ಅಜ್ಜಿಯ ಬತ್ತಿ

ಮಧ್ಯಾನದ ಊಟ ಮುಗಿಯುತ್ತಿದ್ದ ಹಾಗೆ ಅಡುಗೆಮನೆ ಸ್ವಚ್ಛ ಮಾಡಿ ಒಂದು ಚಾಪೆಯನ್ನು ಎಳೆದುಕೊಂಡು ಕೈ ಯನ್ನೇ ದಿಂಬಾಗಿಸಿ ಮಲಗೋದು ಅಜ್ಜಿಯ ಯಾವತ್ತಿನ ರೂಡಿ. ಮಂಚದ ಮೇಲೆ ಮಲಗಬಾರದೇನೆ ಅಂದ್ರೆ ಬೇಡಾ ಕಣೆ ಹಾಸಿಗೆ ಮೈಲಿಗೆ ಆಗುತ್ತೆ  ಆಮೇಲೆ ಬತ್ತಿ ಮಾಡೋಕೆ ಆಗೋಲ್ಲ ಅಂತ ಅವಳು ಅನ್ನೋದು, ಒಹ್ ಭಾರಿ ಮಡಿ ನೋಡು ನಿನ್ನದು ಅಂತ  ನಾನು ಬೈಯೋದು ಅವಳು ಅದನ್ನ ಕೇಳ್ತಾ ನಿದ್ದೆ ಮಾಡೋದು ದಿನಚರಿಯ ಅವಿಭಾಜ್ಯ ಸಂಗತಿಗಳಲ್ಲೊಂದು. ಬೆಳಿಗ್ಗೆಯಿಂದ ಒಂದೇ ಸಮನೆ ಕೆಲಸದಲ್ಲಿ ಮುಳುಗುವ ಅವಳ ಈ ಮಧ್ಯಾನದ ಒಂದು ಗಂಟೆ ವಿಶ್ರಾಂತಿಯ ಸಮಯ.

ಒಂದು ಪುಟ್ಟ ಗುಬ್ಬಿ ನಿದ್ದೆ ಮುಗಿಸಿ ಏಳುವ ಅವಳು ಎಲ್ಲರಿಗೂ ಕಾಫಿ ಕೊಟ್ಟು ತಲೆಬಾಚಿಕೊಂಡು ಮೊಣಕಾಲನಿಂದಲೂ ಕೆಳಗೆ ಬರುವ ಜಡೆಯನ್ನು ಕೈಯಲ್ಲಿ ಸುರುಳಿ ಸುತ್ತಿ ಒಂದು ತುರುಬು ಹಾಕಿ ಒಮ್ಮೆ ಕುಂಕುಮವನ್ನು ಸರಿ ಮಾಡಿಕೊಂಡಳು ಎಂದರೆ ಅಲ್ಲಿಗೆ ಅಲಂಕಾರ ಮುಗಿಯಿತು ಎಂದರ್ಥ.  ತಾನೂ ಕಾಫಿ  ಕುಡಿದು ಅಲ್ಲೇ ಗೂಡಿನಲ್ಲಿರುವ ಹತ್ತಿಯ ಬುಟ್ಟಿಯನ್ನು ಎಳೆದುಕೊಂಡು ಕುಳಿತಳೆಂದರೆ ಒಂದಷ್ಟು ಹೊತ್ತು ಅವಳದೇ ಸಮಯ ಅವಳದೇ ಲೋಕ.

ಅಂಗಳದ ಬದಿಯಲ್ಲೋ, ಹಿತ್ತಿಲ ಮೂಲೆಯಲ್ಲೋ ಒಂಟಿಯಾಗಿ ನಿಂತಿರುತಿದ್ದ ಹತ್ತಿ ಗಿಡ ಹೂ ಬಿಟ್ಟು ಮೈತುಂಬಾ ಹಸಿರು ಕಾಯಿ ಬಿಟ್ಟರೆ ಇವಳ ಮುಖದಲ್ಲೂ ಅದೇನೋ ಸಂತೃಪ್ತ ಭಾವ. ಕಾಯಿ ಬೆಳೆದು ಅರಳಿ  ಒಳಗಿನ ಹತ್ತಿ ಇಷ್ಟಿಷ್ಟೇ ಹಣಕಿ ನೋಡುವಾಗ ಅವಳ ಕಾಲುಗಳಿಗೆ ಸಂಭ್ರಮ. ಅದನ್ನೆಲ್ಲಾ ಬಿಡಿಸಿ ಒಣಗಿಸಿ ಒಂದು ಡಬ್ಬಕ್ಕೆ ತುಂಬಿ ಗಾಳಿ ಆಡದಂತೆ ತುಂಬಿದರೆ ನಡು ಮಧ್ಯಾನದ ಅವಳ ಏಕಾಂತದ ಸಂಗಾತಿಯದು. ಬುದ್ಧಿ ತಿಳಿದಾಗಿನಿಂದ ಅವಳ ಜೊತೆಯಾದ, ಕೊನೆಯವರೆಗೂ ಕೈ ಬಿಡದ ಜೊತೆಗಾತಿ.

