ಜಾನಕಿ ಕಾಲಂ.

ಬಸ್ ಸ್ಟಾಂಡ್ ನ ಪುಟ್ಟ ಅಂಗಡಿಯಲ್ಲಿ ತೂಗು ಹಾಕಿರುತಿದ್ದ ಕೃಷ್ಣಸುಂದರಿ ಹಾಯ್ ಬೆಂಗಳೂರು ಮನಸೆಳೆದರೂ ತೆಗೆದುಕೊಳ್ಳುವ ಧೈರ್ಯ ಇರಲಿಲ್ಲ. ಪರಿಚಯದ ಮನೆಯವರೊಬ್ಬರ ಮನೆಯ ಟೇಬಲ್ ಮೂಲೆಯಲ್ಲಿರುತಿದ್ದ ಅದು ಕಂಡಕೂಡಲೇ ಗಬಕ್ಕನೆ ಎಳೆದುಕೊಂಡು ಪುಟ ತಿರುಗಿಸಿ ಕಣ್ಣು ಹಾಯಿಸಿ ಓದುತ್ತಿದ್ದದ್ದು ಮಾತ್ರ ಜಾನಕಿ ಕಾಲಂ.

ಜಾನಕಿಯೆನ್ನುವ ಹಳೆಯ ಕಾಲದ ಹೆಸರಿನ ಹುಡುಗಿಯ ಬರೆಯುವ ಧೈರ್ಯ ಅದನ್ನು ಓದಲು ಪ್ರೇರಿಪಿಸುತಿತ್ತಾ... ಗಡಿಬಿಡಿಯಲ್ಲಿ ಓದಿ ಮುಗಿಸುವ ಆತುರದಲ್ಲಿ ಎಷ್ಟು ಅರ್ಥವಾಗುತಿತ್ತೋ, ನೆನಪಿರುತಿತ್ತೋ ಯಾರಿಗೆ ಗೊತ್ತು? ಆದರೆ ಜಾನಕಿ ಅನ್ನೋ ಹೆಸರು, ಸಣ್ಣಗೆ ಹರಿಯುತಿದ್ದ ತಣ್ಣಗಿನ ನದಿಯಂತ ಶೈಲಿ ಮಾತ್ರ ಎದೆಯ ಗೂಡಿನೊಳಗೆ ಬೆಚ್ಚಗೆ ಕುಳಿತುಬಿಟ್ಟಿತ್ತು. ತೀರಾ ಇತ್ತೀಚಿಗೆ ಅದನ್ನು ಬರೆದಿದ್ದು ಜೋಗಿ ಅಂತ ಗೊತ್ತಾಗಿ ಸಪ್ನಾದಲ್ಲಿ ಅವರ ಪುಸ್ತಕಗಳ ನಡುವೆ ಅರಸಿ ಸೋತು ಹೋಗಿ ಮರೆತೇ ಹೋಗುವ ಸಮಯದಲ್ಲಿ ನೆನಪಿಸಿದ್ದು ಮಾಲಿನಿ ಅಕ್ಕಾ... ಜಾನಕಿ ಸಿಕ್ಕಿದ್ದು ಗಾಂಧೀಬಜಾರಿನ ಅಂಕಿತದಲ್ಲಿ.

ಓದಲು ಕೈಗೆತ್ತಿಕೊಂಡ ಮರುಕ್ಷಣದಲ್ಲೇ ಇದು ಸುಮ್ಮನೆ ಓದುವ ಪುಸ್ತಕವಲ್ಲ ಅನ್ನೋದು ಗೊತ್ತಾಗಿ ಬಿಟ್ಟಿತ್ತು. ಒಂದು ಪೆನ್ ಹಾಗು ಪುಸ್ತಕ ಜೊತೆಗಿಟ್ಟುಕೊಂಡೆ ಕುಳಿತೇ... ಓದಿ ಕೆಳಗಿಡುವ ವೇಳೆಗೆ ಓದ ಬೇಕಾದ ಪುಸ್ತಕಗಳ ಪಟ್ಟಿ ಪೇಜ್ ತುಂಬಿತ್ತು, ಮನದೊಳಗೆ ಸಣ್ಣ ಭಯ ಇವನ್ನೆಲ್ಲಾ ಓದಿ ಮುಗಿಸುವುದು ಯಾವಾಗ ? ಪ್ರತಿಯೊಬ್ಬನಿಗೂ ಎರಡು ತರಹದ ಓದು ಬೇಕು ಒಂದು ವೈಯುಕ್ತಿಕ ಓದು, ಮತ್ತೊಂದು ಸಾಮಾಜಿಕ ಓದು. ಹೇಗೆ ಓದಬೇಕು, ಯಾವುದು ಓದಬೇಕು ಅನ್ನೋದನ್ನ ಸರಳವಾಗಿ ಆದ್ರೆ ಸ್ಪಷ್ಟವಾಗಿ ಹೇಳಿದ್ದಾರೆ. ಆಯ್ಕೆ ನಮ್ಮದು ಅಷ್ಟೇ.

