ಎತ್ತರಕ್ಕೆ ನಿಂತ ಕೆಂಪು ಬಣ್ಣದ ಕಟ್ಟಡಗಳ ಸಾಲು ಯಾವುದೋ ಕೋಟೆಯನ್ನು ಪ್ರವೇಶಿಸುವ ಭಾವವನ್ನು ಮೂಡಿಸುತ್ತದೆ. ಒಮ್ಮೆ ಎಂಟರ್ ಆದರೆ ಮ್ಯೂಸಿಯಂ, ಅಲ್ಲಿಂದ ಜಲಿಯನ್ ವಾಲಾಭಾಗ್ ಮುಂದೆ ಸ್ವರ್ಣಮಂದಿರ. ನೆಲಕ್ಕೆ ಹಾಕಿದ ಕೆಂಪುಕಲ್ಲುಗಳ ಮೇಲೆ ನಡೆಯುತ್ತಾ ಅಹಿಗೆ ಜಲಿಯನ್ ವಾಲಾಭಾಗ್ ಬಗ್ಗೆ ವಿವರಿಸುತ್ತಿದ್ದೆ. ಅದು ಮುಗಿಯುವುದಕ್ಕೂ ಅದರ ಗೇಟ್ ಎದುರಾಗುವುದಕ್ಕೂ ಸರಿಯಾಯಿತು. ಸಣ್ಣದಾದ ಓಣಿಯ ಜಾಗದಲ್ಲಿ ಹೋದರೆ ಎದುರಿಗೆ ವಿಶಾಲವಾದ ಜಾಗ ಈಗ ಪಾರ್ಕ್ ಆಗಿ ರೂಪಾಂತರವಾಗಿದೆ.

ಪಂಜಾಬ್ ನ ಅತಿ ದೊಡ್ಡ ಹಬ್ಬವೆಂದರೆ ಬೈಸಾಖಿ. ಅದರ ಆಚರಣೆಗೆಂದು ಬಂದ ಸುಮಾರು 25000 ಸಾವಿರ ಜನ ಹೆಂಗಸರು ಮಕ್ಕಳು ಎನ್ನದೆ ಗುರುಮಂದಿರದ ಸಮೀಪದ ಪಾರ್ಕ್ ನಲ್ಲಿ ವಿಶ್ರಾಂತಿಗೆಂದು ಕುಳಿತಿದ್ದರು. ಸುತ್ತಲೂ ಮನೆಗಳ ಗೋಡೆಯೇ ಬೇಲಿಯಂತಿದ್ದ ಅದಕ್ಕೆ  ಒಂದೇ ದ್ವಾರ. ಹಾಗೆ ಸೇರಿದವರನ್ನು ಸರ್ಕಾರದ ವಿರುದ್ಧ ಸಭೆ ಸೇರಿದ್ದಾರೆ ಎಂದು ತಿರ್ಮಾನಿಸಿದ ಜನರಲ್ ಡೈಯರ್ ಪ್ರವೇಶ ದ್ವಾರದ ಬಳಿಗೆ ಸಣ್ಣದೊಂದು ಸುಸಜ್ಜಿತ ಸೈನ್ಯದ ತುಕಡಿಯನ್ನು ಕಳುಹಿಸಿ ಫೈರ್ ಮಾಡಲು ಆದೇಶಿಸುತ್ತಾನೆ.

ಜಡಿ ಮಳೆಯಂತೆ ಸುರಿಯುತಿದ್ದ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಜಾಗವಿಲ್ಲದೆ ಸೇರಿದ್ದ ಹಲವರು ಅಲ್ಲೇ ಮೃತ ಹೊಂದಿದರೆ ಆ ಪ್ರಾಣಾಂತಿಕ ಧಾಳಿಯಿಂದ ಪಾರಾಗಲು ಒಂದಷ್ಟು ಜನ ಅಲ್ಲೇ ಪಕ್ಕದಲ್ಲಿದ್ದ ಬಾವಿಗೆ ಬಿದ್ದು ಸಾವನಪ್ಪುತ್ತಾರೆ. ಹೀಗೆ ಬಾವಿಗೆ ಬಿದ್ದು ಸತ್ತವರ ಸಂಖ್ಯೆ ಅವರ ಪ್ರಕಾರ 120 ಜನ. ಸುತ್ತಲಿನ ಕಟ್ಟಡಗಳ ಗೋಡೆಯ ಮೇಲೆ ಕಿಟಕಿಗಳ  ಮೇಲೆ ಬಿದ್ದ ಗುಂಡಿನ ಗುರುತುಗಳನ್ನು ಇವತ್ತಿಗೂ ನೋಡಬಹುದು. ಅಷ್ಟರ ಮಟ್ಟಿಗೆ ಸಂರಕ್ಷಣೆ ಮಾಡಿ ಇಟ್ಟಿದ್ದಾರೆ.

