ಪ್ರೇಮಿಗಳ ದಿನ

ಬಾಯಿಂದ ಬಾಯಿಗೆ, ಮನೆಯಿಂದ ಮನೆಗೆ, ಊರಿನಿಂದ ಊರಿಗೆ ಹಬ್ಬುತ್ತಾ ಬಂದ ಕೃಷ್ಣನ ಪರಾಕ್ರಮ ಮಥುರೆಯ ಅರಮನೆಯನ್ನು ಸೇರಿ ಕಂಸನ ಕಿವಿಗೆ ಬೀಳಲು ಬಹಳ ಸಮಯ ತೆಗೆದುಕೊಳ್ಳಲಿಲ್ಲ. ತನ್ನ ಬಲ ಕ್ಷೀಣಿಸುವಷ್ಟೇ ವೇಗವಾಗಿ ಬೆಳೆಯುತ್ತಿರುವ ಅವನ ಪ್ರಸಿದ್ಧಿ ಕಂಡು ಅವ್ಯಕ್ತ ಭಯವೊಂದು ಮೈಯೆಲ್ಲಾ ಆವರಿಸಿ ಕಂಸ ಇಂಚಿಚೇ ಸಾಯುತ್ತಿರುವ ಹೊತ್ತಿಗೆ ಇನ್ನು ನೇರವಾಗಿ ಎದುರಿಸುವುದೊಂದೇ ದಾರಿ ಎಂಬ ಅರಿವು ಮೂಡಿತ್ತು. ಅದರ ಫಲವಾಗೇ ಅಕ್ರೂರ ಕೃಷ್ಣ ಬಲರಾಮರನ್ನು ಮಥುರೆಗೆ ಕರೆದು ತರಲು ದ್ಯೂತ ವಹಿಸಿ ಹೊರಟಿದ್ದ.

ಅತ್ತ ಅಕ್ರೂರ ಕ್ರೂರಿಯೇ ಆಗಿಬಿಟ್ಟಿದ್ದ ಅವರ ಪಾಲಿಗೆ. ತಮ್ಮ ಜೊತೆಗಾರ, ಗೆಳೆಯ, ಪ್ರೇಮಿ, ಮಗು, ಕನಸು,  ಹೀಗೆ ಪ್ರತಿಯೊಬ್ಬರ ಪಾಲಿಗೂ ಒಬ್ಬೊಬ್ಬನಾಗಿ ಅವರ ಬದುಕಿನ ಭಾಗವಾಗಿಯೇ ಹೋಗಿದ್ದ ಕೃಷ್ಣನನ್ನು ಕಳಿಸುವುದು, ಉಸಿರು ನಿಲ್ಲಿಸುವುದು ಎರಡೂ ಒಂದೇ ಆಗಿದ್ದ ಅವರಿಗೆ ಅಕ್ರೂರನ ಹಿತವಚನ ಕೇಳಿಸುವುದಾದರೂ ಹೇಗೆ? ನೋವಿಗೆ ಕಿವಿ ಮಂದವಂತೆ... ನಿಧಾನಕ್ಕೆ, ಜೋರಾಗಿ, ಅರ್ಥವಾಗುವ ಹಾಗೆ ಎಲ್ಲವನ್ನೂ ಹೇಳಿ ಅವರನ್ನು ಒಪ್ಪಿಸಲು ಸೋತ ಅಕ್ರೂರ ಕೊನೆಗೆ ರಾಜಾಜ್ಞೆಯ ಭಯ ಹೇರುತ್ತಾನೆ.

