ಮಳೆ ಬರುವ ಮುನ್ನ...

ಮಳೆಗಾಲದ ಮಳೆಯದ್ದೆ ಒಂದು ಹದವಾದರೆ ಈ ಬೇಸಿಗೆಯ ಮಳೆಯದ್ದೇ ಇನ್ನೊಂದು ವಿಧ. ರುದ್ರ ರಮಣೀಯ ಅನ್ನೋದಕ್ಕೆ ಅನ್ವರ್ಥಕ ಈ ಬೇಸಿಗೆಯ ಮಳೆ. ಮಳೆಗಾಲದ ಮಳೆಗೆ ಒಂದು ಶ್ರುತಿಯಿದೆ, ರೀತಿಯಿದೆ, ನೀತಿಯಿದೆ. ಅವೆಲ್ಲವನ್ನೂ ಮೀರಿದ್ದು ಮಾತ್ರ ಬೇಸಿಗೆಯ ಮಳೆ. ಮಳೆಗಾಲದ ಶುರುವಿನ ಹಂತವೂ ಹಾಗೆ. ಬಿರುಬೇಸಿಗೆಗೆ ಕಾದು, ಕುದ್ದು, ಒಡಲೆಲ್ಲಾ ಬಿರುಕುಬಿಟ್ಟು ಒಂದು ಹನಿ ನೀರಿಗಾಗಿ ಕಾಯುವ ಕಾತುರ, ನಿರೀಕ್ಷೆ, ಹಪಾಹಪಿ ಇದೆಯಲ್ಲ ಅದು ವಿವರಿಸಲಾಗದ್ದು. ಸುರಿಯುವ ರಭಸ ಆಕಾಶದ್ದು, ಸೆಳೆಯುವ ಹುಮ್ಮಸ್ಸು ಇಳೆಯದ್ದು.

ಮನಸ್ಸಿಗೆ ಬಂದ ಹಾಗೆ ಅಂತಾರಲ್ಲ ಅದು ಬೇಸಿಗೆಯ ಮಳೆಗೆ ಹೇಳಿ ಮಾಡಿಸಿದ ಸಾಲು. ಯಾವಾಗ ಬೇಕಾದರೂ ಸುರಿಯಬಹುದು. ಆದರೂ ಈ ಮಳೆಗೆ ಮಧ್ಯಾಹ್ನದ ಮೇಲೆ ಮೋಹ. ಉಂಡು ವಿಶ್ರಾಂತಿ ಪಡೆದು ಕಾಫಿ ಕುಡಿಯುವ ವೇಳೆಗೆ ಹೊರಗೆ ಕಣ್ಣು ಹಾಯಿಸಿದರೆ ಒಮ್ಮೆಗೆ ತಬ್ಬಿಬ್ಬಾಗಬೇಕು ಹಾಗೆ ಕತ್ತಲು ಆವರಿಸಿ ಮತ್ತೆ ಮತ್ತೆ ಗಡಿಯಾರದ ಕಡೆಗೆ ನೋಡಿ ಸಮಯ ಖಾತರಿಮಾಡಿಕೊಳ್ಳುವ ಹಾಗಿರುತ್ತದೆ. ಉರಿಯುವ ಸೂರ್ಯನಿಗೆ ಗದರುವ ಕಪ್ಪು ಮೋಡಗಳ ಜೊತೆ ಕಣ್ಣಾ ಮುಚ್ಚಾಲೆ ಆಡುವ ಅವನು ಕದ್ದು ಕುಳಿತಾಗ ಇಡೀ ಭೂಮಿಗೆ ಮುಸುಕು ಪರದೆ ಬಿದ್ದ ಹಾಗೆ. ಅತ್ತ ಕತ್ತಲೂ ಅಲ್ಲದ ಇತ್ತ ಪೂರಾ ಬೆಳಕು ಅಲ್ಲದ ಮಧ್ಯಂತರ ಸ್ಥಿತಿಯದು. ಕೆಲವು ಸಲ ಮಧ್ಯ ವಯಸ್ಸಿನ ತಲ್ಲಣದ ಹಾಗೆ ಅನ್ನಿಸಿಬಿಡುತ್ತದೆ. ಬೆಳಕು ಮೂಡುವ ಸಮಯದ ಹಾಗಿನ ಅಹ್ಲಾದವೂ ಕೆಲವೊಮ್ಮೆ. ತಣ್ಣಗೆ ಬೀಸುವ ಗಾಳಿ, ಮಬ್ಬು ಬೆಳಕು, ಕಪ್ಪು ಮೋಡ. ಇಡೀ ವಾತಾವರಣವನ್ನೇ ಬದಲಾಯಿಸಿ ಬಿಸಿಯ ಬೇಗೆಯಿಂದ ತಪ್ಪಿಸಿಕೊಂಡು ಖುಷಿ ಪಡುವ ವೇಳೆಗೆ ಫಳ್ಳನೆ ಮಿಂಚುವ ಮಿಂಚು, ಹಿಂದೆಯೇ ಸಿಡಿಯುವ ಸಿಡಿಲು ತಬ್ಬಿಬ್ಬಾಗುವ ಬೆಚ್ಚಿ ಬೀಳುವ ಬದುಕು..