ಬೆಳ್ಳಗಿನ ಹತ್ತಿಯನ್ನು ತೆಗೆದುಕೊಂಡು ಇಷ್ಟಿಷ್ಟೇ ಹಿಂಜುತ್ತಾ, ಬೆರಳುಗಳಿಂದ ಕಸತೆಗೆಯುತ್ತಾ ಮುದುಡಿರುವ ಅದನ್ನು ಅರಳಿಸುತ್ತಿದ್ದಳು. ಏಕಾಗ್ರವಾಗಿ ಅದನ್ನು ಮಾಡುವಾಗ ತಪಸ್ಸಾ ಎಂದು ಛೇಡಿಸುತ್ತಿದ್ದೆ. ಈಗ ನಡು ಮಧ್ಯಾನದ ನೀರವ ಮೌನದಲ್ಲಿ ಅವಳು ಹತ್ತಿಯನ್ನು ಹಿಂಜುತ್ತಾ ತನ್ನ ಭಾವನೆಗಳನ್ನೂ ಹಿಂಜಿ ಹಗುರಾಗುತ್ತಿದ್ದಳೆನೋ ಅನ್ನಿಸುತ್ತದೆ. ಬದುಕಿಡೀ ಕಷ್ಟವನ್ನೇ ಕಂಡ, ಉಂಡ ಪುಟ್ಟ ದೇಹವದು. ಹೀಗೆ ಹತ್ತಿ ಹೊಸೆಯುತ್ತಾ ಅದನ್ನು ಹಿಡಿದು ಅಲ್ಲಲ್ಲಿ ಹೊಂದಿಸಿ ಒಂದಕ್ಕೊಂದು ಸೇರಿಸುತ್ತಾ  ಸರಿಮಾಡುವಾಗ ತನಗೆ ಬರುವ ಹಾಡನ್ನೋ, ಶ್ಲೋಕವನ್ನೋ ಹೇಳಿಕೊಳ್ಳುತ್ತಾ  ಧ್ಯಾನಸ್ಥಳಾಗುತ್ತಿದ್ದಳು. 

ಕೈ ನಯವಾಗಿದ್ದರೆ ಹತ್ತಿ ಜಾರುತ್ತದೆ. ಚೂರು ಒರಟು ಬೇಕು. ಬದುಕು ಹೀಗೆ ನೋಡು ತೀರಾ ಮೃದುವಾದರೆ ಯಾರೂ ಮಾತು ಕೇಳೋಲ್ಲ ಕೊನೆಗೆ ಈ ಹತ್ತಿಯೂ ಅನ್ನುತ್ತಾ ಮಧ್ಯೆ ಮಧ್ಯೆ ಬೆರಳುಗಳು ಜಾರಬಾರದೆಂದು ವಿಭೂತಿಯನ್ನು ಸವರಿಕೊಳ್ಳುತ್ತಿದ್ದಳು. ಹಾಗೆ ಸವರಿಕೊಂಡಾಗ ಉರುಟು ಉರುಟಾದ ಬತ್ತಿ ತಯಾರಾಗುತ್ತಿತ್ತು. ಶಾಲೆಯ ಮುಖವೇ ಕಾಣದ ಅವಳು ಸರಳ ರೇಖೆಯನ್ನು ಅದೆಷ್ಟು ಚೆಂದವಾಗಿ ಹತ್ತಿಯಲ್ಲಿ ಮೂಡಿಸುತ್ತಿದ್ದಳು. ಹೀಗೆ ಹತ್ತು ಬತ್ತಿಗಳನ್ನು ಮಾಡಿ ಒಂದು ಗುಂಪು ಮಾಡುತ್ತಿದ್ದಳು. ಒಟ್ಟಿಗೆ ಇಟ್ಟಾಗ ಎಲ್ಲವೂ ಒಂದೇ ಸೈಜ್, ಒಂದೂ ಉದ್ದವೂ ಇಲ್ಲದೆ, ಗಿಡ್ದವೂ ಆಗದೆ ಒಂದೇ ರೀತಿಯ ಎತ್ತರ. ಸ್ಕೇಲ್ ನ ಸಹಾಯವಿಲ್ಲದೆ, ಅಳತೆಗೆ ಕತ್ತರಿಸಿಕೊಳ್ಳದೆ ಅದು ಹೇಗೆ ಒಂದೇ ಅಳತೆಗೆ ಮಾಡ್ತಿಯೇ ಎಂದರೆ ಕಣ್ಣಳತೆಗೆ ಮಿಂಚಿದ ಅಳತೆ ಇದೆಯೇನೆ ಅನ್ನೋಳು. ಆಗ ಆಶ್ಚರ್ಯವಾದರೂ  ಬದುಕಿನ ಪಾಠಶಾಲೆಯ ಲೆಕ್ಕಾಚಾರ ಯಾವತ್ತೂ ಪರ್ಫೆಕ್ಟ್ ಅಂತ ಈಗ ಅನ್ನಿಸುತ್ತಿದೆ.    