ಹೊರಟ ಕೃಷ್ಣನನ್ನು ತಡೆಯಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿ ವಿಫಲರಾದ  ಗೋಪಿಕೆಯರಿಗೆ ಕೊನೆಯ ಅಸ್ತ್ರವಾಗಿ ಕಂಡಿದ್ದು ರಾಧೇ. ರಾಧೆಯ ಪ್ರೀತಿಗೆ ಕೃಷ್ಣ ಕಟ್ಟು ಬೀಳದೆ ಇರುವನೇ ಅನ್ನುವ ಆಸೆಯೊಂದು ಹೆಡೆಯಾಡುವ ಹೊತ್ತಿಗೆ ಅವರೆಲ್ಲರೂ ರಾಧೆಯ ಮುಂದೆ ಬೊಗಸೆಯೊಡ್ಡಿ ನಿಂತಿದ್ದರು.  ತಮ್ಮ ಉಸಿರು ಹೋಗದಂತೆ ಕಾಪಾಡು ಎಂದು. ರಾಧೆಯ ಉಸಿರು ಅವನೇ ಅಲ್ಲವೇ. ಹಾಗಾಗಿ ಇದೊಂದು ಯತ್ನ ವಿಫಲವಾಗುವುದಿಲ್ಲ ಎನ್ನುವ ಆಶಾಕಿರಣವನ್ನು ಎದೆಯಲ್ಲಿ ಕಾಪಿಟ್ಟುಕೊಂಡೆ ರಾಧೆಯನ್ನು ಸುತ್ತುವರಿದಿದ್ದರು.

ಅಮ್ಮಾ ಕೃಷ್ಣನನ್ನು ರಾಧ ಯಾಕೆ ತಡೆಯಲಿಲ್ಲ, ಈ ಕೃಷ್ಣನಾದರೂ ರಾಧೆಯನ್ನು ಬಿಟ್ಟು ಹೇಗೆ ಹೊರಟ ಅಂತ ಹನಿಗಣ್ಣಾಗಿ ಕೇಳುವ ಮಗಳ ಕಣ್ಣಲ್ಲಿ ಗೋಪಿಕೆಯರು ಕಂಡು ಸಂಕಟವಾಗಿತ್ತು. ಪ್ರೀತಿಯೆಂದರೆ ಬಂಧನವಲ್ಲ ಬಯಲು ಅನ್ನೋದನ್ನ ಹೇಗೆ ಅವಳಿಗೆ ಅರ್ಥಮಾಡಿಸುವುದು ಅನ್ನುವ ಗೊಂದಲ ಕಾಡಿ ಮಾತಿಗಾಗಿ ತಡಕಾಡುವ ಹಾಗಿತ್ತು. ರಾಧೆಯೂ ಹೀಗೆಯೇ ಪರಿತಾಪ ಪಟ್ಟಿರಬಹುದಲ್ಲವೇ.. ಒಳಗೊಳಗೇ ದುಃಖಿಸಿರಬಹುದಲ್ಲವೇ. ಸತ್ಯವನ್ನು ಅವರಿಗೆ ಅರ್ಥಮಾಡಿಸಲು ಸಾಧ್ಯವಾಗದೆ ಸಂಕಟ ಪಟ್ಟಿರಬಹುದಲ್ಲವೇ, ಬಿಟ್ಟು ಕೊಡಬೇಕಾದ ಅನಿವಾರ್ಯತೆ ಎದುರು ಅವಳೂ ಕುಸಿದಿದ್ದಿರಬಹುದಲ್ಲವೇ,  ಅವಳದು ಕಲ್ಲು ಮನಸ್ಸು ಎಂದು ಗೋಪಿಕೆಯರು ದುಃಖದಲ್ಲಿ ಜರಿದಿರಬಹುದಲ್ಲವೇ. ವಿದಾಯ, ನೋವು, ಗೋಪಿಕೆಯರ ಆಕ್ರೋಶದ ನಡುವೆ ರಾಧೇ ಅದೆಷ್ಟು ನಲುಗಿರಬಹುದು.