ಕವಿತೆಯೆಂದರೆ ಅದು  ಪದಗಳ ಸಂತೆ ಅಂತ ಸುಮ್ಮನೆ ದೂರದಿಂದ ನೋಡಿ ಇದು ದಕ್ಕುವುದಿಲ್ಲ ಎಂದು ಮುಂದೆ ಹೋಗುತಿದ್ದ ನನ್ನ ಕಾಲಿಗೆ brake ಹಾಕಿದ್ದು ಜಾನಕಿ ಕಾಲಂ. "ಮನಸ್ಸು ತಲ್ಲಣಗೊಳ್ಳದ ಹೊರತು ಕವಿತೆ ಅರ್ಥವಾಗಲಾರದು" ಅನ್ನೋ ಸಾಲು ಇನ್ನಷ್ಟು ಗೊಂದಲಕ್ಕೆ ತಳ್ಳಿದರೂ ನಿಧಾನಕ್ಕೆ ಧ್ಯಾನಿಸಿದರೆ ಅರ್ಥವನ್ನು ಬಿಟ್ಟುಕೊಡುತ್ತದೆ. ಸುಲಭಕ್ಕೆ ಯಾವುದೂ ಪೂರ್ಣವಾಗಿ ದಕ್ಕುವುದಿಲ್ಲ. ನೋಟ ಬದಲಾದ ಹಾಗೆ, ಸೂಕ್ಷ್ಮವಾದ ಹಾಗೆ, ಆಳವಾದ ಹಾಗೆ ಕವಿತೆ ಇಷ್ಟಿಷ್ಟೇ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಗಡಿಬಿಡಿಯಲ್ಲಿ ನೋಡಿದರೆ ಸಣ್ಣಗೆ ನಕ್ಕು ಸುಮ್ಮನಾಗುತ್ತದೆ ಹೊರತು ಜೊತೆಯಾಗುವುದಿಲ್ಲ, ಕೈ ಹಿಡಿದು ಹೆಜ್ಜೆ ಹಾಕುವುದಿಲ್ಲ, ಸಾಂಗತ್ಯ ಉಹೂ ಸಾಧ್ಯವೇ ಇಲ್ಲ.

ಇಡೀ ಪುಸ್ತಕ ನದಿಯಂತೆ ಹರಿದು ಹೋಗುತ್ತದೆ, ಅಬ್ಬರವಿಲ್ಲ, ಉನ್ಮಾದ ಮೊದಲೇ ಇಲ್ಲಾ, ಜುಳು ಜುಳನೆ ಹರಿಯುತ್ತಾ, ಹಸಿರು ಬೆಳೆಸುತ್ತಾ, ಪಕ್ಕನೆ ತಿರುಗಿ ವಿಸ್ಮಯ ಮೂಡಿಸುತ್ತಾ, ಇದ್ದಕ್ಕಿಂದಂತೆ ಆಳವಾಗಿ ನಿಧಾನವಾಗುತ್ತಾ, ಸುಳಿ ಸುಳಿದರೂ ಮುಂದೆ ಹರಿಯುತ್ತಾ, ಬಿರುಬೇಸಿಗೆಯಲ್ಲೂ ಹರಿವನ್ನು ಕಾಪಾಡಿಕೊಳ್ಳುತ್ತಾ, ಕಚಗುಳಿಯಿಡುತ್ತಾ, ಮೈಮರೆತಿರುವಾಗಲೇ ಸಣ್ಣಗೆ ಕಾಲೆಳೆಯುತ್ತಾ,   "ಸಾಹಿತ್ಯ ಬದಲಾಯಿಸುವುದು ನಡೆಯನ್ನಲ್ಲ, ನುಡಿಯನ್ನೂ ಅಲ್ಲಾ ನೋಡುವ ಕ್ರಮವನ್ನು" ಎಂದು ಪಿಸುಗುಟ್ಟಿ ಹೊಂಗೆಯ ನೆರಳಿಗೆ ಜೊತೆಯಾಗುತ್ತಾ ಮುಂದೆ ಸಾಗಿಬಿಡುತ್ತದೆ.

