ನದಿ ಉಳಿಸಿ (ಹೊಸದಿಗಂತ) 26.06.19

ಮೊನ್ನೆ ಮದುವೆಗೆ ಬಂದಿದ್ದ ಶೇ 80 ಪ್ರತಿಶತ ಜನರ ಮಾತು ಶುರುವಾಗುತ್ತಿದ್ದದ್ದೆ ಹೆಂಗೆ ನಿಮ್ಮ ಬಾವಿಲಿ ನೀರು ಉಂಟಾ ಸಾಕಾಗುತ್ತಾ ಅಂತಲೇ. ಮದುವೆಗೆ ಹೊರಡುವ ಮುನ್ನ ಇದೇ ಪ್ರಶ್ನೆಯನ್ನು ನಾನೂ ಕೇಳಿಯೇ ಹೊರಟಿದ್ದೆ. ಕೇಳಿದ ಮೇಲೆ ಅಲ್ಲಿಂದ ಪರವಾಗಿಲ್ಲ ಒಂದು ರಿಂಗ್ ನೀರು ಇದೆ ಸಾಕಾಗುತ್ತೆ ಅನ್ನುವ ಉತ್ತರ ಬಂದ ಮೇಲೆ ಫೋನ್ ಕೆಳಗಿಟ್ಟಮೇಲೆ ಫೋನ್ ನಂತೆ ಮನಸ್ಸೂ ಸ್ತಬ್ಧವಾಗಿತ್ತು. ಮಳೆಗೆ, ನೀರಿಗೆ ಹೆಸರುವಾಸಿಯಾಗಿದ್ದ, ನೀರಿನ ಬರ ಅಂದರೇನು ಅಂತಲೂ ಗೊತ್ತಿಲ್ಲದ ಮಲೆನಾಡೆ೦ಬ ಮಲೆನಾಡು ಈಗ ಅಕ್ಷರಶಃ ಬರನಾಡಾಗುವತ್ತ ಸಾಗಿದೆ. ಪ್ರತಿ ಬೇಸಿಗೆಯಲ್ಲೂ ಇದು ಹೆಚ್ಚುತ್ತಾ ಕುಡಿಯೋಕೆ ನೀರು ಸಿಕ್ಕರೆ ಸಾಕು ಅನ್ನುವ ಹಾಗಾಗಿದೆ. ಕೇವಲ ಪತ್ರಿಕೆಗಳಲ್ಲಿ, ಟಿ.ವಿ ಯಲ್ಲಿ ಬಯಲುಸೀಮೆಯ ಜನರ ಪರದಾಟ ನೋಡಿದ್ದ ಮಲೆನಾಡಿಗರು ಈಗ ಸ್ವತಃ ತಾವೇ ಅನುಭವಿಸುತ್ತಿದ್ದಾರೆ.

ಹಾಗೇಕಾಯ್ತು ಅನ್ನೋದಕ್ಕೆ ಸಾವಿರ ಕಾರಣಗಳು ಕಣ್ಣೆದೆರು ಇದ್ದರೂ ಎಚ್ಚೆತ್ತುಕೊಳ್ಳದ ಬುದ್ಧಿವಂತರು ನಾವು ಅದಕ್ಕೆ ಸರಿಯಾಗಿ ನಮ್ಮನ್ನು ಆಳುವವರು. ಬಾವಿ ತೆಗೆದರೆ 30 ರಿಂದ 50 ಅಡಿ ಆಳದಲ್ಲಿ ಸಿಗುತ್ತಿದ್ದ ನೀರು ಈಗ ಬೋರ್ ನ ಕೊಳವೆಗೆ 350 ರಿಂದ ಮುಂದಕ್ಕೆ ಎಷ್ಟು ಬೇಕಾದರೂ ಹೋಗಬಹುದಾದ ಸಾಧ್ಯತೆ ಇದೆ. ಹತ್ತು ಕಿ.ಮಿ ಸುತ್ತಳತೆಯಲ್ಲಿ ಇಂದು 400 ರಿಂದ 500 ಕ್ಕೂ ಹೆಚ್ಚು ಬೋರ್ವೆಲ್ ಗಳು ಆಗಿವೆ. ನಿಮ್ಮತ್ರ ಮೊಬೈಲ್ ಇದ್ಯಾ ಎಂದು ಕೇಳುವಷ್ಟೇ ಸಹಜವಾಗಿ ಬೋರ್ವೆಲ್ ತೆಗೆಸಿದ್ರಾ ಎಂದು ಕೇಳುವುದು ಸಹಜವಾಗಿ ಹೋಗಿದೆ. ಇದರ ಮುಂದುವರಿದ ಭಾಗ ಏನು ಎಂಬುದು ಯಾರಿಗೂ ಯೋಚಿಸುವ ಪುರುಸೊತ್ತು ಇಲ್ಲದಿರುವುದರಿಂದ, ಈ ಕ್ಷಣಕ್ಕೆ ನೀರು ಇದೆಯಾ ಸಾಕು ಎನ್ನುವ ಭಾವ ಇರುವುದರಿಂದ ಅಡೆತಡೆಯಿಲ್ಲದೆ ನೀರು ಮೊಗೆಯುವುದು ಅಭ್ಯಾಸವಾಗಿ ಹೋಗಿದೆ. ನಿಧಾನಕ್ಕೆ ಅಂತರ್ಜಲ ಬತ್ತಿ ಹೋಗುತ್ತಿದೆ.

