ಪೋಸ್ಟ್ ಮ್ಯಾನ್
ಗಾಡಿ ನಿಲ್ಲಿಸಿ ಹೊರಡುವಾಗ ಬಂದ ಸೆಕ್ಯೂರಿಟಿ ನಿಂಗೊಂದು ಕೊರಿಯರ್ ಇದೆ ತಗೊಮ್ಮಾ ಅಂದ್ರು. ನಂಗಾ ಎಂದು ಕೊಂಚ ಅಚ್ಚರಿಯಲ್ಲೇ ಸ್ವಲ್ಪ ಅನುಮಾನದಲ್ಲೇ ತೆಗೆದುಕೊಂಡು ನೋಡಿದೆ, ಹೌದು ನನ್ನದೇ ವಿಳಾಸ ಹೊತ್ತ ಪುಟ್ಟ ಪ್ಯಾಕ್. ಸ್ಪರ್ಶಿಸುತ್ತಿದ್ದಂತೆ ಮನಸ್ಸು ಬಾಲ್ಯಕ್ಕೆ ಓಡಿತು. ಓಲೆಯ ಹಂಚಲು ಹೊರಡುವೆ ನಾನು ತೋರಲು ಆಗಸದಲಿ ಬಿಳಿ ಬಾನು ಒಳಗಡೆ ನೀವು ಹೊರಗಡೆ ನಾನು ಕಾಗದ ಬಂತೂ ಕಾಗದವೂ.... ಹಿಂದೆಲ್ಲಾ ಸೈಕಲ್ ಬೆಲ್ ಅನ್ನೋದು ಒಲಂಪಿಕ್ ಸ್ಪರ್ದೆಯ ಸದ್ದಿದ್ದಂತೆ. ಮಾಡುವ ಕೆಲಸವನ್ನು ಬಿಟ್ಟು ಓಡುತ್ತಿದ್ದೆವು. ಬಾಗಿಲಲ್ಲಿ ಕಾಣಿಸುವ ಪೋಸ್ಟ್ಮನ್ ಥೇಟ್ ದೇವದೂತನಂತೆ ಕಾಣಿಸುತ್ತಿದ್ದ. ಅವನ ಹೆಗಲಿನ ಚೀಲವೋ ಹಲವು ಭಾವಗಳನ್ನು ತನ್ನೊಡಲಲ್ಲಿ ಅಡಗಿಸಿಟ್ಟು ಕೊಂಡ ನಿಶ್ಚಲ ಸಮುದ್ರ. ಆ ಚೀಲದೊಳಕ್ಕೆ ಕೈ ಹಾಕಿ ಅವನು ತೆಗೆಯುವುದನ್ನೇ ಕಾತುರದಿಂದ ಕಾಯುತ್ತಿದ್ದ ನಾವು ಸಿಕ್ಕಿದೊಡನೆ ಮಾಡುವ ಮೊದಲ ಕೆಲಸ ಅದು ಯಾರಿಗೆ ಎಂದು ನೋಡುವುದು. ಬರುವ ಪ್ರತಿ ಪತ್ರದ ಬರಹವೂ ಪರಿಚಿತವಾದರೂ ಅದನೊಮ್ಮೆ ಹಿಂದೆ ತಿರುಗಿಸಿ ನೋಡಿ ಮತ್ತೊಮ್ಮೆ ಬರೆದವರು ಯಾರು ಎಂದು ಕನ್ಫರ್ಮ್ ಮಾಡಿಕೊಳ್ಳುವುದರಲ್ಲೂ ಅದೇನೋ ಸಂಭ್ರಮ. ಅದೆಷ್ಟೇ ಆತುರವಿದ್ದರೂ ಒಮ್ಮೆಗೆ ಒಡಿಯುವಹಾಗಿಲ್ಲ. ಓಡಿ ಬಂದು ಒಂದು ಜಾಗದಲ್ಲಿ ಕುಳಿತುಕೊಂಡು ಅದನ್ನು ನಿಧಾನವಾಗಿ ಇಷ್ಟಿಷ್ಟೇ ಬಿಡಿಸುತ್ತಾ ಸಂಪೂರ್ಣವಾಗಿ ತೆರೆಯುವುದು ಒಂದು ಕಲೆ. ಇನ್ನು ಒಂದು ಅಕ್ಷರವನ್ನೂ ಭರಿಸಲಾರೆ ಅನ...