ಯಾದ್ ವಶೇಮ್

ಗೆದ್ದವರು ಇತಿಹಾಸ ಬರೆಯುತ್ತಾರೆ, ಅವರು ಬರೆದದ್ದೇ ಇತಿಹಾಸವಾಗುತ್ತದೆ.

ವಾರಾಹಿ ಮುಳುಗಿಸಿದ ಊರು ಬಿಟ್ಟ ಬಂದ ಮೇಲಿನಿಂದ ಇಂದಿನವರೆಗೂ ನಿಮ್ಮೂರು ಯಾವುದು ಎಂದರೆ ಒಂದು ಕ್ಷಣ ತಡಬಡಿಸುವ ಹಾಗಾಗುತ್ತದೆ. ಮನಸಿಗೆ ಅನಾಥ ಭಾವ ಕಾಡುತ್ತದೆ.ಯಾವುದು ಹೇಳಲಿ ಎಂದು ಮನಸ್ಸು ಗೊಂದಲಕ್ಕೆ ಬೀಳುತ್ತದೆ. ಅಲ್ಲಿ ಹೋಗಲಾರೆ, ಇದನ್ನು ಒಪ್ಪಿಕೊಳ್ಳಲಾರೆ,  ಇಲ್ಲಿರುವುದು ನನ್ನೂರು ಅಲ್ಲ ಅನ್ನುವ ಅಪರಿಚಿತೆಯಲ್ಲಿ ಬದುಕು ಕೊನೆಯ ತನಕ ಸಾಗುತ್ತದೆ. ಹಾಗಾದರೆ ದೇಶ, ಹೆತ್ತವರು, ಬಂಧು ಬಳಗ ಎಲ್ಲವನ್ನೂ ಬಿಟ್ಟು ಕೊನೆಗೆ ತನ್ನದೇ ಆದ ಗುರುತು ಬಿಟ್ಟು ಬದುಕುವುದು ಇದೆಯಲ್ಲ ಅದು ಹೇಗಿರುತ್ತದೆ ಅನ್ನುವುದಕ್ಕೆ ಯಾದ್ ವಶೇಮ್ ಓದಬೇಕು.

ನಾಜಿಗಳ ಕ್ರೌರ್ಯ, ಯಹೂದಿಗಳ ಪರದಾಟ, ಅವರು ಅನುಭವಿಸುವ ಅನಾಥ ಭಾವ, ಜೀವ ಉಳಿಸಿಕೊಳ್ಳಲು ಪಡುವ ಹೆಣಗಾಟ, ಅನುಭವಿಸುವ ಹಿಂಸೆ, ಪಟ್ಟ ಸಂಕಟ  ಮೈ ಮರಗಟ್ಟುವ ಹಾಗೆ ಮಾಡುತ್ತಲೇ ಮುಂದೆ ಓದಲಾಗದೆ, ಹಾಗೆ ಇಡಲೂ ಆಗದೆ ಹುಟ್ಟಿಸುವ ತಲ್ಲಣ, ಇದು ನಿಜವಲ್ಲ ಕೇವಲ ಕತೆ  ಎಂದು ಮನಸ್ಸಿಗೆ ಸುಳ್ಳು ಸಮಾಧಾನ ಮಾಡುತ್ತಲೇ ಮುಂದೆ ಓದಲು ಹೋದರೆ ಕಣ್ಣೂ ಮಂಜಾಗಿ ಮುಷ್ಕರ ಹೂಡುತ್ತದೆ. ಪುಟ ತಿರುಗಿಸುವುದು ಕಷ್ಟವಾಗುತ್ತದೆ.

ಗುರುತು ಬದಿಗಿಟ್ಟು ಬದುಕುವುದು ಸುಲಭವಾ.... ಉಹೂ ಅದು ಅನಿವಾರ್ಯ. ಅಂತ ಬದುಕು ಶಿವನಲ್ಲ, ಶವ. ಉಸಿರು ಮಾತ್ರ ಆಡುತ್ತದೆಯೇ ಹೊರತು ಒಳಗಿನ ಅಂತಸತ್ವ ಎಂದೋ ಉಸಿರುಗಟ್ಟಿರುತ್ತದೆ. ಬಿಟ್ಟು ಬಂದ ಬದುಕಿಗಾಗಿ, ಹಂಬಲಿಸುತ್ತಾ, ಅಲ್ಲಿ ಉಳಿದವರ ಸಣ್ಣ ಕುರುಹಿಗಾಗಿ ಕಾಯುತ್ತಾ ಪ್ರಶ್ನೆಗಳ ಬೆಂಕಿಯನ್ನು ಉರಿಸಿಕೊಂಡು ಉತ್ತರಕ್ಕಾಗಿ ಕಾಯುವುದು, ಭೂತದ ನೆರಳು ಸರಿಸಿ  ವರ್ತಮಾನದಲ್ಲಿ ಬದುಕುವುದು ಸುಲಭವಲ್ಲವೆ ಅಲ್ಲ. ಅದರಲ್ಲೂ ಯಹೂದಿಗಳ ಮೇಲಿನ ಕ್ರೌರ್ಯ ಇಡೀ ಮಾನವ ಜಗತ್ತೇ ತಲೆತಗ್ಗಿಸುವಂತ ಕ್ರೌರ್ಯ.  ಮನುಷ್ಯ ಬುದ್ಧಿವಂತ ಪ್ರಾಣಿ ಅಂತೆ, ಹಾಗಾಗಿಯೇ ಅವನ ಕ್ರೌರ್ಯಕ್ಕೂ ಹಲವಾರು ಮುಖ, ಗಣಿತವೂ ತನ್ನ ಮಿತಿಯನ್ನು ಅರಿತು ಲೆಕ್ಕ ಹಾಕಲಾಗದಷ್ಟು ಅದರ ಮೌಲ್ಯ. ಬದುಕಿನಲ್ಲಿ ಏನೇ ಗಳಿಸಿದರೂ ಹುಟ್ಟಿದ ಊರು ಹಾಗೂ ಬಿಟ್ಟು ಬಂದ ಸಂಬಂಧ ಎಡೆಬಿಡದೆ ಕಾಡುತ್ತದೆ, ಇನ್ನಿಲ್ಲದಂತೆ ಸೆಳೆಯುತ್ತದೆ. ಎಷ್ಟೇ ವಿಶಾಲವಾಗಿ ಹಬ್ಬಿದರೂ, ಚಿಗುರಿದರೂ ಮರದ ಜೀವಂತಿಕೆ ಅಡಗಿರುವುದು ಅದರ ಬೇರಿನಲ್ಲಿ ಅದೆಷ್ಟು ಗಟ್ಟಿಯೋ ಬದುಕು ಅಷ್ಟೇ ಸುಂದರ.

ಜೀವ ಉಳಿಸಿಕೊಳ್ಳಲು ಬಂದ ಹ್ಯಾನಾ, ಇಲ್ಲಿಯ ಮಣ್ಣಿನಲ್ಲೇ ಬೆರೆತು ಇಲ್ಲಿಯ ಜನರ ಪ್ರೀತಿ, ಭಾವ ಎಲ್ಲವನ್ನೂ ಹೀರಿಕೊಂಡು ಬೆಳೆದು ಅನಿತಳಾಗಿ ರೂಪಾಂತರ ಹೊಂದುವ ಪ್ರಕ್ರಿಯೆ, ಜನರ ಕಣ್ಣಿಗೆ ಇತಿಹಾಸ ಮರೆಯಾದರೂ ಒಡಲಾಳದಲ್ಲಿ ಅದನ್ನು ಭದ್ರವಾಗಿ ಕಾಪಿಟ್ಟುಕೊಂಡು ಬಿಟ್ಟು ಬಂದ ಬದುಕಿಗಾಗಿ ಮತ್ತೆ ಅದನ್ನು ಜೋಡಿಸುವ ಒಂದೇ ಒಂದು ಕೊಂಡಿಗಾಗಿ ಅವಳು ಪರಿತಪಿಸುವ, ಅನ್ವೇಷಿಸುವ ರೀತಿ, ಅದಕ್ಕಾಗಿ ದೇಶ ದೇಶಗಳನ್ನು ಅಲೆಯುವ ಪರಿ, ಪ್ರಶ್ನೆಗಳ ಬೆಟ್ಟವನ್ನೇ ಎದೆಯಲ್ಲಿ ಹೊತ್ತು ಆ ಭಾರವನ್ನು ಇಳಿಸುವ ಒಂದು ಉತ್ತರಕ್ಕಾಗಿ ಹುಡುಕಾಡುವ ಹ್ಯಾನಾ, ಪಕ್ಕದಲ್ಲೇ ಅನ್ಯಾಯ ನಡೆಯುತ್ತಿದ್ದರೂ ತಣ್ಣಗೆ ನಿಂತು ನೋಡುವ, ಸುಮ್ಮನೆ  ಸಾಗಿ ಹೋಗುವ, ದನಿ ಎತ್ತದ ಜನರನ್ನು ಕಂಡು ಸಂಕಟ ಪಡುತ್ತಾಳೆ.

