ಪೋಸ್ಟ್ ಮ್ಯಾನ್

ಗಾಡಿ ನಿಲ್ಲಿಸಿ ಹೊರಡುವಾಗ ಬಂದ ಸೆಕ್ಯೂರಿಟಿ ನಿಂಗೊಂದು ಕೊರಿಯರ್ ಇದೆ ತಗೊಮ್ಮಾ ಅಂದ್ರು. ನಂಗಾ ಎಂದು ಕೊಂಚ ಅಚ್ಚರಿಯಲ್ಲೇ ಸ್ವಲ್ಪ ಅನುಮಾನದಲ್ಲೇ ತೆಗೆದುಕೊಂಡು ನೋಡಿದೆ, ಹೌದು ನನ್ನದೇ ವಿಳಾಸ ಹೊತ್ತ ಪುಟ್ಟ ಪ್ಯಾಕ್. ಸ್ಪರ್ಶಿಸುತ್ತಿದ್ದಂತೆ ಮನಸ್ಸು ಬಾಲ್ಯಕ್ಕೆ ಓಡಿತು.

ಓಲೆಯ ಹಂಚಲು ಹೊರಡುವೆ ನಾನು
ತೋರಲು ಆಗಸದಲಿ ಬಿಳಿ ಬಾನು
ಒಳಗಡೆ ನೀವು ಹೊರಗಡೆ ನಾನು

ಕಾಗದ ಬಂತೂ ಕಾಗದವೂ....

ಹಿಂದೆಲ್ಲಾ ಸೈಕಲ್ ಬೆಲ್ ಅನ್ನೋದು ಒಲಂಪಿಕ್ ಸ್ಪರ್ದೆಯ ಸದ್ದಿದ್ದಂತೆ. ಮಾಡುವ ಕೆಲಸವನ್ನು ಬಿಟ್ಟು ಓಡುತ್ತಿದ್ದೆವು. ಬಾಗಿಲಲ್ಲಿ ಕಾಣಿಸುವ ಪೋಸ್ಟ್ಮನ್ ಥೇಟ್ ದೇವದೂತನಂತೆ ಕಾಣಿಸುತ್ತಿದ್ದ. ಅವನ ಹೆಗಲಿನ ಚೀಲವೋ ಹಲವು ಭಾವಗಳನ್ನು ತನ್ನೊಡಲಲ್ಲಿ ಅಡಗಿಸಿಟ್ಟು ಕೊಂಡ ನಿಶ್ಚಲ ಸಮುದ್ರ. ಆ ಚೀಲದೊಳಕ್ಕೆ ಕೈ ಹಾಕಿ ಅವನು ತೆಗೆಯುವುದನ್ನೇ ಕಾತುರದಿಂದ ಕಾಯುತ್ತಿದ್ದ ನಾವು ಸಿಕ್ಕಿದೊಡನೆ ಮಾಡುವ ಮೊದಲ ಕೆಲಸ ಅದು ಯಾರಿಗೆ ಎಂದು ನೋಡುವುದು. ಬರುವ ಪ್ರತಿ ಪತ್ರದ ಬರಹವೂ ಪರಿಚಿತವಾದರೂ ಅದನೊಮ್ಮೆ ಹಿಂದೆ ತಿರುಗಿಸಿ ನೋಡಿ ಮತ್ತೊಮ್ಮೆ ಬರೆದವರು ಯಾರು ಎಂದು ಕನ್ಫರ್ಮ್ ಮಾಡಿಕೊಳ್ಳುವುದರಲ್ಲೂ ಅದೇನೋ ಸಂಭ್ರಮ.

