ಕೋಟೆಯೊಳಗೆ ಒಂದು ಸುತ್ತು.

ಕೋಟೆಗಳನ್ನು ನೋಡುವುದೆಂದರೆ ಬದಕನ್ನ ಗಮನಿಸಿದಂತೆ ಅನ್ನಿಸಲು ಶುರುವಾಗಿದೆ. ಬದುಕಿನಂತೆಯೇ ಅವೂ ಸುಲಭಕ್ಕೆ ದಕ್ಕುವುದಿಲ್ಲ.ಕಣ್ಣೋಟಕ್ಕೆ ಸಿಲುಕುವುದಿಲ್ಲ. ತಕ್ಷಣಕ್ಕೆ ಅರ್ಥವಾಗುವುದಿಲ್ಲ.  ಸಾಗಿದಷ್ಟೂ ಸಾಗುವ ದಾರಿಯದು. ಅರ್ಥಮಾಡಿಕೊಂಡಷ್ಟೂ ನಿಗೂಢ. ಪ್ರತಿ ಕಲ್ಲೂ, ಪ್ರತಿ ತಿರುವು ಅಷ್ಟೇಕೆ ಪ್ರತಿ ಹೆಜ್ಜೆಯೂ ಒಂದೊಂದು ಕತೆ ಹೇಳಬಹುದು. ದುರ್ಗದ ಕೋಟೆಯ ಬಳಿಗೆ ಹೋಗುವವರೆಗೂ ಅದೊಂದು ಪ್ರವಾಸವಷ್ಟೇ ಅನ್ನಿಸಿತ್ತಾ ತ.ರಾ.ಸು ಓದದೇ ಹೋಗಿದ್ದರೆ ಹಾಗೆ ಅನ್ನಿಸುತ್ತಿತ್ತೇನೋ ಗೊತ್ತಿಲ್ಲ. ಓದಿದ ಮೇಲೆ ಕೋಟೆಯೆಂದರೆ ಹೊದ್ದು ಮಲಗಿರುವ ಇತಿಹಾಸವೆನ್ನಿಸುತ್ತದೆ. ಪ್ರತಿಯೊಂದು ಕಲ್ಲಿಗೂ ತನ್ನದೇ ಆದ ಕತೆಯಿದೆ, ಮಿಡಿವ ಮೂಕ ಮನಸ್ಸಿದೆ, ಹೇಳುವ ಕಾತುರವಿದೆ, ಕೇಳುವ ಕಿವಿಗಾಗಿ ಕಾಯುವ ತಾಳ್ಮೆಯಿದೆ, ಮೌನವಾಗಿಯೇ ನಿಲ್ಲುವ ಧೀ ಶಕ್ತಿಯಿದೆ. ನಿರ್ಲಿಪ್ತವಾಗಿ ನೋಡುವ ಪ್ರಬುದ್ಧತೆಯಿದೆ ಅನ್ನಿಸುತ್ತದೆ. ಹೋಗುವ ಮುನ್ನವೇ ಭಾವ ತೀವ್ರತೆಯಿತ್ತು.  ಒಳಗೆ ಕಾಲಿಡುತ್ತಿದ್ದಂತೆ ಮನಸ್ಸು ಬಾಗಿದ್ದಂತೂ ನಿಜ. ಅದರ ಭವ್ಯತೆಯೆದರು ನಾನೆಷ್ಟು ಸಣ್ಣವಳು ಅನ್ನಿಸಿದ್ದಂತೂ ಸತ್ಯ.

ಕೋಟೆಯನ್ನು ಪ್ರವೇಶಿಸುವ ಮೊದಲು ಕಾಣಿಸುವುದೇ ಹಾವಿನ ಚಿತ್ರ. ದ್ವೇಷಕ್ಕೆ ಅನ್ನೋದಕ್ಕಿಂತ ಹಠಕ್ಕೆ ಹಾವು ಉತ್ತಮ ಉದಾಹರಣೆಯೇನೋ ಅನ್ನಿಸುತ್ತದೆ. ಇಡೀ ಕೋಟೆಯ ದಾರಿಯೇ ಹಾಗೆ ಹಾವಿನ ಚಲನೆಯಂತೆ ಅಂಕುಡೊಂಕಾಗಿ ಯಾವುದನ್ನೂ ಬಿಚ್ಚಿಡದೆ ಮುಂದೆ ಹೋದ ಹೊರತೂ ಅರ್ಥವಾಗದೆ ಒಂದೇ ಹಿಡಿತಕ್ಕೆ ಸಿಲುಕದ ಹಾಗಿದೆ. ಏಳು ಸುತ್ತಿನ ಕೋಟೆಯಂತೆ ಅದು. ಏಳು ಮೇಲೇಳು ಅನ್ನುತ್ತಿದೆಯಾ... ಹತ್ತುವ ಪ್ರತಿ ಹೆಜ್ಜೆಯಲ್ಲೂ ಏರು ಮೇಲೇರು ಅನ್ನೋ ಮಂತ್ರ ಹಾಡಿಕೊಳ್ಳದೆ ಹೋದರೆ, ಮನಸ್ಸನ್ನು ಸಜ್ಜುಗೊಳಿಸದೇ ಹೋದರೆ ಕೋಟೆ ಸಿಕ್ಕುವುದಿಲ್ಲ.