ಸಾವರಿಸಿಕೊಳ್ಳುವ ವೇಳೆಗೆ ರಪರಪನೆ ಬೀಳುವ ದಪ್ಪ ಹನಿಗಳು, ಹಿಂಬಾಲಿಸಿ ಬರುವ ಆಲಿಕಲ್ಲು. ಮಾಡಿಗೆ ಯಾರೋ ಕಲ್ಲು ಎಸೆದಂತೆ ಭಾಸವಾಗುವಂತೆ ಬೀಳುವ ಆಲಿಕಲ್ಲು ಭಯ ಬೆರಗು ಎರಡನ್ನೂ ಒಟ್ಟಿಗೆ ಮೂಡುವ ಹಾಗೆ ಮಾಡುತ್ತದೆ. ಈ ಮಳೆಗೆ ರಭಸ ಜಾಸ್ತಿ. ಬಹುಕಾಲದ ನಂತರ ಬರುವ ಇನಿಯನ ಹಾಗೆ ಆತುರ. ಒಮ್ಮೆಗೆ ಬಾಚಿ ಬಳಸುವ ಅವಸರ. ಕಾದು ಕಾದು ಬಸವಳಿದ ಇಳೆಗೂ ಅಷ್ಟೇ ಕಾತುರ. ಕೆನ್ನೆಗೆ ರಪರಪನೆ ಬಾರಿಸಿದ ಹಾಗೆ ಬೀಳುವ ಮಳೆ ಮೈ ಗೆ ತಾಗಿದರೆ ಮೊಳೆಯೊಂದು ಬೆನ್ನ ಮೇಲೆ ಗೀರುತ್ತಾ ಸಾಗಿದಂತಾಗುತ್ತದೆ. ಶೀತಲವೂ ಚೂಪಾಗಿರುತ್ತದೆ ಅನ್ನೋದು ಮಳೆಯ ನೋಡಿಯೇ ಅರಿತುಕೊಳ್ಳಬೇಕು. ಇವರಿಬ್ಬರ ಮಿಲನ ಸಹಿಸಲಾರೆ ಎಂದು ಭೋರೆಂದು ಬೀಸುವ ಗಾಳಿ ಯಾರೋ ಅತ್ತಂತೆ ಅನ್ನಿಸುವುದು ಲಟ ಲಟ ಎಂದು ಮುರಿದುಬೀಳುವ ಶಬ್ದ ಕೇಳಿದಾಗಲೇ.

ಆಕಾಶ ಭೂಮಿ ಒಂದಾಯ್ತೇನೋ ಅನ್ನುವ ಹಾಗೆ ಸುರಿಯುವ ಮಳೆ, ಹರಡುವ ತೆರೆ, ಮುತ್ತಿಡಲು ಬಾಗುತ್ತಿವೆಯೇನೋ ಅನ್ನಿಸುವ ತೆಂಗಿನ ಮರ, ಎದುರಿನ ಗುಡ್ಡ ಕಾಣಿಸದ ಹಾಗೆ ಇಳಿಬಿಟ್ಟ ಮುಸುಕು ತೆರೆ, ನೀರಿಗೆ ಬಣ್ಣ ಇಲ್ಲ ಎಂದವರು ಯಾರು ಎಂದು ಕೇಳಿಕೊಳ್ಳುವ ಹಾಗೆ ಸುರಿಯವ ಮಳೆಯ ಅರೆಬಿಳಿ ಬಣ್ಣ. ಸದ್ದು ಹೊರಡಿಸುತ್ತಾ ಹರಿದುಹೋಗುವ ಕೆಂಪುನೀರು. ಮಕ್ಕಳು ಬಬ್ಬಲ್ ಆಡುವ ಹಾಗೆ ಮಳೆಯೂ ಆಡುತ್ತಾ ಅನ್ನಿಸುವ ಹಾಗೆ ಬೀಳುವ ಒಂದೊಂದು ಹನಿಗೂ ಏಳುವ ಒಂದೊಂದು ನೀರಗುಳ್ಳೆ. ಒಹ್ ಗುಳ್ಳೆ ಏಳ್ತಾ ಇದೆ ಮಳೆ ಜಾಸ್ತಿ ಆಗುತ್ತೇನೋ ಅಂತ ಕೊಂಚ ಆತಂಕದಲ್ಲೇ ಹೇಳುವ ಮನೆಯ ಹಿರಿಯ. ಬೆಚ್ಚಿ ಮೂಲೆಹಿಡಿದು ಕೂರುವ ಪುಟ್ಟ ಮಕ್ಕಳು, ಜಗುಲಿಯಲ್ಲಿ ಕುರ್ಚಿ ಹಾಕಿಕೊಂಡು ಕುಳಿತು ನೋಡುತ್ತಾ, ನೆನಪಿನ ಮಳೆಯಲ್ಲಿ ನೆನೆಯುತ್ತಾ ಕೂರುವ ನಮ್ಮಂಥ ಅಲೆಮಾರಿ ತ್ರಿಶಂಕುಗಳು.

