ದೆ ನೋಡಿದ್ಯಾ  ಅದ್ಕೆ ಇವತ್ತು ಮಳೆ ಬಂದಿದ್ದು  ಅಂದ್ರು . ಅವರನ್ನೇ ದಿಟ್ಟಿಸುತ್ತಿದ್ದ ನನ್ನ ಕಣ್ಣಲ್ಲೂ ಮಳೆ ಹನಿಯುತ್ತಿತ್ತಾ.ಕೇಳೋಣವೆಂದರೆ ಜಯತ್ತೆಯೇ ಇಲ್ಲ... 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...