ಪುಲ್ವಾಮ

ಮೊನ್ನೆಯ ಪುಲ್ವಾಮ ಘಟನೆಗಿಂತ ಹೆಚ್ಚು ಭೀಭತ್ಸ ಎನ್ನಿಸಿದ್ದು ಅದನ್ನು ಸಮರ್ಥಿಸುವ ಒಳಗಿನ ಉಗ್ರರು. ಇಡೀ ದೇಶವೇ ಬೆಚ್ಚಿಬೀಳುವ, ಸಂಕಟ ಪಡುವ ಹೊತ್ತಿನಲ್ಲೇ ಸಾವಿನ ಮನೆಯ ಚಿತೆಯಲ್ಲಿ ಬೇಳೆ ಬೇಯಿಸಿಕೊಳ್ಳುವ ಗುಂಪು ಮೋದಿಯನ್ನು ಹಣಿಯುವ ಅವಕಾಶ ಸಿಕ್ಕಿದ್ದಕ್ಕೆ ಅಕ್ಷರಶಃ ಹೆಣಕಂಡ ರಣಹದ್ದುಗಳಂತೆ ಕೇಕೆ ಹಾಕಿ ಸಂಭ್ರಮಿಸಿ ಒಂದಾಗಿ ನಿಂತು ದನಿ ಎತ್ತುವ ಸಮಯದಲ್ಲಿ ಅಪಸ್ವರ ಎತ್ತಿದ್ದು ಜೀರ್ಣಿಸಿಕೊಳ್ಳಲಾಗದ ವಿಷವೇ.

ಮೈಯಲ್ಲಿ ರಕ್ತ ಹರಿಯುವ ಪ್ರತಿಯೊಬ್ಬರೂ ಪ್ರತಿಕಾರದ ಮಾತಾಡುತ್ತಿದ್ದರೆ ಇವರು ಮಾತ್ರ ಉಗ್ರರನ್ನು ಯೋಧರ ಸಮಕ್ಕೆ ಹೋಲಿಸಿ ಅವರಿಗೂ ಕಾರಣಗಳಿವೆ ಎಂಬಲ್ಲಿಂದ ಹಿಡಿದಿ ಅಲ್ಲಿನ ಜನಮತ ಪಡೆದು ಕಶ್ಮೀರವನ್ನು ಬಿಟ್ಟುಕೊಡಬೇಕು ಎನ್ನುವವರೆಗೂ ಹೋಗಿದ್ದಾರೆ. ಯಾವಜನಮತ ಯಾರಿಗೆ ಎಂದರೆ ಮತ್ತೆ ಇವರ ಅನುಕಂಪ ತಿರುಗುವುದು ಅಲ್ಲಿಂದ ಓಡಿಸಿದ ಕಾಶ್ಮೀರಿ ಪಂಡಿತರ ಬಗೆಗಲ್ಲ ಅಲ್ಲಿ ಅವರನ್ನು ಓಡಿಸಿ, ನಾಶಮಾಡಿದ ಮುಸ್ಲಿಂ ಗಳ ಬಗ್ಗೆ, ಉಗ್ರಗಾಮಿಗಳಾಗಿ ತಯಾರಾದವರ ಬಗ್ಗೆ. ಗೆಳತಿಯೊಬ್ಬರ ಜೊತೆ ಮಾತಾಡುವಾಗ ಅವರು ಇಂಥಹುದೇ ಒಂದು ಉದಾಹರಣೆ ಹೇಳುತ್ತಿದ್ದರು. ಬಹಳ ಹಿಂದೆ ಸೈಟ್ ತೆಗೆದುಕೊಳ್ಳುವಾಗ  ಕಸ್ತೂರಿ ನಗರದಲ್ಲಿ ತೋರಿಸಿದವರಿಗೆ ಇಲ್ಲಿ ಬೇಡಾ ಇಲ್ಲಿ ತಮಿಳರು ಜಾಸ್ತಿ ಹೊಂದಿಕೆ ಆಗುವುದಿಲ್ಲ, ಕನ್ನಡಿಗರು ಇರುವ ಏರಿಯ ತೋರಿಸಿ ಎಂದಾಗ ಅವರಂದಿದ್ದರಂತೆ. ನೀವು ಹೀಗೆ ಬಿಟ್ಟು ಕೊಟ್ಟು ಹೀಗಾಗಿರುವುದು. ನಾಳೆ ಇದು ಅವರದೇ ಜಾಗವಾಗಿ ಹೋದರೆ ಏನು ಮಾಡ್ತೀರಿ ಅಂತ.