ಅದೆಷ್ಟೇ ಆತುರವಿದ್ದರೂ ಒಮ್ಮೆಗೆ ಒಡಿಯುವಹಾಗಿಲ್ಲ. ಓಡಿ ಬಂದು ಒಂದು ಜಾಗದಲ್ಲಿ ಕುಳಿತುಕೊಂಡು ಅದನ್ನು ನಿಧಾನವಾಗಿ ಇಷ್ಟಿಷ್ಟೇ ಬಿಡಿಸುತ್ತಾ ಸಂಪೂರ್ಣವಾಗಿ ತೆರೆಯುವುದು ಒಂದು ಕಲೆ. ಇನ್ನು ಒಂದು ಅಕ್ಷರವನ್ನೂ ಭರಿಸಲಾರೆ ಅನ್ನೋ ತುಂಬು ಗರ್ಭಿಣಿ ಆ ಪತ್ರಗಳು. ಅಕ್ಕ ಪಕ್ಕ ಕೊನೆಗೆ ಮಡಿಸುವ ಜಾಗದಲ್ಲೂ ಅಕ್ಷರಗಳು ಅತಿಕ್ರಮಣ ಮಾಡಿ ಆಕ್ರಮಿಸಿಕೊಂಡು ಬಿಡುತ್ತಿದ್ದವು. ಒಂದೇ ಉಸಿರಿನಲ್ಲಿ ಒಮ್ಮೆ ಓದಿ ಆಮೇಲೆ ಮತ್ತೊಮ್ಮೆ ನಿಧಾನವಾಗಿ ಓದುತ್ತಾ ಓದುತ್ತಾ ಒಂದೊಂದೇ ಅಕ್ಷರವನ್ನು ಎದೆಗಿಳಿಸಿಕೊಳ್ಳುವ ಆ ಪ್ರಕ್ರಿಯೆ ಯಾವ ತಪಸ್ಸಿಗೆ ಕಡಿಮೆ ಇತ್ತು ಅನ್ನಿಸುತ್ತೆ ಈಗ.

ಪತ್ರದಲ್ಲೂ ಅದೆಷ್ಟು ವಿಧ, ಗೆಳತಿಯ ಕಾಗದ, ಅಮ್ಮನ ಅಕ್ಕರೆಯ ಪತ್ರ, ಹುಟ್ಟು ಹಬ್ಬದ ಗ್ರೀಟಿಂಗ್ಸ್, ಮತ್ಯಾವುದೋ ಪತ್ರಿಕೆ, ಒಟ್ಟಿನಲ್ಲಿ ಅಂಚೆಯಣ್ಣ ಅಂದ್ರೆ ಬೆರಗು. ಆಗಿನ್ನೂ ಫೋನ್ ತನ್ನ ಚಕ್ರಾಧಿಪತ್ಯವನ್ನು ವಿಸ್ತರಿಸಿಕೊಳ್ಳದ ಕಾಲ. ಯಾವುದೇ ತುರ್ತು ಸಂದೇಶಗಳಿದ್ದರೂ ಟೆಲಿಗ್ರಾಂ ಅನ್ನೋ ಮಾಯಾವಿಯ ಮೂಲಕ ಬರುತ್ತಿತ್ತು.  ಯಾವುದೊ ಅಪರಿಚಿತ ಭಾಷೆಯಲ್ಲಿ ಬರುತ್ತಿದ್ದ ಅದನ್ನು ಓದಿ ಹೇಳುವ ಜವಾಬ್ದಾರಿ ಸಹ ಅಂಚೆಯಣ್ಣನದೇ.. ಉಳಿದ ಸಮಯದಲ್ಲಿ ದೇವದೂತನಂತೆ ಕಾಣಿಸುತ್ತಿದ್ದ ಅವನು ಟೆಲಿಗ್ರಾಂ ತರುವಾಗ ಮಾತ್ರ ಕುಣಿಕೆ ಹೊತ್ತು ಬರುವ ಯಮದೂತನಂತೆ ಕೆಂಗಣ್ಣಿಗೆ ಗುರಿಯಾಗುತ್ತಿದ್ದ.
ಆ ಯಮದೂತ ನಾದರೋ ಅದನ್ನು ಓದಿ ಹೇಳಿ ತಾನೂ ಅವರ ಭಾಗದಲ್ಲಿ ಭಾಗಿಯಾಗಿ, ಒಂದಷ್ಟು ಸಮಾಧಾನ ಹೇಳಿ ಭಾರದ ಹೊರೆಯನ್ನು ಕ್ಷಣವಾದರೂ ಇಳಿಸುತ್ತಿದ್ದ. ದುಃಖವೋ ಸಂಭ್ರಮವೋ ಅದನ್ನು ಅನುಭವಿಸಲು ಜೊತೆಗೊಂದು ಹೆಗಲು ಬೇಕು ಅನ್ನೋದು ಅವನಷ್ಟು ಚೆಂದವಾಗಿ ಇನ್ಯಾರು ಬದುಕಿಗೆ ಪರಿಚಯಿಸುತ್ತಿದ್ದರು. ಹೆಗಲಿರುವುದು ಆಸರೆಯಾಗಲೂ ಎನ್ನುವುದನ್ನು ಮೌನವಾಗಿ ಮತ್ಯಾರು ಅರ್ಥಮಾಡಿಸುತ್ತಿದ್ದರು.

