ಹಸಿದವರಿಗಷ್ಟೇ ಮತ್ತೊಬ್ಬರ ಹಸಿವು ಅರ್ಥವಾಗುತ್ತಾ ?



ಜಾನಕಿ ಕಾಲಂ ಓದು ಅಂತ ಹೇಳಿ ತಂದ ಕೂಡಲೇ ಅದನ್ನೇ ಮೊದಲು ಓದು ಅಂತ ಮಾಲಿನಿ ಅಕ್ಕಾ ಯಾಕೆ ಹೇಳಿದ್ರು ಅನ್ನೋದು ಓದಲು ಶುರುಮಾಡಿದಾಗಲೇ ಅರ್ಥವಾಗಿದ್ದು. ಮೊದಲ ಲೇಖನವೇ ಪುಣ್ಯಕೋಟಿಯ ಕತೆಯದು. ಒಂದು ಬಿನ್ನಹ ಹುಲಿಯೇ ಕೇಳು ಅಂತ ಶುರುವಾಗುವ ಸಾಲು ಹುಲಿ ಮಾತ್ರವಲ್ಲ ನಾವೂ ಕೇಳಲೇಬೇಕಾದ ಸಾಲು.  ಬದುಕಿನಲ್ಲಿ ನಾವೂ ಯಾವತ್ತೋ ಹೀಗೆ ಭಿನ್ನವಿಸಿದ್ದು ನೆನಪಾಗುವ ಸಾಲು. ಪ್ರತಿಯೊಬ್ಬರಿಗೂ ಭಿನ್ನಹ ಇದ್ದೇ ಇರುತ್ತದೆ, ಅದನ್ನು ಕೇಳುವವರಿಗಾಗಿ ಜೀವ ಕಾಯುತ್ತದೆ, ಮೈಯೆಲ್ಲಾ ಹಿಡಿಯಾಗಿ ಅದು ತಲುಪಲಿ ಎಂದು ಕಾಯುವ ಹಾಗೆ ಮಾಡುತ್ತದೆ. ಭಿನ್ನಹ ಹೇಳಿಕೊಳ್ಳದ, ಕೇಳದ ಜೀವಿಯಾದರೂ ಇದೆಯೇ ಜಗತ್ತಿನಲ್ಲಿ.

ಧರಣಿ ಮಂಡಲ ಮಧ್ಯೆ ಮೆರೆಯುತಿಹ ಕರ್ನಾಟ ದೇಶದೊಳ್  ಸಂಪಗೋಡು ಎಂಬ ಹಳ್ಳಿಯಲ್ಲಿ ನನ್ನ ಬದುಕು ಥೇಟ್ ಹೀಗೆ ಶುರುವಾಗಿತ್ತು. ಕಾಡು, ನೀರು, ಹಳ್ಳಿ, ಬೆರಳೆಣಿಕೆಯಷ್ಟು ಮನೆ, ಗುರುತಿಟ್ಟುಕೊಳ್ಳುವಷ್ಟು  ಜನಗಳು. ಬೆಳಿಗ್ಗೆ ದನಗಳು ಕಾಡಿಗೆ ಹೋಗುವ ಸಮಯದಲ್ಲಿ ನಾವು ಶಾಲೆಯೆಂಬ ಕಟ್ಟಡಕ್ಕೆ ಹೋಗಿ ಅವುಗಳ ಹಾಗೆ ಅಲ್ಲಿ ಇಲ್ಲಿ ತಿರುಗಿ ಗೋಧೂಳಿಯ ಸಮಯಕ್ಕೆ ಕೆಂಪಾಗಿ ಮನೆಗೆ ಬರುತಿದ್ದೆವು. ಇಡೀ ದನದ ಮಂದೆಗೆ ಇರುವ ಒಬ್ಬನೇ ಗೋಪಾಲಕನಂತೆ ನಾಲ್ಕು ತರಗತಿಗಳಿಗೆ ಒಬ್ಬರೇ ಮೇಷ್ಟ್ರು. ಅವರೂ ಈ ಗೋಪಾಲಕನಂತೆ ನಮ್ಮನ್ನು ಕಾಡದೆ ನಮ್ಮ ಪಾಡಿಗೆ ನಾವು ಕಲಿಯಲು ಬಿಡುವಷ್ಟು ಒಳ್ಳೆಯವರು, ಮಂದೆ ತಪ್ಪಿದರೆ ಬೆತ್ತ ಝಳಪಿಸುವಷ್ಟು ಕೆಟ್ಟವರು.

