bhimakaaya

ಉದಯೋನ್ಮುಖ ಭೈರಪ್ಪ ಅನ್ನೋ ಹೆಸರು ಕಂಡಕೂಡಲೇ ಕುತೂಹಲ ಕಾಡಿತ್ತು. ಯಾಕಿರಬಹುದು ಅನ್ನೋ ಪ್ರಶ್ನೆ ಮೂಡಿ ಮರೆಯಾಗುವ ಮೊದಲೇ ಪುಸ್ತಕ ಕೈಯೊಳಗೆ ಬಂದು ಸೇರಿತ್ತು. ಕುಸ್ತಿ ಪಟುಗಳ ಜೀವನ, ಅವರ ಸಾಧನಾ ವೈಖರಿ, ಜೊತೆ ಜೊತೆಗೆ ಅವರ ಭಾವಸಂಘರ್ಷಗಳನ್ನ ಬಿಡಿಸಿಡುವ ಭೀಮಕಾಯ.

ಶುರುವಾಗೋದೇ ಜಿದ್ದಿನ ಕುಸ್ತಿಯಿಂದ. ಬದುಕು ಹೀಗೆ ಅಲ್ಲವಾ.. ಹೊರಬರುವ ಸಂಘರ್ಷವೇನು ಸಣ್ಣದಾ... ಬಂದ ಮೇಲೂ ಬದುಕಿನ ಕುಸ್ತಿಗಳು ನಿಲ್ಲುವುದೇ ಇಲ್ಲ. ಒಮ್ಮೆ ಗೆಲುವು ಕೈ ಹಿಡಿಯುತ್ತಾ ಹೋದಂತೆ ಹೆಸರಿನ ಜೊತೆಗೆ ಅದ್ಯಾವ ಮಾಯದಲ್ಲೋ ಹಮ್ಮು ಬಂದು ಕುಳಿತಿರುತ್ತದೆ. ಹೆಸರನ್ನು ಗುರುತಿಸಿದಷ್ಟು ಸುಲಭವಾಗಿ ಹಮ್ಮೂ ಗುರುತಿಸುವ ಹಾಗಿದ್ದರೆ ಎಷ್ಟು ಚೆಂದವಿತ್ತು ಅಲ್ಲವಾ ..

ಕುಸ್ತಿಯ ನೆಲದ ಹದ, ಬಳಸುವ ಭಾಷೆ, ಹಾಕುವ ಪಟ್ಟು ಎಲ್ಲವನ್ನೂ ಸೊಗಸಾಗಿ ವಿವರಿಸುತ್ತಾ ಪರಿಚಯಿಸುತ್ತಾ ಹೋಗುತ್ತಿರುವಾಗಲೇ ಮೊತ್ತ ಮೊದಲ ಗೆಲವು ಪಡೆದ ಸುಬ್ಬುವಿನ ವಿಜಯಯಾತ್ರೆ ಹೊರಟಿರುತ್ತದೆ. ವಿಜಯಕ್ಕೆ ಎಷ್ಟೊಂದು ಬಳಗ ಅಂತ ಅಚ್ಚರಿ ಪಡುವಾಗಲೇ ಸೋಲಿನ ನೆರಳಿನ ಅಸೂಯೆ ಹೆಡೆಯಾಡುತ್ತದೆ. ಬೆಳಕಿನ ಮೇಲೆ ಕಣ್ಣಿದ್ದವರಿಗೆ ನೆರಳು ತಕ್ಷಣಕ್ಕೆ ಕಾಣುವುದಾದರೂ ಹೇಗೆ? ಹೆಡೆಯೆತ್ತಿದ ಹಾವು ಕಚ್ಚದೆ ಸುಮ್ಮನಿರುವುದಾದರೂ ಹೇಗೆ? ಒಂದು ಗೆಲುವಿನ ಯಾತ್ರೆಯಲ್ಲಿಯೇ ಪತನದ ಸಂಚು ಹಿಂಬಾಲಿಸುತ್ತದೆ.

