ಹಕ್ಕೆಮನೆ

ಸಂಕ್ರಾಂತಿ ಮುಗಿಯುತಿದ್ದ ಹಾಗೆ ಒಂದಿಬ್ಬರು ಕೈಯಲ್ಲೊಂದು ಕತ್ತಿ,ಹೆಗಲ ಮೇಲೆ ಕಂಬ ಹೊತ್ತು ನಡೆದರೂ ಎಂದರೆ ಗದ್ದೆಯಲ್ಲೊಂದು ಹಕ್ಕೆಮನೆ ಶುರುವಾಗುತ್ತೆ ಅನ್ನುವ ಮುನ್ಸೂಚನೆ ಸಿಗುತಿತ್ತು. ಗದ್ದೆ ಕೊಯ್ಲು ಮುಗಿದು ನದಿಯ ಹರಿವಿನಂತೆ ತಿರು ತಿರುಗಿ ಹಬ್ಬಿರುವ ಗದ್ದೆಯ ಕೋಡಿ ನೋಡಿದಷ್ಟೂ ದೂರಕ್ಕೆ ಕಾಣಿಸುತ್ತಾ ಬಯಲು ಸೃಷ್ಟಿಸಿಬಿಡುತಿತ್ತು. ನದಿ ಮೂಲದಂತೆ ಅದರ ಮೂಲವೂ ಕಾಣಿಸದಿದ್ದರೂ ಎರಡು ದಡಗಳ ನಡುವೆ ಶಾಂತವಾಗಿ ಹರಿಯುವ ನದಿಯಂತೆ ಅನ್ನಿಸುತಿದ್ದದ್ದು ಎಷ್ಟು ಸಲವೋ. ನಡು ಮಧ್ಯಾನದ ಏಕಾಂತದಲ್ಲೋ, ಇಳಿ ಸಂಜೆಯ ಒಂಟಿತನದಲ್ಲೋ, ಸುಡು ಸುಡುವ ಬಿಸಿಲಿನಲ್ಲಿ ಬಸವಳಿದು ಕುಳಿತಾಗಲೋ ಈ ಕೋಗನ್ನು ದೃಷ್ಟಿಸಿದರೆ ಬಿಸಿಲು ಕಾಯಿಸುತ್ತಾ ಮಲಗಿರುವ ಸಮುದ್ರಂತೆ ಕಾಣಿಸುತ್ತಿತ್ತು. ಅಲ್ಲೆಲ್ಲೋ ಒಂಟಿಯಾಗಿ ನಿಂತ ಮರ, ಅದರ ಕೊಂಬೆಯಲ್ಲಿ ಅದರಷ್ಟೇ ಏಕಾಂಗಿಯಾಗಿ ಕುಳಿತ ಅನಾಮಧೇಯ ಹಕ್ಕಿ, ಅಲ್ಲಲ್ಲಿ ಮೇಯುತ್ತಾ ನಿಂತಿರುವ ದನಗಳು, ಬಿಸಿಲು ನೆರಳಿನ ಚೆಲ್ಲಾಟ, ಸಿಕ್ಕ ನೆರಳಲ್ಲಿ ಮಲಗಿ ಮೆಲಕು ಹಾಕುವ ದನಗಳು, ಕಂಪದ ಗದ್ದೆಯ ನಡುವಿನ ಕೆಸರಿನ ಹೊಂಡದಲ್ಲಿ ಮಲಗಿರುವ ಎಮ್ಮೆಗಳು, ದನದ ಮೈ ಉಣುಗನ್ನೋ ಮತ್ಯಾವುದೋ ಹುಳ ಹಪ್ಪಟೆಯನ್ನು ತಿನ್ನುವ ಕೊಕ್ಕರೆ ಹೀಗೆ ನೋಡುವಷ್ಟು ಹೊತ್ತು ಎಲ್ಲವನ್ನೂ ಮರೆಸಿ ಬೇರ್ಯಾವುದೋ ಲೋಕಕ್ಕೆ ಕೊಂಡೊಯ್ಯಲು ಶಕ್ತವಾಗಿದ್ದವು.

