ಒಂದು ಮುಷ್ಠಿ ಆಕಾಶ

ಮಗು ಹುಟ್ಟಿದಾಗ ತಾಯಿಯೂ ಜನ್ಮಿಸುತ್ತಾಳೆ ಅನ್ನೋದು ಪ್ರಚಲಿತವಾದ ಮಾತು. ಹಾಗೆ ಹುಟ್ಟಿದ ತಾಯಿ ಹಾಗೂ ಮಗುವಿನ ಪ್ರಪಂಚ ಸೀಮಿತವಾಗಿರುತ್ತದೆ ಅನ್ನೋದು ಆ ಕ್ಷಣಕ್ಕೆ ಕಾಣದ ಕಹಿ ಸತ್ಯ ಅನ್ನೋದು ಅರಿವಿಗೆ ಬರೋದು ಒಂದಷ್ಟು ವರ್ಷಗಳು ಕಳೆದ ಮೇಲೆಯೇ. ಮಗು ಬೆಳೆಯುತ್ತಾ ಬೆಳೆಯುತ್ತಾ ತನ್ನ ಅರಿವನ್ನು ವಿಸ್ತರಿಸಿಕೊಳ್ಳುತ್ತಾ ಜೊತೆ ಜೊತೆಗೆ ಪ್ರಪಂಚವನ್ನು ಹಿಗ್ಗಿಸಿಕೊಳ್ಳುತ್ತಾ ಹೋದರೆ ತಾಯಿ ತನ್ನ ಪ್ರಪಂಚವನ್ನು ಕುಗ್ಗಿಸಿಕೊಳ್ಳುತ್ತಾ ಮಗುವೆ ಪ್ರಪಂಚ ಅಂದುಕೊಂಡು ಬಿಡುತ್ತಾಳೆ, ವೈಯುಕ್ತಿಕ ಆಸೆ, ಕನಸು ಬದುಕು ಎಲ್ಲವೂ ಮರೆಯಾಗಿ ಮಗು ಮಾತ್ರ ಪ್ರಾಮುಖ್ಯತೆ ಅನ್ನುವ ಹಾಗೆ ಬದುಕುತ್ತಾಳೆ ಕೂಡಾ...

ಒಂದು ಮುಷ್ಟಿ....
ಪ್ರತಿ ಮನುಷ್ಯನ ಮುಷ್ಠಿ ಎಷ್ಟು ಗಾತ್ರದ್ದೋ ಅವರ ಹೃದಯವೂ ಅಷ್ಟೇ ಗಾತ್ರದಲ್ಲಿ ಇರುತ್ತದಂತೆ. ಒಂದು ಮುಷ್ಟಿಗೆ ಎಷ್ಟೊಂದು ಅರ್ಥ, ಎಷ್ಟೊಂದು ಭಾವ... ಜೀವವೂ, ಭಾವವೂ, ಎಲ್ಲವೂ ಹೌದು. ಅಮೂಲ್ಯವಾದ ಎಲ್ಲವೂ ಮುಚ್ಚಿದ ಆ ಮುಷ್ಟಿಯಲ್ಲಿಯೇ ಅಡಗಿರುತ್ತದೆ. ಬಂಧನ ಬಿಡುಗಡೆ ಎರಡೂ ಮುಷ್ಟಿಯನ್ನೇ ಅವಲಂಬಿಸಿರುತ್ತದೆ. ಹೀಗಿದ್ದೂ ಮಗು ಹುಟ್ಟಿದ ಮೇಲೆ ಆ ಮುಷ್ಟಿಯನ್ನು ಸಂಪೂರ್ಣವಾಗಿ ಮುಚ್ಚಿ ಬದುಕು, ಕನಸು ಎಲ್ಲವೂ ಮಗುವೆ ಆಗಿ ಅಲ್ಲಿಯವರೆಗೆ ಇದ್ದ ಪ್ರಪಂಚ ಮರೆಯಾಗಿ, ರೆಕ್ಕೆಗಳು ಮುದುರಿ ಬದುಕು ಇನ್ನೊಂದು ಮಗ್ಗುಲಿಗೆ ಹೊರಳಿ ಬಿಡುತ್ತದೆ. ದಿನ ಕಳೆದಂತೆ ಈ ಚಿಕ್ಕ ಜಗತ್ತೇ ಬದುಕಾಗಿ ಬಿಡುತ್ತದೆ. ತನ್ನದು ಅನ್ನುವ ಸ್ವಂತ ಬದುಕು ಮಸುಕಾಗಿ ಮಕ್ಕಳೇ ಬದುಕಾಗಿ ರೆಕ್ಕೆ ಬಲಿತು ಅವು ಗೂಡು ಬಿಟ್ಟು ಹಾರಿದಾಗ ಒಮ್ಮೆಗೆ ಖಾಲಿತನ ಆವರಿಸಿಕೊಳ್ಳುತ್ತದೆ. ಬದುಕೇ ಶೂನ್ಯ ಅನ್ನಿಸಿಬಿಡುತ್ತದೆ. ಅಡಿಕ್ಟ್ ಆದ ಬದುಕು ಅವರಿಲ್ಲದೆ ತತ್ತರಿಸಿ, ಡಿಪ್ರೆಶನ್ ಕಾಡಿ ನರಕ ಅನ್ನೋದೂ ನಿರ್ಮಾಣವಾಗಿ ಬಿಡುತ್ತದೆ. ಒಂದು ಆಸರೆಗಾಗಿ, ಒಂದು ಭರವಸೆಗಾಗಿ ಬದುಕು ತಹತಹಿಸುತ್ತದೆ.

