ರಂಗಣ್ಣನ ಕನಸಿನ ದಿನಗಳು

ಇನ್ಸ್ಪೆಕ್ಟೆರ್ ಬಂದಿದ್ದಾರೆ ಅನ್ನುವ ಸುದ್ಧಿ ಕೇಳಿದ ಕೂಡಲೇ ಇಡೀ ಶಾಲೆಗೇ ಶಾಲೆಯೇ ಶಿಸ್ತುಬದ್ಧ ಸಿಪಾಯಿಯ ಹಾಗಾಗುತಿತ್ತು. ಸದ್ದೆಲ್ಲ ಅಡಗಿ ಮೌನ ರಾಜ್ಯವಾಳುತಿತ್ತು. ಬೇರೆಯ ದಿನಗಳಲ್ಲಿ ಆರಾಮಾಗಿ ಇರುತ್ತಿದ್ದ ಟೀಚರ್ ಗಳು ಅವತ್ತು ಅದೇನೋ ವಿಚಿತ್ರ ಗಂಭೀರತೆಯನ್ನು ಆವಾಹಿಸಿಕೊಂಡಿರುತ್ತಿದ್ದರಿಂದ ಇಡೀ ವಾತಾವರಣವೇ ವಿಭಿನ್ನ ಅನ್ನಿಸುವುದರ ಜೊತೆಗೆ ಒಂದು ರೀತಿಯ ಅಸಹನೀಯ ಅನ್ನಿಸುತ್ತಿತ್ತು ಕೂಡಾ. ಎಲ್ಲೋ ಅಪರೂಪಕ್ಕೆ ಬಂದ್ದಿದ್ದ ಇನ್ಸ್ಪೆಕ್ಟೆರ್ ತಮಾಷೆಯ ಸ್ವಭಾವದವರಾದರೆ ಸ್ವಲ್ಪ ನಗು ಹುಟ್ಟುತ್ತಿತ್ತಾದರೂ ಮೇಷ್ಟ್ರರ ನೋಟಕ್ಕೆ ಅದರ ಆಯಸ್ಸು ಅಲ್ಪವೇ ಆಗಿ ಮತ್ತೆ ಬಲವಂತದ  ಮೌನವೇ ತಾಂಡವವಾಡುತಿತ್ತು. ಮತ್ತೆ ಇದು ನೆನಪಾಗಿ ಮುಖದಲ್ಲಿ ನಗು ಮೂಡಿದ್ದು ಎಂ ಆರ್ ಶ್ರೀನಿವಾಸ ಮೂರ್ತಿ ಅವರ "ರಂಗಣ್ಣನ ಕನಸಿನ ದಿನಗಳು" ಓದುವಾಗಲೇ.

ಸ್ವಾತಂತ್ರ್ಯ ಕಾಲದ ದಿನಗಳ ಶಾಲೆಯ ರೀತಿ ನೀತಿ, ಆಗಿನ ಮೇಷ್ಟ್ರರ ಕಷ್ಟಗಳು, ಅವರ ಪುಟ್ಟ ಸಂಬಳ, ಹಳ್ಳಿಯ ಪರಿಸ್ಥಿತಿ ಆಗತಾನೆ ರಾಜಕೀಯ ಗರಿಗೆದರುವ ಹೊತ್ತಿನ ಮುಖಂಡರ ಪ್ರಭಾವ, ಬಡತನ, ಶಾಲೆಗೇ ಮಕ್ಕಳನ್ನು ಸೇರಿಸುವಲ್ಲಿಯ ಕಷ್ಟ, ಅವರಿಗೆ ಕಲಿಸುವಾಗಿನ ಪಡಿಪಾಟಲು, ಕಷ್ಟ ಕಾರ್ಪಣ್ಯ, ಮುಗ್ಧತೆ, ಕುಟಿಲತೆ, ಜಾತಿಯ ಪ್ರಭಾವ, ಹಳ್ಳಿಗರ ಸಂಪ್ರದಾಯ ಇವೆಲ್ಲಗಳನ್ನು ತೂಗಿಸಿಕೊಂಡು, ಹೊಂದಿಕೊಂಡು, ಇದ್ದ ಅವ್ಯವಸ್ಥೆಗಳ ನಡುವೆ ಶಾಲೆಗಳು ನಡೆಯುತ್ತಿದ ರೀತಿ ಹೀಗೂ ಇತ್ತಾ ಅನ್ನಿಸುವುದರ ಜೊತೆ ಜೊತೆಗೆ ಮನರಂಜನೆ, ಸರಳತೆ, ಬದುಕನ್ನು ಅವರು ಎದುರಿಸುತ್ತಿದ್ದ ರೀತಿ ಎಲ್ಲವೂ ವೇದ್ಯವಾಗುತ್ತಾ ಹೋಗುತ್ತದೆ.

