ರಿಪಬ್ಲಿಕ್ ಡೇ ಪೆರೇಡ್ ನೋಡಲು ಟಿ.ವಿ ಹಾಕಿದವಳ ಕಣ್ಣಿಗೆ ತಕ್ಷಣ ಬಿದ್ದಿದ್ದು ವಾಘಾದಲ್ಲಿನ ಆಚರಣೆಯ ಕ್ಲಿಪ್. ಈ ಸಲ ರಜೆಗೆ ಅಲ್ಲಿಗೆ ಕರ್ಕೊಂಡ್ ಹೋಗಮ್ಮಾ ಅಂದವಳ ಕೋರಿಕೆಗೆ ತಲೆ ಅಲ್ಲಾಡಿಸಿದ್ದೆ.  ಒಂದು ದೇಶದ ಗಡಿಯ ಅಂಚಿನವರೆಗೆ ಹೋಗುವುದು ಅಂದರೆ ನೆನಪಿಸಿಕೊಂಡೆ ರೋಮಾಂಚನವಾಗಿತ್ತು. ನಡುರಾತ್ರಿ ಸಮೀಪಿಸುವ ವೇಳೆಗೆ ಟ್ರೈನ್ ಇಳಿದರೂ ಅಮೃತಸರ ಎಚ್ಚರವಾಗಿತ್ತು. ಥೇಟ್ ಗಡಿಯ ಹಾಗೇ. ಅಪರಿಚಿತ ಜಾಗದಲ್ಲಿ ಮೊತ್ತ ಮೊದಲ ಬಾರಿಗೆ ಕಾಲಿಟ್ಟರೂ ಏನೋ ಆಪ್ತಭಾವ. ಭಯ, ದುಗುಡ ಯಾವುದೂ ಆವರಿಸಲೇ ಇಲ್ಲ. ಸಿಕ್ಕಿದ ಆಟೋ ಹಿಡಿದು ಹೊಸತಾದ ದಾರಿಯಲ್ಲಿ ಹೋಗುವಾಗಲೂ ನಿರಾಳ ಭಾವ. ಅಬ್ಬಾ ಇಲ್ಲಿಯ ಮಣ್ಣಿನ ಗುಣವೇ ಅಂದುಕೊಂಡೆ. ಗುಣ ಮನುಷ್ಯನಿಂದ ಮಣ್ಣಿಗಾ.... ಮಣ್ಣಿನಿಂದ ಮನುಷ್ಯನಿಗಾ.... ಅನ್ನೋ ಪ್ರಶ್ನೆ ದುತ್ತೆಂದು ಎದುರಾಯಿತು. ಎಲ್ಲವೂ ಮಣ್ಣಿಂದ ಮಣ್ಣಿಗೆ ಹೋಗುವುದರಿಂದ ಮಣ್ಣಿನದೇ ಅಂದುಕೊಂಡು ನಗುವೂ ಬಂತು.

ಜಾಗ ಸಿಗಬೇಕಾದರೆ ಮೊದಲೇ ಹೋಗಬೇಕು ಅಂದುಕೊಂಡು ಹೊರಟಿದ್ದಾಯ್ತು. ಜಾಗ ಹೇಗಿರುತ್ತೆ ಅನ್ನುವುದರ ಮೇಲೆ ನೋಟವೂ ಅವಲಂಬಿಸಿರುತ್ತೆ.ಬದುಕಿನಲ್ಲಿ ಕೊಂಡಿಯಿಲ್ಲದೆ ಸ್ವತಂತ್ರವಾಗಿರುವ ಒಂದಾದರೂ ವಿಷಯವಿದಯೇ? ಮನುಷ್ಯನಿಗೆ ಪ್ರತಿಯೊಂದರಿಂದಲೂ ಬಿಡಿಸಿಕೊಳ್ಳುವ ಹಂಬಲ. ಯಾರೂ ಇಲ್ಲಾ ಬೇಗ ಬಂದ್ವಾ ಅಂತ ತಿರುಗಿ ನೋಡುವ ಕ್ಷಣದಲ್ಲೇ ವಾಹನಗಳ ಸಾಲು ಸಾಲು ಇಳಿದ ಜನ ಪ್ರವಾಹ ಗೇಟ್ ಓಪನ್ ಆಗುವುದನ್ನೇ ಕಾಯುತ್ತಿದ್ದರು. ತೆಗೆದೊಡನೆ ನುಗ್ಗಬೇಕು. ವಿಕಾಸವಾದಂತೆ ತಾಳ್ಮೆ ಅನ್ನೋದು ಮರೆಯಾಗುತ್ತಿದೆಯೇನೋ... ದಡಬಡನೆ ಮುಂದಕ್ಕೆ ಹೋಗಬೇಕು ಅಷ್ಟೇ.