ಯಾರದೋ ಮೇಲಿನ ಸಿಟ್ಟು ತೀರಿಸಿಕೊಳ್ಳುತ್ತಿದೆಯನೋ ಎಂದು ಬೀಸುವ ಗಾಳಿ ತನ್ನ ದಾರಿಗೆ ಅಡ್ಡ ಬಂದವರನ್ನು ಮಲಗಿಸಿ ಮುಂದೆ ಸಾಗುತ್ತದೆ. ಮಳೆ ನಿಂತ ಮೇಲೆ ನೋಡಿದರೆ ತೋಟ, ಕಾಡು ಸುತ್ತಲಿನ ಜಾಗ ಯುದ್ದ ಮುಗಿದ ರಣಾಂಗಣದ ಹಾಗೆ. ಬಿದ್ದ ಮರಗಳು, ತುಂಡಾದ ವಿದ್ಯುತ್ ಕಂಬಗಳು, ಹಾರಿಹೋದ ಮಾಡು, ತೂರಿ ಹೋದ ಹುಲ್ಲು,ಸೋಗೆಗಳ ಚಾವಣಿ, ಮುರಿದ ಗೆಲ್ಲು, ಸಿಡಿಲು ಬಡಿದ ಜೀವ ಜಂತುಗಳು. ಕಳೆದುಕೊಂಡಿದ್ದು ಎಷ್ಟು ಲೆಕ್ಕ ಹಾಕಲು ಸಾದ್ಯವಾಗುವುದಿಲ್ಲವಾದರೂ ಪಡೆದುಕೊಂಡಿದ್ದು ಅದಕ್ಕೂ ಜಾಸ್ತಿ ಇರುವುದಂತೂ ಸತ್ಯ. ಪ್ರಕೃತಿ ಹಾಗೆ ಯಾವತ್ತೂ ಪಡೆಯುವುದಕ್ಕಿಂತ ಕೊಡುವುದೇ ಜಾಸ್ತಿ. ಹಾನಿಯಾಗುವುದರಲ್ಲಿ  ಮಾನವ ನಿರ್ಮಿತ ವಸ್ತುಗಳ ಪ್ರಮಾಣ ಹೆಚ್ಚು. ಒಂದು ಮಳೆ ಬಂದು ಹೋದರೆ ಮುರಿದಬಿದ್ದ ಮರ ಹಾಗೂ ಕಂಬಗಳ ಲೆಕ್ಕವೇ ಜಾಸ್ತಿ ಇರುವುದರಿಂದ ವಾರಗಟ್ಟಲೆ ಕರೆಂಟ್ ಇರದೇ ಊರಿಗೆ ಊರೇ ಮೌನವಾಗುತ್ತದೆ. ಮತ್ತೆ ಹಿಂದಿನಕಾಲಕ್ಕೆ ವಾಪಾಸ್ ಆಗುತ್ತದೆ.