ಇತಿಹಾಸವನ್ನು ಒರೆಸುವ ಕಾರ್ಯ, ಒಂದಿಡೀ ಜನಾಂಗದ ಮಾರಣ ಹೋಮ ನಡೆದ ಜಾಗದಲ್ಲಿ ಪಳೆಯುಳಿಕೆ ಆರಿಸುತ್ತಾ ಕುಳಿತಿರುವವರ ನಡುವೆ ಕೇಕೆ ಹಾಕುತ್ತಾ ನಡೆಯುವ, ಯಾವುದೋ ಡಾಕ್ಯುಮೆಂಟ್ ನೋಡುವಂತೆ ನಿರಾಸಕ್ತವಾಗಿ ಸ್ಪಂದನೆಯಿಲ್ಲದೆ ಸಾಗಿ ಹೋಗುವ ಮುಂದಿನ ತಲೆಮಾರು ಅವಳಿಗೆ ಅಚ್ಚರಿ ಹುಟ್ಟಿಸುತ್ತದೆ. ಅವರವರ ನೋವು ಅವರವರದೇ ಸಮಾಧಾನ ಮಾಡುವರು ಕ್ಷಣಕಾಲವಷ್ಟೇ..

ಒಂದು ಕೊಂಡಿ ಕಳಚಿತು ಅಂದುಕೊಳ್ತಿವಿ ಆದರೆ ಆ ಕೊಂಡಿಗೆ ಇನ್ನೆಷ್ಟು ಬೆಸೆದಿರುತ್ತದೆ ಅನ್ನೋದು,  ಗೊತ್ತಾಗೋದು ಅದರ ಜಾಡು ಹಿಡಿದು ಹೋದಾಗಲೇ. ಕಳೆದುಕೊಂಡವರ ನಷ್ಟ ದೊಡ್ಡದೋ, ಅದರ ಅರಿವಿಲ್ಲದೆ ಸಾಗುವ ಒಂದು ತಲೆಮಾರಿನ ನಷ್ಟ ದೊಡ್ಡದೋ ಕರಾರುವಕ್ಕಾಗಿ ಹೇಳುವುದು ಕಷ್ಟ. ಯಾಕೆಂದರೆ ಇತಿಹಾಸ ಅನುಭವಿಸಿದವರ, ಅನುಭವಿಸವಂತೆ ಮಾಡಿದವರ, ನಿಂತು ನೋಡಿದವರ, ಸಂಬಂಧವಿಲ್ಲದಂತೆ ನಡೆದುಹೋದವರ, ದನಿ ಎತ್ತಿದವರ, ದನಿ ದಮನಿಸಿದವರ ಎಲ್ಲರನ್ನೂ ಎಲ್ಲರ ದೃಷ್ಟಿಕೋನವನ್ನೂ ಒಳಗೊಂಡಿರುತ್ತದೆ. ಹಾಗಾದರೆ ಜರ್ಮನಿಯಲ್ಲಿ ನಡೆದ ಮಾರಣ ಹೋಮ ಯಹೂದಿಗಳ, ನಾಜಿಗಳ, ಭಾಗಿಯಾದವರ, ನಿಂತು ನೋಡಿದವರ ಯಾರದ್ದು? ಪ್ರತಿಯೊಬ್ಬರಿಗೂ ಅವರವರ ದೃಷ್ಟಿಕೋನ ಸರಿಯೇ. ಹಾಗಾದರೆ ನಿಜವಾದ ಇತಿಹಾಸ ಅನ್ನುವುದು ಭ್ರಮೆಯಾ.... ಗೆದ್ದವರು ಬರೆದ ಇತಿಹಾಸವಷ್ಟೇ ಉಳಿಯುವುದಾ...

