ಗಳಿಸಿದ್ದು ಉಳಿಸಿದ್ದು

ಮಳೆಯಾಗಲಿ, ಚಳಿಯಾಗಲಿ ಯಾರಿರಲಿ, ಇಲ್ಲದಿರಲಿ ಆಂಟಿ ಏಳುವುದು ಮಾತ್ರ ಬೆಳಗಿನ ಜಾವ ಐದೂವರೆಗೆ. ಸಹಜವಾಗಿ ಹಳ್ಳಿಯ ಬದುಕು ಆರಂಭವಾಗೋದೆ ಈ ಸಮಯದಿಂದ. ಎದ್ದ ಕೂಡಲೇ ಮೊದಲು ಮಾಡೋ ಕೆಲಸ ಅಂದರೆ ಬಚ್ಚಲೊಲೆಗೆ ಉರಿ ಹಾಕುವುದು. ರಾತ್ರಿಯೇ ತುಂಬಿಟ್ಟ ಕಟ್ಟಿಗೆ, ಹಾಳೆ, ಅಡಿಕೆ ಸಿಪ್ಪೆಗಳು ಒಲೆಯ ಕಾವಿಗೆ ಬೆಚ್ಚಗೆ ಮಲಗಿರುವಾಗ ಅವುಗಳಿಗೆ ಚೂರು ಚಿಮಿಣೆ ಎಣ್ಣೆ ಚಿಮುಕಿಸಿ ಎಚ್ಚರಿಸಿ ಒಂದು ಕಡ್ಡಿಗೀರಿದರೆ ಅವು ಭಗ್ಗನೆದ್ದು ಉರಿಯುತ್ತವೆ, ಉರಿಸುವುದು ಎಷ್ಟೊಂದು ಸುಲಭಾ ಒಂದು ಕಡ್ಡಿ ಗೀರಿದರೆ ಆಯ್ತಲ್ಲಾ ಅನ್ನೋ ಅಚ್ಚರಿ ಸದಾ ನನ್ನೊಳಗೆ ಕಾಡುತ್ತಲೇ ಇರುತ್ತದೆ.

ಹೊಸಿಲು ಸಾರಿಸಿ ರಂಗವಲ್ಲಿ ಹಾಕಿ ಒಳಗೆ ಬಂದು ಕಾಫಿ ಕುಡಿದು ಲೋಟ ಕೆಳಗಿಡುವ ಹೊತ್ತಿಗೆ ಬೆಳಕು ಬಂದು ಕದ ತಟ್ಟುತ್ತದೆ. ಹಕ್ಕಿ ಪಕ್ಷಿಗಳೂ ಕಲರವ ಮಾಡುತ್ತಾ ತಮ್ಮ ಕೆಲಸ ಪ್ರಾರಂಭಿಸಿರುತ್ತವೆ. ಕೊಟ್ಟಿಗೆಯಲ್ಲಿನ ದನಗಳೂ ಕರೆಯುತ್ತವೆ. ಅಲ್ಲಿಯವರೆಗೂ ದೂರವಿದ್ದ ಕರುಗಳಿಗೂ ಅಮ್ಮನ ಬಳಿ ಸಾರುವ ಆತುರ. ಅವುಗಳನ್ನು ಮಾತಾಡಿಸಿ ಕುಡಿಯಲು ಕೊಟ್ಟು, ಕೊಟ್ಟಿಗೆ ಕ್ಲೀನ್ ಮಾಡಿ ಹಾಲು ಕರೆದುಕೊಂಡು ಬರುವ ವೇಳೆಗಾಗಲೇ ಎಳೆ ಬಿಸಿಲು ಅಂಗಳದಲ್ಲಿ ಚಟ್ಟೆಮುಟ್ಟೆ ಹೊಡೆದು ಕುಳಿತು ತಿಂಡಿಗಾಗಿ ಕಾಯುತ್ತಿರುತ್ತದೆ. ಒಂದರ ಹಿಂದೆ ಒಂದು ಕೆಲಸಗಳು ಸಾಲುಗಟ್ಟಿ ದರುಶನಕ್ಕಾಗಿ ನಿಂತಿರುತ್ತದೆ.

