ಹಿಂದಿ ಹೇರಿಕೆ (ಹೊಸದಿಗಂತ)

ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತಾಡಿ ಅನ್ನೋದನ್ನ ಹೇಳಲು, ಕನ್ನಡ ಉಳಿಸಿ ಎಂದು ವಿನಂತಿ ಮಾಡಿಕೊಳ್ಳಲು ಕಂಕಣ ಎನ್ನುವ ಗುಂಪು ಶುರುವಾಗಿತ್ತು. ಅದು ಮಲೆನಾಡಿನ ಜನರೇ ಹೆಚ್ಚಿದ್ದ, ಮಲೆನಾಡಿನ ಕವಿರಾಜ್ ಶುರು ಮಾಡಿದ್ದರಿಂದ ಯಾವುದೇ ಹಿಂಜರಿಕೆ ಇಲ್ಲದೆ ಅದರ ಚಟುವಟಿಕೆಯಲ್ಲಿ ಭಾಗಿಯಾಗಿದ್ದೆ. ಅದರ ಮೊದಲ ಅಭಿಯಾನದಲ್ಲಿ ಪಾಲ್ಗೊಳ್ಳಲು ಜಯನಗರಕ್ಕೆ ಹೋಗಿದ್ದೆ. ಕಂಕಣದ ಅಭಿಯಾನವೆಂದರೆ ಅಲ್ಲಿ ಭಾಷಣವಿಲ್ಲ, ಅನಗತ್ಯ ಮಾತಿಲ್ಲ. ಕನ್ನಡದ ಹಿರಿಮೆಯ ಬಗ್ಗೆ, ಅದನ್ನು ಮಾತಾಡುವ ಬಗ್ಗೆ ಬರೆದ ಫಲಕವನ್ನು ಹಿಡಿದುಕೊಂಡು ಜನನಿಬಿಡ ಪ್ರದೇಶದಲ್ಲಿ ಎರಡು ಗಂಟೆಗಳ ಕಾಲ ನಿಲ್ಲುವುದು ಹಾಗೂ ಅದರ ಬಗ್ಗೆ ಕುತೂಹಲ ಇದ್ದವರಿಗೆ ಮಾಹಿತಿ ಬೇಕಾದವರಿಗೆ ಅದನ್ನು ಕೇಳಿದಾಗ ಹೇಳುವುದು ಅಷ್ಟೇ. ಯಾವ ಬಲವಂತವಾಗಲಿ, ಹೇರಿಕೆಯಾಗಲಿ ಇಲ್ಲದೆ ಕೇವಲ ನಮ್ಮ ಭಾಷೆಯ ಬಗ್ಗೆ ಮೌನವಾಗಿಯೇ ಅಭಿಮಾನ ಮೂಡಿಸುವ, ಅದನ್ನು ಉಳಿಸುವ ಅನಿವಾರ್ಯತೆ ಅರ್ಥವಾಗಲಿ ಅನ್ನೋ ಉದ್ದೇಶ ಅಷ್ಟೇ..

