ಮಂಗಗಳ ಉದ್ಯಾನ

ಇಳಿ ಸಂಜೆಯ ಹೊತ್ತಿಗೆ ಪ್ಯಾಸೇಜ್ ಬಾಗಿಲು ತೆಗೆದು ಹೊರ ಬಂದವಳಿಗೆ ಕಂಡಿದ್ದು ಕಳಿತ ಕಿತ್ತಳೆ ಹಣ್ಣಿನಂತಿದ್ದ ಆಕಾಶ. ಒಹ್ ಇವನಾಗಲೇ ಮನೆಗೆ ಹೊರಟಾಯ್ತು ಕಳುಹಿಸಿಯೇ ಹೋಗೋಣವೆಂದು ಅವನನ್ನೇ ದಿಟ್ಟಿಸುತ್ತಾ ನಿಂತೇ.. ಜಗದ ಗಂಡಂದಿರಂತಲ್ಲ ಈ ಸೂರ್ಯ. ಮನೆ ಸೇರುವ ಆತುರ ಅವನಿಗೆ. ಇನ್ನೂ ಇಲ್ಲೇ ಇದ್ದಾನಲ್ಲ ಬಿಡು ಅಂತ ಆಚೀಚೆ ಕಣ್ಣು ಹಾಯಿಸಿದರೆ ಮುಗಿದೇ ಹೋಯಿತು, ಮುನಿದ ಇನಿಯನಂತೆ ಅಷ್ಟು ದೂರಕ್ಕೆ ಹೋಗಿ ಬಿಟ್ಟಿರುತ್ತಾನೆ. ಎವೆಯಿಕ್ಕದೆ ಅವನನ್ನೇ ನೋಡುತಿದ್ದೆ, ನೋಟಕ್ಕೆ ಸಿಲುಕದಂತೆ ಜಾರುತ್ತಲೇ ಇದ್ದವನು ಕ್ಷಣ ಮಾತ್ರದಲ್ಲಿ ಕುರುಹೂ ಸಿಗದಂತೆ ಮಾಯವಾದ.

ಇನ್ನೇನು ಇರುಳು ಅಡಿಯಿಡುವ ಹೊತ್ತು  ದೀಪ ಹೊತ್ತಿಸಬೇಕು ಎಂದು ಒಳಗೆ ಕಾಲಿಡಬೇಕು ಅಚಾನಕ್ಕಾಗಿ ಒಂದು ಕಡೆ ಹಾದ ದೃಷ್ಟಿ ಅಲ್ಲಿಯೇ ಸೆರೆಯಾಯಿತು. ತುಂಬು ಬಸುರಿ ಕೋತಿಯೊಂದು ಒಬ್ಬಂಟಿಯಾಗಿ ಕುಳಿತಿತ್ತು. ಮುಖದಲ್ಲೇನೋ ದುಗುಡ. ಅಕ್ಕಪಕ್ಕದ ಸಾಲು ಕಟ್ಟಡಗಳು ಒಂದರ ಮೇಲೊಂದು ಮನೆಯ  ಕಿರೀಟ ಹೊತ್ತು ಕುಳಿತಿದ್ದರೆ ಇದೊಂದು ಮನೆ ಮಾತ್ರ  ಕಿರೀಟ ಕಳಚಿಟ್ಟ ರಾಜನಂತೆ ನಿಂತಿತ್ತು. ಉದ್ದದ ಟೆರೆಸ್ ನ ಎರಡೂ ಬದಿ ಹೂವಿನ ಗಿಡಗಳು ಸಾಲುಗಟ್ಟಿ ನಿಂತಿದ್ದರೆ ಅಷ್ಟು ಎತ್ತರದಲ್ಲಿ ಗಂಭಿರವಾಗಿ ನಿಂತ ವಾಟರ್ ಟ್ಯಾಂಕ್ ಹಾಗೂ ಅದರ ಹತ್ತಿರ ಹೋಗಲು ಇಟ್ಟಿದ್ದ ಒಂದು ಕಬ್ಬಿಣದ ಏಣಿ. ಆ ಏಣಿಯ ಕೊನೆಯ ಮೆಟ್ಟಿಲ ಮೇಲೆ ಏಕಾಂಗಿಯಾಗಿ ಕುಳಿತ ಈ ಕೋತಿ.

