ಅಹಿಯೂ, ಚಂದ್ರಿಯ ಮಗಳೂ

ನಾನು ಭೂಮಿಗಿಳಿದ ಹೊತ್ತಲ್ಲೇ ಕೊಟ್ಟಿಗೆಯ ಚಂದ್ರಿಗೂ ಪ್ರಸವದ ಸಡಗರ. ಕೊಟ್ಟಿಗೆಯಲ್ಲಿ ಗಂಡು ಹುಟ್ಟಿದರೆ ಮನೆಯಲ್ಲಿ ಹೆಣ್ಣು ಅನ್ನೋ ನಂಬಿಕೆ ಪ್ರಚಲಿತ ಆಗ. ಆದ್ರೆ ಅಮ್ಮ ಚಂದ್ರಿ ಇಬ್ಬರೂ ಹೆತ್ತಿದ್ದು ಹೆಣ್ಣೇ... ಹುಟ್ಟಿದ ಮೇಲೆ ಈ ಭಾಂಧವ್ಯವಾ, ಹುಟ್ಟುವ ಮೊದಲೇ ಶುರುವಾಗಿತ್ತಾ ಅನ್ನೋ ಪ್ರಶ್ನೆಗೆ ನನ್ನಲ್ಲಿ ಇನ್ನೂ ಉತ್ತರವೇ ಇಲ್ಲ...
ಬಾಲ್ಯದ ಆಟ ಶುರುವಾಗಿದ್ದೆ ಅವುಗಳ ಜೊತೆ. ನನ್ನಮ್ಮನ ಹಾಲಿನ ಜೊತೆ ಜೊತೆಗೆ ಚಂದ್ರಿಯೂ ಹಾಲುಡಿಸಿದ್ದಳು. ನನ್ನೊಂದಿಗೆ ಬೆಳೆದ ಕೆಂಪಿಗೂ ನಂಗೂ ಒಂದು ಅವಿನಾಭಾವ ಸಂಬಂಧ ಬೆಳೆದಿತ್ತು. ನನ್ನ ಬಹುಪಾಲು ಸಮಯ ಅವುಗಳ ಜೊತೆಗೆ. ಬೆಳಿಗ್ಗಿನ ಸುಪ್ರಭಾತ ಶುರುವಾಗುತ್ತಿದ್ದದ್ದೇ ಅವುಗಳ ಅಂಬಾ ದನಿಯಿಂದ. ಅಜ್ಜಿಯ ಕೆಲಸ ಆರಂಭವಾಗುತ್ತಿದ್ದದ್ದೆ ಅವುಗಳಿಗೆ ಗಂಜಿ ಕೊಡುವುದರಿಂದ. ಕರೆದು ತಂದ ಹಾಲು ಹದವಾಗಿ ಇದ್ದಿಲ ಒಲೆಯಲ್ಲಿ ಕಾಯಿಸುವಾಗ ಬರುವ ಪರಿಮಳಕ್ಕೆ ಹಸಿವು ರುದ್ರತಾಂಡವವಾಡುತ್ತಿತ್ತು.
ಅವುಗಳನ್ನು ಮೇಯಲು ಬಿಡೋದು ಒಂದು ಸಂಭ್ರಮ. ಪುಟ್ಟ ಕರುಗಳನ್ನೆಲ್ಲಾ ಕಟ್ಟಿ ಅವನ್ನು ಅಜ್ಜ ಬಿಡುತ್ತಿದ್ದರೆ ಕರುಗಳನ್ನ ಅಂಗಳಕ್ಕೆ ಕರೆದೊಯ್ಯುವ ಸಂಭ್ರಮ ನಮ್ಮದು. ಕೊಟ್ಟಿಗೆಯ ಬಾಗಿಲು ಮುಚ್ಚುತ್ತಿದ್ದಂತೆ ಅವುಗಳನ್ನ ಅಂಗಳಕ್ಕೆ ಕರೆದು ತಂದು ಅವುಗಳ ಜೊತೆ ಕುಣಿದು ಕುಪ್ಪಳಿಸಿ ಅಲ್ಲೇ ಹುಲ್ಲಿನ ಮೇಲೆ ನಿದ್ದೆಗೆ ಶರಣಾಗುತ್ತಿದ್ದದ್ದು ಎಷ್ಟೋ ಬಾರಿ. ಮಧ್ಯಾನ ನಮ್ಮ ಊಟ ಮುಗಿಯುತ್ತಿದ್ದಂತೆ ಅಜ್ಜಿ ಅನ್ನವನ್ನು ಮೆದುವಾಗಿ ಕಲೆಸಿ ಇನ್ನೂ ಹುಲ್ಲು ತಿನ್ನಲು ಬಾರದ ಎಳೆಯ ಕರುಗಳಿಗೆ ತಿನ್ನಿಸುತ್ತಿದ್ದರೆ ಅದನ್ನು ಮುದ್ದು ಮಾಡುತ್ತಾ ಪುಸಲಾಯಿಸುತ್ತಾ ಕೂರೋದು ನಮ್ಮ ಕೆಲಸ. ಸ್ವಲ್ಪ ಬೆಳೆದ ಮೇಲೆ ಅದು ನನ್ನ ಕೆಲಸ. ಬದುಕಲ್ಲಿ ಇಷ್ಟ ಪಟ್ಟು ಮಾಡಿದ ಕೆಲಸಗಳಲ್ಲಿ ಅದರದ್ದು ಪ್ರಮುಖ ಸ್ಥಾನ.