ಈಗ ಜನಮತ ಅನ್ನುವ ಕಮ್ಯುನಿಷ್ಟ್ ಬಳಗ ಮಾಡಲು ಹೊರಟಿದ್ದು ಇದನ್ನೇ. ಹಿಂದೆ ಅಲ್ಲಿ ಯಾರಿದ್ದರು? ಯಾಕಾಗಿ ಅಲ್ಲಿಂದ ಹೋದರು ಎನ್ನುವುದು ತಿಳಿಯದೆ ಇಂದು ಬಂದು ಆಕ್ರಮಿಸಿಕೊಂಡವರ ಜನಮತ ತೆಗೆದುಕೊಂಡರೆ ಯಾವ ರೀತಿಯ ಅಭಿಪ್ರಾಯ ಬರಬಹದು? ಅದು ಸೇರಬೇಕಾಗಿದ್ದು ಯಾರಿಗೆ, ಈಗ ಸೇರಿರುವುದು ಯಾರಿಗೆ ಎಂದು ಒಂದು ಕ್ಷಣ ಯೋಚಿಸಿದರೂ ಈ ಜನಮತ ಎನ್ನುವ ನಾಟಕದ ಹಿಂದಿನ ಅವರ ಭಾವ ಉದ್ದೇಶ ಅರ್ಥವಾಗಿಬಿಡುತ್ತದೆ. ಇವರ ಕಾಳಜಿ ಯಾರ ಬಗೆಗೆ ಎಂದು ತಿಳಿದುಬಿಡುತ್ತದೆ.

ಮೋದಿಯ ವೈಫಲ್ಯ ಎಲ್ಲಿ 56 ಇಂಚಿನ ಎದೆ ಎಂದು ಬಡಿದುಕೊಳ್ಳುವವರ ಉದ್ದೇಶವನ್ನು ಒಮ್ಮೆ ಗಮನಿಸಿ. ಅಲ್ಲಿ ಮೋದಿ ಹಣಿಯುವ ಹಪಾಹಪಿ ಬಿಟ್ಟು ಬೇರೇನೂ ಕಾಣಿಸುವುದಿಲ್ಲ. ಉಗ್ರ ಸಂಘಟನೆ ಘಟನೆಯ ಹೊಣೆ ಹೊತ್ತು ಹೇಳಿಕೆ ಕೊಟ್ಟ ಮೇಲೂ ಇದು  ಚುನಾವಣ ಸಮಯದಲ್ಲಿ ನಡೆದ ಧಾಳಿ, ಮೋದಿಯೇ ಯಾಕೆ ಮಾಡಿಸಿರಬಾರದು? ಅಂದು ಕಾರ್ಗಿಲ್ ಯುದ್ಧವೂ ಹೀಗೆ ನಡೆದಿತ್ತು ಎನ್ನುವ ಇವರ ಬಳಿ ಸಾಕ್ಷಿ ಏನಿದೆ ವಿಚಾರಿಸಿ... ಏನೂ ಇರುವುದಿಲ್ಲ ಆರೋಪ ಮಾಡುವುದರ ವಿನಃ.. ಕಾರ್ಗಿಲ್ ಅಲ್ಲಿ ನಡೆದದ್ದು ಅತಿಕ್ರಮಣ ಅನ್ನೋದೂ ಅವರಿಗೆ ನೆನಪಿರುವುದಿಲ್ಲ. ಇದು ರಾಜಕೀಯ ಪ್ರೆರಿತವಾದರೆ ಹಿಂದೆ ನಡೆದ ಎಲ್ಲಾ ಧಾಳಿಗಳು ಹಾಗೆ ಆಗಿರಬಹುದಲ್ಲಾ ಎನ್ನುವ ಸಂದೇಹ ಮೂಡುವುದಿಲ್ಲವೇ ಕೇಳಿ ನೋಡಿ ಅದಕ್ಕೆ ಉತ್ತರವಿರುವುದಿಲ್ಲ. ಇದರ ಹಿಂದಿನ ಭಾವ ಸ್ಪಷ್ಟ. ಹೀಗಾಗಲಿ ಎನ್ನುವ ಆಸೆ ಅವರಿಗಿತ್ತು. ಅದರಿಂದ ಮೋದಿಯನ್ನು ಹಣಿಯಬಹುದು ಎನ್ನುವ ಕಲ್ಪನೆಯಿತ್ತು. ಹಾಗಾಗಿಯೇ ಉಗ್ರರು ತಾವೇ ಹೊಣೆ ಹೊತ್ತ ನಂತರವೂ ಅವರು ಧಾಳಿಗೆ ಪ್ರತಿಕಾರ ಕೇಳದೆ, ಉಗ್ರರನ್ನು ಖಂಡಿಸದೆ ಮೋದಿಯನ್ನು ಟೀಕಿಸುತ್ತಿರುವುದು. ಚುನಾವಣೆಯಲ್ಲಿ ಸೋಲುವ ಭಯ ಅವರನ್ನು ಕಾಡುತ್ತಿದೆಯೇ? ಸನ್ನಿವೇಶಗಳು ಅದನ್ನೇ ದ್ವನಿಸುತ್ತಿವೆ.

