ಜಗುಲಿಯಲ್ಲಿ ಕುಳಿತು ದೃಷ್ಟಿ ಹಾಯಿಸಿದರೆ ಹಬ್ಬಿರುವ ಗದ್ದೆಯ ಕೋಗು ಕಾಣುತಿತ್ತು. ಆಕಡೆ ಈ ಕಡೆ ಎರಡೂ ಕಡೆ ಅದು ಕಡಲಿನಂತೆ ಅಂತ್ಯ ಕಾಣದೆ ಹಬ್ಬಿರುತಿತ್ತು. ಪೈರು ಇರುವಾಗ ಹಸಿರಾಗಿ ನಿಧಾನಕ್ಕೆ ಹೊನ್ನಿನ ಬಣ್ಣಕ್ಕೆ ತಿರುಗಿ ಕುಯಿಲಿನ ನಂತರ ತುಂಡು ಬಟ್ಟೆಯ ಹೊದ್ದ ಹಾಗೆ ಕಾಣುವ ಗದ್ದೆಯ ಕೋಗು ವಿಶಾಲತೆಗೆ ಅನ್ವರ್ಥಕ ನಾಮವಾಗಿ ಹರಡಿರುತಿತ್ತು. ಒಮ್ಮೆ ಗದ್ದೆ ಕೊಯ್ಲು ಮುಗಿದ ನಂತರ ಆಕಾಶದಲ್ಲಿನ ತಾರೆಗಳಂತೆ ಅಲ್ಲಲ್ಲಿ ದನಗಳು ಮೇಯುವುದು ಕಾಣುತಿತ್ತು. ಅಲ್ಲೆಲ್ಲೋ ಅಂಚಿನಲ್ಲಿ ನಿಂತ ಮರವೊಂದು ಯಾರಿಗಾಗೋ ಕಾಯುತ್ತಿರುವಂತೆ ಒಂಟಿಯಾಗಿ ನಿಂತಿರುತ್ತಿತ್ತು.
ಬೇಜಾರಾದಾಗೆಲ್ಲ ಜಗುಲಿಯಲ್ಲಿ ಕುಳಿತರೆ ಸಾಕು ಇನ್ನೊಂದು ಜಗತ್ತೇ ಕಣ್ಣೆದೆರು ಹರಡಿಕೊಂಡು ಮೈ ಮರೆತು ಕಳೆದುಹೋಗುತ್ತಿದ್ದೆವು. ಹಸಿರಾಗಿ ಬೆಳೆದ ಹುಲ್ಲು ಗರಿಕೆಗಳನ್ನು ಮೆಂದು ಬಿಸಿಲಿಗೆ ಯಾವುದೋ ಮರದ ನೆರಳಲ್ಲೋ, ನೀರಿನ ಹೊಂಡದಲ್ಲೋ ವಿಶ್ರಮಿಸುವ ದನ, ಎಮ್ಮೆಗಳು ಕಂಡು ಯಾವತ್ತೂ ಒಬ್ಬರೇ ಇದ್ದರೂ ಒಂಟಿತನ ಅನ್ನೋದು ನೆನಪಾಗದ ಪದವಾಗಿತ್ತು. ಬಿರು ಬಿಸಿಲಿನಲ್ಲೂ ಬೀಸುವ ತಂಪಾದ ಗಾಳಿ ಮೈ ಸವರಿಕೊಂಡು ಹೋಗುವಾಗ ಯಾರೋ ಪಕ್ಕ ಕೂತು ಮಾತಾಡುತ್ತಿದ್ದಾರೆನೋ ಅನ್ನುವ ಭಾವ. ಜಗತ್ತು ಚಿಕ್ಕದು ಅನ್ನಿಸುವುದಾದರೂ ಹೇಗೆ?