ಒಂದಷ್ಟು ಹೊತ್ತು ಆ ಏಣಿಯ ಮೇಲೆ ಅದೇನೋ ಯೋಚಿಸುವಂತೆ ಅಲುಗಾಡದೆ  ಧ್ಯಾನಸ್ಥವಾಗಿ ಕುಳಿತಿದ್ದ ಅದು ನಿಧಾನವಾಗಿ ಕೆಳಗಿಳಿದು ಬಂದು ಒಂದೊಂದೇ ಪಾಟ್ ಹುಡುಕಿ ಹೂವನ್ನ ಕೊಯ್ದು ಬಾಯಿಗಿಟ್ಟು ರುಚಿ ನೋಡುತ್ತಿತ್ತು. ಸಂಜೆ ಗಿಡಗಳಿಗೆ ನೀರು ಹಾಕುವಾಗ ಮುರಿದ ಬಿದ್ದ ಕೊಂಬೆ ಹಾಗೂ ಬೆಳಿಗ್ಗೆ ಅರಳುತ್ತೆ ಅಂತ ಆಸೆಯಿಂದ ನೋಡಿ ಬಂದು ಮೊಗ್ಗುಗಳು ಎಲ್ಲಿ ನಾಪತ್ತೆಯಾಗ್ತಾವೆ ಅಂತ ತಲೆಕೆಡಿಸಿಕೊಳ್ಳುತಿದ್ದ ನನಗೆ  ಸಮಸ್ಯೆಗೆ ಉತ್ತರ ಇದಾ ಅನ್ನಿಸಿ ಅಲ್ಲಿಯವರೆಗೆ ಇದ್ದ ಕೋಪ ಹೋಗಿ ಸಣ್ಣಗಿನ ವಿಷಾದ ಆವರಿಸಿತು ಇರುಳಿನ ಹಾಗೇ.

ಪಾಪ ಎಷ್ಟು ಹಸಿದಿತ್ತೋ ಏನೋ... ಅದೂ ಎರಡು ಜೀವಗಳ ಹಸಿವು, ತನ್ನ ಹಸಿವನ್ನಾದರೂ ಹೇಗೋ ನಿಯಂತ್ರಿಸಬಹುದು ಆದರೆ ಒಡಲೊಳಗಿನ ಜೀವದ ಹಸಿವು ತಡೆಯುವುದೆಂತು? ಆ ಹಸಿವಲ್ಲೂ ಆತುರವಿರಲಿಲ್ಲ, ಸಿಕ್ಕಿದ್ದನ್ನು ಮುಕ್ಕುವ ಹಪಾಹಪಿಯಿರಲಿಲ್ಲ, ನಿಧಾನವಾಗಿ ಒಂದೊಂದೇ ಪಾಟ್ ಹುಡುಕುತ್ತಾ, ಕೊಂಬೆಗಳನ್ನ ಮೆಲ್ಲಗೆ ಸರಿಸಿ ಅರಸುತ್ತಾ ಹೋಗಿ ಅದೇನು ರುಚಿ ಹತ್ತಿತೋ ಮಲ್ಲಿಗೆಯ ಗಿಡದ ಒಂದೊಂದೇ ಚಿಗುರು ಕಿತ್ತು ತಿನ್ನತೊಡಗಿತು. ಮತ್ತುಳಿದ ಪಾಟ್ ಹುಡುಕಿ ಏನೂ ಸಿಗದೇ ನಿರಾಸೆಯಿಂದ ಸಪ್ಪಗೆ ಮುಖ ಮಾಡಿ ತನ್ನ ದಾರಿ ಹಿಡಿದು ಇನ್ನೇನು ಪಕ್ಕದ ಕಟ್ಟಡಕ್ಕೆ ಜಿಗಿಯಬೇಕು ಅಯ್ಯೋ ನಿಧಾನ ಅನ್ನೋ ಮಾತು ಬಾಯಿಂದ ಜಾರಿತು. ಅದೆಷ್ಟು ಜಾಗರೂಕತೆಯಿಂತ ಹಾರಿತು ಅಂದ್ರೆ ಜೀವ ಯಾವುದಾದರೇನು ತಾಯಿ ಭಾವ ಒಂದೇ ಅನ್ನಿಸಿತು. ಕರುಣೆಯಿಂದಲೇ ಒಳಗೆ ಬಂದವಳಿಗೆ ಅದು ಕೋಪವಾಗಿ, ಭಯವಾಗಿ, ಕಿರಿಕಿರಿಯಾಗಿ ತಿರುಗುತ್ತೆ ಅನ್ನೋದು ಅರ್ಥವಾಗಲು ಮತ್ತೆರೆಡು ತಿಂಗಳು ಹಿಡಿದಿತ್ತು.