ಹೀಗೆ ಅಭಿಯಾನದಲ್ಲಿ ಪಾಲ್ಗೊಂಡಾಗ ಜನ ಸುಮ್ಮನೆ ನೋಡಿ ಹೋಗುವುದಿಲ್ಲ. ನಾನಾತರಹದ ಜನರಿದ್ದ ಹಾಗೆ ನಾನಾ ತರಹದ ಮಾತುಗಳೂ ಕೇಳಿ ಬರುತ್ತವೆ. ಕುಹಕದ ನಗೆ ನಕ್ಕು ಸಾಗುವವರು, ಬಸ್ ಗೆ ಕನ್ನಡದಲ್ಲಿ ಏನು ಹೇಳ್ತಾರೆ ಹೇಳಿ ಅಂತ ಕೇಳಿ ನಿಮಗೆ ಕನ್ನಡ ಬರೋಲ್ಲ ಇನ್ನು ಕನ್ನಡ ಮಾತಾಡಬೇಕಂತೆ ಎಂದು ವ್ಯಂಗ್ಯವಾಡುವವರು, ಮಾಡೋಕೆ ಕೆಲಸ ಇಲ್ಲ ಅದಕ್ಕೆ ಇಲ್ಲಿ ಬಂದು ಹೀಗೆ ನಿಲ್ತಾರೆ ಎಂದು ಕುಹಕ ಮಾಡುವವರು, ಯಾರೋ ದುಡ್ಡು ಕೊಡ್ತಾರೆ ಇವ್ರು ಬಂದು ನಿಲ್ತಾರೆ ಎಂದು ಹಂಗಿಸುವವರು, ಹಾಕೋದು ಜೀನ್ಸ್ ಹೇಳೋದು ಕನ್ನಡ ಮಾತಾಡಿ ಅಂತ ಕಿಸಕ್ಕನೆ ನಕ್ಕವರು,  ಎಷ್ಟು ಸಂಪಾದನೆ ಮಾಡ್ತೀರಿ ಇವನ್ನ ಬಿಟ್ಟು ಮಾನವಾಗಿ ಬದುಕಿ ಅಂತ ಬುದ್ಧಿ ಹೇಳುವವರ ನಡುವೆ ನಿಜವಾಗ್ಲೂ ಒಳ್ಳೆ ಕೆಲಸ ಇಂಥದೊಂದು ಜಾಗೃತಿಯ ಕೆಲಸ ಮಾಡಬೇಕು ಎನ್ನುವವರು ಎಲ್ಲೋ ಒಂದೋ ಎರಡೋ ಪರ್ಸೆಂಟ್ ಅಷ್ಟೇ...

ಹಾ ಹಾಗೆ ಹೇಳುವವರು ಯಾರೋ ಉತ್ತರ ಭಾರತದವರೋ, ಬೇರೆ ರಾಜ್ಯದವರೋ ಅಂದುಕೊಂಡರೆ ಮೂರ್ಖತನ ಬೇರೆ ಇಲ್ಲ. ಅವರೆಲ್ಲ ಇಲ್ಲಿ ಹುಟ್ಟಿ ಬೆಳೆದ ಕನ್ನಡಿಗರೇ. ಏನು ಬರೆದಿದ್ದಾರೆ ಅಲ್ಲಿ ಕೇಳುವ ಮಕ್ಕಳಿಗೆ something like talk in kannada ಅಂತ ಕನ್ನಡದಲ್ಲಿ ಕೇಳುವ ಮಕ್ಕಳಿಗೆ ಅಪ್ಪಟ ಲಂಡನ್ ನಲ್ಲಿ ಹುಟ್ಟಿ ಬೆಳೆದವರಂತೆ ಉತ್ತರಿಸುವ ಅಪ್ಪ, ಅಮ್ಮಂದಿರೆ. ಕನ್ನಡ ಮಾತಾಡಿದರೆ ಅದು ಅವಮಾನ ಎಂದು ಕೊಂಡಿರುವ, ಹಾಗಾಗಿ ಬೇರೆ ಭಾಷೆಯವರ ಜೊತೆ ಅವರದೇ ಭಾಷೆ ಕಲಿತು ಹರಕು ಮುರುಕು ಮಾತಾಡುವ ವಿಶಾಲ ಹೃದಯದ ಕನ್ನಡಿಗರೇ. ಯಾರೇ ಬಂದರೂ ಇಲ್ಲಿ ಕನ್ನಡ ಬರದಿದ್ದರೂ ಏನೂ ತೊಂದರೆಯಿಲ್ಲ ಎಂದು ವಲಸಿಗರೇ ನೆಮ್ಮದಿಯ ವಾತಾವರಣ ಕಲ್ಪಿಸಿಕೊಟ್ಟ ಮಾನವತಾವಾದಿಗಳೇ. ತಮ್ಮ ತಮ್ಮಲ್ಲೇ , ಮಕ್ಕಳ ಜೊತೆ ಹೊರಗೆ ಬಂದಾಗ ಕನ್ನಡ ಮಾತಾಡೋದು ಘನತೆಗೆ ಕಮ್ಮಿ ಎಂದು ಭಾವಿಸುವ ಅದರಂತೆ ನಡೆದುಕೊಳ್ಳುವ ಕೀಳರಿಮೆ ಹೊಂದಿರುವ ಅಪ್ಪಟ ಕನ್ನಡಿಗರೇ..

