ರೋಣಗಲ್ಲು.

ಗದ್ದೆ ಕುಯಿಲು ಯಾವಾಗ ಅನ್ನುವುದು ನಿರ್ಧಾರವಾಗುತ್ತಿದ್ದ ಹಾಗೆ ಸಂಭ್ರಮವೂ ಒಂದೊಂದೇ ಗರಿಯನ್ನು ತಂದು ಗೂಡು ಕಟ್ಟುತಿತ್ತು. ಅಲ್ಲಿಂದ ಒಂಥರಾ ಜಾತ್ರೆಯೇ. ಉದ್ದ ತೋಳಿನ ಷರಟು ಧರಿಸಿ, ಕೈಯಲ್ಲೊಂದು ಕತ್ತಿ ಹಿಡಿದು ಹೊರಡುವ ಗುಂಪು ಯದ್ಧಕ್ಕೆ ಹೊರಟ ಸೈನಿಕರ ಹಾಗೆ ಕಾಣುತಿತ್ತು. ಒಮ್ಮೆ ಗದ್ದೆಗೆ ಇಳಿದರು ಎಂದರೆ ಅಲ್ಲೊಂದು ಶಬ್ಧಗಳ ಜಾತ್ರೆ. ಶ್ರುತಿ ಹಿಡಿದಂತೆ ಎಲ್ಲರ ಕತ್ತಿಯ ಸರಬರ ಸದ್ದು, ಅದನ್ನು ಮೀರಿಸುವ ಮಾತು, ನಗು, ಗಲಾಟೆ. ಯಾವ ಸುದ್ದಿ ಚಾನೆಲ್ ಗೂ ಕಡಿಮೆಯಿಲ್ಲದಂತೆ ಬಿತ್ತರವಾಗುವ ಸುದ್ಧಿಗಳು. ಸಂಜೆಯ ಹೊತ್ತಿಗೆ ಉರುಳಿದ ಕಳೇಬರಗಳ ಹಾಗೆ ಕಾಣುವ ಭತ್ತದ ಅರಿ. ಅಸ್ತವ್ಯಸ್ತ ರಣರಂಗದ ಹಾಗಿನ ಗದ್ದೆಗಳು ಮತ್ತು ಯುದ್ಧ ಗೆದ್ದು ಸುಸ್ತಾಗಿ ಹೈರಾಣಾಗಿ ಬರುವ ಸೈನಿಕರ ಹಾಗೆ ಕಾಣುವ ಜನಗಳು. ಸುಸ್ತಲ್ಲೂ ನಗು ಮಾತ್ರ ಚಿರಸ್ಥಾಯಿಯಾಗಿರುತಿತ್ತು.

ಗದ್ದೆಯ ಅಂಚಿನಲ್ಲಿ ಕುಳಿತು ಕೊಳ್ಳಲು ಅಷ್ಟೇ ಪರ್ಮಿಷನ್ ದೊರಕಿದ ಮಕ್ಕಳದು ಇನ್ನೊಂದು ತರಹದ ಸಮಸ್ಯೆ.  ನೋಡುತ್ತಾ ನೋಡುತ್ತಾ ರಣೋತ್ಸಾಹ ಉಕ್ಕಿ ಮುನ್ನುಗ್ಗುವ ಸನ್ನಿವೇಶದಲ್ಲಿ ಹೋಗಬೇಡಾ ಕೈ ಮೈಎಲ್ಲಾ ಉರಿ ತುರಿಕೆ ಶುರುವಾಗುತ್ತೆ, ಭತ್ತ ಕೊಯ್ಯುವ ಬದಲು ಕೈ ಕೊಯ್ದರೆ ಕಷ್ಟ ಅನ್ನುವ ಅಜ್ಜಿಯ ಧ್ವನಿ ಹೆದರಿ  ಶಸ್ತ್ರತ್ಯಾಗ ಮಾಡುವ ಹಾಗೆ ಮಾಡಿ ಶರಣಾಗತರಾಗುವ ಹಾಗೆ ಮಾಡಿದರೂ ಗದ್ದೆಯ ಅಂಚಿನಲ್ಲಿ ಕುಳಿತು ನೋಡುವ ಉತ್ಸಾಹ ಮಾತ್ರ ಬತ್ತುತ್ತಿರಲಿಲ್ಲ. ಭತ್ತದ ಗದ್ದೆಯಲ್ಲಿ ಬತ್ತದ ಉತ್ಸಾಹ ಅಂತ ಏನೋ ಹೊಸದಾಗಿ ಕಂಡು ಹಿಡಿದವರಂತೆ ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವುದು ಸಹ ನಡೆಯುತ್ತಿತ್ತು. ಅದೇ ಉತ್ಸಾಹದಲ್ಲಿ ಮುನ್ನುಗ್ಗಿ ತೆನೆಯ ಬೀಸುವಿಕೆಗೆ ಸಿಲುಕಿ ಮೈಕೈ ರಕ್ತಸಿಕ್ತವಾಗುವುದೂ ಇತ್ತು. ಭತ್ತದ ತೆನೆ ನೋಡಲು ಚೆಂದವಾಗಿ ಕಂಡರೂ ಚೂಪು. ಒಮ್ಮೆ ಸಣ್ಣನೆ ಸವರುವ ಗಾಳಿಗೆ ತಲೆ ತೂಗಿದರು ಸಾಕು ಚರ್ಮ ಹರಿದು ಹೋಗುತ್ತದೆ. ಏನಾಗಲಿ ಮುಂದೆ ಸಾಗು ನೀ ಅನ್ನೋದು ನಮ್ಮ ಮಂತ್ರವಾಗಿದ್ದ ಕಾಲವದು ಹಾಗಾಗಿ ಸಣ್ಣ ಪುಟ್ಟ ಗಾಯಗಳು ನಮ್ಮನ್ನು ತಡೆಯಲು ಸೋಲುತ್ತಿದ್ದವು.

ಒಮ್ಮೆ ಕೊಯಿಲು ಮುಗಿದ ಮೇಲೆ ಅದನ್ನು ಹೊರೆ ಕಟ್ಟುವ ಕೆಲಸ. ಅಟ್ಟದ ಮೇಲಿಟ್ಟ ಹಗ್ಗಗಳು ಬೆಳಕನ್ನು ನೋಡಲು ಹೊರಬರುತ್ತಿದ್ದವು. ಅರಿ ಕಟ್ಟಲು ವಿಶೇಷತೆ ಗೊತ್ತಿರಬೇಕು. ಹಾಗಾಗಿ ಒಂದಿಬ್ಬರು ಆ ಕೆಲಸ ಮಾಡಿದರೆ ಉಳಿದವರು  ಒಂದೊಂದೇ ಅರಿಯನ್ನು ತಂದು ಕೊಟ್ಟರೆ  ಹೊರೆ ಕಟ್ಟಿ ಅದನ್ನು ಹೊರಿಸುತ್ತಿದ್ದರು. ಅಲ್ಲಿಂದ ಶುರುವಾಗುವ ಮೆರವಣಿಗೆ ಸಾಲಾಗಿ ಬಂದು  ತಂದು ಕಣದ ಮೂಲೆಯಲ್ಲಿ ಕುತ್ತರಿ ಮಾಡುತಿದ್ದರು. ಆ ಕುತ್ತರಿ ಹಾಕುವುದು ಸಹ ಎಲ್ಲರಿಗೂ ಬರುತ್ತಿರಲಿಲ್ಲ. ಕೆಳಗೆ ಅಗಲವಾಗಿ ಶುರುವಾಗುತಿದ್ದ ಕುತ್ತರಿ ಹೊರೆ ಎಷ್ಟಿದೆ ಅನ್ನುವುದರ ಅಂದಾಜಿನ ಮೇಲೆ ಎತ್ತರವನ್ನು ಏರುತಿತ್ತು.