ಮೊದಲ ಗೇಟ್ ನಿಂದ ಸುಮಾರು ಒಂದು ಕಿ.ಮಿ ನಡೆದರೆ ಎರಡನೇ ಗೇಟ್.ಅಷ್ಟು ಎದುರಿಗೆ ಎರಡು ದೇಶಗಳ ಬಾವುಟ ಪಟಪಟನೆ ಹಾರುವುದು ಕಾಣಿಸುತ್ತಿತ್ತು.ಅಮ್ಮಾ ಅಷ್ಟು ಹತ್ತಿರ ಹತ್ತಿರ ಎರಡೂ ಬಾವುಟ ಹಾರಿಸಿದ್ದಾರೆ ನೋಡು ಅಂತ ಎಕ್ಸೈಟ್ ಆಗಿ ಮಗಳು ಕೂಗುತ್ತಿದ್ದಳು. ದೂರದಿಂದ ನೋಡಿದರೆ ಎಲ್ಲವೂ ಹತ್ತಿರವೇ ಮಗಳೇ, ಎಲ್ಲವೂ ಚೆಂದ. ಹತ್ತಿರದಿಂದ ನೋಡಿದಾಗ ಮಾತ್ರ ವಾಸ್ತವ ಅರ್ಥವಾಗೋದು ಅನ್ನೋಣ ಎಂದುಕೊಂಡವಳು ಅವಳ ಉತ್ಸಾಹ ಯಾಕೆ ಒಮ್ಮೆಗೆ ಕಡಿಮೆ ಮಾಡುವುದು ಅವಳಿಗೆ ಅರ್ಥವಾಗಲಿ ಅಂತ ಸುಮ್ಮನಾದೆ. ಹತ್ತಿರವಾಗುತ್ತಿದ್ದಂತೆ ಅಂತರ ಹೆಚ್ಚಾಗುತ್ತಾ ಹೋಗುವುದು ಕಂಡು ಒಳಗೆ ಹೋದಕೂಡಲೇ ಅಯ್ಯೋ ಎಷ್ಟು ದೂರ ಇದೆಯಮ್ಮಾ ಅಂದ್ಲು. ಬದುಕು ಇಷ್ಟೇ ಮಗಳೇ ಅನ್ನೋ ಮಾತು ಗಂಟಲಲ್ಲೇ ಉಳಿಯಿತು.

ತಲೆಯೆತ್ತಿ ನೋಡಿದರೆ ಅಷ್ಟು ಎತ್ತರದಲ್ಲಿದ್ದ ಬಾವುಟ ಯಾಕೆ ಹೆಮ್ಮೆ ಮೂಡುತ್ತೆ ಅನ್ನೋದು ಅನುಭವಕ್ಕೆ ಬಂತು.ಒಳಗೆ ಹೋದರೆ ಕ್ರಿಕೆಟ್ಸ್ಟೇಡಿಯಂ ನಷ್ಟು ದೊಡ್ದದ ಸ್ಟೇಡಿಯಂ. ಪಕ್ಕದಲ್ಲೇ ನಿಂತ ಮುಳ್ಳು ಬೇಲಿ,ಎರಡು ಗೇಟ್.ಅವೆರಡರ ಭುಜದ ಮೇಲೆ ಮಗುವಿನಂತೆ ಹತ್ತಿ ಕೂತ ಎರಡು ದೇಶಗಳ ಬಾವುಟ.  ಅದರಾಚೆಗೆ ನಮ್ಮ ಸ್ಟೇಡಿಯಂ ನ 1/3 ನಷ್ಟಿದ್ದ ಅವರ ಸ್ಟೇಡಿಯಂ. ಅದಾಗಲೇ ಭರ್ತಿಯಾಗಿತ್ತು. ಇತ್ತ ಅಲ್ಲಲ್ಲಿ ಮೊಳಕೆಯೊಡೆದ ಪೈರಿನಂತೆ ಅಲ್ಲಲ್ಲಿ ಅಷ್ಟಷ್ಟು ಜನ. ಇತ್ತ ನೋಡಿದ ಅವರಲ್ಲಿ ಮುಗಿಲು ಮುಟ್ಟಿದ ಉತ್ಸಾಹ. ಕೂಗಾಟ. ಕಿರುಚಾಟ ಜೋರಾಯಿತು. ಮೀಟರ್ ಗಳಷ್ಟು ಉದ್ದದ ಬಾವುಟವನ್ನು ಮೂರ್ನಾಲ್ಕು ಜನ ಕಷ್ಟಪಟ್ಟು ಹೊತ್ತು ತಂದರೆ ಅಲ್ಲಿ ಕುಳಿತಿದ್ದವರು ಉತ್ಸಾಹದಿಂದ ಹಿಡಿದು ಎಳೆದುಕೊಂಡಿದ್ದು ನೋಡಿ ಪರವಾಗಿಲ್ಲ ದೇಶಾಭಿಮಾನದಲ್ಲಿ ನಮಗಿತ ಬೆಟರ್ ಅಂದುಕೊಂಡು ಕಣ್ಣಗಲಿಸಿ ನೋಡಿದರೆ ಬಿಸಿಲಿಗೆ ನೆರಳಾಗಿ ಅವರ ತಲೆಯ ಮೇಲೆ ಡೇರೆಯ ಹೊದಿಕೆಯಂತೆ ಕಂಡಿತು.