ಕೊಯ್ಲು ಮುಗಿದು, ಭೂಮಿಯೂ ತನ್ನ ಹಸಿತನ ಕಳೆದುಕೊಂಡು ಬಿಸಿಲು ತನ್ನ ಬೇಗೆ ಹೆಚ್ಚಿಸಿಕೊಳ್ಳುವ ಸಮಯದಲ್ಲಿ ಗದ್ದೆಯ ನಡುವೆ ಅಲ್ಲಲ್ಲಿ ಬೇಲಿ ಏಳಲು ಶುರುವಾಯಿತೆಂದರೆ ಅಲ್ಲಿ ಧಾನ್ಯವೋ, ತರಕಾರಿಯೋ ಬಿತ್ತಲು ತಯಾರಾಗುತ್ತಿದೆ ಎಂದರ್ಥ. ಮಳೆ ಹೊಯ್ಯುವ ಸಮಯದಲ್ಲಿ ಹೆಚ್ಚು ನೀರು ಬೇಡುವ ಭತ್ತ ಬೆಳೆದರೆ ನಂತರ ಮೂರು ತಿಂಗಳಲ್ಲಿ ಮನೆಗೆ ಬೇಕಾದ ಉದ್ದು, ಕಡಲೆ, ಎಳ್ಳು, ಹುರುಳಿ, ಅವಡೆ, ಹೀಗೆ ಬಗೆಬಗೆಯ ಧಾನ್ಯಗಳನ್ನು ಜೊತೆ ಜೊತೆಗೆ ಮೆಣಸಿನಕಾಯಿ, ಸೌತೆಕಾಯಿ, ಮುಂತಾದ ತರಕಾರಿಗಳನ್ನು ಬೆಳೆಯುತ್ತಿದ್ದರು. ಬಡತನ ಆದಷ್ಟೂ ಎಲ್ಲವನ್ನೂ ಬೆಳೆದುಕೊಳ್ಳುವ ಹಾಗೆ ಪ್ರೇರೇಪಣೆ ಕೊಡುತ್ತಿತ್ತೇನೋ. ಜೊತೆಗೆ ಮನುಷ್ಯರೂ ಶ್ರಮಜೀವಿಗಳು. ಕೆಲಸವೊಂದೇ ಅವರ ಸಮಯ ಕಳೆಯಲು ಪರಿಹಾರದಂತಾಗಿತ್ತು. ಅವರಿಗೆ ಅದೇ ಬದುಕು ಅದೇ ಮನರಂಜನೆ.ಹಾಗಾಗಿ ಒಂದು ಸುತ್ತು ಹೂಟಿ ಮಾಡಿ ಧಾನ್ಯ ಬಿತ್ತುವ ಮುನ್ನ ಹಕ್ಕೆಮನೆ ತಯಾರಾಗುತ್ತಿತ್ತು, ಅಪ್ಪಟ ಮಲೆನಾಡಿನ ಜಾಗವದು. ಕಾಡಿನ ನಡುವೆ ಮನೆ, ಅಲ್ಲೇ ಗದ್ದೆ ತೋಟ ಇರುತ್ತಿದ್ದರಿಂದ ಕಾಡುಪ್ರಾಣಿಗಳ ಉಪಟಳ ಸರ್ವೇ ಸಾಮಾನ್ಯ. ಅದರಲ್ಲೂ ಕೊಯ್ಲು ಮುಗಿದ ನಂತರ ದನಗಳನ್ನು ಬಿಟ್ಟು ಹೊಡೆಯುತ್ತಿದ್ದರಿಂದ ಅವುಗಳನ್ನು ಓಡಿಸಲು ಒಬ್ಬರು ಕಾಯಲು ಕಾಯುವುದು ಅನಿವಾರ್ಯವಾಗಿತ್ತು. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಾಗೂ ಬಹುಕಾಲ ಅಲ್ಲೇ ಇರಬೇಕಾಗಿದ್ದರಿಂದ ಹಕ್ಕೆಮನೆ ಕಟ್ಟುತ್ತಿದ್ದರು.