ಹೀಗೆ ಸೊಂಪಾಗಿ ಇರುವ ಹೊತ್ತಿಗೆ  ತಣ್ಣಗೆ ಹರಿಯುತಿದ್ದ ವಾರಾಹಿಯ  ಮೇಲೆ ಆಳುವವರ ಕೆಂಗಣ್ಣು ಬಿದ್ದಿದ್ದು ಮತ್ತು ಅವಳು ಹರಿವು ನಿಲ್ಲಿಸಿ ಊರೂರು ನುಂಗಿದ್ದು. ಒಂದು ಭಿನ್ನಹ ಕೇಳು ದೊರೆಯೇ... ಹೋಗುವುದಾದರೂ ಎಲ್ಲಿಗೆ... ಎನ್ನುವ ಊರಿನವರ ಮನವಿಗೆ   ಅರ್ಬುಕ ವ್ಯಾಘ್ರನ ಹಾಗೆ ಅವರ ಮಾತು ಕೇಳುವ ತಾಳ್ಮೆ ಮನಸ್ಸು ಎರಡೂ ಸರ್ಕಾರಕ್ಕೆ ಇರಲಿಲ್ಲ. ಆಗೆಲ್ಲಾ ಅರ್ಬುಕನ ಕ್ರೌರ್ಯ ಏನೇನೂ ಅಲ್ಲವೆನಿಸಿದ್ದು ಸುಳ್ಳಲ್ಲ. ಏನೇ ಹೇಳಿ ಮನುಷ್ಯನ ಮೀರಿದ ಕ್ರೌರ್ಯ ಜಗತ್ತಿನಲ್ಲಿ ಎಲ್ಲಿದೆ?

ಇದ್ದ ಜಾಗವನ್ನು ಬಿಟ್ಟು ಹೊಸ ಊರಿಗೆ ಬಂದು ಹೊಸ ಶಾಲೆಗೇ ಸೇರಿ ಬಂದು ಕುಳಿತುಕೊಂಡ ದಿನ ಶುರುಮಾಡಿದ್ದೇ ಪುಣ್ಯಕೋಟಿಯ ಕತೆ. ಶಾಂತಪ್ಪ ಸರ್ ಅದನ್ನು ಓದಿ ಅರ್ಥ ಹೇಳುತಿದ್ದರೆ ಬೆಳೆದ ಕೊಟ್ಟಿಗೆಯನ್ನು ಬಿಟ್ಟು, ಜೊತೆಗಾರರನ್ನು ಬಿಟ್ಟು ಬರಬೇಕಾದ ಪುಣ್ಯಕೋಟಿಯ ಸಂಕಟ ಹುಟ್ಟಿ ಬೆಳೆದ ಊರನ್ನು, ಕಟ್ಟಿಕೊಂಡು ಬಾಳಿದ ಬದುಕನ್ನ ಎಲ್ಲವನ್ನೂ ಬಿಟ್ಟು ಯಾವುದೋ ಅಪರಿಚಿತ ಜಾಗಕ್ಕೆ ಬಂದು ಒದ್ದಾಡುತ್ತಿದ್ದ ನನ್ನ ಸಂಕಟದ ಹಾಗೆ ಅನ್ನಿಸಿ ಮಳೆಗಾಲದ ಆ ಬೆಳಗಿನಲ್ಲಿ ಹೊರಗೂ ಒಳಗೂ ಮಳೆ ಸುರಿಯುತಿತ್ತು. ಸಣ್ಣಗೆ ಶುರುವಾದ ಮಳೆ ಅದ್ಯಾವಾಗ ಜೋರಾಗಿತ್ತು ಅಂತ ಯಾರಿಗೆ ಗೊತ್ತಿತ್ತು.