ಆಗೆಲ್ಲಾ ಮೇಷ್ಟರು ಅಂದರೆ ಬಡತನ ಅನ್ನುವಷ್ಟು ಅನ್ವರ್ಥಕವಾಗಿ ಹೋಗಿತ್ತು. ಮನೆ ತುಂಬಾ ಮಕ್ಕಳು, ಬಡತನ ಇದು ಅವರ ಸಂಸಾರದ ಮಾಮೂಲು ಚಿತ್ರಣ. ಎಲ್ಲೋ ಕೆಲವು ಕೆಲವು ಮಂದಿ ಇದಕ್ಕೆ ಹೊರತಾದರೂ ಕಷ್ಟ ಅನ್ನುವುದು ಅವರ ಮೈಮೇಲಿನ ಬಟ್ಟೆಯಷ್ಟೇ ಸಹಜವಾಗಿದ್ದ ಕಾಲ. ಆ ಕಾಲದಲ್ಲಿ ಇನ್ಸ್ಪೆಕ್ಟೆರ್ ಆದ ರಂಗಣ್ಣ, ಅವರ ಸರ್ಕಿಟು ಆ ಸರ್ಕಿಟ್ ನ ವೈಭವ ಎಲ್ಲವೂ ಕತೆಯಂತೆ ಸಾಗಿದರೂ ಆ ಕಾಲದ ಪರಿಸ್ಥಿತಿ ಜನಜೀವನ ಹೇಗಿತ್ತು ಅನ್ನುವುದನ್ನೂ ತಿಳಿಸುತ್ತಾ ಹೋಗುತ್ತದೆ. ಉಪ್ಪಿಟ್ಟು ಅಂಬೋಡೆಯೇ ಅತಿ ದೊಡ್ಡ ಉಪಚಾರ. ಕಮಾನು ಗಾಡಿ, ಬೈಸಿಕಲ್ಲುಗಳೇ ಅತಿ ದೊಡ್ಡ ವಾಹನಗಳು. ಎಷ್ಟು ಸರಳವಾಗಿ ಎಷ್ಟು ಸಹಜವಾಗಿ ಬದುಕುತ್ತಿದ್ದರೂ ಎಂದು ತಿಳಿದಾಗಲೆಲ್ಲ ನಾಗರಿಕತೆಯ ಕೃತಕತೆ ಕಣ್ಣಿಗೆ ರಾಚುತ್ತದೆ.

 ಸಾಮಾಜಿಕ ಜೀವನದಲ್ಲಿ, ಹಾಗೂ ಹುದ್ದೆಯಲ್ಲಿ ಪ್ರಾಮಾಣಿಕತೆ, ನಿಷ್ಠೂರತೆ ಎಷ್ಟು ಮುಖ್ಯವೋ  tactful ಆಗಿರುವುದೂ ಅಷ್ಟೇ ಮುಖ್ಯ ಹಾಗೂ ಅನಿವಾರ್ಯ ಎನ್ನುವುದು ಈ ಪುಸ್ತಕ ತುಂಬಾ ಚೆಂದವಾಗಿ ಹೇಳುತ್ತದೆ. ವ್ಯವಸ್ಥೆಯನ್ನು ಸರಿ ಮಾಡುವುದು ಸುಲಭವಲ್ಲ, ಅಲ್ಲಿ ಎಲ್ಲಾ ತರಹದ ಜನರೂ ಇರುತ್ತಾರೆ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕಾಗುತ್ತದೆ. ಹಾಗೆ ಹೋಗುವಾಗ ಕೆಲಸ ಎಷ್ಟೇ ಒಳ್ಳೆಯದಾದರೂ ವಿರೋಧ ಎದುರಿಸಬೇಕಾಗುತ್ತದೆ. ಅವಮಾನ ಅನುಭವಿಸಬೇಕಾಗುತ್ತದೆ. ಹಾಗಾಗಿ ಕೇವಲ ಪ್ರಾಮಾಣಿಕತೆ, ಒಳ್ಳೆಯ ಯೋಚನೆಗಳು ಮಾತ್ರವೇ ಸಹಕಾರಿಯಾಗುವುದಿಲ್ಲ ಅದಕ್ಕಾಗಿ ಡಿಪ್ಲೊಮ್ಯಾಟಿಕ್ ಆಗಿ ವರ್ತಿಸುವುದು ತುಂಬಾ ಅನಿವಾರ್ಯ.  ಓದುತ್ತಾ ಓದುತ್ತಾ ರಂಗಣ್ಣನ ಸ್ವಭಾವ, ಎದುರಾದ ಸಮಸ್ಯೆಗಳು ಕೆಲವು ಸಲ ನಮ್ಮದೂ ಅನ್ನಿಸುತ್ತವೆ.