ಯಾಕೋ ಜನವೇ ಇಲ್ಲ ಅಂದುಕೊಂಡೆ. ಅದಕ್ಕೆ ಸರಿಯಾಗಿ ಇವರಿಗೂ ದಿನಾ ಸಾಯೋರಿಗೆ ಅಳುವವರು ಯಾರು ಅಂತ ಉತ್ಸಾಹವೂ ಇಲ್ಲವೇನೋ ಅನ್ನೋ ಯೋಚನೆಯೂ ಸಣ್ಣಗೆ ಸುಳಿಯಿತು. ಮತ್ತೆ ಅತ್ತ ಕಡೆ ನೋಡಿದರೆ ಅಷ್ಟೇ ಜನ. ಅಷ್ಟು ಜನರಲ್ಲಿ ದುರ್ಬಿನು ಹಾಕಿ ಹುಡುಕಿದರೂ ಒಂದು ಹೆಣ್ಣು ಜೀವವೂ ಕಾಣಿಸಲಿಲ್ಲ. ಇತ್ತ ತಿರುಗಿದರೆ ಜನ ಸಾಗರ ಹರಿದು ಬರುತಿತ್ತು. ಎಳೆಯ ಮಕ್ಕಳಿಂದ ಹಿಡಿದು ಇಳಿವಯಸ್ಸಿನ ಜೀವಗಳವರೆಗೆ ಎಲ್ಲರೂ ಇದ್ದರೂ. ನಡೆಯಲಾಗದೆ ವೀಲ್ ಚೇರ್ ಮೇಲೆ ಕುಳಿತವರು, ನಡುಗುವ ಹೆಜ್ಜೆಗಳನ್ನು ಮೆಲ್ಲಗೆ ಆದರೆ ದೃಢವಾಗಿ ಊರುತ್ತಾ ನಡೆಯುವವರು ಹಸುಕಂದಮ್ಮಗಳು. ಗೆರೆಯ ಆಚೀನವರಿಗಿಂತ  ಈಚಿನವರ ಬದುಕು ಅದೆಷ್ಟು ಫ್ರೀ ಆಗಿದೆ. ಒಂದು ಗೆರೆ ಎಷ್ಟೆಲ್ಲಾ ಬದಲಾವಣೆ ತರಬಹುದಾ ಅನ್ನಿಸಿತು.

ನೋಡು ನೋಡುತ್ತಿದ್ದಂತೆ ಪೂರ್ತಿ ಸ್ಟೇಡಿಯಂ ತುಂಬಿ ಕುಳಿತು ಕೊಳ್ಳಲು ಜಾಗವೂ ಸಿಗದಂತೆ ಭರ್ತಿಯಾಯಿತು. ಅಷ್ಟೊತ್ತು ಕುಣಿಯುತಿದ್ದ ಅವರ ಉತ್ಸಾಹವೂ ನಿಧಾನಕ್ಕೆ ಇಳಿಯುತ್ತಿತ್ತು. ಇನ್ನೇನು ಅರ್ಧಗಂಟೆ ಇದೆ ಅನ್ನುವ ವೇಳೆಗೆಇಲ್ಲಿ ಶುರುವಾಯಿತು ನೋಡಿ ಸಂಭ್ರಮ. ಬಾವುಟವನ್ನು ಹಿಡಿದಿ ಗೇಟ್ ನ ಸಮಿಪದವರೆಗೆ ಓಡುವ ಇವೆಂಟ್ ಶುರುವಾಯಿತು. ಅದಕ್ಕಾಗಿಮೈಲುದ್ದದ ಕ್ಯೂ ಕೂಡ. ಅಲ್ಲಿ ಕೂಡಾ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರೂ ಭಾಗವಹಿಸಿದ್ದರು. ಅದು ಕೊಡುವ ಹೆಮ್ಮೆಯನ್ನು ಹೇಗೆ ವರ್ಣಿಸುವುದು?  ನಂತರ ಕುಣಿತ ಆರಂಭವಾಯಿತು. ಎಲ್ಲಾ ಹೆಂಗಸರು ಮಕ್ಕಳು  ನರ್ತಿಸುವ ಪರಿಯನ್ನು ನೋಡುತ್ತಿರುವಾಗಲೇ ಕಣ್ಣು ಪಕ್ಕದ ಮನೆಯ ಕಡೆಗೆ ಹರಿಯಿತು.