ಹಬ್ಬಿದಾ ಮಲೆ ಮಧ್ಯದೊಳಗೆ....

ಹಿತ್ತಿಲಿಗೆ ಬಂದು ಕಣ್ಣು ಹಾಯಿಸಿದರೆ ಕಾಣುತಿದ್ದದ್ದೇ ಕಾಡು. ಹಿತ್ತಿಲಿನ ಬೈತಲೆ ತೆಗೆದ ಹಾಗೆ ಸಾಗುವ ದಾರಿ ಕೊಂಚ ಮುಂದೆ ಹೋಗಿ ಮುಂದೆ ದಾರಿಯಿಲ್ಲದೆ ಸ್ತಬ್ಧವಾಗುತಿತ್ತು. ಆ ಕೊನೆಯಲ್ಲಿ ಕುಳಿತ ವೆಂಕಟೇಶ್ವರ. ಅವನ ಬೆನ್ನ ಹಿಂದೆ ಕಾಡಿನ ಅಂಗಳ. ಸ್ವಲ್ಪ ಒಳಗೆ ಹೋದರಂತೂ ಬೆಳಕೂ ಒಳಗೆ ಬರಲು ಅಂಜುವಂತ ದಟ್ಟಕಾಡು. ಮಾಸ್ತಿ ಕಾಡು ಅಂತ ಹೆಸರು ಇಟ್ಟಿದ್ದು ಯಾರೋ ಯಾರಿಗೆ ಗೊತ್ತು. ಈಗಿನವರಿಗೆ ಮಾಸ್ತಿಯಂತೆ ಅದು ನಮಗೆ ಅಪರಿಚಿತವಾಗಿತ್ತು.  ರಾತ್ರಿ ಯಾವ ಜಾಮದಲ್ಲೋ  ಎಚ್ಚರವಾದರೆ ಹುಲಿಯ ಗರ್ಜನೆ ಕಿವಿಗೆ ಬಿದ್ದು ಹೊದ್ದ ಹೊದಿಕೆಯನ್ನು ಇನ್ನಷ್ಟು ಬಲವಾಗಿ ಎಳೆದು ಮಲಗುವ ಹಾಗಾದರೂ ಬೆಳಿಗ್ಗೆ ಅದೆಲ್ಲವೂ ಮರೆತು ಹಾರುತ್ತಾ ಹೋಗುತಿದ್ದೆವು. ಬಾಲ್ಯದಲ್ಲೇ ಅದು ಒಂದೇ ಕಾಲ ಅದು ವರ್ತಮಾನ ಅನ್ನೋ ಯಯಾತಿಯ ಸಾಲು ಆಗ ಓದಿದ್ದರೆ ಹೌದೌದು ಅದೇ ಸತ್ಯ ಎನ್ನುತ್ತಿದ್ದೆವೇನೋ..

ಪುಣ್ಯಕೋಟಿ ಎಂಬ ಹಸುವು ತನ್ನ ಕಂದನ ನೆನೆದುಕೊಂಡು...
ಬದುಕಿನಲ್ಲೂ ಹೀಗೆ ಅಲ್ಲವಾ... ನಮ್ಮ ಪಾಡಿಗೆ ನಾವು ಅದೇನನ್ನೋ ಸಾಧಿಸಲು, ಇನ್ಯಾವುದೋ ಗುರಿ ತಲುಪಲು, ಮತ್ಯಾವುದೋ ಕಾರ್ಯಸಾಧನೆಗೆ ನಮ್ಮ ಪಾಡಿಗೆ ನಾವು ಹೋಗುತ್ತಿರುವಾಗ ದಾರಿಯ ಅದ್ಯಾವ ತಿರುವಿನಲ್ಲೋ ಧುತ್ತೆಂದು ಅರ್ಬುಕ ಪ್ರತ್ಯಕ್ಷನಾಗುವ ಹಾಗೆ ಸಂಕಷ್ಟಗಳೂ ಎದುರಾಗುತ್ತದೆ, ಸಂಜೆಯ ಸೊಬಗಿನಲ್ಲೂ ಮೂಲೆಯಲ್ಲಿಂದ ಯಾವುದೋ  ರೋಷ ಸಿಡಿಯುತ್ತದೆ..  ಜೀವ ತಲ್ಲಣಿಸುತ್ತದೆ. ನಂಬಿದವರ ನಡು ನೀರಿನಲ್ಲಿ ಬಿಟ್ಟು ಹೋಗುವ ಅಸಹಾಯಕತೆ ಕಾಡುತ್ತದೆ. ಮುಳುಗುವ ಭಯಕ್ಕಿಂತ ನಂಬಿದವರನ್ನು ಮುಳುಗಿಸಿ ಹೋಗುತ್ತೇವಾ ಅನ್ನುವ ಆಲೋಚನೆಯೇ ಹೆಚ್ಚು ನಡುಗಿಸುತ್ತದಾ?  ಆ ಭಯವೇ ಭಿನ್ನವಿಸುವ ಹಾಗೆ ಮಾಡುತ್ತದಾ?