ಹಾಗಾದರೆ ಓದು ಕಲಿಸುವುದು ಏನನ್ನು? ಅದು ಏನನ್ನೂ ಕಲಿಸುವುದಿಲ್ಲ ನಾವು ಕಲಿಯದ ಹೊರತು. ಕಾಲದಿಂದ ಕಾಲಕ್ಕೆ ಸಂವೇದನೆಗಳು ಬದಲಾಗುತ್ತಾ ಹೋಗುತ್ತವೆ. ಹಾಗೆ ಬದಲಾಗುತ್ತಾ ಹೋಗುವ ಹೊತ್ತಿಗೆ ಮನಸ್ಸನ್ನು ಪಕ್ವಗೊಳಿಸುವ ಕೆಲಸವನ್ನು ಓದು ಮಾಡುತ್ತದೆ. ಯಾವುದೋ ಪಾತ್ರದ ಪರಕಾಯ ಪ್ರವೇಶ ಮಾಡುತ್ತಾ ಅನುಭವಗಳನ್ನು ಎದೆಗಿಳಿಸಿಕೊಳ್ಳುತ್ತಾ ಹೋಗುತ್ತದೆ. ಬರುವವರು ಬಂದಾಗ ಹೋಗುವವರು ಹೋಗಬೇಕು ಅನ್ನುವ ತ.ರಾ.ಸು ಮಾತು ಕಳೆದುಕೊಂಡಾಗ, ಇನ್ಯಾರದೋ ಬದುಕಿನಲ್ಲಿ ನಾವು ಅಪ್ರಸ್ತುತರಾದಾಗ ಸಮಾಧಾನ ಕೊಡುತ್ತದೆ. ಇಷ್ಟೇ ಎಂದು ಸಾಗುವ ಬದುಕಿಗೆ ಇಷ್ಟೇ ಅಲ್ಲಾ ಇನ್ನಷ್ಟಿದೆ ಎಂದು ತೋರಿಸುವ ಕೆಲಸ ಓದು ಮಾಡುತ್ತದೆ.

ವೈಜ್ಞಾನಿಕತೆ ಅತಿಯಾದಷ್ಟೂ ಹೇಗೆ ಬದುಕು ಬೆರಗು ಕಳೆದು ಕೊಂಡು ಬರಡಾಗುತ್ತದೆ ಅನ್ನೋದನ್ನ ಗಮನಿಸಿ. ಕಡಲ ತಡಿಯಲ್ಲಿ ಕುಳಿತು ಸೂರ್ಯ ಮುಳುಗುತ್ತಾನೆ ಎಂದು ಅವನ್ನನ್ನೇ ದಿಟ್ಟಿಸಿ ನೋಡುತ್ತಾ, ಭಾವಗಳಿಗೆ ಬಸಿರಾಗುತ್ತ ಕೂರುವ ಸುಖ, ನೆರಳು ಬೆಳಕಿನ ಆಟದಲ್ಲಿ, ನಾಚಿ ರಂಗೇರುವ ಬಾನಿನ ನೋಟ,  ಸೂರ್ಯ ಇದ್ದಲ್ಲೇ ಇರ್ತಾನೆ ಭೂಮಿ ತಿರುಗುತ್ತೆ ಅಷ್ಟೇ ಅಂದರೆ ಉದಯಿಸುವ, ಅಸ್ತಮಿಸುವ ಕಾಲದ ಸೌಂದರ್ಯ, ಭಾವ ತೀವ್ರತೆ ಮುಗಿದು ಹೋಗುತ್ತದೆ ಅಷ್ಟೇ. "ನಿರಾಕರಿಸುವುದು ಸುಲಭ , ಸೃಷ್ಟಿಸುವುದು ಕಷ್ಟ ". ಒಂದು ನಂಬಿಕೆಯನ್ನು ನಿರಾಕರಿಸುವ ಮುನ್ನ ಅದನ್ನು ಕೆಡವಿ ಹಾಕುವ ಮುನ್ನ ಅಷ್ಟೇ ಬಲವಾದ ಇನ್ನೊಂದು ನಂಬಿಕೆಯನ್ನು ಕಟ್ಟಿ ಕೊಡುವ ಶಕ್ತಿ ನಮ್ಮಲ್ಲಿರಬೇಕು, ಇಲ್ಲವಾದಲ್ಲಿ ನಾವು ಕೆಡುವುದು ಕೇವಲ ನಂಬಿಕೆಯನ್ನಲ್ಲ, ಅವರ ಬದುಕಿನ ಶಕ್ತಿಯ ಆಧಾರವೊಂದನ್ನು.  ದೃಷ್ಟಿ ಬದಲಾದರೆ ನೋಟವೂ ಅದೆಷ್ಟು ಬದಲಾಗುತ್ತೆ....