ಮಗು ಹುಟ್ಟಿ ಬಾಣಂತನ ಕಳೆದ ಮೇಲೆ ಅಮ್ಮ ಬದಲಾಗಿದ್ದಳು. ಜೊತೆಗೆ ಅಪ್ಪ ಸೇರಿಕೊಂಡಿದ್ದ. ಮೂರೂ ಮಂಗಗಳು ಸಂಜೆಯಾಗುತ್ತಿದ್ದ ಹಾಗೆಯೇ ಬಂದು ಹಾಕಿದ್ದ ತರಕಾರಿ ಹೋಗಲಿ ಒಂದೇ ಒಂದು ಮೊಗ್ಗೂ, ಚಿಗುರು ಬಿಡದ ಹಾಗೆ ಎಲ್ಲವನ್ನೂ ಕಿತ್ತು ಎಸೆದು ರಣಾಂಗಣವಾಗಿಸುತ್ತಿದ್ದವು. ಹೋಗಲಿ ಬಿಡು ಎಂದು ಸುಮ್ಮನಿದ್ದರೆ ನಿಧಾನಕ್ಕೆ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳತೊಡಗಿದವು. ಟೆರೆಸ್ ಅವುಗಳ ಸ್ವಂತ ಮನೆಯಾಯಿತು. ಮರಿಯಿದ್ದರಿಂದ ಸಂಜೆಯ ವೇಳೆ ಯಾರೇ ಟೆರೆಸ್ ಮೇಲೆ ಹೋದರೆ ಅವರ ಮೇಲೆ ಅಟ್ಯಾಕ್ ಮಾಡಲು ಶುರುಮಾಡಿದವು. ಮಕ್ಕಳು ಆಡುವುದು ಮರೆಯಬೇಕಾಯಿತು. ಆಮೇಲಾಮೇಲೆ ಮನೆಯಿಂದ ಹೊರಗೆ ಬಂದರೆ ಮೈ ಮೇಲೆ ಹಾರಿ ಕಚ್ಚಲು ಶುರುಮಾಡಿದವು. ಕೈಯಲ್ಲಿದ್ದದ್ದು ಕಸಿದು ತಿನ್ನಲು ಶುರುಮಾಡಿದವು, ನಿರಾಕರಿಸಿದರೆ ಧಾಳಿ. ಸಂಜೆಯಾಗುತ್ತಿದ್ದ ಹಾಗೆ ಭಯದ ವಾತಾವರಣ ನಿರ್ಮಾಣವಾಗುತ್ತಿತ್ತು. ಮನೆ ಸೆರೆಮನೆಯಾದಂತೆ ಭಾಸವಾಗತೊಡಗಿತು. ಹೊರಗೆ ಹೊರಡುವುದು ನಿಷಿದ್ಧ ಅನ್ನುವ ವಾತಾವರಣ ಏರ್ಪಟ್ಟಿತ್ತು.