ಅಲ್ಲಲ್ಲಿ ಮಧ್ಯದ ಕೆಲವು ಗದ್ದೆಗಳು ಮಾತ್ರ ಸುತ್ತಲೂ ಬೇಲಿಕಟ್ಟಿಕೊಂಡು ಬೇರೆಯಾಗಿ ನಿಂತರೂ ಅವು ಒಂಟಿಯಾಗಿರುತ್ತಿರಲಿಲ್ಲ. ಅವುಗಳ ಒಡಲಲ್ಲಿ ಸೌತೆಯೋ, ಕುಂಬಳವೋ, ಮೆಣಸಿನ, ಹರಿವೆಯ ಮುಡಿಯೋ ಹೀಗೆ ತರಕಾರಿಗಳೋ. ಹುರಳಿ, ಉದ್ದು ಅಂತಹ ಧಾನ್ಯಗಳೋ ಬೆಳೆದು ನಿಂತಿರುತಿದ್ದವು. ಸಂಜೆಯಾಗುತಿದ್ದಂತೆ ಒಂದು ಕೊಡಪಾನವನ್ನು ಅಲ್ಲೇ ಪಕ್ಕದಲ್ಲಿ ಹರಿಯುವ ಹಳ್ಳದ ನೀರು ತಂದು ಅವಕ್ಕೆ ಹಾಯಿಸಿ, ಕೊಟ್ಟಿಗೆಯಲ್ಲಿನ ಗೊಬ್ಬರ ಹಾಕಿದರೆ ಮುಗಿಯಿತು. ಸೊಂಪಾಗಿ ಬೆಳೆದು ನಳನಳಿಸುತ್ತಿದ್ದವು, ಬಾಗುವಷ್ಟು ಫಲ ಕೊಡುತಿದ್ದವು. ಒಂದಿಡೀ ಮಳೆಗಾಲ ಕಳೆಯಲು ಸಹಾಯ ಮಾಡುತ್ತಿದ್ದವು.
ಮಳೆಯಾಶ್ರಿತ ಭತ್ತ ಬೆಳೆದರೆ ಮುಗಿಯಿತು. ಉಳಿದವುಗಳಿಗೆ ಹೆಚ್ಚು ನೀರಿನ ಅವಶ್ಯಕತೆ ಇರಲಿಲ್ಲ. ಹಾಗಾಗಿ ಹಳ್ಳಗಳು ಸದಾ ಜೀವಂತವಾಗಿ ಹರಿಯುತಿದ್ದವು. ಬಾವಿಗಳು ಸಹ ಅವುಗಳ ಸಾಂಗತ್ಯದಿಂದಾಗಿ ತುಂಬಿಕೊಂಡು ಕಂಗೊಳಿಸುತ್ತಿದವು. ಮಲೆನಾಡು ಎಂದರೆ ನೀರಿನ ನಾಡು ಅನ್ನೋದಕ್ಕೆ ಪುರಾವೆಯಾಗಿ, ಜಲಕ್ಷಾಮ ಅಂದರೇನು ತಿಳಿಯದಷ್ಟು ಮುಗ್ಧವಾಗಿ ಇಡೀ ಪ್ರಾಂತ್ಯ ಹೆಸರಾಗಿರುತಿತ್ತು, ಹಸಿರಾಗಿರುತಿತ್ತು. ಮನುಷ್ಯರು, ಪ್ರಾಣಿಗಳು ತಮ್ಮ ಜಾಗದಲ್ಲಿ ಒಂದಕ್ಕೊಂದು ಹೊಂದಿಕೊಂಡು, ಒಬ್ಬರ ಸ್ವಾತಂತ್ರ್ಯವನ್ನು ಇನ್ನೊಬ್ಬರು ಅತಿಕ್ರಮಿಸದೆ ಬದುಕುತಿದ್ದರು. ನೆಮ್ಮದಿ ಬೇಕು ಎಂದರೆ ಹಳ್ಳಿಯಲ್ಲಿ ಇರಬೇಕು ಅನ್ನುವ ಹಾಗೆ ಬದುಕು ಸಮೃದ್ಧವಾಗಿ ಸಂಪನ್ನವಾಗಿತ್ತು.