ಹೀಗೆ ಹತ್ತರ ಒಂದು ಗುಂಪು ಮಾಡಿ, ಅಂತಹ ಹತ್ತು ಗುಂಪುಗಳಾದೊಡನೆ ಅವನ್ನೆಲ್ಲಾ ಒಟ್ಟುಗೂಡಿಸಿ ಇನ್ನೊಂದು ಬತ್ತಿ ಸೇರಿಸಿ ನೂರಾ ಒಂದರ ಕಟ್ಟು ಮಾಡಿ  ಕತ್ತರಿಸಿ ಇಟ್ಟುಕೊಂಡಿರುವ ಪೇಪರ್ ಅಲ್ಲಿ ಸುತ್ತಿ ಇಟ್ಟಳೆಂದರೆ ಅಲ್ಲಿಗೆ ಒಂದು ಬತ್ತಿ ಕಟ್ಟು ರೆಡಿ ಆದಂತೆ. ಯಾವತ್ತೂ ಕೊಂಡು ತಂದಿದ್ದು ದೇವರಿಗೆ ಹಚ್ಚಿದವಳೇ ಅಲ್ಲ. ನಿಧಾನಕ್ಕೆ ಅಕ್ಕಪಕ್ಕದ ಮನೆಯವರು ತೆಗೆದುಕೊಂಡು ಹೋಗಲು ಶುರುಮಾಡಿದ ಮೇಲೆ ಅದು ಅವಳ ದಿನನಿತ್ಯದ ಕೆಲಸವೇ ಆಗಿ ಹೋಯಿತು. ಒಮ್ಮೆ ಅವಳ ಬಳಿ ಬತ್ತಿ ಕೊಂಡು ಹೋದವರು ಮತ್ತೆ ಬೇರೆಲ್ಲೂ ಖರಿದೀಸುತ್ತಿರಲಿಲ್ಲ. ಅವಳನ್ನು ಹುಡುಕಿಕೊಂಡು ಬಂದು ಕೊನೆಪಕ್ಷ ತಕ್ಷಣಕ್ಕೆ ಒಂದು ಕಟ್ಟು ಆದರೂ ಕೊಡಿ ಎಂದು ತೆಗೆದುಕೊಂಡು ಹೋಗುತ್ತಿದ್ದರು. ಹಾಗಾಗಿ ಊಟ, ನಿದ್ದೆ, ಕೆಲಸದಂತೆ ಬತ್ತಿ ಮಾಡುವುದೂ ಅವಳ ಬದುಕಿನ ಅವಿಭಾಜ್ಯ ಅಂಗವಾಗಿ ಹೋಯಿತು.

