ಗಾಳಿಗೆ ಮೆತ್ತಿದ ಬಣ್ಣ.

ಪುಟ್ಟವರಿದ್ದಾಗ ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಅಜ್ಜಿ ಹೇಳುತಿದ್ದ ಪ್ರತಿ ಕತೆಯೂ ಆಮೇಲೆ ಅವರೆಲ್ಲರೂ ಸುಖವಾಗಿದ್ದರು ಅನ್ನೋ ಸಾಲಿನಿಂದಲೇ ಮುಕ್ತಾಯ ವಾಗುತಿತ್ತು. ಸುಖ ಅಂದ ಮೇಲೆ ಅಲ್ಲಿಗೆ ಮುಕ್ತಾಯ ಅನ್ನೋದು ಮನಸ್ಸಿನಲ್ಲಿ ಕುಳಿತು ಬಿಟ್ಟಿತ್ತು, ಸುಖವನ್ನು ವಿಸ್ತರಿಸಿ ಹೇಳಲಾಗುವುದಿಲ್ಲ, ಅದರಲ್ಲಿ ಯಾರಿಗೂ ಆಸಕ್ತಿಯೂ ಇಲ್ಲ. ಮತ್ತದು ಮುಂದುವರಿಯುವುದೂ ಇಲ್ಲ. ಸುಖ ಅನ್ನೋದು ಒಂಥರಾ ಸತ್ತ ಹಾಗೆಯಾ.....

ಆದರೆ ಬದುಕಿನ ಕತೆ ಅಲ್ಲಿಗೇ ಮುಗಿಯುವುದಿಲ್ಲ ಹಾಗೂ ಸುಖ ಅನ್ನುವುದು ಕೊನೆಯ ನಿಲ್ದಾಣವೂ ಅಲ್ಲ, ಇನ್ಯಾವುದೋ ದಾರಿ ಮತ್ತೆಲ್ಲೋ ಕರೆದೊಯ್ಯುತ್ತೆ, ನಿಲ್ಲಲು ಬಿಡುವುದಿಲ್ಲ ಅನ್ನೋದು ಅರ್ಥವಾದಾಗ ಬಾಲ್ಯ ಮುಗಿದು ಮುಗ್ಧತೆ ಮಾಯವಾಗಿ ಬದುಕು ಇನ್ನೊಂದು ಮಗ್ಗುಲಿಗೆ ಹೊರಳಿತ್ತು. ಸುಖ ಅನ್ನೋದು ದಾರಿಯಲ್ಲಿ ಸಿಕ್ಕ ಒಂದು ನೆರಳು ಮತ್ತೆ ನಡೆಯಲೇ ಬೇಕು ಅದು ಅಂತಿಮವಲ್ಲ ಮತ್ತು ಆಗಲೂ ಬಾರದು ಅನ್ನೋ ತಿಳುವಳಿಕೆ ಮೂಡುವ ಹೊತ್ತಿಗೆ ಓದಲು ಸಿಕ್ಕಿದ ಕತೆಗಳಲ್ಲೂ ಅಂತ್ಯ ಮಾಯವಾಗಿತ್ತು.

ಕತೆ ಓದಿ ಮುಗಿಸುವ ಹೊತ್ತಿಗೆ ಮೌನ ಕಾಡುತ್ತೆ ಅಂತಾದರೆ ಅಲ್ಲಿ ಹೇಳಲಿಕ್ಕೆ ಬಹಳಷ್ಟಿದೆ ಅಂತ ಅರ್ಥ. ಹಾಗಾದರೆ ಹೇಳಬೇಕಾಗಿದ್ದನ್ನು ಹೇಳ್ತಿವಾ ಆಥವಾ ಯಾರನ್ನೋ ಇಂಪ್ರೆಸ್ ಮಾಡಲು ಇನ್ನೇನೋ ಹೇಳ್ತಿವಾ ಅನ್ನೋದೂ ಕೂಡ ಬಹು ಮುಖ್ಯವಾದ ಪ್ರಶ್ನೆಯೇ. ಅದು ಯಾರ ಕತೆಯದ್ದಾದರೂ ಆಗಿರಬಹುದು ಬದುಕಿನದಾದರೂ ಆಗಬಹುದು ಎಷ್ಟೆಂದರೂ ಬದುಕು ಒಂದು ಕತೆಯೇ ತಾನೇ.  ಆಡುವ ಅವಸರದಲ್ಲಿ, ಅನಿವಾರ್ಯತೆಯಲ್ಲಿ ಆ ಕ್ಷಣಕ್ಕೆ ಬೇಕಾದ್ದು ಮಾತ್ರ ಆಡ್ತಿವಾ ಅಥವಾ ಅರ್ಥೈಸಿಕೊಂಡು ಮೂಲ ಶೋಧಿಸಿ ಆಡ್ತಿವಾ ಇದು ಆಡುವ ಮುನ್ನ ಕೇಳಲೇ ಕೊಳ್ಳಬೇಕಾದ ಪ್ರಶ್ನೆ ಕೂಡಾ.