ಪ್ರೀತಿಯೆಂದರೆ ಬಂಧನವಲ್ಲ, ಅದು ತನ್ನೊಂದಿಗೆ ದೈಹಿಕವಾಗಿ ಇರಲೇಬೇಕು ಅನ್ನೋ ಆಜ್ಞೆಯೂ ಅಲ್ಲ. ಪ್ರೀತಿಯೆಂದರೆ ಬಯಲು, ಎಲ್ಲಾ ಕಟ್ಟಳೆಗಳನ್ನೂ ಮೀರಿದ, ನೀರಿಕ್ಷೆಯ ತಕ್ಕಡಿಯನ್ನು ಪಕ್ಕಕ್ಕಿಟ್ಟ, ಎಲ್ಲಾ ಮೋಹಗಳನ್ನು ಕಳೆದುಕೊಂಡ ದಿವ್ಯ ಭಾವ ಅಂತ ಹೇಗೆ ವಿವರಿಸೋದು. ಆಕರ್ಷಣೆಯನ್ನು  ಪ್ರೀತಿಯೆಂದು ತಿಳಿದು ಭ್ರಮೆಗೆ ಬೀಳಬೇಡಾ ಅಂತ ಹೇಳೋದು ಹೇಗೆ? ಕೇವಲ ತನಗೆ ದಕ್ಕಬೇಕು ಅನ್ನೋದು ಪ್ರೀತಿಯಲ್ಲ ವ್ಯಾಮೋಹ ಎಂದು ಅರ್ಥಮಾಡಿಸುವುದದಾರೂ ಹೇಗೆ? ರಾಧೆಗೆ ಕೃಷ್ಣ ಹೊರಡುತ್ತಾನೆ ಅನ್ನೋ ಭಾಧೆಗಿಂತ ಈ ನೋವೇ ಹೆಚ್ಚು ಕಾಡಿರಬಹುದಾ...

ಪ್ರೀತಿಯನ್ನು ದೈಹಿಕ ಮಟ್ಟಕ್ಕೆ ಅದರಲ್ಲೂ ಗಂಡು ಹೆಣ್ಣಿನ ನಡುವಿನ ಆಕರ್ಷಣೆಯ ಮಟ್ಟಕ್ಕೆ ಇಳಿಸಿಬಿಟ್ಟಿರುವ ಕೀರ್ತಿ ಕೃಷ್ಣನ ನಾಡಿನ ನಮಗೆ ಸಲ್ಲಬೇಕು. ದಕ್ಕದಿದ್ದರೆ ಸೇಡು ಅನ್ನುವ ಭಾವ ಪ್ರೀತಿಯಾಗುವುದಾದರೂ ಹೇಗೆ? ನಾನಿಷ್ಟು ಕೊಟ್ಟೆ ನೀನಷ್ಟು ಕೊಡು ಅಂತ ತಕ್ಕಡಿ ಹಿಡಿದು ವ್ಯಾಪಾರಕ್ಕೆ ನಿಲ್ಲುವ ಸದಾ ಲೆಕ್ಕಾಚಾರ ಹಾಕುವ ಕ್ರಿಯೆ ಪ್ರೀತಿ ಎಂದು ಯಾವ ಕೋನದಿಂದ ಹೌದು ಎನ್ನುವುದು? ನಿನ್ನ ಪ್ರೀತಿ ನನಗೆ ಮಾತ್ರ ಮೀಸಲು ಅಂತ ಅದಕ್ಕೊಂದು ಎಲ್ಲೆಯನ್ನು ಹಾಕಲು ಹೊರಡುವುದು ಹೇಗೆ? ಪ್ರೀತಿಗೆ ಎಲ್ಲೆಯನ್ನು ಹಾಕುವುದಾದರೂ ಹೇಗೆ? ಹಾಗೆ ಗಡಿ ಹಾಕಿದರೆ ಅದು ಪ್ರೀತಿಯಾಗುತ್ತದಾ ಅಥವಾ ಪ್ರೀತಿಗೆ ಗಡಿ ಹಾಕಲು ಸಾಧ್ಯವಾ?

