ತುಂಬೆ

ಬೆಳಿಗ್ಗೆ ಏಳುತಿದ್ದ ಹಾಗೆ ಅವಸರದಲ್ಲೊಂದು ಸ್ನಾನ ಮುಗಿಸಿ, ಗಡಿಬಿಡಿಯಲ್ಲೊಂದು ತಿಂಡಿ ತಿಂದು ಬಟ್ಟಲನ್ನು ಹಿಡಿದು ಹೊರಟರೆ ಅಲ್ಲಿಗೆ ಪಂದ್ಯವೊಂದು ಶುರುವಾಯಿತೆಂದರ್ಥ. ಸಣ್ಣಗೆ ಬೀಳುತಿದ್ದ ಇಬ್ಬನಿಯಲ್ಲಿ ಮೈಯೆಲ್ಲಾ ಹನಿಯಾಗಿ ಗದ್ದೆಯ ಅಂಚಿನಲ್ಲಿ ನಳನಳಿಸುತ್ತ ನಿಂತಿರುತಿದ್ದ ತುಂಬೆಯ ಗಿಡ ಅಲುಗಾಡಿ ಸ್ವಾಗತಕೋರುತಿತ್ತು. ಶ್ವೇತವರ್ಣದ ಸುಂದರಿಯ ಮೈಮೇಲೆ ಮುತ್ತಿನ ಸುರಿಮಳೆ ಸುರಿದಂತೆ ಕಾಣುತಿದ್ದ ಇಬ್ಬನಿಯಲ್ಲಿ ಪ್ರತಿಫಲಿಸುವ ಸೂರ್ಯನ ಎಳೆಯ ಕಿರಣ, ಹೋಗಲೋ ಬೇಡವೋ ಎಂಬ ಗೊಂದಲದಲ್ಲಿರುತ್ತಿದ್ದ ಸಣ್ಣ ಚಳಿ, ಆಗಾಗ ಬೀಸುವ ಗಾಳಿ.. ಎಳೆಯ ಬಿಸಿಲಿಗೆ ಚರ್ಮ ಅನುಭವಿಸುವ ಬೆಚ್ಚಗಿನ ಅನುಭೂತಿ. ಇಬ್ಬನಿ, ಮಂಜು, ತುಂಬೆ, ಅಲ್ಲಲ್ಲಿ  ರಂಗೋಲಿಯ  ಹಾಗೆ ಬಿಡಿಸಿಟ್ಟ ಜೇಡನ ಬಲೆ ಎಲ್ಲವೂ ಒಂದು ಶ್ವೇತವರ್ಣದ ಲೋಕವನ್ನೇ ಸೃಷ್ಟಿಸಿರುತ್ತಿದ್ದವು.

ಗದ್ದೆ ಕುಯಿಲು ಮುಗಿಯುವುದನ್ನೇ ಕಾಯುತಿತ್ತೇನೋ ಎನ್ನುವ ಹಾಗೆ, ತುಂಬೆ  ಮೊಳಕೆಯೊಡೆಯುತಿತ್ತು. ಮೃದುವಾದ ರೆಂಬೆ ತೀರಾ ಎತ್ತರವೂ ಅಲ್ಲದೆ ಪುಟ್ಟದೂ ಅಲ್ಲದೆ  ಬಿಚ್ಚಿಟ್ಟ ಕೊಡೆಯಂತೆ ಹರಡಿಕೊಂಡು, ಉದ್ದವಾದ ಹಾಗೂ ತೆಳುವಾದ ಹಸಿರು ಎಲೆಗಳು ಇರುತಿದ್ದ ಅದು ಮಾಗಿಯ ಗಾಳಿಗೆ, ಓಡಾಡುವರ ಕಾಲ್ತುಳಿತಕ್ಕೆ, ಹಸುಗಳ ಓಡಾಟದ ರಭಸಕ್ಕೆ ಎದುರಾಗಿ ಉಳಿಯುವುದಲ್ಲದೆ ಶಿವರಾತ್ರಿ ಬರುವುದನ್ನೇ ಕಾಯುತ್ತಿತ್ತೇನೋ ಅನ್ನುವ ಹಾಗೆ ಮೈ ತುಂಬಾ ಹೂವರಳಿಸಿಕೊಂಡಿರುತ್ತಿತ್ತು.