ಗದ್ದೆಯ ಮಧ್ಯದಲ್ಲೊ, ಯಾವುದಾದರೂ ಮರದ ನೆರಳಿನಲ್ಲೋ ನಾಲ್ಕು ಕಂಬಗಳನ್ನು ಹುಗಿದು ಏಳೆಂಟು ಅಡಿಯಷ್ಟು ಉದ್ದ ಅಗಲದ ಜಾಗದಲ್ಲಿ ಕಟ್ಟುತ್ತಿದ್ದ ಗುಡಿಸಲಿನ ರೀತಿಯ ಪುಟ್ಟ ಮನೆಯೇ  ಹಕ್ಕೆಮನೆ. ನಾಲ್ಕೈದು ಅಡಿಯ  ಕಂಬಹುಗಿದು ಅದರ  ಮೇಲೆ ಅಂಗಳದ ಮೂಲೆಯಲ್ಲಿ ಪೇರಿಸಿಟ್ಟ ಅಡಿಕೆ ದಬ್ಬೆಯನ್ನೋ, ಇಲ್ಲಾ ಬಿದಿರಿನ ಬೊಂಬುಗಳನ್ನೋ ಅಚ್ಚುಕಟ್ಟಾಗಿ ಜೋಡಿಸಿ ಅಟ್ಟಣಿಗೆ ಮಾಡಿ ಅದರ ಮೇಲೊಂದು ಮಾಡು ಮಾಡಿ ಸೋಗೆ, ತೆಂಗಿನಗರಿ ಇಲ್ಲಾ ಭತ್ತದ ಹುಲ್ಲನ್ನು ಹೊದ್ದಿಸಿದರೆ ಹಕ್ಕೆಮನೆ ರೆಡಿ ಆಗುತಿತ್ತು. ಬಿಸಿಲು ಮಳೆಯಿಂದ ರಕ್ಷಣೆ ಕೊಡುತ್ತಿತ್ತು. ಗದ್ದೆಯ ಮಧ್ಯದಲ್ಲಿ ತುಸು ಎತ್ತರದಲ್ಲಿ ಇರುವುದರಿಂದ ಸುತ್ತೆಲ್ಲಾ ಜಾಗವೂ ಕಾಣಿಸಿ ಯಾವುದು ಯಾವ ಮೂಲೆಯಿಂದ ಬಂದರೂ ತಿಳಿದುಬಿಡುತಿತ್ತು. ಕೋಟೆ ಕೊತ್ತಲಗಳಲ್ಲಿ ಇರುವ ಕಾವಲು ಗೋಪುರದಂತೆ ಇದೂ ಗದ್ದೆಯ ಕಾವಲು ಗೋಪುರ ಎಂದು ಮಾತಾಡಿಕೊಂಡು ನಾವೇ ಕಾವಲುಗಾರರು ಎಂದು ಬೀಗುವ ಸರದಿ ನಮ್ಮದಾಗುತಿತ್ತು. ಅಲ್ಲೊಂದು ಕಂಬಳಿ ದಿಂಬು ತಂದಿಟ್ಟು ಗೃಹಪ್ರವೇಶವನ್ನೂ ನೆರವೇರಿಸಿ ಬಿಡುತ್ತಿದ್ದೆವು. ನಿಧಾನಕ್ಕೆ ತಿನ್ನುವ ಸಕಲ ಪರಿಕರಗಳೂ ಅಲ್ಲಿಗೆ ಬಂದು ನಮ್ಮ ಜೊತೆಗೆ ಇರುವೆ, ಗೊದ್ದಗಳೂ ಸಂಸಾರ ಶುರುಮಾಡುತ್ತಿದ್ದವು.