ಈ ಧಾಳಿಯಲ್ಲಿ ಬ್ರಿಟಿಶ್ ಅಫೀಷಿಯಲ್ ಡಾಕ್ಯುಮೆಂಟ್ ಪ್ರಕಾರ ಸತ್ತವರ ಸಂಖ್ಯೆ ಕೇವಲ 379. ಆದರೆ ಕಾಂಗ್ರೆಸ್ ನಡೆಸಿದ ಶೋಧದ ಪ್ರಕಾರ ಸತ್ತವರ ಸಂಖ್ಯೆ ಸಾವಿರಕ್ಕೂ ಹೆಚ್ಚು, ಗಾಯಗೊಂಡವರು ಅದಕ್ಕೂ ಮೀರಿ. ಇದಿಷ್ಟು ದೈಹಿಕವಾಗಿ ಘಾಸಿಗೊಂಡವರ ಲೆಕ್ಕವಾದರೆ ಆ ಘಟನೆಯಿಂದ ಮಾನಸಿಕ ಆಘಾತಗೊಂಡವರ ಬಗ್ಗೆ ಯಾವ ದಾಖಲೆಯೂ ಇಲ್ಲ.

ಇವನ್ನೆಲ್ಲಾ ನೋಡುತ್ತಾ ವಿವರಣೆ ಕೇಳುತ್ತಾ ಬರುತಿದ್ದ ಅಹಿಯ ಮುಖ ನಿಧಾನಕ್ಕೆ ಕೆಂಪಾಗುತಿತ್ತು. ಬಿಸಿಲಿನ ಕಾವಿಗೆನೋ ಅಂದುಕೊಂಡರೆ ತಟ್ಟನೆ ಗುಂಡಿನಂತೆ ಪ್ರಶ್ನೆ ತೂರಿ ಬಂತು. ಇಷ್ಟೆಲ್ಲಾ ಆದರೂ ಅಹಿಂಸೆ ಅಂತ ಗಾಂಧಿಜಿ ಸುಮ್ನೆ ಇದ್ರೆನಮ್ಮಾ... ಅಷ್ಟೊಂದು ಜನ ವಿನಾಕಾರಣ ಪ್ರಾಣ ಕಳೆದುಕೊಂಡರೂ ಸುಮ್ಮನೆ ಇರೋಕೆ ಹೇಗೆ ಆಗುತ್ತೆ ಅವರಿಗೂ ಬುದ್ಧಿ ಕಲಿಸಬೇಕು ಅಲ್ವಾ ಏನೂ ಮಾಡದೆ ತಾಳ್ಮೆ ಸುಮ್ಮನಿರಿ ಅಂದೋರು ನಾಯಕರು ಹೇಗಾಗ್ತಾರೆ ಒಬ್ರೂ ಪ್ರತಿಕಾರ ತಗೊಳೋ ಮನಸ್ಸು ಮಾಡಲಿಲ್ವಾ ಅಂದ್ಲು. ಈಗ ಎಷ್ಟೋ ವರ್ಷಗಳ ಹಿಂದೆ ನಡೆದ ಘಟನೆಯ ಕುರುಹು ನೋಡಿದರೆ ರಕ್ತ ಈ ಪರಿ ಕುದಿಯುತ್ತದೆ ಆಗಿನ ಪರಿಸ್ಥಿತಿ ಹೇಗಿರಬಹುದು ಅಂತ ಆಲೋಚಿಸುತ್ತಲೇ ಇದ್ದೆ.