ಪುಟ್ಟ ಗಿಡ ಆದರೆ ಉಪಯೋಗ ಮಾತ್ರ ಬೆಟ್ಟದಷ್ಟು. ಎಲೆ, ಕಾಂಡ, ಚಿಗುರು, ಹೂ ಹೀಗೆ ಪ್ರತಿಯೊಂದು ಭಾಗವೂ ಉಪಯುಕ್ತ. ತಲೆನೋವು, ಶೀತ, ಕೆಮ್ಮು, ಜಾಂಡಿಸ್, ಅಜೀರ್ಣ ಹೀಗೆ ಹಲವಾರು ರೋಗಗಳಿಗೆ ಇದು ಔಷಧ. ಇದು ವಿಷವನ್ನು ಇಳಿಸಲು ಸಹಾಯ ಮಾಡುತ್ತಂತೆ. ಹಾಗಾಗಿಯೇ ವಿಷಕಂಠನಿಗೂ ಪ್ರಿಯವಾ....  ಮುಟ್ಟಿದರೆ ಮುದುರುವುದೇನೋ ಎನ್ನಿಸುವ ಈ ಗಿಡ ಎಷ್ಟು ಸ್ಟ್ರಾಂಗ್ ಅನ್ನೋದು ಅದನ್ನು ಬಳಸಿದಾಗಲೇ ತಿಳಿಯುತ್ತಿದ್ದದ್ದು. ಎಲ್ಲರಿಗೂ ಬಾಗುವ ಅದು ಎಷ್ಟೊಂದು ಸಂಗತಿಯನ್ನು ಬಾಗಿಸುತಿತ್ತು ಎಂದು ಬೆರಗಾಗುವಾಗೆಲ್ಲ ಬಾಗಿದವನಿಗೆ ಬಾಗಿಸುವುದು ಗೊತ್ತಿರುವುದೇನೋ ಅಂತಲೂ ಅನ್ನಿಸುತಿತ್ತು. ಯಾರನ್ನಾದರೂ ಅಣಕಿಸಲು ಹೋಗು ಹೋಗು ತುಂಬೆ ಗಿಡಕ್ಕೆ ನೇಣು ಹಾಕ್ಕೋ ಅಂತ ಯಾಕೆ ಅಂತಾರೆ ಅನ್ನೋದು ಅದರ ಮೃದುತ್ವ ಸ್ಪರ್ಷಿಸುವಾಗ ಅರಿವಿಗೆ ಬರುತಿತ್ತು. ತುಂಬೆ ಅಂದರೆ ಬದುಕು, ತುಂಬೆ ಅಂದ್ರೆ ಜೀವನೋತ್ಸಾಹ. ಇಷ್ಟೆಲ್ಲಾ ಗುಣಗಳಿದ್ದರೂ ಹಮ್ಮಿಲ್ಲ ಅನ್ನುವುದು ಅದರ ಗಾತ್ರವೇ ಹೇಳುತಿತ್ತು.

