ರಂಗೋಲಿ

ದಿನಾಲು ಹೊಸ್ತಿಲು ಸಾರಿಸಿ ಎರಡೆಳೆ ಎಳೆದರೆ ತೃಪ್ತವಾಗುವ ರಂಗೋಲಿಗೆ ಮಂಗಳವಾರ, ಶುಕ್ರವಾರ ಬಂದರೆ ಎಲ್ಲಿಲ್ಲದ ಸಂಭ್ರಮ. ಅವತ್ತು ಅಂಗಳವನ್ನು ಸಗಣಿಯಿಂದ  ಸಾರಿಸಿ ಪುಸ್ತಕವನ್ನು ಹುಡುಕಿ ದೊಡ್ಡದೊಂದು ಚಿತ್ರಕ್ಕೆ ಜೀವ ತುಂಬುವ ಪುಳಕ. ಸಾರಿಸುವುದಾದರೂ ಹೇಗೆ ಗೊತ್ತಾ? ಸಗಣಿ ಸಾರಿಸುವುದಕ್ಕೆ ಕಣ್ಣಿರು ಹಾಕೋದು ಅನ್ನೋದು ಹಳ್ಳಿ ಕಡೆ ರೂಡಿಯಾದ ಪದ ಬಳಕೆ. ನಿಜಾರ್ಥದಲ್ಲಿ ಕಣ್ಣೀರು ಬರುತಿದ್ದದ್ದೂ ಹೌದು. ಬಾವಿಯಿಂದ ನೀರು ಸೇದಿ ಹೊತ್ತು ತಂದು ಇಡೀ ಅಂಗಳಕ್ಕೆ ಸಗಣಿ ಸಾರಿಸುವ ಹೊತ್ತಿಗೆ ಕಣ್ಣಲ್ಲಿ  ನೀರು ಹನಿಯುವ ಹಾಗೆ ಆಗುತಿತ್ತು. ಸೊಂಟ ಮಾತಾಡುತಿತ್ತು.

ಕೊಟ್ಟಿಗೆಯಲ್ಲಿ ಬಿದ್ದ ಗಟ್ಟಿ ಸಗಣಿ ಮುದ್ದೆಯನ್ನು ಆರಿಸಿ ತರಬೇಕು. ಒಂದು ಬುಟ್ಟಿಯಷ್ಟಾದರೂ ಸಗಣಿ ಆರಸಿ ಅಂಟಿಕೊಂಡ ದರಗು ಕಸ ಕಡ್ಡಿ ಎಲ್ಲವನ್ನೂ ತೆಗೆದು  ತಂದು ಅಂಗಳದ ಮಧ್ಯಕ್ಕೆ ಹಾಕಿದರೆ ಅನುಭವಿ ಅಜ್ಜಿಯ ಕಣ್ಣು ಸಾಕಾ ಬೇಕಾ ಅನ್ನುವುದನ್ನು ಸೂಚಿಸುತ್ತಿತ್ತು. ಆಮೇಲೆ ಅಂಗಳದ ಬದಿಯಲ್ಲಿ ಸೂರಂಕಣದ ಮೂಲೆಯಲ್ಲಿ  ಪೇರಿಸಿ ಇಟ್ಟಿರುವ ಕರಿ ಉಂಡೆಯನ್ನು ತಂದು ಅದಕ್ಕೆ ಸೇರಿಸಬೇಕು. ಈ ಕರಿ ಉಂಡೆ ಅಂದರೆ ಗದ್ದೆ ಕೊಯ್ಲು ಆದ ಮೇಲೆ ಹುಲ್ಲು, ಕಸ ಕಡ್ಡಿ, ಧಾನ್ಯ ಕಿತ್ತ ಮೇಲೆ ಉಳಿದ ಕಸ ಎಲ್ಲವನ್ನೂ ಸುಟ್ಟು ಅದನ್ನು ಉಂಡೆ ಮಾಡಿ ಇಡುತ್ತಾರೆ. ಹೀಗೆ ಅಂಗಳ ಬಳೆಯಲು, ಚಪ್ಪರದ ಕಲ್ಲು ಕಂಬಕ್ಕೆ ಹಚ್ಚಲು ಇದು ಉಪಯೋಗಕ್ಕೆ ಬರುತ್ತದೆ. ಒಂದು ವೇಳೆ ಅದು ಖಾಲಿ ಆಗಿದ್ದರೆ ಅರ್ಜೆಂಟ್ ಗೆಂದೇ ಇಟ್ಟಿರುವ ಖಾಲಿಯಾದ  ಬ್ಯಾಟರಿ ಶೆಲ್ ಒಂದೆರೆಡು ತಂದು ಅದನ್ನು ಒಡೆದು ಅದರಲ್ಲಿರುವ ಕಪ್ಪು ಮಸಿಯನ್ನು ಹಾಕಿ ನೀರು ಹಾಕಿ ಹದವಾಗಿ ಸಗಣಿಯನ್ನು ಕಲೆಸಬೇಕು.  ಬದುಕಿನಲ್ಲಿ ಎಲ್ಲವಕ್ಕೂ ತನ್ನದೇ ಹದ... ಅದು ತಪ್ಪಿದರೆ ಅನಾಹುತ.

ಹಾಗೆ ಕಲೆಸಿದ ಸಗಣಿಯನ್ನು ಹಾಳೆ ತೆಗೆದುಕೊಂಡು ಬಾಗಿಲಿಗೆ ಎದುರಾಗಿ ಆಯುತವೋ, ಚೌಕವೋ ಒಂದು ಆಕಾರಕ್ಕೆ ತಕ್ಕಂತೆ ಬಳಿಯುತ್ತಲೇ ರೇಖಾಗಣಿತ ಎಂದರೆ ಏನು ಎಂದು ಅರಿಯದ ಜೀವಗಳು ಅದೆಷ್ಟು ಕರೆಕ್ಟ್ ಆಗಿ ಚಿತ್ರಿಸುತ್ತಿದ್ದರು. ಸ್ಕೇಲ್ ಮತ್ತೊಂದು ಯಾವುದರ ಹಂಗಿಲ್ಲದೆ ಕೇವಲ ಕಣ್ಣೋಟದಲ್ಲಿ ಕೈಯ ಚಲನೆಯಲ್ಲಿ ಒಂದು ಚೂರು ವಕ್ರವಿಲ್ಲದೆ ಆಕಾರ ಸರಿಯಾಗಿ  ಮೂಡುತಿತ್ತು. ವಕ್ರವಾಗಲೂ ಬಿಡುತ್ತಿರಲಿಲ್ಲ ಹದ್ದುಗಣ್ಣಿನಿಂದ ಗಮನಿಸುತ್ತಲೇ ಅದಕ್ಕೆ ತಕ್ಕ ಹಾಗೆ ಕೈ ಚಲಿಸುತ್ತಾ   ಒಮ್ಮೆ ನಿಂತು ಕಣ್ಣು ಹಾಯಿಸಿ ಎಲ್ಲಾದರೂ ವಕ್ರಕಂಡರೆ ಅದನ್ನು ಸರಿ ಮಾಡುವುದು ಅದೆಷ್ಟು ಸರಳ ಅನ್ನಿಸುತಿತ್ತು. ಬದುಕು ಹಾಗೆ ಕಲಿಸಿತ್ತಾ... ತುಂಬಿದ ಮನೆಯ ವಕ್ರ ಭಾವಗಳನ್ನು ತಣ್ಣಗೆ ಸರಿ ಮಾಡಿ ಮಾಡಿ ಇದೂ ರಕ್ತಗತವಾಗಿರುತಿತ್ತೇನೋ.

ಹಾಗೆ ಬಳಿದ ಕಪ್ಪು ನೆಲ ಆರುವ ಮೊದಲೇ ರಂಗೋಲಿ ಬಿಡಬೇಕಿತ್ತು. ಬಿಳಿ ಎದ್ದು ಕಾಣಬೇಕಾದರೆ ಕಪ್ಪಿನ ಜೊತೆಬೇಕಲ್ಲವೇ..ನಾನು ಸರಿ ಎನ್ನಲು ಇನ್ನೊಬ್ಬರ ತಪ್ಪು ಕಾಣಿಸಬೇಕು. ಅದು ಹಾಗಿರಲಿ ಒಟ್ಟಿನಲ್ಲಿ ತೇವ ಆರುವ ಮೊದಲೇ ಬಿಡಿಸಿದರೆ ಮಾತ್ರ ರಂಗೋಲಿ ಗಟ್ಟಿಯಾಗಿ ಅಲುಗಾಡದೆ ನಗುತಿತ್ತು. ಯಾವುದೇ ಮೊಳಕೆಯೊಡೆಯಲು, ಹಬ್ಬಿ ನಗಲು ಅಲ್ಲೊಂದು ತೇವ ಇರಲೇಬೇಕು. ಒಣವಾದರೆ ಯಾವುದೂ ನಿಲ್ಲುವುದಿಲ್ಲ, ಚಿಕ್ಕ ಗಾಳಿಗೂ  ಹಾರುತ್ತದೆ, ಇಲ್ಲಾ ಕಮರುತ್ತದೆ. ಥೇಟ್ ಬದುಕಿನಂತೆ. ಎದೆಯಲ್ಲಿ ತೇವವಿದ್ದರೆ ಮಾತ್ರ ಬದುಕು ನಳನಳಿಸುತ್ತದೆ.