ಯಾವುದು ಹೇರಿಕೆ ಹಾಗಾದರೆ? ನಾವು 80ರ ದಶಕದಲ್ಲೂ ಆರನೇ ತರಗತಿ ಸೇರುವಾಗ ಹಿಂದಿ ಸೇರ್ಪಡೆ ಆಗಿತ್ತು ಅನ್ನುವವರ ನೋಡಿದ್ದೇವೆ. ಅದೊಂದು ಭಾಷೆಯಾಗಿ ಕಲಿತು, ಹಿಂದಿ ಪರೀಕ್ಷೆಗಳನ್ನು ಕಟ್ಟಿ ಅದರಲ್ಲಿ ಉದ್ಯೋಗ ಹಿಡಿದು ಬದುಕು ಕಟ್ಟಿಕೊಂಡವರು ಆ ಕಾಲದಲ್ಲೂ ಇದ್ದರು. ಆಗ ಅದು ಹೇರಿಕೆಯಾಗಿರಲಿಲ್ಲ ಯಾಕೆಂದರೆ ಕನ್ನಡ ಮಾತಾಡೋದು ಅವಮಾನ ಅನ್ನಿಸುವ ಮಟ್ಟಿಗೆ ನಾವು ನಾಗರೀಕರಾಗಿರಲಿಲ್ಲ. ಯಾವಾಗ ನಮ್ಮ ಭಾಷೆ ನಮಗೆ ಅವಮಾನ ಅನ್ನಿಸಿತೋ ಇಂಗ್ಲಿಷ್ ಮಾತಾಡುವುದು ಹೆಮ್ಮೆ ಅನ್ನಿಸಿತೋ ಆಗಲೇ ನಮ್ಮ ಭಾಷೆ ಹಿನ್ನಡೆ ಅನುಭವಿಸಲು ಶುರುವಾಗಿದ್ದು. ಸಿದ್ಧಾಂತಗಳು ಯಾವಾಗ ಜನರ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಿತೋ ಆಗ ಹೇರಿಕೆ ಅನ್ನಿಸಲು ಪ್ರಾರಂಭವಾಗಿದ್ದು.

ಹಿತ್ತಿಲ ಗಿಡ ಮದ್ದಲ್ಲ ಅನ್ನೋದು ಇಲ್ಲಿಯ ಬಹು ಜನಪ್ರಿಯ ಗಾದೆ. ಅದರಂತೆ ಇಲ್ಲಿಯ ಭಾಷೆ ಕೂಡಾ. ನಮ್ಮತನದ ಬಗ್ಗೆ ಅಭಿಮಾನವಿದ್ದಾಗ, ಅದರ ಬಗ್ಗೆ ಗೌರವಿದ್ದಾಗ ಅದನ್ನು ಉಳಿಸಿಕೊಳ್ಳಲು, ಬೆಳಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅದಿಲ್ಲದೆ ಹೋದಾಗ ಅದನ್ನು ಹುಟ್ಟಿದ ನೆಲದಲ್ಲೇ ಮೂರನೇ ದರ್ಜೆಗಿಂತಲೂ ಕಡೆಯಾಗಿ ನಡೆಸಿಕೊಳ್ಳುತ್ತೇವೆ. ಕನ್ನಡದ ಇಂದಿನ ಪರಿಸ್ಥಿತಿಗೆ ಯಾರು ಕಾರಣ ಎಂದು ಆತ್ಮಶೋಧನೆ ಮಾಡಿಕೊಂಡರೆ ಉತ್ತರ ಸಿಗುತ್ತದೆ. ಉತ್ತರ ಸಿಕ್ಕ ಮೇಲೆ ಪರಿಹಾರ ಎಷ್ಟು ಹೊತ್ತಿನ ಕೆಲಸ. ಕನ್ನಡ ಉಳಿಸಲು ಅನೇಕ ಸಂಘಟನೆಗಳು ಹುಟ್ಟಿಕೊಂಡಿವೆ. ಅವರ ಕಾರ್ಯ ವೈಖರಿ, ಭಾಷೆ, ಹೋರಾಟದ ರೀತಿ ನೀತಿಗಳನ್ನ ಗಮನಿಸಿದರೆ ಅಲ್ಲಿ ಅಭಿಮಾನಕ್ಕಿಂತ ವ್ಯವಹಾರ ಹಾಗೂ ಸೆಲೆಕ್ಟಿವ್ ಮನೋಭಾವ ಎದ್ದು ಕಾಣುತ್ತದೆ. ಹಾಗಾಗಿಯೇ ಕಂಕಣ ಶುರುವಾದಾಗ ಅದನ್ನು ನೋಡಿದವರು ಇದೂ ಅಂತಹುದೇ ಒಂದು ಸಂಘಟನೆ ಎಂದು ತಿಳಿದು ಕೊಂಕು ನುಡಿದದ್ದು. ವ್ಯಂಗ್ಯವಾಗಿ ನಕ್ಕಿದ್ದು.