ಹಳ್ಳಿಮನೆಯಲ್ಲಿ ಓಡಾಟವೇ ದೊಡ್ಡ ಕೆಲಸ. ಕೊಟ್ಟಿಗೆ ಆ ಮೂಲೆಯಲ್ಲಾದರೆ ಬಚ್ಚಲು ಇನ್ನೊಂದು ಮೂಲೆಯಲ್ಲಿ. ಅಂಗಳದ ಬದಿಯಲ್ಲಿ ತುಳಸಿ, ಹಿತ್ತಲಲ್ಲಿ ಹೂ ಗಿಡಗಳು. ಒಂದೊಂದು ಒಂದೊಂದು ದಿಕ್ಕಿನಲ್ಲಿ. ಸೂರ್ಯನ ಸುತ್ತಾ ಸುತ್ತುವ ಭೂಮಿಯಂತೆ ಇವುಗಳನ್ನು ಒಂದು ಕಕ್ಷೆಯಲ್ಲಿ ಹಿಡಿದಿಟ್ಟು ಬದುಕು ತಿರುಗುತ್ತಿರುತ್ತದೆ. ಸೂರ್ಯ ಮೂಡುವ ಮುನ್ನ ಹಾಸಿಗೆಯಿಂದ ಎದ್ದರೆ ಮತ್ತೆ ಹಾಸಿಗೆಯನ್ನು ನೋಡುವುದು ರಾತ್ರಿಯಲ್ಲೇ. ಯಾವುದೋ ಒಂದು ಕೆಲಸವನ್ನು ಹುಡುಕಿಕೊಂಡು ಸದಾ ಏನನ್ನೋ ಮಾಡುತ್ತಲೇ  ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಶಿಫ್ಟ್ ಆಗುವುದೇ ವಿಶ್ರಾಂತಿ ಅಂದುಕೊಳ್ಳುತ್ತಲೇ ಬದುಕು ಚಲಿಸುತ್ತಲೇ ಇರುತ್ತದೆ. ಹರಿಯುವ ನೀರಿನಂತೆ.

ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕು ಅನ್ನುವ ಸ್ವಾಭಿಮಾನ ಕಲಿಸುವ ಮೊದಲ ಪಾಠಶಾಲೆ ಮನೆಯೇ. ಅಲ್ಲಿ ಯಾವ ಕೆಲಸಕ್ಕೂ ಜನವಿಲ್ಲ. ನಮ್ಮ ಮನೆ ಕೆಲಸ ನಾವೇ ಮಾಡ್ತಿವಿ ಅನ್ನೋದು ಅಲ್ಲಿ ಸಮ್ಮಾನ  ಎನ್ನಿಸಿದರೆ ಇಲ್ಲಿ ಪೇಟೆಯಲ್ಲಿ ಕೆಲಸಕ್ಕೆ ಯಾರೂ ಇಲ್ಲಾ ಅನ್ನೋದೇ ದೊಡ್ಡ ಅವಮಾನ. ಹಾಗಾಗಿ ಗುಡಿಸುವುದು, ಒರೆಸುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಎಲ್ಲವೂ ಸಹಜವಾಗಿ ಒಂದರ ಹಿಂದೆ ನಡೆಯುತ್ತಲೇ ಹೋಗುತ್ತವೆ, ಸ್ವಲ್ಪವೂ ಅಚೀಚಾಗದ  ಗಡಿಯಾರದ ಮುಳ್ಳುಗಳಂತೆ. ಕಾಲನ ಓಟದಂತೆ. ಮಧ್ಯಾನ ಊಟ ಮುಗಿದ ಕೂಡಲೇ ಸ್ವಲ್ಪ ಸಮಯ ದೊರಕಿದರೂ ಅದೂ ಸುಮ್ಮನೆ ಕಳೆದುಹೋಗುವುದಿಲ್ಲ.