ದುಃಖಕ್ಕೆ ಅಭಿವ್ಯಕ್ತಿ ಜಾಸ್ತಿ. ಎಳೆಎಳೆಯಾಗಿ ಹಿಂಜಿದಷ್ಟೂ ಹತ್ತಿಯಂತೆ ಅದು ಹಿಗ್ಗುತ್ತದೆ.  ಹಿಗ್ಗುವ ಪ್ರಮಾಣಕ್ಕೆ ತಕ್ಕಂತೆ ಅದರ ತೀವ್ರತೆ ನಿರ್ಧಾರವಾಗುತ್ತೆ, ಹಾಗೆ ಹಿಗ್ಗಿದಾಗಲೇ ಅದರ ರೂಪಾಂತರಗೊಳ್ಳುವ ಪ್ರಕ್ರಿಯೆ ಸಾಧ್ಯವಾಗುವುದಾ? ನೋವು ಕೇಳುಗರಲ್ಲಿ ಅನುಕಂಪ ಹೆಚ್ಚಿಸುತ್ತದೆ. ನೊಂದವರ ನೋವಿಗೆ ಕಿವಿಯಾಗುವವರ ಸಂಖ್ಯೆ ಜಾಸ್ತಿಯೇ.. ಪ್ರತಿಕ್ರಿಯಿಸುವವರು...  ಅದೀಗ ಬೇಡ ಬಿಡಿ. ಸಂತೋಷಕ್ಕೆ ಹಿಗ್ಗುವ ಗುಣವಿಲ್ಲ ಮತ್ತದನ್ನ ತಾಳ್ಮೆಯಿಂದ ಕೇಳುವ ಜನರೂ ಬಹಳವಿಲ್ಲ. ಪುಣ್ಯಕೋಟಿಯ ಸತ್ಯಕ್ಕಿಂತಲೂ ಹೆಚ್ಚು ತಟ್ಟುವುದು ಅವಳ ದುಃಖ ಅದನ್ನು ಅವಳು ವಿಸ್ತರಿಸಿ ಹೇಳುವ ರೀತಿ.