ಪ್ರತಿ ಸಾಧನೆಯೂ ಬೆವರಿನ ಪಸೆಯಲ್ಲಿ ಬೆಳೆಯಬೇಕು. ಉಸ್ತಾದರ ಉಸ್ತುವಾರಿಯಲ್ಲಿ, ತಂದೆಯ ಆರೈಕೆಯಲ್ಲಿ, ಜೊತೆಗಾರರ ಸಹಕಾರದಲ್ಲಿ ಬೆಳೆಯುವ ಸುಬ್ಬು ಅನೇಕ ಕುಸ್ತಿಗಳನ್ನು ಗೆದ್ದು ಬೀಗುವ ಸಮಯದಲ್ಲಿ ತಂದೆ ಮರಿಯಪ್ಪನವರು ತಂಗಿಯ ಒತ್ತಾಯಕ್ಕೆ ಮಣಿದು ಅವಳ ಊರಿಗೆ ಹೊರಡುತ್ತಾರೆ.ಕಣ್ಗಾವಲಿನ ತಂದೆ ಅತ್ತ ಹೋಗುತ್ತಿದ್ದಂತೆ ಸುಬ್ಬುವಿನ ಪತನದ ಸಂಚು ಗರಿಬಿಚ್ಚಿ ಹರಡಿಕೊಳ್ಳುತ್ತದೆ. ಗರಡಿಯ ಹುಡುಗ ಮೋಹಕ್ಕೆ ಬೀಳಬಾರದು. ಯಾವುದರಲ್ಲಾದರೇನು ಬಿದ್ದ ಮೇಲೆ ಮುಗಿಯಿತಲ್ಲ. ಹಾಗೆ ಸುಬ್ಬುವಿನ ಸಂಯಮ, ಸಾಧನೆ, ಕಸುವು ಎಲ್ಲವೂ ಬೀಳತೊಡಗುತ್ತದೆ.

ಒಮ್ಮೆ ತಾನು ಮಾಡುತ್ತಿರುವುದು ತಪ್ಪು ಅಂತ ಅರ್ಥವಾದ ಮೇಲೆ ಅದಕ್ಕೆ ಸಮರ್ಥನೆಗಳೋ ಅಥವಾ ಸಾಚಾ ಎಂದು ಬಿಂಬಿಸಿಕೊಳ್ಳಲು ಸುಳ್ಳುಗಳ ಸರಮಾಲೆಯೋ ಶುರುವಾಗುತ್ತದೆ. ಹೀಗೆ ತನ್ನ ನಂಬಿದವರಿಗೆ ಸುಳ್ಳು ಹೇಳಿ ಕಣ್ಣಿಗೆ ಮಣ್ಣು ಎರೆಚುತ್ತಾ ಸುಬ್ಬು ದಿನದಿನಕ್ಕೂ ಗರಡಿಯಿಂದ ದೂರವಾಗುತ್ತಾ ವ್ಯಾಮೋಹದ ಸುಳಿಯಲ್ಲಿ ಮುಳುಗುತ್ತಾ ಹೋಗುತ್ತಾನೆ. ತನ್ನ ಸುಳ್ಳಿಗಾಗಿ ನೊಂದರೂ ವ್ಯಾಮೋಹ ಮತ್ತೆ ಮತ್ತೆ ಸುಳ್ಳನ್ನಾಡುವ ಹಾಗೆ ಮಾಡುತ್ತದೆ. ಇನ್ನೊಬ್ಬರು ನೋಡುತ್ತಾರೆ ಅನ್ನುವ ಅಂಜಿಕೆಯಿರುವ ಯಾವ ಕೆಲಸವೂ ಮಾಡಬೇಡ ಅನ್ನೋ ನನ್ನ ಸರ್ ಮಾತು ಇನ್ನಷ್ಟು ಅರ್ಥವಾಗುವ ಹಾಗೆ ಮಾಡಿತು.

ಸುಳಿಯಲ್ಲಿ ಸಿಲುಕಿ ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆಎಂಬಂತೆ ಒದಗುವ ಗೆಳೆಯ ಚಂದ್ರು, ಹಿತೈಷಿ ಶಿಂಗಪ್ಪ, ಅದನ್ನು ಅರ್ಥಮಾಡಿಕೊಂಡು ಸುಬ್ಬುವಿನ ಸಾಧನೆಗಾಗಿ ಪ್ರಿತಿಯನ್ನೇ ತ್ಯಾಗಮಾಡಿ ಬದುಕನ್ನೇ ಇನ್ನೊಂದು ಘಟ್ಟಕ್ಕೆ ರೂಪಾಂತರಗೊಳಿಸಿಕೊಳ್ಳುವ ತನ್ಮೂಲಕ ರಾಜಮ್ಮನಾಗುವ ರಾಜಿ, ಕೊರಗಲ್ಲೇ ಪ್ರಾಣ ಬಿಡುವ ತಂದೆಯ ನೆನಪು, ಸಂಚಿನ ಸುಳಿವು ಎಲ್ಲವೂ ಬಿದ್ದ ಸುಬ್ಬುವನ್ನು ಏಳುವ ಹಾಗೆ ಮಾಡಿ ಕಳೆದುಕೊಂಡಿದ್ದನ್ನು ಮತ್ತೆ ಪಡೆದುಕೊಳ್ಳುವ ಕಿಚ್ಚು ತುಂಬಿಸುತ್ತದೆ.