ಅಷ್ಟಾದ್ರೂ ಇವತ್ತಿಗೂ ನಾವು ಅವರ ಭಾಷೇನೆ ಮಾತಾಡ್ತಾ ಅವರನ್ನು ಒಳಗೆ ಬಿಟ್ಟುಕೊಳ್ತಿವಲ್ಲ ಅಮ್ಮಾ ಯಾಕ್ ನಾವಿಷ್ಟು ಸ್ವಾಭಿಮಾನ ಶೂನ್ಯರು, ನನ್ನ ಕೈಯಲ್ಲಿ ರಿವಾಲ್ವರ್ ಇದ್ದಿದ್ರೆ ಹೋಗಿ ಅವರನ್ನು ಶೂಟ್ ಮಾಡಿ ಬರ್ತಾ ಇದ್ದೆ ಅಂದ್ಲು. ಯಾಕೋ ಈ ನನ್ನ ಮಗಳು ನನಗಿಂತ ತೀವ್ರವಾದಿ ಅನ್ನಿಸಿ ಒಂದು ಕ್ಷಣ ಭಯವಾಯ್ತು. ಪರಿಸ್ಥಿತಿ ಹದಗೆಡುತ್ತಿರುವುದು ಗಮನಿಸಿದ ಅವಳ ಮಾವ ಹಾಗಲ್ಲ ಪುಟ್ಟಿ ಇದನ್ನ ವಿರೋಧಿಸಿ ಹೊರಾಡಿದವರೂ ಇದ್ದಾರೆ. ಭಗತ್ ಸಿಂಗ್, ಖುಧಿರಾಂ ಬೋಸ್, ಸಾವರ್ಕರ್, ಸುಭಾಷ್ ಚಂದ್ರ ಬೋಸ್ ಇವರೆಲ್ಲಾ ಕ್ರಾಂತಿಯೇ ಸರಿಯಾದ ಮಾರ್ಗ ಅಂತ ಹೋರಾಡಿದವರು. ಅವರನ್ನು ಗಲ್ಲಿಗೆ ಏರಿಸಿ, ಜೈಲಿಗೆ ಹಾಕಿ ಬ್ರಿಟಿಷರು ಶಿಕ್ಷೆ ಕೊಡ್ತಾರೆ ಅಂದ. ಹಾಗಿದ್ರೆ ಅವರಿಗೆಲ್ಲಾ ಸಾವು, ಸುಮ್ಮನೆ ಇದ್ದವರಿಗೆ ಅಧಿಕಾರ, ಹೆಸರು ಅಲ್ವಾ ಅಂದ್ಲು. ಅಲ್ಲಿಗೆ ಮಾವನೂ ಮೌನಕ್ಕೆ ಮೊರೆಹೋಗುವುದು ಒಳ್ಳೆಯದು ಅನ್ನಿಸಿ ಪಾಲಿಸ ತೊಡಗಿದ.

ಮುಂದೆ ಬಂದರೆ ಅಲ್ಲೊಂದು ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಅದರ ಎದುರಿಗೆ ಫೋಟೋ ಗಾಗಿ ದೊಡ್ಡ ಸಂಖ್ಯೆಯೇ ಸೇರಿತ್ತು. ಆ ಸ್ಮಾರಕದ  ಮೇಲೆ ಚಪ್ಪಲಿ, ಶೂ ಧರಿಸಿ ತರತರಹದ ಪೋಸ್ ಕೊಟ್ಟು ಫೋಟೋ ತೆಗೆದುಕೊಳ್ಳುವುದರಲ್ಲಿ ಎಲ್ಲರೂ ಬ್ಯುಸಿ ಆಗಿದ್ದರು. ಚಪ್ಪಲಿ ಕಳಚಿಟ್ಟ ಇವಳು ಅತ್ತ ಹೋಗುವುದನ್ನು ನೋಡಿ ಫೋಟೋ ತೆಗಿ ಅಂತಾಳೆನೋ ನೋಡಿದೆ. ಹೋಗಿ ಕೈ ಮುಟ್ಟಿ ಕಣ್ಣಿಗೆ ಒತ್ತಿಕೊಂಡಳು. ಸಮಾಧಾನದ ಉಸಿರು ಬಿಟ್ಟೆ.