ಈ ಭಾವವನ್ನು ತುಂಬಾ ಸಶಕ್ತವಾಗಿ ಒಂದು ಮುಷ್ಠಿ ಆಕಾಶ ಅನ್ನುವ ವಿಜಯಕ್ಕನ ಕಿರುಚಿತ್ರ ಪ್ರಸ್ತುತ ಪಡಿಸುತ್ತದೆ. ಗೂಡು ಕಟ್ಟುವುದು ಸಹಜ ಆದರೆ ಆ ಗೂಡಿನಲ್ಲಿ ಮಕ್ಕಳೇ ಪುರಾ ಆವರಿಸಿದಂತೆ ನಮ್ಮದೊಂದಿಷ್ಟು ಜಾಗವಿರಲಿ, ರೆಕ್ಕೆ ಬಿಚ್ಚಿ ಪಟಪಟಿಸುವ ಕಸುವಿರಲಿ ಅನ್ನೋದನ್ನ ಸಹ ಹೇಳುತ್ತದೆ. ಆಕಾಶ ಅಂದ್ರೆ ಅವಕಾಶ ಅಂತಲೂ ಅರ್ಥ. ಹಾಗಾಗಿ ಬದುಕಿನ ಪ್ರತಿ ಚಿಕ್ಕ ಅವಕಾಶವನ್ನೂ ಉಪಯೋಗಿಸಿಕೊಳ್ಳಬೇಕೇ ಹೊರತು ಬಾಗಿಲು ಮುಚ್ಚಿ ಕತ್ತಲು ನಾವೇ ಮಾಡಿಕೊಳ್ಳಬಾರದು ಅನ್ನುವುದನ್ನೂ ಇದು ತುಂಬಾ ಚೆಂದವಾಗಿ ಹೇಳುತ್ತದೆ.

ಸಹಜವಾಗಿ ಈ ಸಮಸ್ಯೆ ಕಾಡುವುದು ಮಧ್ಯವಯಸ್ಸಿನಲ್ಲಾದರೂ ಅದರ ಬೀಜಾಂಕುರ ಅನ್ನೋದು ಯೌವನದಲ್ಲೇ ಆಗಿರುತ್ತದೆ. ಮದುವೆ, ಮಕ್ಕಳು, ಸಂಸಾರ ಎನ್ನುವ ಜಗತ್ತಿನಲ್ಲಿ ಇಂಚಿಚಾಗಿ ಕಳೆದುಹೋಗುವ ಮುನ್ನ, ಅಸ್ತಿತ್ವ ಕರಗುವ ಮುನ್ನ ನಮ್ಮದೊಂದಿಷ್ಟು ಜಾಗ ನಾವೇ ಮಾಡಿಕೊಳ್ಳ ಬೇಕು. ನನ್ನ ಬದುಕು ನಾನೇ ಬದುಕಬೇಕು ಎನ್ನುವ ಅರಿವು ಬೇಕು. ಅದು ಆವಶ್ಯಕ ಕೂಡಾ. ಹಾಗೆ ಬದುಕಿದಾಗ ವಿಸ್ತಾರವಾದ ಆಕಾಶದಲ್ಲಿ ನಮ್ಮದೊಂದು ಮುಷ್ಟಿಯಷ್ಟು ನಮ್ಮದೇ ಪ್ರಪಂಚ ನಿರ್ಮಾಣವಾಗುತ್ತದೆ. ಯಾವ ಸ್ನೇಹವೂ ನಮಗೆ ಬೇಕಾದಾಗ ಮಾತ್ರ ಸಿಗುವುದಿಲ್ಲ ಹಾಗೆ ಬಯಸಲೂ ಬಾರದು. ಮಕ್ಕಳಂತೆ ಸ್ನೇಹವೂ, ಪ್ರತಿ ಸಂಬಂಧವೂ ಸಮಯ, ಸ್ವಲ್ಪ ಗಮನ ಎಲ್ಲವನ್ನೂ ಬೇಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ನಮ್ಮದೊಂದು ಆಕಾಶವನ್ನು ಸೃಷ್ಟಿಸಿಕೊಳ್ಳಲೇ ಬೇಕು. ಕೊನೆಯ ಪಕ್ಷ ರೆಕ್ಕೆ ಪಟಪಟಿಸುವಷ್ಟಾದರೂ ಜಾಗ ಬಿಟ್ಟುಕೊಳ್ಳಬೇಕು. ರೆಕ್ಕೆ ಪಟಪಟಿಸಿದರೆ ಹಾರುವುದು ಎಷ್ಟು ಹೊತ್ತು...