ಊಟ ಆದ್ಮೆಲಾದರೂ ಸ್ವಲ್ಪ ಹೊತ್ತು ಮಲಗಬಹುದಲ್ಲಾ ಏನು ಮಾಡ್ತೀರಿ ಅಂದ್ರೆ ಉತ್ತರ ರೆಡಿ ಇರುತಿತ್ತು ಆಂಟಿಯ ಬಾಯಲ್ಲಿ.  ಹತ್ತಿಯನ್ನು ತಂದು ಬತ್ತಿ ಮಾಡುತ್ತಲೋ, ಯಾವುದೋ ಬಟ್ಟೆ ಹೊಲೆಯುತ್ತಲೋ, ಇನ್ಯಾವುದೋ ತಿಂಡಿ ಮಾಡುತ್ತಲೋ  ಏನಾದರೂ ಇದ್ದೆ ಇರುತ್ತೆ ಕೆಲಸ. ಅದು ಮುಗಿಯುವ ಹೊತ್ತಿಗೆ ಕೊಟ್ಟಿಗೆಯಲ್ಲಿನ ಸ್ವರ ಜೀವ ಎರಡೂ ಕರೆಯುತ್ತದೆ. ಅವುಗಳಿಗೆ ನೀರು ಕೊಟ್ಟು, ಹುಲ್ಲು ಹಾಕಿ ಹಾಲು ಕರೆದು ಇನ್ನೊಮ್ಮೆ ಕ್ಲೀನ್ ಮಾಡುವ ಹೊತ್ತಿಗೆ ಉರಿದ ಸೂರ್ಯನಿಗೂ ಸುಸ್ತು. ಮನೆಗೆ ಹೋಗುವ ಬಯಕೆ. ಉರಿದುರಿದು ಸಾಕಾಗಿ ತಣ್ಣಗೆ ಆಗುವ ಸಮಯದಲ್ಲಿ ಇಳಿ ಬಿಸಿಲಿನ ಚಿತ್ತಾರ ಶುರು. ಅಮೇಲ್ ಗದ್ದೆಗೋ ತೋಟಕ್ಕೋ ಒಂದು ಸುತ್ತು ಹೋಗಿ ಬರುವಾಗ ಒಂದಷ್ಟು ಕಟ್ಟಿಗೆಯನ್ನು ತಂದು ಬಚ್ಚಲೊಲೆಗೆ ತುಂಬಿ... ಗಡಿಯಾರದ ಮುಳ್ಳು ಮತ್ತೊಂದು ಸುತ್ತಿಗೆ ತಯಾರಾಗಿರುತ್ತದೆ.

ಮೊನ್ನೆ ಮನೆಗೆ ಊರಿನಿಂದ ವಯಸ್ಸಾದ ಅತ್ತೇ ಬಂದಿದ್ದರು. ಇಲ್ಲಿಗೆ ಬಂದರೂ ಅಲ್ಲಿಯದೇ ಚಿಂತೆ. ಎಲ್ಲರೂ ಮನೆ ಬಿಟ್ಟು ಬರುವ ಹಾಗಿಲ್ಲ, ಯಾರಾದರೂ ಒಬ್ಬರು ಇರಲೇ ಬೇಕು. ದನಕ್ಕೆ ಹುಲ್ಲು ಹಾಕಿದರೋ ಇಲ್ವೋ, ಕುಡಿಯಲು ಕೊಟ್ಟರೋ ಇಲ್ವೋ ಅನ್ನುವುದರ ಜೊತೆಗೆ ಸಂಜೆ ದನಗಳು ವಾಪಸ್ ಬರದಿದ್ದರೆ ಹೋಗಿ ಹುಡುಕಿಕೊಂಡು ಬರದಿದ್ದರೆ ಅವು ಇನ್ಯಾರೋ ಪಾಲಾಗಿ ಜೀವ ಕಳೆದುಕೊಳ್ಳುವದರ ಬಗ್ಗೆ ಭೀತಿ. ಇಷ್ಟೆಲ್ಲಾ ಒದ್ದಾಡೋದು ಯಾಕೆ ಕೊಟ್ಟಿಗೆ ಖಾಲಿ ಮಾಡಿ ಆರಾಮಾಗಿರಬಹುದಲ್ವಾ ಅಂತ ಉಪದೇಶ ಶುರು ಮಾಡಿದೆ. ಒಂದೆರೆಡು ದಿನ ಎಲ್ಲೋ ಹೋಗುವ ಸಲುವಾಗಿ ಕೊಟ್ಟಿಗೆ ಇಲ್ಲಾ ಮಾಡ್ಕೊಂಡ್ರೆ ಉಳಿದ ದಿನ ಮನೆಯಲ್ಲಿ ಇರೋದು ಹೇಗೆ? ಟೈಮ್ ಪಾಸ್ ಆಗೋದು ಹೇಗೆ ಅಂದ್ರು.