ಹೋಗುತ್ತಾ ಹೋಗುತ್ತಾ ಸಣ್ಣದಾಗಿ ಕೊನೆಯಲ್ಲೂ ಚೂಪಾಗಿ ಚೌಲವಾಗದ ಮಕ್ಕಳ ತಲೆಯ ಮೇಲೆ ಕಟ್ಟಿದ ಜುಟ್ಟಿನಂತೆ ಒಂದು ಜುಟ್ಟು ಹಾಕಿಕೊಂಡು ಬೀಗುತ್ತಿತ್ತು. ಯಾರೋ ಒಬ್ಬರಿಬ್ಬರು ಮಾತ್ರ ಕುತ್ತರಿ ಹಾಕುವ ಕೆಲಸ. ರೂಪ ಕೆಡದಂತೆ, ಆಚೀಚೆ ಪೈರು ಬೀಳದಂತೆ ಎಲ್ಲಿ ನಿಂತು ನೋಡಿದರೂ ವೃತ್ತಾಕಾರವಾಗಿ ಶಿಸ್ತಿನಿಂದ ಕುಳಿತಿರುವ ಹಾಗೆ ಕಾಣಬೇಕಿತ್ತು. ಒಂದು ವೇಳೆ ಅಕಾಲಿಕ ಮಳೆ ಬಂದರೂ ಒಂದೂ ಹನಿ ಒಳಗಿಳಿಯದಂತೆ ಭದ್ರವಾಗಿ ಇರಬೇಕಿತ್ತು. ಹಾಗಾಗಿ ಅದನ್ನು ನೋಡುತ್ತಾ ಆಗಾಗ  ತಲೆ ಹೊರಹಾಕುವ ತುಂಟ ಮಕ್ಕಳನ್ನು ಬಡಿದು ಒಳಗೆ ಅಟ್ಟುವಂತೆ ಒಂದು ಹಲಗೆಯಿಂದ ಅದನ್ನು ಬಡಿದು ಸರಿ ಮಾಡುತ್ತಿದ್ದರು. ಶಿಸ್ತು ಕಲಿಸುವುದು, ಕಲಿಯುವುದು ಎರಡೂ ಕಷ್ಟವೇ ಅನ್ನಿಸುತಿತ್ತು ಅದನ್ನು ನೋಡಿದಾಗಲೆಲ್ಲ.

ಪ್ರತಿಯೊಂದರಲ್ಲೂ ಎಷ್ಟು ಶಿಸ್ತು ರೂಡಿಸಿಕೊಂಡಿದ್ದರು ನಮ್ಮ ಹಿರಿಯರು ಅನ್ನುವುದು ನೋಡಿದಾಗಲೆಲ್ಲ ಅಚ್ಚರಿಯೇ. ಯಾವ ಕೆಲಸ ಮಾಡಿದರೂ ಅಲ್ಲಿ ಶಿಸ್ತು, ಕೌಶಲ ಎರಡೂ ಎದ್ದು ಕಾಣುತಿತ್ತು. ಕಲೆ ಯಾವುದರಲ್ಲಿ ಇಲ್ಲ ಹೇಳಿ? ಶ್ರದ್ಧೆಯಿಂದ ಮಾಡಿದರೆ ಸಕಲವೂ ಕಲೆಯ ಸ್ವರೂಪವೇ. ಇಡೀ ಊರು ಒಂದಾಗಿ ಕೆಲಸ ಮಾಡುತಿತ್ತು. ಏನೇ ಮನಸ್ತಾಪ, ಕೋಪ ತಾಪಗಳಿದ್ದರೂ ಅಂತಿಮವಾಗಿ ಹೊಂದಿಕೊಂಡು ನಡೆಯುವುದೇ ಬದುಕು ಎನ್ನುವುದು ಕೃಷಿಯ ಪ್ರತಿ ಕೆಲಸಗಳಲ್ಲೂ ಎದ್ದು ಕಾಣುತಿತ್ತು. ಗುಂಪಿಲ್ಲದೆ ಒಂಟಿಯಾಗಿ ಮಾಡುವ ಕೆಲಸವಾದರೂ ಯಾವುದಿತ್ತು.