ಮೊದಲೆಲ್ಲಾ ಹೀಗೆ ಮಳೆ ಬಂದರೆ ಇನ್ನೂ ಕಟ್ಟಿಗೆ ಕಡಿದಿಲ್ಲ, ಗೊಬ್ಬರ ಹೊಡೆದಿಲ್ಲ, ಸೋಗೆ ತಂದಿಲ್ಲ ಎಂದು ಮನೆಯವರು ಚಿಂತಾಕ್ರಾಂತರಾದರೆ ಈಗ ಅಯ್ಯೋ ನೀರು ತುಂಬಿಸಿಕೊಂಡಿಲ್ಲ, ಮೊಬೈಲ್ ಚಾರ್ಜ್ ಆಗಿಲ್ಲ, ಟಿ.ವಿ ಬರೋಲ್ಲ ಎಂದು ಈಗಿನವರು ಚಿಂತಿಸುತ್ತಾರೆ. ಕೆಲವೇ ವರ್ಷಗಳಲ್ಲಿ ಆದ ಬದಲಾವಣೆ ಎಷ್ಟು ಎಂದು ಯೋಚಿಸುತ್ತಾ ಹೊರಗೆ ನೋಡಿದರೆ ಬದಲಾಗಿದ್ದು ಕಾಲವನ್ನ ಮನಸ್ಥಿತಿ ಅನ್ನುವ ಸತ್ಯ ರಾಚುತ್ತದೆ. ಮಳೆ ಬಿಟ್ಟ ಮೇಲೆ ಇಡೀ ಪ್ರಕೃತಿಯೇ ಮಿಂದು ಶುಭ್ರವಾಗಿ ನಳನಳಿಸುತ್ತಿರುತ್ತದೆ. ಅದೇನೋ ಹೊಸತನ, ಉಲ್ಲಾಸ ಕಾಣಿಸುತ್ತದೆ. ಒಮ್ಮೆ ನೀರು ಕುಡಿದು ಸ್ವಲ್ಪ ತಂಪಾದ ನೆಲದಿಂದ ಹಬೆ ಏಳಲು ಶುರುವಾದರೆ ಗುಡ್ಡದ ತುದಿಯಲ್ಲಿ ಏಳುವ ಬೆಳ್ಳನೆ ಹೋಗೆ ಮೋಡದ ಜೊತೆಗೆ ಸೇರಿ ಹೋಗುವುದು ಕಾಣಿಸುತ್ತದೆ. ಯಾವ ಬೇಗೆಯೂ ಒಳಗೆ ಸುಮ್ಮನೆ ಉಳಿಯಲಾರದು. ಸ್ವಲ್ಪ ತಂಪು ಸಿಕ್ಕ ಕೂಡಲೇ ಅದು ಹೊರಹೊಮ್ಮುತ್ತದೆ. ಹಾಗಾಗಿ ಅರ್ಧಬದ್ಧ ಸಮಾಧಾನ ಮಾಡಬಾರದು, ಸಹಾಯವನ್ನೂ....

ಒಂದು ಮಳೆ ಉಹೂ ಖಂಡಿತ ಸಾಲದು. ಅದು ಇನ್ನಷ್ಟು ಧಗೆ ಹುಟ್ಟಿಸುತ್ತದೆ. ಇನ್ನೊಂದು ಬೇಕು ಆಗ ನೆಲ ತಂಪಾಗುತ್ತದೆ. ಹಸಿರೂ ಉಳಿಯುತ್ತದೆ. ಆದರೂ ತಣ್ಣಗಿನ ನೇವರಿಕೆ ಎಷ್ಟು ಅಪ್ಯಾಯಮಾನ ಅನ್ನೋದು ಮಳೆ ಬಂದು ನಿಂತ ಮೇಲೆ ಸುತ್ತಲೂ ದೃಷ್ಟಿಸಿದರೆ ಗೊತ್ತಾಗಿಬಿಡುತ್ತದೆ. ಸಿಕ್ಕಿದ್ದಕ್ಕೆ ತೃಪ್ತಿ ಪಡೆದು ಅದನ್ನು ಸರಿಯಾಗಿ ಬಳಸಿಕೊಂಡು ಚಿಗುರುವುದನ್ನೂ, ಬೆಳೆಯುವದನ್ನೂ ಪ್ರಕೃತಿಗಿಂತ, ಮಳೆಗಿಂದ ಚೆಂದವಾಗಿ ಕಲಿಸುವವರು ಯಾರು? ಮನುಷ್ಯನ ಅಹಂ ಅನ್ನು, ಅತಿಯಾದ ಅವಲಂಬನೆಯನ್ನು ತೊಳೆಯುವ ಶಕ್ತಿ ಈ ಮಳೆಗಲ್ಲದೆ ಮತ್ಯಾರಿಗಿದೆ. ಇದನ್ನು ಮಳೆಗಾಲದ ಮಳೆಗಿಂದ ಚೆನ್ನಾಗಿ ಕಲಿಸೋದು ಅರ್ಥ ಮಾಡಿಸೋದು ಬೇಸಿಗೆಯ ಮಳೆ. ಇಂತ ಮಳೆಯನ್ನೂ ಮತ್ತೆ ಊರಲ್ಲಿ ಜಗುಲಿಯಲ್ಲಿ ಕುಳಿತು ನೋಡುವುದಿದೆಯಲ್ಲ ಅದು ತಂಪು ಮಾತ್ರವಲ್ಲ ಹಿತ ಕೂಡಾ....

ಮಳೆ ತೊಳೆಯುವುದು ಕೇವಲ ಇಳೆಯನ್ನಾ.....
ಆಲೋಚಿಸಿದಷ್ಟೂ ಬೆರಗು.....

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...