ಕಾಶಿ ಯೂನಿವರ್ಸಿಟಿ ಯಲ್ಲಿ ಅವರು ಹಿಂದಿ ಪ್ರಾದ್ಯಾಪಕರಾಗಿ ಕೆಲಸ ಮಾಡಿದವರು. ಅಚ್ಚ ಕನ್ನಡಿಗ. ಆದರೆ ಅಲ್ಲಿ ಇವರಿಗೆ ಕನ್ನಡ ಬರುತ್ತೆ ಅನ್ನೋದೇ ಗೊತ್ತಿರಲಿಲ್ಲವಂತೆ. ಅವರು ಹೇಳುವವರೆಗೆ ಅವರಿಗೆ ಹಿಂದಿ ಬರುತ್ತೆ ಅನ್ನೋದು ಇಲ್ಲಿಯೂ ಯಾರಿಗೂ  ಗೊತ್ತಾಗುತ್ತಿರಲಿಲ್ಲ. ಅಷ್ಟು ಶುದ್ಧವಾದ ಭಾಷೆ ಅವರದು.  ಬರೀ ಇಷ್ಟೇ ಅಲ್ಲ. ಅಪ್ರತಿಮ  ಸಾಧಕರು. ಏನೇ ಜಪ ತಪ ಅನುಷ್ಠಾನ ಇದ್ದರೂ ಎಲ್ಲರೊಂದಿಗೆ ಸಹಜವಾಗಿ ಬೆರೆಯುತ್ತಿದ್ದವರು ಅವರು. ಮಕ್ಕಳೆಂದರೆ ಜೀವ. ಅವರೊಂದಿಗೆ ನೇರವಾಗಿ  ಮಾತಾಡಲೇ ಬೇಕು ಎಂದೇನೂ ಇರಲಿಲ್ಲ ಜೊತೆಗೆ ಒಂದಷ್ಟು ಹೊತ್ತು ಮೌನವಾಗಿ ಕುಳಿತರೂ ಸಾಕಿತ್ತು. ಏನು ಬೇಕೋ ಅದು ಸಿಗುತಿತ್ತು. ಹೇಳದೆಯೇ ಗೊಂದಲಗಳಿಗೆ ಪರಿಹಾರ, ಸಮಸ್ಯೆಗಳಿಗೆ ಉತ್ತರ, ಬೊಗಸೆ ತುಂಬಾ ಪ್ರೀತಿ... ಅವರು ಭಾರತಿ ರಮಣಾಚಾರ್ ತಾತ. ಮಗು ಮಾತಾಡುವ ಭಾಷೆ ಶುದ್ಧವಾಗಿರಬೇಕು ಅನ್ನುತ್ತಿದ್ದರು. ಆ ಮಾತು ಕೇಳಿದ ಮೇಲಿನಿಂದ ಅದು ಮನಸ್ಸಿನಲ್ಲಿ ಅಚ್ಚಾಗಿ ಉಳಿದುಬಿಟ್ಟಿದೆ. ಆ ಮಾತಿನ ಆಗಾಧತೆ ಇವತ್ತಿಗೂ ಪೊರೆಯುತ್ತಿದೆ. 

ಬದುಕಿನ ಅಬ್ಬರದ ದಿನಗಳಲ್ಲಿ  ಸಿಕ್ಕವರು ಈ ತಾತ. ನೋಡುವಾಗಲೇ ಸೆಳೆತ ಇಬ್ಬರಿಗೂ. ಅವರೋ ಎರಡು ದಡಗಳ ನಡುವೆ ಗಂಭೀರವಾಗಿ ಹರಿಯುವ ಶಾಂತ ನದಿ. ನಾನೋ ದಡಕ್ಕಪ್ಪಳಿಸಿ ಮುನ್ನುಗ್ಗುವ ಮಳೆಗಾಲದ ನದಿ. ಭೋರ್ಗರೆಯುವ ಸಮುದ್ರ  ಅಂತ ಸಮುದ್ರಕ್ಕೂ ಶಾಂತತೆ ಒಂದೂ ಮಾತು ಆಡದೆ ಕಲಿಸಿದವರು ಅವರು. ಏನೋ ಸಮಸ್ಯೆ, ದುಗುಡ ಗೊಂದಲ ಎದುರಾದಾಗಲೆಲ್ಲ ತಾತ ನೆನಪಾಗುತ್ತಿದ್ದರು. ದಡದಡನೆ ಬರುವವಳನ್ನು ಪುಟ್ಟಿ ಬಾ ಕೂತ್ಕೊ  ಅಂದು ಎದುರಿಗಿದ್ದವರ ಜೊತೆ ಮಾತಿನಲ್ಲಿ ಮಗ್ನವಾಗುತ್ತಿದ್ದರು. ಕುಳಿತ ಐದು  ನಿಮಿಷಗಳಲ್ಲಿ ಸಮುದ್ರದಲ್ಲಿ ಇಳಿತ. ಮತ್ತೈದು ನಿಮಿಷದಲ್ಲಿ ಸಿಗುತ್ತಿದ್ದ ಉತ್ತರ. ಅಲ್ಲಿಂದ ಎದ್ದು ಹೊರಡುವಾಗ ನಿರಾಳತೆ, ಅವರ ಮುಖದಲ್ಲಿ ಅದೇ ಸಣ್ಣನೆ ಮುಗುಳುನಗು. ಒಂದೇ ಒಂದು ಮಾತು ನೇರವಾಗಿ ಆಡದಿದ್ದರೂ ಭಾವ ಸಂವಹನ.  

