ಬೆಳ್ಬೆಳಿಗ್ಗೆ  ಅಥವಾ ಸಂಜೆಯ ಹೊತ್ತಿಗೆ ಅಮ್ಮಾ ಎಂಬ ಕರೆ ಹಿತ್ತಿಲಬಾಗಿಲ ಕಡೆಯಿಂದಲೂ ಇಲ್ಲಾ ಅಂಗಳದಿಂದಲೋ ಕೇಳಿತು ಅಂದರೆ ಅದು ಉಳುಕು ತೆಗಿಸಿಕೊಳ್ಳಲು ಬಂದವರೇ ಎಂಬುದು ಹೇಳದೆಯೇ ಗೊತ್ತಾಗಿ ಬಿಡುತ್ತಿತ್ತು. ಹೇಗೆ ಉಳುಕುತಿತ್ತು ಎನ್ನುವುದು ಹೇಳುವುದು ಕಷ್ಟವಾದರೂ ಉಳುಕಿದಷ್ಟು ಸುಲಭವಲ್ಲ ಆ ನೋವು ಅನುಭವಿಸುವುದು. ಎಲ್ಲಾ ನೋವು ಒಂದೇ ಕಣೆ ನಮಗೆ ಯಾವುದು ಬಂದಿರುತ್ತೋ ಆಗ ಅದೇ ದೊಡ್ಡದು ಅನಿಸುತ್ತೆ ಅಷ್ಟೇ ಅನ್ನುತ್ತಿದ್ದಳು ಅವಳು. ಅದೇನೇ ಇರಲಿ ಈ ಉಳುಕು ತೆಗೆಯುವುದು ಅವಳು ಹೇಗೆ ಕಲಿತಿದ್ದಳೋ ಗೊತ್ತಿಲ್ಲವಾದರೂ ಎಂತಹುದೇ  ಉಳುಕಿನ ನೋವಾದರೂ ಅವಳ ಕೈಯಲ್ಲಿ ನೀವಿಸಿಕೊಂಡರೆ ಹೋಗುತ್ತಿದ್ದದ್ದು ಮಾತ್ರ ಹೌದು.

ಹಾಗಾಗಿ ಊರಲ್ಲಿ ಯಾರೇ ಕೈ ಕಾಲು ಉಳುಕಿಸಿಕೊಂಡರೆ ಸೀದಾ ಅವಳ ಬಳಿ ಬರುತ್ತಿದ್ದರು. ಕೈಯಲ್ಲೊಂದು ಎಣ್ಣೆಯ ಬಾಟಲಿ. ಅವಳು ಜಗುಲಿಯಲ್ಲೋ, ಹಿತ್ತಿಲಿನ ಕಡುಮಾಡಿನಲ್ಲೋ ಕುಳಿತು ಹಾಗೆ ಬಂದವರಿಗೆ ಎಣ್ಣೆ ಹಚ್ಚಿ ನೀವುತ್ತಿದ್ದಳು. ಹಾಗೆ ನೀವಲು ಶುರುಮಾಡಿದ ಕೆಲವು ಕ್ಷಣಗಳು ಅವರು ನಿಟ್ಟುಸಿರು ಬಿಡುತ್ತಲೋ , ಚೀರುತ್ತಲೋ, ಕಣ್ಣೀರು ಹರಿಸುತ್ತಲೋ ಕುಳಿತಿರುವುದು ನೋಡಿ ಸಂಕಟವಾದರೂ ನೋವಿದ್ದಾಗ ಯಾಕೆ ನೀವಿಸಿಕೊಳ್ಳಲು ಬರಬೇಕು ಎನ್ನಿಸಿ ಕೋಪವೂ ಬರುತಿತ್ತು. ಕೊಂಚ ಹೊತ್ತಿಗೆ ಅವರ ಮುಖದಲ್ಲಿ ಏನೋ ಅನಿವರ್ಚನೀಯ ಆನಂದ ಕಾಣಿಸಿ ಗೊಂದಲ, ಹೊರಡುವ ಹೊತ್ತಿಗೆ ಅವರ ಮುಖದಲ್ಲಿ ಕಾಣಿಸುವ  ಕೊಂಚ ನಿರಾಳತೆ. ದಿನವೆರೆಡು ಕಳೆಯುವ ಹೊತ್ತಿಗೆ ಅಮ್ಮಾ ನೋವು ವಾಸಿಯಾಯ್ತು ಅಂತ ನಗುತ್ತಾ ಹೇಳುವುದು ಕೇಳಿಸುತಿತ್ತು.