ಅದೂ ಹಾಗೆ ಶಿವರಾತ್ರಿ ಬರುವುದನ್ನೇ ಕಾಯುತಿದ್ದು ಮೈತುಂಬಾ ಹೂವರಳಿಸಿಕೊಂಡು ಬೀಗುತ್ತಿತ್ತು. ಕುಕ್ಕರಗಾಲಿನಲ್ಲಿ ಕೂತು ಆ ಪುಟ್ಟ ಬಿಳಿಯ ಹೂವನ್ನು ಒಂದೊಂದಾಗಿ ಬಿಡಿಸಿ ಬಟ್ಟಲಿಗೆ ಹಾಕುವಾಗ ಎಲೆಯ ತುದಿಯಲ್ಲಿ ವಿಶ್ರಮಿಸುತಿದ್ದ ಅಮೃತದ ಬಿಂದುಗಳು ಬೆರಳುಗಳ ಮೂಲಕ ಸಂಚರಿಸಿ ಕೈಯೆಲ್ಲಾ ಒದ್ದೆಯಾಗಿಸಿ ಮನಸ್ಸನ್ನು ತೇವಗೊಳಿಸುತ್ತಲೇ ಮರೆಯಾಗುತಿತ್ತು. ಹಾಗೆ ಒದ್ದೆಯಾದ ಮನಸ್ಸು ಅದೆಷ್ಟು ಭಾವಗಳಿಗೆ ಜಾಗ ಕೊಡುತ್ತಿತ್ತು ಹೇಳುವುದು ಹೇಗೆ?  ಒಂದು ಬಟ್ಟಲು ಹೂ ಕೊಯ್ಯುವುದು ಎಷ್ಟು ಹೊತ್ತು ಅನ್ನುವ ನಮ್ಮ ಅಹಂಕಾರವನ್ನೂ ಆವಿಯಾಗಿಸಿ ಕೊಂಡು ಹೋಗುತಿತ್ತು. ಪುಟ್ಟ ಒಡಲು ಅದೆಷ್ಟು ನಕ್ಷತ್ರಗಳನ್ನು ಹುದುಗಿಸಿ ಇಟ್ಟುಕೊಂಡಿರುತಿತ್ತು ಅಂದರೆ ಕೊಯ್ದಷ್ಟೂ ಮುಗಿಯುತ್ತಿರಲಿಲ್ಲ. ಆದರೆ ಆ  ಶ್ವೇತವರ್ಣದ ಸುಂದರಿ ಎಷ್ಟು ಕೊಯ್ದರೂ ಬೇಗ ತುಂಬುತ್ತಿರಲಿಲ್ಲ. ಹೂವಿನ ತುದಿಯಲ್ಲಿ ಜೇನಿನ ಸಿಹಿಯಂತ ದ್ರವ ಇರುತಿತ್ತು. ಹಾಗಾಗಿ ಗಿಡದ ತುಂಬಾ ಇರುವೆಗಳೂ ಅದನ್ನು ಹೀರಲು ತುಂಬಿಕೊಂಡಿರುತ್ತಿದ್ದವು. ಅವುಗಳನ್ನು ಓದಿಸಿ, ಅದನ್ನು ಕೊಯ್ದು ಹಾಕುತ್ತಾ ಹೋದರೆ ಅದೂ  ಅಲ್ಲಲ್ಲೇ ಜಾಗ ಮಾಡಿಕೊಂಡು ಬಂದವರಿಗೆ ಜಾಗ ಬಿಡುತ್ತಾ, ಜಾಗ ಕೊಡುತ್ತಾ ಎಲ್ಲರನ್ನೂ ಸೇರಿಸಿಕೊಂಡರೂ ತುಂಬದೆ ತೆರೆದ ಬಾಹುಗಳಿಂದ ಸ್ವಾಗತಿಸುವ ಹೂ ಹಾಗೂ ಬಟ್ಟಲು ಕುಂಭಕರ್ಣನ ಹೊಟ್ಟೆಯನ್ನು ನೆನಪು ಮಾಡುತಿತ್ತು. ಯಾವುದೇ ಸಣ್ಣ ಕೆಲಸ ಅನ್ನಿಸಿದ್ದು ಕೂಡಾ ಪಟ್ಟು ಹಿಡಿದು ಮಾಡುವಾಗಲೇ ಎಷ್ಟು ಕಷ್ಟ ಹಾಗೂ ಎಷ್ಟು ಮುಖ್ಯ ಅನ್ನಿಸೋದು.

