ನಾನಾಗ ತುಂಬಾ ಚಿಕ್ಕವಳು. ಮನೆಯಲ್ಲಿ ಊರಲ್ಲಿ ಸಂಭ್ರಮ ಅನ್ನೋದು ಗೊತ್ತಿದ್ದರೂ ಯಾಕೆ ಅನ್ನೋದು ಗೊತ್ತಿರಲಿಲ್ಲ. ಸಂಭ್ರಮ ಶುರುವಾಗಿ, ಮಾತು ಕತೆ ಚರ್ಚೆ ನಡೆಯುತ್ತಾ ಅದಾಗಲೇ ಬಹಳ ದಿನಗಳಾಗಿದ್ದವು. ಗದ್ದೆಯಲ್ಲಿ ಆಗಾಗ ಊರವರು ಸೇರಿ ಇಟ್ಟಿಗೆ ಮಾಡುವುದು ಅದನ್ನು ಜೋಡಿಸುವುದು ನಡೆಯುತಿತ್ತು. ಎಲ್ಲರೂ ಯಾವುದೋ ಕೆಲಸದಲ್ಲಿ ಮಾತಿನಲ್ಲಿ ತೊಡಗಿರುತ್ತಿದ್ದರು. ಏನೋ ಗಡಿಬಿಡಿ, ತುಸು ಟೆನ್ಶನ್. ಅವತ್ತು ಬೆಳಿಗ್ಗೆ ಏಳುವಾಗಲೇ ಮಧ್ಯಾಹ್ನ ಎರಡು ಗಂಟೆಗೆ ರಥ ಬರುತ್ತಂತೆ ಎನ್ನುವ ದನಿ ಕೇಳಿಸಿತ್ತು. ರಥ ಎಂದರೆ ಜಾತ್ರೆ ಅನ್ನೋದಷ್ಟೇ ಗೊತ್ತಿದ್ದ ನನಗೆ ಒಹ್ ಇದಾ ವಿಷಯ, ಅದಕ್ಕೇನಾ ಈ ಹಡಾವುಡಿ ಎಂದು ತಿಳಿದು ಇನ್ನಷ್ಟು ಸಂಭ್ರಮ.

ಊರಿಗಿಂತ ಬೇಗ ಎದ್ದು ಇವತ್ತು ರಥ ಅಲ್ವೇನೆ ತಲೆಸ್ನಾನ ಮಾಡಿಸು ಅಂತ ಅಜ್ಜಿಗೆ ರಗಳೆ ಮಾಡಿ ಚೆಂದದ ಡ್ರೆಸ್ ಹಾಕಿಕೊಂಡು ಗಡಿಯಾರ ನೋಡುತ್ತಲೇ ಕುಳಿತುಬಿಟ್ಟಿದ್ದೆ. ಅದು ನಿಧಾನ ಹೋಗ್ತಾ ಇದೆ ಅನ್ನಿಸಿ ಕಿರಿಕಿರಿ ಆದಾಗ ಮಾತ್ರ ಹೋಗಿ ಒಂದು ಗಂಟೆಗೆ ಇಟ್ಟರೆ ಆಗೋಲ್ವೇನೇ ಬೇಗ ಎರಡು ಗಂಟೆ ಆಗುತ್ತೆ ರಥ ಬರುತ್ತೆ ಎಂದಿದ್ದೆ. ಅವಳು ಹುಚ್ಚು ಹುಡುಗಿ ಎಲ್ಲವೂ ಆಗಬೇಕಾದ ಸಮಯಕ್ಕೆ ಆಗೋದು ಎಂದು ತನ್ನ ಕೆಲಸದಲ್ಲಿ ಮಗ್ನಳಾಗಿದ್ದಳು. ನಾನು ಅವಳನ್ನು ಬೈಯುತ್ತಾ ಜಗುಲಿಯಲ್ಲಿ ಕುಳಿತು ಬರುವ ರಥಕ್ಕಾಗಿ ಕಾಯುತ್ತಿದ್ದೆ. ಒಂದೂ ಅಂಗಡಿ ಬಂದಿಲ್ಲವಲ್ಲ ಎನ್ನುವ ಚಿಂತೆ ತಲೆಯಲ್ಲಿ.