ಮಲೆನಾಡಿನ ಪಶ್ಚಿಮಘಟ್ಟಗಳು ಕೇವಲ ಪ್ರಕೃತಿ ಸೌಂದರ್ಯಕ್ಕೆ, ಕಾಡಿಗೆ ಹೆಸರುವಾಸಿಯಲ್ಲ, ಅದು ನದಿಗಳ ಮೂಲ. ನೂರಾರು ನದಿಗಳು ಇಲ್ಲಿ ಹುಟ್ಟಿ ಹರಿಯುತ್ತವೆ. ಸಾಗರ ಸೇರುವ ಉದ್ದೇಶದಿಂದ ಹರಿಯುತ್ತಾ ಹರಿಯುವ ಜಾಗವನ್ನು ಹಸಿರಾಗಿಸುತ್ತಾ, ಬದುಕು ತಂಪಾಗಿಸುತ್ತಾ ಹೋಗುತ್ತವೆ. ಮಳೆಗಾಲದಲ್ಲಿ ಭೋರ್ಗೆರೆದು ಹರಿಯುವ ಈ ನದಿಗಳು ಬೇಸಿಗೆಯಲ್ಲೂ ಬತ್ತುತ್ತಿರಲಿಲ್ಲ, ಹರಿವು ನಿಲ್ಲಿಸುತ್ತಿರಲಿಲ್ಲ. ಹಾಗೆ ಹರಿಯುವುದರಿಂದಲೇ ನದಿ ಪಾತ್ರದ ಜಾಗಗಳಲ್ಲಿ ಅಂತರ್ಜಲ ಹೆಚ್ಚಿರುತ್ತಿತ್ತು. ಕೆರೆ ಬಾವಿಗಳು ತುಂಬಿರುತ್ತಿದ್ದವು. ಭೂಮಿಯಲ್ಲಿ ಪಸೆ ಉಳಿದುಕೊಂಡಿರುತಿತ್ತು. ಅಲ್ಪತೃಪ್ತಿ, ಮಿತಬಳಕೆ ಹಾಗೂ ಮರುಪೂರಣ ಇವು ಇದ್ದಾಗ ಮಾತ್ರ ಯಾವುದೇ ಸಂಪತ್ತು ಉಳಿಯುತ್ತದೆ ಬೆಳೆಯುತ್ತದೆ. ಸಿಕ್ಕಿದಷ್ಟೂ ಹಿಂದೆ ಮುಂದೆ ಯೋಚಿಸದೆ ಬೇಕಾಬಿಟ್ಟಿ ಬಳಸಿದಾಗ, ಸರಿಯಾದ ಕಾರ್ಯಸೂಚಿ, ತಿಳುವಳಿಕೆ ಇಲ್ಲದೆ ಹೋದಾಗ  ಏನಾಗುತ್ತದೆ ಎನ್ನುವುದಕ್ಕೆ ಬೇಸಿಗೆಯಲ್ಲಿ ಒಮ್ಮೆ ಮಲೆನಾಡಿಗೆ ಹೋದರೆ ಉತ್ತರ ಸಿಗುತ್ತದೆ. ಬತ್ತಿಹೋದ ನದಿಗಳು, ಬಾಯ್ಬಿಟ್ಟ ಭೂಮಿ, ಕಾಯುವ ನೆಲ, ಕಾಡುವ ಧಗೆ ಉತ್ತರಿಸುತ್ತದೆ.