ಏನೇ ಸಂಕಷ್ಟ, ಸಮಸ್ಯೆ ಎದುರಾದರೂ ಅವಳಿಗೆ ಗೊತ್ತಿದ್ದದ್ದು ದೇವರ ಎದುರು ತುಪ್ಪದ ದೀಪ ಹಚ್ಚಿ ಇಡುವುದು. ಹಾಗಾಗಿ ಎಣ್ಣೆ ಬತ್ತಿ, ಹೂ ಬತ್ತಿ, ದೈನಂದಿನ ಗೆಜ್ಜೆವಸ್ತ್ರ, ಗೌರಿ ಹಬ್ಬದ ಗೆಜ್ಜೆವಸ್ತ್ರ ಹೀಗೆ ಹತ್ತಿ ಅವಳ ಕೈಯಲ್ಲಿ ಬಗೆ ಬಗೆಯ ರೂಪ ತಾಳುತಿತ್ತು. ಅವಳು ಮಾಡಿದ ಯಾವುದೇ ಬತ್ತಿಯಾದರೂ ಬಳುಕುತ್ತಿರಲಿಲ್ಲ. ನೆಂದರೂ ಅಚಲ. ಸೋಮವಾರ ಮಾತ್ರ ಅವಳ ಈ ಹತ್ತಿ ಕೆಲಸಕ್ಕೆ ರಜೆ. ಶಿವ ಶಾಪಕೊಟ್ಟಿದ್ದ ಅನ್ನೋ ಕತೆಯೊಂದು ಹೇಳುತಿದ್ದ ಅವಳು ಅಪ್ಪಿ ತಪ್ಪಿಯೂ ಅವತ್ತು ಹತ್ತಿ ಮುಟ್ಟುವುದು ಇರಲಿ ಹತ್ತಿಯ ಗಿಡದ ಕಡೆಗೂ ಹೋಗುತ್ತಿರಲಿಲ್ಲ.

ಯಾಕೆ ಇಷ್ಟು ಕಷ್ಟ ಪಡ್ತಿ ಅಂಗಡಿಯಿಂದ ತರಬಹುದಲ್ವೇನೆ ಅಂದೇ ಒಮ್ಮೆ.. ಬತ್ತಿ ಬಳುಕಬಾರದು ಕಣೆ, ನೆಂದರೂ ಬೀಳಬಾರದು ಕೂಡಾ, ಹಾಗೆ ಹೊಸೆಯುತ್ತಾ ಹೊಸೆಯುತ್ತಾ ನಾನೂ ಕಷ್ಟಗಳ ಎದುರು ಗಟ್ಟಿಯಾಗಿ ನಿಲ್ಲಲು ಕಲಿಯುತ್ತೇನೆ. ಎಲ್ಲಿ ಬಳುಕುತ್ತೆ ಅನ್ನೋದು ನೋಡಿ ಅಲ್ಲೊಂದಿಷ್ಟು ಹತ್ತಿ ಹಾಕಿ ಗಟ್ಟಿ ಮಾಡುವ ಹಾಗೆ ಮನಸ್ಸು ಗಟ್ಟಿಗೊಳಿಸುತ್ತೇನೆ.  ದೀಪ ಉರಿದು ಆರುವವರೆಗೂ ಬತ್ತಿ ಗಟ್ಟಿಯಾಗಿಯೇ ಇರಬೇಕು. ಬದುಕು ಬೇಯುವಾಗಲೂ ದೃಢವಾಗಿರಬೇಕು. ದೇವರಿಗೆ ದೀಪ ಹಚ್ಚಿದಾಗ ಅವನಿಗೆ ನನ್ನ ಬೆರಳುಗಳು ಬಿಸುಪು ತಾಗಬೇಕು. ಉರಿಯೋದು ಬರಿ ಬೆಳಕಲ್ಲ ನಾನೂ ಅನ್ನೋದು ಗೊತ್ತಾಗಬೇಕು ನೋಡು. ಹಾಗಾದಾಗ ಮಾತ್ರ ಆ ಬೆಳಕಲ್ಲಿ ಅವನಿಗೆ ತೊಂದರೆ ಕಾಣಿಸುತ್ತೆ. ಅವನೆದರು ದೀಪ ಇಟ್ಟಾಗಲೇ ನನಗೂ ಬೆಳಕು ಸಿಗೋದು. ಹಾಗಾಗಿ ಆ ಬತ್ತಿ ನಾನೇ ಮಾಡಿದ್ದು ಆದರೆ ಒಳ್ಳೆಯದಲ್ವಾ ಅನ್ನೋಳು... 
ಅಯ್ಯೋ ಪೆದ್ದಿ  ಎಂದು ನಾನು ಗಟ್ಟಿಯಾಗಿ ನಗುತ್ತಿದ್ದರೆ ಅವಳು ಒಮ್ಮೆ ದಿಟ್ಟಿಸಿ ಮೌನವಾಗಿ ಒಳಗೆ ಹೋಗುತ್ತಿದ್ದಳು. ಅದರ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡದೇ ನಾನು ಇನ್ನಷ್ಟು ನಗುತ್ತಿದ್ದೆ. ಅದಾಗಲೇ ಸ್ಕೂಲ್ ಮೆಟ್ಟಿಲು ಹತ್ತಿದ್ದ ನಾನೇ ಬುದ್ಧಿವಂತೆ ಎಂದು ಬೀಗಿದ್ದೆ. ಬಾ ಬತ್ತಿ ಮಾಡೋದು ಹೇಳಿಕೊಡ್ತೀನಿ ಅಂದಾಗಲೆಲ್ಲ ನೀನು ಇದ್ದೀಯಲ್ಲ ನಾನ್ಯಾಕೆ ಕಷ್ಟ ಪಡಲಿ ಎಂದು ಆಡಲು ಹೋಗುತಿದ್ದೆ.