ಸಹಜವಾಗಿಯೇ ಇಂಥ ಸಮಸ್ಯೆಗಳು ಶುರುವಾಗುತ್ತಿದ್ದ ಹಾಗೆಯೇ ಸಹನೆಯ ಕಟ್ಟೆ ಒಡೆಯುವ ಹೊತ್ತಿಗೆ ಅವುಗಳನ್ನು ಗಡಿಪಾರು ಮಾಡುವ ಕೆಲಸ ಶುರುವಾಗುತ್ತದೆ. ಇಲ್ಲೂ ಹಾಗೆಯೇ ಆಯಿತು. ನೆಮ್ಮದಿಯ ನಿಟ್ಟುಸಿರು ಬಿಟ್ಟು ಒಳಗೆ ಬರುತ್ತಿದ್ದ ಹಾಗೆ ಅದು ಇನ್ಯಾರಿಗೆ ಬಿಸಿ ತುಪ್ಪವಾಗಿರಬಹುದು ಅನ್ನಿಸಿ ತಪ್ಪಿತಸ್ಥ ಮನೋಭಾವ ಕಾಡತೊಡಗಿತು. ಈ ದಾರಿಯಲ್ಲದೆ ಇನ್ನೇನು ಸಾಧ್ಯವಿತ್ತು ಎಂದು ಸಮಾಧಾನಿಸಿ ಕೊಳ್ಳುವ ಹೊತ್ತಿಗೆ ಫೋನ್ ಮೊರೆಯಿತು. ಬಂದು ನೋಡಿದರೆ ಊರಿನಿಂದ. ಸಧ್ಯ ಈ ಯೋಚನೆಯಿಂದ ಬಿಡುಗಡೆ ಸಿಕ್ಕಿತು ಅಂತ ನಿರಾಳವಾಗಿ ಮಾತನಾಡಿ ಮುಗಿಸುವ ಹೊತ್ತಿಗೆ ಹಿತ್ತಲಿನ ನೆನಪಾಗಿ ಹೇಗಿದೆ ತರಕಾರಿ ಎಂದಿದ್ದೆ ತಡ... ಇನ್ನೊಂದು ಕರಾಳ ಮುಖದ ಅನಾವರಣ ಆಗತೊಡಗಿತು.

ಮನುಷ್ಯನೋ, ಪ್ರಾಣಿಯೋ ಯಾವುದೇ ಆಗಿರಲಿ ಒಮ್ಮೆ ಸೋಮಾರಿತನ ಅಭ್ಯಾಸವಾಯಿತು ಎಂದರೆ ಮತ್ತೆ ದುಡಿಯುವುದು ಬಹಳ ಕಷ್ಟ ಅಂತ ಗೊತ್ತಾಗಿದ್ದು ಮಾತು ಮುಗಿಸಿ ಫೋನ್ ಇಟ್ಟಾಗಲೇ. ಈ ಮಂಗಗಳಿಗೆ ಪೇಟೆಯಲ್ಲಿ ಕಾಡು ಇಲ್ಲದೆ ತಾವೇ ಆಹಾರ ಸಂಪಾದಿಸಿ ತಿನ್ನುವುದು ಮರೆತು ಹೋಗಲು ಶುರುವಾಗಿದೆ. ಅದರಲ್ಲೂ  ಹೆದರಿಸಿ ತಿನ್ನುವುದು ಅಭ್ಯಾಸವಾದ  ಮೇಲಂತೂ ಕಾಡು ಮರೆತು ಹೋದ ಹಾಗಿದೆ. ನಾಡು ಅಭ್ಯಾಸವಾಗುತ್ತಾ ಹೋದ ಹಾಗೆ ಕಾಡು ಬೇಡವೆನಿಸತೊಡಗಿದೆ. ಕಾಡಿನಲ್ಲಿ ವಾಸವಾಗಿರುವ ಮಂಗಗಳಿಗೆ ಯಾವುದು ತಿನ್ನಬೇಕು ಯಾವುದು ತಿನ್ನಬಾರದು ಎನ್ನುವುದರ ಅರಿವಿರುತ್ತದೆ. ಅವು ಅನಿವಾರ್ಯವಾಗದ ಹೊರತು ಊರಿಗೆ ಕಾಲಿಡುವುದಿಲ್ಲ. ಬಂದರೂ ಬೆಳೆದದ್ದು ತಿನ್ನುವುದು ತುಂಬಾ ಅಪರೂಪ. ಆದರೆ ಈಗ ಇಲ್ಲಿಂದ ಗಡಿಪಾರು ಮಾಡಿದ ಮಂಗಗಳ ಸಂಖ್ಯೆ ಜಾಸ್ತಿ ಇರುವುದರಿಂದ ಅವುಗಳಿಗೆ ಸಹಜ ಬದುಕು ಮರೆತು ಹೋಗಿರುವುದರಿಂದ  ಯಾರಾದರೂ ಕೊಟ್ಟಿದ್ದು ತಿನ್ನುವುದು ಅಭ್ಯಾಸವಾಗಿ ಹೋಗಿದೆ. ಹಾಗೆ ಸಿಕ್ಕದೆ ಹೋದರೆ ಕಸಿದು ತಿನ್ನುವ ಇಲ್ಲವಾದರೆ ಹಸಿದು ಸಾಯುವುದು ಸಹಜವಾಗಿದೆ.

ಅರಣ್ಯ ಇಲಾಖೆಯ ಅತಿ ಬುದ್ಧಿವಂತಿಕೆಯ ಫಲವಾಗಿ ಬೆಳೆಯುತ್ತಿರುವ ಅಕೇಶಿಯಾ ನೈಸರ್ಗಿಕ ಅರಣ್ಯ ಸಂಪತ್ತನ್ನು ನಾಶಮಾಡಿ ಅಲ್ಲೊಂದು ಹುಲ್ಲೂ ಹುಟ್ಟದ ಹಾಗಾಗಿರುವಾಗ ಮಂಗಗಳಿಗೆ ಆಹಾರ ಸಿಕ್ಕುವುದಾದರೂ ಹೇಗೆ? ಮೊದಲೇ ಗೊತ್ತಿಲ್ಲ, ಕಲಿಯುವ ಅವಕಾಶವಿಲ್ಲ. ಜೊತೆಗೆ ಕಪಿಬುದ್ಧಿ. ಇವೆಲ್ಲದರ ಪರಿಣಾಮ ಊರಿನಲ್ಲಿ ಮನೆಗಳ ಮೇಲೆ ಧಾಳಿ ಮಾಡುವ ಅವುಗಳು ತರಕಾರಿ ಇರಲಿ ಹೂ ಗಿಡಗಳ ಚಿಗುರು ಮೊಗ್ಗು ಎಲ್ಲಾ ಕಿತ್ತು ಧ್ವಂಸಗೊಳಿಸುತ್ತಿವೆ. ಹಾಳಾಗಿ ಹೋಗಲಿ ಕೊಂಡು ತರುವುದು ಮೇಲು ಅನ್ನಿಸುವ ಹಾಗಾಗಿದೆ. ಇಷ್ಟಕ್ಕೆ ನಿಂತಿದ್ದರೆ ಯಾರಿಗೂ ಇದೊಂದು ದೊಡ್ಡ ಸಮಸ್ಯೆ ಅನ್ನಿಸುತ್ತಿರಲಿಲ್ಲವೇನೋ ಆದರೆ ನಿಜವಾದ ಸಮಸ್ಯೆ ಶುರುವಾಗಿದ್ದು  ಅವು ಅಡಿಕೆಯ ತೋಟಕ್ಕೆ ನುಗ್ಗಿ ಚಿಗುರು ಕಾಯಿಯನ್ನು ಕಿತ್ತು ನೆಲಕ್ಕೆ ಎಸೆದು ತೋಟವನ್ನೇ ಬರಿದುಗೊಳಿಸುವ ಕೆಲಸ ಆರಂಭ ಮಾಡಿದ ಮೇಲೆ. ಮಲೆನಾಡಿನ ಕೃಷಿಕರು ಹಣವನ್ನು ನೋಡುವ ಏಕೈಕ ಬೆಳೆಯೆಂದರೆ ಅದು ಅಡಿಕೆ ಮಾತ್ರ. ಅವರ ಬದುಕು ನಿಂತಿರುವುದೇ ಆ ಸಂಪಾದನೆಯ ಮೇಲೆ. ಈ   ಮಂಗಗಳು ಅದನ್ನೂ ನಾಶಮಾಡಿ ಬದುಕನ್ನೇ ವಿನಾಶಗೊಳಿಸುತ್ತಿವೆ.