ಈ ಪಕ್ಕದ ಮನೆಯ ಕಡೆಗಿನ ನಮ್ಮ ಕುತೂಹಲ ಯಾವತ್ತೂ ಬತ್ತುವುದೇ ಇಲ್ಲವೇನೋ. ಸದಾ ಒಂದು ಕಣ್ಣು ಅವರ ಚಲನವಲನದ ಕಡೆಗೆ ನೆಟ್ಟಿರುತ್ತದೆ. ಬೇರೆಲ್ಲಾ ಕಡೆಗಿಂತ ಅಲ್ಲಿಯ ಸಣ್ಣ ಬದಲಾವಣೆಯೂ ನಮ್ಮನ್ನು ಹೆಚ್ಚು ತಾಕುತ್ತದೆ. ಪ್ರೇಮವೋ, ದ್ವೇಷವೋ, ಸ್ಪರ್ಧೆಯೂ ಯಾವುದೋ ಒಂದು ತಂತು ಸದಾ ಬೆಸೆದುಕೊಂಡೆ ಇರುತ್ತದೆ. ಅತ್ತ ಯಾವುದೂ ಇಲ್ಲದೆ ಕೇವಲ ಬಾವುಟ ಹಿಡಿದು ಕುಣಿಯುವುದಕಷ್ಟೇ ಸೀಮಿತವಾಗಿತ್ತು. ದಾಸ್ಯ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ವರ್ಗಾವಣೆ ಆಗಿದೆ ಅಷ್ಟೇ ಹೊರತು ಸ್ವಾತಂತ್ರ್ಯ ಅನ್ನೋದು ಇನ್ನೂ ಬಂದಿಲ್ಲವೇನೋ.... ಸ್ವಾತಂತ್ರ್ಯ ಅನ್ನೋದು ಕೂಡಾ ಸಂಪತ್ತಿನಂತೆ ಅದು ಕೇವಲ ಕೆಲವರ ಸ್ವತ್ತು.

ಹುಚ್ಚೆದ್ದು ಕೂಗುವ ಜೈಕಾರಗಳ ನಡುವೆ, ಘೋಷಣೆಗಳ ಮಧ್ಯೆ, ಬೆರಗು ಹುಟ್ಟಿಸುವ ಕವಾಯತಿನೊಂದಿಗೆ ಏಕಪ್ರಕಾರವಾಗಿ ಅಷ್ಟೇ ಶ್ರದ್ಧೆ ಗೌರವಗಳೊಂದಿಗೆ ಫ್ಲಾಗ್ ಅನ್ನು ಇಳಿಸಿ ಅದನ್ನು ಮಗುವಿನಷ್ಟೇ ಪ್ರೀತಿಯಿಂದ, ಜಾಗೃತೆಯಿಂದ ತಂದು ಇಡ್ತಾರೆ ಅನ್ನೋದನ್ನು ಗಮನಿಸುತ್ತಲೇ ಇದ್ದೆ. ಆ ಹೆಮ್ಮೆಯಲ್ಲಿ ಮನಸ್ಸು ಬಲೂನಿನಂತೆ ಉದುತ್ತಲೇ ಇತ್ತು. ಇಡೀ ಸ್ಟೇಡಿಯಂ ಒಂದಾಗಿ ಹಾಕುತಿದ್ದ ಘೋಷಣೆಗಳು ಇನ್ನಷ್ಟು ಗಾಳಿಯನ್ನು ತುಂಬಿ ಮತ್ತಷ್ಟು ಮೇಲಕ್ಕೆ ಏರುತಿತ್ತು. ದೇಶದ ಬಗ್ಗೆ , ಬಾವುಟದ ಬಗ್ಗೆ, ಸೈನಿಕರ ಬಗ್ಗೆ ಕೊಂಚವಾದರೂ ಹೆಮ್ಮೆ ಗೌರವ ಮೂಡಬೇಕಾದರೆ ಒಮ್ಮೆಯಾದರೂ ಪ್ರತಿಯೊಬ್ಬರೂ ಇಲ್ಲಿಗೆ ಬರಬೇಕು ಅಂತ ಅಂದುಕೊಳ್ಳುತ್ತಲೇ ಮೇಲೆ ಮೇಲೆ ಹಾರುತಿದ್ದ ಬಲೂನ್ ಮನಸ್ಸು ಒಮ್ಮೆ ಕೆಳಗೆ ನೋಡಿತು.