ನೋವು ಅಂತ ಬೊಬ್ಬೆ ಹೊಡಿತಾ ಇರ್ತಾರೆ ಆದ್ರೆ ನೀನು ಇನ್ನೂ ತಿಕ್ತಾನೆ ಇರ್ತಿಯಲ್ಲೇ ಅಂತ ಅವಳನ್ನು ಕೇಳಿದಾಗಲೆಲ್ಲ ನೋವು ಅಂತ ಬಿಟ್ಟರೆ ವಾಸಿ ಆಗೋದು ಹೇಗೆ, ಅನುಭವಿಸಿದರೆ ನೋವು ಹಿತವೇ... ಎಂದು ನಕ್ಕು ಒಳಗೆ ಹೋಗುತ್ತಿದ್ದಳು. ಏನೂ ಅರ್ಥವಾಗದೆ ಸುಮ್ಮನೆ ಅವಳನ್ನೇ ನೋಡಿ ಅದೇ ಗೊಂದಲದಲ್ಲೇ ಆಡಲು ಹೋಗುತ್ತಿದ್ದೆವು. ಹಾಗೆ ನೀವಿ ಕಳಿಸುವಾಗಲೆಲ್ಲ  ಅವಳು ಉಳುಕಿದ ಜಾಗಕ್ಕೆ ನೀರು ಹಿಡಿಯಲು ಹೇಳುತ್ತಿದ್ದಳು. ಕೆಲವೊಮ್ಮೆ ತಾನೇ ಹಂಡೆಗಟ್ಟಲೆ ನೀರು ಹಾಕುವುದೂ ನಡೆಯುತಿತ್ತು. ಮರುದಿನ ಅವರು ವಾಸಿಯಾಯಿತು ಎಂದಾಗ ಅವಳ ಮುಖದಲ್ಲಿ ಅರಳುವ ನಗು ಮಾತ್ರ ಅಪೂರ್ವ ಅನ್ನಿಸುತಿತ್ತು. ಆದರೆ ನೋವು ನಿರಾಳವಾಗುವ ಮಾರ್ಗ ಮಾತ್ರ ಅರ್ಥವೇ ಆಗಿರಲಿಲ್ಲ.

ಚಿಕ್ಕಂದಿನಲ್ಲಿಯೇ ಯೋಗ ಕಲಿತಿದ್ದರೂ ಆಫೀಸ್, ಮಗಳು ಅನ್ನುವ ಭರಾಟೆಯಲ್ಲಿ ಎಲ್ಲವೂ ಬಿಟ್ಟು ಹೋಗಿತ್ತು. ಆಮೇಲೆ ಮಗಳು ಸ್ವಲ್ಪ ದೊಡ್ಡವಳಾಗಿ, ವಯಸ್ಸೂ  ಆಗಿ ಇನ್ನು ಯೋಗ, ವಾಕ್ ಅಂತ ಶುರುಮಾಡಿಕೊ ಎಂದು ಫ್ಯಾಮಿಲಿ ಡಾಕ್ಟರ್ ಹೇಳಿದಾಗ ತಲೆ ಅಲ್ಲಾಡಿಸಿದರೂ ಮನಸ್ಸು ಸೋಮಾರಿತನ ಹೊದ್ದು ಮಲಗಿತ್ತು. ಜೋಮು ಹಿಡಿದ ಮನಸ್ಸಿಗೆ ಬುದ್ಧಿ ಹೇಳಿ ಸೂರ್ಯ ಕ್ರಿಯೆ ಕಲಿಯಲು ಹೋದಾಗಲೇ ಗೊತ್ತಾಗಿದ್ದು ಮೊಂಡು ಹಿಡಿಯುವುದು ಬರೀ ಮನಸ್ಸು ಮಾತ್ರವಲ್ಲ ದೇಹವೂ ಕೂಡ ಎಂದು. ಮನಸ್ಸು ಚಂಚಲ, ಮೊಂಡು, ಸಮರ್ಥನೆ ಕೊಡುತ್ತೆ ಸೋಮಾರಿತನ ಮಾಡುತ್ತೆ ಎಂದುಕೊಳ್ತೇವೆ. ದೇಹವೂ ಅದನ್ನು ಮಾಡುತ್ತೆ ಅನ್ನೋದು ಅರ್ಥವೇ ಆಗಿರುವುದಿಲ್ಲ.