ಒಬ್ಬೊಬ್ಬರೇ ಸೇರುವುದು, ಗದ್ದೆಯಲ್ಲಿ ಸುಟ್ಟಿದ್ದ ಇಟ್ಟಿಗೆ ಗೂಡಿನಿಂದ ಇಟ್ಟಿಗೆ ತಂದು ರಸ್ತೆ ಬದಿಯಲ್ಲಿ ಪೇರಿಸುವುದು ನಡೆದಿತ್ತು. ಜಾತ್ರೆ, ರಥ ಬರುತ್ತೆ ಇವರ್ಯಾಕೆ ಇಟ್ಟಿಗೆ ತೆಗೆದುಕೊಂಡು ಹೋಗಿ ಅಲ್ಲಿ ಇಡ್ತಾ ಇದಾರೆ ಅಂತ ಒಳಗೊಳಗೇ ಸಿಟ್ಟು. ಹೇಳಿದರೆ ಪೆಟ್ಟು ಗ್ಯಾರಂಟಿ ಎನ್ನುವುದು ಗೊತ್ತಿರುವುದರಿಂದ ಗೊಣಗುತ್ತಲೇ ದೃಷ್ಟಿ ಮಾತ್ರ ರಸ್ತೆಯತ್ತಲೇ ನೆಟ್ಟಿದ್ದೆ. ಹೊತ್ತು ಏರಿದ ಹಾಗೆ ಏರಿದ ಬಿಸಿಲು ಅದಕ್ಕೆ ತಕ್ಕ ಹಾಗೆ ಬಂದು ಸೇರುತ್ತಿದ್ದ ಜನರು. ಎಲ್ಲರ ಮುಖದಲ್ಲೂ ನಿರೀಕ್ಷೆ, ಸಂಭ್ರಮ. ಎಲ್ಲಿಗೆ ಬಂತಂತೆ ಎಂಬ ಚರ್ಚೆ. ಊಟ ಪಾಟ ಏನೂ ಇಲ್ಲದೆ ಎಲ್ಲರೂ ಕಾಯುತ್ತಲೇ ಇದ್ದರು. ಕತ್ತು ಉದ್ದ ಮಾಡಿ ನೋಡುತ್ತಿದ್ದರು. ಅದೆಲ್ಲೋ ಅಸ್ಪಷ್ಟ ಸದ್ದು, ಒಮ್ಮೆಲೇ ಇಲ್ಲಿ ತಾರಕ್ಕಕ್ಕೇರಿದ ಸದ್ದು . ಜೈ ಶ್ರೀರಾಮ್ ಎನ್ನುವ ಕೂಗು. ಒಂದು ಸ್ವರ ಹಲವು ಸ್ವರಗಳಾಗಿ ಕ್ಷಣಕ್ಷಣಕ್ಕೂ ಏರಿ ಇಡೀ ವಾತಾವರಣ ರಾಮಮಯವಾಗುವ ಹೊತ್ತಿಗೆ ರಥದ ರೂಪದ ಲಾರಿ ಬಂದಿತ್ತು. ಅದರ ಎದುರು ಅಲಂಕಾರ ಮಾಡಿದ ಶ್ರೀರಾಮನ ಫೋಟೋ.