ಅಲ್ಲಿಯವರೆಗೂ ಕಣ್ಣು ಬಿಟ್ಟುಕೊಂಡು ನೋಡುತಿದ್ದಾರೆ ಅಂದುಕೊಂಡ ಮನಸ್ಸಿಗೆ ಕಣ್ಣು ಇನ್ನೊಂದು ಮುಖವನ್ನು ಪರಿಚಿಯಿಸಿತು. ಒಂದೆರೆಡು ಗಂಟೆಗಳು ತಮ್ಮ ಹಸಿವು ನೀರಡಿಕೆಯನ್ನು ನಿಯಂತ್ರಿಸಿಕೊಳ್ಳಲಾಗದ ಜನತೆ ನೀರು ಕುಡಿದು, ಚಿಪ್ಸ್ ಪಾಪ್ಕಾರ್ನ್ ತಿಂದು ದಾರಿಯಲ್ಲಿ ಮೈಕಲ್ಲಿ ಅನೌನ್ಸ್ ಮಾಡಿದ್ದನ್ನು ಈ ಕಡೆ ಕಿವಿಯಲ್ಲಿ ಕೇಳಿ ಆ ಕಡೆ ಕಿವಿಯಲ್ಲಿ ಬಿಟ್ಟು ಬಂದಷ್ಟೇ ಅವಸರದಲ್ಲಿ ಹೋಗುವದಕ್ಕೂ ಮಾಡುತ್ತಾ ಎಲ್ಲವನ್ನೂ ಯಾರಿದ್ದಾರೆ ಎಲ್ಲಿದ್ದೇವೆ ಅನ್ನುವುದನ್ನೂ ಮರೆತು ಅಲ್ಲೇ ಎಸೆದು ಹೋಗುತಿದ್ದರು ಮಧ್ಯೆ ಮಧ್ಯೆ ದಾರಿಗೇ ಅಡ್ಡಲಾಗಿ ನಿಂತು ಫೋಟೋ ಸೆಲ್ಫಿ ತೆಗೆದುಕೊಳ್ಳುತ್ತಾ..

ಇವೆಲ್ಲವನ್ನೂ ನೋಡಿ ನೋಡಿ ಅಭ್ಯಾಸವಾಗಿದ್ದ ಸೈನಿಕರು ಏನೂ ಹೇಳದೆ, ಯಾರ ಸೆಲ್ಫಿಗೂ ಸಿಗದೇ ತಮ್ಮ ಪಾಡಿಗೆ ತಾವು ತಮ್ಮ ಕಾರ್ಯದಲ್ಲಿ ಮಗ್ನರಾದರೆ,  ಅಲ್ಲಿಯವರೆ ಒಬ್ಬರು ಪೊರಕೆ ಹಿಡಿದು ನಿರ್ಲಿಪ್ತವಾಗಿ ಎಲ್ಲವನ್ನೂ ಗುಡಿಸಲು ಶುರುಮಾಡಿದರು. ಅವರ ಕಣ್ಣಿಗೆ ಕಸವೂ ನಾವೂ ಒಂದೇ ತರಹವಾಗಿ ಕಾಣಿಸುತಿತ್ತಾ ಯಾಕೋ ಅವರ ಮುಖ ನೋಡಲು ಧೈರ್ಯವಾಗಲಿಲ್ಲ. ಬಲೂನ್ ಒಡೆದಿದ್ದು ಯಾವಾಗ ಗೊತ್ತೇ ಆಗಲಿಲ್ಲ. ಅಷ್ಟು ಹೊತ್ತಿಗೆ ಸುಸ್ತಾಗಿದ್ದ ನಮ್ಮ ಪರಿಸ್ಥಿತಿಯನ್ನು ನೋಡಿಕೊಂಡು ತಲೆಯೆತ್ತಿದರೆ ಹೆಗಲಿಗೆ ಬಂದೂಕು ತಗುಲಿ ಹಾಕಿಕೊಂಡು ಬಿಸಿಲಿನ ಅಡಿಯಲ್ಲಿ ಹದ್ದಿನ ಕಣ್ಣುಗಳಿಂದ ಓಡಾಡುತಿದ್ದ ಸೈನಿಕರು ಕಂಡರೂ. ಮುಖವೂ ಕೆಂಪಾಯಿತು ಆಕಾಶದಂತೆ...

