ಮೆಟ್ರೋ

R.V ರೋಡ್ ನಿಂದ ಸೌತ್ ಎಂಡ್ ವರೆಗೂ ಸಾಗುವ ಮೆಟ್ರೋ ಪ್ರತಿ ಸಲವೂ ಹೊಸತೆನಿಸುತ್ತದೆ. ಎರಡೂ ಕಡೆಯಲ್ಲೂ ಹಬ್ಬಿರುವ ಹಸಿರು ಹುಲ್ಲು ಹಾಸಿಗೆಯನ್ನು ನೆನಪಿಸುತ್ತದೆ. ಮೆಟ್ರೋ ಮುಂದಕ್ಕೆ ಹೋಗುತ್ತಿದ್ದರೆ ರೆಕ್ಕೆ ಬಿಚ್ಚಿ ಹಾರುವ ಭಾವ. ಹಸುಗೂಸಿನ ಪಾದದ ಮೃದು ನೆನಪಿಸುವ  ಅರಳಿದ ಪಲಾಶ ಪುಷ್ಪ, ಮುಗಿಲೆತ್ತರಕ್ಕೆ ಬೆಳೆಯುವ ಹುಮ್ಮಸ್ಸಿನಲ್ಲಿ ನಿಂತಿದ್ದರೂ ನೆಲಕ್ಕೆ ಬೇರುಕೊಟ್ಟ ಮರಗಳು, ಅಲ್ಲೆಲ್ಲೋ ಕುಳಿತು ಕೂಗುವ ಪಕ್ಷಿ, ಹಸಿರ ನಡುವೆಯಲ್ಲಿ ಕಾಣಿಸುವ ಹಳದಿ ಎಲೆಗಳು, ಮರಗಳ ಸಂದಿಯಲ್ಲಿ ಕಣ್ಣು ಮುಚ್ಚಾಲೆ ಆಡುವ ಬಿಸಿಲು, ನೆರಳಿನ ಕೆಳಗೆ ವಿಶ್ರಮಿಸುವ ಮನೆಗಳು.

ಸದ್ದಿಲ್ಲದೇ ಉದುರುವ ಎಲೆ, ಒಡಲು ಬಿರಿದು ಬರುವ ಹೊಸ ಜೀವಕ್ಕಾಗಿ ಸಂಭ್ರಮಿಸುವುದೋ ಅಥವಾ ಅಷ್ಟರವರೆಗೂ ಜೊತೆಗಿದ್ದು ಈಗ ವಿದಾಯ ಹೇಳುವ ಜೀವಕ್ಕಾಗಿ ಮರಗುವುದೋ ಎನ್ನುವ ಗೊಂದಲವಿಲ್ಲದೇ ನಿರ್ಲಿಪ್ತವಾಗಿ ನಿಂತಿರುವ ಸಾಲು ಮರಗಳು, ಕೆಳಗೆ ಭರ್ರ್ ಎಂದು ಕಾಲನನ್ನೂ ಮೀರಿಸುವ ವೇಗದಲ್ಲಿ ಸಾಗುವ ವಾಹನಗಳು. ಆಗೊಮ್ಮೆ ಈಗೊಮ್ಮೆ ವೇಗಕ್ಕೆ brake ಹಾಕುವ ಸಿಗ್ನಲ್ ದೀಪಗಳು. ಬದುಕಿನ ರಸ್ತೆಯಲ್ಲೂ ಎಷ್ಟೊಂದು ಸಿಗ್ನಲ್ ..... ಜೀವನ ನಿರಂತರ ಚಲನೆ.

ಲಯಬದ್ಧ ಗತಿಯಲ್ಲಿ ಸಾಗುವ ಪ್ರಯಾಣ, ಜೊತೆಗೆ ಹತ್ತಿದವರೆಲ್ಲಾ ಇರ್ತಾರೆ ಅನ್ನೋ ನಂಬಿಕೆ ಸಲ್ಲ, ಅವರವರ ನಿಲ್ದಾಣ ಬಂದ ಹಾಗೆ ಸದ್ದಿಲ್ಲದೇ ಸರಿದು ಹೋಗುವ ಜನ, ಅಪರಿಚಿತರೂ ಪರಿಚಿತರಾಗುವ, ಪರಿಚಿತರೂ ಅಪರಿಚಿತರೆನಿಸುವ, ಜನಸಾಗರದಲ್ಲೂ ಒಂಟಿಯೆನಿಸುವ , ಒಮ್ಮೆ ದೃಷ್ಟಿ ಹೊರಗೆ ಹೊರಳಿಸಿದರೆ ಎಷ್ಟೊಂದು ಜೊತೆ ಅನಿಸುವ. ಕಾಲದಲ್ಲಿ ಕಳೆದು ಹೋಗುತ್ತಲೇ ಪಡೆದುಕೊಳ್ಳುವ ದಾರಿಯದು.

