ಕೊಟ್ಟಿಗೆಯ ಆಕರ್ಷಣೆ

ಬೆಳಗಾಗುತ್ತಿದ್ದದ್ದೇ ಅವುಗಳ ಅಂಬಾ ಎನ್ನುವ ದನಿಯಿಂದ. ಕಣ್ಣುಜ್ಜಿಕೊಂಡು ಹೊರಗೆ ಬರುವ ಹೊತ್ತಿಗೆ ಅಜ್ಜಿ ಅವುಗಳೊಂದಿಗೆ ಮಾತಾಡುತ್ತಾ ಹಾಲು ಕರೆಯುತ್ತಲೋ ಇಲ್ಲಾ ಅವುಗಳಿಗೆ ಕುಡಿಯಲು ಕೊಡುತ್ತಲೋ ಇರುತ್ತಿದ್ದಳು. ನಿಂಗೆ ಮಾತಿಗೆ ಒಂದು ಜೀವ ಅಂತ ಇದ್ರೆ ಸಾಕು ಅಲ್ವ ಮತ್ತೆ ನಂಗೆ ಹೇಳ್ತಿ ಕಲ್ಲನಾದ್ರು ಮಾತಾಡಿಸುತ್ತೆ ಇದು ಅಂತ ಗೊಣಗುತ್ತಲೇ ಬಚ್ಚಲಿನತ್ತ ಹೋಗುತ್ತಿದ್ದೆ. ಅವಳು ಏನು ಹೇಳುತ್ತಿದ್ದಳೋ ಕೇಳಲು ಅಲ್ಲಿದ್ದರೆ ತಾನೇ...

ಅವಳಪ್ಪ ತೀರಿಕೊಂಡ ನಂತರ ಊರಿನಲ್ಲಿದ್ದ ಕೊನೆಯ ತಮ್ಮ ತೋಟದ ಮನೆಗೆ ಹೋಗುವಾಗ ಮನೆಯಲ್ಲಿದ್ದ ದನಕರುಗಳನ್ನು ಇವಳಿಗೆ ಕೊಟ್ಟಿದ್ದ. ತವರಿನಿಂದ ಏನೂ ತಾರದ  ಅವಳು ಇವುಗಳನ್ನು ಮಾತ್ರ ಹೊಡೆದು ತಂದಿದ್ದಳು. ಅದರಲ್ಲೊಂದು ದನ ಕಡುಗಪ್ಪು. ಆದರೆ ಹಣೆಯಲ್ಲಿ ಮಾತ್ರ ಬೆಳ್ಳನೆಯ ಬೊಟ್ಟು. ಚಂದ್ರಿ ಅಂತ ಅದಕ್ಕೆ ಹೆಸರಿಟ್ಟಿದ್ದಳು. ತುಂಬಾ ಸಾಧು. ಹೇಳಿದ ಮಾತು ಅರ್ಥ ಆಗುತ್ತೇನೋ ಅನ್ನುವ ಹಾಗೇ ಅದರ ವರ್ತನೆ. ಕೊಟ್ಟಿಗೆಯ ತುಂಬಾ ತುಂಬಿಕೊಂಡಿದ್ದ ಅವುಗಳನ್ನು ನೋಡುವುದೇ ಅವಳಿಗೆ ಸಂಭ್ರಮ.

ಅವುಗಳ ಆರೈಕೆ, ಬಾಣಂತನ, ಪುಟ್ಟ ಕರುಗಳಿಗೆ ತುತ್ತು ತಿನ್ನಿಸುವುದು ಅವಳ ಇಷ್ಟದ ಕೆಲಸಗಳು. ಪುಟ್ಟ ಕರುವಿನ ಬಾಯಿ ಇಷ್ಟೇ ತೆಗೆದು ಮೃದುವಾಗಿ ಕಲಿಸಿದ ಅನ್ನ ತಿನ್ನಿಸುವುದು ನೋಡುತ್ತಿದ್ದವಳನ್ನು ಕರೆದು ಹೇಗೆ ತಿನ್ನಿಸಬೇಕು, ಹಾಗೆ ಹಿಡಿಯಬೇಕು ಅನ್ನುವುದು ಕಲಿಸಿದ್ದಳು. ಆಮೇಲೆ ನನಗದು ಇಷ್ಟದ ಕೆಲಸ. ಮಗುವಿಗೆ ತಿನ್ನಿಸಿದ ಹಾಗೆ ಧನ್ಯತಾ ಭಾವ ಜೊತೆಗೆ ಮುದ್ದು. ಹೈ ಸ್ಕೂಲ್ ಬರುವ ಹೊತ್ತಿಗೆ ಹಾಲು ಕರೆಯುವುದು ಹೇಗೆ ಎಂದು ಹೇಳಿಕೊಟ್ಟಿದ್ದಳು. ಮೊದಮೊದಲು,ಕೊಟ್ಟಿಗೆಯಲ್ಲಿ ಗೊಬ್ಬರದ ಮೇಲೆ ಕೂರುವುದು, ಸಗಣಿ ವಾಸನೆ, ಅವುಗಳು ಬಾಲ ಬೀಸುವಾಗ ಮೈ ಗೆ ಬೀಳುವ ಪೆಟ್ಟು ಹಾಗೂ ವಾಸನೆ ರಗಳೆ ಅನ್ನಿಸುತ್ತಿತ್ತು. ಒಂದು ಸಲ ಅವುಗಳ ಜೊತೆಗೆ ಮಾತಾಡು ಆಗ ನೋಡು ಎಂದು ಗೊಣಗಿದವಳಿಗೆ ಹೇಳಿ ಹಾಲು ತೆಗೆದುಕೊಂಡು ಒಳಗೆ ಹೋಗಿದ್ದಳು.

