ಚಂದ್ರವಳ್ಳಿಯ ಗುಹೆ

ಬೆಳಕಿಗೆ ಬೆನ್ನಾಗದೆ ಈ ಚಂದ್ರವಳ್ಳಿಯ ಗುಹೆ ತೆರೆದುಕೊಳ್ಳುವುದಿಲ್ಲ. ಅದರ ಬಗ್ಗೆ ಸಮಾಧಾನಕರವಾದ ಮಾಹಿತಿ ಸಿಕ್ಕದಿದ್ದರೂ ಮನಸ್ಸಿಗೆ ಸಂತೋಷ, ಬೆರಗು ತುಂಬಿದ್ದು ಮಾತ್ರ ನಿಜ. ತಲೆಬಾಗದ ಹೊರತು ಒಳಗೆ ಪ್ರವೇಶವಿಲ್ಲ. ಗುರುವಿಲ್ಲದೆ ಗುರಿದೊರಕದು ಅನ್ನುವಂತೆ ಗೈಡ್ ಇಲ್ಲದೆ ಇದರೊಳಗೆ ಸಾಗಲಾರೆವು.
ಬೆಳಕಿಗೆ ಅಭ್ಯಾಸವಾದ ಕಣ್ಣು ದೇಹ ಕತ್ತಲಿಗೆ ತೆರೆದುಕೊಳ್ಳುತ್ತಿದ್ದಂತೆ ಮುಗ್ಗರಿಸುತ್ತದೆ. ಒಮ್ಮೆ ಅಭ್ಯಾಸವಾಯಿತೆಂದು ಕೊಳ್ಳಿ ಕತ್ತಲಿನಷ್ಟು ಹಿತ ಬೇರೊಂದಿಲ್ಲ. ಅಲ್ಲಿ ಬೆಳಕಿನ ಮೋಸ, ತಟವಟ, ಕ್ರೌರ್ಯ, ಪ್ರೀತಿ ಉಹೂ ಯಾವುದೂ ಕಾಣುವುದಿಲ್ಲ.ಬೆಳಕಿನಲ್ಲಿ ಮೋಸ ಹೋಗುವಷ್ಟು ಸುಲಭವಾಗಿ ಇಲ್ಲಿ ಏಮಾರಲಾಗುವುದಿಲ್ಲ . ಹಾಗಾಗಿ ಭಯವಿಲ್ಲ. ನಾವು ನಾವಾಗೇ ಇರಲು ಕತ್ತಲಿಗಿಂತ ಪ್ರಶಸ್ತ ಜಾಗ ಇನ್ಯಾವುದಿದೆ. ಆದರೆ ಇವೆಲ್ಲಾ ಸಾಧ್ಯವಾಗಬೇಕಾದರೆ ಕಣ್ಣಿಗೆ ಕತ್ತಲು ಅಭ್ಯಾಸವಾಗಬೇಕು.
ತಡುವುತ್ತಾ, ಎಡುವುತ್ತಾ ಅಲ್ಲಲ್ಲಿ ಉಸಿರುಗಟ್ಟಿಸಿಕೊಳ್ಳುತ್ತಾ ಮುಂದೆ ಸಾಗಿದಷ್ಟೂ ಗುಹೆ ವಿಸ್ತಾರವಾಗಿ ತೆರೆದುಕೊಳ್ಳುತ್ತಲೇ ಹೋಗುತ್ತದೆ. ಕತ್ತಲಿಗೆ ಅಷ್ಟು ಸುಲಭವಾಗಿ ಹೊಂದದ ಬದುಕು ಮೊಬೈಲ್ ಬೆಳಕು ಬೇಡುತ್ತದೆ. ದಾರಿ ನಿಚ್ಚಳವಾದರೂ ಸುಲಭವಲ್ಲ. ಅಂಕು, ಡೊಂಕು ತಿರುವುಗಳು ಕಳೆದುಹೋಗುವ ಹಾಗೆ ಮಾಡುತ್ತದೆ.ಪ್ರತಿ ಹೆಜ್ಜೆಗೂ ಒಂದೊಂದು ರಹಸ್ಯವಿದೆಯೇನೋ ನಾವದನ್ನು ತುಳಿದು ಸಾಗುತ್ತಿದ್ದೆವೇನೋ ಅನ್ನೋ ಭಾವ. ಜಗತ್ತಿನ ಎಲ್ಲಾ ರಹಸ್ಯಗಳು ಹಾಗಿದ್ದಾಗಲೇ ಬದುಕು ವಿಸ್ಮಯ ಅನ್ನಿಸೋದು.