ಯಾವ ಸ್ಪೋಟವೂ ತಕ್ಷಣಕ್ಕೆ ಜರಗುವುದಿಲ್ಲ. ಹಾಗೆ ಸಮಸ್ಯೆ ಕೂಡಾ. ಎದುರಿಗೆ ಕಾಣುವುದು ಮಾತ್ರ ನಿಜವಲ್ಲ ಹಾಗೂ ಸಮಸ್ಯೆಯ ಸ್ಪೋಟಕ್ಕೆ ಆ ನಿಮಿಷ ಮಾತ್ರ ಕಾರಣವಲ್ಲ. ಎಲ್ಲೋ ಶುರುವಾಗಿ ಇನ್ನೆಲ್ಲೋ ಹರಿದು ಮತ್ತೆಲ್ಲೋ ಇಳಿದು ಒಂದು ಕುದಿಯುವ ಬಿಂದುವಿನಲ್ಲಿ ಸ್ಪೋಟವಾಗುತ್ತದೆ. ನಾವೂ ಕೂಡಾ ಆ ಕ್ಷಣದ ಬಗ್ಗೆ ಅದರ ಪರಿಹಾರದ ಬಗ್ಗೆ ಯೋಚಿಸುತ್ತೆವೆಯೇ ಹೊರತು ಅದರ ಮೂಲ ಹುಡುಕುವ ಕಡೆಗಲ್ಲ. ಮೂಲವನ್ನು ಹುಡುಕುವ ಅದನ್ನು ಒಪ್ಪಿಕೊಳ್ಳುವ ಧೈರ್ಯ ನಮಗಿಲ್ಲದಿರುವುದರಿಂದಲೇ ಅದರ ಹೊಣೆಯನ್ನು ಇನ್ಯಾರದೋ ಹೆಗಲಿಗೆ ಹೊರಿಸಲು, ಮತ್ಯಾರನ್ನೂ ಗುರಿಯಾಗಿಸಲು ಪ್ರಯತ್ನ ಪಡುತ್ತೇವೆ. ಹಾಗೆ ಸಿದ್ಧವಾದಾಗ ಬಲಿಯಾಗುವ ವ್ಯಕ್ತಿ ಹೀಗೆ ವರ್ತಿಸಬಹುದು ಅನ್ನುವ ಲೆಕ್ಕಾಚಾರದ ಅರಿವೂ ಇರುತ್ತದೆ. ಆದರೆ ಬದುಕು ಕೆಲವು ಸಲ ಅನಿರೀಕ್ಷಿತ ತಿರುವುಗಳಲ್ಲಿ ನಿಲ್ಲಿಸಿಬಿಡುತ್ತದೆ. ಹಾಗೆ ನಿಂತಾಗಲೇ ಒಂದು ಅಸಹನೀಯ ಮೌನ ಆವರಿಸಿಕೊಳ್ಳುತ್ತದೆ. ಮತ್ತು ಆ ಮೌನದಲ್ಲಿ ಹುಡುಕಿದರೆ ಉತ್ತರವೂ ದಾರಿಯೂ ಇರುತ್ತದೆ. ಆದರೆ ಮಾತಿನಲ್ಲಿ ಮೈ ಮರೆತವರಿಗೆ ಮೌನ ಅರ್ಥವಾಗುವುದು ಅಷ್ಟು ಸುಲಭವೇ.  ನಮಗೇನು ಬೇಕು ಎಂದು ನಿರ್ಧಿಷ್ಟವಾಗಿ ಗೊತ್ತಿದ್ದಾಗ ಏನು ಬೇಡಾ ಅನ್ನೋದೂ ಗೊತ್ತಿರುತ್ತದೆ. ವಿಪರ್ಯಾಸ ಎಂದರೆ ನಾಗರಿಕತೆಯ ಹೆಸರಲ್ಲಿ ನಾವು ಇದನ್ನು ಮರೆತೇ ಬಿಟ್ಟಿದ್ದೇವೆ.