ಬಿಸಿಲಿಗೋ... ನಾಚಿಕೆಗೋ.... ಯೋಚಿಸುವ ಧೈರ್ಯವಿಲ್ಲದೆ ಕಾರ್ ಹತ್ತಿದೆ.

        * * *                                                  ***                          ***                       ***

ಅಮೃತಸರದಲ್ಲಿ ಸ್ವರ್ಣಮಂದಿರಕ್ಕೆ ಹೋಗುವ ಪ್ರವೇಶ  ಜಾಗದಲ್ಲಿ  ಪಾರ್ಟಿಷನ್  ಮ್ಯೂಸಿಯಂ ಇದೆ. ದೇಶ ವಿಭಜನೆಯ ಕಾಲದಲ್ಲಿನ ಘಟನೆಗಳನ್ನು, ಆಗ ನಡೆದ ಪತ್ರ ವ್ಯವಹಾರಗಳು, ಮಾತು ಕತೆಗಳು,ಆಗಿನ ದೃಶ್ಯಗಳ ಫೋಟೋಗಳು ಹೀಗೆ ಎಲ್ಲವನ್ನೂ ಜೋಡಿಸಿ ಇಟ್ಟಿದ್ದಾರೆ. ಒಂದಾಗಿದ್ದ ಒಂದು ಮನೆಯನ್ನು ಗೆರೆ ಎಳೆದು ಬೇರೆ ಮಾಡುವುದು ತುಂಬಾ ಸುಲಭಾ.. ಅಮೇಲಿನದನ್ನು ಜೀರ್ಣ ಮಾಡಿಕೊಳ್ಳುವುದು ಎಷ್ಟು ಕಷ್ಟ ಅನ್ನೋದು ಅದನ್ನು ಒಂದು ಸುತ್ತು ಹಾಕುವುದರೊಳಗೆ ಅನುಭವಕ್ಕೆ ಬಂದಿರುತ್ತದೆ.

ಇದ್ದಕ್ಕಿದ್ದ ಹಾಗೆ ಯಾರದೋ ಅಧಿಕಾರದಾಹಕ್ಕೆ, ಮತ್ಯಾರದೋ ನಾಯಕನಾಗುವ ಚಪಲಕ್ಕೆ ಎಷ್ಟೆಲ್ಲಾ ಅನ್ಯಾಯಗಳು, ಮಾನಸಿಕ ಕ್ಷೋಭೆ ನಡೆದಿದೆ ಅನ್ನುವುದು ಲೆಕ್ಕಕ್ಕೆ ನಿಲುಕದಷ್ಟಿದೆ. ಬ್ರಿಟಿಷರು ಒಡೆದರು ಅನ್ನುವುದಕ್ಕಿಂತ ಅವರು ಒಡೆಯುವುದನ್ನೇ ಬಕ ಪಕ್ಷಿಯಂತೆ ಕೆಲವರು ಕಾಯುತಿದ್ದರು ಅನ್ನುವುದೇ ಸೂಕ್ತ ಅನ್ನೋದು ಹೊರಗೆ ಬರುವ ವೇಳೆಗೆ ಅರಿವಿಗೆ ಬಂದಿರುತ್ತದೆ. ಹಾಗೆಯೆ ಇತಿಹಾಸವನ್ನು ಎಷ್ಟು ತಪ್ಪಾಗಿ ಕಲಿಯುತ್ತಿದ್ದೇವೆ ಅನ್ನೋದೂ ಕೂಡಾ.