ಅಲ್ಲಿ ಏನಿದೆ ಏನಿಲ್ಲಾ ಹೇಳೋದು ಕಷ್ಟ. ಎರಡು ಬಂಡೆಗಳ ನಡುವೆ ಅಷ್ಟೊಂದು ಜಾಗವಿದೆಯಾ ಎಂದು ಆಶ್ಚರ್ಯ ಪಡುವಷ್ಟು ವಿಸ್ತಾರವದು. ಮಲಗುವ ಕೋಣೆ, ರಹಸ್ಯ ಮಾತುಕತೆಯ ಜಾಗ ಪುಟ್ಟ ದೇವಸ್ಥಾನ, ದರ್ಶಕರ ಕೊಟಡಿ ಒಂದು ಪುಟ್ಟ ಅರಮನೆಯನ್ನು ಹೋಲುವ ಗುಹೆಯದು. ಗಾಳಿ ಎಲ್ಲಿಂದ ಊಹಿಸಲೂ ಸಾದ್ಯವಿಲ್ಲ. ಕಲ್ಲು ಬಂಡೆಯನ್ನು ವಾಸಿಸುವ ಜಾಗವನ್ನಾಗಿಸುವ ಆಗಿನವರ ಜಾಣ್ಮೆ ಹೆಮ್ಮೆಯ ಜೊತೆ ಈಗಿನ ನಮ್ಮನ್ನು ಕಂಪೇರ್ ಮಾಡಿಕೊಂಡಾಗ ಲಜ್ಜೆ. ಪ್ರತಿ ಭಾವದ ಹಿಂದೂ ಇನ್ನೊಂದು ಭಾವ ಇದ್ದೆ ಇರುತ್ತೆ.. ಯಾವ ಭಾವವೂ ಸ್ವತಂತ್ರವಲ್ಲ ಅನ್ನೋದು ಎಷ್ಟು ಚೆಂದವಾಗಿ ಆಪ್ತವಾಗಿ ಅರ್ಥಮಾಡಿಸುತ್ತೆ.
ನೋಡುತ್ತಾ, ಗೈಡ್ ಮಾತು ಕೇಳುತ್ತಾ, ಬೆರಗಾಗುತ್ತಾ, ಬೆಚ್ಚಿಬಿಳುತ್ತಾ ಮುಂದುವರಿದು ಬಂದರೆ ಅಲ್ಲೆಲ್ಲೋ ಬೆಳಕು ನಾಟ್ಯವಾಡುತ್ತಿತ್ತು. ಅರೆ ಕತ್ತಲೆ ಬೆಳಕು ಒಂದಾಗಲು ಸಾಧ್ಯವಾ ಅಂದುಕೊಳ್ಳುವಾಗಲೇ ಇಲ್ಲೇ ಹುಷಾರಾಗಿ ಮೆಟ್ಟಿಲು ಹತ್ತಿದರೆ ನೀವು ಬಂದ ಜಾಗ ಅನ್ನೋ ಅಶರೀರವಾಣಿ ಕೇಳಿಸಿತು. ಎಲ್ಲಿ ಶುರು ಮಾಡಿದ್ವೋ ಅಲ್ಲಿಗೆ ಬಂದಿದ್ವಿ. ಎಷ್ಟೋ ಸಲ ದಾರಿ ಸಾಗಿರುತ್ತೆ ಅಂದ್ಕೊಂಡ್ ಹೋಗಿರ್ತಿವಿ ಆದರೆ ಬದುಕು ಮತ್ತಲ್ಲೇ ತಂದುಬಿಟ್ಟು ನಗುತ್ತದೆ.
ನಿಲ್ಲುವ ಹಾಗಿಲ್ಲ ಮತ್ತೆ ದಾರಿ ಹಿಡಿಯಲೇ ಬೇಕು. ಎಲ್ಲೂ ನಿಲ್ಲಲಾರೆವೂ ಅದೆಷ್ಟು ಇಷ್ಟವಾದರೂ ಬದುಕು ಸಾಗುತ್ತಲೇ ಇರುತ್ತದೆ. ಗಡಿಯಾರದ ಮುಳ್ಳಿನಂತೆ. ನೆನಪುಗಳ ಬುತ್ತಿಯನ್ನಷ್ಟೇ ಕೊಂಡೊಯ್ಯಬಲ್ಲೆವು. ಅಲ್ಲಲ್ಲಿ ಕುಳಿತು ವಿಶ್ರಮಿಸುವಾಗ ನೆನಪಿನ ಮಲ್ಲಿಗೆ ಅರಳುವ ಹಾಗೆ ಮಾಡಿ ಆಘ್ರಾಣಿಸಲು, ಮತ್ತಷ್ಟು ಕಸುತುಂಬಿಕೊಂಡು ಹೊರಡಲು.ಬದುಕಿಗೆ ಅದೆಷ್ಟು ವ್ಯಾಮೋಹಗಳು... 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...