ಎಲ್ಲಾ ರೀತಿಯ ಉದ್ಯೋಗಗಳಲ್ಲಿ, ಬೀದಿ ಬದಿಯ ವ್ಯಾಪಾರಿಗಳಲ್ಲಿ ಅವರೇ ಜಸ್ತಿಯಾಗಿದ್ದಾರೆ ಎನ್ನುವವರು ಇನ್ನೊಂದು ವಿಷಯವನ್ನು ಗಮನಿಸಬೇಕು. ಅದು ಅವರು ಬದುಕುವುದಕ್ಕಾಗಿ ನಡೆಸುವ ಹೋರಾಟ, ಪಡುವ ಶ್ರಮ. ಕೂಲಿಯ ಕೆಲಸವೋ, ಮೆಹಂದಿ ಹಾಕುವುದೋ, ಪಾನಿಪುರಿ ಮಾರುವುದೋ, ಸೆಕ್ಯೂರಿಟಿಗಳಾಗಿ ಕೆಲಸ ಮಾಡುವುದೋ, ತರಕಾರಿ ಮಾರುವುದೋ ಯಾವುದನ್ನೇ ನೋಡಿ ಅಲ್ಲಿ ಅವರಿಗೆ ಬದುಕುವ ಛಲ ಮಾತ್ರ ಇರುತ್ತದೆಯೇ ಹೊರತು ಅದು ಮಾಡುವುದು ಅವಮಾನ ಅನ್ನಿಸುವುದಿಲ್ಲ. ಆ ಕೆಲಸ ಬಗ್ಗೆ ಕೀಳರಿಮೆ ಇರುವುದಿಲ್ಲ.  ಊರಿಂದ ಊರಿಗೆ, ರಾಜ್ಯದಿಂದ ರಾಜ್ಯಕ್ಕೆ ಬರುವ ಅವರು ಬದುಕು ಕಟ್ಟಿಕೊಳ್ಳುವ ಭರದಲ್ಲಿ ಭಾಷೆ ಮರೆಯುದಿಲ್ಲ, ತನ್ನತನ ತೊರೆಯುವುದಿಲ್ಲ. ನಮ್ಮದೇ ರಾಜ್ಯದಲ್ಲಿ ನಾವು ಎಷ್ಟು ಭಾಷೆಯ ಬಗ್ಗೆ ಅಭಿಮಾನ ಹೊಂದಿದ್ದೇವೆ, ಅದನ್ನು ಉಳಿಸಿಕೊಂಡು ಬೆಳೆಸುವ ಪ್ರಯತ್ನ ಎಷ್ಟು ಮಾಡಿದ್ದೇವೆ ಎಂದು ಪ್ರಾಮಾಣಿಕವಾಗಿ ಕೇಳಿಕೊಳ್ಳುವ ಕಾಲ ಈಗ ಬಂದಿದೆ.