ಯಾವುದೇ ಹೊಸ ವಾತಾವರಣಕ್ಕೆ, ಜನಗಳೊಂದಿಗೆ ಬೆರೆಯುವಾಗ ಮನಸ್ಸು ತನ್ನ ಇತಿ ಮಿತಿಗಳ ಲೆಕ್ಕಾಚಾರದ ಮೇಲೆಯೇ ಪ್ರತಿಕ್ರಿಯಿಸುತ್ತದೆ. ಕೀಳರಿಮೆಯೋ ಇಲ್ಲಾ ಮೇಲರಿಮೆಯೋ ಕಾಡುತ್ತದೆ. ಸಹಜತೆಗೆ ಬರಲು ಸಮಯ ತೆಗೆದುಕೊಳ್ಳುತ್ತದೆ. ಒಗ್ಗಿಕೊಳ್ಳುವುದು ಸುಲಭವಲ್ಲ. ಜಗತ್ತಿಗೆ ತೋರಿಕೆಯಷ್ಟೇ ಮುಖ್ಯ. ಆ ತೋರಿಕೆಯಲ್ಲೂ ಸ್ಥಿತಿವಂತಿಕೆಯ ಪ್ರದರ್ಶನ ತುಂಬಾ ಮುಖ್ಯ. ಹಾಗಾಗಿಯೇ ಬದುಕು ಸಂಪಾದನೆಯ ಮೇಲೆ ನಿಂತಿದೆ. ಏನನ್ನಾದರೂ ಗಳಿಸಬೇಕು ಎಂದರೆ ಏನನ್ನಾದರೂ ಕಳೆದುಕೊಳ್ಳಬೇಕು ಅನ್ನೋದು ಹಳೆ ಮಾತು. ಹಾಗಾದರೆ ಪಡೆದುಕೊಳ್ಳುವುದು ಅಂದರೆ ಕಳೆದುಕೊಳ್ಳುವುದೂ ಎಂದೂ ಹೌದಾ?

ಬದುಕೆಂದರೆ ಓಟ.. ಸಾವಿನೆಡೆಗಿನ ಧಾವಂತದ ಓಟ.  ಈ ಓಟದಲ್ಲಿ ಏನೇನು ಸಿಗುತ್ತೆ ಅನ್ನೋದು ಕಾಲಿನ ಕಸುವು ಹೋಗುವ ದಾರಿ ಎರಡನ್ನೂ ಅವಲಂಬಿಸಿರುತ್ತಾದರೂ ದೊರಕುವುದನ್ನ ಮೇಲು ಕೀಳು ಅನ್ನೋದರ ವಿಭಜನೆ ಮಾತ್ರ ಒಳಗಿನ ಹಮ್ಮು ಮಾಡುತ್ತದೆ. ಭ್ರಮೆ ಹರಿಯುವ ತನಕ ಇದು ಸರಾಗವಾಗಿ ನಡೆಯುತ್ತಲೇ ಇರುತ್ತದೆ. ಎಡವಿ ಬಿದ್ದಾಗ ಮಾತ್ರ ಭ್ರಮೆ ಹರಿದಂತೆ ಅನ್ನಿಸಿದರೂ ಪಕ್ಕದಲ್ಲಿದ್ದವರು ಮುಂದೆ ಓಡುವಾಗ ಗಾಯ ಮಾಯ್ದು ಹೊಸ ಚರ್ಮ ಬಂದಷ್ಟೇ ಸುಲಭವಾಗಿ ಮತ್ಯಾವುದೋ ಹೊಸ ಭ್ರಮೆ ಆವರಿಸುತ್ತದೆ. ಕುದುರೆಗೆ ಲಗಾಮು ಕಟ್ಟಿದ ಹಾಗೆ ಓಡುವಾಗ ಮಾತ್ರ ಸುತ್ತ ಮತ್ತಲಿನ ಜಗತ್ತು ಅರ್ಥವಾಗುವುದೇ ಇಲ್ಲ. ತನ್ನದೇ ಸರಿ ಅನ್ನುವ ಭಾವ ಮಾತ್ರ ಕಣ್ಣೆದುರು ನರ್ತಿಸುತ್ತಾ ಇರುತ್ತದೆ. ಓಡುವ ರಭಸದಲ್ಲಿ ಕಳೆದು ಕೊಳ್ಳುವುದು ಏನೇನು..... ಅರ್ಥವಾಗಬೇಕಾದರೆ ನಿಲ್ದಾಣವನ್ನು ಎಲ್ಲರಿಗಿಂತ ಮುಂಚಿತವಾಗಿ ಮುಟ್ಟಿ ಆಗಿರುತ್ತದೆ. ಬದುಕಿಗೆ ಮುಂದಿನ ದಾರಿ ಮಾತ್ರ ಗೊತ್ತು. ಹಿಂದಿರುಗುವ ಅವಕಾಶ ಎಂದಿಗೂ ಇಲ್ಲ..ಅನ್ನೋದು ಶೃಂಗನಿಗೆ ಅರ್ಥವಾದ ಹಾಗೆ ನಮಗೆ ಅರ್ಥವಾಗೋದು ಯಾವಾಗ?

ಬಾಲ್ಯ ಅನ್ನೋದು ಮುಗಿಯದ ಬೆರಗು. ಬದುಕಿನ ಅಡಿಪಾಯ ಕೂಡಾ. ಬಾಲ್ಯ ಎಷ್ಟು ಶ್ರೀಮಂತವಾಗಿರುತ್ತೆ ಅನ್ನೋದರ ಮೇಲೆ ಉಳಿದ ಬದುಕಿನ ದಿನಗಳ ಮೌಲ್ಯ ನಿರ್ಧಾರವಾಗುತ್ತೆ. ಸಣ್ಣ ಸಣ್ಣ ವಿಷಯಗಳೂ ಹುಟ್ಟಿಸುವ ಆಸಕ್ತಿ, ಪುಟ್ಟ ಸಂಗತಿಗಳಲ್ಲೂ ಹುಡುಕುವ ಅಚ್ಚರಿ, ಪ್ರತಿ ಕ್ಷಣವನ್ನೂ ತೀವ್ರವಾಗಿ ಅನುಭವಿಸು ಪರಿ, ಎಲ್ಲವನ್ನೂ ಗಮನಿಸುವ ರೀತಿ ಒಂದು ಬಾಲ್ಯ ಶ್ರೀಮಂತವಾಗೋಕೆ ಎಷ್ಟೊಂದು ಕಾರಣಗಳು. ಗೊತ್ತಿಲ್ಲದಂತೆ ಮೊಳಕೆಯೊಡೆದು ಇವು ಹೆಮ್ಮರವಾಗಿ ನೆರಳು ಕೊಟ್ಟು ಕಾದಿವೆ, ಬೇಗೆ ತಾಗದಂತೆ ಕಾಪಾಡಿವೆ ಅನ್ನೋದು ಗೊತ್ತಾಗೋದು ಇಳಿಸಂಜೆಯ ಎಳೆಬಿಸಿಲಿನಲ್ಲೇ. ಅಭಿವೃಧ್ಹಿ ಅನ್ನೋದು ಇವೆಲ್ಲವನ್ನೂ ತಿಂದು ತೇಗಿದೆಯೇ ಕಳೆದು ಹೋಗಿದ್ದು ಏನು ಅನ್ನೋದು ನಮ್ಮ ಪರಿವಿಗೆ ದಕ್ಕುತ್ತಿಲ್ಲವೇ ಅನ್ನೋ  ಶ್ರೀನಿವಾಸನ ಪ್ರಶ್ನೆಗೆ ಉತ್ತರ ಅಂಗೈ ಅನ್ನು ಆವರಿಸಿ ಬದುಕನ್ನ ಸದ್ದಿಲ್ಲದೇ ನುಂಗುತ್ತಿರುವ ಮೊಬೈಲ್ ಅನ್ನು ಕೇಳಿದರೆ ಸಿಗಬಹುದೇನೋ..