ಆಗೆಲ್ಲಾ ಜಗತ್ತಿನ ಆಗು ಹೋಗುಗಳಿಗೆಲ್ಲಾ ಕೇಂದ್ರಸ್ಥಾನ ಪೋಸ್ಟ್ ಆಫೀಸ್ ಮಾತ್ರ ಅನ್ನೋದು ನಮ್ಮ ನಂಬಿಕೆ. ಎಲ್ಲೋ ಪ್ರಿಂಟ್ ಆಗುತ್ತಿದ್ದ ಪೇಪರ್ ಲೋಕಲ್ ಬಸ್ ನಲ್ಲಿ ಹತ್ತಿ ಊರೂರ ಮುಖಾಂತರ ಬಂದು ಇಳಿಯುತ್ತಿದ್ದದ್ದು ಮತ್ತದೇ ಪೋಸ್ಟ್ ಆಫೀಸ್ ನಲ್ಲಿ. ದೂರ ದೂರದಲ್ಲಿದ್ದವರನ್ನು ಒಂಟಿತನವು ಕಾಡದಂತೆ ಸಂಪರ್ಕದಲ್ಲಿಟ್ಟಿದ್ದು ಅದೇ ಪೋಸ್ಟ್ ಆಫೀಸ್ ಎಂಬ ಮಾಯಾವಿ. ದುಡಿಯಲು ಹೋದ ಮಕ್ಕಳು ಮನೆಗೆ ಹಣ ಕಳಿಸಿ ಅವರು ನೆಮ್ಮದಿಯ ಬದುಕು ಸಾಗಿಸುವ ಹಾಗೆ ಮಾಡಿದ ಆರ್ಥಿಕ ಕೇಂದ್ರವೂ ಪೋಸ್ಟ್ ಆಫಿಸೇ.
ಬಂದ ಒಂದು ಕಾಗದ ಅದೆಷ್ಟು ಕಾಣದ ಕತೆಗಳನ್ನು ಹೇಳುತ್ತಿತ್ತೋ ಅನ್ನುವುದನ್ನು ಲೆಕ್ಕವಿಟ್ಟವರಾರು. ಬರೆಯುತ್ತಾ(ಬರೆಸುತ್ತಾ) ಕಣ್ಣೀರಾಗುವ ಅಮ್ಮ, ಎಚ್ಚರಿಸುತ್ತಲೇ ಕಾಳಜಿ ತೋರುವ ಅಪ್ಪ, ಪರಿತಪಿಸುವ ಅಣ್ಣ, ತಂಗಿ, ಅಕ್ಕ, ತಮ್ಮ ಇವರೆಲ್ಲರ ಭಾವವನ್ನು ಒಂಚೂರು ಘಾಸಿಯಾಗದಂತೆ   ತಲುಪಿಸಿ ಒದ್ದೆಯಾಗಿಸುವ ಅದರ ತಾಕತ್ತು, ಒಂಟಿಯೆನಿಸಿದಾಗಲೆಲ್ಲ ಮತ್ತೆ ಮತ್ತೆ ಸಾಲುಗಳನ್ನು ಓದುತ್ತಾ ಆ ಅಕ್ಷರಗಳ ಭಾವಗಳನ್ನು ಜೊತೆಯಾಗಿಸಿಕೊಳ್ಳುವ ಉತ್ಸಾಹವನ್ನು ತುಂಬಿಕೊಡುವ ಅದರ ಸಾಮರ್ಥ್ಯ, ಕುಸಿಯುವ ಕ್ಷಣಗಳಲ್ಲಿ ಅದು ತುಂಬಿಸುವ ಜೀವಂತಿಕೆ, ಇದ್ದಕ್ಕಿದ್ದ ಹಾಗೆ ನೆನಪಾಗಿ ಮೂಡಿಸುವ ಮುಗುಳ್ನಗೆ , ಮುಸ್ಸಂಜೆಯನ್ನು ಹಿತವಾಗಿಸಿ ಕೊಡುವುದರಲ್ಲಿ ಅದು ವಹಿಸುವ ಪಾತ್ರ, ಕಟ್ಟಿ ಕೊಡುವ ನೆನಪಿನ ಬುತ್ತಿ ಇವೆಲ್ಲವನ್ನೂ ರಿಪ್ಲೇಸ್ ಮಾಡುವ ಒಂದೇ ಒಂದು ವಸ್ತು ಇಲ್ಲಿಯವರೆಗೂ ನನಗೆ ಸಿಕ್ಕಿಲ್ಲ.