ಹಂಪಿಯ ಕೋಟೆ, ಹಾಗೂ ದುರ್ಗದ ಕೋಟೆ ಕಟ್ಟಿರುವ ರೀತಿ ಒಂದೇ ಆದರೂ ದುರ್ಗದ ಕೋಟೆ ಅಲ್ಲಿಯದಕ್ಕಿಂತ ಬಲಿಷ್ಠ ಹಾಗೂ ನೋಡಲು ಚೆಂದ ಕೂಡಾ. ಒಂದರ ಮೇಲೊಂದು ಕಲ್ಲುಗಳನ್ನು ಯಾವುದೇ ಗಾರೆಯಿಲ್ಲದೆ ಜೋಡಿಸಿರುವ ರೀತಿ, ಯಾವುದೇ ಯಂತ್ರಗಳ ಸಹಾಯವಿಲ್ಲದೆ ಅದನ್ನು ಅಷ್ಟು ಮೇಲಕ್ಕೆ ತೆಗೆದುಕೊಂಡಿರುವ ಹೋಗಿರುವ ವೈಖರಿ, ಎಲ್ಲಿಯೂ ಕೈ ಹಿಡಿದು ಹತ್ತಲು ಗ್ರಿಪ್ ಸಿಗದಂತೆ ಕಟ್ಟಿರುವ ಪರಿ ಯಾವ ಇಂಜಿನಿಯರ್ ಗೂ ಸಾಟಿಯಿಲ್ಲದಂತಿದೆ. ಏನೇ ಮುಂದುವರಿದವರು ನಾವು ಅಂದುಕೊಂಡರೂ ಮೂಲಭೂತ ವ್ಯವಸ್ಥೆಯಲ್ಲಿ, ಬುದ್ಧಿವಂತಿಕೆಯಲ್ಲಿ ಮತ್ತು ಪ್ರಾಮಾಣಿಕತೆಯಲ್ಲಿ ಅವರ ಕಾಲುಭಾಗವೂ ಇಲ್ಲವೆಂಬುದು ಮಾತ್ರ ನಿಜ.  ಕಾವಲು ಬತೇರಿಗಳು ಎಲ್ಲಿರಬೇಕು, ನೀರಿನ ವ್ಯವಸ್ಥೆ, ಅರಮನೆಯ ಜಾಗ, ದೇವಸ್ಥಾನಗಳು, ಯಾವ ಜಾಗದಲ್ಲಿ ಏನಿರಬೇಕು, ಹೇಗಿರಬೇಕು ಅನ್ನೋದನ್ನ ನೋಡಿದರೆ ನಾವೆಷ್ಟು ಹಿಂದುಳಿದಿದ್ದೇವೆ ಅನ್ನೋದು ಅರ್ಥವಾಗುತ್ತೆ. ದುರ್ಗಮ ಬಂಡೆಗಳನ್ನು ಆಧರಿಸಿ ಅವರು ಕಟ್ಟಿರುವ ಒಂದೊಂದು ಕಟ್ಟಡಗಳೂ ಟೌನ್ ಪ್ಲಾನಿಂಗ್ ಆಗ ಎಷ್ಟು ವ್ಯವಸ್ಥಿತವಾಗಿತ್ತು ಗಟ್ಟಿಮುಟ್ಟಾಗಿತ್ತು ಅನ್ನೋದು ತಿಳಿಸಿ ನಾವು ವಿದ್ಯಾವಂತರು ಅನ್ನೋ  ಅಹಂ ನ ಬಲೂನಿಗೆ ಪಿನ್ನು ಚುಚ್ಚುತ್ತದೆ.