ಹೀಗೆ ಕುತ್ತರಿ ಹಾಕಿದ ಮೇಲೆ ಒಂದು ಹಂತದ ಕೆಲಸ ಮುಗಿದ ನಿಶ್ಚಿಂತೆ ಹಿರಿಯರಾದರೆ, ಒಕ್ಕಲಾಟ ಯಾವಾಗ ಅಂತ ಕನಸು ಕಾಣುವುದು ನಮ್ಮ ಕೆಲಸ. ವಿಶಾಲವಾದ ಕಣದಲ್ಲಿ ಕುತ್ತರಿಯನ್ನು ಬಿಡಿಸಿ ಅಲ್ಲಿಂದ ತೆಗೆದ ಪೈರನ್ನು ವೃತ್ತಾಕಾರವಾಗಿ  ಹರಡಿ ಎತ್ತನ್ನು ಹೂಡಿದರೆ ಎತ್ತುಗಳ ಜೊತೆಗೆ ನಾವೂ ಸುತ್ತ  ತಿರುಗುತ್ತಿದ್ದೆವು. ಬಿಸಿಲು ಏರುವ ಮೊದಲು ಎತ್ತು ಹೊಡಿ ಸೂರ್ಯ ನಡು ನೆತ್ತಿಗೆ ಬರುವ ವೇಳೆಗೆ ಒಕ್ಕುವ ಕೆಲಸ ಮುಗಿಯುತ್ತಿತ್ತು. ಇಲ್ಲವಾದರೆ ಆ ಬಿರು ಬಿಸಿಲಿಗೆ ಹುಲ್ಲಿನ ಮೇಲೆ ಸುತ್ತುವುದು ಎತ್ತಿಗೂ ಕಷ್ಟವೇ. ಹೈಯಾ ಎನ್ನುವ ಸದ್ದು, ಎತ್ತಿನ ಕೊರಳಿನ ಗೆಜ್ಜೆಯ ಕಿಂಕಿಣಿ ನಾದ, ಕಾಯಲ್ಲಿ ಬಣ್ಣದ ದಾರ ಸುತ್ತಿದ ಕೋಲು ಅದನ್ನು ಗಾಳಿಯಲ್ಲಿ ಬೀಸುವಾಗ ಹೊರಡುವ ಸುಯ್ಯನೆ ಸದ್ದು ಜೊತೆ ಜೊತೆಗೆ ನಮ್ಮ ಹೆಜ್ಜೆಯ ಸಪ್ಪಳ. ಇವೆಲ್ಲವೂ ಸೇರಿ ತೆನೆಯಿಂದ ಭತ್ತವನ್ನು ಬೇರೆಯಾಗಿ ಮಾಡಿ ಅದು ಹುಲ್ಲಿನ ಅಡಿ ಸೇರಿ ಕಿವಿ ಮುಚ್ಚಿಕೊಳ್ಳುತಿತ್ತು. ಇನ್ನು ಸಂಜೆಯವರೆಗೆ ವಿಶ್ರಾಂತಿ. ಆಗ ನಮ್ಮ ಆಟ ಶುರುವಾಗುತ್ತಿತ್ತು. ಒಕ್ಕಿ ಹದವಾಗಿದ್ದ ಹುಲ್ಲಿನ ಮೇಲೆ ಪಲ್ಟಿ ಹೊಡೆಯುವುದು, ಜೂಟಾಟ ಆಡೋದು, ಉರುಳಾಡೋದು ಮುಂತಾದ ಸಾಹಸ ಕ್ರೀಡೆಗಳು ನಡೆದು ಆಕಾಶ ಕೆಂಪಾಗುವ ವೇಳೆಗೆ ನಾವೂ ಕೆಂಪಾಗಿ ಒಳಗೆ ಬರುತಿದ್ದೆವು.

ಆಡುವ ಹುಮ್ಮಸ್ಸಿನಲ್ಲಿ ಗೊತ್ತಾಗದ ಹುಲ್ಲು ಚುಚ್ಚುವಿಕೆ ಒಳಗೆ ಬರುತಿದ್ದಂತೆ ಅರಿವಿಗೆ ಬರುತಿತ್ತು. ಮೈಯೆಲ್ಲಾ ಉರಿ ತುರಿಕೆ. ಎರಡೂ ಕೈಗಳೂ ಸಾಲದೆ ಇನ್ಯಾರಾದರೂ ಕೈ ಸಾಲ ಕೊಡಬಾರದಾ ಅನ್ನಿಸುತಿತ್ತು. ಮೈ ಮೇಲೆ ಬಿಸಿನೀರು ಬಿದ್ದರಂತೂ ಬಚ್ಚಲಲ್ಲೇ ತಾಂಡವ ನೃತ್ಯ ಶುರುವಾಗುತ್ತಿತ್ತು. ನಾಳೆಯಿಂದ ಮಾತ್ರ ಹುಲ್ಲಿನ ಸುದ್ದಿಗೆ ಹೋಗಬಾರದು ಅನ್ನುವ ಭೀಷ್ಮ ಪ್ರತಿಜ್ಞೆ ಯೂ ಅಲ್ಲೇ ಜರುಗುತ್ತಿತ್ತು. ಮತ್ತೆ ನಾಯಿ ಬಾಲ ಡೊಂಕು ಅನ್ನುವ ಹಾಗೆ ಹರಡುವಾಗ ಮತ್ತಲ್ಲೇ ಹೋಗಿ ರೋಣಗಲ್ಲಿನ ಹಿಂದೆ ಅಷ್ಟೇ ಏಕಾಗ್ರತೆಯಿಂದ ಸುತ್ತುವುದೂ, ಆಡುವುದೂ ಸಾಂಗವಾಗಿ ನೆರವೇರುತಿತ್ತು.