ಮಲೆನಾಡಿನ ಜೀವಾಳವಾದ ತುಂಗೆ, ಭದ್ರೆ, ಮಾಲತಿ ಶರಾವತಿ ನದಿಗಳು ಬರುಬರುತ್ತಾ ಬತ್ತುತ್ತಾ ಹೋಗುತ್ತಿವೆ. ಈ ಸಲ ತುಂಗೆಯೂ ಹುಟ್ಟಿ ಸ್ವಲ್ಪ ದೂರ ಸಾಗಿ ಬಂದು ಮಾಲತಿ ನದಿ ಅದಕ್ಕೆ ಸೇರಿದರೂ ತೀರ್ಥಹಳ್ಳಿಯ ಬಳಿ ಹರಿವು ನಿಲ್ಲಿಸಿದ್ದಳು. ಇನ್ನೊಂದು ಸ್ವಲ್ಪ ದಿನ ಮಳೆ ಬರದೆ ಹೋದರೆ ಕುಡಿಯುವ ನೀರಿನ ವ್ಯವಸ್ಥೆ ಹೇಗೋ ಎನ್ನುವ ಸಮಸ್ಯೆ ಎದುರಾಗಿತ್ತು. ನೇತ್ರಾವತಿಯಲ್ಲಿ ನೀರು ಇರದೇ ಕುಡಿಯಲೂ ದೇವರ ಅಭಿಷೇಕಕ್ಕೂ ತತ್ವಾರವಾಗುವ ಪರಿಸ್ಥಿತಿ. ಮಾಲತಿ ನದಿಯಂತೂ ಬತ್ತಿ ಹೋಗಿ ಇದು ನದಿಯಾ ಎಂದು ಕೇಳಿಕೊಳ್ಳುವ ಹಾಗಾಗಿ ವರ್ಷಗಳೇ ಉರುಳಿವೆ. ಗಾಜನೂರಿನ ಸಮೀಪ ತುಂಗೆಗೆ ಕಟ್ಟಿದ ಡ್ಯಾಮ್ ನೀರು ಬತ್ತಿ ಹೋಗಿ ಹಿನ್ನೀರು ತುಂಬಿರುತ್ತಿದ್ದ ಪ್ರದೇಶಗಳು ನಡುಗಡ್ಡೆಗಳಾಗಿ ಕಾಣುತ್ತಿವೆ. ಜಾನುವಾರುಗಳಿಗೆ ಕುಡಿಯಲು ನೀರು ಕೊಡಿ ಎಂದು ಕೇಳಿಕೊಳ್ಳುವ ಅದಕ್ಕಾಗಿ ಹೋರಾಟ ಮಾಡುವ ಪರಿಸ್ಥ್ತಿತಿ ಎದುರಾಗಿದೆ. ಇಷ್ಟೆಲ್ಲಾ ಸಂಕಷ್ಟಗಳ ನಡುವೆ ಈಗ ಶರಾವತಿ ನೀರು ಬೆಂಗಳೂರಿಗೆ ಹರಿಸುವ ಪ್ಲಾನ್ ಒಂದು ಸದ್ದಿಲ್ಲದೇ ತಯಾರಾಗುತ್ತಿದೆ.