ಒಳಗೆ ಕಾಲಿಡುವಾಗಲೇ ಅತ್ತ ಬಿಸಿಲೂ ಅಲ್ಲದ ಇತ್ತ ನೆರಳೂ ಅಲ್ಲದ ವಾತಾವರಣ. ಕೋಟೆಯ ಪ್ರವೇಶದಲ್ಲಿ ಇರುವ ಬನಶಂಕರಿಯ ದೇವಸ್ಥಾನದಲ್ಲಿ ದೀಪವೂ ಮಂಕಾಗಿ ಉರಿಯುತ್ತಿತ್ತು. ಇರುವ ಕಲ್ಲು ಬಂಡೆಗಳ ಮಧ್ಯದಲ್ಲೇ ಅವರು ನಿರ್ಮಿಸಿಕೊಂಡ ಸಾಮ್ರಾಜ್ಯ ಮಾತ್ರ ಅದ್ಭುತ. ಜಾಗದ ಮಹಿಮೆಯೋ, ಅಷ್ಟು ವರ್ಷಗಳ ಪೂಜೆಯ ಫಲವೋ ದೇವಿಯ ಮುಖದಲ್ಲಿ ಕಳೆ ಎದ್ದು ಕಾಣುತಿತ್ತು. ಒಳಹೋದವರ ಕೈ ತಂತಾನೇ ಮುಗಿಯುವ ಹಾಗಿತ್ತು. ಹಾಗೆ ಮುಂದಕ್ಕೆ ಹೋಗಿ  ಮದ್ದು ಅರೆಯುವ ಜಾಗವನ್ನು ನೋಡಿ ವಾಪಾಸ್ ಆಗಬೇಕಾದರೆ ಅಲ್ಲಿದ್ದ ನವಿಲೊಂದು ನರ್ತನ ಆರಂಭಿಸಿತ್ತು. ನಿರ್ದಯತೆಯ ನಡುವೆ ಮಾರ್ದ್ರವತೆ ಎಂದರೆ ಇದೇನಾ, ಕೋಟೆಯೆಂದರೆ ಹಲವು ಭಾವಗಳ ಸಂಗಮವಲ್ಲವೇ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಬರುವಾಗ ಕಾಲಬುಡದಲ್ಲೇ ಚಂಗನೆ ಎಗುರಿದ ಮೊಲವೊಂದು ಹೆಜ್ಜೆ ಹೆಜ್ಜೆಗೂ ಕಣ್ಣಾದರೆ ಮಾತ್ರ  ಸ್ವಲ್ಪವಾದರೂ ದಕ್ಕಲು ಸಾದ್ಯ ಎನ್ನುವ ಪಾಠ ಕಲಿಸಿ ಮರೆಯಾಯಿತು. ಅಲ್ಲಿಂದ ಬಂದು ವಿನಾಯಕನಿಗೆ ನಮಿಸಿ ಮುಂದೆ ಹೋದರೆ ಕೋಟೆ ತೆರೆದುಕೊಳ್ಳುತ್ತಾ  ಮಾತಾಡುತ್ತಾ ಹೋಗುತ್ತದೆ. ಕಿವಿಗಳು ಸೂಕ್ಷ್ಮವಾಗಿರಬೇಕು ಅಷ್ಟೇ..

 ಬದುಕು ಯಾವತ್ತೂ ನೇರದಾರಿಯಲ್ಲ. ಹಾಗಿರಲೂ ಬಾರದು. ಉಯ್ಯಾಲೆ ಕಂಬದವರೆಗೂ ಕೋಟೆ ಅಂಕು ಡೊಂಕು ತಿರುವುಗಳ ದಾರಿ. ಎಲ್ಲಾ ಕಡೆ ತಡೆಗೋಡೆಯೊಂದೇ ಕಾಣಿಸುತ್ತದೆ. ಮುಂದುವರಿಯುವ ಛಲ, ಕಾಲಿಗೆ ಕಸುವು ಇದ್ದಾಗ ಮಾತ್ರ ಕೋಟೆ ತೆರೆದುಕೊಳ್ಳುತ್ತದೆ. ಒಳಗೆ ಕಾಲಿಟ್ಟೊಡನೆ ಕನ್ಫ್ಯೂಸ್ ಮಾಡಿಸುತ್ತದೆ. ಯಾವ ದಿಕ್ಕಿಗೆ ಹೋಗೋದು ಇತ್ತ ಏಕನಾಥೇಶ್ವರಿ, ಅತ್ತ ಗಾಳಿಗೋಪುರ, ಕತ್ತೆತ್ತಿದರೆ ಹಿಡಿಂಬೆಶ್ವರ ,  ಅದೋ ಎದುರಿಗೆ ಸಂಪಿಗೆ ಸಿದ್ದೇಶ್ವರ, ತಲೆಯೆತ್ತಿ ನೋಡಿದರೆ ಸವಾಲು ಹಾಕುವ ತುಪ್ಪದ ಕೊಳ. ನೇರವಾಗಿ ಸಾಗಿದರೆ ಕಾಲುದಾರಿಯಲ್ಲಿ ಟಂಕಸಾಲೆ. ಆಯ್ಕೆ ಅದೆಷ್ಟು ಕಷ್ಟ ಕಷ್ಟ....