ಬಾಲ್ಯ ಕಾಡುವಷ್ಟೇ ಕಾಡೋದು ಹುಟ್ಟೂರು. ಎಲ್ಲೇ ಹೋದರೂ ಹೇಗೆ ಹಬ್ಬಿದರೂ ನಮ್ಮನ್ನು ಹಿಡಿದಿಡುವ ಬೇರು ಮಾತ್ರ ಹುಟ್ಟೂರಿನಲ್ಲೇ ಭದ್ರವಾಗಿ ಕುಳಿತಿರುತ್ತದೆ. ಅದರ ಪ್ರಭಾವದಿಂದ, ಹಿಡಿತದಿಂದ ಬಿಡಿಸಿಕೊಳ್ಳುವುದು ಸಾದ್ಯವೇ ಇಲ್ಲ. ಹಾಗೊಂದು ವೇಳೆ ಬಿಡಿಸಿಕೊಂಡರೆ ಅಸ್ತಿತ್ವ ಹೆಚ್ಚು ಕಾಲ ಇರುವುದೂ ಇಲ್ಲ. ಒಂದು ಊರು ಮುಳುಗಿದರೆ ಒಂದಿಡೀ ಸಂಸ್ಕೃತಿ ಮುಳುಗಿದಂತೆ. ಸರಾಗವಾಗಿ ಹರಿಯುತಿದ್ದ ವಾರಾಹಿಯ ಹರಿವನ್ನು ನಿಲ್ಲಿಸಿದಾಗ ಆವಳ ಆಕ್ರೋಶ ಊರೂರು ಮುಳುಗಿಸಿದರೂ ನಿಂತಿರಲಿಲ್ಲ. ಅವಳ ಒಡಲಿಗೆ ಕಣ್ಣೀರೂ ಸೇರಿ ನೀರಿನ ಮಟ್ಟ ಮತ್ತ್ತಷ್ಟು ಏರಿತ್ತು ಜೊತೆಗೆ ವೇದನೆಯೂ...

ಎಲ್ಲಿಂದಲೋ ಬಂದು ಇನ್ನೆಲ್ಲೋ ಬದುಕು ಕಟ್ಟಿಕೊಳ್ಳುವುದು ಸುಲಭವಾ ಗೊತ್ತಿಲ್ಲ. ಆದರೆ ನೆಮ್ಮದಿಯ ಬದುಕು ಸಾಧ್ಯವಾ ಅಂದರೆ ಮಾತ್ರ ಖಂಡಿತ ಇಲ್ಲಾ ಅಂತ ಗಟ್ಟಿಯಾಗಿ ಹೇಳಬಹುದು. ಇನ್ನೊಂದು ಜಾಗಕ್ಕೆ ಒಗ್ಗಿಕೊಳ್ಳುವುದು ಅಂದರೆ ಕೇವಲ ಅಲ್ಲಿಯ ವಾತಾವರಣಕ್ಕೆ ಮಾತ್ರವಲ್ಲ ಅಲ್ಲಿಯ ಸಂಸ್ಕೃತಿಗೂ ಒಗ್ಗಿಕೊಳ್ಳಬೇಕು. ಅಲ್ಲಿಯವರ ಬದುಕಿನ ರೀತಿ ಅರ್ಥವಾಗಬೇಕು, ಜನಜೀವನದೊಂದಿಗೆ ಮಿಳಿತವಾಗಬೇಕು. ಇಲ್ಲವಾದಲ್ಲಿ ಅವರಿಗೆ ಮಾತ್ರವಲ್ಲ ನಮಗೂ ನಾವು ಅಪರಿಚಿತರಾಗುತ್ತೇವೆ. ಆತ್ಮವಿಶ್ವಾಸ ಅನ್ನೋದು ಸಣ್ಣಗೆ ಒಣಗಲು ಶುರುವಾಗುತ್ತದೆ.