ಆಗ ಬ್ರಹ್ಮನ ಆಸೆಯ ಕತೆ ನೆನಪಾಗುತ್ತದೆ. ಕಾಡಿಗೆ ದನಕಾಯಲು ಹೊರಡುವ, ಕೈಯಲ್ಲಿ ಕೊಳಲು ಹಿಡಿದು ಗೊಲ್ಲರೊಂದಿಗೆ ಆಡುತ್ತಾ, ಕುಣಿಯುತ್ತಾ ನಗುತ್ತಾ ಹೋಗುವ  ಕೃಷ್ಣನನ್ನು ನೋಡಿ ಬ್ರಹ್ಮನಿಗೂ ಅಸೂಯೆ ಆಗುತ್ತದಂತೆ. ಕೃಷ್ಣ ನನಗೊಬ್ಬನಿಗೆ ಸಿಗಬೇಕು, ನನ್ನೊಂದಿಗೆ ಮಾತ್ರ ಆಡಬೇಕು ಅನ್ನುವ ಆಸೆಯಲ್ಲಿ ಎಲ್ಲಾ ಗೊಲ್ಲ ಬಾಲರನ್ನು ತನ್ನ ಮಾಯಾ ಶಕ್ತಿಯಿಂದ ಅದೃಶ್ಯರನ್ನಾಗಿಸುತ್ತಾನಂತೆ. ಈಗ ತಾನೊಬ್ಬನೇ ಕೃಷ್ಣನೊಂದಿಗೆ ಆಡಬಹುದು ಎಂದು ಬಂದರೆ ಎಲ್ಲೆಲ್ಲೂ ಕೃಷ್ಣನೇ ಕಾಣುತ್ತಾನೆ. ಮೇಯುವ ದನಕರುಗಳಲ್ಲಿ, ತರು ಲತೆಗಳಲ್ಲಿ, ಪ್ರಾಣಿ ಪಕ್ಷಿಗಳಲ್ಲಿ. ಗುಡ್ಡ ಬೆಟ್ಟಗಳಲ್ಲಿ, ಹಸಿರು ಹುಲ್ಲು ಹಾಸಿನಲ್ಲಿ, ಇಡೀ ಪ್ರಕೃತಿಯೇ ಕೃಷ್ಣಮಯವಾಗಿ ಕಾಣಿಸಿ ಬ್ರಹ್ಮನ ಅಹಂ ಸರಿಯುತ್ತದೆ. ಕೃಷ್ಣಭಾವ ಮನದಲ್ಲಿ ತುಂಬುತ್ತದೆ.