ಅಡಿಕೆ ತೀರಿದ ನಂತರ   ಮುಂದಿನ ಕಾರ್ಯವೇ ಮನೆಗಳ ಮೇಲೆ ಧಾಳಿ. ಅದರಲ್ಲೂ ಹೆಂಚಿನ ಮನೆಗಳೇ ಬಹುತೇಕವಾಗಿರುವ ಹಳ್ಳಿಗಳಲ್ಲಿ ಇವು ಹಂಚು ತೆರೆದು ಒಳಗೆ ನುಗ್ಗುತ್ತಿವೆ. ಹೆದರಿಸಿದರೆ ಹೆಂಚನ್ನು ನೆಲಕ್ಕೆ ಎಸೆದು ಹಲ್ಲು ಮಸೆಯುತ್ತವೆ. ಸುರಿಯುವ ಮಳೆಯಲ್ಲಿ ಹೀಗೆ ಹಂಚು ಒಡೆದರೆ ಅವರು ಮಾಡುವುದಾದರೂ ಏನು?  ಈ ಮಂಗಗಳು ವಾನರ ಜಾತಿ ಅದರಲ್ಲ್ಲೂ ಮುಖ್ಯ ಪ್ರಾಣ ಹನುಮನ ವಂಶಸ್ಥರು. ಯಾವ ಹಿಂದುವೂ ಅದನ್ನು ಕೊಲ್ಲಲಾರ, ಹೆಚ್ಚೆಂದರೆ ಹೆದರಿಸಬಲ್ಲ. ಈ ಹಿಂಜರಿಕೆಯನ್ನು ಅರ್ಥಮಾಡಿಕೊಂಡಿವೆಯೇನೋ ಎಂಬಂತೆ ಅವುಗಳ ಭರಾಟೆ ಜೋರಾಗಿ ಕೃಷಿಯೂ ಬೇಡಾ, ಊರೂ ಬೇಡಾ ಅನ್ನಿಸುವಷ್ಟು ಮಟ್ಟಿಗೆ ಮಲೆನಾಡಿಗರು ಬೇಸತ್ತು ಹೋಗಿದ್ದಾರೆ. ಪರಿಹಾರಕ್ಕಾಗಿ ಬೇಡುತ್ತಿದ್ದಾರೆ. ಇಂಥ ಸಮಯದಲ್ಲಿಯೇ ಮಂಗಗಳ ಉದ್ಯಾನವನ ನಿರ್ಮಿಸಲು ಯೋಚಿಸಿರುವುದು ಪ್ರಸ್ತುತಕ್ಕೆ ಒಳ್ಳೆಯ ಯೋಜನೆಯೇ.