ಯಾವುದೇ ದೇಶವಾದರೂ ತನ್ನ ಮೇಲೆ ಧಾಳಿ ನಡೆದಾಗ ಒಕ್ಕೊರಲಿನಿಂದ ಪ್ರತಿಭಟಿಸುತ್ತದೆ. ಇಸ್ರೇಲ್ ನಂತಹ ಪುಟ್ಟ ದೇಶ ಕೂಡಾ ಹುಡುಕಿ ಹುಡುಕಿ ಪ್ರತಿಕಾರ ತೀರಿಸಿಕೊಳ್ಳುತ್ತದೆ. ಜಗತ್ತಿನಲ್ಲಿ ಹೆಚ್ಚು ಆಯುಧಗಳ ಖರೀದಿಸುವ ರಾಷ್ಟ್ರಗಳ ಪಟ್ಟಿಯಲ್ಲಿರುವ ಭಾರತಕ್ಕೆ ಅದ್ಯಾಕೆ ಸಾಧ್ಯವಾಗುವುದಿಲ್ಲ ಎನ್ನುವ ಸಾಮಾನ್ಯರ ಆಕ್ರೋಶಕ್ಕೆ, ಸಂದೇಹಕ್ಕೆ ಉತ್ತರ ಕೊಡುವುದು ಸ್ವಲ್ಪ ಕಷ್ಟವೇ. ಇಲ್ಲಿ ಉಗ್ರರಿಗಿಂತ ಮೊದಲು ಅವರನ್ನು ಸಮರ್ಥಿಸುವ ಒಂದು ಪಡೆಯೇ ಇದೆ. ಅದು ತಾನೇ ಸ್ವಾತಂತ್ರ್ಯ ತಂದು ಕೊಟ್ಟೆ ಅನ್ನುವ ಪಕ್ಷವಿರಬಹುದು, ಆಯಕಟ್ಟಿನ ಜಾಗಗಳಲ್ಲಿ ಕುಳಿತಿರುವವರಿರಬಹುದು, ಭೋಧಿಸುವ ಉನ್ನತ ಸ್ಥಾನದಲ್ಲಿರುವವರು ಆಗಬಹುದು, ಸೆಲೆಬ್ರಿಟಿಗಳೆಂದು ಹೆಸರು ಮಾಡಿರುವವರೂ ಆಗಿರಬಹದು.ಅವರಿಗೆ ದೇಶಕ್ಕಿಂತ ಸಿದ್ಧಾಂತವೇ ಮುಖ್ಯ, ಅದೆಲ್ಲಕ್ಕಿಂತ ಮೋದಿಯನ್ನು ವಿರೋಧಿಸುವುದು ಬಹು ಮುಖ್ಯ.