ಒಂದು ಸಾಲು ಇಟ್ಟುಕೊಂಡು  ಅರ್ಧ ಜೀವಮಾನ ಕಳೆಯಬಹ್ದು ಅಂತ ಯಾವತ್ತಾದರೂ ನಿಮಗೆ ಅನ್ನಿಸಿದೆಯಾ? . ಇಷ್ಟವಾದ ಒಂದು ಸಾಲು ನೆನಪಿಸಿಕೊಂಡರೆ ಅದು ಎಲ್ಲಿಂದ ಸಿಕ್ಕಿದ್ದು, ಯಾವಾಗ ಸಿಕ್ಕಿದ್ದು, ಆ ಸಂದರ್ಭ ಹೇಗಿತ್ತು ಅಂತ ಯೋಚಿಸುತ್ತಾ ಹೋದರೆ ಮನಸ್ಸು ಒಂದಕ್ಕೊಂದು ಲಿಂಕ್ ಕೊಡುತ್ತಾ ಹೋಗುತ್ತದೆ. ಆ ಲಿಂಕ್ ತೆಗೆದಾಗ ಅದು ಇನ್ಯಾವುದೋ ಲಿಂಕ್ ಕೊಟ್ಟು ಅದು ಮತ್ತೆಲ್ಲೋ ಕರೆದು ಕೊಂಡು ಹೋಗಿ ಇನ್ನೇನೋ ನೆನಪಾಗಿ ಕಣ್ಣು ಬಿಟ್ಟರೆ ಮನದ ಅಂಗಳದ ತುಂಬಾ ಚುಕ್ಕಿಗಳ ರಂಗೋಲಿ. ಮನಸ್ಸು ಗೂಗಲ್ ಗಿಂತ ಶಕ್ತಿಶಾಲಿ ಸರ್ಚ್ ಇಂಜಿನ್. ಅಲ್ಲಿ ಏನಿದೆ ಏನಿಲ್ಲ ಅನ್ನೋದು ತಿಳಿಯಬೇಕಾದರೆ ಹೀಗೊಂದು ಸಾಲು ಸಿಗಬೇಕು.  ಯಾವುದೊ ಹಾಡಿನ ತುಣುಕೋ, ಯಾವುದೋ ಪುಸ್ತಕದ ಒಂದು ಪುಟ್ಟ ಸಾಲು, ಇನ್ಯಾವುದೋ ಮಾತು ಒಮ್ಮೆ ಪ್ರಯತ್ನಿಸಿ ನೋಡಿ....