ಕೊನೆಗೂ ಕೊಂಡಿಯೊಂದು ಸಿಕ್ಕು ಜಗತ್ತೇ ಮರಳಿ ಸಿಕ್ಕಿದಂತೆ ಸಂಭ್ರಮಿಸುವ ಹ್ಯಾನ, ಮತ್ತದೇ ಜಾಗಕ್ಕೆ ಹೋಗಿ ನಿಲ್ಲುವ ಅವಳು ಪ್ರತಿಯೊಂದು ವಿವರ ಪಡೆಯುತ್ತಾ, ತನ್ನೊಳಗಿದ್ದ ನಿರ್ವಾತವನ್ನು ತುಂಬಿಕೊಳ್ಳುತ್ತಾ, ಸತ್ಯವನ್ನು ಒಪ್ಪಿಕೊಳ್ಳುತ್ತಾ, ಎದುರಿಗಿದ್ದ ಬದುಕಿಗೂ, ಭೂತಕ್ಕೂ ಕೊಂಡಿಯಾಗುತ್ತಾ ಹೋಗುವಾಗಲೇ ತಟ್ಟನೆ ವಾಸ್ತವ ಎದುರಾಗುತ್ತದೆ. ಕನಸಿಗೂ ವಾಸ್ತವಕ್ಕೂ ತಾಳೆಯಾಗದೆ ಭ್ರಮೆ ಕಳಚುತ್ತದೆ. ಬಿಟ್ಟು ಬಂದ ಜಾಗ ಹಾಗೆ ಇರುತ್ತದೆ ಎನ್ನುವ ಭ್ರಮೆ ಕೇವಲ ಹ್ಯಾನಾಳದು ಮಾತ್ರವಲ್ಲ, ನಮ್ಮೆಲ್ಲರದೂ ಕೂಡ. ಆದರೆ ಅದು ಹಾಗೆ ಇರುತ್ತದಾ... ಕಾಲದ ಜೊತೆಗೆ ನಾವು ಸಾಗಿ ಹೋಗಿರುತ್ತೇವೆ. ಅದೇ ಬದುಕಿನ ವಾಸ್ತವ. ಆದರೆ ಮನಸ್ಸು ಅದನ್ನು ಒಪ್ಪಿಕೊಳ್ಳದೆ ಭ್ರಮೆಯಲ್ಲಿ ಮತ್ತದನ್ನೇ ಅರಸುತ್ತದೆ, ಹಲವು ಬಾರಿ ನಿರಾಶೆ ಅನುಭವಿಸುತ್ತದೆ.

ಹಿಂಸೆಯನ್ನು ಅನುಭವಿಸಿ ಪ್ರತಿಕ್ಷಣ ಬದುಕಿಗಾಗಿ ಹೋರಾಡಿದ ಜೀವ ಬಯಸುವುದು ನೆಮ್ಮದಿಯ ಬದುಕಿನ ಜೊತೆಗೆ ಅದು ಮತ್ತೆಂದೂ ತಪ್ಪಿಹೋಗದ  ಹಾಗೆ ಇರುವ ಸುರಕ್ಷಿತ ವ್ಯವಸ್ಥೆ. ಆದರೆ ಕಳೆದುಕೊಂಡಿದ್ದರ ನಡುವೆಯೇ ಮತ್ತೆ ಬೇರೆಲ್ಲೋ ಪಡೆದುಕೊಂಡು ನೆಮ್ಮದಿಯಾಗಿರುವ ಬದುಕು ಒಂದು ರೀತಿಯ ಭ್ರಮೆಗೆ ಬೀಳುತ್ತದಾ.... ಕೊನೆಯ ಭಾಗ ಓದುವಾಗ ಹಾಗನ್ನಿಸಿತು. ಕೆಲವೊಮ್ಮೆ ಕ್ಷಮೆ ಕೂಡಾ ದೌರ್ಬಲ್ಯವೇ...  ಪ್ರೀತಿ ಅಪಾತ್ರವೇ ಆಗುತ್ತದೆ. ಪ್ರತಿ ಹುಡುಕಾಟಕ್ಕೂ ಮುಕ್ತಾಯ ಬೇಕು ನಿಜ, ಅದು ನಾವಂದುಕೊಂಡ ಹಾಗಿದ್ದರೆ ಮಾತ್ರ ಸರಿ ಅನ್ನುವ ಭ್ರಮೆ ಇರಬಾರದು. ಎಲ್ಲವನ್ನೂ ಕಳೆದುಕೊಂಡದ್ದು ದೂರದಲ್ಲೆಲ್ಲೋ ಸಿಕ್ಕ ಕ್ಷಣದಲ್ಲಿ ಅಲ್ಲೊಂದು ದೂರದ ಅಂತರವೂ ಇರುತ್ತದೆ. ಭೂತದ ನೆನಪಿನಲ್ಲಿ ವಾಸ್ತವ ಬಹು ದೂರ ಸಾಗಿ ಬಂದಿದೆ ಎನ್ನುವುದು ಎಂದು ಮರೆತುಬಿಡುತ್ತೇವೆ.

ಹ್ಯಾನಾಳಂತೆ ನಾವು ಎಷ್ಟೋ ಸಲ ಬಿಟ್ಟು ಬಂದಲ್ಲಿಗೆ ಹೋಗಿ ಹುಡುಕುತ್ತೇವೆ. ನಾವು ಮುಂದೆ ಹೋದಂತೆ ಅವರೂ ಮುಂದೆ ಹೋಗಿರುತ್ತಾರೆ ಅನ್ನೋದು ಮರೆತೇ ಬಿಡುತ್ತೇವೆ. ಕಾಲ ನಿಲ್ಲುವುದಿಲ್ಲ. ಹಾಗೆ ನಿಂತರೆ ಅದು ಕಾಲವೇ ಅಲ್ಲ..

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...