ರಾಧೆಗೂ ಹಾಗೆ. ಅವಳಿಗೆ ಯಮುನೆಯ ದಡದಲ್ಲಿ, ಹರಿಯುವ ನೀರಿನಲ್ಲಿ, ಮರದ ನೆರಳಿನಲ್ಲಿ, ನಡೆಯುವ ಹಾದಿಯಲ್ಲಿ, ಉಸಿರಾಡುವ ಗಾಳಿಯಲ್ಲಿ,  ಮಣ್ಣ ಘಮದಲ್ಲಿ, ಕೃಷ್ಣ ಕಾಣುತ್ತಾನೆ. ಅವನ ಕೊಳಲಿನ ನಾದ ಕೇಳುತ್ತದೆ. ಹಾಗಾಗಿ ಕೃಷ್ಣ ಹೊರಟ ಅನ್ನುವ ಭಾವ ಅವಳಿಗೆ ಕಾಡುವುದು ಹೇಗೆ. ಪ್ರತಿ ಉಸಿರಲ್ಲೂ ಕೃಷ್ಣ ಭಾವ ತುಂಬಿಕೊಂಡವಳಿಗೆ ಅವನಿಲ್ಲ ಅನ್ನಿಸುವುದಾದರೂ ಹೇಗೆ. ಕೃಷ್ಣ ಇನ್ಯಾರಿಗೋ ಆವಶ್ಯಕ ಅನ್ನುವ ಸತ್ಯ ಅವಳಿಗಿದೆ. ಅವರ ಅನಿವಾರ್ಯತೆಯ ಅರಿವಿದೆ. ಮಗುವಿಗಾಗಿ ಹಂಬಲಿಸುವ ದೇವಕಿಯ ನೋವು ಗೊತ್ತಿದೆ. ಕಂಸನ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ಬಯಸಿರುವ ಜನರ ಆಸೆ ಅರ್ಥವಾಗುತ್ತಿದೆ. ಹಾಗಾಗಿಯೇ ಇನ್ನೆಂದೂ ಕೃಷ್ಣ ಬರಲಾರ, ಬಂದರೂ ತನ್ನ ಹಳೆಯ ಗೋಪಬಾಲ ಆಗಿರಲಾರ ಎಂದು ಗೊತ್ತಿದ್ದೂ ಅವನನ್ನು ತಡೆಯುವುದಿಲ್ಲ. ತನ್ನೊಂದಿಗೆ ಮಿಳಿತವಾಗಿರುವ ಕೃಷ್ಣಭಾವ ಸದಾ ಇರುತ್ತೆ ಅನ್ನೋ ಅರಿವಿನಿಂದಲೇ ಆ ಭಾವದಿಂದಲೇ ಅವನನ್ನು  ಕಳಿಸಿಕೊಡುತ್ತಾಳೆ. ಕೃಷ್ಣನಾದರೂ ಸುಮ್ಮನೆ ಹೋದನೇ?  ಇಲ್ಲಾ, ತನ್ನ ಬದುಕಿನ ಭಾಗವಾಗಿದ್ದ, ಉಸಿರೇ ಆಗಿದ್ದ ಕೊಳಲನ್ನು ಅವಳ ಪಾದದ ಬಳಿ ಇಟ್ಟು ಹೊರಡುತ್ತಾನೆ. ಮತ್ತೆಂದೂ ಕೊಳಲು ನುಡಿಸಲಿಲ್ಲ, ನಾದವಾಗಿದ್ದ ರಾಧೆಯನ್ನು ಮರೆಯಲಿಲ್ಲ.

ಪ್ರೀತಿಯ ದಿನಕ್ಕೆ ತಬ್ಬಿ ಕೂರುವುದೇ ಪ್ರೀತಿ, ಕದ್ದು ಓಡಾಡುವುದು ಪ್ರೀತಿ, ಲೋಕದ ಪರಿವೆಯಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮೈ ಮರೆಯುವುದೇ ಪ್ರೀತಿ ಎಂದು ತಿಳಿದು ಅದನ್ನೇ ಹಕ್ಕೆಂದು ಭಾವಿಸಿ ನಡೆಯುವ ಈ ದಿನಗಳಲ್ಲಿ ಕೃಷ್ಣ ರಾಧೇ ಇಬ್ಬರೂ ನೆನಪಾಗುತ್ತಾರೆ. ಪ್ರೀತಿಗೂ, ಕಾಮಕ್ಕೂ, ಆಕರ್ಷಣೆಗೂ, ಮೋಹಕ್ಕೂ ಬಲುದೊಡ್ಡ ವ್ಯತ್ಯಾಸವಿದೆ. ಆದರೆ ಇವೆಲ್ಲಕ್ಕೂ ಪ್ರೀತಿ ಎಂದೇ ಭಾವಿಸಲಾಗುತ್ತದೆ. ಆಕರ್ಷಣೆಗೆ ಆಯಸ್ಸಿದೆ ಪ್ರೀತಿಗಲ್ಲ. ದಿನಕಳೆದಂತೆ ಅಳಿಯುವುದು ಆಕರ್ಷಣೆಯಾದರೆ ಮಾಗುವುದು ಪ್ರೀತಿ. ಇದೆ ಇವೆರೆಡರ ನಡುವಿನ ವ್ಯತ್ಯಾಸ..