ಭಾಷೆ ಉಳಿಯುವುದು ಹೇಗೆ? ಅದನ್ನು ಬಳಸಿದಾಗ. ನಮ್ಮ ಮಕ್ಕಳು ಓದಿ ವೈಟ್ ಕಾಲರ್ ಜಾಬ್ ಮಾಡಬೇಕು ಎನ್ನುವುದು ಎಲ್ಲಾ ಪೋಷಕರ ಕನಸು. ಅದರಲ್ಲೂ ಹುಟ್ಟಿದ ನೆಲ ಬಿಟ್ಟು ಬೇರೆ ಕಡೆಗೆ ಹೋದರಂತೂ ಹೆಮ್ಮೆ. ಕರಕುಶಲ ಕೆಲಸಗಳು, ವ್ಯವಸಾಯ ಎಲ್ಲವೂ ದಡ್ಡರಿಗೆ ಎಂದು ನಮ್ಮನ್ನು ನಾವೇ ನಂಬಿಸಿಕೊಂಡಿದ್ದೇವೆ. ಹಾಗಾಗಿ ಇಂಗ್ಲಿಷ್ ಅನಿವಾರ್ಯ. ಅದು ಜಗತ್ತನ್ನು ಬೆಸೆಯುವ ಭಾಷೆ, ವಿದ್ಯಾವಂತರ ಭಾಷೆ ಎಂದು ತಿರ್ಮಾನಕ್ಕೆ ಬಂದಿದ್ದೇವೆ. ಅದನ್ನು ಕಲಿಯದಿದ್ದರೆ ಉಳಿಗಾಲವೇ ಇಲ್ಲ ಎಂದು ಭಾವಿಸಿಬಿಟ್ಟಿದ್ದೇವೆ. ಹಾಗಾಗಿ ಕನ್ನಡ ಮಾತಾಡಿದರೆ ಅದು ಗೊಡ್ಡು, ಗಮಾರ ಎನ್ನುವ ನಂಬಿಕೆ. ಮಗು ತೊದಲು ಭಾಷೆಯಲ್ಲಿ ಮಾತೃ ಭಾಷೆ ಮಾತಾಡುವುದಕ್ಕಿಂತ ಇಂಗ್ಲಿಷ್ ಮಾತಾಡಿದರೆ ಗರ್ವ. ಹಾಗಾದರೆ ಇಂಗ್ಲಿಷ್ ಹೇರಿಕೆ ಅಲ್ಲವೇ.. ತನ್ನದಲ್ಲ್ಲದ ಯಾವುದೇ ಭಾಷೆಯನ್ನ ಕಲಿಯುವುದು ಅನಿವಾರ್ಯ ಅಂತ ನಮಗನ್ನಿಸಿದರೆ ಅದು ಭಾಷಾ ಪ್ರೇಮ ಅಲ್ಲವಾದಲ್ಲಿ ಹೇರಿಕೆ.

ಒಂದು ಭಾಷೆ ಗಟ್ಟಿಯಾಗಿ ನಿಲ್ಲುವುದು ಯಾವಾಗ ಎಂದರೆ ಅದರ ಬಗ್ಗೆ ಅಭಿಮಾನ ಬೆಳಸಿಕೊಂಡಾಗ, ಆಧಳಿತದಲ್ಲಿ ಅದನ್ನು ಬಳಸಿದಾಗ, ಯಾರೇ ಬಂದರೂ ಇಲ್ಲಿನ ನೆಲದ ಭಾಷೆ ಕಲಿಯದೇ ಉಳಿಗಾವಿಲ್ಲ ಎಂದು ಅರಿತಾಗ. ಎಷ್ಟು ಭಾಷೆ ಕಲಿತರೇನು, ಅಗತ್ಯವಾದರೇನು ನನ್ನ ಭಾಷೆ ನನ್ನದು ಎಂಬ ಆತ್ಮಾಭಿಮಾನ ಹುಟ್ಟಿದಾಗ. ಇಲ್ಲಿನ ನೆಲದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ, ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಭಣಗುಟ್ಟುತ್ತಿವೆ. ಊರಿಗೊಂದು ಅಂಗ್ಲ ಮಾಧ್ಯಮ ಶಾಲೆಗಳು ತಲೆಯೆತ್ತುತ್ತಿವೆ. ಇದಕ್ಕೆಲ್ಲಾ ಕಾರಣ ಯಾರು? ಎಷ್ಟು ಜನ ಪೋಷಕರು ಅಭಿಮಾನದಿಂದ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಕಳುಹಿಸುತ್ತಾರೆ? ಮಾತಾಡುವ ಎಷ್ಟು ಜನರಿಗೆ ನಿಜವಾಗಲು ಭಾಷೆಯ ಉಳಿಸುವ ಪ್ರಾಮಾಣಿಕ ಭಾವವಿದೆ. ಯಾಕೆಂದರೆ ಭಾವನೆಯಿಂದ ಭಾಷೆ ಉಳಿಯುವುದಿಲ್ಲ ಹೆಚ್ಚೆಂದರೆ ಜನರ ಚಪ್ಪಾಳೆ ಗಿಟ್ಟಿಸಬಹುದು, ಹೋರಾಟದ ಸರಕಾಗಬಹುದು. ಅದಕ್ಕೆ ಕಾರ್ಯಗತವಾಗಬೇಕಿದೆ.