ಸಂಜೆ ಹುಲ್ಲು ಬೀಸುವ ಕಾರ್ಯಕ್ರಮ. ಅಷ್ಟಷ್ಟೇ ಹುಲ್ಲು ತೆಗೆದು ಅದನ್ನು ಜಪ್ಪಿ ಹೊರೆಯಾಗಿಸುವ ಕೆಲಸ ನೋಡೋಕೆ ಸುಲಭವೆನಿಸಿದರೂ ಅಲ್ಲೊಂದು ಕುಶಲತೆ ಇರುತಿತ್ತು. ಒಂದಷ್ಟು ಜನರು ಸೇರಿಕೊಂಡು ಮತ್ತೆ ಹರಟೆ ನಗುವಿನಲ್ಲಿ ತೊಡಗುತ್ತಾ ಹುಲ್ಲನ್ನು ಒಟ್ಟುಮಾಡಿ ಅದನ್ನು ಜಪ್ಪಿ ಸೇರದವುಗಳನ್ನ ಹೊರಗೆ ಹಾಕಿ ಅದರಲ್ಲೇ ಒಂದಷ್ಟು ಹುಲ್ಲು ತೆಗೆದುಕೊಂಡು ಅದನ್ನೇ ಹಗ್ಗವಾಗಿಸಿ ಹೊರೆ ಕಟ್ಟುತ್ತಿದ್ದರು. ಒಂದು ರೂಪಕ್ಕೆ ಬರಲು ಎಷ್ಟು ನೋಯಬೇಕು, ಎಷ್ಟು ಪೆಟ್ಟು ತಿನ್ನಬೇಕು ನೋಡಿ? ಸುಲಭಕ್ಕೆ ಯಾವುದೂ ದೊರಕುವುದಿಲ್ಲ, ದೊರಕಿದ್ದು ಗಟ್ಟಿಯಾಗಿರುವುದಿಲ್ಲ ಎಂದೂ ಗೊತ್ತಿದ್ದೂ ಅದನ್ನೇ ಆಯ್ದುಕೊಳ್ಳುವುದು ಮನುಷ್ಯನ ಮೂರ್ಖತನವಾ? ಬುದ್ಧಿವಂತಿಕೆಯಾ ಅನ್ನೋದು ಈ ಕ್ಷಣಕ್ಕೂ ಅರ್ಥವಾಗದ ವಿಷಯವೇ... ಮಧ್ಯದಲ್ಲಿ ಒಂದು ಸಣ್ಣ ವಿಶ್ರಾಂತಿ ಇಬ್ಬನಿ ಸುರಿಯುವ ಚಳಿ ವಾತಾವರಣಕ್ಕೆ ಬಿಸಿ ಬಿಸಿಯಾದ ಕಾಫಿ ಕುಡಿದು ಮತ್ತೆ ಕೆಲಸ ಶುರು.