ನನ್ನ ಈಗಿನ ಕಾಲದ ಅರಾಮಾಗಿರೋದು ಮುಖ್ಯ ಅನ್ನೋ ಬುಧ್ಹಿವಂತಿಕೆ ಒಮ್ಮೆಲೇ ಸೂಜಿ ಚುಚ್ಚಿದ ಬಲೂನಿನಂತೆ ಧರಶಾಯಿಯಾಯಿತು. ಕೊಟ್ಟಿಗೆ ಅನ್ನೋದು ಅವರ ಪಾಲಿಗೆ ರೇಜಿಗೆ ಅಲ್ಲಾ, ಅದೊಂದು ಉಳಿದವುಗಳಂತೆ ದೈನಂದಿನ ಕ್ರಮ. ಯಾರೂ ಇಲ್ಲದೆ ವೃದ್ಧಾಶ್ರಮಗಳಾಗುತ್ತಿರುವ ಪ್ರಪಂಚದಲ್ಲಿ ಒಂಟಿತನ ತೊಡೆಯುವ ಸಂಗಾತಿ. ನಿಲ್ಲದೆ ಗಡಿಯಾರದ ಮುಳ್ಳುಗಳ ಜೊತೆ ಸಾಗುವ ಕ್ರಿಯೆ. ಏನೋ ಒಂದು ಕೆಲಸ ಹುಡ್ಕೊಂಡು ಮಾಡ್ತಾ ಇರ್ತೀನಿ ಆಗ ಬೇಜಾರೂ ಆಗೋಲ್ಲ ಸಮಯನೂ ಕಳೆಯುತ್ತೆ, ಸುಮ್ಮನೆ ಇರುವುದಕ್ಕಿಂತ ಏನೋ ಮಾಡುವುದು ಒಳ್ಳೆಯದು ಅಲ್ವಾ ಅನ್ನೋ ಆಂಟಿ ಮಾತಿಗೆ  ನಕ್ಕು ಬಂದವಳಿಗೆ ಗಡಿಯಾರ ಕಪಾಳಕ್ಕೆ ಬಾರಿಸಿತ್ತು.

ಏನು ಬೇಕೋ ಅದನ್ನು ಮನೆಯಲ್ಲೇ ಶುಚಿ ರುಚಿಯಾಗಿ ತಯಾರಿಸಿಕೊಳ್ಳುತ್ತಾ ಆಕ್ಟಿವ್ ಆಗಿರೋದು ಮಾತ್ರವಲ್ಲ ಆರೋಗ್ಯವಾಗಿಯೂ ಇದ್ದರು ಅನ್ನೋದು ಇಲ್ಲಿನ ಮತ್ತು ಅಲ್ಲಿನ ಬದುಕು ಹೋಲಿಸಿದಾಗ ಕಣ್ಣಿಗೆ ರಾಚುವ ಸತ್ಯ. ಈಗ ನಮಗೆ ಮೈ ಮುರಿದು ದುಡಿಯುವುದು ಬೇಡವಾಗಿದೆ, ಎಷ್ಟು ಅರಾಮಾಗಿರಲು ಸಾದ್ಯವೋ ಅಷ್ಟು ಇರುವುದು ಬುದ್ಧಿವಂತಿಕೆ ಅನ್ನಿಸಿದೆ. ಹಾಗಾಗಿ ಮೊದಲು ಕಾಲಿಟ್ಟದ್ದು ಮೆಷಿನ್ ಗಳು. ರುಬ್ಬುವ, ಬೀಸುವ, ಒಗೆಯುವ ಕಷ್ಟವಿಲ್ಲ ಈಗ. ಸಮಯವೂ ಹೆಚ್ಚು ಬೇಕಿಲ್ಲ, ಇತ್ತ ತಿರುಗಿ ಅತ್ತ ನೋಡುವುದರೊಳಗೆ ಕೆಲಸ ಆಗಿ ಹೋಗಿರುತ್ತದೆ. ಬಗ್ಗುವ ಏಳುವ, ಕೂರುವ ಸಂಕಷ್ಟ ಇಲ್ಲವೇ ಇಲ್ಲ. ಎಷ್ಟೊಂದು ಶ್ರಮದ ಸಮಯದ  ಉಳಿತಾಯ.