ಆದರೆ ಆರ್ಥಿಕತೆಗೆ ಇವೆಲ್ಲಾವನ್ನೂ ಆಪೋಶನ ಮಾಡುವ ಶಕ್ತಿ ಇದೆಯಾ. ಸದ್ಯಕ್ಕೆ ಪರಿಸ್ಥಿತಿ ಗಮನಿಸಿದರೆ ಹೌದು ಅನ್ನಿಸುತ್ತದೆ. ಅದು ಎಲ್ಲವನ್ನೂ ಒಂದೇ ರೀತಿ ನೋಡುವ, ಒಂದೇ ರೀತಿ ಬದುಕುವ ಅಷ್ಟೇಕೆ ಒಂದೇ ರೀತಿ ಯೋಚಿಸುವುದನ್ನ ಕಲಿಸುತ್ತಾ ಹೋಗುತ್ತದೆ. ಒಂದಿಡೀ ದೇಶ ಒಂದೇ ತರಹ ಆದರೆ ಹೋಲಿಸಿಕೊಳ್ಳುವುದು ಯಾವುದಕ್ಕೆ ಅಂದರೆ ಪಕ್ಕದ ದೇಶ ಮುಸಿನಗುತ್ತದೆ. ಹಿಂದುಳಿದ ದೇಶ ಅನ್ನೋ ಹಣೆ ಪಟ್ಟಿ ಹೊತ್ತ ದೇಶವೊಂದು ವಿದ್ಯಾಬ್ಯಾಸದಲ್ಲಿ ಪ್ರಗತಿ (?) ಸಾಧಿಸಿ ಹೋರಾಡಿ ಸ್ವತಂತ್ರವನ್ನೂ ಗಳಿಸಿಕೊಂಡು ಸಮಾನತೆಯನ್ನು ಬೋಧಿಸುವ ಹೊತ್ತಿನಲ್ಲಿ ನಿಜವಾಗಿಯೂ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯೇ ಎಂದು ಕೇಳಿ ಕೊಳ್ಳುವ ಪುರುಸೊತ್ತು ಸಿಗದಷ್ಟು ಬದುಕು ಓಡುತ್ತಿದೆ..

ಹಾಗೆ ಕೇಳಿಕೊಂಡಾಗ ಓಡುವ ಓಟಕ್ಕೆ ಒಂದು ಬ್ರೇಕ್ ಸಿಗುತ್ತದೆ. ನಮ್ಮ ದಾಸ್ಯದ ಪರಿಚಯವೂ ಆಗುತ್ತದೆ ಅನ್ನೋದನ್ನು ಹೇಳೋದು ಇನ್ನೊಬ್ಬ ಅನ್ನೋ ಕತೆ. ವ್ಯಾಪಾರವೋ, ಕೀಳರಿಮೆಯೋ, ಹಿಂಜರಿಕೆಯೋ, ಭಯವೋ, ಆಕರ್ಷಣೆಯೋ ಕಾರಣವೇನೇ ಇರಲಿ ಒಟ್ಟಾರೆಯಾಗಿ ಈ ಬಿಳಿತೊಗಲಿನವರ ಜೋತಇನ ನಮ್ಮ ಅವರ್ಣನೀಯ ಸಂಬಂಧದ ಹಿಂದೆ ಸಣ್ಣದೊಂದು  ಶರಣಾಗತಿಯ ಭಾವ ಗೋಚರಿಸುತ್ತದೆ ಅನ್ನುವ ನಾಯಕ ಒಂದು ಕ್ಷಣ ನಿಲ್ಲುವ ಹಾಗೆ ಮಾಡುತ್ತಾನೆ. ಇದೊಂದು ಚಕ್ರವ್ಯೂಹ ಇಲ್ಲಿ ಬರಬೇಕಾದರೆ ನಮ್ಮತನ, ಸಹಜತನ ಎಲ್ಲವನ್ನೂ ಬಿಟ್ಟು ಬರಬೇಕು. ಒಮ್ಮೆ ಒಳಬಂದಿರೆಂದರೆ ಮತ್ತೆ ಹೊರ ಹೋಗಲು ಆಗದೆ ಸುತ್ತುತ್ತಲೇ ಇರುತ್ತದೆ.