ಎಲ್ಲವಕ್ಕೂ ಒಂದು ಅಂತ್ಯವಿದೆ ಮನುಷ್ಯನ ದುರಾಸೆಯೊಂದನ್ನು ಹೊರತುಪಡಿಸಿ. ಸಣ್ಣಗೆ ಏರುತಿದ್ದ ಅಡಿಕೆಯ ಬೆಲೆ ಗದ್ದೆಗಳ ಜಾಗವನ್ನು ಅಡಿಕೆ ಆಕ್ರಮಿಸಿಕೊಂಡಿತು. ಈ ಅಡಿಕೆಗೂ ಬ್ರಿಟಿಷರಿಗೂ ತುಂಬಾನೇ ಸಾಮ್ಯತೆ ನೋಡಿ, ಇದೂ ಹಾಗೆ ಬೆರಳು ಕೊಟ್ಟರೆ ಹಸ್ತವನ್ನೇ ನುಂಗಿತು ಅನ್ನುವ ಹಾಗೆ ನಿಧಾನಕ್ಕೆ ಗದ್ದೆಯ ಕೋಗು ತನ್ನ ಇಂಚಿಂಚೆ ಜಾಗ ಕಳೆದುಕೊಂಡು ಅಲ್ಲೆಲ್ಲಾ ಸಣ್ಣಗೆ ಅಡಿಕೆಯ ಮರ ಗಾಳಿಗೆ ಅಲುಗಾಡತೊಡಗಿತು. ಬಯಲಾಗಿ ಎಲ್ಲರಿಗೂ ತೆರೆದಿದ್ದ ಗದ್ದೆ ಅಲ್ಲಲ್ಲೇ ಬೇಲಿಯನ್ನು ನಿರ್ಮಿಸಿಕೊಂಡು ತನ್ನನ್ನು ತಾನು ಬಂಧಿಸಿಕೊಳ್ಳುವುದರ ಜೊತೆಗೆ ಬೇರೆಯವರ ಪ್ರವೇಶವನ್ನೂ ನಿರ್ಬಂಧಿಸಿತು. ಇದ್ದಕ್ಕಿದ್ದಂತೆ ಎದ್ದ ಬೇಲಿಯನ್ನು ಒಪ್ಪಿಕೊಳ್ಳುವುದು ಹೇಗೆ? ಮನುಷ್ಯರೆನೋ ಅದಕ್ಕೆ ಇನ್ನೊಂದು ಬೇಲಿಯನ್ನು ಹಾಕಿ ಸೆಡ್ಡು ಹೊಡೆಯಬಹುದು. ಅಲ್ಲಿಯವರೆಗೆ ಬಯಲಿಗೆ ಅಭ್ಯಾಸವಾಗಿದ್ದ ದನಕರುಗಳಿಗೆ ಬೇಲಿಯನ್ನು ಅರ್ಥ ಮಾಡಿಸುವುದು ಹೇಗೆ? ಬಯಲಿಗೆ ಒಗ್ಗಿದ ಹಾಗೆ ಬಂಧನಕ್ಕೆ ಒಗ್ಗುವುದು ಹೇಗೆ?
ಕಡಿಮೆಯಾಗಿದ್ದು ಕೇವಲ ಗದ್ದೆ ಆದರೆ ಹೆಚ್ಚಾಗಿದ್ದು ಮಾತ್ರ ಸಮಸ್ಯೆಗಳು. ಅಲ್ಲಿಯವರೆಗೆ ಗದ್ದೆಯಲ್ಲಿ ಬೆಳೆದ ಭತ್ತ ಮನುಷ್ಯನ ಹೊಟ್ಟೆ ತುಂಬಿಸಿದರೆ ಹುಲ್ಲು ದನಕರುಗಳ ಹಸಿವು ಹಿಂಗಿಸುತಿತ್ತು. ರಾತ್ರಿಯಿಡಿ ಕೊಟ್ಟಿಗೆಯಲ್ಲಿ ಬಂಧಿಯಾಗಿರುತಿದ್ದ ಅವು ಬೆಳಗ್ಗೆ ಎದ್ದೊಡನೆ ಕಟ್ಟು ಕಳಚಿಕೊಂಡು ಓಡಾಡಿಕೊಂಡು ಸ್ನೇಹಿತರ ಜೊತೆ ಕಾಲ ಕಳೆದು ಬರುತಿದ್ದವು. ಅಲ್ಲಲ್ಲಿ ಎದ್ದ ಬೇಲಿ ಅತಿಕ್ರಮ ಪ್ರವೇಶ ನಿಷೇಧಿಸಿದೆ ಎಂಬ ಬೋರ್ಡ್ ಹೊತ್ತು ನಿರಾಕರಿಸಿದ್ದು ಪ್ರವೇಶ ಮಾತ್ರವಲ್ಲ, ಗುಂಪಿನೊಡನೆ ಬೆರೆಯುವ ಸ್ವಾತಂತ್ರ್ಯವನ್ನೂ ಸಹ. ಹಸಿರು ಕಂಡೊಡನೆ ಹೋಗಿ ತಿನ್ನುವ ಹಾಗಿಲ್ಲ, ಪೆಟ್ಟು ತಿನ್ನುವುದು ಮಾತ್ರವಲ್ಲ ಇಬ್ಬರ ನಡುವಿನ ಜಗಳಕ್ಕೂ ಸಾಕ್ಷಿಯಾಗಬೇಕಿತ್ತು. ಈ ರಗಳೆಯೇ ಸಾಕಾದಾಗ ಬಂಧನ ಶಾಶ್ವತವಾಯ್ತು.