ಒಮ್ಮೊಮ್ಮೆ ಬದುಕು ಇಷ್ಟೇನಾ ಅನ್ನಿಸಿಬಿಡುತ್ತದೆ, ಎಲ್ಲವನ್ನೂ ತೊರೆದು ಹೋಗಿಬಿಡಬೇಕು, ಯಾವುದೋ ಅಪರಿಚಿತ ಜಾಗದಲ್ಲಿ ಕಳೆಯಬೇಕು ಅನ್ನಿಸತೊಡಗುತ್ತದೆ. ಪರಿಚಿತ ಜನರ ನಡುವೆ, ಪರಿಚಿತ ಜಾಗದಲ್ಲಿ ನಾವು ನಾವಾಗೇ ಇರಲಾರೆವು, ಕೆಲವೊಮ್ಮೆ ನಟಿಸುತ್ತಾ ನಟಿಸುತ್ತಾ ಬದುಕು ಬೋರ್ ಹೊಡೆಯಲು, ನಮಗೆ ಬೇಡವೆನಿಸಲು ಶುರುವಾಗುತ್ತದೆ. ಸಾವಿರ ತಳಮಳ, ಹೇಳಲಾಗದ ಆಂದೋಲನ. ಇದ್ದಿದ್ದು ಬೇಡ, ಇನ್ಯಾವುದೋ ಬೇಕು ಆಗ ಅಡಿಗರು ನೆನಪಾಗುತ್ತಾರೆ. ಇರದುದರೆಡೆಗೆ ತುಡಿವುದೇ ಜೀವನ... ಹಾ ಇದು ಕೇವಲ ನನಗಷ್ಟೇ ಅನ್ನಿಸಿದ್ದಲ್ಲ ಅಂತ ಸಮಾಧಾನ ಆಗುವ ವೇಳೆಗೆ ಯಾವುದೋ ಹಾಡಿನ ಸಾಲು ನೆನಪಾಗುತ್ತದೆ, ಎಲ್ಲೋ ಜೋಗಪ್ಪ ನಿನ್ನರಮನೆ.... ಹಾಗಾದರೆ ಕಾಲ ಬದಲಾಗುತ್ತದೆ ಅನ್ನೋದು ಸುಳ್ಳಲ್ಲವೇ... ಯಾವುದು ಹೊಸತು, ಯಾವುದು ಹಳತು ಎಲ್ಲವೂ ಅವವೇ... ಅಲ್ಲಿಗೆ ಸಮಾಧಾನ ಮನಸ್ಸಿಗೆ ತುಂಬಿಕೊಳ್ಳುತ್ತದೆ. ಇದು ಜಗತ್ತಿನ ಸ್ವಭಾವ ಅಂದಾಗ ಅಲ್ಲಿ ಒಪ್ಪಿಕೊಳ್ಳುವ ಭಾವ.

ಮನಸ್ಸು ತಲ್ಲಣಗೊಂಡಾಗ ಮಾತ್ರ ಬದುಕು ಅರ್ಥವಾಗುವುದಾ... ನೊಂದವರಿಗಷ್ಟೇ ನೋವು ತಿಳಿಯುತ್ತದೆ, ಹಸಿದವರಿಗಷ್ಟೇ ಹಸಿವು ಅರಿವಾಗುತ್ತದೆ ಅನ್ನೋ ಸಾಲುಗಳು ಬದುಕಿನ ಅನುಭವ ಎಷ್ಟೆಷ್ಟು ದೊಡ್ಡದಾಗುತ್ತಾ ಹೋಗುತ್ತದೋ ಬದುಕು ಅಷ್ಟಷ್ಟು ತೆರೆದುಕೊಳ್ಳುತ್ತಾ ಹೋಗುತ್ತದೆ ಅನ್ನುವುದು ತಿಳಿಸುತ್ತದೆ. ಹಾಗಾದರೆ ಓದು ಹೇಗಿರಬೇಕು? ಕೆಳಗಿಟ್ಟು ಕೊಡಲೇ ಮರೆತು ಹೋಗುವಂತಿರಬಾರದು, ಒಂದು ನಗು ಮೂಡಿಸಿ ಮಾಯವಾಗಲೂ ಬಾರದು. ಅದು ಚಿಂತನೆಗೆ ಹಚ್ಚಬೇಕು, ದುರ್ಗಮ ದಾರಿಗಳಲ್ಲಿ ಪಕ್ಕನೆ ಕಣ್ಣೆದೆರು ಚಿಮ್ಮುವ ಸಾರಂಗದಂತೆ ನಡೆಯಲು ಹುಮ್ಮಸ್ಸು ಮೂಡಿಸುವಂತಿರಬೇಕು. ಕಗ್ಗತ್ತಲ ರಾತ್ರಿಯಲ್ಲಿ ಮಿಂಚು ಹುಳುವೊಂದು ಹಾರಿ ಹೋದಂತೆ ಪಕ್ಕನೆ ಬೆಳಕು ಹುಟ್ಟುವ ಹಾಗಿರಬೇಕು. ಒಂದು ಕಾಲು ಇನ್ನೊಂದನ್ನು ಸದಾ ಹಿಂಬಾಲಿಸುವಂತೆ ನಮ್ಮ ಜೊತೆಗೆ ಸಾಗಬೇಕು. ಮನೋರಂಜನೆ, ಟೈಮ್ ಪಾಸ್ ಅನ್ನುವುದರ ಜೊತೆ ಜೊತೆಗೆ ಇದು ಮುಖ್ಯವಾಗಬೇಕು.