ಗೆಲುವಿನ ಹಮ್ಮಿನಲ್ಲಿ ಪ್ರಪಾತಕ್ಕೆ ಜಾರುವ ಮುನ್ನ ಒಂದು ಸೋಲು, ಆ ಸೋಲು ಕೊಡುವ ಅವಮಾನ ತುಂಬುವ ಕಿಚ್ಚು ಇನ್ಯಾವುದೂ ತುಂಬಲು ಸಾಧ್ಯವಿಲ್ಲವೇನೋ. ಹಾಗೆ ಕಳೆದುಕೊಂಡಿದ್ದನ್ನು ಮತ್ತೆ ಪಡೆಯಲು  ಎಲ್ಲವುದರಿಂದ ದೂರವಾಗಿ ಕೇವಲ ಕಸುವು ತುಂಬಿಕೊಳ್ಳುವುದೇ ಒಂದು ತಪಸ್ಸಾಗಿ ಬದುಕಿನ ದೃಷ್ಟಿ ಅತ್ತಲೇ ನೆಡಬೇಕು. ಹಾಗಾಗಬೇಕಾದರೆ ನೆನಪುಗಳಿಂದ, ಕಾಡುವ ಪರಿಸರದಿಂದ, ಎದುರಾಗುವ ಪರಿಚಿತರಿಂದ ದೂರ ಹೋಗಬೇಕು, ಮನಸ್ಸನ್ನು ನಿಯಂತ್ರಣಕ್ಕೆ ತಂದುಕೊಳ್ಳಬೇಕು. ಅದಕ್ಕೆ ಏನೋ ಹಿಂದೆಲ್ಲಾ ತಪಸ್ಸಿಗಾಗಿ ಕಾಡಿಗೆ ಹೋಗುತ್ತಿದ್ದದ್ದು.

ಊರಿನ ಮಾನ ಹೋದರೂ ಪರವಾಗಿಲ್ಲ ಸುಬ್ಬು ಸೋಲಬೇಕು, ತನ್ನ ದ್ವೇಷ ಈಡೇರಬೇಕು ಅಂತ  ಬೇರೆ ಯಾವುದೋ ಪ್ರಾಂತ್ಯದವನಿಗೆ ಸಪೋರ್ಟ್ ಮಾಡುವ ಮಲ್ಲಾರಿ ಅಂದು ಇಂದು ಮುಂದೂ ಸ್ವಹಿತಕ್ಕಾಗಿ ಊರನ್ನೇ ಅಡವಿಡುವ ಜನರ  ಮನಸ್ಥಿತಿಯ ಪ್ರತೀಕವಾಗಿ ನಿಲ್ಲುತ್ತಾನೆ. ದ್ವೇಷ ಮನುಷ್ಯನನ್ನು ಎಷ್ಟು ಕುರುಡು ಮಾಡುತ್ತದೆ ಅನ್ನೋದಕ್ಕೆ ಉದಾಹರಣೆಯಾಗಿ.  ಮಲ್ಲಾರಿ ಹಾಗೂ ಸುಬ್ಬು ಸದಾಕಾಲ ಇರುತ್ತಾರೆ.

ಹಾಗೆ ಎಲ್ಲೋ ದೂರದ ಊರಿಗೆ ಹೋಗಿ ಸಾಧನೆ ಮಾಡಿ ಮತ್ತೆ ತನ್ನೂರಿಗೆ ಬಂದು ಕುಸ್ತಿಯಲ್ಲಿ ಗೆದ್ದು ಮತ್ತೆ ಕೋರಾಪಿಟ್ ಆಗುವ ಸುಬ್ಬು ಗರಡಿಗೆ ಹಿಂದುರುಗುತ್ತಾನೆ. ಹಳಿ ತಪ್ಪಿದ ರೈಲು ಮತ್ತೆ ತನ್ನ ದಾರಿ ಹಿಡಿದು ಗಮ್ಯದೆಡೆಗೆ ಸಾಗುವಂತೆ. ಬದುಕು ಹಳಿ ತಪ್ಪುವುದು ಸುಲಭ, ಮತ್ತೆ ಅದನ್ನು ಹಳಿಗೆ ತರುವುದು ಕಷ್ಟದ ಕೆಲಸ ಮಾತ್ರವಲ್ಲ ಸವಾಲಿನ ಕೆಲಸವೂ ಹೌದು. ಹಾಗಾಗಿ ಹಳಿ ತಪ್ಪದಂತೆ ಎಚ್ಚರವಾಗಿರಬೇಕು.ದೃಷ್ಟಿ ಕೇವಲ ಗಮ್ಯದೆಡೆಗೆ ಮಾತ್ರವಿರಬೇಕು.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...