ನಾಗರಿಕತೆ ಹೆಚ್ಚಾಗುತ್ತಾ ಹೋದ ಹಾಗೆ ಸಹಜವಾಗಿದ್ದ, ಇರಬೇಕಿದ್ದ ಮಾನವೀಯತೆಯನ್ನು ಹೊಸದಾಗಿ ತಂದುಕೊಳ್ಳುವ ಮನುಷ್ಯರ ಯತ್ನವೇ ಇವೆಲ್ಲಕ್ಕೂ ಮೂಲ ಕಾರಣವೇನೋ ಅನ್ನಿಸುತ್ತದೆ. ಪ್ರಾಣಿಗಳು ಸಹಜವಾಗಿ ರೂಪಿಸಿಕೊಳ್ಳಬೇಕಾಗಿದ್ದ ಆಹಾರ ಕ್ರಮವನ್ನು, ಅವುಗಳ ಸ್ವಂತಿಕೆಯನ್ನು ನಾಶಮಾಡಿ ನಮ್ಮ ಮಾನವೀಯತೆಯನ್ನು ನಿರೂಪಿಸಿಕೊಳ್ಳುವುದನ್ನು ನಿಲ್ಲಿಸಿದ ಕ್ಷಣದಿಂದ ಸಮಸ್ಯೆಗೆ ಪರಿಹಾರ ಸಿಗುವ ದಾರಿ ಕಾಣಬಹುದಾ. ಅವುಗಳ ಸ್ವಂತ ಆಹಾರ ಸಂಪಾದಿಸಿಕೊಳ್ಳುವುದು ಕಲಿಯಬಹುದಾ..  ಯಾವ ಜೀವಿಯನ್ನು ಬಹುಕಾಲ ನಿಯಂತ್ರಿಸಲು ಸಾಧ್ಯವಿಲ್ಲ ಅದು ಮನುಷ್ಯನೇ ಆಗಲಿ ಪ್ರಾಣಿಯೇ ಆಗಲಿ.

ಪ್ರಕೃತಿಯ ಸಹಜ ನಡೆಗೆ ಭಂಗ ಬರದಷ್ಟು ದಿನ ಸಮಸ್ಯೆಗಳೂ ಕಡಿಮೆಯಾಗಿರುತ್ತವೆ. ಸಹಜತೆ ಮಾಯವಾಗುತ್ತಾ ಹೋದ ಹಾಗೆ ಸಮಸ್ಯೆಯ ಸರಪಳಿ ಮುಂದುವರಿಯುತ್ತಾ ಹೋಗುತ್ತದೆ. ಹಾಗಾಗಿ ಉದ್ಯಾನವನ ನಿರ್ಮಿಸುವ ಬಗೆಗಿನ ಕಾಳಜಿಯಷ್ಟೇ ನೈಸರ್ಗಿಕ ಅರಣ್ಯವನ್ನು ಉಳಿಸುವ ಬೆಳೆಸುವ ಕೆಲಸವೂ ಜೊತೆಜೊತೆಗೆ ನಡೆಯಬೇಕು. ಪಶ್ಚಿಮಘಟ್ಟದ ನೈಸರ್ಗಿಕ ಕಾಡುಗಳನ್ನು ಕಾಪಾಡಿಕೊಳ್ಳುವ ಕಾರ್ಯ ವಾಗಬೇಕು. ಪ್ರಕೃತಿಯನ್ನು ಉಳಿಸಿಕೊಳ್ಳದೆ ಹೋದರೆ ಬದುಕು ಉಳಿಯುವುದಿಲ್ಲ. ಸಮತೋಲನ ಕಾಪಾಡಿಕೊಳ್ಳುವುದರ ಬಗ್ಗೆ ಸದಾ ಜಾಗೃತರಾಗಿದ್ದಾಗ ಮಾತ್ರ ಬದುಕಿನ ಬಂಡಿ ಸರಾಗವಾಗಿ ಚಲಿಸುತ್ತದೆ. ಎದ್ದಿರುವ ಸಮಸ್ಯೆಗೂ ಪರಿಹಾರ ದೊರಕುತ್ತದೆ. ಸಹಜತೆ ಮರೆತರೆ ಬದುಕು ಎಷ್ಟು ಹದಗೆಡುತ್ತದೆ ಎನ್ನುವುದಕ್ಕೆ ಈ ಮಂಗಗಳು ಅತ್ಯುತ್ತಮ ಉದಾಹರಣೆಯೇನೋ ಅನ್ನಿಸಿತು...


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...