ಮುಂಜಾವಿನಲಿ ಒಟ್ಟಾಗಿಸಿದ್ದ ಭತ್ತವನ್ನು ತೂರಿ ಧೂಳು, ಹೊಟ್ಟು ಬೇರೆ ಮಾಡುವ ಕೆಲಸ . ಎಷ್ಟೇ ಗಟ್ಟಿ ಅಂದುಕೊಂಡರೂ ಬದುಕಿನ ಗತಿಯಲ್ಲಿ ಧೂಳು ಕಸಕಡ್ಡಿ ಜೊತೆಯಾಗುತ್ತದೆ. ಏನೇ ಜೊತೆಯಾದರೂ ನಿಲ್ಲುವುದು ಮಾತ್ರ ಗಟ್ಟಿ ಕಾಳು ಮಾತ್ರ. ಆ ಗಟ್ಟಿಯನ್ನು ಗುರುತಿಸಬೇಕಾದರೆ ತೂರ ಬೇಕು.  ಹಾಗೆ ತೂರುವಾಗ ಗಾಳಿ ಬೀಸುವ ದಿಕ್ಕು ನೋಡಿಕೊಳ್ಳಬೇಕು. ಹಾಗೆ ಗಾಳಿಯ ದಿಕ್ಕನ್ನು ಹಿಡಿದು ಮೊರದಲ್ಲಿ ಭತ್ತವನ್ನು ತುಂಬಿ ತೂರುವಾಗ ಗಾಳಿಯ ಜೊತೆ  ಧೂಳು ಕಸಕಡ್ಡಿಗಳು ಹಾರಿ ದೂರ ಹೋಗಿ ಬಿದ್ದು ಗಟ್ಟಿ ಕಾಳು ಮಾತ್ರ ಅಲ್ಲೇ ಕೆಳಕ್ಕೆ ಬೀಳುತ್ತಿತ್ತು.  ಬದುಕಲ್ಲೂ  ಹೀಗೆ ಆಗಾಗ ತೂರ ಬೇಕು ಎಂದು ಈಗ ಅನ್ನಿಸುತ್ತದೆ....

ಆದರೆ ತೂರುವುದು ಅಷ್ಟು ಸುಲಭವಲ್ಲ. ಗಾಳಿಯ ದಿಕ್ಕು ಗುರುತಿಸಿಕೊಳ್ಳುವುದು ಎಷ್ಟು ಮುಖ್ಯವೋ ಗಾಳಿಯ ವೇಗವೂ ಅಷ್ಟೇ ಪ್ರಮುಖ. ಇಲ್ಲವಾದರೆ ತೂರಿದಾಗ ಹೊರಗೆ ಹಾರಬೇಕಾದ ಧೂಳು ಮೈಮೇಲೆ ಬೀಳುತ್ತದೆ, ಆ ಧೂಳಿನಲ್ಲಿ ನಮ್ಮ ಗುರುತು ಮರೆಯಾಗುತ್ತದೆ, ಮಸುಕಾಗುತ್ತದೆ. ತೂರುವಾಗಿನ ಕೈ ಚಲನೆ, ಗಾಳಿಯ ದಿಕ್ಕು ಹಾಗೂ ವೇಗ, ಮೊರದ ಪಾತ್ರ, ತುಂಬಿಸಿಕೊಂಡ ಭಾರ ಎಲ್ಲವೂ ಒಂದು ಲೆಕ್ಕಾಚಾರದಲ್ಲಿ ಇರಬೇಕು. ಲೆಕ್ಕಾಚಾರ ತಪ್ಪಿದರೆ ಮುಗಿಯಿತು. ಹಾಗೆ ತೂರಿದ ಮೇಲೆ ಸ್ವಚ್ಛವಾದ ಭತ್ತವನ್ನು ಗೋಣಿಯ ಚೀಲದಲ್ಲಿ ತುಂಬಿ ಪತ್ತಾಸಿಗೆ ಹಾಕಿ ಉಳಿದದ್ದನ್ನು ಕಣಜ ಮಾಡಿ ಕಟ್ಟಿ ಅದರ ಮೇಲೆ ಗಾಳಿಯಾಡದ ಹಾಗೆ ಗೋಣಿ ಹಾಕಿ ಬಿಗಿಯಾಗಿ ಕಟ್ಟಿದರೆ ಅಲ್ಲಿಗೆ ಒಂದು ಹಂತ ಮುಗಿದ ಹಾಗೆ. ಮಳೆಗಾಲ ಮುಗಿಯುವವರೆಗೆ ಅದರ ಸುದ್ದಿಗೆ ಹೋಗುತ್ತಿರಲಿಲ್ಲ.