ಅವರು ಹೇಳಿದ್ದು ಎದುರಿದ್ದ ಅವರಿಗಾ ನನಗಾ.... ಒಮ್ಮೆ ಕಾಲು ಮುಟ್ಟಿ ನಮಸ್ಕರಿಸಿ ಹೊರಟರೆ ಮನಸ್ಸು ಶಾಂತ.  ಎಷ್ಟೋ ಸಲ ಯಾವುದೋ ವಿಷಯ ಕೂರಿಸಿಕೊಂಡು ಹೇಳುತ್ತಿದ್ದರು. ಅದು ಬರೀ ಯಾವುದೋ ವಿಷಯವಾಗದೆ ಬಹುಕಾಲ ಉಳಿದಿದ್ದ ಗೊಂದಲಕ್ಕೊ, ಅರ್ಥವಾಗದ ತಳಮಳಕ್ಕೊ, ಭವಿಷ್ಯದ ಗೊಂದಲಕ್ಕೋ  ಉತ್ತರವಾಗುತಿತ್ತು. ನನ್ನ ಸಂಭ್ರಮ, ದುಃಖ, ತಳಮಳ ಗೊಂದಲ ಇದ್ಯಾವುದೂ ಅವರಿಗೆ ಬಾಯಿ ಬಿಟ್ಟು ಇದು ಹೀಗೆ ಎಂದು  ಹೇಳಬೇಕಾದ ಪ್ರಮೇಯ ಯಾವತ್ತೂ ಬರಲಿಲ್ಲ, ಅವರು ನೇರವಾಗಿ ಯಾವುದನ್ನೂ ಹೇಳದೆ, ಕೇಳದೆ ಏನೋ ಬೇಕೋ ಅದನ್ನು ಬೊಗಸೆ ತುಂಬಾ ತಂದು ಸುರಿದುಬಿಡುತ್ತಿದ್ದರು. ನನ್ನ ಅಪ್ಪನ ಅಪ್ಪನ ಗೆಳೆಯರು ಅವರು ಎಂದು ತಿಳಿಯುವಾಗ ಅವರಿಲ್ಲವಾಗಿತ್ತು. ಆದ್ರೆ ತಾತ ಇಲ್ಲ ಎನ್ನುವ ಭಾವ ಕಾಡದಂತೆ ಪೊರೆದಿದ್ದರು.

ಅದು ಹದಿಹರೆಯದ ಕುದಿ ಕುದಿ ಮನಸ್ಸು. ಯಾರು ಏನು ಹೇಳಿದರೂ ತಿರುಗಿ ಕೊಡದ ಹೊರತು ಸಮಾಧಾನವಾಗದ ವಯಸ್ಸು. ಜಗತ್ತೇ ನನ್ನನ್ನು ಗಮನಿಸುತ್ತಿದೆ ಅನ್ನುವ ಭಾವ. ಎಲ್ಲದಕ್ಕೂ ಎಲ್ಲವಕ್ಕೂ ಉತ್ತರ ಕೊಡಬೇಕು ಅಂತಿಲ್ಲ ಪುಟ್ಟಿ, ಯಾಕೆ ಕೊಡಬೇಕು ಹೇಳು ? ಯಾರಿಗಾದರೂ ಉತ್ತರ ಕೊಡಬೇಕು ಅನ್ನಿಸಿದರೆ ಅವರು ನಿನಗೆ ಮುಖ್ಯ ಅನ್ನಿಸಬೇಕು ಇಲ್ಲದೆ ಹೋದರೆ ಸುಮ್ಮನೆ ಕೇಳಿದರೂ ಕೇಳದ ಹಾಗೆ ಮುಂದೆ ಹೋಗಬೇಕು ಹೊರತು ಅಲ್ಲಿಯೇ ನಿಂತು ಉತ್ತರಕ್ಕೆ ಉತ್ತರ ಕೊಡುತ್ತಾ ಸಮಯ ವ್ಯರ್ಥ ಮಾಡಬಾರದು ಇದು ನಿನ್ನ ಜೀವನದ ಕೊನೆಯ ತನಕ ನೆನಪಿರಲಿ ಎಂದು ಕೆನ್ನೆ ತಟ್ಟಿದ್ದರು. ಅದು ನನ್ನ ಮೂರ್ಖತನಕ್ಕೆ, ಭ್ರಮೆಗೆ ತಟ್ಟಿದ ಹಾಗಾಗಿ ಎಚ್ಚರವಾಗಿತ್ತು. 


ನಿನ್ನೆ ಮಗಳ ಜೊತೆ ಯಾವುದೋ ಚರ್ಚೆ ನಡೆಯುತಿತ್ತು. ಅವಳು ಹುಣ್ಣಿಮೆಯ ಸಮುದ್ರದ ಹಾಗೆ ಭೋರ್ಗೆರೆಯುತ್ತಿದ್ದಳು. ಅಪ್ಪಳಿಸಿ ತೆರೆ ಹಿಂದೆ ಸರಿದು ಶಾಂತವಾದ ಮೇಲೆ . . . . . . . 

ಮಗಳೇ   ಕಾಳಜಿ ಆ ಕ್ಷಣಕ್ಕೆ  ಯಾರ ಮೇಲೆ ಬೇಕಾದರೂ ತೋರಿಸಬಹುದು. ಆದರೆ ಕೋಪ, ದ್ವೇಷ, ಪ್ರೀತಿಗೆ  ಅದಕ್ಕೆ ಎದುರಿನ ವ್ಯಕ್ತಿಗೆ ಅರ್ಹತೆ ಇರಬೇಕು ಮಗಾ ಸುಮ್ನೆ ನಮ್ಮ ಭಾವನೆ ಯಾರ ಮೇಲೊ ಇನ್ವೆಸ್ಟ್ ಮಾಡಬಾರದು ಅಂದೇ. 

ಅಮ್ಮಾ hug ಎಂದಳು. 

ತಾತ ನೆನಪಾದರೂ.. 



Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...