ಭತ್ತದ ಹಾಗಲ್ಲ ಅಡಿಕೆ, ಬೆಲೆ ಜಾಸ್ತಿಯಿದ್ದ ಹಾಗೆ ನೀರು ಜಾಸ್ತಿ ಬೇಕು. ಹಾಗಾಗಿ ಹರಿಯುತಿದ್ದ ಹಳ್ಳಗಳಿಗೂ ಕಟ್ಟು ಕಟ್ಟುವುದು ಅಭ್ಯಾಸವಾಯಿತು. ಹರಿಯುತಿದ್ದ ಹಳ್ಳಗಳು ಮೌನವಾಗುತಿದ್ದ ಹಾಗೆ ತುಂಬಿರುತಿದ್ದ ಬಾವಿಗಳೂ ಮಂಕಾಗತೊಡಗಿದವು, ಬೇಸರದಿಂದ ಒಣಗಿ ಈಗ ಒಮ್ಮೆ ಮಲೆನಾಡಿನ ಕಡೆಗೆ ಕಣ್ಣು ಹಾಯಿಸಿದರೆ ಅಲ್ಲಿಗೂ ಬಯಲು ಸೀಮೆಗೂ ವ್ಯತ್ಯಾಸ ಕಾಣುತ್ತಿಲ್ಲ. ಹಳ್ಳಗಳ ಸಾಂಗತ್ಯ ದೊರೆಯದೆ ಹೊಳೆಗಳೂ ಬತ್ತತೊಡಗಿದವು. ಒಮ್ಮೆ ಬೇಸಿಗೆಯಲ್ಲಿ ಕಣ್ಣು ಹಾಯಿಸಿದರೆ ಮಾಲತಿಯಂತ ನದಿಯೂ ಬರಡಾಗಿರುವುದು ಕಾಣುತ್ತದೆ. ನದಿಯ ಇಕ್ಕೆಲಗಳ ತೋಟದ ಬದಿಯಲ್ಲಿ ಇರುವ ಪಂಪ್ ಹೌಸ್ ಗಳ ರಕ್ಕಸ ದಾಹಕ್ಕೆ ಅವೂ ಕೂಡಾ ದಂಗಾಗಿ ಬತ್ತಿ ಹೋಗಿವೆ. ಹುಡುಕಿದರೂ ಒಂದು ಹನಿ ನೀರು ಕಾಣುವುದಿಲ್ಲ.
ಇಲ್ಲಿಗೆ ಕತೆ ಮುಗಿಯುವುದಿಲ್ಲ. ಪ್ರಕೃತಿ ಅನ್ನುವುದು ಒಂದು ಕೊಂಡಿಯ ಹಾಗೆ ಕೆಲಸ ಮಾಡುತ್ತದೆ. ಇಲ್ಲಿ ಒಂದು ಏರುಪೇರಾದರೂ ಸಾಕು ಬೆಸೆದುಕೊಂಡ ಕೊಂಡಿಗಳ ಪಾಡೂ ಹಾಗೆ ಆಗುತ್ತದೆ. ಅಡಿಕೆಯ ದಾಹ ತೀರುವಂತಹುದಲ್ಲ. ಅವುಗಳ ದಾಹ ನೀಗದೆ ಫಲ ಸಿಗುವುದಿಲ್ಲ. ಹಾಗಾಗಿ ನೀರಿಗಾಗಿ ಭೂಮಿ ಕೊರೆಯುವುದು ಅನಿವಾರ್ಯವಾಗಿದೆ. ಹಿಂದೆಲ್ಲಾ ಬಾವಿಗಾಗಿ ಭೂಮಿ ಅಗೆದರೆ ಕೇವಲ ಇಪ್ಪತ್ತು ಮೂವತ್ತು ಹೆಚ್ಚೆಂದರೆ ಐವತ್ತು ಅಡಿಗಳಲ್ಲಿ ದೊರಕುತಿದ್ದ ನೀರು ಇವತ್ತು ಬೋರ್ ಮೆಷಿನ್ ಅನ್ನು ಐನೂರು ಅಡಿಗಳವರೆಗೆ ಹೋಗಲು ಬಿಡುತ್ತಿದ್ದೆ.