ಯಾವುದೇ ಆದರೂ ಒಮ್ಮೆ ಬೈಕಿನ ಕಿವಿ ತಿರುಪಿದರೆ ಸಾಕು ಹೋಗಿ ತರಬಹುದು. ಸಿಕ್ಕದ್ದು ಯಾವುದಿದೆ ಹೇಳಿ. ಎಲ್ಲವೂ ಕೊಳ್ಳಲು ಲಭ್ಯ. ಕಷ್ಟಪಟ್ಟು ಸಾಧಿಸುವುದಾದರೂ ಏನು? ಎಷ್ಟು ದಿನ ಇರ್ತಿವೋ ಅಷ್ಟು ದಿನ ಅರಾಮಾಗಿರೋದು ಮಾತ್ರ ಮುಖ್ಯ. ಎಲ್ಲವೂ ಬೆರಳ ತುದಿಗೆ ನಿಲುಕುವಷ್ಟು ಸುಲಭಕ್ಕೆ ಸಿಗುವಾಗ ರಟ್ಟೆ ಯಾಕೆ ನೋಯಿಸಿಕೊಳ್ಳಬೇಕು. ಅದೇನಿದ್ದರೂ ಮೂರ್ಖರ ಕೆಲಸ ಎನ್ನುವ ಅಲಿಖಿತ ನಿಯಮವೊಂದು ಜಾರಿಯಾಗಿದೆ. ಮತ್ತದನ್ನು ಎಲ್ಲರೂ ಒಪ್ಪಿಕೊಂಡು ಅಪ್ಪಿಕೊಂಡು ಪಾಲಿಸಲೂ ಶುರುವಾಗಿದೆ. ಹಾಗಾಗಿ ದೇಹಕ್ಕೆ ಏನು ಕೆಲಸ ಹೇಳಿ ವಿಶ್ರಾಂತಿ ಒಂದು ಬಿಟ್ಟು.

ಕಂಡಿದ್ದು, ಬಯಸಿದ್ದು ಎಲ್ಲವೂ ದೊರಕುವಾಗ ಕಡಿವಾಣ ಹಾಕುವುದಾದರೂ ಹೇಗೆ? ಹಾಗಾಗಿ ನಾಲಿಗೆಗೂ ಈಗ ಲಗಾಮು ಇಲ್ಲ. ಬೆವರು ಹರಿಸಲು ಅವಕಾಶವೇ ಇಲ್ಲ. ತಿಂದಿದ್ದು ಏನಾಯಿತು ಹೊಟ್ಟೆಯ ಮಡಿಕೆಗಳನ್ನ ಕೇಳಿದರೆ ಸರಿಯಾದ ಉತ್ತರ ದೊರಕೀತು. ಯಂತ್ರದಿಂದ ಬಂದಿದ್ದು ಯಂತ್ರದಿಂದಲೇ ಹೋಗಬೇಕು ತಾನೇ ಹಾಗಾಗಿಯೇ ಜಿಮ್ಮು. ಕರಗುವುದು ಎಷ್ಟು ಸವೆಯುವುದು ಎಷ್ಟು ಉತ್ತರ ಹುಡುಕುವ ಸಮಯ ಯಾರಿಗಿದೆ ? ಸಹಜವಾಗಿ ಬಂದದ್ದು ಮಾತ್ರ  ಸಹಜವಾಗಿಯೇ ಹೋಗುತ್ತದೆ. ಪ್ರತಿಯೊಂದು ಹಾಗೆ ಹೇಗೆ ಗಳಿಸುತ್ತೆವೋ ಹಾಗೆ ಹೋಗುತ್ತದೆ. ಮಾರ್ಗ ಮುಖ್ಯ.

ಬದುಕು ಸುಲಭದ ಬೆನ್ನ ಹಿಂದೆ ಬಿದ್ದಿದೆ. ಶ್ರಮ ಯಾರಿಗೂ ಬೇಡದ ಸಂಗತಿಯಾಗಿದೆ. ಎಷ್ಟು ಸುಲಭ, ಎಷ್ಟು ಬೇಗ ಅನ್ನುವುದರ ಮೇಲೆ ಆಯ್ಕೆ ನಿಂತಿದೆ. ಹಾಗೆ ಬಂದಿದ್ದು ಅಷ್ಟೇ ವೇಗವಾಗಿ ಹೋಗಬೇಕು ಅನ್ನೋ ಪ್ರಕೃತಿಯ ನಿಯಮ ಮರೆತು ಹೋಗಿದೆ. ಇಷ್ಟು ಬುದ್ಧಿವಂತಿಕೆಯಿಂದ, ಆವಿಷ್ಕಾರಗಳಿಂದ ಗಳಿಸಿದ ಸಮಯ, ಉಳಿಸಿದ ಶ್ರಮ ಎಲ್ಲಿ ಹೋಗುತ್ತಿದೆ ತಿಳಿಯಬೇಕೆ? ಒಮ್ಮೆ ಮೊಬೈಲ್ ಕಂಪನಿಗಳನ್ನೂ, ಹಾಸ್ಪಿಟಲ್ ಗಳನ್ನೂ ಕೇಳಿ ನೋಡಿ...

ಹಾಗಾದರೆ ಗಳಿಸಿದ್ದು ಏನು ... ಉಳಿಸಿದ್ದು ಏನು... 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...