ಓದುವುದೇ ಮರೆಯುತಿದ್ದೆವಾ... ಸಮಯವಿಲ್ಲ ಅನ್ನೋದು ಪ್ರತಿಯೊಬ್ಬರ ಪಾಲಿಗೂ ಗಡಿಯಾರದ ಮುಳ್ಳಿನ ಚಲನೆಯಷ್ಟೇ ಸಹಜವಾದ ಸರಾಗವಾದ ಮಾತು. ನಿಜವಾಗಲೂ ಸಮಯವಿಲ್ಲವಾ ಉಹೂ ಅಲ್ಲಾ ಓದುವ ಆಸಕ್ತಿ, ಮಾರ್ಗದರ್ಶನ ಸಿಗುತ್ತಿಲ್ಲ ಅಷ್ಟೇ. ಮೊದಲೆಲ್ಲಾ ಶಾಲೆಯಲ್ಲಿ ಮೇಷ್ಟರೋ, ಮೇಡಂ ಗಳೋ ಬುಕ್ ಕೊಟ್ಟು ಇದನ್ನು ಓದು ಅಂತ ಹೇಳುತಿದ್ದರು, ಓದುವ ಆಸಕ್ತಿ ಹುಟ್ಟು ಹಾಕುತಿದ್ದರು,  ಬೇಸಿಗೆಯ ರಜೆಯ ದಿನಗಳಲ್ಲಿ ಸುಡುವ ಬಿಸಿಲಿನ ನಡು ಹಗಲಿನಲ್ಲಿ ಮಾವಿನ ಮರದ ಕೆಳಗೋ, ನೇರಳೆ ಮರದ ಕೆಳಗೋ ಇಲ್ಲಾ ಪೇರಳೆ ಮರದ ಮೇಲೋ ಕುಳಿತು ಓದುವುದು ಹಿತಕರವಾಗಿರುತಿತ್ತು. ಆಗ ನಮ್ಮ ಸಮಯವನ್ನು ನುಂಗಲು ಇನ್ನೂ ಟಿ.ವಿ ಬೆಳೆದಿರಲಿಲ್ಲ, ಮೊಬೈಲ್ ಅನ್ನೋ ಮಾಂತ್ರಿಕ ಹುಟ್ಟಿರಲಿಲ್ಲ. ಈಗಲೂ ಒಮ್ಮೆ ಇವೆಲ್ಲವುಗಳಿಂದ ಕಳಚಿಕೊಂಡು ಓದಿದರೆ ಮತ್ತೆ ಅಭ್ಯಾಸವಾಗುತ್ತದೆ. ಶುರು ಮಾಡಬೇಕಷ್ಟೆ, ಹೇಗೆ ಶುರುಮಾಡಬೇಕು ಅನ್ನೋದು ಗೊತ್ತಾಗ ಬೇಕಾದರೆ ಜಾನಕಿ ಕಾಲಂ ಓದಬೇಕು.

ಯಾರಿದ್ದಾರೆ ಯಾರಿಲ್ಲ ಇಲ್ಲಿ ಹೇಳುವುದು ಕಷ್ಟ. ಪಡೆದುಕೊಳ್ಳುತ್ತಿರುವ ಲೆಕ್ಕದ ಜೊತೆ ಜೊತೆಗೆ ಕಳೆದುಕೊಳ್ಳುವುದರ ಚಿತ್ರಣವೂ ಇದೆ. ಬದಕು ಬರಡಾಗದೆ ಇರುವಂತೆ ಹರಿವನ್ನು ಕಾಪಾಡಿಕೊಳ್ಳುವ ಬಗ್ಗೆ ಸಲಹೆಯಿದೆ. ಬಾಲ್ಯದ ನೆನಪಿದೆ, ಹರೆಯದ ಹುಮ್ಮಸ್ಸಿದೆ, ನಡು ವಯಸ್ಸಿನ ತಾಕಲಾಟವಿದೆ, ಇಳಿಸಂಜೆಯ ಹಳಹಳಿಕೆಯಿದೆ ಇವೆಲ್ಲದರ ನಡುವೆಯೂ ಬದುಕಿನ ನದಿ ಹೇಗೆ ಹರಿಯಬೇಕು ಅನ್ನುವುದಕ್ಕೆ ಹೊಳವಿದೆ. ಕುಳಿತಲ್ಲೇ ಬದುಕನ್ನ ಹಿಂದಕ್ಕೆ ಕರೆದೊಯ್ಯುವ ಮತ್ತೆ ಅನಾಮತ್ತಾಗಿ ತಂದು ಬಿಡುವ ಮಾಯಾ ಗಡಿಯಾರ ಅಂತೂ ಜೊತೆಯಲ್ಲೇ ಇದೆ. 

