ಕನಕ ಮುಸುಗು.

ಇತಿಹಾಸ ಅನ್ನೋದು ಯಾವಾಗಲೂ ರೋಚಕ. ಆದರೆ ಆ ರೋಚಕತೆ ಹೇಗೆ ಹೇಳ್ತಿವಿ ಅನ್ನೋದರ ಮೇಲೆ ಅವಲಂಬಿತವಾಗಿರುತ್ತದೆ. ಇತಿಹಾಸ ಅಂದ್ರೆ ಇಸ್ವೀ ಅಂತಷ್ಟೇ ಭದ್ರವಾಗಿ ಕುಳಿತ ತಲೆಗೆ ಮೊಟಕಿ ಅದಷ್ಟೇ ಅಲ್ಲಾ ಅಂತ ಪರಿಚಯಿಸಿದ್ದು ಹೈ ಸ್ಕೂಲ್ ಸರ್ ಆದ ಬಿ.ಎಸ್.ಎಸ್. ಅವರು ಪಾಠ ಮಾಡ್ತಾ ಇದ್ರೋ, ಇಲ್ಲಾ ಕತೆ ಹೇಳ್ತಾ ಇದ್ರೋ, ಇಲ್ಲಾ ಸಾಕ್ಷಿಯಾಗಿ ವಿವರಿಸ್ತಾ ಇದ್ರಾ ಅನ್ನೋದು ಈಗ ಹೇಳೋದು ಕಷ್ಟ ಆದರೂ ಇತಿಹಾಸ ಅಂದ್ರೆ ಕೇವಲ ಇಸ್ವೀ ಮಾತ್ರವಲ್ಲ ಅದೊಂದು ರೋಚಕತೆ ಅನ್ನೋದು ಮಾತ್ರ ಅರ್ಥವಾಗಿ ಆಸಕ್ತಿ ಕುದುರಿತ್ತು. ಹಾಗಾಗಿ ನೆನಪಿಸಿಕೊಳ್ಳುವ, ಉರುಹೊಡೆಯುವ ಕಷ್ಟವಿಲ್ಲದೆ ಎಲ್ಲ್ಲವೂ ನೆನಪಿನಲ್ಲಿ ಇರುತಿತ್ತು.

ಆಮೇಲೆ ಪಿ.ಯು.ಸಿ ಗೆ ಕಾಲಿಡುತ್ತಿದ್ದಂತೆ ಆವರಿಸಿಕೊಂಡಿದ್ದು ಇತಿಹಾಸವಾ ರಾಮ್ ಪ್ರಸಾದ್ ಸರ್ ಇವತ್ತಿಗೂ ಗೊಂದಲ. ಅವರು ಒಳಗೆ ಕಾಲಿಡುತಿದ್ದಂತೆ ಸಂತೆಯ ಮಾರ್ಕೆಟ್ ನಂತೆ ಗಜಿಬಿಜಿಗುಡುತಿದ್ದ ಕ್ಲಾಸ್ ಸಂಪೂರ್ಣ ನಿಶಬ್ದಕ್ಕೆ ಜಾರುತ್ತಿತ್ತು. ಗಲ್ಲಕ್ಕೆ ಕೈಯಿಟ್ಟು ಕುಳಿತುಕೊಂಡು ಕೇಳುತ್ತಿರುವಷ್ಟು ಹೊತ್ತು ನಾವು ಆ ಕಾಲದಲ್ಲೇ ಇರುತ್ತಿದೆವು. ಅವರು ಹೊರಹೋಗುತಿದ್ದಂತೆ ದೊಪ್ಪೆಂದು ವಾಸ್ತವಕ್ಕೆ ಮರಳುವ ಹಾಗಾಗುತಿತ್ತು. ಅವರ ಇಡೀ ಸರ್ವಿಸ್ ನಲ್ಲಿ ಅದರಲ್ಲಿ ಫೇಲ್ ಆಗೋದು ಇರಲಿ ಸೆಕೆಂಡ್ ಕ್ಲಾಸ್ ಒಳಗೆ ಪಾಸ್ ಆದವರು ಯಾರೂ ಇರಲಿಲ್ಲ. ಉಳಿದ ಸಬ್ಜೆಕ್ಟ್ ನೋಟ್ಸ್ ಕೊಟ್ಟರೆ ಇವರೂ ಅದನ್ನು ಮಾಡುತ್ತಿರಲಿಲ್ಲ. ಅರ್ಧರಾತ್ರಿ ನಿದ್ದೆಯಿಂದ ಎಬ್ಬಿಸಿ ಕೇಳಿದರೂ ನಿದ್ದೆಕಣ್ಣಿ ನಲ್ಲೇ ಹೇಳುತ್ತಿದ್ದೆವೇನೋ.