ಬಂದು ನಿಲ್ಲುತ್ತಿದ್ದ ಹಾಗೆ ಭಕ್ತಿಯ ಪರಾಕಾಷ್ಠೆ. ಪೂಜೆ ಆರತಿ ಎಲ್ಲವೂ ನಡೆದು, ಯಾರೋ ತಂದಿದ್ದ ಪ್ರಸಾದವನ್ನೂ ಹಂಚಿ ಜನ ಕಣ್ಣಿಗೊತ್ತಿಗೊಂಡು ತಿಂದು ಅದಾಗಲೇ ತಂದು ಪೇರಿಸಿಟ್ಟಿದ್ದ ಇಟ್ಟಿಗೆಯನ್ನು ಅದರೊಳಗೆ ಇಡಲು ಶುರುಮಾಡಿದ್ದರು. ಎಲ್ಲರಲ್ಲೂ ಏನೋ ಆವೇಶ, ಬಾಯಲ್ಲಿ ರಾಮ ಮಂತ್ರ. ಏನು ಎತ್ತ ಎಂದು ಅರ್ಥವಾಗುವ ಮುನ್ನ ನಾನೂ ಒಂದು ಇಟ್ಟಿಗೆ ಕಷ್ಟಪಟ್ಟು ಇಟ್ಟು ಜೋರಾಗಿ ಜೈ ಶ್ರೀರಾಮ್ ಎಂದು ಕೂಗಿದ್ದೇ. ಕಣ್ಣಲ್ಲಿ ನೀರು ಸುರಿದದ್ದು ಯಾಕೆ ಎಂದು ಅರ್ಥವಾಗಾಗಿದ್ದರೂ ಅಲ್ಲಿದ್ದ ಎಲ್ಲರ ಕಣ್ಣಲ್ಲೂ ಕೊಳ ನಿರ್ಮಾಣವಾಗಿದ್ದು ಕಾಣಿಸಿತ್ತು. ಛೆ ಅದ್ವಾಣಿ ಅವರು ಬರಬೇಕಿತ್ತು ಗುಂಪಿನಲ್ಲಿ ನಿರಾಸೆಯ ಸ್ವರದ ನಡುವೆಯೂ ಏನೋ ತೃಪ್ತಿ. ರಾಮ ಮಂದಿರ ಆಗುತ್ತೆ ನೋಡ್ತಾ ಇರಿ ಎನ್ನುವ ಕನಸು. ಆಮೇಲೆ ಎಲ್ಲಾ ಇಟ್ಟಿಗೆ ಪೇರಿಸಿದ ಮೇಲೆ ಲಾರಿ ನಿಧಾನವಾಗಿ ಹೊರಟಿತ್ತು. ನಾವು ಅದರ ಹಿಂದೆ ಜೈಕಾರ ಹಾಕುತ್ತಾ ಮೈಲುಗಟ್ಟಲೆ ನಡೆದ ನೆನಪು. ಬರುವಾಗ ಕೇಶುವಣ್ಣ ಅದು ಯಾವ ರಥ, ಯಾವ ಜಾತ್ರೆಗೆ ಎಂದು ವಿವರಿಸಿದ್ದರು. ಆಗಿನ ವಯಸ್ಸಿಗೆ ಇದ್ದ ಮನಸ್ಥಿತಿಯಲ್ಲಿ ಇದು ತೆಗೆದುಕೊಂಡು ಹೋಗಿ ದೇವಸ್ಥಾನ ಕಟ್ಟಿಯೇ ಬಿಡ್ತಾರೆ ಅನ್ನೋದು ಇದ್ದಿದ್ದರಿಂದ ನಾವು ಆಮೇಲೆ ಹೋಗೋಣ ಆಯ್ತಾ ಎಂದಿದ್ದೆ. ಅಯೋಧ್ಯೆ ಯಾವ ದಿಕ್ಕೂ ಎಂದು ತಿಳಿಯದ ಹುಡುಗಿಯ ಮಾತಿಗೆ ಅವರು ಅಷ್ಟೇ ಗಂಭೀರವಾಗಿ ತಲೆ ಆಡಿಸಿದ್ದರು.