ಕರ್ನಾಟಕವೆಂದರೆ ಕೇವಲ ಬೆಂಗಳೂರು ಮಾತ್ರವಾ? ಇದು ಈಗ ಮಲೆನಾಡಿಗರು ಮಾತ್ರವಲ್ಲ ಕಾವೇರಿ ನದಿಭಾಗದವರು, ನೇತ್ರಾವತಿಯ ಮಡಿಲಿನವರು ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಾಗಿದೆ. ಹೀಗೆ ನದಿಯೊಂದರ ನೀರನ್ನು ನೂರಾರು ಕಿ.ಮಿ ತಿರುಗಿಸುವುದರ ಮೂಲಕ ಆಗುವ ಅನಾಹುತವೇನು ಎಂದು ನೋಡದೆ, ತಜ್ಞರೊಡನೆ ಚರ್ಚಿಸದೆ ಕೇವಲ ಒಂದು ಪ್ರಾಂತ್ಯದ ಜನರ ಹಿತಾಸಕ್ತಿಗೆ ದುಡುಕಿನಿಂದ ಮಾಡುವ ಕಾರ್ಯದ ಪರಿಣಾಮಗಳನ್ನು ಎದುರಿಸುವುದು ಒಂದಿಡೀ ಪ್ರಾಂತ್ಯ. ಒಂದು ನದಿ ಹರಿಯುತ್ತಿದೆ ಎಂದರೆ ಅದು ಹರಿವಿನ ಪಾತ್ರದುದ್ದಕ್ಕೂ ಅಂತರ್ಜಲ ಹೆಚ್ಚಿಸುತ್ತಾ ಹೋಗುತ್ತದೆ. ಆ ಪಾತ್ರದ ಕೆರೆ, ಕೊಳ್ಳ, ಬಾವಿಗಳನ್ನು ಜೀವಂತವಾಗಿಸುತ್ತದೆ. ಹರಿಯುತ್ತಿರುವಷ್ಟು ಹೊತ್ತು ಜೀವಂತವಾಗಿರುವುದು ನದಿ ಮಾತ್ರವಲ್ಲ ಅದರ ಪಾತ್ರದ ಜೀವಿಗಳು, ಪ್ರಕೃತಿ ಕೂಡಾ. ಹಾಗಾಗಿ ಒಂದು ನದಿ ತನ್ನ ಹರಿವು ನಿಲ್ಲಿಸಿದರೆ ಸಾಯುವುದು ನದಿ ಮಾತ್ರವಲ್ಲ ಆ ಪಾತ್ರದ ಪ್ರಕೃತಿ, ಅಲ್ಲಿನ ಜೀವಿಗಳು.

ಬೆಂಗಳೂರಿನ ದಾಹಕ್ಕೆ ಇದನ್ನು ಬಿಟ್ಟು ಬೇರೆಯೇ ದಾರಿಯೇ ಇಲ್ಲವಾ ಎಂದರೆ ಯೋಚಿಸುವ, ಕಾರ್ಯಗತ ಮಾಡುವ ಮನಸ್ಸು ಇಲ್ಲವೆಂದಷ್ಟೇ ಹೇಳಬಹುದು. ಬೆಂಗಳೂರು ಕಟ್ಟಿದ ಕೆಂಪೇಗೌಡ ಇದರ ದಾಹವನ್ನು ತಣಿಸಲೂ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದ. ನಗರವನ್ನು ಹಾಳುಗೆಡವಿದ ಹಾಗೆ ನಾವು ನೀರಿನ ಮೂಲವನ್ನೂ ಹಾಳುಮಾಡಿದ್ದೇವೆ. ಒಂದು ನಗರವನ್ನು ಹೇಗೆ ಕಟ್ಟಬೇಕು ಹೇಗೆ ವಿಸ್ತರಿಸಬೇಕು ಎನ್ನುವ ಕೌಶಲತೆ, ಅದಕ್ಕೆ ಬೇಕಾದ ದಿಟ್ಟತೆ ಇಲ್ಲದೆ ಹೋದರೆ ಇವತ್ತಿನ ಬೆಂಗಳೂರಿನ ಪರಿಸ್ಥಿತಿಯಾಗುತ್ತದೆ. ಇನ್ನೂ ಕಾಲ ಮಿಂಚಿಲ್ಲ. ಮಳೆಕೊಯ್ಲು, ಕೆರೆಗಳ ಸಂರಕ್ಷಣೆ, ನೀರಿನ ಮಿತಬಳಕೆ ಇವುಗಳನ್ನು ಕಟ್ಟುನಿಟ್ಟಾಗಿ ಮಾಡಿದರೆ, ಇಲ್ಲಿನ ಜನಗಳಿಗೆ ಮಾಡುವ ಹಾಗೆ ಮಾಡಿದರೆ ನೀರಿನ ಸಮಸ್ಯೆ ಕಾಡುವುದಿಲ್ಲ. ಇದನ್ನೇ ಯುವಬ್ರಿಗೇಡ್ ಮಾಡುತ್ತಿರುವುದು. ಮೋದಿ ಪ್ರತಿ ಪಂಚಾಯತಿಗೂ ಕಾಗದ ಬರೆದು ಕಾರ್ಯೋನ್ಮುಖರಾಗುವಂತೆ ಕೇಳಿರುವುದು. ಸಮಸ್ಯೆಯ ಮೂಲದಲ್ಲೇ ಸರಿ ಮಾಡದೆ ಹೋದರೆ ಅನಾಹುತ ಕಟ್ಟಿಟ್ಟ ಬುತ್ತಿ. ಹಾಗಾಗಿ ಈ ಕಾರ್ಯದಲ್ಲಿ ಕೈ ಜೋಡಿಸುವುದು ಪ್ರತಿ ನಾಗರಿಕರ ಜವಾಬ್ದಾರಿ.