ಮೊದಲೆಲ್ಲಾ ನಿನ್ನತ್ರ ಮೊಬೈಲ್ ಇದ್ಯಾ ಎಂದು ಕೇಳುವಷ್ಟೇ ಸಹಜವಾಗಿ ಇವತ್ತು ನಿಮ್ಮನೇಲಿ ಬೋರ್ ಇಲ್ವಾ ಎಂದು ಕೇಳುವ ಹಾಗಿದೆ. ಬೋರ್ ಇಲ್ಲಾ ಅಂದರೆ ಅವರ ಬದುಕೇ ವ್ಯರ್ಥ ಅನ್ನುವ ನೋಟ ಎದುರಾಗುತ್ತದೆ. ಮನೆಯಲ್ಲಿ ಇರುವ ಜನರ ಸಂಖ್ಯೆಯ ಹಾಗೆಯೆ ಬೋರ್ ಗಳ ಸಂಖ್ಯೆಯೂ ಇದೆ. ಅಪ್ಪಟ ಮಲೆನಾಡಿನ ಹತ್ತು ಕಿ.ಮಿ ಚದರದಲ್ಲಿ ನೂರು ಇನ್ನೂರು ಬೋರ್ ಗಳು ತಲೆಯೆತ್ತಿವೆ ಎಂದರೆ ಒಮ್ಮೆ ಪರಿಸ್ಥಿತಿಯನ್ನು ಊಹಿಸಿ. ಹೀಗೆ ನಡೆದರೆ ಮುಂದೊಂದು ದಿನ ಜಲಕ್ಷಾಮದಲ್ಲಿ ಬಯಲುಸೀಮೆಯನ್ನೂ ಮೀರಿಸುತ್ತದೆ ಮಲೆನಾಡು.
ಮೇಯಲು ಗದ್ದೆಯಿಲ್ಲದೆ, ತಿನ್ನಲು ಹುಲ್ಲು ಇಲ್ಲದೆ ದನಗಳನ್ನು ಸಾಕುವುದಕ್ಕಿಂತ ಹಾಲು ತರುವುದು ಸುಲಭವೆನಿಸಿದ ಮೇಲೆ ಕೊಟ್ಟಿಗೆಯ ಜಾಗ ಸುಮ್ಮನೆ ವೇಸ್ಟ್ ಅನ್ನಿಸಲು ಶುರುವಾಗಿದೆ. ಕಟ್ಟಿ ಅವುಗಳ ಹೊಟ್ಟೆ ತುಂಬಿಸಲು ಸಾಧ್ಯವೇ. ಹೊಟ್ಟೆ ತುಂಬದೆ ಹಾಲಾದರೂ ಅವು ಹೇಗೆ ಕೊಡುತ್ತವೆ. ತೋಟಕ್ಕೆ ಹಾಕಲು ಯೂರಿಯಾ ಪೇಟೆಯಲ್ಲಿ ಸಿಗುತ್ತದೆ. ಇನ್ನು ಹಸು ಸಾಕಿ ಸಾಧಿಸುವುದಾದರೂ ಏನು ಮೈ ಪರಚಿಕೊಳ್ಳುವಷ್ಟು ಕೆಲಸ ಅಷ್ಟೇ. ಬದುಕು ಸುಲಭವಾಗಿರಬೇಕು. ಮುಂದೊಂದು ದಿನ ಮಕ್ಕಳನ್ನು ಹಾಲು ಎಲ್ಲಿಂದ ಬರುತ್ತದೆ ಕೇಳಿ ಅವು ಅಂಗಡಿಯ ಕಡೆ ಕೈ ತೋರಿಸುತ್ತವೆ. ಹೇಗೂ ಜೆರ್ಸಿ ದನಗಳಿವೆ, ಲೀಟರ್ ಗಟ್ಟಲೆ ಹಾಲು ಕೊಡುತ್ತವೆ. ಅದರ ಸತ್ವ ಕಟ್ಟಿಕೊಂಡು ಏನಾಗಬೇಕಿದೆ ಹೇಳಿ?