ಸಮಯವನ್ನು ಕೊಡದೆ ಯಾವುದೂ ಅರ್ಥವಾಗುವುದಿಲ್ಲ, ಒಳನೋಟ ತಿಳಿಯುವುದಿಲ್ಲ ಒಂದೋ ಎರಡೋ ಗಂಟೆಗಳಿಗೆ ಕೋಟೆ ಏನೂ ತಿಳಿಯುವುದಿಲ್ಲ. ಇಡೀ ಕೋಟೆಯ ಮೇಲೆ ಬಿದ್ದ ಒಂದು ಹನಿ ನೀರೂ ವ್ಯರ್ಥವಾಗಿ ಹೋಗುವುದಿಲ್ಲ. ಬಿದ್ದ ಪ್ರತಿ ಹನಿಯನ್ನೂ  ಹಿಡಿದು ಸಂಗ್ರಹಿಸಿಡುವ ಅವರ ರೀತಿ ನಮ್ಮ ರೈನ್ ಹಾರ್ವೆಸ್ಟಿಂಗ್ ಪದ್ದತಿಯನ್ನು ಇನ್ನೊಮ್ಮೆ ಗಮನಿಸುವ ಹಾಗೆ ಮಾಡುತ್ತೆ. ಅಲ್ಲಿ ಬಿದ್ದ ಒಂದು ಹನಿ ರಕ್ತಕ್ಕೂ ಅಷ್ಟೇ ಬೆಲೆಯಿತ್ತಾ.. ಬಂಡೆ ಉತ್ತರಿಸುವುದಿಲ್ಲ.  ಮುಂದೆ ಹೋಗುತ್ತಾ ಕಲ್ಲುಗಳನ್ನು ನೇವರಿಸುತ್ತಾ ಅದರ ಭವ್ಯತೆಗೆ ಬೆರಗಾಗುತ್ತಾ ಹಿಂದಕ್ಕೆ ಮರಳಿ ಚರಿತ್ರೆಯ ಭಾಗವಾಗುತ್ತಾ ಸಾಗಿದರೆ ಒಮ್ಮೆಲೇ ಬ್ರೇಕ್ ಹಾಕೋದು ವಿಷಾದ ತುಂಬೋದು ಅಕ್ಕ ತಂಗಿಯರ ಹೊಂಡ. ಸಂತೋಷ, ದುಃಖ, ಆಕ್ರೋಶ, ಸಂಕಟ ಅವೆಷ್ಟು ಬೇಗ ಬದಲಾಗುತ್ತದೆ ಅಂದ್ಕೊಂಡೆ.

ಅಲ್ಲಿಂದ ಮುಂದೆ ಸಾಗಿದರೆ ಸಿಗೋದು ಓಬವ್ವನ ಮನೆ. ನಾವೆಷ್ಟು ಇತಿಹಾಸವನ್ನು ಅನ್ನೋದಕ್ಕಿಂತ ಅವರ ವ್ಯಕ್ತಿತ್ವವನ್ನು ಗೌರವಿಸ್ತಿವಿ ಅನ್ನೋದಕ್ಕೆ ಸಾಕ್ಷಿಯಾಗಿ ಅಲ್ಲಿ ತಿಂದು ಎಸೆದಿದ್ದ ಪ್ಲಾಸ್ಟಿಕ್ ಪೊಟ್ಟಣ, ನೀರಿನ ಬಾಟಲಿ ಕಾಣಿಸಿತು. ನನ್ನದು ಅನ್ನುವ ಭಾವ ಬರದ ಹೊರತು ಇಲ್ಲಿ ಎಲ್ಲವೂ ಪರಕೀಯ. ಬೆಲೆಯಿಲ್ಲದ್ದು. ಕಲ್ಲುಬಂಡೆಯ ಕೆಳಗೆ ಕಾವಲಿಗಾಗಿ ವಾಸವಾಗಿದ್ದ ಅವರು ಅದೆಷ್ಟು ತ್ಯಾಗ ಮಾಡಿದ್ದಿರಬಹುದು. ಬದುಕಿನ ಎಲ್ಲಾ ಸವಲತ್ತುಗಳನ್ನು ಬಿಟ್ಟು ಬದುಕಲು ಆ ಬಂಡೆಯಂತೆ ಗಟ್ಟಿಯಾಗಿದ್ದರೆ ಮಾತ್ರ ಸಾದ್ಯ. ಊಟ ಮಾಡುವಾಗ ಯಮನೇ ತೊಂದರೆ ಕೊಡಲ್ವಂತೆ ಹಾಗಿರುವಾಗ ಪತಿಯನ್ನೇ ದೈವವೆಂದು ನಂಬಿದ ಹೆಣ್ಣು ಹೇಗೆ ತಾನೇ ಕದಲಿಸಬಲ್ಲಳು. ಅದಕ್ಕಿಂತ ಮುಖ್ಯವಾಗಿ ಅವಳ ಕೆಚ್ಚು, ರೋಷ, ನಾಡಿನ ರಕ್ಷಣೆಗಾಗಿ ಒಂದು ಕ್ಷಣವೂ ಯೋಚಿಸದೆ ಧುಮುಕುವ ಪರಿ, ತಕ್ಷಣದ ನಿರ್ಧಾರ ಇವೆಲ್ಲವೂ ನಮ್ಮ ಬದುಕಲ್ಲಿ ಇದೆಯೇ ಎಂದು ಕೇಳಿಕೊಂಡರೆ ಉತ್ತರ ಕೆಲವೊಮ್ಮೆ ಶೂನ್ಯ. ನಮ್ಮತನದ ಬಗ್ಗೆ ನಮಗೆ ಹೆಮ್ಮೆ ಇಲ್ಲದೆ ಹೋದರೆ ಇನ್ನಾರು ಕೊಡಲು ಸಾಧ್ಯ.