ಈ ವಿಷಾದದಲ್ಲಿ, ಗಾಢತೆಯಲ್ಲಿ, ಪುಣ್ಯಕೋಟಿಯ ನೋವಿನಲ್ಲಿ ನಮಗೆ ಹುಲಿಯ ಹಸಿವು ಮರೆತೇ ಹೋಗುತ್ತದೆ. ನೋವು ಹಸಿವಿಗಿಂತಲೂ ಶಕ್ತಿಶಾಲಿಯಾ? ಅವಳ ಮಾತು ನಂಬಿ ಕಳಿಸಿಕೊಟ್ಟ ಹುಲಿಯದು ಔದಾರ್ಯ ಮರೆಯಾಗುತ್ತದೆ. ಜಗತ್ತನ್ನು ಹಿದಿಡುವ ಭಾವಗಳಲ್ಲಿ ವಿಷಾದಕ್ಕೆ ಮೊದಲ ಸ್ಥಾನವೇನೋ..
ಆರ ಮೊಲೆಯನು ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರು ನನಗೆ ಹಿತವರು...
ಎಂದು ಕರು ಕೇಳುವ ಹೊತ್ತಿಗೆ ಮಾತು ತಪ್ಪಿದರೆ ಅದು ದೊಡ್ಡ ಪ್ರಮಾದ ಅಂತ ಅನ್ನಿಸುವುದರ ಬದಲಿಗೆ ಮಾತು ತಪ್ಪಿದರೆ ಒಳ್ಳೆಯದು ಅನ್ನುವ ನಿರ್ಧಾರಕ್ಕೆ ಮನಸ್ಸು ಸಿದ್ದವಾಗುತ್ತದೆ. ಅನುಕಂಪ ಉಳಿದೆಲ್ಲವುದರ ಮೇಲೆ ಜಯಗಳಿಸುತ್ತದೆ, ನೋವು ಕೆಳಲಷ್ಟೇ ಚೆಂದ ಅನುಭವಿಸಲು ಅಲ್ಲಾ.. ಬದುಕಿದ್ದರೆ ತಾನೇ ಗುಣ, ಮೌಲ್ಯ.. ಬದುಕೇ ಇಲ್ಲದಿದ್ದರೆ...?  ಮನುಷ್ಯನ ಮೂಲ ಸ್ವಭಾವ ಸ್ವಾರ್ಥ ಅಂದಿದ್ದು ಇದಕ್ಕೇನಾ?

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ..
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯ ನೀ ಕರುವನು...
ಶಾಂತಪ್ಪ ಮಾಷ್ಟರು ಈ ಸಾಲಿಗೆ ಬರುವಾಗ ಮಳೆಯ ಆರ್ಭಟ ಜೋರಾಗಿತ್ತು. ಜೊತೆಗೆ ಹಿಮ್ಮೇಳದ ಸದ್ದೂ. ಬಾಚಿ ತಬ್ಬಿ ಸಂತೈಸಬೇಕು ಅನ್ನಿಸುವುದು ಇಂಥ ತೀವ್ರ ಕ್ಷಣಗಳಲ್ಲೇ. ಯಾವುದೂ ತೀವ್ರವಾಗಿಲ್ಲದೆ ಹೋದರೆ ಅದು ಇಳಿಯುವುದಿಲ್ಲ. ಇಳಿಯಬೇಕಾದರೆ ಚೂಪು ಬೇಕು. ಆ ಚೂಪು ಕತ್ತರಿಸಿಕೊಂಡು ಒಳಗಿಳಿಯಬೇಕು, ಹಾಗೆ ಅಗೆದಾಗ ಮಾತ್ರ ಹನಿ ಒಸರುತ್ತದೆ, ಬಂಡೆಯಡಿಯ ಜಲದ ಒರತೆಯ ಹಾಗೆ, ಆ ಒರತೆ ಉಕ್ಕಿದಾಗ ಮಾತ್ರ  ಆರ್ದತೆ.. ಆ ಆರ್ದತೆಯಲ್ಲಿ ತೇವದಲ್ಲಿ ಮಾತ್ರ ಮೊಳಕೆ ಒಡೆಯುವುದು. ಹೊಸ ಜೀವದ, ಭಾವದ ಚಿಗುರು ನಳನಳಿಸುವುದು. ಇವಳು ಹೊಸದಾಗಿ ಬಂದಿದ್ದಾಳೆ ನಿಮ್ಮ ಜೊತೆ ಸೇರಿಸಿಕೊಳ್ಳಿ ಅಂದ ಶಾಂತಪ್ಪ ಮೇಷ್ಟ್ರು, ಪುಣ್ಯಕೋಟಿ ಇಬ್ಬರೂ ಅದೆಷ್ಟು ಒಂದೇ ಒಂದೇ...