ಏಕತಾನತೆ ಯಾರಿಗೆ ತಾನೇ ಪ್ರಿಯವಾಗುತ್ತದೆ.  ಬೇಸರ ಹುಟ್ಟಿಸುತ್ತದೆ. ಹಾಗಾಗಿ ಪ್ರತಿ ಸರಿ ಬಳಿದಾಗಲೂ ಹೊಸತೊಂದು ರಂಗೋಲಿ ಬೇಕು. ಅದಕ್ಕಾಗಿ ಹೊಸಹೊಸತು ಕಲಿಯುತ್ತಲೇ ಇರಬೇಕು. ಇದ್ದಿದ್ದನ್ನೇ ಬದಲಾಯಿಸಿ ಹೊರ ರೂಪ ಕೊಡಬೇಕು. ಹಾಗೆ ಕಲಿತದ್ದು ಮರೆತು ಹೋಗಬಾರದೆಂದು ಒಂದು  ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಬೇಕು. ಬದುಕು ನಿಂತ ನೀರಾಗಬಾರದು ಅನ್ನೋದು ಒಂದು ಪುಟ್ಟ ರಂಗೊಲಿಯೂ ಹೇಗೆ ಕಲಿಸುತಿತ್ತು. ಹೊಸತನವನ್ನು, ಅನ್ವೇಷಣೆ ಮಾಡುವುದುನ್ನ ಹೇಗೆ ಹೇಳಿಕೊಡುತಿತ್ತು.  ಹಾಗೆ ಬರೆದಿಟ್ಟು ಕೊಂಡ ರಂಗೋಲಿಯ ಕಡೆ  ಒಮ್ಮೆ ಕಣ್ಣುಹಾಯಿಸಿ ಆ ಕ್ಷಣಕ್ಕೆ ನೆಚ್ಚಿದ್ದನ್ನು ಇನ್ನೊಮ್ಮೆ ಧ್ಯಾನಿಸಿದರೆ ಮುಗಿಯಿತು. ಅಂಗಳದಲ್ಲಿ ನಗಲು ಸಿದ್ದವಾಗುತ್ತದೆ ರಂಗೋಲಿ. ಪ್ರತಿಬಾರಿ ಸಮಸ್ಯೆ ಎದುರಾದಾಗ ಯಾಕೆ ಮನಸ್ಸಿನ ಪರದೆಯಲ್ಲಿ ಒಮ್ಮೆ ಕಣ್ಣು ಹಾಯಿಸಿ ಏನಿದೆ ಎಂದು ನೋಡುವುದು ಮರೆತು ಹೋಗುತ್ತದೆ ಅನ್ನೋ ಪ್ರಶ್ನೆ ಕಾಡಿ ಅಲ್ಲಿಯೇ ಮರೆಯಾಗುತ್ತದೆ ಬಳಿದಾಗ ಹೋಗುವ  ರಂಗೋಲಿಯಂತೆ.