ಹುಟ್ಟಿ ಬೆಳೆದ ಜಾಗವನ್ನು, ಜೊತೆಗೆ ಆಡಿದ ಸ್ನೇಹಿತರನ್ನು, ಕಷ್ಟ ಸುಖದಲ್ಲಿ ಜೊತೆಯಾಗಿದ್ದ ನೆರೆಹೊರೆಯವರನ್ನು, ಕಷ್ಟಪಟ್ಟು ಗಳಿಸಿದ ಸಂಪತ್ತನ್ನು, ಜೀವನಕ್ಕೆ ಆಧಾರವಾಗಿದ್ದ ಆಸ್ತಿಯನ್ನು ಒಂದೇ ಮಾತಲ್ಲಿ ಹೇಳುವುದಾದರೆ ಸರ್ವಸ್ವವನ್ನೂ ಕಳೆದುಕೊಂಡು ನಿರಾಶ್ರಿತರಾಗಿ ಜೀವ ಕೈಯಲ್ಲಿ ಹಿಡಿದು ಬದುಕುವುದಕ್ಕಾಗಿ ನಿರಾಶ್ರಿತರಾಗಿ ಹೊರಟು ಬರುವವರ ಪರಿಸ್ಥಿತಿಯನ್ನು ಒಮ್ಮೆಮಾನವೀಯತೆಯಿಂದ ಯೋಚಿಸಿದ್ದರೆ ಸಾಕಿತ್ತು. ಈ ದುರಂತ ನಡೆಯುತ್ತಲೇ ಇರಲಿಲ್ಲ. ಅಧಿಕಾರ ದಾಹ ಅನ್ನೋದು ಕಣ್ಣನ್ನು ಕುರುಡಾಗಿಸುತ್ತದೆ ಅನ್ನೋದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಎಲ್ಲಿಯೂ ಸಿಗುವುದಿಲ್ಲ.

ಗಡಿ ಎಂದರೆ ಹೇಗಿರಬಹುದು ಅಂತ ಏನೇನೋ ಕಲ್ಪನೆಗಳನ್ನು ಇಟ್ಟುಕೊಂಡು ಹೋದವಳಿಗೆ ವಾಘಾದಲ್ಲಿ ಕಾಣಿಸಿದ್ದು ಹೊಲಗಳ ನಡುವೆ ಎದ್ದು ನಿಂತ ಬೇಲಿ ಬಿಟ್ಟರೆ ಬೇರೆ ಏನೂ ಅಲ್ಲಾ. ಎರಡೂ ಕಡೆಯ ಹೊಲದಲ್ಲಿ  ಪೈರು ಬೆಳೆದು ನಿಂತಿತ್ತು. ತೋಟದಲ್ಲೋ, ಗದ್ದೆಯಲ್ಲೋ ಹಾಕಿದ ಬೇಲಿಯಂತೆ ಇಲ್ಲಿಯೂ ಒಂದು ಮುಳ್ಳು ಬೇಲಿ ಎದ್ದು ನಿಂತಿತ್ತು ಅಷ್ಟೇ. ಆದರೆ ಆ ಒಂದು ಮುಳ್ಳು ಬೇಲಿ ನಿರ್ಮಿಸಿದ ಅಂತರ ಎಷ್ಟು? ತೋಡಿದ ಕಂದಕದ ಆಳವೆಷ್ಟು? ಇತ್ತಕಡೆಯ ಜಮೀನಿನ ಜನ ಅತ್ತ ಕಡೆಯವರನ್ನು ನೋಡಿ ಮುಗುಳುನಗಲು ಆಗದಷ್ಟು ಅಪರಿಚಿತತೆ ಅನ್ನೋದಕ್ಕಿಂತ ಹೆಚ್ಚಾಗಿ ಭಯವನ್ನು ಹುಟ್ಟು ಹಾಕುವ ಬದುಕಿದ್ದವರನ್ನು ಸತ್ತಂತೆ ಮಾಡುವ ಶಕ್ತಿ ಈ ನಿರ್ಜಿವ ಮುಳ್ಳಿಗೆ ಎಲ್ಲಿಂದ ಬಂತು?

