hosadiganta 01.03.19

ಯಾವುದೇ ಒಳ್ಳೆಯ ಕೆಲಸ ಮಾಡಲೂ ಸಹ ಬ್ರಾಹ್ಮಿ ಮಹೂರ್ತ ಒಳ್ಳೆಯದಂತೆ. ಹಾಗಾಗಿಯೇ ಓದಲು, ಸಾಧನೆ ಮಾಡಲು, ಧ್ಯಾನ, ಜಪ ತಪಗಳನ್ನ ಮಾಡಲು ಬ್ರಾಹ್ಮಿ ಮಹೂರ್ತದಲ್ಲಿಯೇ ಏಳುತ್ತಾರೆ. ಕಾರ್ಯತತ್ಪರರಾಗುತ್ತಾರೆ. ಅಂಥಹದೊಂದು ಬ್ರಾಹ್ಮಿ ಮಹೂರ್ತದಲ್ಲಿಯೇ ಸೇನೆಯೂ ನಭಕ್ಕೆ ಚಿಮ್ಮಿತ್ತು. ಸೂರ್ಯ ಉದಯಿಸಿ ಬಾನು ಕೆಂಪಾಗುವ ಮುನ್ನವೇ ಅಗ್ನಿ ಜ್ವಾಲೆಯ ಕಂಪು ಹರಡಿಸಿ ಬಂದಿತ್ತು. ಒಳಗೊಳಗೇ ಸಂಕಟ ಪಡುತ್ತಿದ್ದ, ಬೇಯುತ್ತಿದ್ದ ಕೋಟ್ಯಾಂತರ ಭಾರತೀಯರಿಗೆ ಸಮಾಧಾನ ಕೊಟ್ಟಿತ್ತು. ಸುಖಾ ಸುಮ್ಮನೆ ನನ್ನ ಕೆಣಕಿದರೆ ನಿಮ್ಮ ಮನೆಯೊಳಗೇ ಬಂದು ಹೊಡೆಯುವ ಸಾಮರ್ಥ್ಯ ನನ್ನಲ್ಲಿದೆ, ಇನ್ನೊಂದು ಕೆನ್ನೆ ತೋರುವ ಕಾಲ ಹೋಯ್ತು ಎಂದು ಮೌನವಾಗಿಯೇ ಹೇಳಿ ಬಂದಿತ್ತು.

ಈ ನೆಲದ ಮೂಲ ಗುಣ ಕ್ಷಾತ್ರವೇ... ಹತ್ತೂ ಅವತಾರಗಳೂ ಶಾಂತಿಗಾಗಿ ಪ್ರಯತ್ನಿಸಿದರೂ ಹೇಡಿಯಾಗಿ ಕೂರಲಿಲ್ಲ. ಯಾರಿಗೆ ಹೇಗೆ ಬುದ್ಧಿ ಕಲಿಸಬೇಕಿತ್ತೋ ಹಾಗೆಯೇ ಕಲಿಸಿದ್ದು. ಸ್ವಾಭಿಮಾನ ತನ್ನತನ ಉಳಿಸಿಕೊಳ್ಳಲು ಬೇಕಾದ ಸಾಮರ್ಥ್ಯ ಹಾಗೂ ಗುಂಡಿಗೆ ಎರಡೂ ಇತ್ತು. ಪಂಚತಂತ್ರವೂ ಉಳಿದೆಲ್ಲ ಆದ ಬಳಿಕ ದಂಡ ವನ್ನೇ ಹೇಳಿತ್ತು.  ಅಂತ ನೆಲದಲ್ಲಿ ಅಹಿಂಸೆ ಅನ್ನುವುದು ಅಸಹಾಯಕತೆಯ ಮುಚ್ಚಿಕೊಳ್ಳುವ ಅಸ್ತ್ರವಾಗಿದ್ದು ಇತ್ತೀಚಿಗೆ. ಅದರ ವ್ಯಾಖ್ಯಾನವನ್ನೇ ಬದಲಾಯಿಸಿದ ಕೀರ್ತಿಯೂ ನಮ್ಮದೇ. ಯಜಮಾನ ದುರ್ಬಲನಾದಾಗ ಅಥವಾ ಅವನಿಗೆ ಅಧಿಕಾರವೋ ಆಮಿಷಕ್ಕೊ ಒಳಗಾದಾಗ ಗುಲಾಮನಾಗಿ ಪರಿವರ್ತಿತ ನಾಗುತ್ತಾನೆ. ಗುಲಾಮಗಿರಿಯನ್ನು ಮುಚ್ಚಿಕೊಳ್ಳಲು ಈ ಅಹಿಂಸೆ ಪರಿಣಾಮಕಾರಿಯಾಗಿ ಬಳಕೆಯಾಗುತ್ತದೆ.