ಮೊದಲು ಜೋರು ನಗು, ಆಮೇಲೆ ಅದು ಅಪ್ಯಾಯಮಾನ ಅನ್ನಿಸಿ ದನಗಳ ಜೊತೆಗೆ ಒಂದು ಸಂಬಂಧ ನಾನು ಬೆಳೆದಂತೆ  ಬೆಳೆದುಬಿಟ್ಟಿತ್ತು. ಇನ್ನೊಂದು ನಾಲ್ಕು ದಿನ ಹೋಗಬಹುದು ಹೋಗಿ ಬಂದು ಬಿಡುತ್ತೇನೆ ಎಂದು ಅವಳಪ್ಪನ ವೈದಿಕಕ್ಕೆ ಹೋದ ದಿವಸವೇ ಚಂದ್ರಿ ಅವಳ ಲೆಕ್ಕಾಚಾರ ತಪ್ಪಿಸಿ ಕರು ಹಾಕಿಬಿಟ್ಟಿದ್ದಳು. ಅವತ್ತು ಮಾತ್ರ ಅದ್ಹೇಗೆ ನೆನಪಾಗಿತ್ತೋ ಗೊತ್ತಿಲ್ಲ ಅವಳು ಮಾಡಿದ ಹಾಗೆ ಅಮ್ಮ ಮಗುವಿನ ಆರೈಕೆ ಮಾಡಿ ಖಾರ ಕೊಟ್ಟು ಬಾಣಂತನ ಮಾಡಿದ್ದೆ. ಬಂದವಳಿಗೆ ಕಣ್ಣಲ್ಲಿ ನೀರು. ಇನ್ನು ಚಿಂತೆಯಿಲ್ಲ ನಂಗೆ ಎಂದು ಘೋಷಿಸಿದ್ದಳು. ಯಾಕೆ ಎಂದು ಅರ್ಥವಾಗಿರಲಿಲ್ಲ. ಅಷ್ಟರೊಳಗೆ ಕೊಟ್ಟಿಗೆ ನನ್ನನ್ನು ಆಕರ್ಷಿಸಿ ಬಿಟ್ಟಿತ್ತು. ಅದೊಂದು ಧ್ಯಾನಲೋಕ ಆಗಿಹೋಗಿತ್ತು. 

ಇನ್ನು ಇದು ಕರು ಹಾಕುವುದಿಲ್ಲ ಎಂದು ನಿರ್ಧರಿಸಿ ಮನೆ ಮಗು ಎಂದು ಮಾರದೆ ಉಳಿದಿದ್ದ ಲಕ್ಷ್ಮಿ ಕರು ಹಾಕಿದ್ದಳು. ಚೊಚ್ಚಲ ಬಾಣಂತಿ ಕರುವಿಗೂ ಹಾಲು ಕುಡಿಯಲು ಬಿಡುತ್ತಿರಲಿಲ್ಲ. ಅವಳನ್ನು ಅನುನಯಿಸಿ ಕರುವಿಗೆ ಹಾಲು ಕುಡಿಸಿ ಒಳಗೆ ಬರುವಾಗ ಇವಳ ಕಾಲುಗುಣ  ಚೆನ್ನಾಗಿದೆ ಲಕ್ಷ್ಮಿ ಕರು ಹಾಕ್ತು ಎಂದು ಅದ್ಯಾರಿಗೋ ಹೇಳುವುದು ಕೇಳಿಸುತಿತ್ತು. ಹತ್ತಿರ ಬಂದರೆ ಒದೆಯುತ್ತಿದ್ದ  ಕೌಲಿಯೂ ನಾನು ಹತ್ತಿರ ಹೋದರೆ ಸುಮ್ಮನಿರುತ್ತಿದ್ದಳು. ಗಲಾಟೆ ಮಾಡದೆ ಹಾಲು ಕೊಡುತ್ತಿದ್ದಳು. ಬೇರೆಯವರು ಕರೆಯಬೇಕಾದರೆ ಕಾಲುಕಟ್ಟಿದರೂ ಅರ್ಧ ಹಾಲು ಇಳಿಸುವುದು ಕಷ್ಟವಾಗಿತ್ತು. ಅಜ್ಜಿ ಅವತ್ತು ಹೇಳಿದ ಅವುಗಳ ಜೊತೆ ಮಾತಾಡು ಎನ್ನುವುದರ ಭಾವ ಅರ್ಥವಾಗಿತ್ತು. ನಾನು ಮಾತ್ರ ಹಳ್ಳಿ ಮನೆಗೆ, ಕೊಟ್ಟಿಗೆ ಇರೋ ಮನೆಗೆ ಹೋಗೋದು ಆಚೆಮನೆಯ ಆಂಟಿಯ ಎದುರು ಘೋಷಿಸಿದ್ದೇ.  ಅವರಿಗೆ ಅವತ್ತು ಸಿಟ್ಟು ಬಂದಿತ್ತು.