ಹೊರಗಿನ ಶತ್ರುಗಳನ್ನು ಎದುರಿಸಬಹುದು, ಬಗ್ಗು ಬಡಿಯಬಹುದು. ಆದರೆ ಜೊತೆಗೆ ಇದ್ದು, ಇಲ್ಲೇ ತಿಂದು, ಇಲ್ಲೇ ಬೆಳೆದು, ಇಲ್ಲಿಯ ಗಾಳಿ ಉಸಿರಾಡಿ ಇಲ್ಲಿಗೆ ಬೆನ್ನಿಗೆ ಚೂರಿ ಹಾಕುವ ಮನಸ್ಥಿತಿ ಇದೆಯಲ್ಲ ಅದನ್ನು ಅಷ್ಟು ಸುಲಭವಾಗಿ ಎದುರಿಸುವುದು ಸುಲಭವೇ? ಒಳಗಿನ ದ್ರೋಹಿಗಳನ್ನು ಮಟ್ಟಹಾಕದ ಹೊರತು ಈ ತರಹದ ಧಾಳಿಗಳನ್ನು ನಿಲ್ಲಿಸುವುದು ಕಷ್ಟ. ಹಾಗಾಗಿ ಸರ್ಜಿಕಲ್ ಸ್ಟ್ರೈಕ್ ಎನ್ನುವುದು ಇವತ್ತು ಗಡಿಯ ಆಚೆಗಿಂತ ಗಡಿಯ ಒಳಗೆ ಬಹಳ ಮುಖ್ಯವಾಗಿದೆ. ತನ್ನದೇ ದೇಶದ ಸೈನಿಕರು ಕ್ಷಣ ಮಾತ್ರದಲ್ಲಿ ಛಿದ್ರ ಛಿದ್ರವಾಗಿ ಹೋಗಿರುವಾಗ, ಹಲವಾರು ಕುಟುಂಬಗಳ ದೀಪವೆ ಆರಿ ಹೋಗಿರುವಾಗ, ಇಡೀ ದೇಶಕ್ಕೆ ದೇಶವೇ ದುಃಖದಲ್ಲಿ ಸಂಕಟದಲ್ಲಿ ಮುಳುಗಿರುವಾಗ ಕೇಕೆ ಹಾಕಿ ನಗುತ್ತಾ ಸಮರ್ಥಿಸುತ್ತಾರಲ್ಲ ಅವರಿಗೆ ಸ್ವಾಭಿಮಾನ, ಅಂತಃಕರಣ ಇರುವುದೇ ಇಲ್ಲವೇ ಎನ್ನುವ ಪ್ರಶ್ನೆ ಕಾಡುವುದಿಲ್ಲ. ಯಾಕೆಂದರೆ ಅವು ಕಾಡುವುದ ಮನುಷ್ಯರಿಗೆ ಹೊರತು ನರರೂಪಿ ರಾಕ್ಷಸರಿಗಲ್ಲ.