ದಶಕಗಳ ಅವಮಾನಕ್ಕೆ, ನೋವಿಗೆ, ಆಕ್ರೋಶಕ್ಕೆ ಮೌನವಾಗಿ ಹಲ್ಲು ಕಚ್ಚಿ ಸಹಿಸಿದ್ದ ಸೇನೆಯನ್ನು ಯಾವಾಗ ಹಿಡಿತದಿಂದ ಪಾರು ಮಾಡಲಾಯ್ತೋ, ಸಂಪೂರ್ಣ ಸ್ವತಂತ್ರ ಕೊಡಲಾಯ್ತೋ ಆಗ ಮೈಕೊಡವಿ ಎದ್ದು ಕ್ಷಾತ್ರತ್ವವನ್ನು ಪ್ರದರ್ಶಿಸಿತು. ಅಲ್ಲಿಯವರೆಗೆ ಸೇನೆಗೆ ಆ ಶಕ್ತಿ ಇರಲಿಲ್ಲವಾ ಎಂದರೆ ಖಂಡಿತವಾಗಿಯೂ ಇತ್ತು. ಆದರೆ ಅದರ ಕೈ ಕಟ್ಟಿಹಾಕಲಾಗಿತ್ತು ಅಷ್ಟೇ. ಸಮರ್ಥ ನಾಯಕ ಸಿಕ್ಕಾಗ ಪ್ರತಿಯೊಬ್ಬರ ಸಾಮರ್ಥ್ಯವೂ ಉಪಯೋಗಕ್ಕೆ ಬರುತ್ತದೆ ಅನ್ನುವುದಕ್ಕೆ ಬದಲಾದ ಭಾರತವೇ ಸಾಕ್ಷಿ.  ಹೊಕ್ಕು ಹೊಡೆದು ಬಂದ ಸೇನೆಯೇ ನಿದರ್ಶನ. ಅದನ್ನು ಕಂಡು ಸಂಭ್ರಮಿಸಿದ ಕೋಟ್ಯಾಂತರ ಭಾರತಿಯರೇ ಇದಕ್ಕೆ ಉದಾಹರಣೆ.