ರಾತ್ರಿಯ ವೇಳೆ ಲಾಟೀನು, ಕತ್ತಿ, ಕೋಲು ಹಿಡಿದು ಕಂಬಳಿ ಹೊದ್ದು ಮನೆಯ ಗಂಡಸರು ಕಾಯಲು ಹೊರಡುತ್ತಿದ್ದರು. ಕಾಡುಹಂದಿಗಳ ಕಾಟವನ್ನು ತಪ್ಪಿಸಲು ಸಣ್ಣಗೆ ಬೆಂಕಿಹಾಕಿ ರಾತ್ರಿ ಕಾವಲು ಕಾಯುತ್ತಿದ್ದರು. ಅಕ್ಕಪಕ್ಕದ ಹೊಲಗಳವರೂ ಜೊತೆಯಾಗುತ್ತಿದ್ದರು. ಬೇಸಿಗೆ ರಜೆ ಬಂತೆಂದರೆ ಮಕ್ಕಳ ಸೈನ್ಯ ಅಲ್ಲಿ ಗುಂಪುಗೂಡುತಿತ್ತು. ಬೇಸಿಗೆಯೆಂದರೆ ಕಾಡುಹಣ್ಣುಗಳ ಪರ್ವ. ಹಾಗಾಗಿ ಕೈತುಂಬಾ ಜೇಬು ತುಂಬಾ ನೇರಳೆ ಹಣ್ಣು, ಸೀಬೆ ಹಣ್ಣು, ಹುಳಿಹಣ್ಣು, ಬೆಮ್ಮರಲ ಹಣ್ಣು, ಹಿಪ್ಪೆ ಹೂ, ಕಲ್ಲುಸಂಪಿಗೆ, ಮಾವಿನಕಾಯಿ, ಹಲಸಿನ ಹಣ್ಣು  ಹೀಗೆ ಕಾಡಿನ ನಾನಾ ತರಹದ ಮರಗಳ ಮೇಲೆ ಧಾಳಿ ಮಾಡಿ ಕಪ್ಪ ಕಾಣಿಕೆಯಾಗಿ ಹಣ್ಣು ಸ್ವೀಕರಿಸಿ ಹೋಗಿ ಹಕ್ಕೆಮನೆ ಸೇರಿದರೆ ಅಲ್ಲಿನ ಗಲಾಟೆಗೆ ಗೌಜಿಗೆ ಯಾವ ಪ್ರಾಣಿಗಳೂ ಹತ್ತಿರ ಸುಳಿಯುತ್ತಿರಲಿಲ್ಲ. ಜೂಟಾಟ, ಚೆಂಡಿನಾಟ ಲಗೋರಿ  ಆಡುವ ರಭಸಕ್ಕೆ ದನಗಳೂ ಹತ್ತಿರ ಬರುತ್ತಿರಲಿಲ್ಲ. ಹಾಗಾಗಿ ಬೇಸಿಗೆಯಲ್ಲಿ ದೊಡ್ಡವರಿಗೆ ಸ್ವಲ್ಪ ಆರಾಮ. ಏನೋ ಇಷ್ಟಾದರೂ ಕೆಲಸ ಮಾಡುತ್ತಾರೆ ಅನ್ನೋ ಸಮಾಧಾನ.  ಶಾಲೆ ಶುರುವಾಗುವ ಹೊತ್ತಿಗೆ ಧಾನ್ಯಗಳ ಕೊಯ್ಲೂ ಮುಗಿಯುತ್ತಿದ್ದರಿಂದ ಗೌಜೂ ಮುಗಿಯುತ್ತಿತ್ತು. ಹಕ್ಕೆಮನೆಯೂ ಶಿಸ್ತಾಗಿ ಬಂದು ಕೊಟ್ಟಿಗೆಯ ಮೂಲೆಯಲ್ಲಿ ಮಲಗಿ ಬಿಡುತಿತ್ತು.