ಚುಕ್ಕೆಯಿಟ್ಟು ಅದರಲ್ಲೊಂದು ಚಿತ್ರ ಬಿಡಿಸುವ ಪರಿ ಇದೆಯಲ್ಲ ಅದು ಯಾವ ಸೃಷ್ಟಿಶೀಲತೆಗೆ ಕಮ್ಮಿ ಹೇಳಿ?  ಯಾವ ಪಾಠಕ್ಕೆ ಸಮನಿದೆ? ಯಾವ ಚುಕ್ಕಿಗೆ ಯಾವುದನ್ನ ಸೇರಿಸಬೇಕು, ಎಲ್ಲಿ ಸೇರಿಸಬೇಕು, ಹೇಗೆ ಸೇರಿಸಬೇಕು  ಅನ್ನೋದರ ಅರಿವಿರಬೇಕು ತಪ್ಪಿತೋ ಆಕಾರ ಕೆಟ್ಟಿತು ಎಂದೇ ಅರ್ಥ. ಸಂಬಂಧಗಳೂ ಹೀಗೆ ಅಲ್ಲವಾ..  ಸೇರಿಸುವ ಗೆರೆ ಹೇಗಿರಬೇಕು, ಎಲ್ಲಿಂದ ಎಲ್ಲಿಗೆ ಮುಂದುವರಿಯಬೇಕು,  ಹಾಗೆ ಸೇರಿಸುತ್ತಾ ಸೇರಿಸುತ್ತಾ ಯಾರಿಗೂ ಎಲ್ಲಿಂದ ಶುರುಮಾಡಿ ಎಲ್ಲಿಗೆ ನಿಲ್ಲಿಸಿದೆ ಅನ್ನೋದು ಗೊತ್ತಾಗಬಾರದು. ಒಂದು ನಿರಂತರ ಚಲನೆ ಅಲ್ಲಿರಬೇಕು, ಎಲ್ಲೂ ತುಂಡಾಗಬಾರದು ತುಂಡಾದರೂ ಜೋಡಿಸಿದ್ದು ಗೊತ್ತಾಗಬಾರದು. ಇಡೀ ಚಿತ್ರದಲ್ಲಿ ಒಂದು ಏಕತೆಯಿರಬೇಕು. ಎಷ್ಟೋ ಬಿಡಿ ಬಿಡಿ ತುಂಡುಗಳ ಜೋಡಣೆಯಾದರೂ ಆ ಭಿನ್ನತೆ ಗೊತ್ತಾಗದೇ ಒಂದೇ ಏಕ ಚಿತ್ರವಾಗಿ ಎಲ್ಲರನ್ನೂ ಕೂಡಿಸಿಕೊಂಡು ನಗಬೇಕು,  ಅರಳಬೇಕು.
ಒಂದು ಮನೆಯಂತೆ ಅಲ್ಲಿನ ಜೀವಗಳಂತೆ. ಭಿನ್ನತೆಯಲ್ಲೂ ಏಕತೆ ನಗುವಂತೆ.

ಸ್ವಲ್ಪ ವ್ಯತ್ಯಾಸವಾಯಿತೋ ಎಲ್ಲರ ಕಣ್ಣಿಗೆ ಬಿದ್ದು ನಗೆಪಾಟಲಿಗೆ ಗುರಿಯಾಗುವ ಹಾಗಾಗುತ್ತದೆ. ಬೀದಿಗೆ ಬಂದ ಮನೆಯ ಜಗಳದ ಹಾಗೆ. ಎದ್ದು ಕಾಣಿಸುವುದು ತಪ್ಪೋ ಅಥವಾ ನಮ್ಮ ಕಣ್ಣು ತಪ್ಪನ್ನೆ ಅರಸುತ್ತದೋ ಅನ್ನೋದು ಇವತ್ತಿಗೂ ಗೊಂದಲವೇ.  ಹಾಗಾಗಿ ಬಿಡಿಸುವ ಪ್ರತಿ ರಂಗೋಲಿಯಲ್ಲೂ ಶ್ರದ್ಧೆಯಿರಬೇಕು. ಜೋಡಿಸುವ ಜಾಣ್ಮೆ ಕಲಿತಿರಬೇಕು. ತಾಳ್ಮೆ ಬೇಕೇ ಬೇಕು. ಕೈ ನಡುಗಬಾರದು, ಕಾಲಿಗೆ ಕಸುವಿರಬೇಕು. ಅಲ್ಲಾಡದೆ ತಿರುಗದೆ ಬಿಡಿಸುವ ಧೀ ಶಕ್ತಿ ಬೇಕೇ ಬೇಕು. ಹಾಗೆ ಬಿಡಿಸಿದ ಮೇಲೆ ಯಾವ ಬಣ್ಣ ಎಲ್ಲಿ ಎಷ್ಟು ತುಂಬಬೇಕು ಅನ್ನೋದು ಮಾತ್ರ ಗೊತ್ತಿರಲೇ ಬೇಕು.