ಸತ್ಯವೇ ನಮ್ಮ ತಾಯಿತಂದೆ,
ಸತ್ಯವೇ ನಮ್ಮ ಬಂಧು ಬಳಗ...
ಬದುಕಿನ ಗುರಿಯೇ ಸತ್ಯದ ಅನ್ವೇಷಣೆ ಎನ್ನುತ್ತಿದ್ದರು ಹಿರಿಯರೊಬ್ಬರು. ಯಾವುದು ಸತ್ಯ? ಅದೂ ಕೂಡಾ ದೇವರಂತೆ. ಹಲವು ರೂಪಗಳಲ್ಲಿ ಕಾಣಿಸುತ್ತದೆ. ಹಾಗಿದ್ದರೆ ಅಂತಿಮ ಸತ್ಯ ಯಾವುದು ಅದು ಅನುಭವಕ್ಕಷ್ಟೇ ದಕ್ಕಬೇಕು. ಸತ್ಯ ನಿಧಾನ ಅದು ಎದ್ದು ಬರುವುದರೊಳಗೆ ಸುಳ್ಳು ಜಗತ್ತೇ ಸುತ್ತಿ ಬಂದಿರುತ್ತದೆ ಅನ್ನೋದು ಲೋಕರೂಡಿಯ ಮಾತು. ಅದಕ್ಕೆ ಅಂತಿಮ ಸತ್ಯ ಎಂದು ಕರೆಯೋದಾ... ಅದರ ನಂತರ ಎಲ್ಲವೂ ಮುಗಿಯುತ್ತದಾ.... ಅಥವಾ ಅಲ್ಲಿಂದ ಆರಂಭವಾಗುತ್ತದಾ? ಬರೀ ಪ್ರಶ್ನೆಗಳೇ...

ಗೋವು ಕರುವನು ಬಿಟ್ಟು ಬಂದು....
ಶಾಂತಪ್ಪ ಮೇಷ್ಟರು  ಹೇಳುವ ಹೊತ್ತಿಗೆ ಮುಸಲಧಾರೆ. ಉಹೂ ಆಡಿದ ಮಾತಿಗೆ ತಪ್ಪಬಾರದು, ನಂಬಿಕೆಯನ್ನು ಕೆಡಿಸಬಾರದು ಅನ್ನೋದು ಮನಸ್ಸಿಗೆ ಗಟ್ಟಿಆಗುವ ಹೊತ್ತಿಗೆ ಹುಲಿ ಮೆದುವಾಗತೊಡಗಿತ್ತು. ಎಂಥಾ ವಿರೋಧಾಭಾಸ... ಇಲ್ಲಿ ಕತ್ತಲೆಯಿದ್ದಾಗ ಅಲ್ಲಿ ಬೆಳಕು ಸರಿ ಇಲ್ಲಿ ಗಟ್ಟಿಯಾಗುವ ಹೊತ್ತಿಗೆ ಅಲ್ಯಾಕೆ ಮೃದುವಾಗಬೇಕು? ನೋವಿಗೆ ಹೀಗೊಂದು ಶಕ್ತಿಯಿದೆಯಾ... ಅದು ಕೇಳುಗರ ಎಂಥಹ ಕಲ್ಲು ಹೃದಯವನ್ನಾದರೂ ಕರಗಿಸಿ ಬಿಡುತ್ತದಾ? ಹಾಗಾದರೆ  ಹೇಳುವವರದು....

ಖಂಡವಿದೆಕೋ ಮಾಂಸವಿದೆಕೋ...
ಗುಂಡಿಗೆಯ ಬಿಸಿ ರಕ್ತವಿದೆಕೋ...