ಪುಲ್ವಾಮ ಘಟನೆಯ ನಂತರ ಪ್ರತಿಕಾರದ ಮಾತನಾಡಿದವರಲ್ಲಿ ಎರಡು ವಿಧ. ನಿಜವಾಗಿಯೂ ದುಃಖ ಪಟ್ಟು ಉಗ್ರರು ನಾಶವಾಗಿ ಹೋಗಲಿ ಎಂದು ಬಯಸಿದವರು ಒಂದು ವರ್ಗವಾದರೆ ಎಂದಿನಂತೆ ಭಾರತ ಮಾತಾನಾಡಿ ಸುಮ್ಮನಾಗುತ್ತದೆ ಎಂದು ಛೇಡಿಸಲೆಂದೇ ಮಾತಾಡಿದವರು ಇನ್ನೊಂದು ವರ್ಗ. ವಾಯುಸೇನೆಯ ಧಾಳಿಯ ನಂತರ ಅಕ್ಷರಶಃ ಈ ಎರಡನೆಯ ವರ್ಗ ಬೆಚ್ಚಿ ಬಿದ್ದಿತ್ತು. ಉಗ್ರರಿಗಾಗಿ ಮರುಗಿತ್ತು. ಆದರೆ ಪುಲ್ವಾಮ ಘಟನೆಯ ನಂತರ ಒಳಗೂ ನಡೆದ ಇನ್ನೊಂದು ರೀತಿಯ ಸರ್ಜಿಕಲ್ ಸ್ಟ್ರೈಕ್, ಪ್ರಶ್ನಿಸುವ ಜನರನ್ನು ಕಂಡಾಗ ಮತ್ತು ತಮ್ಮ ನಾಯಕ ಏನೂ ಮಾತಾಡದೆ ವಾಯುಸೇನೆಯನ್ನು ಅಭಿನಂದಿಸಿದ್ದು ಕಂಡಾಗ ತಣ್ಣಗೆ ಕುಳಿತಿತ್ತು. ಇತ್ತ ಹೊಗಳಲೂ ಆಗದೆ ಅತ್ತ ತೆಗಳಲೂ ಆಗದೆ ಬಿಸಿತುಪ್ಪ ತಿಂದ ಪರಿಸ್ಥಿತಿ ಅನುಭವಿಸಿತ್ತು. ಶಾಂತಿಯ ಮಾತುಕತೆ ನಡೆಯಲಿ ಎಂದು ಪಿಸುನುಡಿಯಲು ಆರಂಭಿಸಿ ಯುದ್ಧವಾದರೆ ನಮ್ಮ ಸೈನಿಕರು ಸಾಯುತ್ತಾರೆ ಎಂದು ಹುಸಿ ಮರುಕ ತೋರಿಸಲು ಶುರುಮಾಡಿತ್ತು.

ಶಾಂತಿಯಾಗಲಿ, ಸ್ನೇಹವಾಗಲಿ, ಸಂಬಂಧವಾಗಲಿ ಅದು ಎರಡೂ ಕಡೆಯವರಿಗೆ ಬೇಕಾದಾಗ ಮಾತ್ರ ಅದಕ್ಕೊಂದು ಅರ್ಥ ಹಾಗೂ ಘನತೆ. ಅದಿಲ್ಲದೆ ಹೋದಾಗ ಅನರ್ಥವೆ ಸಂಭವಿಸುತ್ತದೆ. ಜಗತ್ತಿನೆದರು ಧಾಳಿಯ ಬಗ್ಗೆ ಹೇಳಿಕೊಳ್ಳಲು ಆಗದೆ ಸುಮ್ಮನಿರಲು ಆಗದೆ ಒದ್ದಾಡಿದ ಪಾಕಿಸ್ತಾನ ಸುಮ್ಮನಂತೂ ಕುಳಿತಿರುವುದಿಲ್ಲ ಎನ್ನುವುದು ಭಾರತಕ್ಕೂ ಗೊತ್ತಿತ್ತು. ಹಾಗಾಗಿ ಅದೂ ಸರ್ವ ಸನ್ನದ್ಧವಾಗಿಯೇ ನಿಂತಿತ್ತು. ಅದರ ಪರಿಣಾಮವೇ ಅವರ F-16 ಧಾಳಿ ಹಾಗೂ ಅದನ್ನು ಹೊಡೆದು ಉರುಳಿಸಿದ್ದು. ಈ ನಡುವೆ ಅನಾಹುತ ನಡೆದು ವಿಂಗ್ ಕಮಾಂಡರ್ ಸೆರೆ ಸಿಕ್ಕಿದ್ದಾರೆ. ನಿನ್ನೆಯಿಂದ ಹಸಿದಿದ್ದ ಬಕಪಕ್ಷಿಗಳಿಗೆ ಆಹಾರ ಸಿಕ್ಕಿ ಖುಷಿಯಾಗಿದೆ. ಹಾಗಾಗಿ ಪಾಕಿಸ್ತಾನ ಹಗಲು ಬಂದು ಬಂಧಿಸಿ ತನ್ನ ಪೌರುಷ ತೋರಿಸುತ್ತಿದೆ ನೀವು ರಾತ್ರಿ ಹೋಗಿ ಏನೋ ಸಾಧಿಸಿ ಬಂದೆ ಅನ್ನುತ್ತಾ ಬಾಯಿ ಮಾತು ಹೇಳುತ್ತಿದ್ದಿರಿ ಹೊರತು ಯಾವ ಸಾಕ್ಷಿಯೂ ಇಲ್ಲ ಎಂದು ಬೊಬ್ಬಿರಿಯುತ್ತಿದ್ದಾರೆ.