ಸಂಪಗೋಡು ಇದ್ದಿದ್ದೂ ಕಾಡಿನ ನಡುವೆ ಆದರೂ ಮನೆಯ ಎದುರಿನ ಕೋಗು ವಿಶಾಲವೂ ಹಲವು ಮನೆಗಳೂ ಇದ್ದಿದ್ದರಿಂದ ಕಾಡು ಪ್ರಾಣಿಗಳ ಕಾಟ ಅಷ್ಟಾಗಿ ಗದ್ದೆಗೆ ಇರುತ್ತಿರಲಿಲ್ಲ. ಮೇಯಲು ಬಿಟ್ಟ ದನಗಳನ್ನು ನೋಡಿಕೊಂಡರೆ ಸಾಕಿತ್ತು. ಆದ್ದರಿಂದ ಹಕ್ಕೆಮನೆ ಕಟ್ಟಲೇ ಬೇಕು ಎನ್ನುವ ಅನಿವಾರ್ಯತೆ ಇರಲಿಲ್ಲ. ಕೆಲವೊಮ್ಮೆ ಕಟ್ಟುತ್ತಲೂ ಇರಲಿಲ್ಲ. ಹಾಗಾಗಿ ಹಕ್ಕೆಮನೆ ನೆನಪಾದಾಗ ಕಾಗಿನಕೊಡಿಗೆಗೆ ಶಾಸ್ತ್ರಿಗಳ ಮನೆಗೇ ಹೋಗಬೇಕಿತ್ತು. ಒಂದು ಮೈಲಿಯಷ್ಟು ಕಾಡಿನ ನಡುವೆ ನಡೆದುಹೊಗಬೇಕಾಗಿದ್ದ ದಾರಿಯಲ್ಲಿ ಸ್ವಲ್ಪ ಮುಂದಕ್ಕೆ ಹೋದರೆ ಮೂರುದಾರಿ ಕೂಡುವ ಸ್ಥಳವಿತ್ತು. ಹಳ್ಳಿಗಳಲ್ಲಿ ಈ ಮೂರು ದಾರಿ ಕೂಡುವ ಜಾಗದ ಬಗ್ಗೆ ಅಷ್ಟಾಗಿ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅದರಲ್ಲೂ ಅಲ್ಯಾರೋ ಕೊಲೆಯಾಗಿ ಬಿದ್ದಿದ್ದರು ಎನ್ನುವ ಸುದ್ದಿ ಬೇರೆ ಭಯ ಹುಟ್ಟಿಸುತ್ತಿತ್ತು. ಅದರ ಪಕ್ಕದಲ್ಲೇ ಇರುವ ಸ್ಮಶಾನ ಬೇರೆ ಇನ್ನಷ್ಟು ಹೆದರುವ ಹಾಗೆ ಮಾಡುತಿತ್ತು. ಆದರೂ ಹಕ್ಕೆಮನೆಯ ಮೋಹ ನಮ್ಮನ್ನು ಎಳೆದೊಯ್ಯುತ್ತಿತ್ತು. ಆ ದಾರಿಯಲ್ಲಿ ಹೋಗುವ ಧೈರ್ಯ ಕೊಡುತ್ತಿತ್ತು.

ಶಾಸ್ತ್ರಿಗಳ ಮಗ ಬಾಲಚಂದ್ರ ಕೆಲವೊಮ್ಮೆ ಬಂದು ಕರೆದುಕೊಂಡು ಹೋದರೂ ಹಲವು ಸಲ ನಾವೇ ಹೋಗಬೇಕಿತ್ತು. ಎಷ್ಟೇ ಬೇಗ ಎಂದರೂ ತಿಂಡಿ ಸ್ನಾನ ಮುಗಿಸಿ ಆ ಮೂರುದಾರಿ ಸೇರುವಲ್ಲಿ ಬರುವ ಹೊತ್ತಿಗೆ ಸೂರ್ಯ ನೆತ್ತಿಯ ಮೇಲೆ ಬಂದಿರುತ್ತಿದ್ದ. ಈ ನಡು ಮಧ್ಯಾನದ ಬಿಸಿಲಲ್ಲಿ ಕೊಳ್ಳಿದೆವ್ವ ಓಡಾಡುತ್ತವೆ ಎಂದು ಕತೆ, ಮಾತು ಕೇಳಿದ್ದ ನಮಗೆ ಮೊದಲೇ ಬಿಸಿಲು ಅದರಲ್ಲೂ ಬೆಂಕಿ ಕೊಳ್ಳಿ ಹಿಡ್ಕೊಂಡು ಓಡಾಡೋ ಬದಲು ಸುಮ್ನೆ ಒಳಗೆ ಮಲಗಿರಬಾರದ ಅನ್ನುವ ಕೋಪ ಉಕ್ಕೇರಿದರೂ ಭಯದಿಂದ ನಡುಗುತ್ತಾ, ಬೆವರು ಒರೆಸಿಕೊಳ್ಳುತ್ತಾ  ಅರ್ಧ ಕಣ್ಣು ಮಾತ್ರ ತೆರೆದು ಓಡುವ ನಡಿಗೆಯಲ್ಲಿ ಮುಂದಕ್ಕೆ ಹೋಗಿ ಅವರ ಮನೆ ಸೇರಿ ಉಸ್ಸಪ್ಪಾ ಎಂದು ಕುಳಿತರೆ ಆಯ್ಯೋ ಈ ಬಿಸಿಲಲ್ಲಿ ಯಾಕೆ ಬರೋಕೆ ಹೋದ್ರಿ ಮಕ್ಕಳೇ ಅನ್ನುತ್ತಾ ಸರೋಜಮ್ಮ ಮಜ್ಜಿಗೆಯೋ, ಹೆಸರು ಪಾನಕವೋ ತಂದು ಕೊಡುತ್ತಿದ್ದರು. ಸ್ವಲ್ಪ ಸುಧಾರಿಸಿಕೊಂಡು ಹಕ್ಕೆಮನೆಗೆ ಹೊರಟರೆ ಸೂರ್ಯ ನೆತ್ತಿಯಿಂದ ಇಳಿದು ಮನೆಗೆ ಹೋಗುವುದೂ ಗೊತ್ತಾಗುತ್ತಿರಲಿಲ್ಲ. ಅವರ ಮನೆಯ ಮಕ್ಕಳೂ ನಾವೂ ಸೇರಿ ಅದೇನು ಆಟ ಆಡುತ್ತಿದ್ದೆವೋ, ಎಷ್ಟೆಲ್ಲಾ ತಿನ್ನುತ್ತಿದ್ದೆವೋ ಲೆಕ್ಕಕ್ಕೆ ಸಿಗುತ್ತಿರಲಿಲ್ಲ.

ಕತ್ತಲಾಗುತ್ತೆ ಮನೆಗೆ ಹೋಗೋದಾದ್ರೆ ಬನ್ನಿ ಅಂತ ಸರೋಜಮ್ಮ ಕೂಗು ಹಾಕುವಾಗಲೇ ನಮಗೆ ಹೊತ್ತು ಇಳಿದಿದ್ದು ಗೊತ್ತಾಗುತ್ತಿದ್ದದ್ದು. ಕಾಫಿ ಕುಡಿರೋ ಎಂದು ಹೇಳುವುದನ್ನೂ ಕೇಳಿಸಿಕೊಳ್ಳದೆ ಉಳಿದ ಹಣ್ಣುಪಣ್ಣುಗಳನ್ನು ಎತ್ತಿಕೊಂಡು ಒಂದೇ ಉಸಿರಿಗೆ ಓಡಲು ಶುರುಮಾಡಿದರೆ ಮತ್ತೆ ಮನೆ ಹತ್ತಿರವಾದಾಗಲೇ ನಿಲ್ಲುತ್ತಿದ್ದದ್ದು. ಆಚೆಮನೆಯ ದೀಪ ಕಂಡ ಕೂಡಲೇ ಅಲ್ಲಿಯವರೆಗೂ ಇರದ ಮರೆಯಾಗಿರುತ್ತಿದ್ದ ಧೈರ್ಯ ಮತ್ತೆ ವಾಪಾಸ್ ಬರುತಿತ್ತು. ಮನೆಗೆ ಬರುವಾಗ ಅಜ್ಜಿ ದೀಪ ಹಿಡಿದು ಜಗುಲಿಯಲ್ಲಿ ಇಡಲು ಬರುತ್ತಿದ್ದಳು. ಬೇಗ ಬರಬಾರದ ಆ ಹಾಳುದಾರಿಯಲ್ಲಿ ಕತ್ತಲಾದ ಮೇಲೆ ಬರೋದು ಯಾಕೆ ಎನ್ನುತ್ತಲೇ ಕಾಫಿ ಬಿಸಿಮಾಡಲು ಹೋಗುತ್ತಿದ್ದಳು. ಭಯವನ್ನು ಮರೆತ ನಾವು ಮತ್ತೆ ಇನ್ಯಾವಾಗ ಹೋಗುವುದು ಎಂದು ಚರ್ಚಿಸಲು ಶುರುಮಾಡುತ್ತಿದ್ದೆವು.  ಊರು ಮುಳುಗಿ, ಹಕ್ಕೆಮನೆಯೂ ಮುಳುಗಿ ಮೂರುದಾರಿಯ ಸ್ಮಶಾನದ ಜೊತೆಗೆ ಊರಿಗೆ ಊರೇ ಸ್ಮಶಾನದಂತಾದ ಮೇಲೆ ಹಕ್ಕೆಮನೆ ಮನದೊಳಗೆ ಮುಳಗಿ ಹೋಗಿತ್ತು.