ಆ ಸಮಯದಲ್ಲಿ ನಡೆದ ದೈಹಿಕ, ಮಾನಸಿಕ ಕ್ಷೋಭೆಯನ್ನು ವಿವರಿಸಲು ಯಾವ ಭಾಷೆಯೂ ಪದಗಳನ್ನು ಹೊಂದಿಲ್ಲ. ಲೆಕ್ಕಾಚಾರ ಹಾಕಲು ಗಣಿತಕ್ಕೂ ಶಕ್ತಿಯಿಲ್ಲ. ಇತ್ತಕಡೆ ಅಪ್ಪ ಅತ್ತ ಕಡೆ ಮಗ ಆಗಿ ಒಬ್ಬರನೊಬ್ಬರು ನೋಡಲು ಮಾತಾಡಲೂ ಕಟ್ಟುಪಾಡು ಹಾಕಿ ತಂದೆ ತನ್ನ ಮಗನಿಗೆ ಬರೆದ ಪತ್ರ, ಮುಂದೆ ಹೋದಾಗ ಮೌಂಟ್ ಬ್ಯಾಟನ್ ಹಾಗೂ ಅವನ ಹೆಂಡತಿಯ ಜೊತೆ ನಗುತ್ತಾ ಸಾರೋಟಿನಲ್ಲಿ ನಿಂತ ನೆಹರೂ , ಅಲ್ಲಿಯವರೆಗೂ ತಾನೇ ಸರ್ವಶಕ್ತ ಎಂದು ಭಾವಿಸಿ ಹಾಗೆ ರೂಲ್ ಮಾಡಿ ಸುಭಾಷ್ ಅಂತವರನ್ನು ಅಧ್ಯಕ್ಷ ಗಾದಿಯಿಂದ ಇಳಿಸಿದ ಗಾಂಧಿಯ ಮೌನ,  ಕೇವಲ ಅಧಿಕಾರಕ್ಕಾಗಿ ಇವೆಲ್ಲಕ್ಕಾಗಿ ಪಟ್ಟು ಹಿಡಿದ ಜಿನ್ನನ ದಾಹ,  ನಿರಾಶ್ರಿತರ ಮೇಲೆ ನಡೆದ ದೌರ್ಜನ್ಯ, ಎಲ್ಲವನ್ನೂ ಕಳೆದುಕೊಂಡು ಕೇವಲ ಜೀವ ಉಳಿಸಿಕೊಳ್ಳುವುದಕ್ಕಾಗಿ ಅವರು ಪಟ್ಟ ಪಾಡು, ಅನುಭವಿಸಿದ ತಲ್ಲಣ, ಕೊನೆಯವರೆಗೂ ಅವರನ್ನು ಕಾಡಿದ ಮಾನಸಿಕ ಹಿಂಸೆ ಇವೆಲ್ಲವನ್ನೂ ನೋಡಿ ಹೊರಬರುವ ವೇಳೆಗೆ ಮೌನ ಸಂಕಟ ಎರಡೂ ಆವರಿಸಿಕೊಂಡು ಬಿಡುತ್ತದೆ. ಸಣ್ಣಗಿನ ಆಕ್ರೋಶವೊಂದು ಸುಳಿ ಸುತ್ತಲು ಶುರುವಾಗುತ್ತದೆ.

ನಡುವೆ ಎಳೆದ ಒಂದು ಗೆರೆಗೆ ಎಷ್ಟು ಶಕ್ತಿ ನೋಡಿ. ಅಲ್ಲಿಯವರೆಗೂ ಒಂದಾಗಿದ್ದವರನ್ನು ಮತ್ತೆಂದೂ ಸೇರದಂತೆ ಅದು ಬೇರೆ ಮಾಡಿಬಿಡುತ್ತದೆ. ಅಷ್ಟೇ ಅಲ್ಲಾ ಅಲ್ಲಿಯವೆರೆಗೂ ನೆಮ್ಮದಿಯಾಗಿದ್ದ ಬದುಕಿನಲ್ಲಿ ಒಂದು ಬಿರುಗಾಳಿಯನ್ನು ಎಬ್ಬಿಸಿತ್ತದೆ. ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸುವ ಶಕ್ತಿ ಈ ತೆಳುವಾದ ಗೆರೆಗಿದೆಯೇ ಅನ್ನೋದು ಆಶ್ಚ್ಯರವಾದ ಸಂಗತಿ. ದ್ವೇಷ ಹುಟ್ಟಿಸುವುದು ಎಷ್ಟೊಂದು ಸುಲಭ ನೋಡಿ ನಡುವೆ ಒಂದು ಗೆರೆ ಎಳೆದರಾಯಿತು. ಮತ್ತೆಲ್ಲಾ ತಂತಾನೇ ಸಹಜವೆನ್ನಿಸುವಷ್ಟು ಸುಲಭವಾಗಿ ಸರಳವಾಗಿ ನಡೆಯುತ್ತಾ ಹೋಗುತ್ತದೆ. ಈ ಪ್ರೀತಿ ಹುಟ್ಟಿಸುವುದೇ ಕಷ್ಟ....

Comments

Popular posts from this blog

ಮೇಲುಸುಂಕ.

ಮಾತಂಗ ಪರ್ವತ

ಕೇಪಿನ ಡಬ್ಬಿ.