ಹೋಗಿದ್ದು ವಿಮಾನಗಳು, ಹಾಕಿದ್ದು 1000 ಕೆ ಜಿ ತೂಕದ ಬಾಂಬ್.. ಅದೂ ಶತ್ರುವಿನ ನೆಲದೊಳಗೆ ನುಗ್ಗಿ ಕೇವಲ 21 ನಿಮಿಷದಲ್ಲಿ ಅಷ್ಟೂ ಶಿಬಿರಗಳನ್ನು ನಾಶ ಮಾಡಿ. ಅವರು ಫ್ಲೈಟ್ ಲ್ಯಾಂಡ್ ಮಾಡಿ ಅವಶೇಷ ಹೊತ್ತು ತರುವ ಸಮಯ ಸಂದರ್ಭವಾ ಅದು ಅನ್ನೋದು ಗೊತ್ತಿಲ್ಲದ ಪೆದ್ದರಾ ಅಂದರೆ ಅಲ್ಲ. ಅವರಿಗೆ ಭಾರತೀಯರ ಶೌರ್ಯ ಸ್ವಾಭಿಮಾನಕ್ಕಿಂತ ಉಗ್ರರ ನಾಶವೇ ಹೆಚ್ಚು ಸಂಕಟ ತಂದಿದೆ. ಇಲ್ಲಿ ಕುಳಿತು ಶಾಂತಿಮಂತ್ರ ಹೇಳುವ ಇವರು ಒಂದು ಅಂಗುಲವಾದರೂ ಪಕ್ಕದಮನೆಯವರಿಗೋ ಹೋಗಲಿ ಸ್ವಂತ ದಾಯಾದಿಗಳಿಗೋ ಬಿಟ್ಟು ಕೊಟ್ಟಿದ್ದಾರ ಕೇಳಿ ಉತ್ತರ ಇರುವುದಿಲ್ಲ. ಯಾರೋ ರಸ್ತೆಯಲ್ಲಿ ಹೋಗುವಾಗ ಅಕಸ್ಮಾತಾಗಿ ಗಾಡಿ ತಗುಲಿದರೆ ರೋಷಾವೇಶಗೊಳ್ಳುವ ಇವರು ಉಗ್ರರು ಬಂದು ಉಡಾಯಿಸಿ ಹೋದರೂ ಶಾಂತಿ ಬೇಕು ಎನ್ನುತ್ತಾರೆ. ಶಾಂತಿ ಅನ್ನೋದು ಅಷ್ಟೊಂದು ಅಗ್ಗವೇ.... ಇಲ್ಲಾ ಮಾರಾಟದ ಸರಕೇ...

ಇಲ್ಲಿ ಸತ್ತಿದ್ದು 44 ಹೆಚ್ಚು ಯೋಧರು. ಅವರಾರು ಬಾಂಬ್ ತಯಾರಿಸುವವರೋ, ಆತ್ಮಾಹುತಿ ಧಾಳಿಕೋರರೋ ಅಲ್ಲ. ಅವರು ಕಾಯುತ್ತಿದ್ದದ್ದು ಈ ದೇಶದ ನೆಲ. ಇಲ್ಲಿ ಒಳಗೆ ಬಂದರೆ ಬುದ್ಧಿ ಕಲಿಸುತ್ತೇನೆ ಎಂದವರೇ ಹೊರತು ಸುಖಾಸುಮ್ಮನೆ ಯಾರದ್ದೋ ಅಂಗಳಕ್ಕೆ ನುಗ್ಗಿ ಸಾಯಿಸುವವರಲ್ಲ. ಅವರದ್ದೂ ಸ್ವಂತ ಬದುಕಿದೆ, ಕುಟುಂಬವಿದೆ. ಅಲ್ಲಿ ನಿಂತು ಅವರು ಕಾಯುವುದು ನಮ್ಮ ಕುಟುಂಬವನ್ನೂ ಕೂಡ. ಅಂಥವರನ್ನು ಅವಮಾನಿಸಿ ಯಾವುದೋ ಕಾಣದ ಸ್ವರ್ಗಕ್ಕೋ, ಹಣಕ್ಕೋ ಅಮಾಯಕರನ್ನು ಕೊಲ್ಲುವವರನ್ನು ಸೈನಿಕರಂತೆ ಮಹಾನ್ ತ್ಯಾಗಿಗಳಂತೆ ಕಾಣುವವರು ನಿಜವಾಗಿಯೂ ಮನುಷ್ಯರೆನಾ ಅಥವಾ ಯಾವುದೋ ಆಮಿಷ ಅವರನ್ನು ಈ ಮಟ್ಟಿನ ರಾಕ್ಷಸರನ್ನಾಗಿಸುವ ಸಾಮರ್ಥ್ಯ ಹೊಂದಿದೆಯಾ ಅನ್ನಿಸುತ್ತದೆ.