ಅಷ್ಟು ಓಡಾಡುವ ವೇಳೆಗೆ ಅಪ್ಪುವ ಸುಸ್ತು , ವೇಗ ಕಳೆದುಕೊಂಡು ನಿಧಾನವಾಗುವ ಕಾಲುಗಳು. ಒಂದು ದಿನಕ್ಕೆ ಇಷ್ಟು ಸುಸ್ತಾಗುವ ನಾವುಗಳು ಅಂದು ಅವರು ಪ್ರತಿದಿನ ಮಾಡುತ್ತಿದ್ದದ್ದು ಅದನ್ನೇ ಅಲ್ಲವೇ, ಜೊತೆ ಜೊತೆಗೆ ಕೆಲಸ ಕೂಡಾ.. ಅಷ್ಟು ದೈಹಿಕ ಶ್ರಮ ಇದ್ದಕ್ಕಕ್ಕೆ ಅವರು ಅಷ್ಟು ಗಟ್ಟಿಮುಟ್ಟಾಗಿದ್ದರೆನೋ.. ಶ್ರಮ ಉಳಿಸುವ ಭರದಲ್ಲಿ ನಾವು ಸಾಮರ್ಥ್ಯವನ್ನೂ ಕಳೆದುಕೊಳ್ಳುತ್ತಿದ್ದೇವೆ. ಒಂದು ಪಡೆಯಲು ಇನ್ನೊಂದು ಕೊಡಲೇ ಬೇಕಲ್ಲ. ಆ ಸುಸ್ತು ನಾಚಿಕೆಯನ್ನು ಹುಟ್ಟಿಸುವ ವೇಳೆಗೆ ಗೋಪಾಲಸ್ವಾಮಿ ಹೊಂಡ ಬಂದಾಗಿತ್ತು. ಬಿದ್ದ ಪ್ರತಿ ಹನಿಯೂ ಅಲ್ಲಿಗೆ ಬಂದು ಸೇರಿ ಬಿರು ಬೇಸಿಗೆಯಲ್ಲೂ ಇಡೀ ಅರಮನೆಗೆ ನೀರು ಒದಗಿಸುತಿತ್ತಂತೆ. ಎಷ್ಟು ಜೋಪಾನವಾಗಿ ನಾವು ಪ್ರಕೃತಿಯ ಮೂಲಗಳನ್ನು ಬಳಸುತ್ತೇವೋ ಪ್ರಕೃತಿಯೂ ಅಷ್ಟೇ ಜೋಪಾನವಾಗಿ ನಮ್ಮನ್ನು ಕಾಪಾಡುತ್ತಾಳೆ. ಹೊಂದಿಕೊಂಡು ಬದುಕುವುದನ್ನು, ಒಂದಾಗಿ ಬಾಳುವುದನ್ನ ಅವರು ಕಲಿತಿದ್ದರಿಂದಲೇ ಆ ಬಂಡೆಯ ಮಧ್ಯದಲ್ಲೂ ಹಸಿರಿತ್ತು, ಉಸಿರು ಉಳಿದಿತ್ತು.

ಅದರಾಚೆಗೆ ಇರೋದು ಅರಮನೆಯ ಆವರಣ. ಸುಲಭಕ್ಕೆ ಯಾರ ಕಣ್ಣಿಗೂ ಬೀಳದ ಹಾಗೆ ಇರುವ ಸ್ಥಳ. ಸಂಪಿಗೆ ಸಿದ್ದೇಶ್ವರ ದೇವಸ್ಥಾನದ ಹೊರ ಆವರಣದ ಪಕ್ಕದಲ್ಲೂ ಅರಮನೆಗೆ ಬರುವ ದಾರಿಯಿದ್ದರೂ ಅದೂ ಸಂಕೀರ್ಣ ಹಾದಿ. ವಿಚಿತ್ರ ತಿರುವುಗಳು, ಬಂಡೆಗಳ ಮಧ್ಯದಲ್ಲಿ ಕಂಡೂ ಕಾಣದಂತೆ ಹೊಸಬರಿಗೆ ದಾರಿ ತಪ್ಪುವಂತೆ ಇದೆ. ಇತ್ತ ಸಿದ್ದೇಶ್ವರ ದೇವಸ್ಥಾನದ ಹಿಂಬಾಗದ ದೊಡ್ಡ ಬಂಡೆ, ಅದರ ಪಕ್ಕದ ತುಪ್ಪದ ಕೊಳದ ದುರ್ಗಮ ಬಂಡೆ, ಹಿಂದೆಯೂ ರಾಕ್ಷಸಾಕರದ ಕಲ್ಲುಗಳು ಹೀಗೆ ಸುತ್ತಲೂ ಕಲ್ಲು ಬಂಡೆಗಳಿಂದ ಆವೃತವಾದ ಮಧ್ಯೆ ಜಾಗವಿದೆ ಅನ್ನೋದು ತಕ್ಷಣಕ್ಕೆ ಅರಿವಿಗೆ ಬಾರದಂತ ಜಾಗ.   ಅದರ ರಕ್ಷಣಾ ಪದ್ದತಿಯಂತೂ ಅನೂಹ್ಯ. ಅಲ್ಲಲ್ಲಿ ಬಂಡೆಯ ಮೇಲೆ ಕಟ್ಟಿರುವ ಕಾವಲು ಗೋಪುರಗಳ ಕಣ್ಣು ತಪ್ಪಿಸಿ ಒಂದು ಇರುವೆ ಕೂಡಾ ಬರಲಾರದಂತ ವ್ಯವಸ್ಥೆ, ಅದರ ಮೇಲ್ವಿಚಾರಣೆ ಅಬ್ಬಾ... ಮಾತಿಗೆ ನಿಲುಕದ ಭಾವಗಳು. ಅರಮನೆಯೂ ಒಂಥರಾ ಸೆರೆಮನೆಯೇನೋ ಅನ್ನಿಸುವಾಗಲೇ ಪಾಳುಬಿದ್ದ ಜಾಗ, ಅರ್ಧಂಬರ್ಧ ಉಳಿದ ಮಣ್ಣಿನ ಗೋಡೆ, ಅವಶೇಷಗಳು ವಿಷಾದ ವಿರಕ್ತಿ ಎರಡೂ ಹುಟ್ಟಿಸಿಬಿಡುತ್ತದೆ.

ಏಳು ಸುತ್ತಿನ ಅಭೇದ್ಯ ಕೋಟೆಯದು. ಏಳು ಮೇಲೇಳು ಅನ್ನುವುದಕ್ಕಿಂತ ಏಳುಬೀಳು ಅನ್ನೋ ಹಾಗಾಯ್ತೆ ಅನ್ನುವ ವಿಷಾದ ಹೆಜ್ಜೆ ಹೆಜ್ಜೆಗೂ ಕಾಡುತ್ತೆ. ಒಂದುಸಲ ಹತ್ತಲು ತಿಣುಕಾಡುವ ನಮ್ಮ ಸಾಮರ್ಥ್ಯವನ್ನು ಅಣಕಿಸಿ ನಕ್ಕಂತೆ ಭಾಸವಾಗುತ್ತೆ ತುಪ್ಪದ ಕೊಳ. ಇವತ್ತಿಗೂ ಅಷ್ಟೇ ಗಟ್ಟಿಯಾಗಿ, ಒಂದುಚೂರು ಮುಕ್ಕಾಗದಂತೆ ಇರುವ ಅವುಗಳು ನಾವೆಷ್ಟು ಮುಂದುವರಿದಿದ್ದೇವೆ ಅನ್ನುವುದನ್ನ ಸೂಚ್ಯವಾಗಿ ತೋರಿಸುತ್ತವೆ ಅನ್ನಿಸುತ್ತೆ. ಎತ್ತ ನೋಡಿದರೂ ಕಾಣುವ ದುರ್ಗಮ ಬಂಡೆಗಳು ಯಾವುದಕ್ಕೂ ಜಗ್ಗದೆ ಗಟ್ಟಿಯಾಗಿ ನಿಲ್ಲುವುದನ್ನು ಕಲಿಸುತ್ತದೆ. ಅವುಗಳ ಮಧ್ಯೆ ನಗುವ ಹಸಿರು ಅಂತರಾಳದಲ್ಲಿ ಬೆಣ್ಣೆಯಾಗಿರಬೇಕು ಅನ್ನೋದನ್ನ ತಿಳಿಸುತ್ತಾ.. ಎಲ್ಲವನ್ನೂ ಹೇಳಿಕೊಡಲು ಸಾದ್ಯವಿಲ್ಲ ಅರಿಯಬೇಕು ಅರಸಬೇಕು .....