ಅದಾದ ಮೇಲೆ ವಿಷಯ ಅರ್ಥವಾಗಿತ್ತು. ತನ್ನ ನೆಲದಲ್ಲಿ ಅನಾಥವಾಗಿದ್ದುಎನ್ನುವ ಬರೀ ರಾಮನಲ್ಲ ನಮ್ಮ ಸ್ವಾಭಿಮಾನವೂ ಎನ್ನುವುದು ತಿಳಿದು ವಿಷಾದ. ಎಲ್ಲವೂ ಸರಿಯಾಗಬಹುದು ಎನ್ನುವ ಆಶಾವಾದ. ಆ ಆಸೆ ನಿರೀಕ್ಷೆ ಕನಸಿನಲ್ಲಿಯೇ ವರುಷಗಳು ಉಳಿದರು ಮನಸ್ಸಿನ ಮೂಲೆಯಲ್ಲಿ ಅಸೆ ಸಣ್ಣಗೆ ಉರಿಯುತ್ತಲೇ ಇತ್ತು. ರಾಮ ಜನ್ಮ ಭೂಮಿ ವಿಮೋಚನೆಗಾಗಿ ತ್ಯಾಗ, ಬಲಿದಾನ ಮಾಡಿದವರ ಕುರಿತು ಹೆಮ್ಮೆಯ ಜೊತೆಗೆ ನಾವೇನು ಮಾಡಬಹುದು ಎನ್ನುವ ಯೋಚನೆ, ಏನೂ ಮಾಡಲಾಗದ ಅಸಹಾಯಕತೆ ಎಲ್ಲವೂ ವರುಷಗಳ ಕಾಲ ಕಾಡಿದ್ದು ನಿಜ. ಅಂತೂ ಕಾಯುವಿಕೆಗೆ ಫಲ ಸಿಕ್ಕಿದ ದಿನ ಸಂಭ್ರಮ. ಯೋಗ್ಯ ನಾಯಕನ ಕೈಯಿಂದ ಭೂಮಿ ಪೂಜೆ ನಡೆದ ಮೇಲೆ ಇದು ಆಗಿಯೇ ತಿರುತ್ತದೆ ಎನ್ನುವ ಆತ್ಮವಿಶ್ವಾಸ. ಅಂದು ಜೀವದ ಹಂಗು ತೊರೆದು ಹೆಜ್ಜೆ ಮುಂದಿಟ್ಟವರ ತ್ಯಾಗ, ಬಲಿದಾನ ವ್ಯರ್ಥವಾಗಲಿಲ್ಲ ಎನ್ನುವ ಸಮಾಧಾನ.

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಯಾಗುವುದು ಬರೀ ರಾಮ ಮಾತ್ರವಲ್ಲ, ನಮ್ಮ ಆತ್ಮಾಭಿಮಾನ. ರಾಮ ಬರೀ ವ್ಯಕ್ತಿಯಲ್ಲ ಆದರ್ಶ. ಜಾತಿ ಮತ ಧರ್ಮಗಳ ಹಂಗಿಲ್ಲದೆ ಎಲ್ಲರೂ ಅನುಸರಿಸಬಹುದಾದ ವ್ಯಕ್ತಿತ್ವ. ಮಂದಿರ ನಿರ್ಮಿಸಲು ಅನುಮತಿ ಸಿಕ್ಕಿದೆ. ಆದರೆ ಸಂಪನ್ಮೂಲವೂ ಬೇಕಾಗಿದೆ. ನಮ್ಮ ಆತ್ಮಾಭಿಮಾನ ಪುನರ್ಸ್ಥಾಪಿಸಲು ಉದ್ದೇಶಿಸಿರುವ ಕಾರ್ಯಕ್ಕೆ ನಮ್ಮಿಂದಾಗುವ ಧನ ಸಹಾಯ ಮಾಡುವ ಅವಕಾಶ ಎದುರಿಗಿದೆ. ನಾವೇನು ಮಾಡಬಹುದು ಎನ್ನುವುದಕ್ಕೆ ರಾಮ ದಾರಿ ತೋರಿಸಿದ್ದಾನೆ. ತನ್ನ ಪುಟ್ಟ ಕೈಗಳಿಂದ ಮರಳು ತಂದು ಸೇತುವೆ ನಿರ್ಮಿಸಿದ ಅಳಿಲಿನ ಹಾಗೆ ನಮ್ಮ ಕೈಲಾದಷ್ಟು ಸೇವೆ ಸಲ್ಲಿಸುವ ಭಾಗ್ಯ ದೊರಕಿದೆ. ಇದು ರಾಮನ ಸೇವೆ ಅನ್ನುವುದಕ್ಕಿಂತ ಕ್ಷಾತ್ರ ಸೇವೆ. ನಮ್ಮ ಸ್ವಾಭಿಮಾನ ಶ್ರದ್ಧೆ ನಂಬಿಕೆ ಉಳಿಸಿಕೊಳ್ಳುವ ಕ್ರಿಯೆ.















Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...