ಅಧಿಕಾರದಲ್ಲಿದ್ದಾಗ ಹೊಗಳಿಕೆ ಹಾಗೂ ತೆಗಳಿಕೆ ಎರಡೂ ಸಹಜ. ಒಳ್ಳೆಯ ಕೆಲಸಕ್ಕೆ ಕೈ ಜೋಡಿಸುವವರು ಇರುವಂತೆ ಕಾಲೆಳೆಯುವವರೂ ಇರುತ್ತಾರೆ.ಸಮುದಾಯದ ಹಿತಾಸಕ್ತಿಗಿಂತ ವೈಯುಕ್ತಿಕ ಹಿರಿಮೆ ಗರಿಮೆಗಳು ಹೆಚ್ಚಾದಾಗ, ಅದಕ್ಕೆ ಸರಿಯಾಗಿ ಊರಿನ ಮುಖಂಡರ ಬೆಂಬಲ ದೊರೆತಾಗ ಬುದ್ಧಿ ವಕ್ರದಾರಿ ಹಿಡಿಯುತ್ತದೆ,  ಪುಂಡುತನ ಮೈಗೂಡುತ್ತದೆ. ಹೀಗಿನ ಸಮಸ್ಯೆಗೆ ಸಿಲುಕಿದ ರಂಗಣ್ಣ ಅದನ್ನು ಬಗೆಹರಿಸಿಕೊಂಡ ರೀತಿ ನ್ಯಾಯದ ರೀತಿಯಲ್ಲಿ ಸರಿಯಾದುದ್ದೇ ಆದರೂ ಅದರಿಂದ ಮನಸ್ಸಿಗೆ  ಘಾಸಿಯೂ ಆಗುತ್ತದೆ. ಕೆಲಸದಲ್ಲಿ ಕಟ್ಟುನಿಟ್ಟಾಗಿ ಪ್ರಾಮಾಣಿಕವಾಗಿದ್ದ ಮಾತ್ರಕ್ಕೆ ಒರಟಾಗಿ ನಡೆದುಕೊಳ್ಳಬೇಕು ಅಂತೇನಿಲ್ಲ, ಹಾಗೂ ಧೈರ್ಯವಿಲ್ಲದಿದ್ದರೆ ದೇಹಶಕ್ತಿಯಿದ್ದೂ ವ್ಯರ್ಥ ಎನ್ನುವ ಅನುಭವ ರಂಗಣ್ಣನಿಗೆ ಆದರೆ ಅರಿವು ಓದುವ ನಮಗೂ ಆಗುತ್ತದೆ.  ಇಂಥ ಸಮಸ್ಯೆ ಎದುರಾದಾಗ ನೇರವಾಗಿ ಎದುರಿಸುವುದು ಒಂದು ದಾರಿಯಾದರೆ ಅದನ್ನು ಅನುಭವಕ್ಕೆ ದಕ್ಕಿದ ಸಮಯಸ್ಪೂರ್ತಿಯಿಂದ ಬಗೆಹರಿಸುವುದು ಇನ್ನೊಂದು ದಾರಿ. ಇದನ್ನೇ tactful ಎನ್ನುತ್ತಾರೆ ಎಂದು ಗೊತ್ತಾಗುವಾಗ ರಂಗಣ್ಣನಿಗೆ ವರ್ಗಾವಣೆ ಆದೇಶ ಬಂದಿರುತ್ತದೆ. 

ಬಿಡಿಬಿಡಿಯಾಗಿ ಓದಿದರೆ ಹಾಸ್ಯ ಲೇಖನವಾಗಿ, ಒಟ್ಟಾರೆ ಓದಿದರೆ ಕಾದಂಬರಿಯಾಗಿ, ಮನೋರಂಜನೆ ಜೊತೆಗೆ ಅರಿವೂ ಮೂಡಿಸುವ ಈ ಪುಸ್ತಕ ಆಹ್ಲಾದ ಅನುಭವ ಕೊಡುತ್ತದೆ. ಒಟ್ಟಾಗಿ ಇದ್ದೂ ಬೇರೆ ಬೇರೆಯಾಗಿಯೇ ಓದಿಕೊಳ್ಳಬಹುದಾದ, ಬೇರೆಬೇರೆಯಾಗಿದ್ದೂ ಒಂದೇ ಕಥನದ ಅನುಭವ ಕೊಡುವ ಆಗಿನ ಕಾಲದ ಜನರ ಸಹಜ ಜೀವನ ಪದ್ಧತಿ, ಮನಸ್ಥಿತಿ ಪರಿಸ್ಥಿತಿ ಇವುಗಳ ಚಿತ್ರಣವನ್ನು ತುಂಬಾ ಸಹಜವಾಗಿ ನೈಜವಾಗಿ ಬಿಡಿಸಿಡುತ್ತಾ ಹೋಗುವ ಪುಸ್ತಕ ಸರಳತೆಯಲ್ಲಿನ ಸಂತೋಷವನ್ನೂ, ಪ್ರಾಮಾಣಿಕತೆಯಲ್ಲಿನ ಧೈರ್ಯವನ್ನೂ,  ಮುಗ್ಧತೆಯಲ್ಲಿನ ನೆಮ್ಮದಿಯನ್ನೂ ಪರಿಚಯಿಸುತ್ತದೆ. ಪುಟ ತಿರುವಿ ಮುಚ್ಚಿಟ್ಟ ಬಹಳ ಹೊತ್ತಿನವರೆಗೂ ಕಿರುನಗೆಯೊಂದು ಬೆಳಗುತ್ತಿರುತ್ತದೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...