ಬದುಕಿನ ಎಷ್ಟು ಪಾಠಗಳನ್ನ ಒಂದು ರಂಗೋಲಿ ಕಲಿಸುತ್ತದೆ ಏನನ್ನೂ ಹೇಳದೆ. ಯಾವುದನ್ನೂ ಪ್ರಶ್ನಿಸದೇ ಅನ್ನೋದನ್ನ ಆಲೋಚಿಸುತ್ತಲೇ ಕುಳಿತಿದ್ದೆ. ಬೆಳಚು ಕಲ್ಲನ್ನು ಹುಡುಕಿ ತಂದು ಅದನ್ನು ಮನೆಯಲ್ಲೇ  ಒನಕೆಯಲ್ಲಿ ಕುಟ್ಟಿ ಪುಡಿಮಾಡಿಟ್ಟುಕೊಂಡು ಅದನ್ನು ಪ್ರತಿ ದಿನ ಹಾಕಬೇಕಾದರೆ ಬದುಕಿನ ಲೆಕ್ಕಾಚಾರಗಳು ಪ್ರತಿಫಲಿತವಾಗುತ್ತಿದ್ದವಾ ಅಥವಾ ಒಂದು ಕುಟುಂಬವನ್ನು ಹಿಡಿದಿಟ್ಟುಕೊಂಡು ಹೋಗುವ ತಪನೆ, ಶ್ರದ್ಧೆಗಳು ನೆನಪಾಗುತ್ತಿದ್ದವಾ ಅನ್ನೋದು ಈ ಕ್ಷಣದಲ್ಲೂ ಕಾಡುವ ಪ್ರಶ್ನೆಯೇ. ಸಂಪಗೋಡು ಎಂಬ ಆ ಪುಟ್ಟ ಹಳ್ಳಿಯಲ್ಲಿ ಎಲ್ಲಾ ಮನೆಯ ಹೆಂಗಸರು ಕುಳಿತು ಹೀಗೆ ರಂಗೋಲಿ ಕುಟ್ಟುವಾಗ ತಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನೂ ಹಾಕಿ ಕುಟ್ಟುತ್ತಿದ್ದರಾ... ಅದಕ್ಕಾಗಿಯೇನಾ ಆಮೇಲೆ ಅವರ ಮುಖದಲ್ಲಿ ಸುಸ್ತಿನಲ್ಲೂ ಒಂದು ಹೂ ನಗೆ ಅರಳುತ್ತಿದ್ದದ್ದು..

ಒಂದು ಕಡೆಯಿಂದ ಹೊರಟರೆ ಎಲ್ಲರ ಮನೆಯಲ್ಲೂ ಅರಳಿರುವ ಒಂದೊಂದು ತರಹದ ರಂಗೋಲಿ ಬೆಳ್ಳಗೆ ನಕ್ಕು ಬೆಳಗಿಗೆ ಇನ್ನಷ್ಟು ಮೆರಗು ತುಂಬಿರುತ್ತಿತ್ತು. ಒಬ್ಬರ ನೋಡಿ ಇನ್ನೊಬ್ಬರು ಕಲಿಯುವ, ಕಲಿಸುವ, ಅದರಲ್ಲೇ ಏನೋ ಮಾರ್ಪಾಟು ಮಾಡಿ ಹೊಸತಾಗಿ ಮಾಡುವ ಪ್ರಕ್ರಿಯೆಯೂ ಜಾರಿಯಲ್ಲಿರುತಿತ್ತು. ಒಂದು ರಂಗೋಲಿ ಅಂಗಳದಲ್ಲಿ ಚೆಂದಕ್ಕೆ ಅರಳದೆ ತನ್ನ ಸುತ್ತ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯನ್ನೂ ಅದೆಲ್ಲಿಂದ ತಂದಿರುತಿತ್ತೋ..  ಕಲ್ಲರಳಿ ಹೂವಾಗಿ ಅನ್ನುತ್ತಿದ್ದದ್ದು ಇದನ್ನ ನೋಡಿಯೇನೋ.. ಒಮ್ಮೆ ಎದ್ದು ಕಣ್ಣರಳಿಸಿ ನೋಡಿ ತ್ರುಪ್ತಿಯಾದರೆ ಅಲ್ಲಿಯವರೆಗೆ ಬಗ್ಗಿ ಕುಸುಗುಡುವ ಸೊಂಟವೂ ನೋವು ಮರೆತು ಹೋಗುತಿತ್ತು.