ಬೌದ್ಧ, ಜೈನ ಧರ್ಮಗಳ ಬಗ್ಗೆ ಹೇಳುವಾಗಲೂ ಸಹ ಅವು ಯಾವುದೋ ಹೊಸತು ಅನ್ನಿಸುತ್ತಲೇ ಇರಲಿಲ್ಲ. ಹಿಂದೂ ಧರ್ಮ ಅವುಗಳಿಗಿಂತ ಬೇರೆ ಅನ್ನೋ ಮನಸ್ಥಿತಿಯೂ ಬೆಳೆಯುತ್ತಿರಲಿಲ್ಲ. ಆಗಿ ಹೋಗಿರುವ ಘಟನೆಗಳಲ್ಲಿ ಯಾವುದು ಹೇಳಬೇಕು, ಹೇಗೆ ಹೇಳಬೇಕು ಅನ್ನೋದರ ಅರಿವಿಲ್ಲದವರಿಗೆ ಮಾತ್ರ ಇತಿಹಾಸ ಅನ್ನೋದು ಸತ್ತ ಚರಿತ್ರೆ ಅಷ್ಟೇ. ಆ ಕಾಲಕ್ಕೆ ಹೋಗಿ ಕೇಳುವ ಹಾಗಾದರೆ ಅದೊಂದು ಆತ್ಮಾವಲೋಕನ. ಮುಂದಿಡುವ ಹೆಜ್ಜೆಗೆ ಮಾರ್ಗದರ್ಶನ. ಸೂಕ್ಷ್ಮವಾಗಿ ಗಮನಿಸಿದರೆ ಬದುಕಿನ ಏಳು ಬೀಳುಗಳ ನಿದರ್ಶನ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಸಂಸ್ಕೃತಿಯ ಅಗಾಧ ದರ್ಶನ. ಹಿಂದಿನ ಹೆಜ್ಜೆಯ ಕಸುವಿನ ಮೇಲೆ ತಾನೇ ಮುಂದಿನ ಹೆಜ್ಜೆಯ ಗಟ್ಟಿತನ ನಿರ್ಧಾರ ಆಗೋದು.

ಕಾಲೇಜ್ ಬಿಟ್ಟ ಮೇಲೆ ಇತಿಹಾಸವೂ ಮೂಲೆ ಸೇರಿತ್ತು. ಸರಿಯಾಗಿ ಹೇಳುವವರ ಕೊರತೆಯಾದಾಗ ಕೇಳುವವರ ಸಂಖ್ಯೆಯೂ ಕಡಿಮೆಯಾಗುತ್ತದೆ. ಮರ ಬೆಳೆಸಿದ, ಮಠ ಕಟ್ಟಿದ ಅನ್ನೋ ಬರೀ ಒಣ ಮಾತುಗಳು ಇತಿಹಾಸವೆಂದರೆ ಇಷ್ಟೇ ಅನ್ನೋ ಹಾಗೆ ಮಾಡುತ್ತದೆ. ಅದನ್ನು ಹೊಡೆದು ಹಾಕಿ ಅದನ್ನು ಇನ್ನೂ ರೋಚಕವಾಗಿ ಹೇಳಬಹುದು ಅಂತ ತೋರಿಸಿಕೊಟ್ಟಿದ್ದು, ಇತಿಹಾಸ ಕೇವಲ ಪಾಠವಲ್ಲ, ಕಾದಂಬರಿಯೂ ಆಗಬಹುದು ಅನ್ನೋದನ್ನ ಸಾಕ್ಷಿಯಾಗಿಸಿದ್ದು ಗಣೇಶಯ್ಯ.  ಹೊಸಬರು ಅನ್ನಿಸಿದವರ ಪುಸ್ತಕಗಳನ್ನೂ ಓದಲು ಸಂಕೋಚಪಡುವ ನನಗೆ ಅಕ್ಕಾ ಇದನ್ನು ಓದು ನಿಂಗೆ ಖಂಡಿತ ಇಷ್ಟವಾಗುತ್ತೆ, ಹೊಸತೊಂದು ಶೈಲಿ ಹಾಗೂ ವಿಭಿನ್ನ ಬರವಣಿಗೆ ಅಂತ ಪ್ರದೀಪ  ತಂದು ಕೈಗೆ ಕೊಟ್ಟಗಾ ಅನುಮಾನದಲ್ಲೇ ಎತ್ತಿಕೊಂಡಿದ್ದೆ. ಸಂದೇಹದಲ್ಲೇ ಪುಟ ತಿರುಗಿಸಿದ್ದೆ.