ಪ್ರೀತಿ ವೈಯುಕ್ತಿಕ ಭಾವ, ವೈಯುಕ್ತಿಕ ಅನುಭವವನ್ನು ಸಾರ್ವತ್ರಿಕಗೊಳಿಸುವುದು ಮೂರ್ಖತನವೇ ಹೊರತು ಬೇರೇನಲ್ಲ. ಹಕ್ಕಿನ ಹೆಸರಲ್ಲಿ, ಸ್ವಾತಂತ್ಯದ ಅಭಿವ್ಯಕ್ತಿಯಲ್ಲಿ ಅದೂ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ಕಾಣಿಸಿಕೊಳ್ಳುವುದೇ ಪ್ರೀತಿ ಎಂದುಕೊಳ್ಳುವುದು ಆಧುನಿಕತೆಯ ಪರಿಕಲ್ಪನೆಯಾಗಿದೆ. ಪ್ರೀತಿ ಎಂದರೆ ಎರಡು ಜೀವಗಳ ನಡುವಿನ ಭಾವ ಅದು ಗಂಡು ಹೆಣ್ಣೇ ಆಗಬೇಕು ಎಂದಿಲ್ಲ, ಪ್ರೀತಿಗೆ ಲಿಂಗಭೇಧವಿಲ್ಲ. ಸ್ಪರ್ಶಕ್ಕೂ ಮೀರಿದ್ದು.  ಹಾಗಾಗಿಯೇ ಇಂದಿಗೂ ಪ್ರೀತಿಗೆ ಒಂದು ನಿರ್ಧಿಷ್ಟ ವ್ಯಾಖ್ಯೆ ಕೊಡಲು ಸಾಧ್ಯವಾಗಿಲ್ಲ.

ಅವ್ಯಕ್ತವಾದ, ಮಿತಿಯಿಲ್ಲದ ಅಪರಿಮಿತವಾದ ಎಲ್ಲವನ್ನೂ ಒಂದು ಮಿತಿಗೆ ಒಳಪಡಿಸುವುದು ನಾಗರಿಕತೆಯ ಲಕ್ಷಣ ಎಂದುಕೊಂಡು ಬಿಟ್ಟಿದ್ದಕ್ಕೆ ಇವತ್ತು ಪ್ರೇಮಿಗಳ ದಿನವೆನ್ನುವುದು ಕಾಮನೆಯ ದಿನವೇನೋ ಎನ್ನುವ ಹಾಗಾಗಿದೆ. ಅದನ್ನು ವಿರೋಧಿಸುವ ಭರದಲ್ಲಿ ಮತ್ತಷ್ಟು ಅಪಸವ್ಯಗಳು ನಡೆಯುತ್ತವೆ. ಅವೆಲ್ಲವೂ ಅಂತಿಮವಾಗಿ ಪ್ರೀತಿಯನ ಘನತೆಯನ್ನು ಸೀಮಿತಗೊಳಿಸುತ್ತದೆಯೇ ಹೊರತು ಮತ್ತೇನಿಲ್ಲ.



ಪ್ರೀತಿಗೆ ಇಂಥಹುದೇ ಅನ್ನೋ ವ್ಯಾಖ್ಯೆ ಕೊಡಲು ಈ ಜಗತ್ತಿಗೆ ಸಾಧ್ಯವಾಗಿಲ್ಲ. ಅದು ಮಾತು ಮೀರಿದ ಭಾವ, ಅದನ್ನು ಬಂಧಿಸಲು ಸಾದ್ಯವಿಲ್ಲ. ಬಂಧವಿಲ್ಲದ್ದು ಅವ್ಯಕ್ತ. ಹಾಗಾಗಿ ಪ್ರೀತಿಯೆಂದರೆ ಕೃಷ್ಣ, ಕೃಷ್ಣನೆಂದರೆ ಪ್ರೀತಿ. ಕೃಷ್ಣ ಅರ್ಥವಾದ ದಿನ ಪ್ರೀತಿ ಅರ್ಥವಾಗುತ್ತದೆ. ಪ್ರೀತಿ ಅರ್ಥವಾದ ದಿನ ಜಗತ್ತು ನಮ್ಮ ನೋಡುವ, ನಾವು ಜಗತ್ತನ್ನು ದಿಟ್ಟಿಸುವ ರೀತಿಯೇ ಬೇರೆಯಾಗುತ್ತದೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...