ಮಹಾಭಾರತದ ಯುದ್ಧದ ಸಂದರ್ಭದಲ್ಲಿ ಕುತಂತ್ರಿಗಳಿಗೆ ತಂತ್ರ ಮಾಡುವ ಹಕ್ಕಿರುವಾಗ ಈಶ್ವರನಿಗೆ ಲೋಕತಂತ್ರದ ಹಕ್ಕಿಲ್ಲವೇ ಎಂದು ಕೇಳಿದವನು ಶ್ರೀ ಕೃಷ್ಣ. ಯಾರಿಗೆ ಯಾವ ಭಾಷೆಯಲ್ಲಿ ಹೇಳಿದರೆ ಅರ್ಥವಾಗುತ್ತದೋ ಆ ಭಾಷೆಯಲ್ಲಿ ಹೇಳುವುದು ನಿಜವಾದ ನಾಯಕನ ಲಕ್ಷಣ ಹಾಗೂ ಆ ಸಂದರ್ಭದ ಜರೂರತ್ತು ಕೂಡಾ. ಅತಿಯಾದ ದಯೆ, ಅಹಿಂಸೆ ತಾಳ್ಮೆ ಕೂಡಾ ವ್ಯರ್ಥವೇ, ಅಪಾಯವೇ.ಹಾಗಾಗಿಯೇ ಸಾಮ ದಾನ ಭೇದಗಳ ನಂತರ ದಂಡ ಎನ್ನುವ ಉಪಾಯ ಜಾರಿಯಲ್ಲಿರುವುದು. ಹಾಗಾಗಿ ಪಾಕಿಸ್ತಾನವನ್ನು ಬಗ್ಗು ಬಡೆಯುವುದು ಎಷ್ಟು ಆವಶ್ಯಕವೋ ಪಾಕಿಸ್ತಾನಿ ಮನಸ್ಥಿತಿ ಹೊಂದಿರುವ ಒಳಗಿನ ಉಗ್ರರನ್ನು ಸದೆಬಡೆಯುವುದು ಕೂಡಾ ಅಷ್ಟೇ ಅನಿವಾರ್ಯವಾಗಿದೆ.

ವೈಫಲ್ಯವನ್ನು ಪ್ರಶ್ನಿಸುವುದಕ್ಕೂ, ಮೋದಿಯನ್ನು ಟೀಕಿಸುವುದಕ್ಕೂ ವ್ಯತಾಸವಿದೆ ಎನ್ನುವುದು ಅರಿಯದಷ್ಟೂ, ತಮ್ಮ ಮುಖವಾಡಗಳು ಕಳಚಿ ಬಣ್ಣ ಬಯಲಾಗುತ್ತಿದೆ ಎನ್ನುವುದು ಗೊತ್ತಾಗದಷ್ಟು ಹತಾಶೆ ಆವರಿಸಿದೆಯಾ? ಅಥವಾ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವಷ್ಟು ಮನಸ್ಸು ಹಸಿದಿದೆಯಾ? ಮೋದಿಯನ್ನು ಎದುರಿಸುವ ಅಸ್ತ್ರ ಬೇರ್ಯಾವುದು ಸಿಕ್ಕದೆ ಬೇಸತ್ತು ಹೋಗಿದೆಯಾ? ಆದರೂ ಬೆಚ್ಚಿ ಬೀಳಿಸುವುದು ಉಗ್ರಗಿಂತಲೂ ಇವರಿಗೆ ಅವರನ್ನು ಸಮರ್ಥಿಸುವ ಮನೋಭಾವ ಕಂಡಾಗ. ಕಣ್ಣೆದೆರು ದಾಖಲೆಗಳು ಇದ್ದರೂ  ಭಯೋತ್ಪಾದನೆಗೆ ಧರ್ಮವಿಲ್ಲ ಎಂದು ಬೊಬ್ಬಿರಿಯುವುದು ಕಂಡಾಗ. ಅಂತ ಅನಿವಾರ್ಯತೆಯಾದರೂ ಯಾವುದು ಎನ್ನುವುದು ಕಶ್ಮೀರದಂತೆ ಇಂದಿಗೂ ಬಗೆಹರಿಯದ ಪ್ರಶ್ನೆಯೇ..

ಏನೇ ಹೇಳಿ ಭಾರತಕ್ಕೆ ಶತ್ರುಗಳಿಗಿಂತ ಹಿತ ಶತ್ರುಗಳ ಅಪಾಯವೇ ಜಾಸ್ತಿ...

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...