ಕೆಲವೊಮ್ಮೆ ಅಪರಿಚಿತ ಪತ್ರಗಳು ಪ್ರೀತಿಯ ಸಂದೇಶ ಹೊತ್ತು ತರುವುದೂ ಉಂಟು. ಈ ಪೋಸ್ಟ್ ಮ್ಯಾನ್ ಗೋ ಯಾರ ಮನೆಗೆ ಯಾವ ಪತ್ರಗಳು ಬರ್ತಾವೆ ಅನ್ನೋದು ಕರತಲಾಮಕ. ಅಕ್ಷರಗಳು ಚಿರಪರಿಚಿತ. ಅಪರಿಚಿತ ಅಕ್ಷರಗಳು ಕಂಡಕೂಡಲೇ ಅವನೂ ಥೇಟ್ ಶರ್ಲಾಕ್ ಹೋಂ ನಂತೆ ಪತ್ತೇದಾರಿ ಕೆಲಸ ಶುರುಮಾಡುತಿದ್ದ. ಹಾಗಾಗಿ ಅವನ ಕಣ್ಣು ತಪ್ಪಿಸಿ ಯಾವ ಪ್ರೇಮವೂ ಚಿಗುರುತ್ತಿರಲಿಲ್ಲ. ಎಷ್ಟೋ ಪ್ರೀತಿಯ ಅವಸಾನಕ್ಕೆ ಇವನೂ ಅಪರೋಕ್ಷ ಕಾರಣವಾಗುತಿದ್ದದ್ದು ಮಾತ್ರ ಸತ್ಯ. 

ಅಮ್ಮಾ ಏನು ಮಾಡ್ತಿದ್ದಿ ಅದನ್ನ ಕೈಯಲ್ಲಿ ಹಿಡಿದುಕೊಂಡು ಎಷ್ಟೊತ್ತಿನಿಂದ ಕರೆಯುತ್ತಿದ್ದೇನೆ ಗೊತ್ತಾ ಎಂದು ಮಗಳು ಅಲುಗಿಸಿದಾಗ ಮಾಯಾಲೋಕದಿಂದ ದೊಪ್ಪನೆ ಬಿದ್ದ ಅನುಭವ. ಒಂದು ಪೋಸ್ಟ್ ಎಷ್ಟೆಲ್ಲಾ ನೆನಪುಗಳು.. ಹೇಗೆ ವಿವರಿಸಲಿ ನ್ಯೂ ಜನರೇಶನ್ ನ ಈ ಮಗುವಿಗೆ. ಇದು ಕೇವಲ ಪೋಸ್ಟ್ ಅಲ್ಲಾ ಕಾಲವನ್ನು ಹಿಂದಿರಿಗಿಸುವ ಮಾಯಾ ಗಡಿಯಾರವೆಂದರೆ ಅರ್ಥವಾಗಬಹುದೇ. ಕೈಯೋಲ್ಲೊಂದು ಫೋನ್ ಹಿಡಿದು ಹೇಳಬೇಕಾಗಿದ್ದು, ಹೇಳಬಾರದ್ದು  ಎಲ್ಲವನ್ನೂ ಕಾಯದೆ ಕ್ಷಣ ಮಾತ್ರದಲ್ಲಿ ತಲುಪಿಸಬಲ್ಲ ಮೊಬೈಲ್ ಇರುವಾಗ ಪತ್ರದ ಮಹತ್ವ ಅವಳಿಗೆ ಗೊತ್ತಾಗಬಹುದೇ..  ನಕ್ಕು ಬಾ ಎಂದು ಮುನ್ನೆಡೆದೆ. ಮನಸ್ಸು ಮಾತ್ರ ಹಿಂದಕ್ಕೆ ಹಿಂದಕ್ಕೆ ಓಡುತ್ತಿತ್ತು .

ಈಗಲೂ ಕಾಯುತ್ತೇನೆ ಬಾರದ ಪೋಸ್ಟ್ ಮ್ಯಾನ್ ಗಾಗಿ, ಸೇರದ ಪತ್ರಗಳಿಗಾಗಿ..



Comment

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...