ಯಾವುದೇ ಭಾಷೆ ಕಲಿತರೂ ನನ್ನ ನೆಲದಲ್ಲಿ ನಾನು ಈ ಮಣ್ಣಿನ ಭಾಷೆಯನ್ನೇ ಬಳಸುತ್ತೇನೆ, ಸರ್ಕಾರವೂ ಅದನ್ನೇ ಬಳಸುವ ಹಾಗೆ ಒತ್ತಡ ಹಾಕುತ್ತೇನೆ, ಇಲ್ಲಿ ಯಾರೇ ವಲಸಿಗರು ಬಂದರೂ ಅವರಿಗೂ ಇಲ್ಲಿಯ ಭಾಷೆ ಕಲಿಯದೇ ವ್ಯವಹಾರ ಮಾಡಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣ ಮಾಡುತ್ತೇನೆ, ಇಲ್ಲಿಯ ಉದ್ಯೋಗಗಳು ಪ್ರತಿಷ್ಠೆಯ ಹಂಬಲವಿಲ್ಲದೇ ಶ್ರಮವಹಿಸಿ ಮಾಡುತ್ತೇನೆ ಎಂದು ನಿರ್ಧರಿಸಿ ಕಾರ್ಯೋನ್ಮುಖರಾದ ಕ್ಷಣ, ತನ್ನ ಭಾಷೆ ಸ್ವಾಭಿಮಾನವೇ ಹೊರತು ಅವಮಾನವಲ್ಲ ಎಂದು ಅರ್ಥವಾದ ಕ್ಷಣ ಭಾಷೆಯನ್ನು ಬೆಳಸಿ ನಾನೂ ಬೆಳೆಯುತ್ತೇನೆ ಎಂದು ಪಣತೊಟ್ಟ ದಿನ ಕನ್ನಡ ಕನ್ನಡಿಗರು ಇಬ್ಬರಿಗೂ ಸುವರ್ಣಕಾಲ. ಇಲ್ಲವಾದಲ್ಲಿ ನಮ್ಮ ಅಸಮರ್ಥತೆಯನ್ನು ಬೆಳಸಿಕೊಂಡು ಇನ್ಯಾವುದೋ ಭಾಷೆ ಭಾಷಿಗರು ಬೆಳೆಯುತ್ತಾರೆ, ಒತ್ತಡ ಹೇರುತ್ತಾರೆ. ಬಗ್ಗಿದವನಿಗೆ ಮಾತ್ರ ಗುದ್ದು ಎನ್ನುವುದು ಅರ್ಥವಾದ ದಿನ ತಲೆಯೆತ್ತಿ ನಿಲ್ಲುವ ಧೈರ್ಯ ಬರುತ್ತದೆ. ಆ ಧೈರ್ಯ ಬಂದ ದಿನ ಉಳಿದೆಲ್ಲವೂ ಸರಾಗವಾಗಿ ಹೋಗುತ್ತದೆ.

ಇದ್ಯಾವುದೂ ಮಾಡದೇ ಯಾರದೋ ಮೇಲಿನ ದ್ವೇಷಕ್ಕೆ, ಸಿದ್ಧಾಂತಗಳ ಮೇಲುಗಾರಿಕೆಗೆ ಬಿದ್ದು ಹೇರಿಕೆ ಎಂದರೆ ಅದು ನಮ್ಮ ಮೂರ್ಖತನವಷ್ಟೇ. ಹೋರಾಟ ಕೇವಲ ಹಾರಾಟವಾಗುತ್ತದೆಯೇ ಹೊರತು ಅದರಿಂದ ಕಿಂಚಿತ್ತೂ ಉಪಯೋಗ ದೊರಕಲಾರದು. 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...