ಎತ್ತಿನ ಹೊಳೆ, ಶರಾವತಿ ನೀರು ತರುವ ಯೋಜನೆಗೆ ಸುರಿಯುವ ಹಣವನ್ನು ಇಲ್ಲಿನ ನೀರಿನ ಮೂಲಗಳ ರಕ್ಷಣೆ ಮಾಡುವುದಕ್ಕೆ, ಮಳೆ ನೀರು ಹಿಡಿದಿಟ್ಟುಕೊಳ್ಳುವುದಕ್ಕೆ, ಅಂತರ್ಜಲ ಹೆಚ್ಚಿಸುವುದಕ್ಕೆ ಉಪಯೋಗಿಸಿದರೆ ಇಲ್ಲಿನ ನೀರೂ ಉಳಿಯುತ್ತದೆ ಅಲ್ಲಿಯ ನದಿಗಳೂ ಉಸಿರಾಡುತ್ತವೆ. ಅದಿಲ್ಲದೆ ಕೇವಲ ಬೆಂಗಳೂರು ಮಾತ್ರವೇ ಕರ್ನಾಟಕ, ಇಲ್ಲಿ ವಾಸಿಸುವವರು ಮಾತ್ರವೇ ಮನುಷ್ಯರು ಎಂದು ಯೋಚಿಸಿ ಇಂಥಹ ಅವೈಜ್ಞಾನಿಕ ಕ್ರಮಗಳನ್ನು ಮುಂದುವರಿಸಿದರೆ ಬೆಂಗಳೂರಿನ ದಾಹವೂ ತಣಿಯುವುದಿಲ್ಲ, ನದಿಗಳೂ ಉಳಿಯುವುದಿಲ್ಲ. ನದಿಗಳೆ ಉಳಿಯದ ಮೇಲೆ ನದಿಪಾತ್ರಗಳೂ ಇರುವುದಿಲ್ಲ.

ನಮಗೇನು ಬೇಕು ಎಂದು ಗೊತ್ತಿರುವುದು ಮಾತ್ರವಲ್ಲ ಏನು ಬೇಡಾ ಎಂದೂ ಗೊತ್ತಿರಬೇಕು. ಬೇಡವಾದ್ದನ್ನು ವಿರೋಧಿಸುವ ಸ್ಥೈರ್ಯ ಕೂಡಾ ಬೆಳಸಿಕೊಳ್ಳಬೇಕು. ಪ್ರಕೃತಿಯ ಚಲನೆಯನ್ನು ಬಲವಂತವಾಗಿ ಬದಲಾಯಿಸಿದರೆ ನಾಶವಾಗುವುದು ಪ್ರಕೃತಿ ಮಾತ್ರವಲ್ಲ ನಾವೂ ಎಂಬ ಅರಿವು ಮೊದಲು ಇರಬೇಕು. ನಾವು ಹೋಗುವಾಗ ಮಕ್ಕಳಿಗೆ ಆಸ್ತಿಯನ್ನು ಬಿಟ್ಟು ಹೋಗದಿದ್ದರೂ ತೊಂದರೆಯಿಲ್ಲ ಅವರು ಗಳಿಸಿಕೊಳ್ಳುತ್ತಾರೆ. ಪ್ರಕೃತಿಯನ್ನು ಉಳಿಸಿಹೋಗಬೇಕು. ಆಗ ಅವರು ಬದುಕುತ್ತಾರೆ. ದನಿ ಎತ್ತೋಣ, ನಮ್ಮ ನದಿಗಳನ್ನು ಉಳಿಸಿಕೊಳ್ಳೋಣ.


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...