ಈಗ ಊರಿಗೆ ಹೋಗಿ ಜಗುಲಿಯಲ್ಲಿ ಕುಳಿತರೆ ಕಣ್ಣೆದೆರು ಎತ್ತರವಾಗಿ ಬೆಳೆದ ಅಡಿಕೆ ಮರ ದೂರದ ದೃಷ್ಟಿಗೆ ಬ್ರೇಕ್ ಹಾಕಿದೆ. ಸ್ವಚಂದವಾಗಿ ಬಯಲಲ್ಲಿ ಬೆಳೆದಿದ್ದ ಬದುಕಿಗೆ ಎಲ್ಲಿ ನೋಡಿದರೂ ಬೇಲಿಯೇ ಕಾಣುತ್ತದೆ. ದಾಟಿ ಹೋಗಲಾರೆವು. ಬಯಲಿನ ಬದುಕು ಈಗ ಬಂಧನಕ್ಕೆ ಒಳಗಾಗಿ ಅದನ್ನೇ ಒಪ್ಪಿಕೊಂಡೂ ಅಪ್ಪಿಕೊಂಡು ಅದರಲ್ಲೇ ಸುಖ ಕಾಣಲು ಅಭ್ಯಾಸವಾಗಿದೆ. ಸಂಜೆಯಾಗುತಿದ್ದ ಹಾಗೆ ಜಗುಲಿಯ ಕುರ್ಚಿ ನಡುಮನೆಯಲ್ಲಿ ಸ್ಥಾಪಿತವಾಗುತ್ತದೆ. ಬೇಜಾರು ಕಳೆಯಲು ಟಿ.ವಿ ಎಂಬ ಜಾದೂಗಾರ ಬಂದು ಕುಳಿತಿದ್ದಾನೆ. ನಾವು ಸಂಪೂರ್ಣವಾಗಿ ಅವನಿಗೆ ಸಮರ್ಪಿಸಿಕೊಂಡು ಶರಣಾಗತರಾಗಿದ್ದೇವೆ.
ಒಂದು ಕೊಂಡಿ ತಪ್ಪಿದರೆ ಎಷ್ಟು ಕೊಂಡಿಗಳು ದಿಕ್ಕಾಪಾಲಾಗುತ್ತವೆ ನೋಡಿ. ಒಂದಕ್ಕೊಂದು ಸೇರಿಸುವುದು ಕಷ್ಟ, ಒಮ್ಮೆ ಬಿಡಿಸಿಬಿಡಿ ಎಷ್ಟು ಕೊಂಡಿಗಳು ಎಲ್ಲೆಲ್ಲಿ ತಪ್ಪಿ ಹೋಗುತ್ತವೆ ಅನ್ನೋದೂ ಲೆಕ್ಕಕ್ಕೂ ನಿಲುಕದೆ ಕಳಚಿಕೊಳ್ಳುತ್ತಲೇ ಹೋಗುತ್ತದೆ. ಅಷ್ಟಕ್ಕೂ ಅದನ್ನು ನೋಡಲು ಸಮಯವಾದರೂ ಎಲ್ಲಿದೆ ಹೇಳಿ. ಬಯಲ ಸುತ್ತಲೂ ಎದ್ದು ನಿಂತ ಗೋಡೆ ದೃಷ್ಟಿಯನ್ನು ಸೀಮಿತಗೊಳಿಸಿ ಬಿಟ್ಟಿದೆ. ನಾವೀಗ ಬಂಧನದೊಳಗೆ ಕುಳಿತು ಬಯಲಿಗಾಗಿ ಕನವರಿಸುತ್ತಿದ್ದೇವೆ ಅಷ್ಟೇ..
ಬಯಲಿಗೆ ಬರಲು ಯಾವ ಗೋಡೆ ಒಡೆಯಬೇಕು ಅನ್ನೋದನ್ನ ಯಾರಾದರೂ ಹೇಳ್ತಿರಾ ಪ್ಲೀಸ್...

Comments
Post a Comment