ಪುಣ್ಯಕೋಟಿಯ ಕಟುಮಾತುಗಳನ್ನ ನೋಡಿ... ಹೇಗಿದ್ದರೂ ಸಾಯುತ್ತೇನೆ ಒಳಗಿನ ಆಕ್ರೋಶವನ್ನು ಹೊರಗೆ ಹಾಕಿಯೇ ಸಾಯುತ್ತೇನೆ ಎಂದು ಹಾಗೆ ಮಾಡಿತಾ... ದುಃಖಕ್ಕೂ ಕಾವಿದೆ... ಆ ಬಿಸಿಯನ್ನು ತಡೆದುಕೊಳ್ಳಲು ತುಂಬಾ ಗಟ್ಟಿತನ ಬೇಕು. ಆ ಬಿಸಿಗೆ ಅರ್ಬುಕ ಕರಗಿದನಾ.. ಪುಣ್ಯಕೋಟಿ ದುಃಖ ತೋಡಿಕೊಳ್ಳದಿದ್ದರೆ ಹುಲಿ ತಿಂದು ಬಿಡುತಿತ್ತಾ.... ನೋವಿನ ಮುಂದೆ ಹಸಿವು ಯಾವ ಲೆಕ್ಕ ಅನ್ನಿಸಿತಾ.... ಅಥವಾ ತಾನು ಹಸಿದಿದ್ದರಿಂದಲೇ ಅದರ ಮಗುವಿನ ಹಸಿವು ಅರ್ಥವಾಯಿತಾ ಹಸಿದವರಿಗಷ್ಟೇ ಹಸಿವು ಅರ್ಥವಾಗುವುದಾ, ನೊಂದವರಿಗೆ ಮಾತ್ರ ನೋವು ತಿಳಿಯುವುದಾ...

ತನಗೆ ಏನಾದರೂ ತೊಂದರೆಯಿಲ್ಲ ನನ್ನ ಮಗುವಿಗೆ ಏನೂ ಆಗದಿರಲಿ ಎನ್ನುವ ತಾಯಿಭಾವ ಕಾಡಿತಾ.. ತಾಯಿ ಭಾವ ಅನ್ನೋದು ಇಡೀ ಪ್ರಕೃತಿಯ ಎಲ್ಲಾ ಜೀವಿಗಳಿಗೂ ಒಂದೆಯೇನೋ.. ಇನ್ಯಾವುದನ್ನೇ ಕೊಂದರೂ ಅದು ಇನ್ನೊಂದು ನೋವನ್ನೇ ಹುಟ್ಟಿಸುತ್ತದೆ, ಕೊಲ್ಲುವುದು ಕ್ರೌರ್ಯ, ಕಾಯುವುದು ಕರುಣೆ ಅನ್ನಿಸಿತಾ?   ಸಾವಿಗೂ ಭಯ ಪಡದ ಸತ್ಯವೇ ಹಿರಿಯದು ಅನ್ನಿಸಿತಾ? ಇನ್ನೊಂದು ಜೀವವನ್ನು ಕೊಲ್ಲುವುದಕ್ಕಿಂತ ತನ್ನ ತಾನು ಕೊಂದು ಕೊಳ್ಳುವುದೇ ಒಳ್ಳೆಯದು ಅನ್ನಿಸಿ ಬಿಡ್ತಾ.... ಇದ್ದು ಸಾಯುವುದಕ್ಕಿಂತ ಸತ್ತು ಬದುಕುವುದು ಒಳ್ಳೆಯದು ಅಂತ ಭಾವಿಸಿತಾ...  ಹುಲಿಗೆ ಬೇರೆ ದಾರಿಯೇ ಇರಲಿಲ್ಲವಾ... ಬದುಕಿನ ಅಂತಿಮ ಗುರಿ ಸತ್ಯವನ್ನು ಗೆಲ್ಲಿಸುವುದು ಮಾತ್ರವಾ...

ಮುಸಲಧಾರೆಯ ತೀವ್ರತೆಗೆ ಪ್ರವಾಹ ಹೆಚ್ಚಿ ಕೆನ್ನೆಯಿಂದ, ಮೂಗಿನಿಂದ ಜಾರಿ ಇಳಿದ ನೀರು ಹಾಕಿದ್ದ ಯುನಿಫಾರ್ಮ್ ಅನ್ನು ತೊಯ್ಯಿಸಿ  ಮೂಗು, ಗಂಟಲು ಕಟ್ಟಿ ಉಸಿರಾಡಲು ಕಷ್ಟವಾಗುವ ಹೊತ್ತಿಗೆ ಅಲ್ಲಿ ಹುಲಿಯ ಉಸಿರೂ ನಿಂತಿತ್ತು.
ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು... ಅನ್ನುವ ಶಾಂತಪ್ಪ ಮೇಷ್ಟರ ದನಿಯೂ ಭಾರವಾಗಿತ್ತು.    ಅಲ್ಲಿಯವರೆಗೂ ಪುಣ್ಯಕೋಟಿಯ ಬಗ್ಗೆ ಮೆದುವಾಗಿದ್ದ ಮನಸ್ಸು ಇದ್ದಕ್ಕಿಂತಂತೆ ಎದುರಾದ ಆಕಸ್ಮಿಕಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಅನ್ನೋದು ಗೊತ್ತಾಗದೆ ಕುಳಿತಿದ್ದೆ. ಅಂತ್ಯ ಉಹೆಗೂ ನಿಲುಕದಂತೆ ಎದುರಾಗಿತ್ತು. ಬದುಕಲ್ಲೂ ಹಾಗೆ ತಾನೇ ಎಲ್ಲವೂ ಅನಿರೀಕ್ಷಿತ. ಹಾಗಾಗಿಯೇ ಕುತೂಹಲ. ಆ ಕುತೂಹಲವಿಲ್ಲದೆ ಹೋದರೆ ಬದುಕು ಹೇಗಿರುತ್ತಿತ್ತು?