ಕನ್ನಡದ ಮಟ್ಟಿಗೆ ಇದೊಂದು ಹೊಸ ಮೈಲಿಗಲ್ಲು. ಇತಿಹಾಸವನ್ನು ಇಷ್ಟು ರೋಚಕವಾಗಿ, ಪತ್ತೇದಾರಿ ರೀತಿಯಲ್ಲಿ ಇಲ್ಲಿಯವರೆಗೆ ಯಾರೂ ಹೇಳಿಲ್ಲವೇನೋ. ಇತಿಹಾಸವೆಂದರೆ ಮೂಗು ಮುರಿಯುವವರೂ ಕೂಡ ಇದನ್ನು ಒಂದೇ ಉಸಿರಿಗೆ ಓದಿಬಿಡುತ್ತಾರೆ. ಇವತ್ತಿನ ಬಗ್ಗೆ ಮಾತಾಡುತ್ತಲೇ ನಿನ್ನೆಗೆ ಹೋಗಿ ನಾಳೆಗೆ ಬಂದು ಇಳಿಯುವ ರೀತಿಯೇ ಅದ್ಭುತ. ವಿಜ್ಞಾನಿ ಆದರಿಂದಲೇ ಏನೋ ಪ್ರತಿಯೊಂದಕ್ಕೂ ಕಾರಣಗಳನ್ನ ನೀಡುತ್ತಾ, ಅದನ್ನು ವಿವರಿಸುತ್ತಾ ಹಾಗೆ ವಿವರಿಸುವಾಗಲೂ ಬೋರ್ ಹೊಡೆಸದಂತೆ ಆಸಕ್ತಿಯನ್ನು ಕಾಪಾಡಿಕೊಳ್ಳುತ್ತಾ ಹೇಳುತ್ತಾ ಹೋಗುವ ಅವರ ರೀತಿಗೆ ಗೊತ್ತಿಲ್ಲದಂತೆ ನಾವೂ ಪಾತ್ರವಾಗಿ ಸೇರಿ ಹೋಗಿರುತ್ತೇವೆ.

ಜೈನರ ಸಂಪತ್ತಿನ ಶೋಧನೆಯ ಕುರಿತು ಇರುವ ಕನಕ ಮುಸುಗು ಕೊನೆಯ ಪುಟದವರೆಗೂ ಉಸಿರು ಬಿಗಿಹಿಡಿಯುವ ಹಾಗೆ ಓದಿಸಿಕೊಂಡು ಹೋಗುತ್ತದೆ. ಕಾದಂಬರಿ ಅಂದರೆ ಕೇವಲ ಕಾಲ್ಪನಿಕ ಅಂದುಕೊಂಡರೆ ಅದು ನಮ್ಮ ಅಜ್ಞಾನವನ್ನು ಸೂಚಿಸುತ್ತದೆ. ತಾಳೆಯ ಗರಿಯನ್ನು, ಇತಿಹಾಸದ ಪುಟಗಳನ್ನೂ, ಶಾಸನಗಳನ್ನು ತೆಗೆದುಕೊಂಡು ಅದರ ಆಧಾರದ ಮೇಲೆ ಕಲ್ಪನೆಯನ್ನೂ ಸೇರಿಸಿಕೊಂಡು ಹೇಳುತ್ತಾ ಹೋಗುವ ಅವರು ಇದು ಹೀಗೆ ಇದ್ದಿರಬೇಕು ಅಂತ ಅನ್ನಿಸುವಷ್ಟರ ಮಟ್ಟಿಗೆ ಛಾಪು ಮೂಡಿಸಿಬಿಡುತ್ತಾರೆ. ಸಂಶೋಧನಾ ರೀತಿಯೂ ಹಾಗೆ ಎಲ್ಲಿಯೂ ಸತ್ಯಕ್ಕೆ ದೂರವೆನಿಸುವ ಹಾಗನ್ನಿಸೋಲ್ಲ.