ಊರಲ್ಲಿ ಇರುವಷ್ಟು ದಿನ ನನ್ನೆಲ್ಲಾ ಭಾವಗಳ ಹರಿವಿಗೆ ಕೊಟ್ಟಿಗೆಯೇ ಕೇಂದ್ರ ಸ್ಥಾನ. ಆಮೇಲೆ ಕಾಲೇಜು, ಕೆಲಸ, ಮದುವೆ  ಎಂದು ಊರು  ಬಿಟ್ಟ ಬಂದಮೇಲೆ ಅದು ಕೇವಲ ಭಾವ ಪ್ರಪಂಚ. ಸೇರಿದ ಮನೆಯಲ್ಲಿ ಕೊಟ್ಟಿಗೆ ಇದ್ದರೂ ಮೈದುನನೋ, ಕೆಲಸದವರೋ ಹಾಲು ಕರೆಯುತ್ತಿದ್ದರು. ಬೇಡ ಬಿಡು ಅಭ್ಯಾಸ ಬಿಟ್ಟು ಹೋಗಿದೆ ಯಾಕೆ ಕೈ ನೋವು ಬಂದೀತು ಎಂದು ಅತ್ತೆಯೂ ಹೇಳುತ್ತಿದ್ದರಿಂದ  ಮಾತಾಡಿಸುವುದು ಬಿಟ್ಟು ಕೊಟ್ಟಿಗೆ ಒಳಗೆ ಹೋಗಿರಲಿಲ್ಲ. ಈ ಸಲ ಲಾಕ್ ಡೌನ್ ಪ್ರಯುಕ್ತ ತಿಂಗಳುಗಳ ಕಾಲ ಊರಲ್ಲಿ ಇದ್ದುದರಿಂದ ದಿನಾ ಕೊಟ್ಟಿಗೆ ಕಾಣಿಸುತ್ತಿದ್ದರಿಂದ ನಿಧಾನವಾಗಿ ಅದು ಸೆಳೆಯುತ್ತಿತ್ತು. ಒಂದು ದಿನ ಮೈದುನನ ತೋಟದಿಂದ ಬರುವುದು ಲೇಟ್ ಆಗಿರುವುದೇ ನೆಪವಾಗಿ ಬೇಡಾ ಅಕ್ಕಾ ಎಂದು ತಂಗಿ ಹೇಳುತ್ತಿದ್ದರು ಕೊಟ್ಟಿಗೆ ಒಳಗೆ ಕಾಲು ಇಟ್ಟಿದ್ದೆ. 

ಒಮ್ಮೆ ಅವಳನ್ನು ಮುಟ್ಟಿ ನಮಸ್ಕರಿಸಿ ಕುಳಿತರೆ ಒಂಚೂರು ಹೊಸಬರು ಎಂದು ನೋಡದೆ, ತುಸು ಕೂಡ ಅಲುಗಾಡದೇ , ಕೊಸರಿಸದೆ ಹಾಲು ಇಳಿಸಿದ್ದಳು. ಒಳಗೆ ಬಂದು ಪಾತ್ರೆ ಇಟ್ಟರೆ ಇವತ್ತೇನು ಜಾಸ್ತಿ ಹಾಲು ತಂಗಿ ಅಚ್ಚರಿಯಿಂದ ಕಣ್ಣು ಅರಳಿಸಿದ್ದಳು. ಪಕ್ಕನೆ ಅಜ್ಜಿಯ ನೆನಪಾಯಿತು. ಕೌಲಿಯದೂ.... ಹೊರಗೆ ಬಂದರೆ ಎಂದೂ ಇಲ್ಲದಷ್ಟು ನಕ್ಷತ್ರಗಳು ಮಿನುಗುತ್ತಿದ್ದವು.ಅಂಗಳದ ತುಂಬಾ ಹಾಲ್ಬೆಳಕು..... 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...