ಖಾಲಿತನ ಯಾವಾಗ ಹೇಗೆ ಕಾಡುತ್ತೆ ಅನ್ನುವುದನ್ನ ಹೇಳೋದು ಕಷ್ಟವೇ... ಮಧ್ಯವಯಸ್ಸಿನಲ್ಲಿ ಇದು ತೀರಾ ಸಹಜವಾದರೂ ಇದು ಬದುಕಿನ ಯಾವ ಹಂತದಲ್ಲಾದರೂ ಕಾಡಬಹುದು. ಹಾಗೆ ಕಾಡಿದಾಗ ಅದನ್ನು ಹೇಳಿಕೊಳ್ಳಲು ತುಂಬಿಕೊಳ್ಳಲು ಒಂದು ಹೆಗಲೋ, ಕಲೆಯೋ, ಹವ್ಯಾಸವೋ ಯಾವುದೋ ಒಂದು ನಮ್ಮ ಮುಷ್ಟಿಯಲ್ಲಿ ಇರಬೇಕು, ಅದನ್ನು ಸೃಷ್ಟಿಸಿಕೊಳ್ಳಬೇಕು. ಹಾಗೆ ಸೃಷ್ಟಿಸಿಕೊಂಡಾಗ ಮಾತ್ರ ಬದುಕು ಸರಾಗವಾಗಿ ಹರಿಯುತ್ತದೆ. ಈ ಆಕಾಶ ನಮ್ಮೊಳಗೇ ಸೃಷ್ಟಿಸಿಕೊಳ್ಳದ ಹೊರತು ಹೊರಗಿನ ಯಾವುದೂ ಸಹಾಯ ಮಾಡುವುದಿಲ್ಲ ಅನ್ನುವುದೂ ಸತ್ಯವೇ. ಇವೆಲ್ಲವನ್ನೂ 20 ನಿಮಿಷದ ಕಿರುಚಿತ್ರದಲ್ಲಿ ಅದ್ಭುತವಾಗಿ, ಅಷ್ಟೇ ಆಪ್ತವಾಗಿ ವಿಜಯಕ್ಕ ಹೇಳಿದ್ದಾರೆ. ಅಷ್ಟೇ ಸಮರ್ಥವಾಗಿ ಸೀತಾ ಕೋಟೆ ಅದನ್ನು ವ್ಯಕ್ತಪಡಿಸಿದ್ದಾರೆ. ಇಡೀ ಟೀಂ ಅಷ್ಟೇ ಚೆನ್ನಾಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಈ ಕಿರುಚಿತ್ರ ನೋಡುತ್ತಾ, ನನ್ನನ್ನೇ ನಾನು ನೋಡಿಕೊಳ್ಳುತ್ತಾ ಕಣ್ಣು ಒದ್ದೆಯಾಗುವಾಗಲೇ, ಜೊತೆಗೆ ಹೊಸತೊಂದು ಅರಿವು ಹುಟ್ಟಿಸುತ್ತದೆ. ಇದಕ್ಕಿಂತಲೂ ಹೆಚ್ಚು ಖುಷಿಯಾಗಿದ್ದು ಬೆರಗು ಹುಟ್ಟಿಸಿದ್ದು ವಿಜಯಕ್ಕನ ಮಾತು. ತಾನು ಏನು ಮಾಡುತ್ತಿದ್ದೇನೆ ಅನ್ನುವ ಸ್ಪಷ್ಟತೆ,  ಯಾವ ಮುಲಾಜಿಗೂ ಒಳಗಾಗದೆ ಮೃದುವಾಗಿ ಅಷ್ಟೇ ಕರಾರುವಕ್ಕಾಗಿ ಹೇಳುವ ನಿಖರತೆ, ಗಟ್ಟಿತನ , ತುಂಬು ಜೀವನ ಪ್ರೀತಿ ಇವೆಲ್ಲವೂ ತುಂಬಿರುವ ವಿಜಯಕ್ಕ ಇಂಥಹ ಅನೇಕ ಕಿರುಚಿತ್ರಗಳನ್ನೂ ಮಾಡಲಿ ಸಾವಿರಾರು ಎದೆಗಳಲ್ಲಿ ಭರವಸೆಯ ದೀಪ ಹಚ್ಚಲಿ ಅನ್ನೋದು ನನ್ನ ಕೋರಿಕೆ...

ಬದುಕಿಗೊಂದು ಕನಸು ಎಷ್ಟು ಮುಖ್ಯವೋ ಒರಗುವ ಹೆಗಲೂ ಅಷ್ಟೇ ಮುಖ್ಯ... ನಮಗೆ ಇನ್ಯಾರೋ ಹೆಗಲಾಗುವ ಹಾಗೆ ನಾವೂ ಮತ್ಯಾರಿಗೋ ಹೆಗಲಾದರೆ ಬದುಕಿನ ಕೊಂಡಿ ಬೆಸೆಯುತ್ತಾ ಹೋಗುತ್ತದೆ.
ಬೆಸೆದಂತೆ ಬದುಕು ಮಾಗುತ್ತದೆ...


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...