ಶಿವನಿಗೆ ತುಂಬೆ ಪ್ರಿಯವಂತೆ. ಈ ಪುಟ್ಟ ಗಿಡದಲ್ಲಿ ಬಿಡುವ ಪುಟಾಣಿ ಬಿಳಿ ಹೂ ಅದೂ ಮುಟ್ಟಿದರೆ ನಲುಗುವುದೇನೋ ಅನ್ನುವಷ್ಟು ಮೃದುವಾದ ಹೂ ತಾಂಡವ ಶಿವನಿಗೆ, ರುದ್ರನಿಗೆ ಪ್ರಿಯ. ಎಲ್ಲಿಯ ರೌದ್ರ ಎಲ್ಲಿಯ ಮೃದುತ್ವ. ಪ್ರಕೃತಿಯಲ್ಲಿ ಪ್ರತಿಯೊಂದು ಹೀಗೆ ವೈಚಿತ್ರ್ಯಗಳೇ ಅನ್ನಿಸಿದರೂ ಒಂದಕ್ಕೊಂದು ಜೋಡಿಸುವ ಅದರ ಕುಶಲತೆ ಬೆರಗು ಹುಟ್ಟಿಸುತ್ತದೆ. ಶಿವರಾತ್ರಿಯ ದಿನ ಶಿವನಿಗೆ  ಎಷ್ಟು ತುಂಬೆ ಹೂ ಕೊಡ್ತಿರೋ ಅಷ್ಟು ಖುಷಿಯಾಗಿ ಆಶೀರ್ವಾದ ಮಾಡ್ತಾನೆ. ಹಂಗಾಗಿ ಸೋಮಾರಿತನ ಮಾಡದೆ ಹೂ ಕೊಯ್ಯಬೇಕು ಅನ್ನೋ ಜಯತ್ತೆಯ ಮಾತು ಕೆಲಸ ಅರ್ಧದಲ್ಲಿ ನಿಲ್ಲಿಸದೆ ಮುಂದುವರಿಸುವ ಹಾಗೆ ಮಾಡಿ, ಜಾಸ್ತಿ ಆಶೀರ್ವಾದ ಪಡೆಯುವ ಆಸೆಯಲ್ಲಿ, ಅವನನ್ನು ಮೆಚ್ಚಿಸುವ ಹಂಬಲದಲ್ಲಿ  ಹಾಗೆ ಕುಕ್ಕರಗಾಲಿನಲ್ಲೇ ಮುಂದೆ ಮುಂದೆ ಹೋಗುತ್ತಾ ಬಟ್ಟಲು ತುಂಬುವ ಹೊತ್ತಿಗೆ ಎರಡು ಮೂರೂ ಗದ್ದೆ ದಾಟಿ ಅಲ್ಲೆಲ್ಲೋ ಹೋಗಿರುತ್ತಿದ್ದೆವು. ತಿರುಗಿದರೆ ದಾರಿ ಅಷ್ಟು ದೂರದವರೆಗೆ ಕಾಣುತಿತ್ತು. ಬೆಳಕು ಚೆಲ್ಲಾಡಿರುತ್ತಿತ್ತು. ಮನೆಗೆ ಬಂದರೆ ಶಿವ ನೈವೇದ್ಯಕ್ಕೆ ರೆಡಿಯಾಗಿರುತಿದ್ದ.

