ವಾಹ್ ಈ ಹಿನ್ನೀರು, ಜಾಗ ಎಷ್ಟು ಅದ್ಭುತವಾಗಿದೆ ಅಂತ ಉದ್ಘರಿಸುವ ಜನಗಳಿಗೆ ಅಲ್ಲಿ ತುಂಬಿರುವುದು ನದಿಯ ನೀರಲ್ಲ, ಸಂಕಟದ ಕಣ್ಣೀರು ಅಂತ ಗೊತ್ತಾಗುವುದೇ ಇಲ್ಲಾ... ಗೊತ್ತಾಗುವುದಾದರೂ ಹೇಗೆ? ಸ್ವಲ್ಪವಾದರೂ ಗೊತ್ತಾಗಬೇಕಾ ಪ್ರಶಾಂತ್ ನಿರ್ದೇಶನ ಮಾಡಿದ ಶರಾವತಿ ನೋಡಿ.

ಮಲೆನಾಡು, ಅಲ್ಲಿನ ಕಾಡು, ನದಿ, ಪ್ರಕೃತಿ ಸೌಂದರ್ಯಕ್ಕೆ ಎಷ್ಟು ಪ್ರಸಿದ್ದಿ ಅನ್ನೋದು ಹೊರನೋಟಕ್ಕೆ ನಿಜವಾದರೂ ಅಲ್ಲಿನ ಕಾಡಿನ ಮೌನ, ಕಣಿವೆಯ ನೀರವತೆ, ನೀರಿನ ಒಡಲು ಮತ್ತೇನೋ ಕತೆ ಹೇಳುತ್ತದೆ. ಸೌಂದರ್ಯದಲ್ಲಿ ಕಳೆದುಹೋಗದೇ, ಕೇಳಿಸಿಕೊಳ್ಳುವ ತಾಳ್ಮೆ, ಸೂಕ್ಷ್ಮತೆ ಇದ್ದರೆ ಕೇಳುತ್ತದೆ.

ಕಾಡಿನ ನಡುವೆ ಕಷ್ಟಪಟ್ಟು ಬೆವರು ಸುರಿಸಿ ತಮ್ಮದೇ ಅಷ್ಟು ಅಂತ ಜಾಗ ಮಾಡಿಕೊಂಡು ಕಾಡಿನ ಜೊತೆ, ಕಾಡು ಪ್ರಾಣಿಗಳ ಜೊತೆ ಬಾಳುವ ಮನುಷ್ಯನ ಉಸಿರು ಅದರೊಂದಿಗೆ ಮಿಳಿತವಾಗಿರುತ್ತದೆ. ಅವರೆಲ್ಲರ ನಡುವೆ ಒಂದು ಭಾಂದವ್ಯ ಬೆಳೆದಿರುತ್ತದೆ. ಅವರ ಕನಸು, ಭಾವ, ಬದುಕು ಎಲ್ಲವೂ ಅಲ್ಲೇ ಹುಟ್ಟಿ ಅಲ್ಲೇ ಬೇರು ಬಿಟ್ಟು, ಅಲ್ಲೇ ಬೆಳೆದು ವಿಸ್ತರಿಸಿರುತ್ತದೆ. ಹೀಗಿರುವಾಗ ಅಭಿವ್ರುಧ್ಹಿಯ ಹೆಸರಿನಲ್ಲಿ ಅವನನ್ನು ಅಲ್ಲಿಂದ ಎತ್ತಂಗಡಿ ಮಾಡಿಸಿದರೆ ಬೇರನ್ನೇ ಮುಳುಗಿಸಿದರೆ ಏನಾಗಬಹುದು? ಬೇರುಬಿಟ್ಟ ಮರವನ್ನು ಇನ್ನೆಲ್ಲೋ ನೆಟ್ಟರೆ ಅದು ಚಿಗುರುವುದಾದರೂ ಹೇಗೆ?

ಅಲ್ಲೆಲ್ಲೋ ಬೆಳಕು ಮೂಡಬೇಕಾದ್ರೆ ಇಲ್ಲಿ ಕತ್ತಲಾಗಲೇ ಬೇಕು ನಿಜ. ಆದರೆ ಅಲ್ಲಿಗೆ ಬೆಳಕು ಬೇಕಾ, ಎಷ್ಟು ಬೇಕು ಅನ್ನೋದರ ಲೆಕ್ಕಾಚಾರವಿಲ್ಲದೆ ಇಲ್ಲಿ ಕತ್ತಲಾಗಿಸಿ ಮುಳುಗಿಸುವುದು ಎಷ್ಟು ಸರಿ? ಬೆಳಕು ಕೊಡುವ ದೀಪದ ಬುಡ ಹೊದ್ದು ಮಲಗುವುದು ಕತ್ತಲನ್ನೇ. ಇಲ್ಲಿ ಸದಾ ಕತ್ತಲು. ಅಲ್ಲೋ ಆರದ ಬೆಳಕು. ಮುಳುಗುವುದು ಕೇವಲ ಊರಲ್ಲ. ಬದುಕು, ಕನಸು ಮತ್ತಿಡೀ ಒಂದು ಸಂಸ್ಕೃತಿ. ಕಳೆದುಕೊಂಡವರ ಸಂಕಟ ಅರ್ಥವಾಗ ಬೇಕಾದರೆ ಪಡೆದುಕೊಂಡವರು ಒಮ್ಮೆ ಅದಕ್ಕೆ ಕಣ್ಣಾಗಬೇಕು, ಕಿವಿಯಾಗಬೇಕು. ಅವರ ನೋವು ಅರ್ಥವಾದ ದಿನ ಪಡೆದುಕೊಂಡಿದ್ದರ ಬೆಲೆ ಅರ್ಥವಾಗುತ್ತದೆ. ಬೆಲೆ ಅರ್ಥವಾದ ದಿನ ಅದನ್ನು ಉಪಯೋಗಿಸುವಾಗ ಎಚ್ಚರವಿರುತ್ತದೆ.

ಅದು ಅರ್ಥವಾಗಬೇಕಿದ್ದರೆ ಒಮ್ಮೆ ಶರಾವತಿ ನೋಡಿ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...