ಸೂರ್ಯ ಕ್ರಿಯೆ ಕಲಿಯುವಾಗ ದೇಹ ಬಾಗಲು ಮೊಂಡು ಹಿಡಿಯುತಿತ್ತು. ಆಗ ಮನಸ್ಸಿನಲ್ಲಿ ನೀವು ಸರಿಯಾದ ಭಂಗಿ ಮಾಡ್ತಾ ಇದೀವಿ ಅಂತ ಅಂದುಕೊಂಡು ಆ ಭಂಗಿಯನ್ನು ಕಲ್ಪಿಸಿಕೊಳ್ಳುತ್ತಾ ಹೋಗಿ ನಿಧಾನಕ್ಕೆ ದೇಹ ಹಾಗೆಯೇ ಬಾಗುತ್ತದೆ ಎಂದಾಗ ಅನುಮಾನ.  ನೋಯುವ ಭಾಗಗಳು ಸಾಕು ಎನ್ನುವಾಗ ಹೌದು ಎಂದು ಮನಸ್ಸು ತಾಳ ಹಾಕುತಿತ್ತು. ಹಾಗೆ ಕೂರುವವರ ಕಂಡು ಅವರು ಮತ್ತೆ ಹೇಳಿದ್ದರು. ನೋವು ಅಂತ ಸುಮ್ಮನಾದರೆ ದೇಹ ಅದನ್ನೇ ಮುಂದುವರಿಸುತ್ತೆ. ನೋವನ್ನೂ ಅನುಭವಿಸುವುದು ಕಲಿಯಿರಿ, ಆಗ ಹಿತವೆನಿಸುತ್ತದೆ ಎಂದಿದ್ದರು. ನೋಡೇ ಬಿಡುವ ಎಂದು ಅದನ್ನು ಪಾಲಿಸಿದರೆ ಹೌದು ದೇಹ ಹಾಗು ಮನಸ್ಸು ನಾವು ಯಾವುದನ್ನು ಅಭ್ಯಾಸ ಮಾಡಿಸುತ್ತೇವೊ ಅದಕ್ಕೆ ಒಗ್ಗಿಕೊಳ್ಳುತ್ತಾ ಹೋಗುತ್ತದೆ.