ಕೇವಲ ಸಂಶೋಧನೆ  ಮಾತ್ರವಾದರೆ ಅದೊಂದು ವರದಿಯೆನ್ನಿಸಿಬಿಡುತ್ತದೆ. ಉಹೂ ಹಾಗಾಗಿಲ್ಲ, ಅಲ್ಲಿ ಭಾವನೆಗಳ ತಾಕಲಾಟವಿದೆ, ತಲೆಗೆ ಕೆಲಸ ಕೊಡುವ ಒಗಟುಗಳಿವೆ. ಶಾಸನದ್ದೋ, ತಾಳೆಗರಿಯದೋ ಸಾಲು ಚಿಂತನೆಗೆ ಹಚ್ಚುತ್ತದೆ. ಸಣ್ಣಗೆ ಶುರುವಾದ ಆಸಕ್ತಿ ನರನರಗಳಲ್ಲೂ ತುಂಬಿಕೊಂಡು ಕಣ್ಣು ಅಗಲವಾಗಿ ಗಮನಿಸುವ ಹಾಗೆ ಮಾಡುತ್ತದೆ. ಒಂದೊಂದಾಗಿ ತೆರೆದು ಕೊಳ್ಳುವ ಘಟನೆಗಳು ಹೇಗೆ ಒಂದಕ್ಕೊಂದು ಲಿಂಕ್ ಮಾಡುವುದು ಎನ್ನುವುದನ್ನು ಸವಾಲು ಹಾಕುತ್ತದೆ. ಪ್ರತಿಯೊಂದಕ್ಕೂ ಕೊಂಡಿಯಿದ್ದೇ ಇರುತ್ತದೆ ಯಾವುದೂ ಸ್ವತಂತ್ರ ಘಟನೆ ಅಲ್ಲಾ ಅನ್ನೋದರ ಪರಿಚಯ ಮಾಡಿಕೊಡುತ್ತದೆ.

ಒಂದು ಕೊಂಡಿ ಸಿಕ್ಕಿದರೆ ಉಳಿದ ಕೊಂಡಿಯನ್ನು ಹುಡುಕುವುದಕ್ಕೆ ಸಹಾಯವಾಗುತ್ತದೆ. ಹುಡುಕುತ್ತಾ ಹುಡುಕುತ್ತಾ ಹೋದಂತೆ ಯಾವ ಪ್ರಶ್ನೆಗಳೂ ಪ್ರಶ್ನೆಗಳಾಗಿಯೇ ಉಳಿಯುವುದಿಲ್ಲ, ಉತ್ತರ ದೊರಕುತ್ತದೆ. ಮತ್ತು ಆ ಉತ್ತರ ಕೇವಲ ಆ ಪ್ರಶ್ನೆಗೆ ಮಾತ್ರವಲ್ಲ ಇನ್ನೆಷ್ಟೋ ಸಂದೇಹಗಳಿಗೂ ಆಗಿರಬಹುದು. ಆದರೆ ಅದನ್ನು ಸೃಜನಶೀಲವಾಗಿ ಆಲೋಚಿಸಿ ಆಸಕ್ತಿಕರವಾಗಿ ಹೇಳುವ ಜಾಣ್ಮೆ ಇರಬೇಕು ಅಷ್ಟೇ. ಎಂದೋ ನಡೆದ ಘಟನೆಗಳನ್ನು ಇಂದಿಗೆ ಸಮೀಕರಿಸಿಕೊಂಡು ಅಲ್ಲೊಂದು ಬೆಸುಗೆಯನ್ನು ಇಟ್ಟುಕೊಂಡು ಎಲ್ಲೂ ತುಂಡಾಗದಂತೆ, ಜೋಡಿಸಿದ್ದು ರೂಪುಗೆಡದಂತೆ ಹೇಳುವ ರೀತಿಯಿದೆಯಲ್ಲ ಅದು ಮಾತ್ರ ಸುಲಭಕ್ಕೆ ದಕ್ಕುವುದಿಲ್ಲ.