ಅನಂತರದ ಬದುಕು ಕೊಟ್ಟಿಗೆಯೊಂದಿಗೆ ಹೆಚ್ಚುತ್ತಾ ಹೋಗಿತ್ತು. ಹಸುಗಳ ಬಾಣಂತನ, ಪುಟ್ಟ ಕರುಗಳಿಗೆ ತಿನ್ನಿಸುವಿಕೆ, ಕೊಟ್ಟಿಗೆಯ ಕೆಲಸ ಎಲ್ಲವೂ ಬದುಕಿನ ಭಾಗವೇ ಆಗಿಹೋಗಿತ್ತು. ನನ್ನ ನಲಿವಿಗೆ, ನೋವಿಗೆ, ಬೇಸರಕ್ಕೆ ಎಲ್ಲದಕ್ಕೂ ಪರಿಹಾರ ಕೊಟ್ಟಿಗೆಯೇ.. ಚಂದ್ರಿಯ ಕೊರಳು ತಬ್ಬಿ ಅತ್ತರೆ ಅವಳು ನೆಕ್ಕಿ ಒರೆಸುತ್ತಿದ್ದ ಕಣ್ಣಿರು ಅದೆಷ್ಟು ಬೇಗ ಆವಿಯಾಗುತ್ತಿತ್ತು ಅನ್ನೋದು ಇವತ್ತಿಗೂ ವಿಸ್ಮಯವೇ.. ಖುಷಿಯಲ್ಲಿ ಕುಣಿದಾಡುತ್ತಿದ್ದರೆ ಅವಳು ಕೊರಳು ತೂಗುವ ರಭಸಕ್ಕೆ ಕಣ್ಣಿಗೆ ಕೋಡುತಾಗಿತು ಬಾರೆ ಅಂತ ಅಜ್ಜಿ ಕಿರುಚುತ್ತಿದ್ದಳು. ನನ್ನ ಮಾತ್ರ ಹಳ್ಳಿಗೆ ಕೊಡು ಆಯ್ತಾ ನಾನು ಸಿಟಿ ಗೆ ಹೋಗೋಲ್ಲ ಅಲ್ಲಿ ಕೊಟ್ಟಿಗೆ ಇರೋಲ್ಲ ಅಂದ್ರೆ ನನ್ನದು ಹುಚ್ಚುತನ ಅಂತ ಮನೆಯವೆಲ್ಲಾ ನಗುತ್ತಿದ್ದರು.
ಮದುವೆಯಾಗಿ ಅಹಿ ಹುಟ್ಟುವ ಕ್ಷಣಗಣನೆಯಲ್ಲಿದ್ದಾಗ ಅಜ್ಜಿ ಮನೆ ಅತ್ತೆ ಮನೆ ಎರಡೂ ಕಡೆಯಲ್ಲೂ ಕೊಟ್ಟಿಗೆಯಲ್ಲೂ ಪ್ರಸವವೇದನೆ. ಇವತ್ತಿಗೂ ಅಹಿ ಮನೆಗೆ ತಲುಪಿದ ಕೂಡಲೇ ಮೊದಲು ಹೋಗೋದು ಕೊಟ್ಟಿಗೆಗೆ. ಫೋನ್ ಮಾಡಿದಾಗ ವಿಚಾರಿಸೋದು ಅವುಗಳನ್ನೇ. ಗಲೀಜು ಎಂದರೆ ಕಾಲು ಕೆಳಗಿಡಲು ಯೋಚಿಸುತ್ತಿದ್ದ ಅವಳು ಈ ಸಲ ಊರಿಗೆ ಹೋದಾಗ ಅಮ್ಮಾ ನಾನು ಕೊಟ್ಟಿಗೆ ಕ್ಲೀನ್ ಮಾಡಲಾ ಅಂದಾಗ ಆಶ್ಚರ್ಯವಾಗಿತ್ತು, ಸಂದೇಹವೂ ಇತ್ತು. ಅವಳ ಗೆಳತಿ ಸಗಣಿಯ ಜೊತೆ ಮಲಗಿದ್ದು ನೋಡಿ ಅವಳಿಗೆ ಸಂಕಟವಾಗಿ ಅಷ್ಟೂ ಸಗಣಿಯನ್ನು ಎತ್ತಿ ನೀರು ಹಾಕಿ ಕೊಟ್ಟಿಗೆ ತೊಳೆದು ಅಜ್ಜ ತಂದಿಟ್ಟ ಹುಲ್ಲು ಅದರ ಮುಂದೆ ಹಾಕಿ ಅದರ ಹಣೆಗೊಂದು ಮುತ್ತ ಕೊಟ್ಟು ಬಂದವಳನ್ನು ನೋಡುತ್ತಲೇ ಇದ್ದೆ.
ಅಲ್ಲಿದ್ದಿದ್ದು ನಾನಾ, ಅಹಿಯಾ ಅನ್ನೋ ಗೊಂದಲದಲ್ಲಿ ಇರುವಾಗಲೇ ದೋಸೆಯ ಪುಟ್ಟ ಚೂರೊಂದನ್ನು ತೆಗೆದು ಮೃದುವಾಗಿ ಅದರ ಬಾಯಿ ತೆರೆಸಿ ಇತ್ತು ತಿನ್ನು ಇನ್ನೂ ಚಟ್ನಿ ಬೇಕಾದ್ರೆ ಹೇಳು ಖಾರವಾದ್ರೆ ತುಪ್ಪ ಹಾಕಿ ಕೊಡ್ತೀನಿ ಅಂತಿದ್ರೆ ಅಗಿಯುತ್ತಿದ್ದ ಕರು ತಲೆಯಲ್ಲಾಡಿಸುತ್ತಿತ್ತು.
ಪ್ರೀತಿಗೆ ಕಟುಕರ ಪರಿಚವಿರುವುದಿಲ್ಲ ...
ವೃದ್ಧಾಪ್ಯ ಭಾಧಿಸುವುದಿಲ್ಲ....

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...