ಒಂದು ಕೊಂಡಿ ಕಳಚಿದರೆ ಕಾಣವುದು ನಮಗೆ ಒಂದೇ ಕೊಂಡಿ ಆದರೆ ಅದಕ್ಕೆ ಬೆಸೆದುಕೊಂಡು ಅದೆಷ್ಟೋ ಕೊಂಡಿಗಳು ಕಳಚಿಹೋಗಿರುವುದು ತಕ್ಷಣಕ್ಕೆ ಅರಿವಿಗೆ ಬರುವುದಿಲ್ಲ. ಅಂಗಳ ಕಿರಿದಾಗುತ್ತಾ ಬಂದ ಹಾಗೆ ಕೊಟ್ಟಿಗೆಯೂ ಮಾಯವಾಗಿದೆ. ಸಗಣಿ ಸಾರಿಸುವುದು ಹಾಗಾಗಿ ಅಪರೂಪವಾಗಿದೆ. ಸಂಪಗೋಡು ಎಂಬ ಊರು ಮುಳುಗಿದ್ದು ಮಾತ್ರ ಕಾಣಿಸುವ ನಮಗೆ ಮುಳುಗಿದ್ದು ಏನೇನು ಎಂದು ಲೆಕ್ಕ ಹಾಕಲು ಹೋದರೆ ಕೈ ನಡುಗುತ್ತದೆ. ಮನಸ್ಸು ಬೆಚ್ಚಿ ಬೀಳುತ್ತದೆ.

ಈಗಿನದು ಇನ್ಸ್ಟಂಟ್ ಯುಗ ಬಿಡಿ, ರಂಗೋಲಿಗಳನ್ನು ಬಿಡಿಸಿದ ಸ್ಟಿಕರ್ ತಂದು ಅಂಟಿಸಿದರೆ ಆಯಿತು, ಬೇಡವೆಂದಾಗ ಕಿತ್ತು ಎಸೆದರಾಯಿತು. ಉಳಿಸಿಕೊಳ್ಳುವ, ಬೆಸೆಯುವ, ಆ  ಕಾಳಜಿ ಯಿಂದ ಶ್ರಮಪಡುವುದು ಯಾರಿಗೆ ಬೇಕು? ಸಂಬಂಧಗಳು ಯೂಸ್ ಅಂಡ್ ಥ್ರೋ ಮಟ್ಟಕ್ಕೆ ಬಂದು ನಿಂತ ಹಾಗೆ ನಗುವ ರಂಗೋಲಿಗಳು ಕಡಿಮೆಯಾಗುತ್ತಿದೆಯೇನೋ ಅಥವಾ ರಂಗೋಲಿಗಳು ತಂದು ಬೇಡವೆನಿಸಿದಾಗ ಎಸೆಯುವುದು ಕಂಡು ಸಂಬಂಧಗಳು ಹೀಗಾದವೇನೋ  ಅನ್ನೋ ಭಾವ ಕಾಡಿ ಬರಡಾಗುವ ಹೊತ್ತಿಗೆ ಕೊಟ್ಟಿಗೆಯ ಮೂಲೆಯಲ್ಲಿದ್ದ ಡಬ್ಬವನ್ನು ಹಿಡಿದು ಮಗಳು ಅಂಗಳಕ್ಕೆ ಕಾಲಿಟ್ಟಿದ್ದಳು. ಎದ್ದು ಬಂದು ನೋಡಿದರೆ ಅಂಗಳದ ತುಂಬಾ  ನಕ್ಷತ್ರಗಳ ಮೂಡಿದ್ದವು. ಬಟ್ಟಲಲ್ಲಿ ಕುಳಿತಿದ್ದ ರಂಗೋಲಿ ನಗುತಿತ್ತು. ಜಗುಲಿಯಲ್ಲಿ ತೆರೆದಿಟ್ಟ ರಂಗೋಲಿ ಪುಸ್ತಕ ಗಾಳಿಗೆ ಪಟಪಟನೆ ಹಾರುತ್ತಿತ್ತು.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...