ಮೊನ್ನೆ ಊರಿಗೆ ಹೋಗುವಾಗ ಅಮ್ಮಾ ಅದೇನು ಅಂತ ಅಹಿ ಕೈ ತೋರಿಸಿದಾಗ ನೋಡಿದರೆ ಭತ್ತ ಕೊಯ್ದು ಅಲ್ಲೇ ಹುಲ್ಲು ಭತ್ತ ಬೇರೆಯಾಗಿ ಚಾಪೆ ಸುತ್ತಿದಂತೆ ಸುತ್ತಿಟ್ಟ ಸುರಳಿ ಕಾಣಿಸಿತು. ಅಯ್ಯೋ ಒಂದು ವಾರ ಹದಿನೈದು ದಿನಗಳ ಕಾಲ ನಡೆಯುತಿದ್ದ ಜಾತ್ರೆ ಈಗ ಗಂಟೆಯೊಳಗೆ ಅಂಗಳಕ್ಕೂ ಬರದೆ ಮುಗಿದೇ ಹೋಗುತ್ತಿದೆಯಾ ಅನ್ನೋ ಸಣ್ಣ ವಿಷಾದ ಕಾಡಲು ಶುರುವಾಗಿ ಹೊರಗಿನ ಕತ್ತಲಂತೆ ಆವರಿಸ ತೊಡಗಿತು. ಉಳಿಸಿದ್ದು ಸಮಯ, ಕಳೆದಿದ್ದು ಏನೇನೆಲ್ಲಾ ಅಂತ ಆಲೋಚಿಸುವಾಗ ಮನೆ ಬಂತು. ಕಾರಿಂದ ಇಳಿಯುವಾಗ ಬನ್ನಿ ಬನ್ನಿ ಒಳ್ಳೆ ಟೈಮ್ ಗೆ ಬಂದ್ರಿ ಒಂದೆರೆಡು ಹೊರೆ ಹೊತ್ಕೊಂಡ್ ಬನ್ನಿ ಅಂತ ಹದ್ದಿನಗಣ್ಣು ಬಿಟ್ಟು ಮರದ ತುಂಡಿನಲ್ಲಿ ಹೊಡೆದು ಕುತ್ತರಿ ಹಾಕುವ ತಂಬಿಯ ಸ್ವರ ಕೇಳಿ ದೀಪ ಹೊತ್ತಿದ ಹಾಗಾಯ್ತು.

ಕಾರಿಂದ ಇಳಿದು ಒಳಗೂ ಹೋಗದೆ ಚಂಗನೆ ಗದ್ದೆಗೆ ನೆಗೆದು ಹೋದ ಅಹಿಯನ್ನು ನೋಡಿ ಇಷ್ಟಾದರೂ ಉಳಿದಿದೆಯಲ್ಲ ಅಂತ ಸ್ವಲ್ಪ ನೆಮ್ಮದಿ ಪಡುತ್ತಲೇ ಮುಂದಕ್ಕೆ ಹೋದರೆ ಮಾವಿನ ಮರದ ಬುಡದಲ್ಲಿ ಶಾಶ್ವತ ವಿಶ್ರಾಂತಿಗೆ ಹೋದ ರೋಣಗಲ್ಲು ಸ್ವಾಗತಿಸಿತು. ಒಮ್ಮೆ ನೇವರಿಸಿ ಅದರ ಮೇಲೆ ಕುಳಿತರೆ ಹೈಯಾ ಅನ್ನೋ ಗದರುವಿಕೆಯೂ, ಗೆಜ್ಜೆಯ ಕಿಂಕಿಣಿ ನಾದವು ಕಿವಿಯಿಂದ ಚಲಿಸಿ ಮನಸ್ಸೆಲ್ಲಾ ತುಂಬಿ ಕಳೆದು ಹೋಗುವಾಗ ನಾಡಿದ್ದು ಒಕ್ಕುವ ಮೆಷಿನ್ ಬರುತ್ತೆ ಅನ್ನೋ ಕರ್ಕಶ ಸದ್ದು ಕೇಳಿ ಎಚ್ಚರವಾಯ್ತು... ಬೆಚ್ಚಿಬಿದ್ದು ನೋಡಿದರೆ ಕಲ್ಲಾಗಿದ್ದು ನಾನು ಮಾತ್ರವಲ್ಲ ಅಂತ ರೋಣಗಲ್ಲು ಹೇಳಿದ ಹಾಗಾಗಿ ಬೆದರಿ ಒಳಗೆ ಹೋದೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...