ಹಿಂದಿನವರ ಬುದ್ಧಿವಂತಿಕೆ, ರಹಸ್ಯಗಳನ್ನು ಕಾಪಾಡಿಕೊಳ್ಳುವ ಬಗೆ, ಪರಂಪರೆಯನ್ನು ತಲೆಮಾರಿಗೆ ದಾಟಿಸುವಲ್ಲಿನ ಶ್ರದ್ಧೆ, ಒಂದು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದರ ಬಗೆಗಿನ ಕಾಳಜಿ, ಎಲ್ಲವನ್ನೂ ಬಿಚ್ಚಿಟ್ಟು ಕೂಡಾ ಬಚ್ಚಿಡುವ ಜಾಣ್ಮೆ. ಧರ್ಮದ ಬಗೆಗಿನ ನಿಷ್ಠೆ, ವೈಯುಕ್ತಿಕ ಹಿತಾಸಕ್ತಿಗಳನ್ನೂ ತ್ಯಾಗ ಮಾಡಿ, ಎಂಥಹುದೇ ಪರಿಸ್ಥಿತಿ ಎದುರಾದರೂ ಮಾತಿಗೆ ತಪ್ಪದೆ ನಡೆಯುವ ದೃಢತೆ, ಕಲೆಗಳನ್ನು ಪ್ರೋತ್ಸಾಹಿಸುವ ರೀತಿ ಅವುಗಳನ್ನು ಮುಂದಿನ ತಲೆಮಾರಿಗಾಗಿ ಕಾಪಿಡುವ ಜವಾಬ್ದಾರಿ. ಇತಿಹಾಸವೆಂದರೆ ಅದು ಆಗಿಹೋದ ಘಟನೆಗಳ ವಿವರ ಮಾತ್ರವಲ್ಲ ಅದು ಬದುಕಿನ ಗತಿ.

ಹಾಗಾಗಿ ಇತಿಹಾಸವನ್ನು ವಿವರಿಸುವಾಗ, ಕಲಿಸುವಾಗ ದೊಡ್ಡದೊಂದು ಜವಾಬ್ದಾರಿ ಸದಾ ಕಣ್ಣಮುಂದಿರಬೇಕು. ಯಾವುದಕ್ಕೆ ಒತ್ತು ಕೊಡಬೇಕು, ಯಾವುದನ್ನು ಹೇಳಬೇಕು ಯಾವುದರ ಕಡೆಗೆ ಗಮನ ಕೊಡಬೇಕು ಅನ್ನೋದರ ಅರಿವಿರಬೇಕು. ನೋಟ ಆಳವಾಗಿದ್ದಾಗ ಮಾತ್ರ ಅರಿವು ವಿಶಾಲವಾಗುತ್ತದೆ. ಕೇವಲ ಒಣ ಸಿದ್ಧಾಂತಗಳನ್ನ ದಿನಾಂಕಗಳನ್ನೂ ಹೇಳವುದು ಬಿಟ್ಟು ಒಳ ನೋಟವನ್ನು ನಿಜವಾದ ಇತಿಹಾಸವನ್ನು ವಿವರವಾಗಿ ಹೇಳಿದಾಗ ಮಾತ್ರ ಅದರ ಬಗ್ಗೆ ಹೆಮ್ಮೆ ಮೂಡೋದು, ಮುಂದಿನ ಹೆಜ್ಜೆಯ ಬಗ್ಗೆ ಎಚ್ಚರವಾಗೋದು, ತುಸು ಜವಾಬ್ದಾರಿ ಕಲಿಯೋದು ಆಗುತ್ತದೆ.