ಅಷ್ಟು ದೂರದ ದಾರಿ ಇಷ್ಟು ಬೇಗನೆ ತಲುಪಿಸುವ ಈ ಮಾಯಾವಿ  ಅಯ್ಯೋ ಎಷ್ಟೊಂದು ಹತ್ತಿರವೆನಿಸುವ ಫೀಲ್ ಕಟ್ಟಿ ಕೊಡುತ್ತದೆ. ದೂರವೆನಿಸಿದ್ದು ಹತ್ತಿರವಾಗೋದು, ಹತ್ತಿರವಿದ್ದಿದ್ದು ದೂರವೆನಿಸೋದು ಈ ಪ್ರಯಾಣ ಚೆಂದವಾಗಿ ಕಲಿಸೋದೆ ಒಂದು ಅಚ್ಚರಿ. ನಮಗೆ ಬೇಕಾದವರು ಇಳಿದು ಹೋಗುವ ಹಾಗೆ ನಾವು ಬೇಕೆನಿಸಿದವರಿಗೂ ಹೇಳದೆ ಇಳಿದು ಹೋಗುತ್ತಿವಾ ಅನ್ನೋ ಪ್ರಶ್ನೆ ಯಾಕೆ ಕಾಡೋದೇ ಇಲ್ಲಾ ಅನ್ನಿಸೋದೂ ಉಂಟು. ಯಾರು ಬಂದರೂ, ಯಾರು ಹೋದರೂ ಚಲನೆ ಅನ್ನೋದು ನಿರಂತರ ಅನ್ನೋದು ಕಲಿಸುತ್ತೆ. ಹತ್ತಿದ ಪ್ರತಿಯೊಬ್ಬರಿಗೂ ನಿಲ್ದಾಣ ಅನ್ನೋದು ಕನ್ಫರ್ಮ್ ಆದರೂ ಚಲನೆ ಮಾತ್ರ ನಿತ್ಯ ನಿರಂತರ.

ಹತ್ತಿದ ಕೂಡಲೇ ಮೊಬೈಲ್ ನ ಮೋಹದೊಳಕ್ಕೆ ಬಿದ್ದು ಸುತ್ತೆಲ್ಲಾವನ್ನು ಮರೆಯುವವರು, ಪಕ್ಕದ ಮೊಬೈಲ್ ಕಿಂಡಿಯಲ್ಲಿ ಏನೇನು ಕಾಣಬಹದು ಅನ್ನೋ ಕುತೂಹಲದಲ್ಲಿ ಇಣುಕುವವರು, ಕಿವಿಗೊಂದು ಇಯರ್ಫೋನ್ ತಗುಲಿಸಿ ಕಳೆದುಹೋಗುವವರು, ಮೊದಲ ಬಾರಿಗೆ ಮೆಟ್ರೋ ಹತ್ತಿದ ಅಜ್ಜಿಯ ಜೋರು ಮಾತಿಗೆ ಅಸಹನೆಯಿಂದ ದೃಷ್ಟಿಸುವವರು, ನಿಧಾನಕ್ಕೆ ಮಾತಾಡಿ ಎಂದು ಹೇಳಲಾಗದ ಅಸಹಾಯಕತೆ, ಮಜುಗರಕ್ಕೆ ಎತ್ತಲೋ ನೋಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸುವವರು.. ಕೂರಲು ಸ್ಥಳ ಸಿಗಬಹುದಾ ಅಂತ ಹದ್ದಿನ ಕಣ್ಣಿನಿಂದ ಇಡೀ ಬೋಗಿಯನ್ನು ಹುಡುಕುವವರು.. ಬೋಗಿಗೆ ಬೆನ್ನಾಗಿ ಹೊರಗೆ ದೃಷ್ಟಿ ಹಾಯಿಸುವವರು, ಕಣ್ಣಿಗೊಂದು ಕಪ್ಪು ಕನ್ನಡಕ ಏರಿಸಿಕೊಂಡು ಇವೆಲ್ಲವನ್ನು ಗಮನಿಸುವ ನನ್ನಂತವರು.. ಒಂದು ಬೋಗಿ ಎಷ್ಟೊಂದು ನೋಟಗಳು...

ಚಲನೆಯೊಂದೆ ಸತ್ಯ...
ನಿಲ್ದಾಣಗಳು ನಿತ್ಯ...
ಅನ್ನೋದು ನಿಜವಾದರೂ ಪ್ರಯಾಣ ಹಿತಕರವಾಗಿರಬೇಕೆಂದರೆ ನಡುವೆ ಅಂತರವಿರಬೇಕು.
ಮೆಟ್ರೋದಲ್ಲೂ......
ಬದುಕಲ್ಲೂ.....



Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...