ಹಿಡಿಂಬೆಶ್ವರನ ದೇವಸ್ಥಾನಕ್ಕೆ ಹೋದರೆ ತಟ್ಟನೆ ನೆನಪಾಗಿದ್ದು ಸಂಗೀತಗಾರ ವೆಂಕಟಸುಬ್ಬಯ್ಯ. ಒಮ್ಮೆ ಒಳಗೆ ಕಾಲಿಟ್ಟು ದೇವರ ಮುಡಿ ಸವರಿ ಜಟೆ ಬೆಳೆದಿದ್ದು ಹೌದಾ ಎಂದು ನೋಡಬೇಕು ಎನ್ನುವ ಹಂಬಲ ಒಳಗಿಂದ ಹಬ್ಬಿ ಮೆಟ್ಟಿಲು ಹತ್ತಿ ಮೇಲುಸಿರು ಬಿಡುತ್ತಾ ಬೆವರುತ್ತಾ ಹೋದರೆ ಬಾಗಿಲು ದಾಟಿ ಒಳಗೆ ಹೋದರೆ ತಣ್ಣನೆಯ ಭಾವ. ಪ್ರಶಾಂತವಾಗಿ ಕುಳಿತಿದ್ದ ಶಿವ ನಂದಾದೀಪದ ಬೆಳಕಿನಲ್ಲಿ ಸಣ್ಣಗೆ ನಗುತಿದ್ದ. ಆ ವಾತಾವರಣ, ತಂಪು, ಮಂದಬೆಳಕು ದೇಹಕ್ಕೆ ಮಾತ್ರವಲ್ಲ ಮನಸ್ಸನ್ನೂ ತಂಪಾಗಿಸಿ, ನೂರು ಪ್ರಶ್ನೆಗಳಿಗೆ ಮೌನದಲ್ಲೇ ಉತ್ತರಿಸಿತು. ಅಮ್ಮಾ ಒಂದು ನಿಮಿಷಕ್ಕೆ ಸುಸ್ತೆಲ್ಲಾ ಹೋಯ್ತಲ್ಲ ಅದು ಹೇಗೆ ಎನ್ನುವ ಪ್ರಶ್ನೆಗೆ ಅವನನ್ನು ದಿಟ್ಟಿಸಿದರೆ ಅವನು ಮಂಗಳಾರತಿ ಮಾಡಿಸಿಕೊಳ್ಳುವುದರಲ್ಲಿ ಮಗ್ನನಾಗಿದ್ದ. ಎಲ್ಲವನ್ನೂ ಹೇಳಿಯೇ, ಕೇಳಿಯೇ ಗೊತ್ತುಮಾಡಿಕೊಳ್ಳ ಬಾರದು ಎಂದನಾ....

ಅಲ್ಲಿಂದ ಬಂದು ಏಕನಾಥೇಶ್ವರಿ ದೇವಸ್ಥಾನ ಪ್ರವೇಶಿಸುವಾಗಲೇ ಮೈಮನವೆಲ್ಲಾ ರೋಮಾಂಚನ. ಅಲ್ಲಿ ಕುಳಿತ ಕೇವಲ ದೇವಿಗಾಗಿ ಹಾಡುತಿದ್ದ. ಟಿಪ್ಪುವಿನ ಅಧಿಕಾರದ ದರ್ಪಕ್ಕೆ ಮಣಿಯದೆ, ದೇವರಿಗೆ ಮೀಸಲಾದದ್ದನ್ನು ಭಯದಿಂದ ಬಿಡದೆ  ತನ್ನ ನಾಲಿಗೆಯನ್ನು ಕತ್ತರಿಸಿಕೊಂಡ ಮಹಾನ್ ಸಂಗೀತಗಾರ ಭೈರವಿ ವೆಂಕಟಸುಬ್ಬಯ್ಯ ಅವರು ಕುಳಿತು ಹಾಡುತಿದ್ದ ಕಲ್ಲು ವೆಂಕಟಸುಬ್ಬಯ್ಯ ಕಲ್ಲು ಎಂದೇ ಪ್ರಸಿದ್ಧಿಯಾಗಿತ್ತಂತೆ. ಒಳಗೆ ಹೋದಕೂಡಲೇ ಕಾಲ, ದೇಶಗಳೆಲ್ಲಾ ಮರೆಯಾಗಿ ಅದ್ಯಾವ ಭಾವ ಆವರಿಸಿತ್ತೋ ಹೇಳುವುದು ಕಷ್ಟ. ಆ ಕಲ್ಲನ್ನು ಒಮ್ಮೆ ನೇವರಿಸಿ ಅದರ ಬುಡದಲ್ಲಿ ಕುಳಿತರೆ ಕಣ್ಣಿಂದ ತನ್ನಿಂದ ತಾನೇ ನೀರು ಹನಿಯುತ್ತಿತ್ತು.