ಇಳಿ ಸಂಜೆಯ ಹೊತ್ತಿಗೆ ಎಲ್ಲರೂ ಕೊಯ್ದ ಹೂವನ್ನು ಒಂದು ಬುಟ್ಟಿಗೆ ಹಾಕಿಕೊಂಡು ಮೈಲಾಚೆ ಇರುವ ಈಶ್ವರನ ದೇವಸ್ಥಾನಕ್ಕೆ ಹೋದರೆ ಪ್ರದೋಷದ ಪೂಜೆಗೆ ರೆಡಿಯಾಗಿರುತಿದ್ದ ಶಿವ ತಣ್ಣಗೆ ನಗುತಿದ್ದ. ತಲೆಯ ಮೇಲೆ ಗಂಗೆ ಇದ್ದರೂ ಅವನಿಗೆ ನೀರು ಸುರಿದಷ್ಟೂ ಸಾಲದು. ಹೂ ಏರಿಸಿದಷ್ಟೂ ಆನಂದ. ಭಜನೆ, ಅರ್ಚನೆ, ಘಂಟಾನಾದ  ಮಂತ್ರಘೋಷ, ಅಭಿಷೇಕದ ಸದ್ದುಗಳಿಂದ ಇಡೀ ವಾತಾವರಣವೇ ರಂಗೇರುತಿತ್ತು. ಸುಮ್ಮನೆ ಕೂತು ಕಣ್ಣು ಮುಚ್ಚಿದರೂ ಒಳಗೊಂದು ನಿಶಬ್ದ ಹೆಡೆಯಾಡುತಿತ್ತು. ದಿವ್ಯತೆಯೊಂದು ಬಂದ ಪ್ರತಿಯೊಬ್ಬರನ್ನು ಆವಾಹಿಸುತಿತ್ತು. ಒಂದಷ್ಟು ಹೊತ್ತು ಕುಳಿತು ಮನೆಗೆ ಬಂದು ಫಲಾಹಾರ ಮಾಡಿ ನಾನಿವತ್ತು ಜಾಗರಣೆ ಮಾಡ್ತೀನಿ ಅಂತ ಹಾಕಿದ ಹರಿಕತೆಯನ್ನೋ , ಯಕ್ಷಗಾನವನ್ನೋ ಕೇಳುತ್ತಾ ಚಳಿಗೆ ಹೊದ್ದು ಕುಳಿತರೆ ನಸುಕು ಅಡಿಯಿಡುವಾಗ ಹಾಸಿಗೆಯಲ್ಲಿರುತ್ತಿದ್ದದ್ದು ಹೇಗೆ ಅನ್ನೋದು ಮಾತ್ರ ಗೊತ್ತೇ ಆಗುತ್ತಿರಲಿಲ್ಲ. ಅಂಗಳದ ತುಂಬೆ ಮಾತ್ರ ತನಗೆಲ್ಲಾ ಗೊತ್ತು ಅನ್ನುವ ಹಾಗೆ, ನಿನ್ನೆ ಖಾಲಿ ಮಾಡಿದ್ದೂ ಮರೆತು ಮತ್ತೆ ಮೈದುಂಬಿ ನಗುತಿರುತಿತ್ತು.
ಶಿವ ಮುಗ್ಧ ಹಾಗೇ ರುದ್ರ... ಸರಳ, ಅಷ್ಟೇ ಧೃಢ. ಶತ ಒರಟ, ದೇಹದ ಅರ್ಧಭಾಗವನ್ನೇ ಹೆಂಡತಿಗೆ ಕೊಡುವ ಮೃದು ಹೃದಯಿ. ಕೋಪಿಷ್ಠ, ಅಷ್ಟೇ ತಾಳ್ಮೆ. ಶಿವ ಅರ್ಥವಾಗುವುದು ಸುಲಭವಲ್ಲ, ಮೆಚ್ಚಿಸುವುದೂ ಈಜಿ ಅಲ್ಲ.. ಅಂದುಕೊಳ್ಳುವ ಹೊತ್ತಿಗೆ ಒಂದು ತುಂಬೆಗೆ, ಬಿಲ್ವಪತ್ರಕ್ಕೆ ಕರಗಿ ನೀರಾಗಬಲ್ಲ. ಶಿವ ಎಂದರೆ ಲಯ, ಶಿವ ಎಂದರೆ ಶವಕ್ಕೂ ಜೀವ ನೀಡುವವ.


ಅಂತ ಶಿವ ಹರಸಲಿ....
ತುಂಬೆಯ ಗಟ್ಟಿತನ ಉಸಿರಾಗಲಿ...

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...