ಈ ದಿಸೆಯಲ್ಲಿ ಗಣೇಶಯ್ಯನವರ ಕೊಡುಗೆ ಮಾತ್ರ ಅಪಾರ. ಒಮ್ಮೆ ಅವರ ಬರಹವನ್ನು ಓದಿದ ಮೇಲೆ ಅಲ್ಲಿಯವರೆಗೆ ನಿರ್ಜೀವವಾಗಿ ಕಂಡ ಯಾವುದೊ ಶಾಸನವೋ, ಇಲ್ಲಾ ಕೆತ್ತನೆಯೋ, ಕಡೆದಿಟ್ಟ ಕಲ್ಲುಗಳು, ಬಿದ್ದ ಅವಶೇಷಗಳು ಆಸಕ್ತಿ ಹುಟ್ಟಿಸುತ್ತವೆ. ಗಮನಿಸಿದರೆ ಅವುಗಳ ಹಿಂದೆ ಹೂತು ಹೋದ ಎಷ್ಟೋ ರಹಸ್ಯಗಳು, ಕತೆಗಳು ಕೇಳಿಸುತ್ತವೆ. ಹಾಗೆ ಕೇಳುವ ಮನಸನ್ನು, ಕಿವಿಯನ್ನು ಸೂಕ್ಷ್ಮಗೊಳಿಸುವ ಕೆಲಸವನ್ನು ಮಾಡುವುದರಲ್ಲಿ ಗಣೇಶಯ್ಯನವರ ಪಾತ್ರ ತುಂಬಾ ದೊಡ್ಡದು. ಹಾಗಾಗಿ ಅವರು ಕನ್ನಡಕ್ಕೆ ದೊರೆತ  ಆಸ್ತಿ.

ಇತಿಹಾಸವೆಂದರೆ ಆಗಿಹೋದ ಘಟನೆಗಳು ಮಾತ್ರವಲ್ಲ, ಬದುಕಿನ ಗತಿಯನ್ನು ರೀತಿಯನ್ನು ಪರಿಚಯಿಸುವ ಗುರು. ಇತಿಹಾಸ ಮರುಕಳಿಸುತ್ತೆ ಅನ್ನೋ ಆಡುಮಾತೇ ಅದಕ್ಕೆ ಸಾಕ್ಷಿ. ಹಿಂದಿನ ಕೊಂಡಿಯ ಸಹಾಯದಿಂದ ಮಾತ್ರ ನಾವು ಮುಂದಿನದನ್ನು ಬೆಸೆಯಬಲ್ಲೆವು. ಮುಂದಕ್ಕೆ ಸಾಗಬಲ್ಲೆವು. ಹಾಗಾಗಿ ತಿಳಿಯುವುದು ಮಾತ್ರವಲ್ಲ ಅರಿಯುವುದು ಮುಖ್ಯ. ಹಿಂದಿನ ಹೆಜ್ಜೆಯ ಬಗ್ಗೆ ಗೌರವವಿಲ್ಲದೆ ಹೋದಾಗ ಮುಂದಿನ ಹೆಜ್ಜೆ ಅಸ್ಥಿರವಾಗುತ್ತದೆ. ಹಾಗೆ ಅಸ್ಥಿರವಾದದ್ದು ಸ್ವತಂತ್ರವಾಗಿ ನಿಲ್ಲಲಾರದು. ಹಾಗಾಗಿ ಮುಂದಿನ ಪೀಳಿಗೆಯ ಹೆಜ್ಜೆಗೆ ಕಸುವು ತುಂಬಬೇಕಾದರೆ ನಮ್ಮ ಹೆಜ್ಜೆ ದೃಢವಾಗಿರಬೇಕು. ಹಾಗೆ ದೃಢವಾಗಬೇಕಾದರೆ ಹಿಂದಿನ ಹೆಜ್ಜೆಯ ಅರಿವಿರಬೇಕು. 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...