ಇಲ್ಲಿ ಗೆದ್ದಿದ್ದು ಯಾರು? ಗೆಲ್ಲಿಸಿದ್ದು ಯಾರು? ಯಾರು ಒಳ್ಳೆಯವರು ಯಾರು ಕೆಟ್ಟವರು? ಬದುಕು ಎಷ್ಟೋ ಸಲ ಹೀಗೆ ಗೊಂದಲ ಸೃಷ್ಟಿಸಿ ನಗುತ್ತದೆ.  ಅಳುತಿದ್ದ ನನ್ನನ್ನು ನೋಡುವುದೋ ಅಥವಾ ಶಾಂತಪ್ಪ ಮೇಷ್ಟರನ್ನೋ ಅನ್ನುವ ಗೊಂದಲದಲ್ಲಿದ್ದ ಕ್ಲಾಸ್ ರೂಂ ನ ಇತರರ ಹಾಗೇ....ಅಂದು ಸ್ತಬ್ದವಾದ ವಾರಾಹಿ ಮಾತ್ರ ಇನ್ನೂ ಹಾಗೆ ಇದ್ದಾಳೆ...... ಪ್ರಶ್ನೆಗಳನ್ನು ಎದುರಿಗಿಟ್ಟುಕೊಂಡು...

ಬದುಕಿದ್ದೂ ಸಾಯಬಾರದು....
ಸತ್ತ ಮೇಲೂ ಬದುಕುವುದೆಂದರೆ ಇದೇನಾ...
 ಅವರವರ ಉತ್ತರ ಅವರವರೆ ಪಡೆದುಕೊಳ್ಳಬೇಕು ಅಲ್ಲವೇ...












Comments

  1. ಸಾಯದೆ ಬದುಕಿದ ಪುಣ್ಯಕೋಟಿ,ಸತ್ತು ಬದುಕಿದ ವ್ಯಾಘ್ರ ಇಬ್ಬರು ಒಂದೇ....ಬಾಲ್ಯದಿಂದ ಕೇಳುತ್ತಾ ಬಂದಿರುವ ಪುಣ್ಯ ಕೋಟಿಯ ಕಥೆ ಬಗ್ಗೆ ಎಷ್ಟು ಚೆಂದವಾಗಿ ನಿಮ್ಮ ಭಾವನೆಗಳನ್ನು ಹಂಚಿಕೊಂಡಿದ್ದೀರಿ...
    ನಿಮ್ಮ ಮನಸ್ಸಿನ ಒಳಗೆ ಅಡಗಿಕೊಂಡಿರುವ ಒಬ್ಬ ಭಾವಪೂರ್ಣ ಲೇಖಕಿ ಯ ನೈಜ ತನ ನಿಮ್ಮ ಎಲ್ಲಾ ಬರಹದಲ್ಲಿಯೂ ಸ್ಪಷ್ಟವಾಗಿ ಗೋಚರಿಸುತ್ತೆ..
    ಹೃದಯಪೂರ್ವಕ ಅಭಿನಂದನೆಗಳು💐💐💐💐

    ReplyDelete

Post a Comment

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...