ಹಾಗೆ ಸುತ್ತುವಾಗ ಮತ್ತೆ ಊರು ನೆನಪಾಗುತ್ತದೆ, ಬಾಲ್ಯ ಕಣ್ಮುಂದೆ ನಗುತ್ತದೆ. ಅಯ್ಯೋ ಎಷ್ಟೊಂದು ಕಳೆದುಕೊಂಡು ಬಿಟ್ಟೆವಲ್ಲಾ ಅನ್ನೋ ವಿಷಾದ ಹೆಪ್ಪುಗಟ್ಟುತ್ತದೆ. ನಮಗೆ ಊರು ಬೇಕು ಮತ್ತು ಅದು ನಾವು ಬಿಟ್ಟು ಬಂದಾಗ ಹೇಗಿರುತ್ತದೋ ಹಾಗೆ ಬೇಕು ಅನ್ನೋ ಭಾವದ ಕುಸುಮಬಾಲೆಯ ಲೇಖನ ಪಟ್ಟನೆ ನೆನಪಾಯಿತು. ಆದರೆ ಆ ಊರು ಹಾಗೆ ಇದೆಯಾ ಉಹೂ ಹಾಗಿಲ್ಲ, ಹಾಗಿದ್ದರೆ ಬದುಕುವುದು ಸಾಧ್ಯವಿಲ್ಲ ಅನ್ನೋದು ಅಲ್ಲಿಯ ಜನರಿಗೆ ಅರ್ಥವಾಗಿದೆ. ಎದುರಿಗೆ ಆರ್ಥಿಕತೆ ಅನ್ನೋದು ನರ್ತಿಸುತ್ತಿದೆ. ಅದರ ಮೋಹಕ್ಕೆ ಬೀಳದೆ ಇರುವುದು ಹೇಗೆ? ಒಮ್ಮೆ ಬಿದ್ದಿರೋ ಮತ್ತದೇ ಚಕ್ರವ್ಯೂಹ ಬಾಗಿಲು ತೆರೆದುಕೊಳ್ಳುತ್ತದೆ. ಅಡಿಯಿಡುವ ಸಂಭ್ರಮದಲ್ಲಿ ಬಾಗಿಲು ಮುಚ್ಚಿದ ಸದ್ದು ಕೇಳುವುದೇ ಇಲ್ಲಾ...

ಕರ್ಕಿ ಕೃಷ್ಣಮೂರ್ತಿ ಅವರ ಗಾಳಿಗೆ ಮೆತ್ತಿದ ಬಣ್ಣ ಇವೆಲ್ಲವನ್ನೂ ಬಿಚ್ಚಿಡುತ್ತಾ ಹೋಗುತ್ತದೆ. ಓದಿ ಮುಗಿಸುವ ಹೊತ್ತಿಗೆ ಗಾಳಿಯಲ್ಲಿ ಇದ್ದಿದ್ದು ನನ್ನ ಮುಖದ ಬಣ್ಣವಾ ಅನ್ನೋ ಪ್ರಶ್ನೆ ದುತ್ತೆಂದು ಎದುರಾಗಿ ಕನ್ನಡಿ ನೋಡಿಕೊಂಡೆ. ನಿಟ್ಟುಸಿರು ಹೊಮ್ಮಿದ್ದು ನನ್ನದಾ.... ವಾರಾಹಿಯದಾ.... ಆ ಗಾಳಿಯೇ ಹೇಳ್ಬೇಕು.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...