ಯುದ್ಧವೆಂದರೆ ಯಾರಿಗೂ ಖುಷಿಯಿಲ್ಲ... ಯಾರೂ ಸಾವನ್ನು ಸಂಭ್ರಮಿಸುತ್ತಲೂ ಇಲ್ಲ. ಇಂದು ಅಭಿನಂದನ್ ಜಾಗಕ್ಕೆ ಯಾರು ಹೋಗ್ತಿರಿ ಎಂದು ಕೇಳುವವರು ಅಂದು ಸತ್ತ ಯೋಧರ ಪರವಾಗಿ ಯಾರು ಸಾಯ್ತಿರಿ ಅಂತ ಕೇಳುವುದಿಲ್ಲ. ಅವರಿಗೆ ಅದು ವಿಷಯವೇ ಅಲ್ಲ. ನಾವು ಕೇಳುತ್ತಿರುವುದು ಉಗ್ರ ನಾಶ ತನ್ಮೂಲಕ ನಿಲ್ಲುವ ಅಮಾಯಕರ ನಾಶ ಅಷ್ಟೇ. ಹೇಗಿದ್ರೂ ಪರೀಕ್ಷೆ ಮುಗಿಯುತ್ತದೆ ನಿಮ್ಮ ಮಕ್ಕಳನ್ನು ಸೈನ್ಯಕ್ಕೆ ಸೇರಿಸಿ ಎಂದು ಅವಹೇಳನ ಮಾಡುವವರು ತಮ್ಮ ಮಕ್ಕಳನ್ನು ಸತ್ತ  ಉಗ್ರಗಾಮಿಗಳ ಬದಲಿಗೆ ಕಳುಹಿಸುತ್ತರೆನೋ.. ಪ್ರತಿದಿನ ಪಕ್ಕದ ಮನೆಯವನು ಕಾಲು ಕೆರೆದುಕೊಂಡು ಬಂದರೂ ಸುಮ್ಮನಿರಬೇಕು ಎಂದು ಬೋಧಿಸುವವರು ಅಪ್ಪಿತಪ್ಪಿಯೂ ಉಗ್ರರಿಗೆ ಪಾಠ ಹೇಳುವುದಿಲ್ಲ. ಹೇಳಿದರೆ ಅವರು  ಉಳಿಯುವುದೂ ಇಲ್ಲ. ಹಾಗಾಗಿಯೇ ಇವರ ಪೌರುಷ ಇಲ್ಲಿ ಪ್ರದರ್ಶನವಾಗುತ್ತದೆ.

ಸೈನಿಕರಿಗೂ ಉಗ್ರರಿಗೂ ವ್ಯತ್ಯಾಸ ಅರ್ಥವಾಗದ ತನಕ ಸಂಭ್ರಮಕ್ಕೂ ಸಮಾಧಾನಕ್ಕೂ, ಸ್ವಾಭಿಮಾನಕ್ಕೂ ಗುಲಾಮಿತನಕ್ಕೂ ಇರುವ ವ್ಯತ್ಯಾಸ ಅರ್ಥವಾಗುವುದಿಲ್ಲ. 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...