ಕಾಲ ತಿರುಗಿ ಹುಡುಗಾಟದ ಹಂತದಿಂದ ಜವಾಬ್ದಾರಿಯ ಮಜಲಿಗೆ ತಿರುಗಿತ್ತು.ಮದುವೆಯಾಗಿ ಬಂದವಳು ಹೊಸಮನೆಯಲ್ಲಿ  ತವರು ಮನೆಯವರು ಕೊಟ್ಟ ದೇವರನ್ನು ಬಿಚ್ಚಿದಾಗ ಅಲ್ಲಿ ಅಜ್ಜಿಯ ಬತ್ತಿಕಟ್ಟು ಮುದ್ದಾಗಿ ಮಲಗಿತ್ತು. ಅ ಕ್ಷಣದಿಂದ ಇಲ್ಲಿಯವರೆಗೂ ಪ್ರತಿಸಲ ದೇವರೆದುರು ದೀಪ ಹಚ್ಚುವ ಮುನ್ನ ಬತ್ತಿ ತೆಗೆದುಕೊಂಡಾಗಲೆಲ್ಲ ಅಜ್ಜಿಯ ಕೈ ಬಿಸುಪು ತಾಕಿದೆ.. ಅವನೆದುರು ಕಣ್ಮುಚ್ಚಿ ಕುಳಿತಾಗಲೆಲ್ಲ ನಾ ಒಂಟಿಯಲ್ಲ ಅನ್ನುವ ಭಾವ ಜೊತೆಯಾಗಿದೆ. ನಮಸ್ಕರಿಸಿ ಏಳುವಾಗ ನನ್ನೊಳಿಗಿನ ತೃಪ್ತಿಯ ನಗು ಫ್ರೇಮ್ ನ ಒಳಗೂ ಪ್ರತಿಫಲಿಸುತ್ತಿರುತ್ತದೆ. ದೀಪ ಹಚ್ಚೋದು ಯಾಂತ್ರಿಕತೆ ಅನ್ನಿಸಲೇ ಇಲ್ಲ. ಅದೊಂದು ಭಾವಸ್ಪಂದನ. ಅಜ್ಜಿ ಜೊತೆಯಿದ್ದಾಳೆ ಅನ್ನುವ ಭಾವ.

ಪ್ರತಿ ಸಲ ಊರಿನಿಂದ ಬರುವಾಗ ಏನ್ಬೇಕು ಅಂತ ಕೇಳೋದು ಅವಳ ಅಭ್ಯಾಸ.. ಬತ್ತಿ ಕಟ್ಟು ಹಾಕೋದು ಮಾತ್ರ ಮರಿಬೇಡಾ ಅನ್ನೋದು ನನ್ನ ಎಚ್ಚರಿಕೆ. ಅಷ್ಟು ದೊಡ್ಡ ಸಿಟಿಯಲ್ಲಿದ್ದಿ ಎಲ್ಲವೂ ಸಿಗುತ್ತೆ ಅಂತಿಯಾ ಒಂದು  ಬತ್ತಿ ಕಟ್ಟು ಸಿಗಲ್ವೇನೆ ಅಂತ ನಗುತ್ತಾಳೆ. ಹಾಗೆ ನಗುತ್ತಲೇ ಇನ್ನೆರೆಡು ಕಟ್ಟು ಜಾಸ್ತಿಯೇ ಹಾಕುತ್ತಾಳೆ. ಹೇಗಿದ್ರೂ ತುಪ್ಪ ಕಾಯಿಸ್ತಿಯಲ್ಲ ಶುಕ್ರವಾರ ದೀಪ ಹಚ್ಚು ಅಂತ ಒಂದಷ್ಟು ಹೂ ಬತ್ತಿಯನ್ನೂ ಸೇರಿಸುತ್ತಾಳೆ. ಅಂದು ನಕ್ಕಿದ್ದ ನಾನು ಇವತ್ತು ಅವಳನ್ನೇ ಮೌನವಾಗಿ ನೋಡುತ್ತೀನಿ.. ಕಾಲಚಕ್ರ ಎಷ್ಟು ಬೇಗ ತಿರುಗುತ್ತದೆ ಅನ್ನೋ ವಿಸ್ಮಯದಲ್ಲಿ..