ಹೌದು ಯಾರೂ ಪ್ರತಿಕಾರದ ಕೆಲಸ ಮಾಡಲೇ ಇಲ್ಲವೇ ಅನ್ನುವ ಪ್ರಶ್ನೆಯೊಂದು ಸುಳಿ ಸುತ್ತುತ್ತಲೇ  ಇತ್ತು.  ಜೊತೆಗೆಒಳಗಿದ್ದ ಆಕ್ರೋಶ ಸಿಂಬೆಯಿಂದ ಮೆಲ್ಲಗೆ ಏಳುತ್ತಿತ್ತು. ಕ್ಷಾತ್ರ ತೇಜಸ್ಸಿನ ಈ ನೆಲವನ್ನು ತಾಳ್ಮೆ, ಸಹನೆ, ಶಾಂತಿ ಅನ್ನುವ ಹೆಸರಿನಲ್ಲಿ ದುರ್ಬಲರನ್ನಾಗಿಸಿದ್ದು ಯಾರು ಅನ್ನುವ ಪ್ರಶ್ನೆಯೂ ಕಾಡಲು ಶುರುವಾಯ್ತು. ಅಥವಾ ನಮ್ಮ ದೌರ್ಬಲ್ಯಕ್ಕೆ ಇವೆಲ್ಲಾ ಹೆಸರಿಟ್ಟು ಸಮರ್ಥನೆ ಮಾಡಿಕೊಳ್ಳುತ್ತಿದ್ದೆವಾ ಅನ್ನೋ ಸಂದೇಹವೂ ಕೂಡಾ. ಸ್ವಾಭಿಮಾನ ಇಲ್ಲದ ಬದುಕೂ ಒಂದು ಬದುಕಾ ಅಂತ ಸ್ವಲ್ಪ ವಿಷಾದ, ಸ್ವಲ್ಪ ಸಿಟ್ಟಿನಲ್ಲಿ ಹೊರಗೆ ಬರುವಾಗ ಬಾಗಿಲಿಗೆ ಎದುರಾದ ಒಂದು ಸ್ತ್ಯಾಚೂ ಕಾಣಿಸಿತು.

ಚಿಕ್ಕ ವಯಸ್ಸಿನಲ್ಲೇ ತಂದೆತಾಯಿಯನ್ನು ಕಳೆದುಕೊಂಡು ಅನಾಥನಾಗಿ ಬೆಳೆದ  ಶಾಹೀದ್ ಉಧಾಮ್ ಸಿಂಗ್ ಗೆ ಈ ಘಟನೆ ನಡೆಯುವಾಗ ಕೇವಲ 20 ವರ್ಷ. ಈ ವಿದ್ರಾವಕ ಘಟನೆಯ ಪ್ರತ್ಯಕ್ಷ ದರ್ಶಿ ಕೂಡಾ. ಇದು ಅವನ ಮನಸ್ಸಿನಲ್ಲಿ ಆಳವಾಗಿ ಅಷ್ಟೇ ಗಾಢವಾಗಿ ಉಳಿದುಕೊಂಡು ಬಿಡುತ್ತದೆ. ಪ್ರತಿಕಾರಕ್ಕಾಗಿ ಮನಸ್ಸು ಹಾತೊರೆಯುತ್ತದೆ. ತನ್ನ ಜೀವನವನ್ನು ಈ ಹೋರಾಟಕ್ಕಾಗಿ ಮೀಸಲಿಡುವ ಅವನು ವಿವಿಧ ಹೆಸರುಗಳಿಂದ ಆಫ್ರಿಕಾ, ನೈರೋಬಿ, ಬ್ರೆಜಿಲ್, ಅಮೇರಿಕಾ ಸಂಚರಿಸಿ ಯೋಜನೆಯನ್ನು ತಯಾರಿಸುತ್ತಾನೆ. ಕೊನೆಗೂ 1940 ರಲ್ಲಿ ಜನರಲ್ ಮೈಖೇಲ್ ಡಯರ್ ಅನ್ನು ಕೊಲ್ಲುವುದರಲ್ಲಿ  ಯಶಸ್ವಿಯಾಗಿ ವಿಚಾರಣೆ ನಡೆದು ಗಲ್ಲು ಶಿಕ್ಷೆಗೆ ಪಾತ್ರನಾಗುತ್ತಾನೆ.