ನೋವು ಕೂಡಾ ಹಾಗೆಯೇ. ನೋವು ಎಂದುಕೊಂಡರೆ ನೋವು, ಅದನ್ನು ಸಾಧ್ಯವಾದಷ್ಟು ಪೂರ್ಣ ಮನಸ್ಸಿನಿಂದ ಅನುಭವಿಸುತ್ತಾ ಹೋದರೆ ಹಿತ. ಒಮ್ಮೆ ಹಿತವಾದರೆ ಬಾಗಿಸಲು ಸಾಧ್ಯ. ಆದರೆ ಆ ಸುಖದ ಭಾವದಲ್ಲಿ ಗುರಿ ಕಳೆದುಹೋಗಬಾರದು ಎನ್ನುವ ಎಚ್ಚರ ತುಂಬಾ ಮುಖ್ಯ. ದಿನವೆರೆಡು ಕಳೆಯುವ ಹೊತ್ತಿಗೆ ನೋವು ಹಿತವೆನ್ನಿಸಿ ದೇಹ ಭಾಗಿ ಸೂರ್ಯಕ್ರಿಯೆಯ ಭಂಗಿಗಳು ಅಭ್ಯಾಸವಾದಾಗ ಅರೆ ಹೌದಲ್ವಾ ಅನ್ನಿಸಿ ನಗು ಮೂಡಿತ್ತು. ನಿನ್ನೆ ಸಂಜೆಯ ಹೊತ್ತಿಗೆ ಭುಜದ ನೋವು ಶುರುವಾಗಿತ್ತು. ಯೋಗ ಮಾಡಲು ಶುರುಮಾಡಿದ ಮೇಲೆ ಆಗಾಗ ಕಾಡುತ್ತಿದ್ದ ನೋವು ಇಲ್ಲವೇ ಇಲ್ಲ ಅನ್ನುವ ಹಾಗೆ ಮಾಯವಾಗಿದ್ದು ನಿನ್ನೆ ಮತ್ತೆ ಮರುಕಳಿಸಿ ಕೈ ಎತ್ತಲಾಗದಷ್ಟು ನೋವು. ನೋಡಿದ ಮಗಳು ಊರಿನಿಂದ ತಂದ ನೋವಿನ ಎಣ್ಣೆಯನ್ನು ಹಚ್ಚಿ ಹದವಾಗಿ ನೀವುತ್ತಿದ್ದಳು. ಮೊದಮೊದಲು ಹಾ, ಅಯ್ಯೋ ಎಂದು ನರಳುತ್ತಿದ್ದ ನಾನು ಆಮೇಲೆ ಕಣ್ಣು ಮುಚ್ಚಿದ್ದು  ಮುಖ ತನ್ನ ಬಿಗಿತ ಕಳೆದುಕೊಳ್ಳುವುದನ್ನು ನೋಡುತ್ತಿದ್ದ ಅವಳು ನೋಡಿದ್ಯಾ ನಾನು ತಿಕ್ಕಿದ ಕೂಡಲೇ ಹೇಗೆ ಸರಿ ಹೋಯ್ತು ಕಡಿಮೆ ಆಯ್ತು ಅಲ್ವಾ ಎನ್ನುವ   ಹೊತ್ತಿಗೆ ಮತ್ತೆ ಅಜ್ಜಿಯ ನೆನಪಾಯಿತು.
ಅವಳು ಉಳುಕು ತೆಗೆಯುವಾಗ ತೆಗಿಸಿಕೊಳ್ಳುವವರ  ಮುಖದ ಭಾವದ ಅರ್ಥವೂ ಮರುಕ್ಷಣ ಅನುಭವಿಸಿದರೆ ನೋವೂ ಹಿತವೇ ಎನ್ನುವ ಮಾತು ನೆನಪಾಯಿತು. ಜೊತೆಗೆ ಯಾರು ತಿಕ್ಕುತ್ತಾರೆ, ಹೇಗೆ ತಿಕ್ಕುತ್ತಾರೆ ಎನ್ನುವುದು ಆ ಹಿತದ ಭಾವಕ್ಕೆ ಕಾರಣ ಎನ್ನುವುದೂ...

ಅವಳು ಹೇಳಿದ್ದು ಬರೀ ದೇಹದ ನೋವಿನ ಬಗ್ಗೆಯಾ........ ಕೇಳಲು ಅವಳಿಲ್ಲ.... ಉತ್ತರ ಹುಡುಕುವ ಮನಸ್ಸು ನನಗಿಲ್ಲ...


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...