ಪ್ರತಿ ಸಲ ಊರಿಗೆ ಹೋದಾಗಲೂ ಈ ಸಲ ಆಗಲೇ ಇಲ್ಲ ನೋಡು ಮುಂದಿನಸಲವಾದರೂ ಬತ್ತಿ ಮಾಡೋದು ಹೇಳಿಕೊಡು ಅನ್ನುವಾಗ ತನ್ನ ಬೊಚ್ಚು ಬಾಯಿ ತೆಗೆದು ಸುಮ್ಮನೆ ನಗುತ್ತಿದ್ದವಳು ನಿಂದು ಯಾವಾಗಲೂ ಇದೆ ಅಂತ ಅಂದುಕೊಳ್ಳುತ್ತಿದ್ದಳಾ ಗೊತ್ತಿಲ್ಲ. ಹೇಗಿದ್ರೂ ಅವಳು ಮಾಡಿಕೊಡ್ತಾಳೆ ಅನ್ನೋ ನಂಬಿಕೆ ನನ್ನ ಸೋಮಾರಿತನವನ್ನು ಬೆಂಬಲಿಸುತಿತ್ತು. ಆ ಸಲ ಬರುವಾಗ ಮಾತ್ರ ಅದ್ಯಾಕೋ ಸ್ವಲ್ಪ ಜಾಸ್ತಿಯೇ ಬತ್ತಿಕಟ್ಟು ಹಾಕಿದ್ದಳು. ಇಷ್ಟೊಂದು ಯಾಕೆ ಬೇರೆ ಯಾರಿಗಾದರೂ ಬೇಕಾದರೆ ಕೊಡು ಹೇಗಿದ್ರೂ ಇನ್ನೊಂದು ನಾಲ್ಕು ತಿಂಗಳಿಗೆ ಮತ್ತೆ ಬರ್ತಿನಲ್ಲ  ಎಂದರೆ ಸುಮ್ಮನೆ ನಕ್ಕಿದ್ದಳು. ನಾನು ಅರ್ಥವಾಗದೆ ಎದ್ದು ಬಂದಿದ್ದೆ. ಅದಾಗಿ ಎರಡೇ ತಿಂಗಳಿಗೆ ಸದ್ದೂ ಸುದ್ದಿ ಏನೂ ಇಲ್ಲದೆ ನಿದ್ದೆಯಲ್ಲಿ ಎದ್ದು ನಡೆದು ಬಿಟ್ಟಳು. 

ದೇವರ ಗೂಡಿನ ಬಾಗಿಲು ತೆರೆದಾಗಲೆಲ್ಲ ಸುರಳಿ ಸುತ್ತಿ ಮಲಗಿರುವ ಬತ್ತಿ ನೆನಪು ಉಕ್ಕಿಸುತ್ತದೆ. ಅದನ್ನೊಮ್ಮೆ ತೆಗೆದು ನೇವರಿಸುತ್ತಾ ಹಚ್ಚಲೋ ಬೇಡವೋ ಎನ್ನುವ ಗೊಂದಲದಲ್ಲೇ ಸಮಯ ಕಳೆದುಬಿಡುತ್ತೇನೆ. ದೀಪ ಹಚ್ಚಿದರೆ ಅವಳ ಕೈ ಬಿಸುಪಿನ ಜೊತೆ ನನ್ನ ಕಣ್ಣಿರಿನ ಬಿಸಿ ಅವನಿಗೆ ಗೊತ್ತಾಗುತ್ತಾ... ಅವನದನ್ನು ಅವಳಿಗೆ ಹೇಳಬಹುದಾ... ಅಲ್ಲೂ ಬತ್ತಿ ಹೊಸೆಯುತ್ತಾ ಅವಳು ಸುಮ್ಮನೆ ನಗಬಹುದಾ...  
ಹಚ್ಚಿಟ್ಟ ದೀಪವನ್ನೇ ಕೇಳೋಣ  ಎಂದು ತಿರುಗಿದರೆ ಅದು ಉರಿಯುತ್ತಿದೆ...


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...