ಹತ್ತುವುದು ಅದೆಷ್ಟು ಕಷ್ಟ , ಆದರೆ ಹತ್ತಿದ ಮೇಲೆ ಗಮ್ಯ ಅತಿ ಸುಂದರ ಅಂದುಕೊಳ್ಳುತ್ತಾ ಬರುವಾಗಲೇ ಇಳಿಯುವ ಕಷ್ಟದ ಅರಿವಾಗಿದ್ದು. ಹತ್ತಿದ ಮೇಲೆ ಎಲ್ಲವೂ ಸುಂದರ, ಸುಲಭ. ಇಳಿಯುವುದೇ ಕಷ್ಟ. ಇಷ್ಟವಿಲ್ಲದಿದ್ದರೂ ಇಳಿಯಬೇಕು. ಹೆಜ್ಜೆ ಹೆಜ್ಜೆಗೂ ಕಣ್ಣಾಗಬೇಕು. ಕಾಲು ಭಾರ ಹೊರುತ್ತಲೇ ಎಚ್ಚರವಾಗಿರಬೇಕು. ಕ್ಷಣಮಾತ್ರದ ಗಮನದ ಕೊರತೆಯೂ ಜಾರುವಂತೆ ಮಾಡುತ್ತದೆ. ಒಂದೇ ಸಲಕ್ಕೆ ಪ್ರಪಾತಕ್ಕೆ ತಳ್ಳುತ್ತದೆ. ಪ್ರಪಾತ ಎಂದೂ ಸುಂದರವಲ್ಲ ಅನ್ನೋದನ್ನ ಅರ್ಥಮಾಡಿಕೊಳ್ಳುವ ಮೊದಲೇ ತಲುಪಿಯಾಗಿರುತ್ತದೆ. ಆದರೂ ನೋಡಿದಷ್ಟೂ ನಿಗೂಢವೆನಿಸುವ, ಮತ್ತಷ್ಟು ಅರಿಯಬೇಕು ಹತ್ತಬೇಕು ಅನ್ನುವ ವ್ಯಾಮೋಹ ಹುಟ್ಟಿಹಾಕುವ ಕೋಟೆ ಅರಿತೆನೆಂದುಕೊಂಡಷ್ಟೂ ನಿಗೂಢವೆನಿಸುತ್ತದೆ . ಬಿಚ್ಚಿ ಕೊಳ್ಳುತ್ತಲೇ ಮುಚ್ಚಿಕೊಳ್ಳುತ್ತದೆ. ಇನ್ನೆಷ್ಟೋ ಇದೆ ಎಂದು ಪಿಸುಗುಡುತ್ತದೆ. ಆದರೆ ಅದಾಗಲೇ ಕತ್ತಲು ಆವರಿಸಿ ನಮ್ಮನ್ನು ಅಲ್ಲಿಂದ ಓಡಿಬರುವ ಹಾಗೆ ಮಾಡುತ್ತದೆ.

ಅರಿಯುವುದು ಅಷ್ಟು ಸುಲಭವಲ್ಲ, ಯಾವುದೂ ತಕ್ಷಣಕ್ಕೆ ತೆರೆದುಕೊಳ್ಳುವುದಿಲ್ಲ. ಛಲ, ಹಠ, ಕಸುವು, ಏಕಾಗ್ರತೆ ಮಾತ್ರವೇ ದಾರಿಯನ್ನು ತೋರಿಸುತ್ತದೆ. ನಡೆದೇ ಅರಿಯಬೇಕು. ಕೇಳುವ ತಾಳ್ಮೆ ಇರಬೇಕು. ಅದಕ್ಕೆ ನಿನ್ನೊಳಗಿನ ಪ್ರೀತಿ ಅಗ್ನಿಯಾಗಬೇಕು ಅಂತ ಹೇಳಿದ ಕೋಟೆ ಬಿಳ್ಕೋಟ್ಟಿತು. ಇಳಿಯುವಾಗ ರಾಮಾಚಾರಿ ಫಿಲಂ ಶೂಟ್ ಆದ ಜಾಗವಿದು ಅಂತ ಮಕ್ಕಳಿಗೆ ಹೆಮ್ಮೆಯಿಂದ ಹೇಳುತಿದ್ದ ಪೋಷಕರು ಕಂಡರು, ಅಮ್ಮಾ ಅಕ್ಕ ತಂಗಿ ಹೊಂಡ ಎಂದರೆ ಏನು ಎಂದು ಕೇಳುತಿದ್ದ ಮಗುವಿದೆ ಅದು ಹೆಸರು ಅಷ್ಟೇ ಎಂದು ಉದಾಸಿನವಾಗಿ ಯಾರೋ ಹೇಳುವುದು ಕೇಳಿಸಿತು. ಮುಂದೊಂದು ದಿನ ಕೋಟೆ ಎಂದರೆ ಕೇವಲ ಫಿಲಂ ಶೂಟಿಂಗ್ ಜಾಗ ಅಂತ ಅಷ್ಟೇ ಆಗಿ ಉಳಿಯಬಹುದಾ, ನಮ್ಮ ಇತಿಹಾಸದ ಆಸಕ್ತಿ ಇಷ್ಟೇ ಆಗಿ ಹೋಗಬಹುದಾ ಎನ್ನುವ ಭಯ ಕಾಡಿ  ತಿರುತಿರುಗಿ ನೋಡುತ್ತಾ ಬಂದರೆ ಭಾರವಾದ ಮನಸ್ಸು ಹೆಜ್ಜೆಯನ್ನು ನಿಧಾನವಾಗಿಸಿತ್ತು, ನಡುಗುವ ಹಾಗೆ ಮಾಡಿತ್ತು.  ದಾರಿ ಮುಸುಕಾಗಿಸಿದ್ದು ಕಣ್ಣಿರಾ ಇಲ್ಲಾ ಕತ್ತಲೆಯಾ... ತಿಳಿದುಕೊಳ್ಳುವ ಗೋಜಿಗೆ ಹೋಗಲಾರದಷ್ಟು ಮನ ಮೌನವಾಗಿತ್ತು.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...