"ಸಾಹಿತ್ಯದ ಆಸಕ್ತಿ ಎಲ್ಲರಿಗೂ ಇರುತ್ತದೆ. ಅವರಿಗೆ ಮುದದಿಂದ ಹೇಳಿಕೊಡುವವರ ಸಂಖ್ಯೆ ಕಡಿಮೆಯಿರುತ್ತದೆ." ಜಗತ್ತಿಗೆ ಕಿವಿಯಾಗುವ ಭ್ರಮೆಯಲ್ಲಿ ಒಳಗಿನ ದನಿಗೆ ಕಿವುಡಾಗಿದ್ದೇವೆ. ಹೊರಮಾತಿಗಿಂತ ಒಳಮಾತು ಸತ್ಯವಾಗಿರುತ್ತದೆ. ಬದುಕು ಅರ್ಥವಾಗುವುದು, ಅರ್ಥಪೂರ್ಣವಾಗುವುದು ಒಳಗಿನ ದನಿಗೆ ಕಿವಿಗೊಟ್ಟ ಮೇಲೆಯೇ. ಯಾಕೆಂದರೆ ತನಗೆ ತಾನೇ ಆಡಿಕೊಳ್ಳುವ ಮಾತಿಗೆ ಯಾವುದೇ ಪ್ರಭಾವವಾಗಲಿ ವಾಂಛೆಯಾಗಲಿ ಇರುವುದಿಲ್ಲ. ಅದು ತನಗೆ ತಾನೇ ಆಡಿಕೊಳ್ಳುವ ಮಾತು. ಆ ಮಾತು ಹುಟ್ಟುವುದು ಓದು ಹುಟ್ಟಿಸುವ ಆಲೋಚನೆಗಳಿಂದ, ಮಂಥನದಿಂದ. ಕಡೆದರೆ ತಾನೇ ನವನೀತ ತೇಲುವುದು.

 ಏನೇ ಆದರೂ ಅಂತಿಮವಾಗಿ ವೆಂಕಟಲಕ್ಷ್ಮೀ ಹೇಳುವಂತೆ "ನನ್ನ ಸತ್ಯ ಬೇರೆ, ಇಲ್ಲಿರುವ ಒಬ್ಬೊಬ್ಬರ ಸತ್ಯವೂ ಬೇರೆ. ಅವರವರು ಅವರವರಿಗೆ ಬೇಕಾದ ಸತ್ಯ ಕಂಡುಕೊಳ್ಳುತ್ತಾರೆ." ಅನ್ನೋದಷ್ಟೇ ನಿಜ.ಒಳ್ಳೆಯ ಓದು, ಒಳ್ಳೆಯ ಬರಹ ತಾಯಿಯ ಹಾಗೆ ಸದಾ ಪೋರೆಯುತ್ತಲೇ ಇರುತ್ತದೆ, ಮೊರೆಯುತ್ತಲೂ ಇರುತ್ತದೆ. ಹಾಗೆ ಮೊರೆಯುವಷ್ಟು ಹೊತ್ತು ಜೀವಂತಿಕೆ ತುಂಬಿರುತ್ತದೆ. ಜೀವಂತಿಕೆ ಇರುವಷ್ಟು ಹೊತ್ತು ತಾನೇ ಬದುಕು.

ಓದಿ ಮುಗಿಸುವ ಹೊತ್ತಿಗೆ ಜೋಗಿಗಿಂತ ಜಾನಕಿ ಇಷ್ಟವಾಗಿದ್ದು ಮಾತ್ರ ಸತ್ಯಸ್ಯ ಸತ್ಯ.....

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...