ಆ ಎಳೆಯ ಜೀವದ ಕೆಚ್ಚು, ಹಠ, ತನ್ನ ದೇಶವಾಸಿಗಳ ಬಗೆಗಿನ ಪ್ರೀತಿ ವಿವರಿಸುವಾಗ ಕಣ್ಣ ತಂತಾನೇ ಒದ್ದೆಯಾಗುತಿತ್ತು. ನೋಡಿದ್ಯಾ ಅಹಿ ಎಲ್ಲರೂ ಸುಮ್ಮನೆ ಇರಲಿಲ್ಲ ಅವರಿಗೂ ಕೋಪ ಬಂದಿತ್ತು ಅಂತ ಅವಳ ಮುಖ ನೋಡಿದರೆ ತನ್ನ ಶರ್ಟ್ ನಿಂದ ಕಣ್ಣು ಒರೆಸಿಕೊಳ್ಳುತ್ತಲೇ ತಲೆಯಾಡಿಸಿತು. ಒಳಗಿದ್ದ ಅವನ ಚಿತಾಭಸ್ಮಕ್ಕೆ ಒಮ್ಮೆ ನಮಸ್ಕರಿಸಿ ಬರ್ತೀನಿ ಅಂತ ಮತ್ತೆ ಒಳಗೆ ಹೋದವಳನ್ನೇ ನೋಡುತ್ತಾ ಅವನದೊಂದು ಫೋಟೋ ತೆಗೆಯೋಣ ಅಂತ ತಿರುಗಿದರೆ ಅವನ ವಿಗ್ರಹದ ಕೆತ್ತಿರುವ ಕಲ್ಲಿನ  ಮೇಲೆ ನಿಂತು ನಾಲಿಗೆ ಹೊರಹಾಕಿ, ಕತ್ತುಓರೇ ಮಾಡಿ, ಕಣ್ಣು ತಿರುಗಿಸಿ ಫೋಟೋ ತೆಗೆದುಕೊಳ್ಳುವ ಒಂದು ಗುಂಪೇ ಕಾಣಿಸಿತು.

ಅವನ ಬಗ್ಗೆ ತಿಳಿದ್ದಿದ್ದರೆ, ಅವನ ತ್ಯಾಗದ ಬೆಲೆ ಅರ್ಥವಾಗಿದ್ದರೆ, ಇಂಥಹ ಹಲವರ ಹೆಣದ ಮೇಲೆಯೇ ನಮ್ಮ ಸ್ವಾತಂತ್ರ್ಯ ನಿಂತಿದೆ ಅನ್ನೋದು ಗೊತ್ತಾಗಿದ್ದರೆ ರಕ್ತ ಕುಡಿಯುವುದು ಹೋಗಲಿ ಕೊನೆಪಕ್ಷ ವರ್ತನೆಯಲ್ಲಿ ಒಂದು ಸ್ವಲ್ಪ ಗೌರವವಾದರೂ ಕಾಣಿಸುತ್ತಿತ್ತು. ಸ್ಮಾರಕದ ನಿರ್ಮಿಸಿದ ಕಂಬಗಳನ್ನು ಒಮ್ಮೆ ನೇವರಿಸಿ ಕಣ್ಣಿಗೆ ಒತ್ತಿ ಕೊಳ್ಳುತ್ತಿದ್ದೆವೆಯೇ ಹೊರತು ಅದರ ಮೇಲೆ ತಮ್ಮ ಹೆಸರೋ, ಮತ್ತೇನೋ ಗೀಚಿ ತೆವಲು ತೀರಿಸಿಕೊಳ್ಳುತ್ತಿರಲಿಲ್ಲ ಅನ್ನಿಸಿತು.

 ಅವರ ತ್ಯಾಗ ನಮ್ಮಲ್ಲಿ ಗೌರವ ಹುಟ್ಟಿಸುವುದು ಹೋಗಲಿ ಕೊನೆಪಕ್ಷ ಅವಮಾನ ಮಾಡಬಾರದು ಅನ್ನುವ  ಸೆನ್ಸ್  ಕೂಡಾ ಇಲ್ಲವಲ್ಲ ಹಾಗಿದ್ದರೆ  ನಾವೆಷ್ಟು ನರಸತ್ತ ಇತಿಹಾಸವನ್ನು ಕಲಿಸುತ್ತಿದ್ದೇವೆ ನೋಡಿ...


Comments

Popular posts from this blog

ಮೇಲುಸುಂಕ.

ಮಾತಂಗ ಪರ್ವತ

ಕೇಪಿನ ಡಬ್ಬಿ.