ಛೋಟಾ ಭೀಮ್ ನೋಡುತ್ತಿದ್ದ ಮಗಳು ಅಮ್ಮಾ ನಾವು ಟ್ರೀ ಹೌಸ್ ಕಟ್ಟೋಣವಾ ಊರಿಗೆ ಹೋದಾಗ ಅಂತ ಆಸೆ ಕಣ್ಣುಗಳಿಂದ ನೋಡುವಾಗ ಪಕ್ಕನೆ ಹಕ್ಕೆಮನೆ ನೆನಪಾಗಿ ಮನಸ್ಸು ಮೌನವಾಗಿತ್ತು. ಆಗ ನಾನು ಬಿಸಿಲಲ್ಲಿ ಆಡೋಲ್ಲ ಟ್ರೀ ಹೌಸ್ ಅಲ್ಲೇ ಆಡ್ಕೊತಿವಿ, ಫ್ರೆಶ್ ಗಾಳಿ ಕೂಡಾ ಸಿಗುತ್ತೆ, ಫ್ಯಾನ್ ಕೂಡಾ ಬೇಡಾ ತಂಪಾಗಿಯೂ ಇರುತ್ತೆ, ಇನ್ನೊಂದು ಕೊಂಬೆಗೆ ಒಂದು ಜೋಕಾಲಿ ಕಟ್ಟಿದರೆ ಇನ್ನೂ ಚೆಂದವಿರುತ್ತೆ ಪ್ಲೀಸ್ ಅಮ್ಮಾ ಎಂದು ಮಗಳು ಉದ್ದದ ಪಟ್ಟಿ ಮಾಡುತ್ತಲೇ ಇದ್ದಳು. ರಜೆ ಹೇಗೆ ಕಳಿತೂ ಅಂತಲೇ ಗೊತ್ತಾಗದಷ್ಟು ನಮ್ಮನ್ನು ಆವರಿಸಿಕೊಂಡು ಭಾಗವಾಗಿರುತಿದ್ದ ಹಕ್ಕೆಮನೆ ಮತ್ತೆ ಮತ್ತೆ ನೆನಪಾಗಿ ತಂಪಿನ ಭಾವ ಕಾಡುವಾಗಲೇ ಮಗಳಿಗೂ ಇಂಥದೊಂದು ನೆನಪು ಬೇಕು ಎಂದುಕೊಳ್ಳುತ್ತಾ ಹೂ ಅಂದೇ.. ಅವಳೀಗ ಯಾವ ಆರ್ಕಿಟೆಕ್ಟ್ ಗೂ ಕಡಿಮೆಯಿಲ್ಲದ ಹಾಗೆ ಪ್ಲಾನ್ ಬಿಡಿಸುತ್ತಿದ್ದಾಳೆ. ಅಜ್ಜಿಯದೊಂದು ಸೀರೆ ಎತ್ತಿಕೊಂಡು ಜೋಕಾಲಿ ಕಟ್ಟಲು ಕಾಯುತ್ತಿದ್ದಾಳೆ.

ಕೆಲವು ಸಂಗತಿಗಳೇ ಹಾಗೆ ಯಾವತ್ತಿಗೂ ತಮ್ಮ ತಂಪನ್ನು ಕಳೆದುಕೊಳ್ಳುವುದಿಲ್ಲ.... ನಾವೇ ಬಿಸಿಲಿಗೆ ಬರುತ್ತೇವೆ ಅಷ್ಟೇ....

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...